ಬೊಗಸೆಬಿಂಬ

ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ?

Share Button

ನಮಗೇ ತಿಳಿದಂತೆ ಭಾರತೀಯ ಸಂಸ್ಕೃತಿ ಪುರಾತನವಾದುದು ಶ್ರೇಷ್ಠವಾದುದು.  ಸನಾತನ ವೈದಿಕ ಆಚರಣೆಗಳು ಸಂಪ್ರದಾಯಗಳು ಶತಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದದ್ದು ಹೇಗೆ ಎಂದು ಯೋಚಿಸಿದಾಗ ನಮಗೆ ಮುಖ್ಯವಾಗಿ ಕಂಡುಬರುವುದು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದ ಅಭ್ಯಾಸಗಳು ಕಾಗದ ಅಥವಾ ಇನ್ಯಾವುದೇ ರೀತಿಯಲ್ಲಿ ಸಂಗ್ರಹ ಮಾಡಲಾಗದಿದ್ದಾಗ ಮೌಖಿಕವಾಗಿಯೇ ಎಲ್ಲವೂ ಅಂದಿನಿಂದ ಇಂದಿಗೆ ರೂಢಿಗತವಾಗಿ ಬಂದಿರುವುದು ವೇದ್ಯವಾಗುತ್ತದೆ. ನಮ್ಮ ಸನಾತನತೆಯನ್ನು ಆಚರಿಸುತ್ತಾ ಮಕ್ಕಳಿಗೆ ದಾಟಿಸುವುದು ಎಷ್ಟು ಮಹತ್ವಪೂರ್ಣ ಮಹತ್ತರ ಕಾರ್ಯವೆಂದು ಅರಿವಾಗುತ್ತದೆ. ಎಲ್ಲವನ್ನೂ ಓದಿ ಅಥವಾ ತಿಳಿದು ಮಾಡುವುದಕ್ಕೆ ಸಾಧ್ಯವಿಲ್ಲ. ನೋಡಿ ಆಚರಿಸುವುದು ಅತ್ಯಂತ ಮುಖ್ಯ. ಈ ದಿಶೆಯಲ್ಲಿ ನಮ್ಮ ನಾರಿಮಣಿಗಳ ಸಹಯೋಗ ಕಾಣಿಕೆಯೂ ಕಡಿಮೆಯದ್ದಲ್ಲ. “ಮನೆಯೇ ಮೊದಲ ಪಾಠಶಾಲೆ ” “ತಾಯಿಯೇ ಮೊದಲ ದೇವರು” ಎನ್ನುವ ಹಾಗೆ ಎಂಟು ವರ್ಷದಲ್ಲಿ ಕಲಿತದ್ದು ಎಂಬತ್ತರ ತನಕ ಅಲ್ಲವೇ?  ಒಂದು ಹಬ್ಬ ಹರಿದಿನದ ಆಚರಣೆಯಾಗಲಿ ದಿನನಿತ್ಯದ ಕೆಲ ಸಂಪ್ರದಾಯಗಳ ತಿಳಿವಳಿಕೆಯಾಗಲಿ ಕಡೆಗೆ ಆಯಾ ಪಂಗಡಗಳಿಗೆ ವಿಶೇಷ ಎನಿಸಿದ ರೀತಿಯ ಉಡುಗೆ ತೊಡಿಗೆ ಅಡಿಗೆಗಳ ತಯಾರಿಕೆಗಾಗಲೀ ತಲೆಮಾರಿನಿಂದ ತಲೆಮಾರಿಗೆ ಕಲಿಸಿಕೊಟ್ಟಿದ್ದೇ ಅಲ್ಲವೇ?

ನಾವು ಚಿಕ್ಕವರಿದ್ದಾಗ ಸಂಜೆಯ ಹೊತ್ತು ಶ್ಲೋಕ ಸಂವತ್ಸರ ತಿಥಿ ವಾರ ನಕ್ಷತ್ರಗಳ ಬಾಯಿಪಾಠ ಬಾಯಿಲೆಕ್ಕ  ಎಲ್ಲವನ್ನೂ ಹೇಳಿಸುತ್ತಿದ್ದರು. ಆಗ ಕಲಿತದ್ದು ಈಗಲೂ ಬಾಯಲ್ಲಿದೆ. ಇವೆಲ್ಲ ವಿಶೇಷ ಶ್ರಮವಿರದೆ ತಲೆಯೊಳಗೆ ಹೋಗುವ ವಿಚಾರಗಳು.  ಹಾಗೆಯೇ ಹಬ್ಬ ವಿಶೇಷ ದಿನಗಳಲ್ಲಿ ಏನು ಮಾಡುತ್ತಾರೆ ಇದೆಲ್ಲದರ ಬಗ್ಗೆಯೂ ನೋಡಿಯೇ ಕಲಿತಿರುವುದು . ಮನೆಯಲ್ಲಿ ಅಜ್ಜಿ ತಾತರಂತಹ ಹಿರಿಯರು ಇರುತ್ತಿದ್ದರು.  ಅವರಿಂದ ಪುರಾಣ ಪುಣ್ಯ ಕಥೆಗಳನ್ನು ಕೇಳಿ ಎಷ್ಟೋ ಪ್ರಸಂಗಗಳು ನೆನಪಿನ ಬುತ್ತಿಯಲ್ಲಿ ಉಳಿದಿವೆ. ಎಷ್ಟೇ ಓದಿದರೂ ಕೇಳಿದಾಗ ಮನದ ಭಿತ್ತಿಯಲ್ಲಿ ಕೆತ್ತಿ ಹೋಗಿರುವುದು ಇಲ್ಲಿ ಗಮನಿಸಲೇಬೇಕಾದ ಸಂಗತಿ. ಆದರೆ ಅಷ್ಟು ವರ್ಷಗಳಿಂದ ನಡೆದು ಬಂದ ಕೆಲವೊಂದು ಸಂಗತಿಗಳು ಮೂಲ ಅರ್ಥ ಕಳೆದು ಮೂಢನಂಬಿಕೆಗಳಾಗಿದ್ದರೂ ಆಗಿರಬಹುದು. ಕಾಲಧರ್ಮಕ್ಕನುಗುಣವಾಗಿ ಅನುಕೂಲ ಸಿಂಧುಗಳೂ ಆಗಿರಬಹುದು. ಆ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಅದಕ್ಕೆ ಕಾಳಿದಾಸ ಹೇಳಿರುವುದು “ಪುರಾಣಮಿತ್ಯೇವ ನ  ಸಾಧು ಸರ್ವಂ” ಎಂದು. ಅಂದರೆ ಹಳೆಯದು ಅಂದ ತಕ್ಷಣ ಎಲ್ಲವೂ ಒಳ್ಳೆಯದೇ ಆಗಿರಬೇಕು ಎಂದಲ್ಲ . ಮೌಲಿಕವಾದ ವಿಶಿಷ್ಟವಾದ ಪದ್ಧತಿಗಳನ್ನು ಬಿಡದೆ ಅನೂಚಾನವಾಗಿ ಪಾಲಿಸಿರುವುದು ಇತಿಹಾಸ ತೋರುವ ಸತ್ಯ .

ಆದರೆ ಇತ್ತೀಚಿನ ಒಂದು ಶತಮಾನದಿಂದ ಆಚೆಗೆ ಅನುಕರಣೆ ಅನುಸರಿಸುವಿಕೆ ಕಡಿಮೆಯಾಗುತ್ತಿದ್ದು ಉಪೇಕ್ಷೆ ಟೀಕೆ ಮಾಡುವುದೇ ಫ್ಯಾಷನ್ ಆಧುನಿಕತೆ ಎಂದಾಗುತ್ತಿರುವುದು ಸಂಸ್ಕೃತಿಯು ಮರೆಯಾಗುವ ಕಾಲಘಟ್ಟದಲ್ಲಿ ನಿಂತಂತಾಗಿದೆ.  ವಿದ್ಯೆ ಶಿಕ್ಷಣ ಎಂದರೆ ಸಂಪ್ರದಾಯದ ಅವಹೇಳನ ಎನ್ನುವಂತಾಗಿರುವುದು ವಿಪರ್ಯಾಸ . ಈ ದಿಶೆಯಲ್ಲಿ ಮಹಿಳೆಯರ ನಡವಳಿಕೆಯೂ ಇದೆ. ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಸುಲಭಕ್ಕೆ ಜೋತು ಬೀಳುವ ಐಷಾರಾಮ ಬಯಸುವ ಮನಸ್ಸುಗಳು ಪಾಲಿಸಲು ಕಷ್ಟವಾದದ್ದನ್ನೆಲ್ಲಾ   ಬಿಡುತ್ತಾ ಹೋಗುತ್ತಿರುವುದು ಒಂದು ಕಾರಣ . ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಭವ್ಯ ಪರಂಪರೆ ಎನ್ನುವುದು ಬರೀ ಪುಸ್ತಕದ ಸಾಲುಗಳಲ್ಲಿ ಉಳಿಯಬಹುದು.

ಮಕ್ಕಳು ನೋಡಿ ಕಲಿಯುತ್ತಾರೆ.  ಹಾಗಾಗಿ ನಾವು ಹೇಗಿರುತ್ತೇವೆ ನಮ್ಮ ಮಕ್ಕಳು ಹಾಗೆ ಬೆಳೆಯುತ್ತಾರೆ . ನಾವು ಇಷ್ಟಪಟ್ಟು ಸಂಪ್ರದಾಯ ಪದ್ಧತಿಗಳನ್ನು ಪಾಲಿಸುತ್ತಾ ಮಕ್ಕಳಿಗೂ ಅದರ ಬಗ್ಗೆ ಅರಿವು ಮೂಡಿಸಬೇಕು.  ಯಾವುದೇ ದೇಶ ಸಂಪದ್ಭರಿತವಾಗುವುದು ಐಶ್ವರ್ಯ ಇನ್ನಿತರ ಸಂಪನ್ಮೂಲಗಳಿಂದ ಅಲ್ಲ . ದೇಶದ ಸಂಸ್ಕೃತಿಯ ಅನಾವರಣ ಆಚರಣೆಯಿಂದ. ಅಂತಹ ವೈಭವವನ್ನು ಉಳಿಸಿ ಬೆಳೆಸಿಕೊಳ್ಳುವುದು ದೇಶದ ಪ್ರಜೆಗಳಾದ ನಾವು ಅಮ್ಮಂದಿರದು ತಾನೆ ? ಬನ್ನಿ ಅದಕ್ಕಾಗಿ ಶ್ರಮಿಸೋಣ .

ಸುಜಾತಾ ರವೀಶ್

11 Comments on “ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ?

  1. ಬಾಲ್ಯದ ದಿನಚರಿಯನ್ನು ನೆನಪಿಸಿದ ಸುಂದರ ಲೇಖನ, ಉತ್ತಮ ಸಂದೇಶವೂ ಇದೆ.

    1. ಧನ್ಯವಾದಗಳು ನಿಮ್ಮ ಅಮೂಲ್ಯ ಪ್ರತಿಕ್ರಿಯೆಗಾಗಿ.
      ನಯನ ಮೇಡಂ.

      ಸುಜಾತಾ ರವೀಶ್

  2. ಸ್ವಲ್ಪ ನಿಧಾನವಾಗಿ ಓದಿ ಚಿಂತನೆಗೆ ಹೆಚ್ಚುವಂತೆ ಮಾಡುತ್ತದೆ ನಿಮ್ಮ ಲೇಖನ ಅಭಿನಂದನೆಗಳು ಮೇಡಂ.

    1. ತಮ್ಮ ಸವಿ ಸ್ಪಂದನೆಯ ಪ್ರತಿಕ್ರಿಯೆಗಾಗಿ ಆಭಾರಿ ಧನ್ಯವಾದಗಳು ಮೇಡಮ್ .

      ಸುಜಾತಾ ರವೀಶ್

  3. ನನ್ನ ಬರಹವನ್ನು ಸುರಹೊನ್ನೆ ಯಲ್ಲಿ ಪ್ರಕಟಿಸಿದ ಸಂಪಾದ ಕಿಯವರಿಗೆ ಹ್ರತ್ಪೂರ್ವಕ ವಂದನೆಗಳು ಮತ್ತು ಧನ್ಯವಾದಗಳು

  4. ಬಾಲ್ಯದಲ್ಲಿ ಕಲಿತುದು, ನೋಡಿದುದು ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು ಸಹಜ ಪ್ರವೃತ್ತಿ. ಸಂಸ್ಕೃತಿಯ ಉಳಿವಿಗೆ ಇದೆಷ್ಟು ಮುಖ್ಯ ಎಂಬುದನ್ನು ಲೇಖನದಲ್ಲಿ ಸೊಗಸಾಗಿ ತಿಳಿಸಿರುವಿರಿ..ಧನ್ಯವಾದಗಳು ಸುಜಾತಾ ಮೇಡಂ.

  5. ಹೌದು, ಸಂಪ್ರದಾಯಗಳು, ನಮ್ಮ ಪೂರ್ವಿಕರು ನಮಗಾಗಿ,ನಮ್ಮ ಒಳಿತಿಗಾಗಿ ಸಿದ್ದ ಮಾಡಿಟ್ಟುಕೊಟ್ಟಿರುವ, ನಾವು ಅವುಗಳನ್ನು ಪಾಲಿಸುತ್ತಲೇ ಮುಂದಿನ ಪೀಳಿಗೆಗೆ ವಾರ್ಗಾಯಿಸಬೇಕಿರುವ ಸುಂದರ ಆಚರಣೆಗಳು. ಪ್ರಸ್ತುತ ಪರಿಸ್ಥಿತಿಯಲ್ಲಿ ಗಂಭಿರ ಚಿಂತನೆಗೆ ಹಚ್ಚುವ ವಸ್ತುಸ್ಥಿತಿಯನ್ನು ಲೇಖನ ಅಚ್ಚುಕಟ್ಟಾಗಿ ಪ್ರತಿಪಾದಿಸಿದೆ. ಅಭಿನಂದನೆಗಳು.

    1. ತಮ್ಮ ಸಹೃದಯೀ ಓದು ಹಾಗೂ ಅನಿಸಿಕೆಗೆ ಅನಂತ ಧನ್ಯವಾದಗಳು ಪದ್ಮಾ ಆನಂದ್ ಮೇಡಂ .

      ಸುಜಾತಾ ರವೀಶ್

Leave a Reply to Padma Anand Cancel reply

 Click this button or press Ctrl+G to toggle between Kannada and English

Your email address will not be published. Required fields are marked *