ಪ್ರವಾಸ

ಮಣಿಪಾಲದ ಮಧುರ ನೆನಪುಗಳು..ಭಾಗ 7

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)

ಭಟ್ಕಳ ನವಾಯತ್ ಮುಸ್ಲಿಂ ಮನೆ  

ಬೃಹದಾಕಾರದ ಕೋಣಿ ಕಾರಂತರ ಮನೆಯ ವೈಭವವನ್ನು ಮನತುಂಬಿಕೊಂಡು ಹೊರಗಡಿ ಇಟ್ಟರೆ ಅದರ ಪಕ್ಕದಲ್ಲಿದೆ..ಭಟ್ಕಳ ನವಾಯತ್ ಮುಸ್ಲಿಂ ಮನೆ.

ಸುಮಾರು 170ವರ್ಷಗಳಷ್ಟು ಹಳೆಯದಾದ, ಉತ್ತರಕನ್ನಡ ಜಿಲ್ಲೆಯ ಭಟ್ಕಳದ ನವಾಯತ ಕೇರಿಯಲ್ಲಿ ಕಟ್ಟಲ್ಪಟ್ಟಿದ್ದ ಮುಸ್ಲಿಮರ ಮನೆಯನ್ನು ಹೆರಿಟೇಜ್ ವಿಲೇಜ್ ಗೆ ತಂದು ಮರುನಿರ್ಮಿಸಲಾಗಿದೆ. ಇದು ಎಷ್ಟು ಚೆನ್ನಾಗಿದೆಯೆಂದರೆ, ಒಳಗಡೆಗೆ ನಿಜವಾಗಿಯೂ ಜನರು  ವಾಸವಿರುವರೇನೋ ಎಂದೆನಿಸುತ್ತದೆ. ತುಂಬಾ ಸುವ್ಯವಸ್ಥಿತ ರೂಪದಲ್ಲಿರುವ ಈ ಕಟ್ಟಡದೊಳಗಡೆ ಹೋಗುತ್ತಿದ್ದಂತೆಯೇ, ಇದೊಂದು ಮುಸ್ಲಿಂ ಸಂಸ್ಕೃತಿಯ ಮನೆಯೆಂದು ಮೊದಲ ನೋಟಕ್ಕೇ ತಿಳಿದುಬಿಡುತ್ತದೆ. ಬೀದಿಗೆ ಮುಖವಿದ್ದರೂ ಅಗಲ ಕಿರಿದಾಗಿರುವ ಒಳಮನೆ, ಸಣ್ಣ ರಂಧ್ರಗಳಿರುವ ಎದುರು ಭಾಗದ ಕಿಟಿಕಿ, ಕಿಟಿಕಿಗಳೇ ಇಲ್ಲದ ಒಳಮನೆ ಕೋಣೆಗಳ ಗೋಡೆಗಳು, ಮೆಕ್ಕಾದ ವಾಸ್ತುಕಲೆಯನ್ನು ನೆನಪಿಸುವ ದಾರಂದ, ಬಾಗಿಲುಗಳು, ಬಣ್ಣ ಬಣ್ಣದ ಗಾಜುಗಳಿಂದ  ಮುಚ್ಚಿದ ಬಾಲ್ಕನಿ, ಕಿಟಿಕಿಯ ಸುತ್ತಲೂ ಇರುವ ನೀಲಿ ಬಣ್ಣದ ಹೂ ಚಿತ್ರ..ಇವೆಲ್ಲವೂ ಒಂದು ನಿರ್ದಿಷ್ಟ ಮುಸ್ಲಿಂ ಸಮುದಾಯಕ್ಕೆ ಸೇರಿದ ಗುರುತುಗಳಾಗಿ ಗೋಚರಿಸುತ್ತವೆ. ಒಳಗಡೆಗೆ ಕಾಲಿಡುತ್ತಿದ್ದಂತೆಯೇ, ಮನೆಯೊಳಗಿನಿಂದ ಸೊಗಸಾದ ಮುಸ್ಲಿಂ ಶೈಲಿಯ ಸಂಗೀತವು ಕೇಳುಗರನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದರೆ, ನವಿರಾದ  ಅತ್ತರಿನ ಪರಿಮಳ ಮನಸ್ಸನ್ನುಉಲ್ಲಾಸಗೊಳಿಸುತ್ತದೆ. ಮುಂಭಾಗದ ಮೊದಲಿನ  ಕೋಣೆಯಲ್ಲಿ ಮೆತ್ತನೆಯ ಸೊಗಸಾದ ಸೋಫಾ, ನಮ್ಮನ್ನು ಅದರಲ್ಲಿ ಕುಳಿತುಕೊಂಡು ವಿಶ್ರಮಿಸಲು ಪ್ರೇರೇಪಿಸುತ್ತದೆ. ಮಧ್ಯದ ಕೋಣೆಯ ಒಂದು ಪಕ್ಕದಲ್ಲಿ ಚಂದದ ಮಂಚ ಮತ್ತು ಹಾಸಿಗೆಯು ಗಮನಸೆಳೆಯುತ್ತದೆ. ಇನ್ನೊಂದು ಪಕ್ಕದಲ್ಲಿ ಅಷ್ಟೇ ಸುಂದರವಾದ ಊಟದ ಮೇಜು ಕುರ್ಚಿಗಳಿವೆ… ಪಿಂಗಾಣಿಯ ತಟ್ಟೆ, ಲೋಟಗಳೊಂದಿಗೆ. ಕೊನೆಯ ಕೋಣೆಯಲ್ಲಿ ಹಿಂದಿನ ಕಾಲದ, ವಿವಿಧ ರೀತಿಯ, ವಿಶೇಷ ತರದ ಅಡಿಗೆಯ ಪಾತ್ರೆ ಪಗಡಿಗಳು, ಸೌಟು ಇತ್ಯಾದಿಗಳನ್ನು ಚೊಕ್ಕವಾಗಿ ಜೋಡಿಸಿಡಲಾಗಿದೆ.

ನಡುಕೋಣೆಯಿಂದ ಉಪ್ಪರಿಗೆಯ ಮೇಲೇರಲು ಸೊಗಸಾದ ಮರದ ಮೆಟ್ಟಿಲುಗಳು.. ಏರುವಾಗ ಆಧಾರಕ್ಕಾಗಿ ಹಿಡಿದುಕೊಳ್ಳಲು ಗಟ್ಟಿ ಮುಟ್ಟಾಗ ಹಗ್ಗ ನೇತಾಡುತ್ತಿದೆ.  ಅದನ್ನು ಹಿಡಿದು ಮೇಲೇರಿ ಹೋದರೆ ವಿಶಾಲವಾದ ಚಂದದ ಹಜಾರ ನಮ್ಮನ್ನು ಸ್ವಾಗತಿಸಿತು. ಎಡಗಡೆ ಗೋಡೆಯ ಪಕ್ಕದ ದೊಡ್ಡದಾದ ಗಾಜಿನ ಕಪಾಟುಗಳಲ್ಲಿ ಬಹಳ ವೈವಿಧ್ಯಮಯ ವಿನ್ಯಾಸಗಳ, ಬಣ್ಣಗಳ ನೂರಾರು ಪಿಂಗಾಣಿ ತಟ್ಟೆಗಳು ಅಚ್ಚುಕಟ್ಟಾಗಿ ಜೋಡಿಸಿ ಇಡಲ್ಪಟ್ಟಿವೆ. ಆಹಾ..ಅವುಗಳ ಮೇಲೆ ಬಿಡಿಸಲ್ಪಟ್ಟಿರುವ ಬಹಳ ನಾಜೂಕಾದ, ವಿವಿಧ ನಮೂನೆಯ ಚಿತ್ರಗಳಂತೂ ಅದ್ಬುತ! ದೇಶ ವಿದೇಶಗಳ ಪಿಂಗಾಣಿ ತಟ್ಟೆಗಳ ಸಂಗ್ರಹವು ನಮ್ಮನ್ನು ಅಲ್ಲಿಂದ  ಕದಲದಂತೆ ಮಾಡಿಬಿಡುತ್ತದೆ. ಬಲಗೋಡೆಯ ಪಕ್ಕದಲ್ಲಿರುವ ಇನ್ನೊಂದು ಅಷ್ಟೇ ದೊಡ್ಡದಾದ ಗಾಜಿನ ಕಪಾಟುಗಳಲ್ಲಿ ನೂರಾರು  ಅತ್ತರಿನ ಖಾಲಿ  ಬಾಟಲಿಗಳನ್ನು ನೋಡುವಾಗ ದಂಗಾಗಿಬಿಟ್ಟೆವು. ದೇಶ ವಿದೇಶಗಳಿಂದ ಅತ್ತರನ್ನು ಖರೀದಿಸಿ ತಂದ ವಿವಿಧ ಗಾತ್ರ, ವಿನ್ಯಾಸಗಳ ಈ ಬಾಟಲಿಗಳು, ಬಾಟಲಿ ಪ್ರಿಯೆಯಾದ ನನಗೆ ಬಹಳ ಇಷ್ಟವಾಯಿತು. ಇವೆಲ್ಲವನ್ನು ಅದರ ಮೂಲ ಮನೆಯಿಂದಲೇ ತಂದು ಸಂಗ್ರಹಿಸಿ ಜೋಪಾನವಾಗಿ ಜೋಡಿಸಿರುವುದನ್ನು ಕಂಡಾಗ ವಿಸ್ಮಯ ಮೂಡುವುದು ಸುಳ್ಳಲ್ಲ. ಉಪ್ಪರಿಗೆಯಿಂದ ಇನ್ನೊಂದು ಮೆಟ್ಟಲಲ್ಲಿ ಕೆಳಗಿಳಿದು  ಬಂದರೆ ಅದೇ ಆಗಿತ್ತು ಅಡುಗೆ ಕೋಣೆ.. ಎಲ್ಲವನ್ನೂ ವೀಕ್ಷಿಸಿ ಅಲ್ಲಿಂದ ಹೊರ ಬಂದಾಗ ಎದುರುಗಡೆಗೇ  ಇದೆ.. ..ಏನದು..??

ಮುಂದುವರಿಯುವುದು…..

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=33629

-ಶಂಕರಿ ಶರ್ಮ, ಪುತ್ತೂರು.

8 Comments on “ಮಣಿಪಾಲದ ಮಧುರ ನೆನಪುಗಳು..ಭಾಗ 7

    1. ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

  1. ಮಣಿಪಾಲದ ನೆನಪುಗಳ ಮಾಲಿಕೆ ಕೂತೂಹಲದಿಂದ ಓದಿಸಿಕೊಂಡು ಹೋಗುತ್ತಿದೆ. ಧನ್ಯವಾದಗಳು ಮೇಡಂ.

    1. ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ ಅವರಿಗೆ.

    1. ಮೆಚ್ಚುಗೆಯ ನುಡಿಗೆ ಧನ್ಯವಾದಗಳು..ಸುಧಾ ಮೇಡಂ

  2. ಚಂದದ ಲೇಖನದ ಕೊನೆಯಲ್ಲಿ ಕುತೂಹಲ ಗರಿ ಗೆದರುವಂತೆ ಮಾಡಿ ನಿಲ್ಲಿಸಿ ಬಿಟ್ಟಿರಲ್ಲಾ? ಕಾಯುವಂತಾಗಿದೆ.

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *