ಹಿಮಗಿರಿಯ ಹಂದರದಲ್ಲಿ…ಹೆಜ್ಜೆ 5

Share Button

(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು)

ಹಿಂದೆ ಇದ್ದ ನಮ್ಮ ಗುಂಪಿನ ಮಿಕ್ಕ ಸದಸ್ಯರೆಲ್ಲಾ ಎಲ್ಲಿ? - ನಾನು ಕೇಳಿದೆ.

ಇಲ್ಲಾ ಅಮ್ಮ, ಅವರಿಗೆಲ್ಲಾ ಆಮ್ಲಜನಕದ ಕೊರತೆಯಾಯಿತು, ಹಾಗಾಗಿ ಆಂಬ್ಯುಲೆನ್ಸ್ ಕರೆಸಿ, ಅವರು ಏಳೂ ಜನರನ್ನು ಕಳುಹಿಸಿಕೊಟ್ಟೆವು. ಮುಂದೆ ನಡೆದು ತಲುಪಿದವರನ್ನು ಬಿಟ್ಟರೆ ಈಗ ನಾವುಗಳು ಐದು ಜನ ಅಷ್ಟೆ – ಎಂದರು.

ಕ್ಯಾಂಪ್ ತಲುಪಿದೆವು. ಮೈ ನಡುಗುತ್ತಿತ್ತು, ಅಲ್ಲಿ ಶೌಚಾಲಯದ ವ್ಯವಸ್ಥೆಯೂ  ಇರಲಿಲ್ಲ. ಇರುವ ಮಂಚಗಳೆಲ್ಲಾ ಭರ್ತಿಯಾಗಿತ್ತು, ಯಾರೋ ಒಂದು ಬರೀ ಹಾಸಿಗೆಯನ್ನು ತಂದು ಹಾಕಿ ಕೊಟ್ಟರು. ಅದರಲ್ಲಿ ಉರುಳಿದ್ದೇ ಬಂತು, ದೇಹ ಅರೆಪ್ರಜ್ಞಾವಸ್ಥಗೆ ತಲುಪಿದಂತೆನಿಸಿತು. ನಂತರ ಅಷ್ಟರಲ್ಲಿ, ಪಕ್ಕದ ಕಟ್ಟಡದಲ್ಲಿದ್ದ, ಮೈದುನ ಶ್ರೀನಿವಾಸನಿಗೆ ಸುದ್ದಿ ತಲುಪಿ ಬಂದು, ಅಭಿನಂದನೆ ಸಲ್ಲಿಸಿದ. ಸ್ವೀಕರಿಸುವಷ್ಟು ಶಕ್ತಿಯೂ ನನ್ನಲ್ಲಿರಲಿಲ್ಲ
.

ಮೇಲ್ವಿಚಾರಕರು ಬಂದು, ಆಮ್ಲಜನಕದ ಲೆವೆಲ್ ನೋಡಿ, - ಅತ್ಯಂತ ಕಡಿಮೆ ಇದೆ, ಇಲ್ಲಿ ಇರುವುದು ಬೇಡ, ಇನ್ನೂ ರಾತ್ರಿಯಾಗುತ್ತಾ  ಛಳಿ ಜಾಸ್ತಿಯಾಗುತ್ತದೆ, ಇವರಿಗೆ ತಡೆಯುವ ಶಕ್ತಿ ಕುಂದಿದೆ, ವ್ಯಾನ್  ಕರೆಸೋಣ, ವಾಪಸ್ಸು ಕಳಿಹಿಸಿ ಬಿಡೋಣ. ಇದೇ ತರಹ 3 – 4 ಜನರ ಸ್ಥಿತಿ ವಿಷಮಗೊಂಡಿದೆ, ಅವರುಗಳನ್ನೂ ಕಳುಹಿಸುವ ವ್ಯವಸ್ಥೆಯಾಗ ಬೇಕಿದೆ – ಎಂದಾಗ, ನಾನು ಆ ಅರೆಜೀವದ ಸ್ಥಿತಿಯಲ್ಲೂ ವಿರೋಧಿಸಿದೆ – ಇಲ್ಲಾ, ಸ್ವಲ್ಪ ಸುಧಾರಿಸಿಕೊಂಡರೆ, ಬೆಳೆಗ್ಗೆಯ ವೇಳೆಗೆ ಸರಿ ಹೋಗುತ್ತೇನೆ. ನಾನು, ನಾಳಿನ ಅಂದರೆ ಎರಡನೇ ದಿನದ ಪರಿಕ್ರಮ ಮಾಡಲೇ ಬೇಕು - ಹೇಳುತ್ತ, ಹೇಳುತ್ತಲೇ ಕಣ್ಣಿನಲ್ಲಿ ಗಂಗಾ, ಭವಾನಿ ಮತ್ತೆ ಹರಿಯಲಾರಂಭಿಸಿದರು.

ಆಗ, ನನ್ನ ಮೈದುನ ಹಾಗೂ ಮುಖ್ಯ ಶರ್ಪಾ ಇಬ್ಬರೂ ಸಹ – ಇಲ್ಲಾ, ಹಿಮಪಾತ ಮತ್ತು ಪ್ರತಿಕೂಲವಾದ ಹವಾಮಾನ ವೈಪರೀತ್ಯದಿಂದಾಗಿ, ನಾಳೆ ಯಾರಿಗೂ ಮುಂದಿನ ಪರಿಕ್ರಮಕ್ಕೆ ಅವಕಾಶವೀಯಬಾರದೆಂದು ಸ್ಥಳೀಯ ಇಲಾಖೆ ನಿರ್ಧರಿಸಿದೆ. ಹಾಗಾಗಿ ನಾಳೆ ಎರಡನೇ ದಿನದ ಪರಿಕ್ರಮಕ್ಕೆ ಯಾರೂ ಹೋಗುವ ಹಾಗಿಲ್ಲ, -ಎಂದು ಹೇಳುತ್ತಾ, ನನ್ನ ಪೆಚ್ಚು ಮುಖವನ್ನು ಗಮನಿಸಿ,  ಶರ್ಪಾ – ಇಲ್ಲಿಯ ರೀತಿ ನೀತಿಯೇ ಅದು. ನಾವುಗಳು ಏನೇ ನಿರ್ಧರಿಸಿದ್ದರೂ ಸಹ ಇಲ್ಲಿ ನಡೆಯುವುದೆಲ್ಲ ಪ್ರಕೃತಿಯ ಇಚ್ಛೆಯಂತೆ ಮಾತ್ರ. ಹಾಗಾಗಿ, ನಮ್ಮ ಕೈಲಿ ಏನೂ ಇರುವುದಿಲ್ಲ, ನೀವು ತುಂಬಾ ನಿತ್ರಾಣಗೊಂಡಿದ್ದೀರಿ, ಆದಾಗ್ಯೂ ಒಂದು ದಿನದ ಪರಿಕ್ರಮವನ್ನು ಪೂರ್ಣಗೊಳಿಸಿದ್ದೀರಿ. ಇಲ್ಲಿಇರುವವರೆಲ್ಲರೂ ನಾಳೆ ಕಾಲ್ನಡಿಗೆಯಲ್ಲಿ ಹಿಂತಿರುಗುತ್ತಾರೆ. ನೀವು ಈಗ ವಾಹನದಲ್ಲಿ ಹಿಂತಿರುಗಿ. ನಿಮ್ಮೊಂದಿಗೆ, ಇನ್ನೂ ನಾಲ್ಕು ಜನರು ಬರಲಿದ್ದಾರೆ. ಅದರಲ್ಲಿ ನಿಮ್ಮ ಓರಗಿತ್ತಿ, ಆಶಾ ಅವರೂ ಒಬ್ಬರು. ಅವರೂ ಸಹ ಸ್ವಲ್ಪ ನಿರ್ತಾಣಗೊಂಡಿದ್ದಾರೆ ಹಾಗೂ ನಿಮ್ಮೊಬ್ಬರನ್ನೇ ಕಳುಹಿಸಲು ಅವರಿಗೆ ಇಚ್ಛೆಯಿಲ್ಲ. ಈಗ ಸುಧಾರಿಸಿಕೊಳ್ಳಿ. ಸ್ವಲ್ಪ ಬಿಸಿ ಬಿಸಿ ಕಿಚಡಿ ತಿನ್ನಿರಿ, ಅಷ್ಟರಲ್ಲಿ ವಾಹನ ವ್ಯವಸ್ಥೆ ಮಾಡುತ್ತೇವೆ – ಎನ್ನುತ್ತಾ ಮುಂದಿನ ಕೆಲಸಗಳಿಗೆ, ಹಾಗೂ ನನ್ನಂಥಹ ಅನೇಕ ಯಾತ್ರಿಕರತ್ತ ಗಮನ ಹರಿಸಲು ಅತ್ತ ನಡೆದರು. ಮತ್ತೊಬ್ಬ ಕಾರ್ಯಕರ್ತ ಅಷ್ಟರಲ್ಲಿ, ಬಿಸಿ ಬಿಸಿ ಕಿಚಡಿ ತಂದ. ನನಗೆ ಹಸಿವೆಯಿದ್ದರೂ, ಯಾಕೋ ಏನೂ ತಿನ್ನಲು ಮನಸ್ಸಾಗುತ್ತಿರಲಿಲ್ಲ. ಬೇಡವೇ ಬೇಡ ಎಂದರೆ, ಆ ಯುವಕ ತಾಯಿಯಂತೆ, - ಇಲ್ಲಾ ಅಮ್ಮ, ಸ್ವಲ್ಪ ಸೇರಿಕೊಂಡು ತಿನ್ನಲೇ ಬೇಕು, ಇಷ್ಟೇ ಇಷ್ಟು, ಇಲ್ಲಾ ಅಂದರೆ ಶಕ್ತಿ ಬರುವುದಿಲ್ಲ, ಎರಡೇ ತುತ್ತು – ಎನ್ನುತ್ತಾ ತಿನ್ನಿಸತೊಡಗಿದ. ಆ ಯುವಕನ ಮುಖದಲ್ಲಿ ಮಾತೃ ಹೃದಯಿ ಮತ್ತೊಬ್ಬ ಶಿವದೂತನನ್ನ್ನು ಕಂಡೆ.

ಒಂದರ್ಧ ಗಂಟೆಯಲ್ಲಿ ವಾಹನದ ವ್ಯವಸ್ಥೆಯಾಯಿತು.  ನಮ್ಮ ಹಿಂಪ್ರಯಾಣ ಪ್ರಾರಂಭವಾಯಿತು. ಮತ್ತೆ ಬೇಸ್ ಕ್ಯಾಂಪ್ ತಲುಪುವಷ್ಟರಲ್ಲಿ ಎಷ್ಟೋ ಸುಸ್ತು ಕಡಿಮೆಯಾಗಿತ್ತು. ಬಹುಶಃ ಹೇರಳವಾಗಿ ಸಿಕ್ಕ ಆಮ್ಲಜನಕದ ಕಾರಣವೂ ಇರಬಹುದು. ಮುಂದಿನ ಒಂದು ದಿನ ವಿಶ್ರಾಂತಿ. ನಂತರ ಹಿಂತಿರುಗಿ ಪ್ರಯಾಣ. ರಸ್ತೆಯಲ್ಲಿ ಮತ್ತೊಮ್ಮೆ ಅನತಿ ದೂರದಿಂದಲೇ ಮಾನಸ ಸರೋವರದ ದರುಶನ. ಮಾರನೇ ದಿನವೂ ಪ್ರಯಾಣ. ಮಾರ್ಗ ಮಧ್ಯೆ, ಉಗಮ ಸ್ಥಾನದಿಂದ ಕೆಲವು ಕಿ.ಮಿ.ಗಳಷ್ಟೇ ಹರಿದು ಬಂದದ್ದ ಬ್ರಹ್ಮಪುತ್ರಾ ನದಿಯ ದರುಶನ. ನೀರನ್ನುಪ್ರೋಕ್ಷಿಸಿಕೊಂಡು, ಬಾಟಲುಗಳಲ್ಲಿ ತುಂಬಿಸಿಕೊಂಡು ಹೊರಟೆವು.

ಬ್ರಹ್ಮಪುತ್ರಾ ನದಿ

ಮುಂದಿನ ಗಮ್ಯ, ಚೈನಾ ಬಾರ್ಡರ್. ಅಲ್ಲಿ ಮರುತಪಾಸಣೆ ನಡೆದ ನಂತರ, ಮತ್ತೊಂದು ದಿನ ಪ್ರಯಾಣದ ನಂತರ ಕಠ್ಮಂಡು ತಲುಪಿದ್ದಾಯಿತು. ಎಲ್ಲರ ಆಯಾಸವೂ ¸ ಸ್ವಲ್ಪ ಮಟ್ಟಿಗೆ ಕರಗಿದಂತೆ ಅನ್ನಿಸಹತ್ತಿತು. ಅಲ್ಲಿ ಒಂದು ದಿನದ ವಿಶ್ರಾಂತಿಯ ನಂತರ ನಮ್ಮ ವಿಮಾನ ಬುಕ್ ಆಗಿದ್ದರಿಂದ ಮತ್ತೊಮ್ಮೆ ಪಶುಪತಿನಾಥನ ದರುಶನ ಪಡೆದು, ಲೋಕಲ್ ಸೈಟ್ ಸೀಯಿಂಗ್‍ಗೆಂದು ನಮ್ಮ ಕುಟುಂಬವಷ್ಟೇ, ಒಂದು ಬಾಡಿಗೆ ಟ್ಯಾಕ್ಸಿಯಲ್ಲಿ ಸುತ್ತಾಡಿದೆವು. ದೂರದ ಚಂದ್ರಗಿರಿಗೂ ಹೋಗಿ ಬಂದು, ರಾತ್ರಿ ಮಾರ್ಕೆಟ್ ಬೀದಿ ಸುತ್ತಾಡಿದೆವು.  ಮುಂದೆ, ವಿಮಾನ ಹತ್ತಿ, ಬೆಂಗಳೂರು ತಲುಪಿ, ಗಂಡ, ಮಕ್ಕಳು, ಕುಟುಂಬ ವರ್ಗದವರ ಮುಖ  ನೋಡಿದಾಗ, ಏನೋ ನೆಮ್ಮದಿ, ಯಾವುದೋ ಸಮಾಧಾನ. ಸೊಸೆ ಅಕ್ಕರೆಯಿಂದ 'ಅಮ್ಮಾ ಇನ್ನು ಹತ್ತು ದಿನಗಳು ಮೈಸೂರಿಗೆ ಹೋಗುವ ಸುದ್ದಿ ಎತ್ತುವಂತಿಲ್ಲ.  ಪೂರ್ತಿ ವಿಶ್ರಾಂತಿ ಪಡೆದು ನಂತರವಷ್ಟೇ ಮೈಸೂರು' ಎನ್ನಲು, ನನಗೂ ಅದೇ ಸರಿ ಎನ್ನಿಸಿತು.

ಎರಡು ದಿನಗಳ ನಂತರ, ಪತಿ ಆನಂದರು - ನೀನು ಸುಧಾರಿಸಿಕೊಂಡು ಬಾ, ನಾಳೆ ರಂಗಣ್ಣ ಅವರು ಆಯೋಜಿಸಿರುವ ಅವರ ಪುಸ್ತಕ ಬಿಡುಗಡೆ ಸಮಾರಂಭ ಇದೆ,  ನಾಡಿದ್ದು, ಸಾಹಿತ್ಯ ದಾಸೋಹ, ನಾನು ಹೊರಡುತ್ತೇನೆ ಎನ್ನುವಷ್ಟರಲ್ಲೇ ಆನಂದರಿಗೆ, ರಂಗಣ್ಣ ಅವರ ಫೋನ್ ಬಂತು 'ಯಾವಾಗ ಬರ್ತೀರಾ ಸಾರ್, ಮೇಡಮ್ ಆರಾಮವಾಗಿದ್ದಾರಾ' ಎಂದರು.

ಆನಂದ 'ಹುಂ, ನಾನು ಈಗ ಹೊರಡುತ್ತಿದ್ದೇನೆ, ಅವಳಿಗೆ ಸ್ವಲ್ಪ ಸುಸ್ತಿದೆ, ಸುಧಾರಿಸಿಕೊಂಡು ಬರುತ್ತಾಳೆ' ಎನ್ನಲು, ರಂಗಣ್ಣ, 'ಖಂಡಿತಾ, ಅವರು ಹುಷಾರಾಗಿ ಹಿಂತಿರುಗಿದರಲ್ಲ ,ಸುಧಾರಿಸಿಕೊಳ್ಳಲಿ, ನಾನು ಬಲವಂತ ಮಾಡಲಾರೆ' ಎಂದರು.


ಒಂದೆರಡು ಗಂಟೆಗಳಲ್ಲಿ, ಆನಂದ ಮೈಸೂರಿಗೆ ಹೊರಡಲು ತಯ್ಯಾರಾದಾಗ, ಎರಡೂ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳಲು ಮನಸ್ಸು ಬಾರದೆ, ನಾನೂ ಹೊರಟು ಬಿಟ್ಟೆ. ಮತ್ತೆ ಮಾರನೆಯ ದಿನದ ಕಾರ್ಯಕ್ರಮಕ್ಕೆ ಹೋದಾಗ, ಕಾರ್ಯಕ್ರಮದ ವೇದಿಕೆಯಲ್ಲಿದ್ದ ರಂಗಣ್ಣ ಅಲ್ಲಿಂದಲೇ ಆತ್ಮೀಯವಾಗಿ ಸ್ವಾಗತಿಸಿದಾಗ, - ಮನಸ್ಸಿಗೆ, ಪ್ರಕೃತಿಯ ಉತ್ತುಂಗ ಸ್ಥಳವಾದ, ಶಿವನ ವಾಸಸ್ಥಳವಾದ ಕೈಲಾಶ ಮಾನಸ ಸರೋವರದ ದರುಶನ ಭಾಗ್ಯ, ಅಲ್ಲಿನ ಮಣ್ಣಿನ ಕಣಗಳನ್ನು ಶಿರದಲ್ಲಿ ಧರಿಸಿದ ಧನ್ಯತಾ ಭಾವಗಳೂ ತುಂಬಿ ಹೃದಯ, ಮನಸ್ಸು ಮೂಕವಾಗಿದ್ದರೂ “ಇಲ್ಲಿದೆ ನನ್ನ ನೆಲೆ, ಅಲ್ಲಿಗೆ ಹೋಗಿದ್ದು ಸುಮ್ಮನೆ” ಅನ್ನಿಸಿದ್ದು ಸುಳ್ಳಲ್ಲ.

ಈ ಪ್ರವಾಸಕಥನದ ಹಿಂದಿನ ಕಂತು ಇಲ್ಲಿದೆ : http://surahonne.com/?p=34373

(ಮುಗಿಯಿತು)

-ಪದ್ಮಾ ಆನಂದ್

12 Responses

  1. ನಯನ ಬಜಕೂಡ್ಲು says:

    ಸುಂದರ ಪ್ರವಾಸದ ಅನುಭವ.

  2. ಗಾಯತ್ರಿ ಸಜ್ಜನ್ says:

    ಕೈಲಾಸಪರ್ವತದ ಅನುಭವವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ ಧನ್ಯವಾದಗಳು

  3. Hema says:

    ಮಾನಸ ಸರೋವರ ಪ್ರವಾಸಕಥನ ಸೊಗಸಾಗಿ ಮೂಡಿ ಬಂತು. ಅಭಿನಂದನೆಗಳು. ಇನ್ನಷ್ಟು ವಿಸ್ತರಿಸಿ ಬರೆದಿದ್ದರೂ ಆರಾಮವಾಗಿ ಓದುತ್ತಿದ್ದೆವು .

    • Padma Anand says:

      ಧನ್ಯವಾದಗಳು. ಮುಂಬರುವ ದಿನಗಳ ಪ್ರವಾಸ ಕಥನ ಮತ್ತಷ್ಟು ವಿವರವಾಗಿ ಬರೆಯಲು ನಿಮ್ಮ ಪ್ರತಿಕ್ರಿಯೆ ಪ್ರೇರೇಪಿಸಿದೆ.

  4. ನಾಗರತ್ನ ಬಿ. ಅರ್. says:

    ಹಲೋ ಗೆಳತಿ ಇಷ್ಟು ಬೇಗ ಮಾನಸ ಸರೋವರ ಪ್ರವಾಸ ಕಥನ ಮುಗಿದೇ ಹೋಯಿತೇ ಎನಿಸಿತು..ಬಹಳ ಆಪ್ತವಾಗಿ ನಿರೂಪಿಸಿದ್ದೀರಿ.ಧನ್ಯವಾದಗಳು

  5. . ಶಂಕರಿ ಶರ್ಮ says:

    ಅತ್ಮೀಯವಾಗಿ ಓದಿಸಿಕೊಂಡು ಹೋಗುತ್ತಿರುವ ತಮ್ಮ ಪ್ರವಾಸ ಕಥನವು ಬಹಳ ಚೆನ್ನಾಗಿ ಮೂಡಿಬಂದಿದೆ. ನಮ್ಮನ್ನೂ ಹಿಮಗಿರಿಗೆ ಕರೆದೊಯ್ದ ತಮಗೆ ಹೃತ್ಪೂರ್ವಕ ನಮನಗಳು ಪದ್ಮಾ ಮೇಡಂ.

    • Padma Anand says:

      ಮೆಚ್ಚು ನುಡಿಗಳಿಗಾಗಿ ಹೃದಯಪೂರ್ವಕ ನಮನಗಳು ತಮಗೆ.

  6. sudha says:

    ನಮಸ್ಕಾರ. ನೀವು ಪುಣ್ಯವಂತರು. ಶಿವನ ನೆಲೆಗೆ ಹೋಗಿ ಬಂದವರು.

  7. Padmini says:

    ಮಾನಸ ಸರೋವರ, ಕೈಲಾಸಪರ್ವತದ ಅನುಭವ ಪ್ರವಾಸ ಕಥನ ಬಹಳ ಸೊಗಸಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: