ಸೀರೆ ಮತ್ತು ನೀರೆ

Share Button

ಸಂಗೀತ ರವಿರಾಜ್, ಕೊಡಗು.

 

 

ಹೆಣ್ಣಿಗೆ ನೂರಾರು ನಮೂನೆಯ ವೈವಿಧ್ಯಮಯ ಬಟ್ಟೆಗಳಿದ್ದರು ಪ್ರಸ್ತುತ ಸೀರೆಯೆ ಉಡುಪುಗಳ ಅನಭಿಷಕ್ತ ದೊರೆಯಾಗಿ ಉಳಿದುಕೊಂಡಿದೆ. ಎಂದಿಗೂ ಔಟ್ ಆಫ್ ಪ್ಯಾಷನ್ ಆಗದೆ ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಸೀರೆ ಇಂದಿಗು ಪಟ್ಟದರಸಿಯಾಗಿ ಮೆರೆಯುತ್ತಿದೆ. ಸೀರೆಗಳ ಮೇಲಿನ ಹೆಚ್ಚಿನ ಚಿತ್ರಗಳು ಎಲೆ, ಹೂವು, ಬಳ್ಳಿ ಹೀಗೆ ಪ್ರಕೃತಿ ವಿರಚಿತಗಳಿಂದ ತುಂಬಿರುತ್ತದೆ. ಮುತ್ತು, ರತ್ನ, ಪಚ್ಚೆ, ಹವಳ ಇವುಗಳನ್ನು ಪೋಣಿಸಿದಂತೆ ಶಬ್ದಗಳನೇನಾದರು ಪೋಣಿಸ ಹೊರಟರೆ ನಮಗೆ ಮೊದಲಾಗಿ ದಕ್ಕುವ ಶಬ್ದಗಳೆ ಹೆಣ್ಣು, ಸೀರೆ, ಹೂವು , ಬಳ್ಳಿ ಹೀಗೆ..!

ಹೆಂಗಳೆಯರ ಸೀರೆಯ ಲೋಕವೆಂದರೆ ಅದೊಂದು ವೈವಿಧ್ಯಮಯ ಜಗತ್ತು. ಅಲ್ಲಿ ತರೇವಾರಿ ಬಣ್ಣದ , ತರೇವಾರಿ ಸ್ಪರ್ಶದ, ಒಗೆಯಲು ಆಗದಂತಹ, ಹಗುರವಾದ, ಅಪ್ಪಟ ಜರಿಯ ಹೀಗೆ ನಾನಾ ರೀತಿಗಳು. ಮನೆಯಲ್ಲಿ ಧರಿಸಲೊಂದು ಸೀರೆ, ಸಮಾರಂಭಕ್ಕೆ ಬೇರೆ, ಉದ್ಯೋಗಕ್ಕೆ ಹೊರಟಾಗ ಇನ್ನೊಂದು ರೀತಿಯವು ಹೀಗೆ ಸಾಗುತ್ತದೆ ಹೆಣ್ಣಿನ ಮನಸ್ಸು. ನೆನಪುಗಳ ಬೆಚ್ಚಗಿನ ಗೂಡಿನಲ್ಲಿ ಮೊದಲು ಸೀರೆ ಹಾಕಿದಾಗಿನ ಸಂಭ್ರಮವೆ ಒಂದು ಮರೆಯಲಾಗದ ಅನುಭವವಾಗಿರುತ್ತದೆ. ಆಕೆ ಪ್ರಥಮವಾಗಿ ತೆಗೆದ ಸೀರೆಯಿಂದ ಶುರುವಿಟ್ಟು ಎಲ್ಲಾ ಸೀರೆಗಳನ್ನು ಬೀರುವಿನಲ್ಲಿ ಕರ್ಪೂರದೊಂದಿಗೆ ಸಂಗ್ರಹಿಸಿಟ್ಟ್ತಿರುತ್ತಾಳೆ. ಜಿರಳೆ, ಇರುವೆ ಸೇರದಂತೆ ಆಗಾಗ್ಗೆ ಬಿಸಿಲಿಗು ಹಾಕಿ ತೆಗೆದಿರಿಸುತ್ತಾಳೆ. ಅಪ್ಪಟ ರೇಶ್ಮೆಯ ಸೀರೆಗಳನ್ನೆಲ್ಲಾ ಶುಭ್ರವಾದ ಬಿಳಿಯ ಬಟ್ಟೆಯಲ್ಲಿ ಎತ್ತಿಟ್ಟ್ತಿರುತ್ತಾಳೆ. ಕಾಡಿ ಬೇಡಿದರು ಅಮ್ಮನ ಸೀರೆಯಲ್ಲೊಂದು ಸಲ್ವಾರ್ ಮಾಡೋಣವೆಂದರೆ ಕೊಡಲೊಲ್ಲಳು ನೋಡಿ!

ಆಗೊಮ್ಮೆ ಈಗೊಮ್ಮೆ ಬೀರುವಿನಲ್ಲಿಟ್ಟ ಸೀರೆಗಳನ್ನೆಲ್ಲಾ ತೆಗೆದು ಜೋಡಿಸಿ ಪೇರಿಸಿಡುವುದೆಂದರೆ ಆಕೆಗೆ ಎಲ್ಲಿಲ್ಲದ ಖುಷಿ. ಅವುಗಳನ್ನೆಲ್ಲಾ ನೇವರಿಸಿ ಮಧುರ ಮೆಲುಕುಗಳನ್ನು ತಿರುವಿಹಾಕುತ್ತಾಳೆ.ಸೀರೆಯನ್ನು ಚೆನ್ನಾಗಿ ಧರಿಸುವುದು ಒಂದು ಕಲೆ, ಭಾರತೀಯರಾದ ನಮಗೆ ಈ ಕಲೆ ಬೆಳೆಯುತ್ತಿದ್ದಂತೆ ಕರಗತವಾಗುತ್ತದೆ. ಇಲ್ಲವೆಂದರೆ ನೆರಿಗೆ ಹಾಕಿ, ನೆಲಕ್ಕೆ ತಾಗದಂತೆ ಪಲ್ಲು ಹಾಕಿ ಜಾಗರೂಕತೆಯಿಂದ ಧರಿಸುವುದೆಂದರೆ ಸಣ್ಣ ವಿಷಯವೇ?

“ಗಡಿ ಗಟ್ಟಿ ಇದ್ರೆ ನಾಡು, ದಡಿ ಗಟ್ಟಿ ಇದ್ರೆ ಸೀರೆ” ಎಂಬ ಮಾತಿದೆ. ಇಷ್ಟೆ ಅಲ್ಲದೆ ಇದನ್ನು ಮಡಚಿಡುವುದು ಮತ್ತು ಒಗೆಯುವುದು ಸುಲಭದ ಮಾತಲ್ಲ. ಅಮ್ಮಂದಿರ ಸೀರೆಯನ್ನು ನೋಡಿ ಪುಟ್ಟ ಮಕ್ಕಳಿಗು ಸೀರೆಯೆಂದರೆ ಏನೋ ಆಕರ್ಷಣೆ. ಬಾಲ್ಯದಲ್ಲಿ ಸೀರೆ ಹಾಕಿ ಅಮ್ಮನಾಟವಾಡದ ಮಕ್ಕಳೇ ಇರುವುದಿಲ್ಲ. ಕಾಗದದ ದೋಣಿ ತೇಲಿಬಿಡುವ ಪ್ರಾಯದ ಜಾಣೆಯರಿಗು ಸೀರೆ ಬೇಕು.

ಸೀರೆ ಧರಿಸುವುದರಲ್ಲು ಆಯಾ ಪ್ರದೇಶ ಮತ್ತು ರಾಜ್ಯಕ್ಕನುಸಾರವಾಗಿ ಆಯಾ ರೀತಿಗಳು ಅಚ್ಚರಿಯನ್ನುಂತುಮಾಡುತ್ತದೆ. ಅದೆಷ್ಟು ವಿಧದಲ್ಲಿ ಸೀರೆಯ ಸೊಬಗನ್ನು ನಾವು ಕಾಣಬಹುದು ಎಂದರೆ ಎದುರು ಸೆರಗು,ಹಿಂದೆ ಸೆರಗು, ತಲೆಗೆ ಸೆರಗು, ಹಿಂದೆ ನೆರಿಗೆ, ಮುಂದೆ ನೆರಿಗೆ, ಪೇರಿಸಿಟ್ಟಂತೆ ಪಲ್ಲು ಇನ್ನೂ ನಾನಾ ರೀತಿಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ಹೀಗೆ ಸ್ವರೂಪಗಳು ಬದಲಾದರು ಸೀರೆಯ ರೂಪದಲ್ಲಿ ಯಾವುದೆ ಬದಲಾವಣೆಯಿಲ್ಲ.

ಕೊಡಗು ಶೈಲಿ

ಬಂಗಾಳಿ ಶೈಲಿ

ಸೀರೆ ಧರಿಸಿದ ರೀತಿ ನೋಡಿ ಅವರು ಯಾವ ಊರಿನವರೆಂದು ಗುರುತಿಸುವಾಗ ಅವರಿಗು ಒಳಗೊಳಗೆ ಖುಷಿಪಡುವಂತಹ ಹೆಮ್ಮೆ. ಉದಾಹರಣೆಗೆ ಕೊಡಗಿನಲ್ಲಿ ಒಂದು ರೀತಿಯಾದರೆ ದಕ್ಷಿಣಕನ್ನಡದಲ್ಲಿ ಇನ್ನೊಂದು ರೀತಿ.

ಸೀರೆಯ ರಂಗು ರಂಗಿನ ಪ್ರಪಂಚದಲ್ಲಿ ಇನ್ನೊಂದು ಗಮನಾರ್ಹ ಅಂಶವಿದೆ. ಅದೇನೆಂದರೆ ಸಮಾರಂಭದ ಸಂಧರ್ಭಗಳಿಗಣುವಾಗಿ ಬಣ್ಣಗಳ ಸಂಕೇತದ ಮೇರೆಗೆ ಸೀರೆಯನ್ನು ಧರಿಸುವ ಅಪ್ರತಿಮ ಕ್ರಮ. ಧಾರೆಗೆ ಬಿಳಿಸೀರೆ, ಸೀಮಂತಕ್ಕೆ ಹಸಿರು ಸೀರೆ, ದೇವಸ್ಥಾನಕ್ಕೆ ಶುಭ್ರಬಿಳಿ ಈ ರೀತಿಯಲ್ಲಿ ಬಣ್ಣಗಳ ವಿಂಗಡನೆ .

ಸೆಲೆಬ್ರಿಟಿಗಳು ಬಂದಾಗ ಅವರನ್ನು ಬರಮಾಡಿಕೊಳ್ಳಲು ಸರತಿ ಸಾಲಿನಲ್ಲಿ ಸಾಗುವ ಸೀರೆಯುತ್ತ ಕಳಶದ ಕನ್ಯೆಯರನ್ನು ನೋಡಲು ಕಣ್ಣೆರಡು ಸಾಲದು. ಸೀರೆಯನ್ನು ಸಮವಸ್ತ್ರವಾಗಿ ಬಳಸಿದರೆ ಅದರ ಅಂದ ಇನ್ನು ಹೆಚ್ಚು. ಧರ್ಮಸ್ಥಳ ಸಂಘದ ಹೆಂಗಳೆಯರು ಅವರ ಗುಂಪಿನ ಸದಸ್ಯರೆಲ್ಲ ಒಂದುಗೂಡಿ ಒಂದೆ ರೀತಿಯ ಸೀರೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಸಮಾರಂಭಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದಕ್ಕೆ ಈ ಕ್ರಮವನ್ನು ಅನುಸರಿಸುತ್ತಾರೆ. ಇನ್ನುಳಿದಂತೆ ಸನ್ಯಾಸಿನಿಯರಿಗೆ ಅವರದೇ ಆದ ಸಮವಸ್ತ್ರವಿದೆ. ಸ್ಕೌಟ್, ಗೈಡ್ ತರಭೇತಿದಾರರಿಗೆ, ಶಿಕ್ಷಕ ಶಿಕ್ಷಣ ತರಭೇತಿದಾರರಿಗೆ ತಮ್ಮದೆ ಆದ ಸೀರೆಯ ಸಮವಸ್ತ್ರಗಳು. ಇನ್ನುಳಿದಂತೆ ಸೀರೆಯನ್ನು ಕಡ್ಡಾಯವಾಗಿ ಧರಿಸುವಂತಹ ಸಂಘಸಂಸ್ಥೆಗಳು ಇವೆ. ಶಿಕ್ಷಕಿಯರು. ಕೆಲವು ವಿಮಾನ ಸಂಸ್ಥೆಯ ಗಗನ ಸಖಿಯರು ಇತ್ಯಾದಿ. ಹೀಗೆ ಸಾಗುತ್ತದೆ ಸೀರೆಯ ಸವಾರಿ ದ್ರೌಪದಿಯ ಎಳೆದಷ್ಟು ಕೊನೆಯಾಗದ ಸೀರೆಯ ತನಕ.

air indiaa

ಪ್ರತಿ ಮನೆಯ ಅಮ್ಮನ ಪ್ರತಿದಿನದ ಸಂಗಾತಿಯಾದ ವಾಯಿಲ್ ಸೀರೆ ಅಥವ ಹತ್ತಿಯ ಸೀರೆಯ ಸೊಬಗು ಯಾವುದಕ್ಕೇನು ಕಡಿಮೆ ಹೇಳಿ? ಮನೆ ಸೀರೆಯ ಮಹಿಮೆ ಮಹಿಳೆಗಷ್ಟೆ ಅರಿವಿರುವ ನೆಚ್ಚಿನ ಸತ್ಯ. ಮೊಸರು ಕಡಿದು ಮುಸುರೆ ತೊಳೆದು ಉಜ್ಜುವ ಕೈ ಅದುವೆ ಸೆರಗಿಗೆ. ಹನಿ ಹಾಲು ಚೆಲ್ಲಿದ್ದರು, ಜೊಲ್ಲು ತೊಟ್ಟಿಕ್ಕಿದ್ದರು ಅಲ್ಲಿಗೆ ಸೈ ಈ ಕುಂಚ. ಸೊಂಟದ ಮಗುವಿನ ಕಣ್ಣೀರು ಅದ್ದಲು ಒಂದು ಸುತ್ತು ಹಾಕಿ ಮುತ್ತುವ ಸೆರಗಿನ ಸ್ಪರ್ಶವನ್ನು ನೋಡುವುದೆ ಒಂದು ಅನೀರ್ವಚಯ ಆನಂದ.ಹನಿ ಬೆವರು ಬಂತೆದಾಗ ದುತ್ತೆಂದು ಧಾವಿಸಿ ಅದ್ದಿ ಅದ್ದಿ ತೆಗೆಯುವ ಸೆರಗಿನೊಂದಿಗೆ ಏನೋ ಆತ್ಮೀಯತೆ . ಅಗತ್ಯ ಬಿದ್ದರೆ ಗಂಡನ ಗಾಯದ ಪಟ್ಟಿಗು ಸಹಾಯವಾಗುವ ಸೆರಗಿನದು ಏಕಪಾತ್ರಭಿನಯ.  ಅವಸರಕ್ಕೆ ಅದೇನನ್ನೋ ಗಂಟು ಹಾಕಲು ಸೆರಗಿನಂಚು ಬೇಕು, ಗಡಿಬಿಡಿಯಲ್ಲಿ ಬಿಸಿ ಪಾತ್ರೆಯನ್ನು ಎತ್ತಲು ಇದು ಬೇಕು. ತ್ವಚ್ಛೆಯ ರಕ್ಷಣೆಗು ಸೆರಗನ್ನು ಬಳಸುವರಿದ್ದಾರೆ. ಮುಗ್ದೆ ನಾಚಿದರೆ ಬಾಯಿಗೊಡ್ಡಲು ಈ ಸೆರಗಂಚು ಬೇಕು. ಅಬ್ಬರದ ನಗುವಿಗು ನೆರವಾಗುವ ಸೆರಗು ಬಿಕ್ಕಳಿಕೆ ತಪ್ಪದ ಕಣ್ಣೀರಿನ ತಹಬದಿಗು….! ಇನ್ನು ಹಳೆಯದಾಗಿ ಹರಿದ ಸೀರೆಯ ಭಾಗಗಳ ಉಪಯೋಗ ಹೇಳತೀರದು. ಸಣ್ಣ ಮಗುವಿನ ಬಳಕೆಯಿಂದ ಹಿಡಿದು ಒರೆಸುವ ಬಟ್ಟೆಯವರೆಗು ಹೋಗುತ್ತದೆ ಇದರುಪಯೋಗ.

ಸೀರೆಯ ಸೆರಗು ಎಂದಿಗು “ಎವರ್ ಗ್ರೀನ್”. ಸೀರೆಯ ಉಳಿದ ಭಾಗ ಹಾಳಾದರು ಅಭೂತಪೂರ್ವ ಕಲೆಯನ್ನು ಉಳಿಸಿಕೊಂಡ ಸೆರಗು ಇನ್ನು ಹೊಸತರಂತೆ ಇರುತ್ತದೆ. ಮನೆಸೀರೆಯ ಸೆರಗು ಮಾಸಿದಷ್ಟು ಹೊಳಪು ಏರಿ ಮೊಗೆದಷ್ಟು ಭಾವನೆಗಳ ಹೂಗುಚ್ಛದ ಸ್ವರ್ಗ! ಸೀರೆಗೆ ಅದರ ಸೆರಗಿನಿಂದಲೇ ಆಕರ್ಷಣೆ ಹೆಚ್ಚು. ಹೆಂಗಳೆಯರಿಗೆ ಸೀರೆಯಂಗಡಿಯಲಿ ಆಯ್ಕೆಯ ಜೊತೆಜೊತೆಗೆ ಎಲ್ಲಾ ಸೀರೆಗಳ ಸೆರಗು ನೋಡುವ ಖಯಾಲಿಯು ಇರುತ್ತದೆ. ಸೀರೆಗೆ ತಕ್ಕ ರವಿಕೆಯ ಖಣ ಸೀರೆಯೊಂದಿಗೆ ಸಿದ್ಧ. ಗೆಳತಿಯರ ಸೀರೆಯನ್ನು ಬದಲಾಯಿಸಿ ಧರಿಸಲು ಸೈ ಈ ಕುಂಚ. ಸೆರಗಿನ ಬಣ್ಣದ ರವಿಕೆಯೊದನ್ನು ಆಯ್ಕೆ ಮಾಡಿದರೆ ಮುಗಿಯಿತು ನಮಗೂ ಹೊಸ ಸೀರೆ. ಧಾವಂತದ ಬದುಕಿನಲ್ಲಿ ಅತ್ಯಾಧುನಿಕ ಫ್ಯಾಷನ್ಗಳು ಲಗ್ಗೆಯಿಟ್ಟರು ಅದಕ್ಕೆ ತಕ್ಕಂತೆ ರವಿಕೆಯನ್ನು ವಿಧವಿಧವಾಗಿ ಬದಲಾಯಿಸುತ್ತಾರೆ ಹೊರತು ಸೀರೆ ಎಂದಿಗು ಬದಲಾಗುವುದಿಲ್ಲ. ಅದೇ ಅಳತೆಯ ಸೀರೆ ಅಂದಿನಿಂದ ಇಂದಿನವರೆಗು!

ಭಾರತೀಯರ ಅಚ್ಚುಮೆಚ್ಚಿನ ಸೀರೆ ಬಾಂಗ್ಲಾದೇಶ,ನೇಪಾಳ, ಶ್ರೀಲಂಕ, ಭೂತಾನ್, ಬರ್ಮ, ಮಲೇಶಿಯ ದೇಶಗಳಲ್ಲು ಜನಪ್ರಿಯ ಉಡುಪಾಗಿದೆ.ಇಲ್ಲಿ ಭಾರತೀಯರಂತೆ ದೇಶದ ಸಂಪೂರ್ಣ ಭಾಗಗಳಲ್ಲಿ ಸೀರೆಯನ್ನು ಬಳಸುತ್ತಾರೆ. ಕರ್ನಾಟಕದಲ್ಲಿ ಇಳಕಲ್ ಸೀರೆ ಮತ್ತು ಮೈಸೂರು ಸಿಲ್ಕ್ ಸೀರೆ ಹೆಚ್ಚು ಜನಪ್ರಿಯ. ಅಂತೆಯೇ ಉತ್ತರಪ್ರದೇಶದಲ್ಲಿ ಬನಾರಸ್ ಸೀರೆ ಮತ್ತು ಶಾಲು ಸೀರೆ, ಆಂಧ್ರಪ್ರದೇಶದಲ್ಲಿ ಧರ್ಮಾವರಂ ಸೀರೆ, ಗುಂಟೂರ ಸೀರೆ ಮತ್ತು ಮಂಗಲಪುರಿ ಸೀರೆ, ಮಧ್ಯಪ್ರದೇಶದಲ್ಲಿ ಚಂದ್ರಗಿರಿ ಸೀರೆ, ಮಹೇಶ್ವರಿ ಸೀರೆ, ಮಹಾರಾಷ್ತ್ರದಲ್ಲಿ ನವ್ವಾರಿ ಸೀರೆ[ಒಂಭತ್ತು ವಾರಿ ಸೀರೆ], ತಮಿಳುನಾಡಿನಲ್ಲಿ ಕಾಂಜೀವರಂ ಮತ್ತು ಚಟ್ಟ್ತಿನಾಡು ಸೀರೆ, ಕೇರಳದಲ್ಲಿ ಬಕರಾಂಪುರ ಸೀರೆ, ಅಸ್ಸಾಂನಲ್ಲಿ ಕಾಡು ರೇಶ್ಮೆಯ ಸೀರೆ. ಪಶ್ಚಿಮ ಬಂಗಾಳದಲ್ಲಿ ಕಲ್ಕತ್ತಾ ಕಾಟನ್ ಸೀರೆ ಹೀಗೆ ಪ್ರತಿ ರಾಜ್ಯದಲ್ಲಿ ಜನಪ್ರಿಯ ಸೀರೆಗಳಿವೆ.

ನಟಿಮಣಿಯರು ವಿಶೇಷ ವಿನ್ಯಾಸದಲ್ಲಿ ಸೀರೆಯನ್ನು ಸಿದ್ಧಪಡಿಸಿ ಅದಕ್ಕೆ ಲಕ್ಷಗತ್ತಲೆ ಹಣ ಕೊತ್ತು ಪ್ರಚಾರ  ಗಿಟ್ಟಿಸಿಕೊಂಡರು ಅದು ಸೀರೆಯೆ! ತಮಿಳುನಾಡಿನಲ್ಲಿ ರತ್ನಖಚಿತವಾದ ಭರ್ಜರಿ ಸೀರೆಯೊಂದು ಲಿಮ್ಕಾ  ರೆಕಾಡ್ ನಲ್ಲಿ ದಾಖಲಾಗಿದೆ. ಮೂವತ್ತು ನೇಕಾರರು, ಏಳು ತಿಂಗಳ ಕಾಲ ಏಕಪ್ರಕಾರವಾಗಿ ಕುಸುರಿ ಕೆಲಸ  ಮಾಡಿ ತಯಾರಿಸಿದ ಈ ಪಾಟಿ ಸೀರೆ 8  ಕೆ.ಜಿ ಭಾರವಿದೆ. ಚಿನ್ನ ವಜ್ರ, ಮುತ್ತು , ರತ್ನ , ಹವಳದಿಂದ  ಅಲಂಕರಿಸಿರುವ ಈ ಸೀರೆಯ ಬೆಲೆ 40  ಲಕ್ಷ. ಮಹಿಳೆಯರು ಸಾರ್ವತ್ರಿಕವಾಗಿ ಬಳಸಲ್ಪಡುವ ಸೀರೆಯ  ಜನಪ್ರಿಯತೆ ಮುಂದಿನ ದಿನಗಳಲ್ಲು ಹೆಚ್ಚೆಚ್ಚು ಪ್ರಚಲಿತದಲ್ಲಿರುವುದರಲ್ಲಿ ಯಾವುದೇ ಸಂಶಯವಿಲ್ಲ.  ಶ್ರೀಮಂತರು ಬಡವರು ಎಂಬ ಭೇದಭಾವವಿಲ್ಲದೆ ಅವರವರ ಅನುಕೂಲಕ್ಕೆ ತಕ್ಕಂತ ಸೀರೆಗಳು ಬದುಕಿನ  ಸಾಮರಸ್ಯವನ್ನು ಹೆಚ್ಚಿಸುತ್ತವೆ. ಜಗತ್ತಿನಲ್ಲಿ ಒಂದು ಆರೋಗ್ಯಕರ ಉಡುಪಿನ ಮಾದರಿಯೆಂದರೆ ಸೀರೆ  ಹೊರತು ಬೇರೆ ಯಾವುದು ಇರಲು ಸಾಧ್ಯವಿಲ್ಲ.

 

 

 

– ಸಂಗೀತ ರವಿರಾಜ್,  ಕೊಡಗು.

4 Responses

  1. BH says:

    ವಾವ್! ಸೀರೆಗಳ ವಿವಿಧ ಆಯಾಮ ವಿಸ್ಮಯಗೊಳಿಸಿತು! ಬರಹ ತುಂಬಾ ಹಿಡಿಸಿತು.

  2. jayashree says:

    super article sangeeta

  3. savithri.s.bhat says:

    ಸೀರೆಗಳ ಬಗ್ಗೆ ಎಸ್ಟೊ೦ದು ವಿಷಯಗಳನ್ನು ಬರೆದಿದ್ದೀರೀ ಲೇಖನ ಬಹಳವಾಗಿ ಹಿಡಿಸಿತು. ಅದಕ್ಕೆ ಸರಿಯಾದ ವರ್ಣ ರ೦ಜಿತ ಚಿತ್ರಗಳೊ೦ದಿಗೆ ಪ್ರಕಟಿಸಿ ಲೇಖನ ಮತ್ತಷ್ಟು ಆಕರ್ಷಕವಾಗಿದೆ.

  4. Ghouse says:

    Nice article.

Leave a Reply to jayashree Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: