ತ್ರಿವೇಣಿ… ಬದುಕು ಬರಹ….

Share Button


ತ್ರಿವೇಣಿ ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರ್ತಿ. ಅವರು ತಮ್ಮ ಕಥೆ, ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು. ಸುಮಾರು ಒಂದು ದಶಕದ ಅವಧಿಯಲ್ಲಿ ರಚನೆಯಾದ ಅವರ ಕಥೆ, ಕಾದಂಬರಿಗಳು ಕನ್ನಡದ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು.

ಕನ್ನಡದ ಕಣ್ವ ಪ್ರೊ. ಬಿ.ಎಂ.ಶ್ರೀಕಂಠಯ್ಯನವರ ತಮ್ಮ ಬಿ.ಎಂ.ಕೃಷ್ಣಸ್ವಾಮಿಯವರ ಎರಡನೆಯ ಮಗಳೇ ತ್ರಿವೇಣಿ. ಅವರು ಜನಿಸಿದ್ದು ಸೆಪ್ಟೆಂಬರ್ ಒಂದನೆಯ ತಾರೀಖು 1928 ರಂದು. ಅವರ ಹುಟ್ಟು ಹೆಸರು ಭಾಗೀರಥಿ. ಅವರು ಶಾಲೆಗೆ ಸೇರುವಾಗ ಅವರ ಹೆಸರನ್ನು ಅನಸೂಯ ಎಂದು ದಾಖಲಿಸಲಾಗಿತ್ತು. ಇವರ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ನಡೆಯಿತು. ಮಹಾರಾಜ ಕಾಲೇಜಿನಲ್ಲಿ 1947 ರಲ್ಲಿ ಮನಃಶ್ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ., ಪದವಿ ಪಡೆದರು. ಆಗ ಶಾರದಾವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಫ್ರಾಧ್ಯಾಪಕರಾಗಿದ್ದ ಶಂಕರ್‌ ರವರೊಂದಿಗೆ ಅವರ ವಿವಾಹವಾಯಿತು. ಇದರಿಂದ ಶ್ರೀಮತಿ ಅನಸೂಯಾ ಶಂಕರ್ ಆದವರು ತಮ್ಮ ಬರವಣಿಗೆ ಮಾಡುವಾಗ ‘ತ್ರಿವೇಣಿ’ ಎಂಬ ಕಾವ್ಯನಾಮವನ್ನು ಬಳಸಿದರು. ಓದುಗರಿಗೆ ಇದೇ ಕಾವ್ಯ ನಾಮದಲ್ಲಿ ಪರಿಚಿತರಾದರು.

ಇವರ ಕಾದಂಬರಿಗಳು ಶರಪಂಜರ, ಬೆಳ್ಳಿಮೋಡ, ಕೀಲುಗೊಂಬೆ, ಹೃದಯಗೀತೆ, ಬೆಕ್ಕಿನಕಣ್ಣು, ಬಾನು ಬೆಳಗಿತು, ಅವಳ ಮನೆ, ಕಾಶೀಯಾತ್ರೆ, ಹಣ್ಣೆಲೆ ಚಿಗುರಿದಾಗ, ಹೂವು ಹಣ್ಣು, ಮುಕ್ತಿ, ದೂರದ ಬೆಟ್ಟ, ಅಪಸ್ವರ, ಅಪಜಯ, ತಾವರೆ ಕೊಳ, ಸೋತು ಗೆದ್ದವಳು, ಕಂಕಣ, ಮುಚ್ಚಿದ ಬಾಗಿಲು, ಮೊದಲ ಹೆಜ್ಜೆ, ವಸಂತಗಾನ, ಅವಳ ಮಗಳು.

ಇವರ ಕಥಾಸಂಕಲನಗಳು ಸಮಸ್ಯೆಯ ಮಗು, ಎರಡು ಮನಸ್ಸು, ಹೆಂಡತಿಯ ಹೆಸರು. ಇವುಗಳಲ್ಲಿ ಒಟ್ಟು ನಲವತ್ತೊಂದು ಕಥೆಗಳಿವೆ. ಇವರ ಕಥೆಗಳಲ್ಲಿ ಮಾನಸಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸುವ ಅದ್ಭುತ ಕಥಾವಸ್ತುಗಳಿವೆ. ಇವು ಓದುಗರ ಮನಸ್ಸನ್ನು ಸೆರೆಹಿಡಿಯುತ್ತವೆ. ಇವರ ಕಥಾಸಂಕಲನ ‘ಸಮಸ್ಯೆಯಮಗು’ವಿಗೆ 1962 ರಲ್ಲಿ ದೇವರಾಜಬಹಾದ್ದೂರ್ ಪ್ರಶಸ್ತಿ ಲಭಿಸಿದೆ. ಇವರ ‘ಅವಳಮನೆ’ ಕಾದಂಬರಿಗೆ 1960 ರಲ್ಲಿ ರಾಜ್ಯ ಪ್ರಶಸ್ತಿ ಬಂದಿದೆ. ‘ಅಪಸ್ವರ’, ‘ಅಪಜಯ’ ಕಾದಂಬರಿಗಳನ್ನು ಮತ್ತು ಇವರದ್ದೇ ಏಳು ಸಣ್ಣಕಥೆಗಳನ್ನು ಎಸ್.ಎಂ.ರಾಮಸ್ವಾಮಿಯವರು ಹಿಂದಿ ಭಾಷೆಗೆ ಅನುವಾದ ಮಾಡಿದ್ದಾರೆ. ‘ಶರಪಂಜರ’ ಕಾದಂಬರಿಯನ್ನು ಮೀರಾನರ್ವೇಕರ್ ಎಂಬುವರು ‘ದಿ ಮ್ಯಾಡ್ ವುಮನ್’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ‘ಬೆಕ್ಕಿನಕಣ್ಣು’ ಕಾದಂಬರಿಯನ್ನು ಶರ್ವಾಣಿ ಎಂಬುವರು ತೆಲುಗಿಗೆ ಅನುವಾದ ಮಾಡಿದ್ದಾರೆ. ತ್ರಿವೇಣಿಯವರ ‘ಬೆಳ್ಳಿಮೋಡ’, ‘ಶರಪಂಜರ’, ‘ಮುಕ್ತಿ’, ‘ಹೂವುಹಣ್ಣು’, ‘ಹಣ್ಣೆಲೆಚಿಗುರಿದಾಗ’ ಕಾದಂಬರಿಗಳು ಕನ್ನಡದಲ್ಲಿ ಚಲನಚಿತ್ರಗಳಾಗಿ ಜನಪ್ರಿಯವಾಗಿವೆ. ಇದರಿಂದ ಸಾಮಾನ್ಯವರ್ಗದ ಪ್ರೇಕ್ಷಕರಲ್ಲಿಯೂ ತ್ರಿವೇಣಿಯವರ ಹೆಸರು ಚಿರಪರಿಚಿತವಾಗಿದೆ.

ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ಮನೋವಿಜ್ಞಾನವನ್ನು ಬಳಸಿದುದರಿಂದ ಅವರು ಹೊಸಹಾದಿಯಲ್ಲಿ ನಡೆದಿದ್ದಾರೆ ಎನ್ನಿಸಿದರೂ ಅವರ ಕಾದಂಬರಿಗಳ ಮೌಲ್ಯಗಳು ಅಂದಿನವರೆಗೆ ಕಂಡುಬಂದಿದ್ದ ಮೌಲ್ಯಗಳಿಗಿಂತ ಭಿನ್ನವಾಗಿಲ್ಲ. ಕನ್ನಡ ಕಾದಂಬರಿ, ಕಥಾಕ್ಷೇತ್ರದಲ್ಲಿ ಮಹಿಳೆಯರ ಉತ್ಸಾಹದ ಅಧ್ಯಾಯವನ್ನೇ ಅವರು ತೆರೆದರು ಎನ್ನಬಹುದು. ಸಾಮಾನ್ಯವಾಗಿ ಕೌಟುಂಬಿಕ ಜೀವನ ಇವರ ಕಥಾವಸ್ತು.

ತ್ರಿವೇಣಿಯವರ ನಾಯಕಿಯರು ರೊಮ್ಯಾಂಟಿಕ್ ಸ್ವಭಾವದವರು. ಕ್ಷಿಪ್ರವಾಗಿ ಗಂಡಿನ ಪ್ರೀತಿಯಲ್ಲಿ ಸಿಲುಕುವವರು. ಇದು ಬಹುತೇಕ ತ್ರಿವೇಣಿಯವರ ಕಾದಂಬರಿಗಳ ನಾಯಕಿಯರ ವ್ಯಕ್ತಿತ್ವದ ವಿಶೇಷ. ಹಾಗೆಂದು ನಾಯಕಿಯರ ಪಾತ್ರಗಳು ಎಲ್ಲಿಯೂ ಏಕತಾನತೆಯಲ್ಲಿ ಸೃಷ್ಟಿಯಾಗಿಲ್ಲ. ಅವರ ಕಾದಂಬರಿ ‘ಕಂಕಣ’ ಹಾಗೂ ಅದರ ಮುಂದುವರಿದ ಭಾಗ ‘ಮುಕ್ತಿ’ಯಲ್ಲಿ ಆರುಜನ ನಾಯಕಿಯರಿದ್ದಾರೆ. ಎಲ್ಲರೂ ಕಾಲೇಜಿನ ಸಹಪಾಠಿಗಳು. ಇವರೆಲ್ಲರ ಕೌಟುಂಬಿಕ, ಸಾಮಾಜಿಕ ಪರಿಸ್ಥಿತಿಗಳು ಭಿನ್ನವಾಗಿವೆ. ಇವರ ಮನೋಧರ್ಮಗಳು ಸಹ ವಿಭಿನ್ನವಾಗಿವೆ. ಆದರೆ ಕಾಲೇಜು ವಿದ್ಯಾಭ್ಯಾಸ ಪೂರೈಸಿ ಪದವಿ ಗಳಿಸಿದ ಬಳಿಕ ಈ ಹುಡುಗಿಯರಿಗೆ ಇರುವುದು ಎರಡೇ ಗುರಿಗಳು. ಮದುವೆ ಅಥವಾ ಉದ್ಯೋಗ. ಮದುವೆಯೇ ಇವರೆಲ್ಲರ ಪ್ರಥಮ ಆಯ್ಕೆ. ಇಲ್ಲಿ ಒಬ್ಬ ನಾಯಕಿಯ ಅನಿಸಿಕೆಯನ್ನು ಗಮನಿಸಬಹುದು. ಮನುಷ್ಯ ಯಾವ ಬಗೆಯ ಆಸೆಗಳನ್ನೂ ಇಟ್ಟುಕೊಳ್ಳದಿದ್ದರೆ ಅವನಿಗೆ ನಿರಾಸೆಯಾಗುವುದಿಲ್ಲ. ನನ್ನ ಗಂಡ ಸುರೂಪಿಯಾಗಿರಬೇಕು, ಕುಬೇರನಾಗಿರಬೇಕು, ರಸಿಕನಾಗಿರಬೇಕು ಎಂದೆಲ್ಲ ಕನಸು ಕಟ್ಟಿ ಅನಂತರ ಅದು ಭಗ್ನವಾದರೆ ಸಹಜವಾಗಿ ನಮಗೆ ನಿರಾಸೆಯಾಗುತ್ತದೆ.

ತ್ರಿವೇಣಿಯವರ ಕಾದಂಬರಿಗಳ ನಾಯಕಿಯರು ಕನಸು ಕಣುತ್ತಾರೆ. ಸಹಜವಾಗಿಯೇ ಈ ಕನಸುಗಳು ಪ್ರೇಮಿಸುವ ಪತಿ, ನೆಮ್ಮದಿಯ ಬದುಕು ಇಂತಹ ವಿಷಯಗಳ ಬಗ್ಗೆ. ಆದರೆ ತ್ರಿವೇಣಿಯವರ ಅತಿ ಮಹತ್ವದ ಪ್ರತಿಪಾದನೆ ಎಂದರೆ ಹೆಣ್ಣಿಗೆ ಇರಬೇಕಾದ ಪ್ರೇಮಸ್ವಾತಂತ್ರ್ಯ. ‘ಹೆಣ್ಣು ಕೇವಲ ಗಂಡಿನ ಕಾಮದಬೊಂಬೆ, ಹೆರಿಗೆಯಂತ್ರ ಮಾತ್ರ. ಎಲ್ಲ ಜೀವಿಗಳಲ್ಲಿ ಇರುವಂತೆ ಪ್ರೇಮದ ಸಹಜ ಬಯಕೆ ಹಾಗೂ ಕಾಮಪ್ರವೃತ್ತಿ ಹೆಣ್ಣಿನಲ್ಲಿ ಇರತಕ್ಕದ್ದಲ್ಲ. ಇದು ನಾಚಿಕೆಗೇಡು’ ಎಂದು ಭಾವಿಸಿದ್ದ ಕಾಲಘಟ್ಟದಲ್ಲಿ ತ್ರಿವೇಣಿಯವರು ಹೆಣ್ಣಿನ ಪ್ರಣಯ ಸ್ವಾತಂತ್ರ್ಯವನ್ನು ಪಾತ್ರಗಳಲ್ಲಿ ಎತ್ತಿ ಹಿಡಿದಿದ್ದಾರೆ. ಕಾದಂಬರಿ ನಾಯಕಿಯರು ಪ್ರೀತಿಸುವ ನಾಯಕರನ್ನು ಗಮನಿಸಿ. ಅವರಲ್ಲಿ ವಿವಿಧತೆಯಿದೆ. ಸಾಂಪ್ರದಾಯಕ ರೂಢಿಯ ಚೌಕಟ್ಟನ್ನು ಮೀರಿ ನಿಂತವರು ಈ ನಾಯಕಿಯರು. ಕೆಲವು ಉದಾಹರಣೆಗಳನ್ನು ನೋಡಬಹುದು.

‘ಹೃದಯಗೀತೆ’ ಎಂಬ ಕಾದಂಬರಿಯಲ್ಲಿ ನಾಯಕಿಯು ತನ್ನ ಕಾಲೇಜು ಸಹಪಾಠಿಯ ತಂದೆಯನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಅವನ ವಯಸ್ಸು ಇವಳ ಪ್ರೇಮದ ಹರಿವಿಗೆ ಅಡ್ಡಿಯಾಗುವುದಿಲ್ಲ. ‘ಮುಕ್ತಿ’ ಕಾದಂಬರಿಯಲ್ಲಿ ನಾಯಕಿ ತನ್ನ ಪ್ರೇಮಿಯ ಪ್ರೇಮವನ್ನು ತಿರಸ್ಕರಿಸುತ್ತಾಳೆ. ಕಾರಣ ಆತನಿಗೆ ಮದುವೆಯಾಗಿದ್ದು ರೋಗಗ್ರಸ್ತ ಹೆಂಡತಿಯಿರುತ್ತಾಳೆ. ಗಂಡಹೆಂಡತಿಯ ನಡುವೆ ದೈಹಿಕ ಸಂಪರ್ಕವೇ ಇರುವುದಿಲ್ಲ. ರೋಗ ಉಲ್ಬಣಿಸಿ ಆಕೆ ತೀರಿಕೊಂಡ ಬಳಿಕ ಮತ್ತೊಮ್ಮೆ ಆತ ನಾಯಕಿಯಲ್ಲಿ ಪ್ರೇಮಯಾಚನೆ ಮಾಡುತ್ತಾನೆ. ಆಗ ವಿಧುರನನ್ನು ನಾಯಕಿ ಒಪ್ಪಿಕೊಳ್ಳುತ್ತಾಳೆ.

‘ತಾವರೆಕೊಳ‘ ಆ ಕಾಲಘಟ್ಟದಲ್ಲಿ ವೈಚಾರಿಕವಾಗಿ ಕ್ರಾಂತಿಕಾರಿ ಕಾದಂಬರಿಯೆನ್ನಬಹುದು. ಕಾದಂಬರಿಯ ನಾಯಕಿ ಮುಂಬಯಿ ನಗರದ ನಿವಾಸಿ. ಅವಳ ಗಂಡನ ಹಳೆಯ ಗೆಳೆಯನೊಬ್ಬನು ಮೈಸೂರಿನವನು. ಆತನ ತಮ್ಮ ಒಬ್ಬ ಕಾಲೇಜು ವಿದ್ಯಾರ್ಥಿ. ಆತ ಖಿನ್ನತೆಯಿಂದ ನರಳುತ್ತಿರುತ್ತಾನೆ. ಅವನನ್ನು ಸುಧಾರಿಸಲು ಅವನನ್ನು ಸ್ಥಳ ಬದಲಾವಣೆಗೋಸ್ಕರ ಮೈಸೂರಿನಿಂದ ಮುಂಬಯಿಗೆ ಕಳುಹಿಸಲಾಗಿರುತ್ತದೆ. ಮುಂಬಯಿ ನಿವಾಸಿಗಳು ಆಧುನಿಕರು. ಪರಿಚಯದ ಮುಂಬಯಿ ಕುಟುಂಬದ ಹುಡುಗಿಯೊಬ್ಬಳನ್ನು ಆ ಹುಡುಗನಿಗೆ ಜೋಡಿ ಮಾಡುವ ವಿಚಾರಗಳು ಕುಟುಂಬದವರಿಗೆ ಇರುತ್ತದೆ. ಆದರೆ ಕಾದಂಬರಿಯ ನಾಯಕಿಯು ತನಗಿಂತ ಚಿಕ್ಕವನಾದ ಈ ಹುಡುಗನನ್ನು ಸಾವಕಾಶವಾಗಿ ಪ್ರೀತಿಸಲು ಪ್ರಾರಂಭಿಸುತ್ತಾಳೆ. ತಾವರೆಯ ಕೊಳದಲ್ಲಿ ಇಳಿದವರು ತಾವರೆಯ ಬಳ್ಳಿಗಳಿಗೆ ಸಿಕ್ಕಿಹಾಕಿಕೊಳ್ಳುವುದು ಸಹಜ. ಅದರಿಂದ ಬಿಡಿಸಿಕೊಂಡು ಹೊರಬರುವುದು ಅವರಿಗೆ ಸಾಧ್ಯವಾಗಲಾರದು. ಪ್ರೇಮದಲ್ಲಿ ಸಿಲುಕಿಕೊಂಡವರ ಪರಿಸ್ಥಿತಿಯೂ ಹಾಗೆಯೇ. ಸಾವಕಾಶವಾಗಿ ಹುಡುಗನ ಮನಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ. ಆತ ಗುಣಮುಖನಾಗಿ ತನ್ನೂರಿಗೆ ಮರಳುತ್ತಾನೆ. ಆತನ ನೆನಪು ನಾಯಕಿಯ ಮನದಲ್ಲಿ ಗಟ್ಟಿಯಾಗಿ ಉಳಿದುಬಿಡುತ್ತದೆ. ಇಬ್ಬರ ನಡುವೆ ಯಾವುದೇ ಪ್ರಣಯ ಸಂಭವಿಸುವುದಿಲ್ಲ. ಯಾಕೆಂದರೆ ಆ ಕಾಲದಲ್ಲಿ ಅದು ಕಲ್ಪನೆಗೆ ಮೀರಿದ್ದು ಮತ್ತು ಸ್ವತಃ ಲೇಖಕಿಗೆ ಒಪ್ಪಿಗೆಯಾಗದ ಮಾತು. ಈ ಪ್ರೇಮವ್ಯವಹಾರವು ನಾಯಕಿಯ ಮನೋರಂಗದಲ್ಲಿ ನಡೆಯುವ ಭಾವಲಹರಿಯಲ್ಲಿ ಮಾತ್ರ. ಕಾದಂಬರಿಯ ಕೊನೆಯಲ್ಲಿ ಆ ಹುಡುಗನು ತನ್ನ ಊರಿಗೆ ಮರಳಿದ ದಿನದಂದು ನಾಯಕಿಯಲ್ಲಿ ಅವನ ನೆನಪು ಎಷ್ಟು ತೀವ್ರವಾಗಿದೆ ಎಂದರೆ ಆ ರಾತ್ರಿ ಅವಳು ತನ್ನ ಪತಿಯ ಪ್ರಣಯ ಯಾಚನೆಗೆ ಸ್ಪಂದಿಸುವುದಿಲ್ಲ. ಹೆಣ್ಣಿಗೆ ಇರಬೇಕಾದ ಸ್ವಾತಂತ್ರ್ಯದ ಎಲ್ಲ ಮಗ್ಗುಲುಗಳನ್ನು ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ತೋರಿದ್ದಾರೆ ಎನ್ನಲು ಇದು ಉತ್ತಮ ಉದಾಹರಣೆ.

ಹೆಣ್ಣಿನ ಕಾಮದ ಬಯಕೆಯನ್ನು ತ್ರಿವೇಣಿಯವರು ನಿಸ್ಸಂಕೋಚವಾಗಿ ಎತ್ತಿ ಹಿಡಿಯುತ್ತಾರೆ. ಆದರೆ ವಿವಾಹಬಾಹಿರ ಕಾಮವನ್ನು ಅವರು ಎಂದೂ ಪುರಸ್ಕರಿಸಿಲ್ಲ. ಅವರ ‘ಸೋತುಗೆದ್ದವಳು’ ಕಾದಂಬರಿಯಲ್ಲಿ ನಾಯಕಿಯು ತನ್ನ ಗಂಡನ ದೀರ್ಘಾವಧಿಯ ವಿರಹಕಾಲದಲ್ಲಿ ಮತ್ತೊಬ್ಬ ಗಂಡಿನ ಕಾಮಕ್ಕೆ ಬಲಿಯಾಗುತ್ತಾಳೆ ನಿಜ. ಇದಕ್ಕಾಗಿ ಅವಳು ಪರಿತಪಿಸುತ್ತಾಳೆ. ತನ್ನ ಗಂಡ ವಿದೇಶದಿಂದ ಮರಳಿದ ಬಳಿಕ ತನ್ನ ತಪ್ಪನ್ನು ಅವನ ಮುಂದೆ ಒಪ್ಪಿಕೊಳ್ಳುತ್ತಾಳೆ. ವಿದೇಶದಲ್ಲಿದ್ದಾಗ ಆತನಿಗೂ ಇಂತಹುದೇ ಒಂದು ಅನುಭವವಾಗಿರುತ್ತದೆ. ಗಂಡಿಗೇ ಒಂದು ನಿಯಮ, ಹೆಣ್ಣಿಗೇ ಒಂದುನಿಯಮ ಎನ್ನುವುದು ಸರಿಯಲ್ಲ ಎನ್ನುವ ತಿಳುವಳಿಕೆಯಿಂದ ನಾಯಕನು ಅವಳ ತಪ್ಪನ್ನು ಕ್ಷಮಿಸಿಬಿಡುತ್ತಾನೆ. ಇಲ್ಲಿ ತ್ರಿವೇಣಿಯವರು ವಿವಾಹಬಾಹಿರ ಕಾಮವನ್ನು ಪುರಸ್ಕರಿಸುವುದಿಲ್ಲ. ಆದರೆ ‘ಶರಪಂಜರ’ ಕಾದಂಬರಿಯಲ್ಲಿ ವಿವಾಹ ಪೂರ್ವ ಪ್ರಣಯದಲ್ಲಿ ಸಿಲುಕಿದ ತರುಣಿಯೊಬ್ಬಳು ಆ ಕಾರಣದಿಂದಾಗಿ ತನ್ನ ಮನೋಸ್ವಾಸ್ಥ್ಯವನ್ನೇ ಕಳೆದುಕೊಳ್ಳುವ ಚಿತ್ರಣವಿದೆ.

ಮೊದಲಹೆಜ್ಜೆ’ ಕಾದಂಬರಿಯಲ್ಲಿ ಮೂರು ವಿಭಾಗಗಳಿವೆ. ಮೊದಲ ವಿಭಾಗದಲ್ಲಿ ಕಾದಂಬರಿಯ ನಾಯಕಿ ತನ್ನ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾಳೆ. ಶಾಲಾಮಾಸ್ತರ ಅಪ್ಪನ ಮೊದಲನೆಯ ಮಗಳು. ಕಪ್ಪು ಬಣ್ಣದಬವಳು ಎನ್ನುವ ಕಾರಣಕ್ಕಾಗಿ ಇವಳ ತಂದೆ ತಾಯಿಗೆ ಇವಳಲ್ಲಿ ಆಸಕ್ತಿ ಕಡಿಮೆ. ಇವಳ ತಂಗಿ ಬೆಳ್ಳಗೆ ಇದ್ದು ಅವಳ ಮದುವೆ ಮೊದಲು ಜರುಗುತ್ತದೆ. ಬಾಣಂತಿ ತಂಗಿಗೆ ನೆರವಾಗಲು ಮದುವೆಯಾಗದ ಈ ಅಕ್ಕ ತಂಗಿಯ ಮನೆಗೆ ಹೋಗುತ್ತಾಳೆ. ಎರಡನೆಯ ವಿಭಾಗದಲ್ಲಿ ಕಾಲೇಜು ಹುಡುಗನೊಬ್ಬನ ಸ್ವಕಥನವಿದೆ. ಆತ ತಂಗಿಯ ಮನೆಯ ಹೊರಕೋಣೆಯಲ್ಲಿ ಬಾಡಿಗೆಗೆ ಇರುವವನು. ಸ್ವಲ್ಪ ಶೋಕಿವಾಲ. ಮದುವೆಯಾಗದ ಅಕ್ಕನನ್ನು ಅವನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಾನೆ. ಇವಳೂ ಹಸಿದ ಹುಡುಗಿ. ಅವನ ಬಲೆಗೆ ಸುಲಭದ ತುತ್ತಾಗುತ್ತಾಳೆ. ಹೆಂಗಸರಲ್ಲಿಯೂ ಸಹ ಕಾಮದ ಬಯಕೆ ಗಂಡಿಗಿರುವಷ್ಟೇ ಸಹಜವಾದದ್ದು ಎನ್ನುವುದನ್ನು ತಮ್ಮ ಮಾತುಗಳಲ್ಲಿ ತ್ರಿವೇಣಿಯವರು ಸ್ಪಷ್ಟಪಡಿಸುತ್ತಾರೆ. ಮೂರನೆಯ ವಿಭಾಗ ನಡೆಯುವುದು ಜೈಲಿನ ಒಳಗಡೆ. ಕಳ್ಳ ಬಸಿರಿನ ಫಲವನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲುಸೇರಿದಾಕೆ ನಾಯಕಿ ಕಪ್ಪುಹುಡುಗಿ. ಈ ಪ್ರಣಯ ಪ್ರಕರಣದಲ್ಲಿ ಆಕೆ ಅರ್ಧಮಾತ್ರ ತಪ್ಪುದಾರಳು. ಆದರೂ ಆಕೆ ಅನುಭವಿಸಿದ ಶಿಕ್ಷೆಯನ್ನು ನೋಡಿದಾಗ ವಿವಾಹಪೂರ್ವ ಕಾಮವನ್ನು ತ್ರಿವೇಣಿಯವರು ತಿರಸ್ಕರಿಸುತ್ತಾರೆ ಎಂದು ಹೇಳಬಹುದು.

ಅವಿವಾಹಿತ ಕನ್ಯೆಯರ ಪ್ರಣಯಸ್ವಾತಂತ್ರ್ಯಕ್ಕೆ ಮಾತ್ರ ತ್ರಿವೇಣಿಯವರ ಕಾದಂಬರಿಗಳು ಪರಿಮಿತವಾಗಿಲ್ಲ. ‘ಮುಚ್ಚಿದಬಾಗಿಲು’ ಹಾಗೂ ‘ಹಣ್ಣೆಲೆಚಿಗುರಿದಾಗ’ ಕಾದಂಬರಿಗಳಲ್ಲಿ ವಿಧವೆಯರಿಗೂ ಸಹ ಪ್ರೇಮದ ಕನಸುಗಳು ಇರುತ್ತವೆ, ಅವರೂ ಮರುಮದುವೆಯಾಗಿ ಮತ್ತೊಬ್ಬ ಸಂಗಾತಿಯೊಡನೆ ದಾಂಪತ್ಯಜೀವನವನ್ನು ಮತ್ತೊಮ್ಮೆ ಅನುಭವಿಸಲು ಬಯಸುತ್ತಾರೆ ಎನ್ನುವುದನ್ನು ತ್ರಿವೇಣಿನಿರೂಪಿಸಿದ್ದಾರೆ. ‘ಹಣ್ಣೆಲೆಚಿಗುರಿದಾಗ’ ತೋರಿಕೆಗೆ ವಿನೋದಮಯ ಕಾದಂಬರಿಯೆನಿಸಿದರೂ ಆಂತರ್ಯದಲ್ಲಿ ಇದು ಹೆಣ್ಣಿನ ಮನೋರಂಗವನ್ನು ಪ್ರತಿಬಿಂಬಿಸುವ ಕಾದಂಬರಿಯಾಗಿದೆ. ಓರ್ವ ವಿಧವೆ ಮದುವೆಯಾಗುವುದು ಒಬ್ಬ ವಿಧುರನನನ್ನು. ಆದರೆ ‘ಮುಚ್ಚಿದಬಾಗಿಲು’ ಕಾದಂಬರಿಯಲ್ಲಿ ಓರ್ವ ವಿಧವೆಯು ಮದುವೆಯಾಗುವುದು ಅವಿವಾಹಿತ ತರುಣನ ಜೊತೆಗೆ.

ಪ್ರಣಯದ ಬಯಕೆಯಂತೆಯೇ ಪ್ರಣಯದ ನಿರಾಕರಣೆಯೂ ಸಹ ಹೆಣ್ಣಿನ ಹಕ್ಕಾಗಿದೆ. ‘ಬೆಳ್ಳಿಮೋಡ’ ಕಾದಂಬರಿಯಲ್ಲಿ ಆಸ್ತಿಗಾಗಿ ಆಸೆಪಡುವ ವ್ಯವಹಾರಸ್ಥ ಗಂಡನ್ನು ನಾಯಕಿ ತಿರಸ್ಕರಿಸುತ್ತಾಳೆ. ಕಾಲ ಕಳೆದಂತೆ ದಾಂಪತ್ಯ ಪ್ರೇಮವು ಮಸುಕಾಗುತ್ತದೆಂಬುದನ್ನು ‘ಬಾಳುಬೆಳಗಿತು’ ಕಾದಂಬರಿಯಲ್ಲಿ ನೋಡಬಹುದು. ಹೆಣ್ಣು ಎಂಥಹ ಗಂಡನ್ನು ಬಯಸುತ್ತಾಳೆ? ಎಂಬುದರ ಸುಳಿವು ‘ಮುಚ್ಚಿದಬಾಗಿಲು’ ಮತ್ತು ‘ಬೆಕ್ಕಿನಕಣ್ಣು’ ಕಾದಂಬರಿಗಳಲ್ಲಿ ಸಿಗುತ್ತದೆ. ಎಂತಹ ಪರಿಸ್ಥಿತಿಯಲ್ಲಿಯೂ ತನಗೆ ಮಾನಸಿಕವಾಗಿ ಅವಲಂಬನೆಯನ್ನು ನೀಡುವ ಗಂಡನ್ನು ಹೆಣ್ಣು ಬಯಸುತ್ತಾಳೆ ಎನ್ನುವುದನ್ನು ತ್ರಿವೇಣಿಯವರ ಕಾದಂಬರಿಗಳಲ್ಲಿ ನೋಡಬಹುದು. ಹೆಣ್ಣಿನ ಅಂತರಂಗವನ್ನು, ಅವಳ ಕನಸುಗಳನ್ನು, ಅವಳ ಆಶೋತ್ತರಗಳನ್ನು ತ್ರಿವೇಣಿ ತಮ್ಮ ಕಾದಂಬರಿಗಳಲ್ಲಿ ತೆರೆದಿಟ್ಟಿದ್ದಾರೆ. ಹೆಣ್ಣು ಕಂದಾಚಾರದ ಪಂಜರದಲ್ಲಿ ಸಿಲುಕಿದ್ದ ಕಾಲಘಟ್ಟದಲ್ಲಿ ಈ ಪಂಜರದ ಪಕ್ಷಿಗೆ ಭಾವನೆಗಳ ಸ್ವಾತಂತ್ರ್ಯವಿದೆ, ಹಾಡುವ ಸ್ವಾತಂತ್ರ್ಯವಿದೆ ಎನ್ನುವುದನ್ನು ತ್ರಿವೇಣಿ ತಮ್ಮ ಬರಹಗಳಲ್ಲಿ ತೋರಿಸಿದರು. ಕನ್ನಡ ಸಾಹಿತ್ಯದಲ್ಲಿ ಅವರಿಗೆ ಶಾಶ್ವತ ಸ್ಥಾನವನ್ನು ದೊರಕಿಸಿಕೊಡಲು ಇದೊಂದೇ ಕಾರಣ ಸಾಕು.

ಜೀವನದಲ್ಲಿ ಹೆಣ್ಣಿಗೆ ಇರಬೇಕಾದ ಸುಖ, ಸಂಪತ್ತು, ಭೋಗಭಾಗ್ಯಗಳು ತ್ರಿವೇಣಿಯವರಿಗೆ ಹೇರಳವಾಗಿ ದೊರಕಿದ್ದವು. ಅವರಿಗೆ ಜೀವನದಲ್ಲಿ ಅತೀವವಾದ ಆಸಕ್ತಿಯಿತ್ತು. ಇದು ಅವರ ಕೃತಿಗಳಲ್ಲಿ ಉದ್ದಕ್ಕೂ ಕಾಣಬರುತ್ತದೆ. ಒಲವಿನಪತಿ, ತಮ್ಮದೇಮನೆ, ಪ್ರೀತಿಸುವ ಬಂಧುಬಾಂಧವರು, ಆತ್ಮೀಯ ಸ್ನೇಹಿತರ ಬಳಗ, ಜನಪ್ರಿಯತೆ, ಅಚ್ಚುಮೆಚ್ಚಿನ ವಾಚಕವರ್ಗ ಎಲ್ಲವೂ ಇತ್ತು. ಆದರೂ ತಾನು ತಾಯಿಯಾಗಲಿಲ್ಲ, ತಾವು ಸೇರಿದ ಮನೆಗೆ ಬೆಳಕಾಗಿ ಒಂದು ಮಗುವನ್ನು ಕೊಡಲಿಲ್ಲವೆಂಬ ಕೊರಗು ಅವರನ್ನು ಬಾಧಿಸುತ್ತಿತ್ತು. ದೈಹಿಕವಾಗಿ ದುರ್ಬಲರಾಗಿದ್ದ ತ್ರಿವೇಣಿ ಮೂರುಸಲ ಗರ್ಭಿಣಿಯಾದರೂ ನಿರೀಕ್ಷಿಸಿದ ಅತಿಥಿ ದೊರಕದೆ ನಿರಾಶೆ, ಕಾತರ, ದುಃಖ, ಹೆರಿಗೆಯನೋವು, ಮೂಕಸಂಕಟ ಇವೆಲ್ಲವನ್ನೂ ಅವರ ‘ಅತಿಥಿ ಬರಲಿಲ್ಲ‘ ಎಂಬ ಸಣ್ಣಕಥೆಯಲ್ಲಿ ಹೃದಯಸ್ಪರ್ಶಿಯಾಗಿ ಬಣ್ಣಿಸಿದ್ದಾರೆ. ಸ್ವಾನುಭವದ ಮೂಸೆಯಿಂದ ಮೂಡಿಬಂದ ಈ ಕಥೆ ಓದುಗರ ಮನಸ್ಸನ್ನು ಕಲಕುತ್ತದೆ. ತಾಯಿಯಾಗಲೇ ಬೇಕೆಂದು ವಿಧಿಗೆ ಸವಾಲಾಗಿ ನಿಂತ ಅವರು ನಾಲ್ಕನೆಯ ಬಾರಿಗೆ ಗರ್ಭಿಣಿಯಾದಾಗ ನಿರೀಕ್ಷೆಯಂತೆ ಅತಿಥಿಯೇನೋ ಪುತ್ರಿಯ ರೂಪದಲ್ಲಿ ಬಂದಳು. ಆದರೆ ಅವಳನ್ನು ಸ್ವಾಗತಿಸಿದ ಕೆಲವೇ ದಿನಗಳಲ್ಲಿ ಅವರೇ ಕಣ್ಮರೆಯಾದುದು ದುರಂತ. ತಮ್ಮ ಬೆಲೆಯುಳ್ಳ ಬರಹದ ಬಾಳಿಗೆ ಅಂತಿಮ ಅಧ್ಯಾಯವನ್ನೇ ಕಡೆಯ ಕಾದಂಬರಿಯ ವಸ್ತುವಾಗುವಂತೆ ಬಿಟ್ಟುಹೋದರು. ತಾರೂಣ್ಯದ ಹೆಬ್ಬಯಕೆಗಳು ಇನ್ನೂ ಚಿಗುರೊಡೆಯುತ್ತಿರುವಾಗಲೇ ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿ 29 ಜುಲೈ 1963 ರಂದು ಅವರು ನಿಧನರಾದರು.

ತ್ರಿವೇಣಿಯವರಿಂದ ಇನ್ನೂ ಮಹತ್ವದ ಕೃತಿಗಳು ಬರುತ್ತವೆ ಎನ್ನುವ ನಿರೀಕ್ಷೆಗಳಿದ್ದ ಸಮಯದಲ್ಲಿ ಅವರು ಈ ಲೋಕವನ್ನಗಲಿದ್ದು ಕನ್ನಡನಾಡಿಗಾದ ನಷ್ಟ. ಆಧುನಿಕ ಸಾಹಿತ್ಯದ ಇತಿಹಾಸಕಾರರು ತ್ರಿವೇಣಿಯವರನ್ನು ‘ಪ್ರತಿಭಾವಂತ ಲೇಖಕಿ’, ‘ಜನಪ್ರಿಯ ಲೇಖಕಿ’ ಎಂದು ಗುರುತಿಸಿ ಅವರಿಗೆ ಸಲ್ಲಬೇಕಾದ ಗೌರವಯುತ ಸ್ಥಾನವನ್ನು ನೀಡಿದ್ದಾರೆ. ಬದುಕನ್ನು ಒಳ್ಳೆಯ ನಿಲುವಿನಿಂದ ನೋಡುವ ಆರೋಗ್ಯಕರ ಧೋರಣೆಯನ್ನು ಪ್ರತಿಪಾದಿಸುವ ಅವರ ಕೃತಿಗಳು ಬಹಳ ಕಾಲದವರೆಗೆ ಕನ್ನಡಿಗರ ಹೃದಯಗಳಲ್ಲಿ ನೆಲೆಸಿರುತ್ತವೆ. ಆ ಮಹಾನ್ ಲೇಖಕಿಯ ನೆನಪಿಗೆ ನಮ್ಮ ಗೌರವಯುತ ನಮನಗಳು ಸಲ್ಲುತ್ತವೆ.

-ಬಿ.ಆರ್.ನಾಗರತ್ನ, ಮೈಸೂರು

17 Responses

  1. Samatha.R says:

    ಬಹಳ ಮಾಹಿತಿಪೂರ್ಣ ಆಪ್ತ ಬರಹ…ಚೆನ್ನಾಗಿ ಮೂಡಿ ಬಂದಿದೆ ಮೇಡಂ…

  2. ನಯನ ಬಜಕೂಡ್ಲು says:

    ತ್ರಿವೇಣಿಯವರ ಕುರಿತಾದ ಮಾಹಿತಿಪೂರ್ಣ ಬರಹ ಚೆನ್ನಾಗಿದೆ

  3. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಸಮತಮತ್ತು ನಯನ ಮೇಡಂ

  4. ASHA nooji says:

    ಚೆನ್ನಾಗಿ ತ್ರಿವೇಣಿಯವರು ಬರೆದ ಕಥೆಗಳನ್ನು ವಿವರಿಸಿದಿರಿ ..ಕಥಾನಾಯಕಿ ಹೇಳಿದ ಮಾತಂತೂ ಸತ್ಯ … ಮನುಷ್ಯನು
    ಯಾವಬಗ್ಗೆಯೂ ಆಸೆಪಡಬಾರದು ..ಆಸೆ ಪಟ್ಟು ಅದು
    ನಿರಾಸೆ ಆದರಂತೂ ..ಅದು ನುಂಗಲಾರದ ತುತ್ತಾಗಿ ಬಿಡುವುದು ..

  5. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಮೇಡಂ

  6. padmini says:

    ಬರಹ ಚೆನ್ನಾಗಿದೆ.

  7. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಪದ್ಮಿನಿ ಮೇಡಂ

  8. ಶಂಕರಿ ಶರ್ಮ says:

    ನನ್ನನ್ನೂ ಸೇರಿಸಿ, ಬಹಳಷ್ಟು ಓದುಗರ ಪ್ರಿಯ ಲೇಖಕಿ ತ್ರಿವೇಣಿಯವರು, ತನ್ನ ವಿಶಿಷ್ಟ ಬರವಣಿಗೆ, ವಿನೂತನ ಕಥಾವಸ್ತುಗಳಿಂದ ಬಹಳ ಹೆಸರುಗಳಿರುವರು…ಕಾದಂಬರಿಗಾರ್ತಿಯರ ಸಾಲಿನಲ್ಲಿ ವಿಶೇಷ ಸ್ಥಾನ ಪಡೆದಿರುವರು. ಅವರ ಕೆಲವು ಕಾದಂಬರಿಗಳ ಕಥಾ ಪರಿಚಯಗಳೊಂದಿಗೆ ಮೂಡಿಬಂದ ಅವರ ಪರಿಚಯ ಲೇಖನ ಬಹಳ ಚೆನ್ನಾಗಿದೆ ನಾಗರತ್ನ ಮೇಡಂ…ಧನ್ಯವಾದಗಳು.

  9. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಶಂಕರಿಶರ್ಮ ಮೇಡಂ

  10. ವಿದ್ಯಾ says:

    ಅಪಸ್ವರ,ಅಪಜಯ ,ಕಾದಂಬರಿ ಈವತ್ತೀಗೂ ನೆನಪಿನಲ್ಲಿ ಉಳಿದಿದೆ, ಉತ್ತಮ ಮಾಹಿತಿ ಯೊಂದಿಗೆ ಅತ್ಯುತ್ತಮ ಬರಹ ಅಕ್ಜಾ

  11. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಸೋದರಿ ವಿದ್ಯಾ

  12. ಮಾಲತಿ says:

    ತ್ರಿವೇಣಿ ಯವರ ಪೂರ್ಣ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು. ಅವರ ಕಾದಂಬರಿಗಳ ಪರಿಚಯ, ಅವರಿಗಿದ್ದ ಮಹಿಳಾ ಸ್ವಾತಂತ್ರ್ಯ ಕಾಳಜಿ ಮತ್ತು ಅವಳಿಗಿರುವ ಸಮಾನ ಭಾವನೆ, ಇದೆಲ್ಲದರ ಕುರಿತ ನಿಮ್ಮ ಬರವಣಿಗೆಗೆ ಅಭಿನಂದನೆಗಳು.

  13. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಗೆಳತಿ ಮಾಲತಿ

  14. Padma Anand says:

    ಮೆಚ್ಚಿನ ಲೇಖಕಿ ತ್ರಿವೇಣಿಯವರ ಕುರಿತಾದ ಸೊಗಸಾದ ಲೇಖನ. ಅವರ ಒಂದೊಂದು ಕಾದಂಬರಿಯ ಬಗ್ಗೆಯೂ ಓದುತ್ತಾ ಹೋದಂತೆ ಯೌವನದ ದಿನಗಳು ಮರುಕಳಿಸಿದಂತಾಯಿತು. ಮಾಹಿತಿಪೂರ್ಣ, ಪ್ರೌಢ ಲೇಖನಕ್ಕಾಗಿ ಅಭಿನಂದನೆಗಳು

  15. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಗೆಳತಿ ಪದ್ಮಾ

  16. ಮಲ್ಲಿಕಾರ್ಜುನ says:

    Supper

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: