ದರ್ಪಣ- ಭೇಟಿಯ ಕ್ಷಣ

Share Button

ಅದೊಂದು ಸುಂದರವಾದ ಮುಸ್ಸಂಜೆ ಹೊತ್ತು… ಹೊರಹೊರಟಿದ್ದಾಗ ಸಣ್ಣ ತುಂತುರು ಮಳೆ…ಗಾಡಿಯಲ್ಲಿ ಕೂತು ಹೊರಟಾಗ ಗಿಡಮರಗಳು ಸುಳಿಗಾಳಿಗೆ ತಮ್ಮ ಮೇಲೆ ಬಿದ್ದ ಮಳೆ ಹನಿಯ ತಂಪು ಆಸ್ವಾದಿಸುತ್ತಿದ್ದಂತೆ ಭಾಸವಾಗುತ್ತಿತ್ತು.ಅಲ್ಲಲ್ಲಿ ಜನರ, ವಾಹನಗಳ ಚಲನವಲನ. ಒಂದು ಸಣ್ಣ ರಸ್ತೆ ಹೊಕ್ಕಾಗ ಎರಡು ವಾಹನಗಳು ಸಾಗಲು ಜಾಗವಿಲ್ಲದೆ ಎದುರುಬದುರು ನಿಂತು ನಾನು ಮೊದಲು ತಾನು ಮೊದಲು ಎಂಬ ಹಣಾಹಣಿ..ಹಾಗಾಗಿ ಹಿಂದೆ ನಿಂತ ವಾಹನಗಳು ಹಿಂದೆ ಸಾಗಿ ಜಾಗ ಮಾಡಿಕೊಡಲು ಮುಂದಾದವು..ಹಾಗೆ ಹಿಂದೆ ಸಾಗಿದ ನಮ್ಮ ವಾಹನ ಒಂದೆಡೆ ತುಸು ಕ್ಷಣ ನಿಂತಾಗ… ಕಣ್ಣಿಗೆ ಬಿದ್ದದ್ದು…

ಒಂದು ಪಾಳು ಬಿದ್ದ ಮನೆ …ಹೊಸ ಮನೆ ಕಟ್ಟಲು ಕೆಡವಿದ್ದ ವಾಸವಿದ್ದ ಮನೆ. ..ಎಲ್ಲೆಡೆ ಹರಡಿ ಬಿದ್ದಿದ್ದ ಗೋಡೆಯ ಚೂರುಗಳು .. ಚೆಲ್ಲಾಡಿದ ಚೂರಾದ ಕೆಲ ವಸ್ತುಗಳು..ಹಳೆಯ ಕ್ಯಾಲೆಂಡರ್..ಆಟಿಕೆ..ಅಲ್ಲಲ್ಲಿ ಬಿದ್ದು ತಾನಿದ್ದೇನೆ ಎಂದು ತಲೆ ಹೊರಹಾಕಿ ಸನ್ನೆ ಮಾಡುವ ಈ ವಸ್ತುಗಳು…ಆಗ ಕಂಡಿದ್ದು        ಒಂಟಿಸಲಗದಂತೆ ನಿಂತಿದ್ದ ಒಂದು ಅರ್ಧ ಮುರಿದ ಗೋಡೆ…ಇದ್ದೆಲದರ ಮಧ್ಯೆ ಕಣ್ಣು ಅತ್ತಿತ್ತ ಹೊರಳಿ ನಿಂತಾಗ…ಗಮನ ಸೆಳೆದಿದ್ದು… ಕಂಡದ್ದು..ಅರ್ಧ ಬಿದ್ದ ಗೋಡೆಗೆ ತಾಗಿದಂತೆ ನಿಂತು ಮಿರ ಮಿರ ಮಿಂಚುತ್ತಿದ್ದ ಒಂದು ಕನ್ನಡಿ..ಯಾವ ಕ್ಷಣದಲ್ಲಾದರೂ ಯಾರೋ ಬಂದು ಹೊತ್ತು ಒಯ್ಯಬಹುದು.. ಉಪಯೋಗಿಸಲೋ.. ಬಿಸಾಡಲೋ…ಹಾಗಾಗಿ ಚೂರು ಚೂರಾಗುವ ಸಂಭವ… ಇನ್ನು ಈ ಮನೆಯಲ್ಲಿ ವಾಸಿಸುತ್ತಿದ್ದವರ ಒಡನಾಟ,ಮಾತು,ಚಿಂತನೆ,ಸುಖ,ದುಃಖ ನಗು ಅಳು ಇದಾವುದೂ ಕಾಣುವುದು ಇನ್ನಿಲ್ಲ…ಆದರೂ ಅದಾವುದರ ಪರಿವೆ,ಅಳುಕು ಇಲ್ಲದೆ ಅದೇ ಹಮ್ಮು…    ಈ ಸದಸ್ಯ ಮನೆ ಸೇರಿದ ದಿನದಿಂದ ಮುಂದೆ ಬಂದ ನಿಂತವರೆಲ್ಲರಿಗೆ  ಯಾವುದೇ ತಾರತಮ್ಯವಿಲ್ಲದೆ ನಿಜಸ್ವರೂಪ,ಅಂದ-ಚೆಂದ,ಹುಳುಕು ತೋರಿ..ತನ್ನ ಮುಂದೆ ನಿಂತು ತೋಡಿಕೊಂಡ ಸಂತೋಷ,ಅಳುಕು,ನೋವು ಎಲ್ಲಾ ಕೇಳಿ..ಮನದಲ್ಲಿರುವ ನಿಜವಾದ ವಿಚಾರ…ಒಳ್ಳೆಯದೋ,ಕೆಟ್ಟದ್ದೋ ಎಲ್ಲವನ್ನೂ ಮಾತನಾಡದೆಯೇ ಅರಿಯುವ ತಿಳಿಸುವ ಮಾಂತ್ರಿಕ… ಟೀಕೆ ಮಾಡದೆಯೇ ಅಂತರಂಗದ ರಹಸ್ಯ ಬಯಲು ಮಾಡುವ ಚತುರ…ಮುಂದೆ ನಿಂತು ಅತ್ತವರ ಮನಕ್ಕೆ ಸಮಾಧಾನದ ಔಷಧ ನೀಡಿ ಹೆತ್ತ  ತಾಯಿತಂದೆಯಂತೆ ಸಂತೈಸಿದ ಬಂಧು…ಮುಂದೆ ಹಾದು ಹೋದವರ ಮತ್ತೆ ಬರಸೆಳೆದು ಮತ್ತೊಮ್ಮೆ ತನ್ನ ಮುಂದೆ ಬಂದು ನಿಲ್ಲುವಂತೆ ಮಾಡಿದ ಸದಸ್ಯ..

ಇಷ್ಟೆಲ್ಲಾ ಸಹೃದಯಿ…ಗೋಚರವಾದರೂ ಮನೆಯ ಸದಸ್ಯರಿಗೆ ಅಗೋಚರನಾಗಿ ಇದ್ದು ಆಪ್ತನಂತಿದ್ದ. ಆದರೆ ಇಂದು ಅವರಿಗೇ ಬೇಡವಾಗಿ ನಿಂತೆಯಲ್ಲ ನೀನು? ನೆರಳು ನೀಡುವ ಮರದ ಆಸರೆಯಲ್ಲಿ ನಿಂತು ತಂಪಾದ ನಂತರ ಹೊರಡುವಾಗ ಎಲೆಗಳ ಕಿತ್ತು ಅಲ್ಲೇ ಬಿದ್ದಿರುವ ಎಲೆಗಳ  ಕಾಲಿನಿಂದ ಓದ್ದು ಆಟವಾಡಿ..ಕಡ್ಡಿಗಳನ್ನು ಮೇಲೆ ಎಸೆದು ಹೊರಡುವ ಮನುಜ…ಇಂದು ನೀನು ಆ ಮರದಂತೆ ಕಂಡೆ…ಸುರಿವ ಮಳೆಯ ಹನಿ ನಿನ್ನ  ಮೇಲೆ ಇಳಿಯುತ್ತಿದ್ದುದು ನಿನ್ನ ಮನದಿಂದ ಉಕ್ಕಿದ ನಿನ್ನ ನೋವಿನ ಕಣ್ಣೀರೋ ಅಥವಾ ನೀ ಅನ್ಯರ ಪಾಲಿಗೆ ಎಂದೂ ಸಂತಸ ನೀಡಿದ್ದೆ ಎಂಬ ತೃಪ್ತಿಯ ಪನ್ನೀರಿನ ಅಶ್ರುಧಾರೆಯೋ ನಾ ಅರಿಯದಾದೆ..ಕ್ಷಣಮಾತ್ರದ ನಿನ್ನ ನೋಟ,ಪರಿಚಯ ನನಗೆ ಬದುಕಿನ ಇನ್ನೊಂದು ಮುಖದ ಚಿತ್ರಣ ನೀಡಿತು.ಏನೇ ಆಗಲಿ ತುಂಬಿದ ಮನೆಯಿಂದ..ಬಟಾಬಯಲಿನಲ್ಲಿ ಒಂಟಿ ನಿಂತಾಗಲೂ ಕುಂದದ ಆ ನಿನ್ನ ಕಳೆ,ಹುಮ್ಮಸ್ಸು, ಧೈರ್ಯ.. ಬದುಕಿನ ಹಾದಿಯಲ್ಲಿ ಏನೇ ಎದುರಾದರೂ ಅಳುಕದೆ ಅದೇ ಉತ್ಸಾಹದಿಂದ ಸಾಗಬೇಕೆಂಬ ದಿವ್ಯ ಸಂದೇಶ ಸಾರಿದ್ದೆ.

ಇದೇ ಗುಂಗಿನಲ್ಲಿ ಇದ್ದ ನನಗೆ ರಸ್ತೆಯಲ್ಲಿ ಅಡ್ಡಗಟ್ಟಿದ್ದ ವಾಹನಗಳ ಕಹಳೆಯಂತ ಹಾರ್ನ್ ಶಬ್ದ ಎಚ್ಚರಿಸಿತು.. ಒಂದೊಂದೇ ವಾಹನಗಳು ಚಲಿಸತೊಡಗಿ ನಾ ಇದ್ದ ವಾಹನ ಮುಂದೆ ಹೊರಟಾಗ ಮತ್ತೊಮ್ಮೆ ಆ ದರ್ಪಣದ ಕಡೆ  ದಿಟ್ಟಿಸಿ ನೋಡಿ ಮುಗುಳುನಗೆ ಬೀರಿ ಮತ್ತೊಮ್ಮೆ ನಾ ಅದೇ ಹಾದಿಯಲ್ಲಿ ಚಲಿಸುವ ಹೊತ್ತಿಗೆ ನೀ ಎಲ್ಲಿರುವೆಯೋ ತಿಳಿಯದು…ಕಿರಿನಗೆ ಬೀರಿ ಇದೋ ನನ್ನ ನಮನ ನಿನಗೆ ಎಂದು ಮನದಲ್ಲೇ ವಂದಿಸಿ… ವಾಹನ ಮುಂದೆ ಸಾಗುತ್ತಿದ್ದಂತೆ ಇಂಚಿಂಚು ಕಣ್ಮರೆಯಾದ ದರ್ಪಣ ಮತ್ತೊಮ್ಮೆ ಕಾಣುವುದೇನೋ ಎಂದು ಹಿಂತಿರುಗಿ ನೋಡಿದಾಗ ಅದು ಕೂಗಿ ಹೇಳಿದಂತಿತ್ತು..ಬದುಕಲ್ಲಿ ಒಮ್ಮೆ ಮುಂದೆ ಅಡಿಯಿಟ್ಟ ಮೇಲೆ ಏನಾದರೂ ಹಿಂತಿರುಗಿ ನೋಡಬೇಡ… ಏನೇ ಎದುರಾದರೂ ಕಂಗೆಡದೆ ಮುಂದೆ ಸಾಗು..ಬದುಕು..ಬದುಕಲ್ಲಿ ಎದುರಾಗುವ ಒಳಿತು ಕೆಡಕು ಜರಡಿ ಹಿಡಿದು ಒಳ್ಳೆಯದನ್ನು ನಿತ್ಯ ನಿಯತಕ್ಕೆ ಅಳವಡಿಸಿಕೊ.. ಕೆಡುಕಿನಿಂದ ಪಾಠ ಕಲಿ.. ಬದುಕ ಅನುಭವಿಸು..ಆಸ್ವಾದಿಸು.. ಏನಾದರೂ ಸಾಧಿಸು…

ಲತಾಪ್ರಸಾದ್

9 Responses

  1. ನಾಗರತ್ನ ಬಿ. ಅರ್. says:

    ದರ್ಪಣವನ್ನು ಮಾದ್ಯಮ ವಾಗಿಟ್ಟುಕೊಂಡು ತಮ್ಮ ಮನದಾಳದ ಅನಿಸಿಕೆ ಯನ್ನು ವ್ಯಕ್ತಪಡಿಸಿರುವ ಭಿತ್ತಿ ಚಿತ್ರ ಲೇಖನ ಚೆನ್ನಾಗಿದೆ ಮೇಡಂ.

  2. ನಯನ ಬಜಕೂಡ್ಲು says:

    ಸೊಗಸಾಗಿದೆ ಲೇಖನ

  3. ಮಹೇಶ್ವರಿ ಯು says:

    ಚೆನ್ನಾಗಿದೆ.

  4. Latha says:

    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

  5. . ಶಂಕರಿ ಶರ್ಮ says:

    ದರ್ಪಣದ ಮನದಾಳದ ಮಾತುಗಳನ್ನು ಪ್ರತಿಬಿಂಬಿಸಿದೆ ತಮ್ಮ ಸೊಗಸಾದ ಲೇಖನ…ಧನ್ಯವಾದಗಳು ಲತಾ ಮೇಡಂ.

  6. padmini says:

    ಮನದಾಳದ ಅನಿಸಿಕೆಯ ಚಿತ್ರ ಚೆನ್ನಾಗಿದೆ

  7. Padma Anand says:

    ನಮ್ಮ ಬೆನ್ನನ್ನು ನಾವು ನೋಡಿಕೊಳ್ಳಲಾಗದಿದ್ದರೂ ನಮ್ಮ ಮುಖವನ್ನಾದರೂ ನಮಗೆ ತೋರಿ ನಮ್ಮನ್ನು ನಾವು ತಿದ್ದಿ, ತೀಡಿಕೊಳ್ಳಲು ಅನುವು ಮಾಡಿಕೊಡುವ ದರ್ಪಣದ ಕುರಿತಾದ ಲೇಖನ ಮೆಚ್ಚುಗೆಯಾಯಿತು

Leave a Reply to ಮಹೇಶ್ವರಿ ಯು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: