ಅಂಚೆಯಣ್ಣನ ನೆನಪು
ಬಾಗಿಲಾಚೆ ಸೈಕಲ್ನ ಟ್ರಿನ್ ಟ್ರಿನ್
ಕಿವಿಗೆ ಬಿದ್ದೊಡನೆ ಓಡುವ ಹುರುಪು
ಮನೆಯ ಮುಂದೆ ನಿಂತರೆ ಅಂಚೆಯಣ್ಣ
ಹೇಳತೀರದು ಮನದ ಸಂಭ್ರಮವನ್ನ
ನವ ವಧುಗಳಿಗೆ ಬೇಕಾದ ತವರ ಚಿತ್ರ
ಅತ್ತೆಮನೆಯ ಸೊಸೆಯಿಂದಮ್ಮಗೆ ಪತ್ರ
ಒಡಹುಟ್ಟಿದರ, ಮಗನ ಕ್ಷೇಮ ಸಮಾಚಾರ
ನೆಂಟರಿಷ್ಟರ ಸುದ್ದಿ ಹಾಗೂ ಕರೆಯೋಲೆ
ತಿಂಗಳ ಪಿಂಚಣಿ ಮಾಸಾಶನಗಳ ಬಟವಾಡೆ
ಗೌರಿಯ ಸಮಯದಲಿ ಬಾಗಿನ ಉಡುಗೊರೆ
ಗಡಿಯಾಚೆಯ ಯೋಧನಿಗೆ ಮನೆಯ ನೆನಪು
ತಂದು ತಲುಪಿಸುತ್ತಿದ್ದ ಆತ್ಮೀಯ ಈ ಬಂಧು.
ಸಾವಿನ ಕಹಿಯ ಮಸಿಯಂಚಿನ ವಿಷಾದ
ತಂದರುಹಿ ಸಾಂತ್ವನಿಸಿ ಹೋಗುತ್ತಿದ್ದ ಸೋದರ
ಖುಷಿಯ ವಿಷಯಗಳನ್ನು ನಗುತ ಬಿತ್ತರಿಸಿ
ಸಂಭ್ರಮದಿ ಭಾಗಿಯಾಗುತ್ತಿದ್ದ ಅಂಚೆ ನೌಕರ
ಏರಿರಲಿ ತಗ್ಗಿರಲಿ ಶ್ರಮದ ಹಾದಿಯೇ ಇರಲಿ
ನಿಲಲಿಲ್ಲ ವ್ರತದಂತೆ ನಿಯಮದ ಆಚರಣೆಯಲಿ ಫಲಿತಾಂಶ,
ನೌಕರಿಯ ಕರೆಯೆಲ್ಲ ಟಪಾಲಲಿ
ಮುಖ್ಯ ಅವಿಭಾಜ್ಯ ಅಂಗವಾಗಿತ್ತು ಬದುಕಿನಲಿ
ಬರಿಯ ಉದರಂಭರಣದ ಕಾಯಕವಲ್ಲ
ಜನತೆಯ ಜೀವ ನಾಡಿಯ ಮಿಡಿತ ಬಲ್ಲ
ಇತಿಹಾಸಕ್ಕೆ ಸೇರುತ್ತಿದೆ ಗತ ಅಭ್ಯಾಸಗಳು
ಹೊಂದಿ ಬಾಳುವ ಸಹಕಾರದ ವಿಚಾರಗಳು
-ಸುಜಾತಾ ರವೀಶ್
ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಧನ್ಯವಾದಗಳು
ಸುಜಾತಾ ರವೀಶ್
Nice. ಇವತ್ತು ಪತ್ರಗಳು ಬರುವುದಂತೂ ನಿಂತೆ ಹೋಗಿದೆ.
ನಿಜ……ಪತ್ರವ್ಯವಹಾರ ಮರೆತೇ ಹೋಗಿದೆ
ಪ್ರತಿಕ್ರಿಯೆಗಾಗಿ ಧನ್ಯವಾದಗಳು ಮೇಡಮ್
ಸುಜಾತಾ ರವೀಶ್
ಹೌದು, ಅಂಚೆಯಣ್ಣ ತರುತ್ತಿದ್ದ ಸುದ್ದಿಗಳಿಗಾಗಿ ಎಷ್ಟು ಕಾತುರದಿಂದ ಕಾಯುತ್ತಿದ್ದ ದಿನಗಳನ್ನು ಮೆಲಕು ಹಾಕುವಂತೆ ಮಾಡಿದ ಕವಿತೆಗಾಗಿ ಅಭಿನಂದನೆಗಳು
ಆತ್ಮೀಯರ ಪತ್ರಗಳಿಗೆ ಕಾಯುತ್ತಿದ್ದ ದಿನಗಳ ನೆನಪು ಮಾತ್ರವೀಗ