ಹೊಸ ವರ್ಷ ಆಚರಣೆ
ನಮ್ಮ ಪೂರ್ವೀಕರ ನವವರುಷ ಯುಗಾದಿ
ಕಾಲಮಾನ ಗಣನೆ ಸಂವತ್ಸರಗಳು ಪ್ರಭವಾದಿ
ಈ ಗ್ರಿಗೋರಿಯನ್ ಕಾಲಮಾನದ ಕಾಲೆಂಡರ್ ದೇಣಿಗೆ
ಬ್ರಿಟೀಷರ ದಾಸ್ಯ ಸಂಕೋಲೆಯ ನೆನಪಿನ ಕೊಡುಗೆ.
ನಮ್ಮ ಹಿರಿಯರೂ ಆಚರಿಸುತ್ತಿದ್ದರು ಹೊಸ ವರ್ಷ
ಸಿಹಿ ತಿಂದು ದೇಗುಲಗಳಿಗೆ ಭೇಟಿಯಿತ್ತು ಹರ್ಷ
ನಮ್ಮ ಕಾಲದ ಅಭ್ಯಾಸ ಹೊಸ ವಸ್ತ್ರ ಧಾರಣೆ
ರಾತ್ರಿಯಲಿ ದೂರದರ್ಶನ ಕಾರ್ಯಕ್ರಮಗಳ ವೀಕ್ಷಣೆ
ಈ ತಡರಾತ್ರಿ ಕೂಟಗಳು ಜೊತೆಗೆ ಪಾನಗಳ ಕಾಟ
ಕುಡಿದ ಮತ್ತಿನಲಿ ಅಸಭ್ಯ ವರ್ತನೆ ವಾಹನ ಚಲಿಸಾಟ
ನಾವೇನು ಕಮ್ಮಿ ಎಂದು ಕೈಜೋಡಿಸುವ ಮಾನಿನಿಯರು
ಎಲ್ಲವನೂ ವೈಭವೀಕರಿಸುವ ಸಾಮಾಜಿಕ ತಾಣಗಳು.
ಕಾರಣರ್ಯಾರು ಈ ಎಲ್ಲಾ ನೈತಿಕ ಅಧಃಪತನಕೆ
ಕುಡಿದಮಲಿನಲಿ ಆಗುತಿಹ ದಾರುಣ ಅನಾಹುತಕೆ
ಪರಂಪರೆಯ ಮೇಲಿನ ಈ ಧಾಳಿಯನು ಸಹಿಸಬೇಕೇ
ಕಾಲಚಕ್ರದಲಿದು ಸಹಜವೆಂದು ಮುನ್ನಡೆಯಬೇಕೇಕೆ?
ಇಂದಿನ ಯುವಜನತೆ ತಾನೇ ಉಳಿಸಬೇಕು ಸಂಸ್ಕೃತಿ
ಅವರಲ್ಲಿ ಹಚ್ಚಬೇಕಾಗಿದೆ ಈಗ ಜಾಗೃತಿಯ ಜ್ಯೋತಿ
ಸಾಂಪ್ರಧಾಯಿಕತೆಯಲಿರುವ ಸುರಕ್ಷತೆಯ ಇತಿಮಿತಿ
ತಿಳಿಯಬೇಕಿದೆ ಜೀವನ ಹಾಳುಮಾಡಿಕೊಳ್ಳದ ರೀತಿ.
–ಸುಜಾತಾ ರವೀಶ್
ಪ್ರಕಟಣೆ ಮಾಡಿದ್ದಕ್ಕಾಗಿ ಸಂಪಾದಕಿ ಯವರಿಗೆ ಧನ್ಯವಾದಗಳು
ಸುಜಾತಾ ರವೀಶ್
ಎಚ್ಚರಿಕೆಯ ಗಂಟೆ ಬಾರಿಸುವ ಈ ಹೊತ್ತಿನ ಅಗತ್ಯವಾಗಿದೆ ಈ ಕವಿತೆ. ಆದರೆ ಬೆಕ್ಕುಗಳಿಗೆ ಗಂಟೆ ಕಟ್ಟುವರ್ಯಾರೋ ಗೊತ್ತಿಲ್ಲ. ಸಾಮಾಜಿಕ ಬದ್ಧತೆಯನ್ನು ಹೊಂದಿದ ಕಳಕಳಿಯ ಕವಿತೆಗಾಗಿ ಅಭಿನಂದನೆಗಳು.
ಹೊಸವರ್ಷದ ಆಚರಣೆ ಬಗ್ಗೆ ಅಂದು ಇಂದಿನ ರೀತಿ ನೀತಿಗಳು ಭಾರತೀಯರಾದ ನಮ್ಮೆಲ್ಲರ ಆದ್ಯತೆ ಅದರ ಜವಾಬ್ದಾರಿ ಯನ್ನು ಕವನದಲ್ಲಿ ಕಟ್ಟಿಕೊಟ್ಟಿರುವುದು ಚೆನ್ನಾಗಿ ದೆ ಧನ್ಯವಾದಗಳು ಮೇಡಂ
ಉತ್ತಮ ಸಂದೇಶಪೂರಿತ ಕವನ , ಚೆನ್ನಾಗಿದೆ
ಕಾಳಜಿಯುಕ್ತ ಉತ್ತಮ ಸಂದೇಶ ತುಂಬಿರುವ ಕವನ
ಹೊಸ ವರುಷದ ಆಚರಣೆಯನ್ನು ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಆಚರಿಸಲು ಸೊಗಸಾದ ಕವನದ ಮೂಲಕ ಕರೆನೀಡಿರುವ ತಮಗೆ ಧನ್ಯವಾದಗಳು ಮೇಡಂ.
ಸಂದೇಶ ಚೆನ್ನಾಗಿದೆ