ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 8

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)

ಆಲ್ಪೈನ್ ಪ್ರವಾಸ (Alpine Tour)
22-04-2019

ಜಪಾನಿನ ಟಾಟೆಯಾಮ ಕುರೋಬೆ ಆಲ್ಪೈನ್ ಪ್ರವಾಸ ವಿಶಿಷ್ಟ ರೀತಿಯದು. ನಮ್ಮ ಮಾರ್ಗದರ್ಶಿ ಪ್ರಭುಜೀಯವರು ಇದನ್ನು ಒಂದೇ ದಿನದಲ್ಲಿ, ಬೆಳಗಿನಿಂದ ಸಂಜೆಯವರೆಗೆ ಬಹಳ ಚೆನ್ನಾಗಿ ಆಯೋಜಿಸಿದ್ದರು. ನಾವು ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದೆವು. ಬೆಚ್ಚಗಿರಲು ಥರ್ಮಲ್ ಬಟ್ಟೆ ಧರಿಸಿ ಹೊರಟೆವು. ಬೆಳಗಿನ ಐದು ಗಂಟೆಗೆ ಹೋಟೆಲ್‌ನ ಲೌಂಜ್‌ನಲ್ಲಿ ನಾವು ಹಾಜರಾಗಬೇಕಿತ್ತು. ಅಲ್ಲಿಗೇ ನಮ್ಮ ಉಪಾಹಾರ ಮತ್ತು ಊಟ ಸಿದ್ಧಪಡಿಸಿದ ಪೊಟ್ಟಣಗಳಲ್ಲಿ ಬಂದಿತು. ಎಲ್ಲರೂ ತಮ್ಮ ಪೊಟ್ಟಣಗಳನ್ನು ತೆಗೆದುಕೊಂಡರು. ಬೆಳಗಿನ 5.15 ಗಂಟೆಗೆ ಸರಿಯಾಗಿ ಹೋಟೆಲನ್ನು ಬಿಟ್ಟೆವು. ಅಷ್ಟರಲ್ಲಿ ಸೂರ್ಯ ಎಲ್ಲೆಲ್ಲೂ ಬೆಳಕನ್ನು ಪಸರಿಸಿದ್ದ. ಎಷ್ಟೆಂದರೂ ಜಪಾನ್ ಉದಯಿಸುವ ಸೂರ್ಯನ ದೇಶವಲ್ಲವೇ? ಅರ್ಧ ಕಿ.ಮೀ. ನಡೆದು ಬಸ್ ನಿಲ್ದಾಣದ ಮುಂದಿರುವ ರೈಲು ನಿಲ್ದಾಣಕ್ಕೆ ಹೋದೆವು. ಆಗಲೇ ಕಪ್ಪು ಸೂಟ್ ಧರಿಸಿ ಕೆಲಸಕ್ಕೆ ಜನರು ಹೊರಟಿದ್ದರು. ಮೊದಲು ನಾವು ಪ್ರಯಾಣ ಮಾಡಿದ್ದು ಮೆಟ್ರೋ ರೈಲು. ಇದನ್ನು ಇಳಿದು ಬುಲೆಟ್ ರೈಲನ್ನು ಹತ್ತಿದೆವು. ಎಲ್ಲಾಕಡೆ ಬೆಳಿಗ್ಗೆದ್ದು ವೇಗವಾಗಿ ನಡೆದೆವು. ವಾಕಿಂಗ್ ಚೆನ್ನಾಗಿ ಆಯಿತು. ರೈಲು ನಿಲ್ದಾಣದ ಒಳಗೇ ಎರಡು ಕಿ.ಮೀ. ನಡೆದಿದ್ದೇವೆ. ಬುಲೆಟ್ ರೈಲಿನಲ್ಲಿ ಟೊಯಾಮಗೆ ಬಂದೆವು. ಎರಡು ಗಂಟೆಗಳ ಪ್ರಯಾಣ. ನಾವು ತಂದಿದ್ದ ತಿಂಡಿ ಪೊಟ್ಟಣ ರೈಲಿನಲ್ಲಿ ಖಾಲಿಯಾಯಿತು. ಇಡ್ಲಿ ವಡೆಯನ್ನು ಸವಿದೆವು. ಜಪಾನೀಯರು ಬೆಳಿಗ್ಗೆ ರೈಲಿನಲ್ಲಿಯೇ ತಿಂಡಿ ತಿನ್ನುತ್ತಾರೆ. ಸಿದ್ಧಪಡಿಸಿದ್ದನ್ನೇ ತಿನ್ನುತ್ತಾರೆ. ಯಾರೂ ಮನೆಯಿಂದ ತರುವ ಹಾಗೆ ಕಾಣಲಿಲ್ಲ. ರೈಲಿನಲ್ಲಿ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತಿಂದು ಪೊಟ್ಟಣವನ್ನು ಎಲ್ಲೂ ಬಿಸಾಡದೆ, ಎದ್ದು ಹೋಗಿ ಕಸದ ಡಬ್ಬದಲ್ಲಿಯೇ ಹಾಕಿಬರುತ್ತಾರೆ.

ನಂತರ ನಮ್ಮ ಪ್ರಯಾಣ ಇನ್ನೊಂದು ರೀತಿಯ ರೈಲಿನಲ್ಲಿ. ಇದು ಗಡಗಡ ಎನ್ನುತ್ತಿತ್ತು. ಟೊರಾಬ ಎನ್ನುವ ಸ್ಥಳದಿಂದ ತಾತೆಯಾಮಕ್ಕೆ ಹೋದೆವು. ಈ ರೈಲಿನ ಪ್ರಯಾಣ ಆದಮೇಲೆ ಕೇಬಲ್ ಕಾರ್‌ನಲ್ಲಿ ಹೋಗಬೇಕು. ಎಲ್ಲ ಕಡೆ ಜನವೋ ಜನ. ನಂತರ ಎಲೆಕ್ಟ್ರಿಕ್ ಬಸ್ಸಿನಲ್ಲಿ ಹೋಗಬೇಕು. ಇದು ಸುರಂಗದಲ್ಲಿ ಹೋಗುತ್ತದೆ. ಪರಿಸರ ಸ್ನೇಹಿಯಾಗಿದೆ. ತಾತಯಾಮ ಪರ್ವತ ಬುಡದಲ್ಲಿ ಸುರಂಗ ಕೊರೆದಿದ್ದಾರೆ. ಇದರಲ್ಲಿ ಬಸ್ಸು ಹೋಗುತ್ತದೆ. ಇದನ್ನು ಹತ್ತುವುದಕ್ಕೆ ಸರತಿ ಸಾಲು ಇರುತ್ತದೆ. ನಿಂತು ಕಾಯಬೇಕು.

ಯುಕಿನೋ ಒಟಾನಿಹಿಮದ ಗೋಡೆಗಳು

ನಂತರ ಪಳನಿಯಲ್ಲಿರುವಂತೆ ರೋಪ್‌ವೇ ಇದೆ. ಕೇಬಲ್ ಕಾರಿನಲ್ಲಿ ಹೋಗಬೇಕು. ಇದರಲ್ಲಿ ಕೂರಲು ಸ್ಥಳ ಸಿಕ್ಕುವುದೇ ಕಷ್ಟವಾಯಿತು. ನಂತರ ಬಸ್ಸಿನಲ್ಲಿ ನಮ್ಮನ್ನು ಸುತ್ತಲು ಕರೆದುಕೊಂಡು ಹೋಗುತ್ತಾರೆ. ಬಸ್ಸಿನಲ್ಲಿ ಹೋಗುವಾಗ ಎರಡೂ ಕಡೆ ಹಿಮದ ಗೋಡೆಗಳು! ಇದಕ್ಕೆ ‘ಯುಕಿನೋ ಒಟಾನಿ’ ಎಂದು ಹೆಸರು. ಈ ಗೋಡೆಗಳು 50 ರಿಂದ 65 ಅಡಿ ಎತ್ತರ ಇದೆ. ದೂರದಲ್ಲಿ ಹಿಮದಲ್ಲೇ ಮುಳುಗಿರುವ ಅಲ್ಲೊಂದು, ಇಲ್ಲೊಂದು ಮರಗಳು. ಬಸ್ಸು ಮುರೊಡೋ ಸ್ಟೇಷನ್ ಎನ್ನುವ ಸ್ಥಳಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ಇಳಿದು ಬಿಸಿಯಾಗಿ ಏನನ್ನಾದರೂ ತಿನ್ನಬಹುದು. ದಾರಿಯಲ್ಲಿ ನಮಗೆ ಕಾಲು ನಡಿಗೆಯಲ್ಲಿ ಬೆಟ್ಟ ಹತ್ತುವವರೂ ಕಂಡರು. ಬಿಳಿಯ ಹಿಮದ ಮೇಲೆ ದೂರದಿಂದ ಬಹಳ ಚಿಕ್ಕದಾಗಿ ದೊಡ್ಡ ಚುಕ್ಕೆಗಳಂತೆ ಕಾಣಿಸಿದರು. ಎಷ್ಟು ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದುವರೆದರೂ ಮಾನವ ಪ್ರಕೃತಿಯ ಮುಂದೆ ಬಹಳ ಚಿಕ್ಕವನೇ ಅಲ್ಲವೇ? ತಾತೆಯಾಮ ಹಿಮದ ಗೋಡೆ 2390 ಮೀ ಎತ್ತರದಲ್ಲಿದೆ.

ಪ್ರವಾಸಿಗಳಿಗೆ ಮುರೊಡೋನಲ್ಲಿ ಓಡಾಡಲು ಚಿತ್ರಗಳನ್ನು ತೆಗೆದುಕೊಳ್ಳಲು ಸ್ಥಳಗಳಿವೆ. ಸ್ವಲ್ಪದೂರ ನಡೆದೂ ಹೋಗಬಹುದು. ಜನಸಂದಣಿ ಇಲ್ಲಿಯೂ ಜಾಸ್ತಿ ಇತ್ತು. ಇದೆಲ್ಲಾ ಏಪ್ರಿಲ್ ಮಧ್ಯದಿಂದ ಜೂನ್ ಮಧ್ಯದವರೆಗೆ ಇರುತ್ತದೆ. ನಂತರ ಎಲ್ಲ ಕಡೆ ಹಿಮದ ಚಳಿಯ ಸಾಮ್ರಾಜ್ಯ. ಯೂರೋಪಿನ ಮೌಂಟ್ ಟಿಟ್ಲಿಸ್ ಮತ್ತು ಯೂಂಫ್ರಾ ಎರಡೂ ನೆನಪಿಗೆ ಬಂದವು. ಎಲ್ಲವನ್ನು ನೋಡಿ ಚಿತ್ರಗಳನ್ನು ತೆಗೆದುಕೊಂಡು ವಾಪಸ್ಸು ಹೊರಟೆವು. ಈಗ ನಾವು ಜಪಾನಿನ ಅತಿ ಎತ್ತರದ ಕುರೊಬೆ ಡ್ಯಾಮ್ ಮೂಲಕ ನಡೆಯುವುದಾಗಿತ್ತು. ಇದು 186 ಮೀ ಇದೆ. ಇಂತಹ ಪ್ರವಾಸಗಳಲ್ಲಿ ಕೆಲವೆಡೆ ನಡೆಯಬೇಕಾಗಿರುತ್ತದೆ. ಕಾಲುಗಳು ಗಟ್ಟಿ ಇರಬೇಕಷ್ಟೆ. ನಾವು ಕುರೊಬೆ ಕೇಬಲ್‌ಕಾರ್ ನಿಲ್ದಾಣದಿಂದ ಡ್ಯಾಮಿನ ಮೇಲೆ ನಡೆದವು. ಇದೊಂದು ವಿಶಿಷ್ಟ ಅನುಭವ. ತಣ್ಣಗೆ ಗಾಳಿ ಬೀಸುತ್ತಿತ್ತು. ಕೆಳಗೆ ನದಿಯ ನೀರು ಹೆಪ್ಪುಗಟ್ಟಿತ್ತು. ಡ್ಯಾಮಿನಿಂದ ಧುಮುಕುತ್ತಿದ್ದ ನೀರೂ ಹಾಗೆಯೇ ಹೆಪ್ಪುಗಟ್ಟಿತ್ತು. ಈ ನೀರಿಗೆ ಕಾಲವೂ ಹೆಪ್ಪುಗಟ್ಟಿದೆಯಲ್ಲವೇ ಎನಿಸಿತು. ಏಕೆಂದರೆ ಮತ್ತೆ ಅದು ಹರಿಯುವಾಗ ಭೂತಕಾಲದವಾಗಿದ್ದು ಅಂದಿನ ದಿನದ ನೀರಾಗಿರುವುದಿಲ್ಲ ಅಲ್ಲವೇ? ಹರಿಯುವುದು ನೀರಿನ ಸ್ವಭಾವ. ಅಲ್ಲಿ ಈ ಸ್ವಭಾವವೇ ಹೆಪ್ಪುಗಟ್ಟಿದೆ! ಅಲ್ಲಲ್ಲೇ ನಿಂತ ನೀರು ಹೆಪ್ಪಾಗಿತ್ತು. ನನಗಂತೂ ಇದೊಂದು ವಿಚಿತ್ರ ಅನುಭವ. ಅಲ್ಲಲ್ಲೇ ಹೆಪ್ಪುಗಟ್ಟಿದ ನೀರು ಹತ್ತಿಯ ಉಂಡೆಗಳಂತೆ, ನೆಲದ ಮೇಲೆ ಇಳಿಯುತ್ತಿರುವ ಮೋಡಗಳಂತೆ ನನಗೆ ತೋರಿದುವು. ನಂತರ ಮತ್ತೆ ತಾತೆಯಾಮ ಸುರಂಗವನ್ನು ತಲುಪಿದೆವು. ಇಲ್ಲಿ ಸುಮಾರು ಒಂದೆರಡು ಕಿ.ಮೀ. ನಡೆಯಬೇಕು. ಮೇಲಾಗಿ ಮೂರು ಸ್ಥಳಗಳಲ್ಲಿ ಮೆಟ್ಟಿಲುಗಳನ್ನು ಹತ್ತಬೇಕು. ಎಲೆಕ್ಟ್ರಿಕ್ ಬಸ್ ಸ್ಟೇಷನ್ ಬಂದಿತು. ಸ್ವಲ್ಪ ಹೊತ್ತಿನಲ್ಲಿ ಬಸ್ಸು ಬಂದಿತು. ಸುರಂಗಮಾರ್ಗದಲ್ಲಿ ಬಂದು ಬೆಟ್ಟದ ಹೊರಗೆ ಬಂದೆವು. ಇಲ್ಲಿಂದ ಇನ್ನೊಂದು ಬಸ್‌ನಲ್ಲಿ ಪ್ರಯಾಣಿಸಿ ರೈಲು ನಿಲ್ದಾಣಕ್ಕೆ ಬಂದೆವು. ರೈಲಿನಲ್ಲಿ ನಗಾನೋ ನಿಲ್ದಾಣಕ್ಕೆ ಬಂದು ಮತ್ತೆ ಬುಲೆಟ್ ರೈಲಿನಲ್ಲಿ ಟೋಕಿಯೋ ತಲುಪಿದೆವು. ನಂತರ ಹೋಟೆಲ್ ತಲುಪಿ ಅಂದಿನ ಕಾರ್ಯಕ್ರಮಕ್ಕೆ ವಿದಾಯ ಹೇಳಿದೆವು.

(ಮುಂದುವರಿಯುವುದು)

ಈ ಬರಹದ ಹಿಂದಿನ ಸಂಚಿಕೆಯನ್ನು ಓದಲು ಈ ಕೊಂಡಿಯನ್ನು ಕ್ಲಿಕ್ಕಿಸಿ : http://surahonne.com/?p=33548

-ಡಾ.ಎಸ್.ಸುಧಾ, ಮೈಸೂರು

20 Responses

  1. ನಯನ ಬಜಕೂಡ್ಲು says:

    Nice

  2. ನಾಗರತ್ನ ಬಿ. ಅರ್. says:

    ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡು ಹೋಯಿತು . ಓದುತ್ತಾ ಓದುತ್ತಾ ಅಯ್ಯೋ ಇಷ್ಟು ಬೇಗ ಮುಗಿಯಿತೇ.. ಎನ್ನಿಸಿತು.ಮುಂದಿನ ಕಂತಿಗಾಗಿ..ಎದುರು ನೋಡುವಂತೆ ಇದೆ.. ಚಿತ್ರ ಗಳು ಪೂರಕವಾಗಿ ಬಂದಿವೆ ಧನ್ಯವಾದಗಳು ಮೇಡಂ

  3. ಮಹೇಶ್ವರಿ ಯು says:

    ಚೆನ್ನಾಗಿ ದೆ

  4. Anonymous says:

    ಫೋಟೋಗಳು.ಸೂಪರ್…ಸಮಯೋಚಿತ.
    ಬೆಳವಾಡಿ.. ಅಶ್ವತ್ಥ ನಾರಾಯಣ

  5. Dr.Jamunarani.v.mirle says:

    Thank you so much for sharing this wonderful travel experience. We are enjoying reading this , pl continue this

  6. Padma Anand says:

    ಆಸಕ್ತಿದಾಯಕ ಪ್ರವಾಸದ ವಿವರಣಾತ್ಮಕ ಚಂದದ ಬರಹ.

  7. ಶಂಕರಿ ಶರ್ಮ says:

    ಆಹಾ… ನಾನೇ ನಿಮ್ಮೊಂದಿಗೆ ರೈಲಿನಲ್ಲಿ ತಿಂಡಿ ತಿಂದ, ಜಪಾನ್ ಸುತ್ತಿದ ಅನುಭವವಾಯ್ತು..! ಪೂರಕ ಚಿತ್ರಗಳೊಂದಿಗೆ ಸುಂದರ ಪ್ರವಾಸ ಕಥನ ಖುಷಿಕೊಟ್ಟಿತು. ಧನ್ಯವಾದಗಳು ಸುಧಾ ಮೇಡಂ ಅವರಿಗೆ.

  8. K N Subba Rao says:

    ಅತಿ ಉತ್ತಮ ವಿವರಣೆಯಿಂದ ಮತ್ತು ಛಾಯಾಚಿತ್ರಗಳಿಂದ ತುಂಬಿದ ಲೇಖನ ಅಗ್ದಿ ಛಲೋಅದೆ. ನನಗೆ ಬಾಳ ಖುಷಿ ಆತ್ರಿ ಸುಧಾ ಮೇಡಮ್

  9. Samatha.R says:

    Interesting…

  10. Hema says:

    ನಿಮ್ಮೊಂದಿಗೆ ನಾವೂ ಜಪಾನ್ ನಲ್ಲಿದ್ದೇವೆ! ಪ್ರವಾಸಕಥನ ಸೊಗಸಾಗಿ ಮೂಡಿ ಬರುತ್ತಿದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: