ಬೊಗಸೆಬಿಂಬ

ಕೆಟ್ಟ ಚಾಳಿಯಿಂದ ಒಂದು ಒಳ್ಳೆಯ ಕಾರ್ಯ

Share Button

ಎಪ್ಪತ್ತೊಂಬತ್ತರ ಕೊನೆಯ ದಿನಗಳು ಅವು. ಪಿಯುಸಿ ಯಲ್ಲಿ ನಪಾಸಾಗಿ ಊರಿಗೆ ಹೋಗಿ ಬಡತನದ ಬವಣೆಯಲ್ಲಿ ಬೇಯುತ್ತಿರುವ ಅಮ್ಮನಿಗೆ ಮತ್ತಷ್ಟು ಭಾರವಾಗಲು ಇಷ್ಟವಾಗದೆ ಬಲು ಕಷ್ಟ ಜೀವನವನ್ನ ಮೈಸೂರಿನಲ್ಲಿಯೇ ಸವೆಸುತ್ತಿದ್ದೆ. ಅದೊಂದು ಏಳೆಂಟು ಸಣ್ಣಪುಟ್ಟ ಕುಟುಂಬಗಳು ಬದುಕು ಹಾಕುತ್ತಿದ್ದ ವಠಾರ, ಮಲಗಲಿಕ್ಕೊಂದು ಸಣ್ಣ ಜಾಗ ಹೇಗೋ ಸಿಗುತ್ತಿತ್ತು. ಬಡತನದ ಬವಣೆ ನೀಗಲು ವಠಾರದಲ್ಲಿನ ವನಿತೆಯರು ಮಾಡುತ್ತಿದ್ದ ಪೇಪರ್ ಕವರ್ ಗಳ ಗಂಟನ್ನು ಹೆಗಲ ಮೇಲೆ ಹೊತ್ತು ಸಂತೇಪೇಟೆ, ಮಾರ್ಕೆಟ್ನನಲ್ಲಿ ಅಲೆದು ಮಾರಾಟ ಮಾಡಿದರೆ ಐದಾರು ರೂಪಾಯಿ ಸಂಪಾದನೆಯಾಗುತ್ತಿತ್ತು. ಕೆಲವೊಮ್ಮೆ ಹತ್ತು ರೂಪಾಯಿಗಳವರೆಗೂ ಆಗುತ್ತಿದ್ದದ್ದುಂಟು.ಹೇಗೋ ಕಾಲ ಓಡತ್ತಿತ್ತು, ಆದರೆ ಎಂದೂ ಅಮ್ಮನಿಗೆ  ಸಹಾಯ ಮಾಡುವ ನನ್ನ ಆಸೆಗೆ ನಿಲುಕುತ್ತಿರಲಿಲ್ಲ ಆ ಸಂಪಾದನೆ.

ನಾನಿರುತ್ತಿದ್ದ ಆ ವಠಾರದಲ್ಲಿ ಶನಿವಾರ , ಭಾನುವಾರ , ಹಬ್ಬದ ರಜಾದಿನಗಳಲ್ಲಿ ಇಸ್ಪೀಟ್ ಆಡುವ ಗುಂಪೊಂದಿತ್ತು , ಹೊರಗಿನ ಕೆಲವರು ಬಂದು ಸೇರುತ್ತಿದ್ದರು. ನೋಡಲು ಅಡ್ಡಿಯೇನಿಲ್ಲದಿದ್ದರಿಂದ ನಾನು ನೋಡುಗನಾಗಿರುತ್ತಿದ್ದೆ. ಕೆಲದಿನಗಳು ಕಳೆದಂತೆ ನಾನೂ ಹೊರಗಿನಿಂದ ಒಂದೆರಡು ರೂಪಾಯಿ ದಾಯ ಹಾಕಿ ಕಳೆದುಕೊಂಡು ಬಹಳ ನೊಂದದ್ದೂ ಉಂಟು. ಮತ್ತೊಂದಷ್ಟು ದಿನ ಬರೇ ನೋಡುಗನಾಗಿರುತ್ತಿದ್ದೆ. ಹೀಗಿರುವಾಗ ಒಂದುದಿನ ಅದೃಷ್ಟ ಒಲಿದು ನಾನು ಹಾಕಿದ ಎರಡು ರೂಪಾಯಿ ದಾಯ , ನಾಲ್ಕು , ಎಂಟು, ಹತ್ತು ಹೀಗೆ ಕೊನೆಯಲ್ಲಿ ನಲವತ್ತು ರೂಪಾಯಿ ಆಗಿ ಹೋಯಿತು. ಭಯ, ಸಂತೋಷ ಎಲ್ಲಾ ಅನುಭವ ಒಟ್ಟಿಗೇ ಆಯಿತು. ಏನು ಮಾಡಬೇಕು ಈ ಹಣವನ್ನು ಎಂದು ಯೋಚಿಸುವುದೇನಿರಲಿಲ್ಲ, ಮಾರನೆಯ ದಿನ ಪೋಸ್ಟ್ ಆಫೀಸಿಗೆ ಹೋಗಿ ಅಮ್ಮನಿಗೆ ಮನಿ ಆರ್ಡರ್ ಮಾಡಿಬಿಟ್ಟೆ.

                         ******* *******

ನಾಳೆ ಕಳೆದು ನಾಡಿದ್ದು ಬಂದರೆ ಮಾವನವರ ವೈದಿಕ ಶ್ರಾದ್ಧ, ಕೈಯಲ್ಲಿ ಒಂದು ಬಿಡಿಗಾಸಿಲ್ಲ, ಹೇಗೋ ಆಗತ್ತದೆಂದು ಪುರೋಹಿತರಿಗೆ , ಮತ್ತಿಬ್ಬರಿಗೆ ಹೇಳಿಯಾಗಿದೆ. ಎಂದೂ ಹೀಗಾಗಿರಲಿಲ್ಲ, ಹೇಗೋ ಒಂದು ಐದು ರೂಪಾಯಿಯಾದರೂ ಹೊಂದಾಣಿಕೆಯಾಗುತ್ತಿತ್ತು, ಕಷ್ಟ ಎಂದರೆ ಸಹಾಯ ಹಸ್ತ ನೀಡುತ್ತಿದ್ದವರೂ ಈ ಬಾರಿ ಅಸಹಾಯಕರಾಗಿದ್ದರು, ಇದ್ದ ಒಂದೆರಡು ಲೋಟಗಳನ್ನೂ ಅಡವಿಟ್ಟಿದ್ದಾಗಿತ್ತು, ಏನೂ ಮಾಡಲು ತೋಚದೆ ಕಂಗಾಲಾಗಿದ್ದಳು ಲಕ್ಷ್ಮೀದೇವಿ. ರಾತ್ರಿ ಇಡೀ ಯೋಚಿಸಿದರೂ ಯಾವ ದಾರಿಯೂ ತೋಚಲಿಲ್ಲ. ಬೆಳಿಗ್ಗೆ ಎದ್ದು ಮತ್ತೊಂದೆರಡು ಕಡೆ ಸಾಲಕ್ಕೆ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ, ಗಂಡನಿಗೆ ಬರುತ್ತಿದ್ದ ಅರವತ್ತು ರೂಪಾಯಿ ಪಿಂಚಣಿ ದುಡ್ಡಲ್ಲಿ ನಿತ್ಯ ಸಂಸಾರ, ಹಬ್ಬ ಹರಿದಿನ ಎಲ್ಲವನ್ನೂ ಸಂಭಾಳಿಸಬೇಕಿತ್ತು, ಅಸಾಹಯಕಳಾಗಿ ತಲೆಯ ಮೇಲೆ ಕೈಹಾಕಿ ದೇವರ ಮೇಲೆ ಭಾರ ಹಾಕಿ ಕುಳಿತು ಬಿಟ್ಟಳು ಲಕ್ಷ್ಮೀದೇವಿ.

ಸರಿಸುಮಾರು ಸಮಯ ಬೆಳಿಗ್ಗೆ 10.30 ಇರಬಹುದು, ಪರಿಚಯದ ಧನಿಯೊಂದು ‘ಲಕ್ಷ್ಮೀದೇವಮ್ಮ’ ಎಂದು ಹೊರಗಿನಿಂದ ಕೂಗಿತ್ತು, ಯಾರೂ ಎಂದು ಹೊರಗೆ ಬಂದು ನೋಡಲಾಗಿ ಎದುರು ನಿಂತಿದ್ದ ಪೋಸ್ಟ್ ಮ್ಯಾನ್, ನಿಮಗೆ ಮನಿ ಆರ್ಡರ್ ಬಂದಿದೆ ಎಂದ, ನಂಬಲಾಗದ ಲಕ್ಷ್ಮೀದೇವಿ ನನಗೆ ಯಾವ ಮನಿ ಆರ್ಡರ್ ಬರುತ್ತೆ ಹಾಸ್ಯಮಾಡಬೇಡಪ್ಪ ಎಂದಳು. ನಿಮಗೇ , ನೋಡಿ ಮೈಸೂರಿನಿಂದ ಮೂವತ್ತೈದು ರೂಪಾಯಿ ಮನಿ ಆರ್ಡರ್ ಬಂದಿದೆ ಎಂದವನೇ ಬ್ಯಾಗಿನಿಂದ ಹಣ ತೆಗೆದು ಎಣಿಸಿ ಲಕ್ಷ್ಮೀದೆವಿಯ ಕೈಲಿತ್ತು ಸಹಿ ಪಡೆದು ಹೊರಟು ಹೋದ. ಹಿಂದೆ ಚೀಟಿಯಲ್ಲಿ ಮಗ ಬರೆದಿದ್ದ ಒಕ್ಕಣೆಯನ್ನು ಓದಿ ಲಕ್ಷ್ಮೀದೇವಿಯ ಕಣ್ಣು ಒದ್ದೆಯಾಗಿತ್ತು. ನಂಬಲು ಸಾಧ್ಯವಾಗಲಿಲ್ಲ, ಐದು ರೂಪಾಯಿ ಸಿಕ್ಕರೆ ಸಾಕೆಂದಿದ್ದವಳ ಕೈಯಲ್ಲಿ ಮೂವತ್ತೈದು ರೂಪಾಯಿ, ಲಕ್ಷ್ಮೀದೇವಿಯ ಸಂತಸಕ್ಕೆ ಪಾರವೇ ಇಲ್ಲ. ಬೇಕಾದ ಸಾಮಾನು , ಹಾಲು , ಮೊಸರು, ತರಕಾರಿ ಎಲ್ಲವನ್ನೂ ವಾರಕ್ಕಾಗುವಷ್ಟು ತಂದು ಮಾರನೆ ದಿನದ ಕಾರ್ಯವನ್ನು ಅಚ್ಚುಕಟ್ಟಾಗಿ ಮುಗಿಸಿದ್ದಳು ಲಕ್ಷ್ಮೀದೇವಿ.

(ಇದು  ಅಕ್ಷರಶಃ ನಿಜವಾಗಿಯೂ 1979ರಲ್ಲಿ ನಡೆದ ವಿಷಯ . ಆನಂತರ 1982ರಲ್ಲಿ ಅಮ್ಮ ಮೈಸೂರಿಗೇ ಬಂದು ನಮ್ಮೆಲ್ಲರೊಡನಿದ್ದು ಸುಖವಾದ ತುಂಬು ಜೀವನ ನಡೆಸಿ ಹೋದಳು,  ಅವಳು ತನ್ನ ಜೀವಿತಾವಧಿಯಲ್ಲಿ ಬಹಳ ಸಲ ನನ್ನ ಬಳಿ ಇದರ ಬಗ್ಗೆ ಪ್ರಸ್ತಾಪಿಸುತ್ತಿದ್ದಳು)

ನಟೇಶ, ಮೈಸೂರು

8 Comments on “ಕೆಟ್ಟ ಚಾಳಿಯಿಂದ ಒಂದು ಒಳ್ಳೆಯ ಕಾರ್ಯ

  1. ಅನುಭವದ ಮೂಸೆಯಲ್ಲಿ ಅದ್ದಿ ಉಣಬಡಿಸಿರುವ ನಿಮ್ಮ ಲೇಖನ ನಿಜಕ್ಕೂ ಹೃದಯಸ್ಪರ್ಶ ಮಾಡಿದೆ ಸಾರ್

  2. ಮನಸ್ಸಿನಲ್ಲಿ ಒಳ್ಳೆಯ ಭಾವವಿದ್ದರೆ ಒಳಿತು ಮಾಡುವ ಆಶಯವಿದ್ದರೆ ಒಳಿತೇ ಆಗುತ್ತದೆ ಎನ್ನುವುದಕ್ಕೆ ನಿದರ್ಶನ ನಿಮ್ಮ ಈ ಅನುಭವದ ಘಟನೆ. ತುಂಬಾ ಚಂದದ ನಿರೂಪಣೆ .

    ಸುಜಾತಾ ರವೀಶ್

  3. ಎಳೆಯ ವಯಸ್ಸಿನಲ್ಲಿಯೇ ಉತ್ತಮ ಜೀವನಮೌಲ್ಯಗಳನ್ನು ಹೊಂದಿದ್ದ ಆ ‘ಬಾಲಕ’ನ ಆದರ್ಶಕ್ಕೆ ಶರಣು. ಚೆಂದದ ಬರಹ.

  4. ನೈಜ ಘಟನೆಗಳು ಕೆಲವೊಮ್ಮೆ ಕಥೆಗಳಿಗಿಂತ ಹೆಚ್ಚು ಮನಕ್ಕೆ ತಟ್ಟುತ್ತವೆ. ಜೀವನದ ಅಮೂಲ್ಯ ಕ್ಷಣಗಳನ್ನು ಹಂಚಿಕೊಡಿರುವಿರಿ..ಧನ್ಯವಾದಗಳು.

  5. ಹೃದಯಸ್ಪರ್ಶೀ ಘಟನೆಯ ಸೊಗಸಾದ ಲೇಖನ. ಕೆಲವೊಮ್ಮೆ ವಾಸ್ತವ, ಕಲ್ಪನೆಗಿಂತಲೂ ಕೌತುಕಮಯವಾಗಿರುತ್ತದೆ ಎಂಬುದಕ್ಕೆ ಮೇಲಿನ ಘಟನೆಯೇ ಸಾಕ್ಷಿ.

Leave a Reply to Hema, hemamalab@gmail.com Cancel reply

 Click this button or press Ctrl+G to toggle between Kannada and English

Your email address will not be published. Required fields are marked *