ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 9

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)
23-04-2019 ಮಂಗಳವಾರ
ನಮ್ಮ ಪ್ರವಾಸದ ಭೇಟಿಗಳ ಕೊನೆಯ ಬಂದೇ ಬಿಟ್ಟಿತು. ಇಂದು ನಾವು ಫ್ಯುಜಿ ಪರ್ವತ ಮತ್ತು ಅದರ ಹತ್ತಿರ ಇರುವ ಶಿಬಸಕೂರ ನೋಡುವ ಕಾರ್ಯಕ್ರಮವಿತ್ತು. ಬೆಳಗಿನ ಉಪಾಹಾರ ಮುಗಿಸಿ ಹೊರಡುವುದಿತ್ತು. ಎಲ್ಲರೂ ಒಂದು ರೀತಿಯ ನಿರಾಳ ಮತ್ತು ಉಲ್ಲಾಸದಿಂದ ಇದ್ದೆವು. ಇಲ್ಲಿಯವರೆಗಿನ ಜಪಾನ್ ಪ್ರವಾಸವನ್ನು ಎಲ್ಲರೂ ಖುಷಿಯಿಂದ ನೋಡಿದೆವು. ಎಲ್ಲರ ಆರೋಗ್ಯ ಉತ್ತಮವಾಗಿತ್ತು. ಸ್ನೇಹ ಸೌಹಾರ್ದಗಳಿಂದ ಕೂಡಿತ್ತು. ಒಟ್ಟಿನಲ್ಲಿ ಸುಸಂಸ್ಕೃತ ಗುಂಪು ನಮ್ಮದಾಗಿತ್ತು. ಬೆಳಗಿನ ಉಪಾಹಾರ ‘ಗೋವಿಂದ’ ದಲ್ಲಿತ್ತು. ಎಲ್ಲರೂ ಅಲ್ಲಿಗೆ ಹೊರಟೆವು. ಇಂದಿನ ಉಪಾಹಾರ ವಿಶೇಷವಾಗಿತ್ತು. ಎಲ್ಲರಿಗೂ ಬಿಸಿಬಿಸಿ ದೋಸೆ ಮತ್ತು ಪೋಹ (ಅವಲಕ್ಕಿ) ರುಚಿಯಾಗಿ ಕಂಡಿತು. ಇಸ್ಕಾನ್‌ಗೆ ಸಂಬಂಧಪಟ್ಟ ಹೋಟೆಲ್‌ಗಳಲ್ಲಿ ಕಾಫಿ, ಟೀ ಇರುವುದಿಲ್ಲ. ಅದರ ಬದಲು ನಮಗೆ ಗಿಡ ಮೂಲಿಕೆಗಳ (ಹರ್ಬಲ್) ಚಹಾ ಕೊಟ್ಟರು. ಇದೂ ಚೆನ್ನಾಗಿಯೇ ಇತ್ತು.

ನಂತರ ನಮ್ಮ ಬಸ್ಸು ‘ಗೋವಿಂದ’ ಹತ್ತಿರ ಬಂದಿತು. ಅದನ್ನು ಏರಿ ಫ್ಯೂಜಿ ಪರ್ವತವನ್ನು ಕಾಣಲು ಪ್ರಯಾಣ ಬೆಳೆಸಿದೆವು. ಟೋಕಿಯೋದಿಂದ ಸುಮಾರು 2 ಗಂಟೆಗಳ ಪ್ರಯಾಣ. ಒಂದು ವಾರದಿಂದ ನಾವೆಲ್ಲರೂ ಪರಿಚಿತರಾಗಿದ್ದರೂ, ಔಪಚಾರಿಕವಾಗಿ ಕೆಲವರದ್ದು ಇನ್ನೂ ಆಗಿರಲಿಲ್ಲ. ಏಕೆಂದರೆ ಸಮಯ ಒದಗಿ ಬರಲಿಲ್ಲ. ನಮ್ಮ ಮಾರ್ಗದರ್ಶಿ ಪ್ರಭುಜೀ ಅವರು ಮಿಕ್ಕವರನ್ನು ಪರಿಚಯ ಮಾಡಿಕೊಳ್ಳಲು ವಿನಂತಿಸಿದರು. ಎಲೆಮರೆಯ ಕಾಯಿಗಳಂತೆ ಇದ್ದ ಕುಂದಾಪುರದ ಹೆಬ್ಬಾರ್ ವೈದ್ಯ ದಂಪತಿ ತಮ್ಮ ಪರಿಚಯ ಮಾಡಿಕೊಂಡರು. ನಂತರ ನಮ್ಮ ಜೊತೆ ಬಂದಿದ್ದ ಕಾವಿಧಾರಿಗಳು ಪರಿಚಯಿಸಿಕೊಂಡರು. ಸನ್ಯಾಸ ಜೀವನದ ಕಷ್ಟಗಳನ್ನು ಹಾಸ್ಯಮಯವಾಗಿ ನಮ್ಮ ಮುಂದೆ ಇಟ್ಟರು. ಯಾವುದೇ ಜಂಜಡ ಅವರಿಗೆ ಇರುವುದಿಲ್ಲ, ಸಂಸಾರವಿಲ್ಲ ಏನೂ ಇಲ್ಲ ಎಂದು ಜನಸಾಮಾನ್ಯರು ಭಾವಿಸುತ್ತಾರೆ. ಆದರೆ ವಸ್ತುಸ್ಥಿತಿ ಬೇರೆಯೇ ಇರುತ್ತದೆ. ಅವರ ಹೆಸರು ವೆಂಕಟರಮಣ ಜೀಯರ್.

ಫ್ಯೂಜಿ ಪರ್ವತ

ಫ್ಯುಜಿ ಪರ್ವತ ಹಲವಾರು ಕಿ.ಮೀ. ದೂರದಿಂದಲೇ ಕಾಣುತ್ತದೆ. ಜಪಾನಿನಲ್ಲಿಯೇ ಎತ್ತರದ ಜ್ವಾಲಾಮುಖಿ ಫ್ಯುಜಿ. ಇದರ ಎತ್ತರ 12,389 ಅಡಿ. ಆದರೆ 1708 ರಿಂದ ಶಾಂತವಾಗಿದೆ. ಟೋಕಿಯೋದಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಬುಲೆಟ್ ರೈಲಿನಲ್ಲಿ ಆಕಾಶ ತಿಳಿಯಾಗಿದ್ದಲ್ಲಿ ಪ್ರಯಾಣಿಸುವಾಗ ಕಾಣುತ್ತದೆ. ವರ್ಷದಲ್ಲಿ 5 ತಿಂಗಳು ಇದರ ಮೇಲೆ ಹಿಮ ಮುಸುಕಿರುತ್ತದೆ. ನಮಗೂ ಬಿಳಿಯ ಶಿಖರ ಕಂಡಿತು. ಜಪಾನಿನ ಚಿತ್ರಗಳಲ್ಲಿ ಸಾಮಾನ್ಯವಾಗಿ ಫ್ಯುಜಿ ಇರುತ್ತದೆ. ಇದು ಜಪಾನೀಯರಿಗೆ ಪವಿತ್ರವೂ ಹೌದು. ಫ್ಯುಜಿ ಯುನೆಸ್ಕೊವಿನ ಒಂದು ಜಾಗತಿಕ ಪಾರಂಪರಿಕ ತಾಣವಾಗಿದೆ. ನಾವು ಚಿಕ್ಕವರಿದ್ದಾಗ ‘ಫ್ಯುಜಿಕಲರ್’ ಎಂದು ಸಿನಿಮಗಳಲ್ಲಿ ಹಾಕುತ್ತಿದ್ದುದು ನನಗೆ ನೆನಪಿದೆ. ಹತ್ತಿರದಲ್ಲೇ ಇರುವ ಒಂದು ಉದ್ಯಾನಕ್ಕೆ ಹೋದೆವು. ಅಲ್ಲಿಯ ಕೊಳದಲ್ಲಿ ಸುಂದರ ಹೂಗಳಿದ್ದುವು. ಇಲ್ಲಿಂದ ಫ್ಯುಜಿ ಪರ್ವತ ಚೆನ್ನಾಗಿ ಕಾಣಿಸುತ್ತದೆ. ಸ್ವಲ್ಪ ಸಮಯ ಅಲ್ಲಿಯೇ ಕಳೆದೆವು. ದೂರದ ಬೆಟ್ಟ ಚೆನ್ನಾಗಿರುತ್ತದಲ್ಲವೇ? ಫ್ಯುಜಿಯನ್ನೂ ಹತ್ತುವವರಿದ್ದಾರೆ, ಆದರೆ ನಮ್ಮ ಭೇಟಿ ದೂರದಿಂದ ನೋಡುವುದೇ ಆಗಿತ್ತು. ಚಿತ್ರಗಳನ್ನು ಕ್ಲಿಕ್ಕಿಸಿದೆವು. ಫ್ಯುಜಿ ಪರ್ವತ ಬಹಳ ಸಮರೂಪವಾಗಿದೆ (ಸಿಮೆಟ್ರಿಕಲ್).

ಶಿಬಸಕೂರ ಹಬ್ಬ
ಫ್ಯುಜಿ ಪರ್ವತದ ತಪ್ಪಲಿನಲ್ಲಿ ಹೂವುಗಳ ಹಬ್ಬ. ಕೇಳುವುದಕ್ಕೇ ಎಷ್ಟು ಚಂದ ಅಲ್ಲವೇ? ಜಪಾನೀಯರು ಹೂ ಗಿಡಗಳನ್ನು ನೆಟ್ಟು ಅದನ್ನು ನೋಡಿ ಸಂಭ್ರಮಿಸುತ್ತಾರೆ. ಪ್ರಕೃತಿಯ ಆರಾಧನೆ ಈ ರೀತಿಯೂ ನಡೆಯುತ್ತದೆ. ಅದೂ ಎಕರೆಗಟ್ಟಲೆ ಒಂದೇ ಬಣ್ಣದ ಹೂಗಳು ಹಾಗೂ ವಿವಿಧ ರೀತಿಯ ಹೂಗಳು. ಶಿಬ ಎಂದರೆ ಭೂಮಿ ಎಂದರ್ಥ. ಸಕೂರ ಎಂದರೆ ಚೆರ್ರಿ ಹೂವು. ನೆಲದಲ್ಲಿ ಬಿಡುವ ಚೆರ್ರಿ ಹೂ ಎಂದರ್ಥ. ಪ್ರತಿವರ್ಷ 13 ನೇ ಏಪ್ರಿಲ್‌ಗೆ ಈ ಹಬ್ಬ ಶುರುವಾಗುತ್ತದೆ. ಜೂನ್ ಮಧ್ಯದವರೆಗೂ ಇರುತ್ತದೆ. ಇಲ್ಲಿಯ ವಿಶೇಷವೇನೆಂದರೆ 800,000 ಸಂಖ್ಯೆಯ ಒಂದು ರೀತಿಯ ಪುಟ್ಟ ಹೂವಿನ ಗಿಡಗಳನ್ನು ನೆಡುವುದು. ಇದಕ್ಕೆ ರೋಜಾ (ಪಿಂಕ್) ಬಣ್ಣದ ಮಾಸ್ ಅಥವಾ ಫ್ಲಾಕ್ಸ್‌ಮಾಸ್ ಎನ್ನುತ್ತಾರೆ. ಜೊತೆಗೆ ಇದರಲ್ಲಿ ಬಿಳಿ, ನೇರಳೆಬಣ್ಣದ್ದೂ ಇರುತ್ತದೆ. ಅಂದದ ಡಿಸೈನ್‌ಗಳಲ್ಲಿ ನೆಟ್ಟಿರುತ್ತಾರೆ. ಪಾರ್ಕಿನ ಒಳಗೆ ಹೋದ ಕೂಡಲೆ ಹೂಗಳ ಸುವಾಸನೆ ನಮ್ಮನ್ನಾವರಿಸಿತು. ವಿಶೇಷವಾಗಿ ರೋಜಾ ಬಣ್ಣದ ಹೂಗಳು ಒತ್ತೊತ್ತಾಗಿ ಅರಳಿ ದಪ್ಪ ರತ್ನಗಂಬಳಿಯಿಂದ ಭೂಮಿತಾಯಿಯನ್ನು ಮುಚ್ಚಿವೆಯೇನೋ ಎನ್ನಿಸುತ್ತಿತ್ತು. ಇದು ಇಲ್ಲಿ ವಿಶೇಷವಾಗಿ ಬೆಳೆಯುವ ಪಿಂಕ್ ಫ್ಲಾಕ್ಸ್. ಪಾರ್ಕಿನ ಒಂದು ಕಡೆ ಕೊಳವಿದೆ.

ಫ್ಯುಜಿ ಪರ್ವತ ಹಿಮಾಚ್ಛಾದಿತವಾಗಿ ಸುಂದರ ಹಿನ್ನೆಲೆಯನ್ನು ಉದ್ಯಾನಕ್ಕೆ ನೀಡಿದೆ. ಒಂದೆಡೆ ಪುಟ್ಟ ಪಾರಿಜಾತದಂತೆ ಸುವಾಸನೆ ಬೀರುತ್ತಾ ಬಿಳಿಯ ಹೂಗಳು ರಂಗೋಲಿಯನ್ನು ದಪ್ಪವಾಗಿ ಹರಡಿದಂತೆ ಮೈಚಾಚಿ ಮಲಗಿವೆ. ಅಲೆಗಳಂತೆ ಕಾಣುವ ಹಾಗೆ ವಿವಿಧ ಬಣ್ಣದ ಹೂಗಳು. ಎಲ್ಲರೂ ಎಷ್ಟು ಕಣ್ತುಂಬಿಕೊಂಡರೂ ಸಾಲದೆಂದು ಮತ್ತೆ ಮತ್ತೆ ಹೂಗಳ ಸೌಂದರ್ಯವನ್ನು ಆಸ್ವಾದಿಸಿದೆವು. ಚಿತ್ರಗಳನ್ನು ಎಷ್ಟು ತೆಗೆದರೂ ಸಾಲದು, ಕೆಲವೆಡೆ ವರ್ಟಿಕಲ್ (ನೇರ) ರೀತಿಯಲ್ಲೂ ಗಿಡಗಳನ್ನು ಬೆಳೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಇಲ್ಲಿಯೇ ಕಳೆದೆವು. ನಂತರ ಪುನಃ ಟೋಕಿಯೋದತ್ತ ಮುಖ ಮಾಡಿದೆವು. ನಮ್ಮ ಕಡೆಯ ರಾತ್ರಿಯನ್ನ ಟೋಕಿಯೋದ ನರಿಟ ವಿಮಾನ ನಿಲ್ದಾಣದ ಹತ್ತಿರ ಇರುವ ‘ಮೈಸ್ಟೇಸ್’ ಎನ್ನುವ ಹೋಟೆಲಿನಲ್ಲಿ ಕಳೆಯುವುದಾಗಿತ್ತು. ಇದೊಂದು ಹೊಸ ಹೋಟೆಲ್. ವಿಶಾಲವಾಗಿತ್ತು. ಕೋಣೆಯೂ ವಿಶಾಲವಾಗಿತ್ತು. ಟೋಕಿಯೋ ನಗರದಲ್ಲಾದರೆ ರೂಮುಗಳು ಬಹಳ ಚಿಕ್ಕವಾಗಿರುತ್ತವೆ. ಎಲ್ಲರೂ ರೂಮಿಗೆ ಹೋಗಿ ವಿಶ್ರಮಿಸಿದೆವು. ಸಾಮಾನುಗಳನ್ನು ನಾವು ಯಾರೂ ಕೊಳ್ಳಲಿಲ್ಲವೆಂದೇ ಹೇಳಬಹುದು. ಪ್ಯಾಕಿಂಗ್ ಸುಲಭ! ಆದರೂ ಮಾರನೆಯ ದಿನದ ಪ್ರಯಾಣಕ್ಕೆ ನಮ್ಮ ಪ್ಯಾಕಿಂಗ್ ಮುಗಿಸಿದೆವು. ಊಟ ‘ಗೋವಿಂದ’ದಿಂದ ತರಿಸಿಕೊಟ್ಟರು.

(ಮುಂದುವರಿಯುವುದು)

ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33613

-ಡಾ.ಎಸ್.ಸುಧಾ, ಮೈಸೂರು

7 Responses

  1. ನಯನ ಬಜಕೂಡ್ಲು says:

    Beautiful article

  2. ನಾಗರತ್ನ ಬಿ. ಅರ್. says:

    ಎಂದಿನಂತೆ ನಿಮ್ಮ ಪ್ರವಾಸ ಕಥನ ಓದಿಸಿಕೊಂಡು ಹೋಯಿತು ಇಂದಿನ ಹೂತೋಟದಲ್ಲಿ ಒಂದು ಸುತ್ತು ಅಲ್ಲಿನ ರೀತಿ ರಿವಾಜು ಗಳು ಅನಾವರಣ ಸೊಗಸಾದ ನಿರೂಪಣೆಯೊಂದಿಗೆ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ.

  3. padmini says:

    ಸೊಗಸಾದ ನಿರೂಪಣೆ.

  4. ಶಂಕರಿ ಶರ್ಮ says:

    ಹೌದು.. ಜಪಾನ್ ಎಂದರೆ ಫ್ಯುಜಿ ಪರ್ವತದ ನೆನಪು ತಾಳೆ ಹಾಕಲ್ಪಡುತ್ತದೆ..ಭಾರತ ಎಂದರೆ ತಾಜ್ ಮಹಲ್ ಎಂದ ಹಾಗೆ. ಪ್ರವಾಸದ ಅತ್ಯಮೂಲ್ಯ ನೆನಪುಗಳನ್ನು, ಅತ್ಯಂತ ಸುಂದರ ಚಿತ್ರಗಳೊಂದಿಗೆ ಹಂಚಿಕೊಂಡಿರುವಿರಿ.. ಧನ್ಯವಾದಗಳು ಸುಧಾ ಮೇಡಂ.

  5. Padma Anand says:

    ಭೂಮಿತಾಯಿಯನ್ನು ಅಂತೂ ಹೂಗಳ ರತ್ನಗಂಬಳಿಯಿಂದ ಸಿಂಗರಿಸಿ ಬಿಟ್ಟಿರಿ. ಎಂಥಹ ಚಂದದ ವರ್ಣನೆ. ಪ್ರವಾಸ ಕಥನದ ಘಮಲು ರೋಮಾಂಚಕಾರಿಯಾಗಿದೆ.

Leave a Reply to sudha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: