ಗಂಟಿನ ನಂಟು…

Share Button

ಬೆಳಗ್ಗೆದ್ದು ಸ್ನಾನಮುಗಿಸಿ ದೇವರಿಗೊಂದು ಸೆಲ್ಯೂಟ್ ಹೊಡೆದು ಡೈನಿಂಗ್ ಹಾಲಿಗೆ ಬಂದು ಖುರ್ಚಿ ಎಳೆದುಕೊಂಡು ಕುಳಿತ ಗೌತಮ್. ಆ ಸದ್ದಿಗೆ ಗಂಡನ ಆಗಮನವನ್ನು ತಿಳಿದು ಸುಮನಾ ತಿಂಡಿಯ ತಟ್ಟೆಯನ್ನು ಟೇಬಲ್ ಮೇಲಿಟ್ಟು ಒಳನಡೆದಳು. ಇತ್ತೀಚೆಗೆ ಮಾತುಕತೆಯಿಲ್ಲದೆ ಸದಾ ಅನ್ಯಮನಸ್ಕಳಾಗಿರುತ್ತಿದ್ದ. ಹೆಂಡತಿ ಸುಮನಾಳನ್ನು ಕಂಡ ಗೌತಮನಿಗೆ ಅಯ್ಯೋ ಎನ್ನಿಸಿತು. ಕಳವಳಗೊಂಡು ಏನೋ ಅನಾಸಕ್ತಿಯಿಂದ ನರಳುತ್ತಿದ್ದಳು. ಎರಡು ತಿಂಗಳ ಹಿಂದೆ ಅವನ ಅತ್ತೆ ಮಂಗಳಮ್ಮನವರು ನಿಧನರಾದ ಸನ್ನಿವೇಶದತ್ತ ಅವನ ಚಿತ್ತ ವಾಲಿತು. ಅವರ ವಯಸ್ಸು ಎಂಭತ್ತಾದರೂ ಯಾವುದೇ ಖಾಯಿಲೆ ಕಸಾಲೆಯಿಲ್ಲದೆ ಗಟ್ಟಿಮುಟ್ಟಾಗಿದ್ದವರು ಅವರ ತಂಗಿಯ ಅಂತ್ಯಸಂಸ್ಕಾರಕ್ಕೆಂದು ಊರಿಗೆ ಹೋದವರು ಇದ್ದಕ್ಕಿದ್ದಂತೆ ಅವರೇ ಹೆಣವಾಗಿಬಿಟ್ಟರು. ಅದು ಹೇಗೆ? ತಿಳಿಯದು. ಅಲ್ಲದೆ ಅವರು ತಮ್ಮ ಎಲ್ಲಾ ಕೆಲಸದಲ್ಲೂ ಅಚ್ಚುಕಟ್ಟು. ಒಂದರಲ್ಲೂ ಉದಾಸೀನ ಮಾಡುತ್ತಿರಲಿಲ್ಲ. ಅಂಥವರು ಮಾವ ತೀರಿಹೋದಮೇಲೆ ”ಮನೆಯಲ್ಲಿದ್ದ ಒಡವೆಗಳೆಲ್ಲವನ್ನು ಬ್ಯಾಂಕಿನ ಲಾಕರಿನಲ್ಲಿ ಇಟ್ಟುಬಿಟ್ಟಿದ್ದೇನೆ ಸುಮನಾ. ಇನ್ನು ನಿಶ್ಚಿಂತೆ” ಎಂದಿದ್ದರು.

ಅದೇ ಸಮಯದಲ್ಲಿ ನಾವು ಉತ್ತರ ಭಾರತದ ಪ್ರವಾಸಕ್ಕೆಂದು ಹೊರಟಾಗ ತಾವೇ ಬಂದು ತಮ್ಮ ಮಗಳ, ಮೊಮ್ಮಗಳ ಒಡವೆಗಳನ್ನೂ ತೆಗೆದುಕೊಂಡುಹೋಗಿ ಅಲ್ಲಿಟ್ಟು ಬಂದಿದ್ದರು. ಪ್ರವಾಸ ಮುಗಿಸಿ ನಾವು ಹಿಂದಿರುಗಿದ ನಂತರ ಒಡವೆಗಳನ್ನು ”ತಂದುಕೊಡಲೇನೇ?” ಎಂದು ಕೇಳಿದ್ದರು. ”ಸದ್ಯಕ್ಕೆ ಬೇಡಬಿಡೀಮ್ಮ, ಅಲ್ಲೇ ಇರಲಿ ನೀನು ಹೇಳಿದಂತೆ ಅವು ಅಲ್ಲಿಯೇ ಸುರಕ್ಷಿತ ಎಂದಿದ್ದಳು ಸುಮನಾ. ಹಾಗೆ ಹಾಗೇ ಒಂದಾರು ತಿಂಗಳು ಕಳೆದೇ ಹೋದವು. ಛೇ..ಮಾವ ತೀರಿಹೋದಮೇಲೆ ನಾವೆಲ್ಲರೂ ಒಟ್ಟಿಗೇ ಇದ್ದಿದ್ದರೆ ! ಆ ಪ್ರಯತ್ನವೂ ನಡೆದಿತ್ತಲ್ಲ. ಒಬ್ಬರೇ ಏಕೆ ಇರುತ್ತೀರಿ? ನಮ್ಮಲ್ಲಿಗೇ ಬಂದುಬಿಡಿ” ಎಂದು ಕರೆದಾಗ ”ಬೇಡಪ್ಪಾ ಬೇಡ, ನೀವುಗಳು ಕಾಗೆ ಕರ್ರೆನ್ನುವಷ್ಟರಲ್ಲಿ ಹೊರಗೆ ಹಾರುತ್ತೀರ. ಮತ್ತೆ ಮನೆಗೆ ಹಿಂದಿರುಗುವುದು ಸೂರ್ಯ ಮುಳುಗಿದಮೇಲೆ. ಇನ್ನು ನಿಮ್ಮ ಅಕ್ಕಪಕ್ಕದವರೋ ಚುಟುಕು ಮಾತಿನವರು. ಬೇಸರವಾಗುತ್ತೆ. ಇಲ್ಲಾದರೋ ಬಹಳ ವರ್ಷಗಳಿಂದ ಇದ್ದೇನಲ್ಲಾ ಬಡಾವಣೆಯವರೆಲ್ಲ ಮುಖ ಪರಿಚಯ. ಅಲ್ಲದೆ ನನ್ನ ಸಂಪರ್ಕದಲ್ಲಿರುವ ಸಂಘಗಳ ಒಡನಾಟ ಇದ್ದೇ ಇರುತ್ತದೆ”ಎನ್ನುತ್ತಿದ್ದರು.

ಹಬ್ಬಹರಿದಿನಗಳಲ್ಲಿ ನಮ್ಮನ್ನೂ ತಮ್ಮ ಮನಗೇ ಕರೆದು ಔತಣಮಾಡಿ ಉಣಬಡಿಸಿ ಕಳುಹಿಸುತ್ತಿದ್ದರು. ಅಕ್ಕಪಕ್ಕದವರೊಡನೆ ಆತ್ಮೀಯರಾಗಿದ್ದರು. ಇನ್ನು ಮನೆ ಕೆಲಸದ ಕಮಲಮ್ಮ ನಮ್ಮ ಅತ್ತೆಯವರ ಬಲಗೈಬಂಟಿ. ಹೀಗಾಗಿ ಒಂಟಿಯಾಗಿದ್ದಾರೆಂಬ ಆತಂಕವೇನೂ ಇರಲಿಲ್ಲ. ಅಲ್ಲದೆ ನಮ್ಮ ಪುತ್ರ, ಪುತ್ರಿಯರಿಗೆ ಅವರ ಅಜ್ಜಿಯ ಶಿಸ್ತು, ನಿಯಮಗಳು…ಬೆಳಗ್ಗೆ ಬೇಗ ಏಳಬೇಕು, ಪೂಜಾಪಾಠ, ಅಷ್ಟೇ ಏಕೆ ಊಟತಿಂಡಿ..ಮಲಗುವವರೆಗೂ ಎಲ್ಲಕ್ಕೂ ನಿಗದಿಯಾದ ಸಮಯ. ಈಗಿನ ಕಾಲದ ಮಕ್ಕಳು ಕೇಳುತ್ತಾರೆಯೇ. ಒಮ್ಮೊಮ್ಮೆ ಅವರು ಬಂದಾಗಲೇ ಲಟಾಪಟಿ ನಡೆಯುತ್ತಿತ್ತು. ಒಂದೆಡೆ ತನ್ನನ್ನು ಹೆತ್ತಮ್ಮ, ಇನ್ನೊಂದೆಡೆ ತಾನೇ ಹೆತ್ತ ಮಕ್ಕಳು, ಸುಮನಾಗೆ ಯಾರ ಪರವನ್ನೂ ವಹಿಸಿ ಮಾತನಾಡಲಾರದೇ ಮೌನವಾಗಿರುತ್ತಿದ್ದಳು. ಹೀಗಾಗಿ ಅವಳು ತನ್ನಮ್ಮನನ್ನು ತಮ್ಮೊಡನೆ ಬಂದಿರಲಾಗಲೀ, ಅಥವಾ ನಾವುಗಳೇ ಅಲ್ಲಿಗೆ ಹೋಗಿ ಇರುವುದಾಗಲೀ ಆಯ್ಕೆ ಮಾಡಿಕೊಳ್ಳಲಾಗದೇ ಮುಂದೆ ನೋಡೋಣವೆಂದು ಸುಮ್ಮನಾಗಿದ್ದಳು. ಒಂದೇ ಊರಿನಲ್ಲಿರುತ್ತಿರುವುದರಿಂದ ಅವರನ್ನು ಉದಾಸೀನಮಾಡದೇ ವೇಳೆ ಸಿಕ್ಕಾಗಲೆಲ್ಲ ಅಲ್ಲಿಗೆ ಹೋಗಿ ಬರುವುದು, ಫೋನ್ ಮಾಡಿ ವಿಚಾರಿಸಿಕೊಳ್ಳುವುದು ಮಾಡುತ್ತಿದ್ದಳು.

ಮಾವನವರು ತೀರಿಹೋಗಿ ಸುಮಾರು ಐದುವರ್ಷದವರೆಗೆ ಯಾವ ತಾಪತ್ರಯವಿಲ್ಲದೆ ಸುಸೂತ್ರವಾಗಿ ನಡೆದುಕೊಂಡು ಹೋಗಿತ್ತು. ಈ ಅಂತರದಲ್ಲಿ ನಮ್ಮ ಮಕ್ಕಳ ವಿದ್ಯಾಭ್ಯಾಸ ಮುಗಿದು ಅವರ ವಿವಾಹಗಳನ್ನೂ ಮಾಡಿದ್ದೆವು. ಅವರಿಬ್ಬರೂ ವಿದೇಶಕ್ಕೆ ಹಾರಿದ್ದೂ ಆಗಿತ್ತು. ಸುಮನಾ ತನ್ನ ಬ್ಯಾಂಕ್ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದಳು. ನನ್ನದೋ ನಿವೃತ್ತಿಯಿರದ ಸ್ವಯಂ ಉದ್ಯೋಗ. ಸಾಕೆನಿಸಿದಾಗ ವಿರಾಮವೆಂದು ತೀರ್ಮಾನಿಸಿದ್ದೆನು. ಆಗ ನಮ್ಮತ್ತೆಯವರು ಮಗಳೇ ನಿನ್ನ ಗೂಡಿನ ಹಕ್ಕಿಗಳು ಗೂಡು ಬಿಟ್ಟದ್ದಾಯಿತು. ”ನೀವಿಬ್ಬರೇ ಯಾಕೆ ಅಲ್ಲಿದ್ದೀರ? ನನ್ನ ಗೂಡಿಗೇ ಬಂದುಬಿಡಿ” ಎಂದಿದ್ದರು. ನಾವಿಬ್ಬರೂ ಆಯಿತು ಬರೊಣವೆಂದಿದ್ದೆವು. ಆದರೆ ಇನ್ನೂ ಹೋಗಿರಲಿಲ್ಲ. ಹೋಗಿದ್ದಿದ್ರೆ ಈಗಾಗಿರುವ ನಿರೀಕ್ಷಿಸಿರಲಾಗದ ಎಡವಟ್ಟೊಂದು ಆಗುತ್ತಿರಲಿಲ್ಲ. ಅಷ್ಟರಲ್ಲಿ ”ರೀ” ಎಂಬ ಕರೆ ಗೌತಮನನ್ನು ವಾಸ್ತವಕ್ಕೆ ಎಳೆತಂದಿತು.

”ಏನು ಸುಮನಾ? ನೀನು ತಿಂಡಿ ತಿಂದೆಯಾ? ”ಎಂದು ಕೇಳಿದ ಗೌತಮ್.
”ಹೂ.. ತಿನ್ನುತ್ತೇನೆ. ಹೊಟ್ಟೆ ಕೇಳಬೇಕಲ್ಲಾ. ಅದು ಒತ್ತಟ್ಟಿಗಿರಲಿ, ಮತ್ತೆ ಮತ್ತೇ ನೀವು ಬೇಸರ ಮಾಡಿಕೊಳ್ಳಲ್ಲಾಂದ್ರೆ ಒಂದು ಮಾತು ”ಎಂದು ಉಲಿದಳು.
”ಅದೇನು ಹೇಳು” ಸುಮನಾ
”ರೀ..ಆ ಬ್ಯಾಂಕಿನ ಮ್ಯಾನೇಜರ್‌ನ ಮತ್ತೊಮ್ಮೆ ನೋಡೋಣವಾ?”

”ಹೇ..ಹೇ.. ಸುಮನಾ ನೀನಾ ಈ ಮಾತನ್ನು ಹೇಳುತ್ತಿರುವುದು. ಅಲ್ಲಾ ಬ್ಯಾಂಕಿನಲ್ಲೇ ಕೆಲಸ ಮಾಡಿದವಳು ನೀನು. ಅಲ್ಲಿನ ರೂಲ್ಸ್ ರೆಗ್ಯುಲೇಷನ್ ಬಗ್ಗೆ ಚೆನ್ನಾಗಿ ತಿಳಿದಿರುವವಳು. ಅಲ್ಲದೆ ಬ್ಯಾಂಕಿನ ಲಾಕರಿನಿಂದ ಅತ್ತೆಯವರು ತೆಗೆದದ್ದಕ್ಕೆ ಅಲ್ಲಿ ದಾಖಲೆಯಿದೆ. ದಿನಾಂಕ, ಸಮಯ ಎಲ್ಲ ಬರೆದಿದ್ದಾರೆ. ಆದರೆ ಪುನಃ ಒಡವೆಗಳನ್ನು ಹಿಂತಿರುಗಿ ಇರಿಸಿದ್ದಕ್ಕೆ ಸುಳಿವೇ ಇಲ್ಲ. ಪಾಪ ಆ ಮ್ಯಾನೇಜರ್ ನಮ್ಮ ಪರದಾಟ ನೋಡಿ ಕೀ ಕೊಟ್ಟಿದ್ದರು. ತೆಗೆಸಿ ನಾನೊಮ್ಮೆ ನೀನೊಮ್ಮೆ ನೋಡಿದೆವು. ಒಳಗೇನಿದೆ? ಖಾಲಿ ಬಾಕ್ಸ್. ಮತ್ತೊಮ್ಮೆ ಹೋದರೆ ಅವರು ಏನೆಂದಾರು? ಸುಮ್ಮನಿರು ಊರಿಗೆ ಹೋಗಿರುವ ಕಮಲಮ್ಮ ಬರಲಿ. ಎಲ್ಲ ವಿಷಯ ವಿಚಾರಿಸಿ ತಿಳಿಯೋಣ. ಅದು ನಮ್ಮ ಹಣೆಯಲ್ಲಿ ಬರೆದಿದ್ದರೆ ದಕ್ಕುತ್ತದೆ. ಇಲ್ಲದಿದ್ದರೆ ಇಲ್ಲ‌”ಎಂದನು.

”ಅಯ್ಯೋ…ನಮ್ಮ ಅಮ್ಮ ತನಗೆ ಸೇರಿದ ಸಮಸ್ಥ ಆಸ್ತಿಯನ್ನು ನನ್ನ ನಂತರ ನನ್ನ ಮಗಳಿಗೇ ಸೇರಬೇಕೆಂದು ಉಯಿಲು ಬರೆದು ಭದ್ರಮಾಡಿದ್ದಾರೆ. ಮನೆ, ಹಣ ಎಲ್ಲ ಸರಿಹೋಯಿತು. ಆದರೆ ಆ ಒಡವೆಗಳು ! ಅವನ್ನು ಅವರು ಊರಿಗೆ ಹೋಗುವ ಮೊದಲು ಬ್ಯಾಂಕಿನಿಂದ ತರುವ ಆವಶ್ಯಕತೆಯೇನಿತ್ತು? ಒಡವೆ ತಂದಿರುವ ದಿನಾಂಕ ನೋಡಿದರೆ ಅಮ್ಮ ಊರಿಗೆ ಹೊರಡುವ ಕೆಲವೇ ದಿವಸ ಮುಂಚೆ ತಂದಿದ್ದಾರೆ. ಸಂಘಸಂಸ್ಥೆಗಳ ಸಮಾರಂಭಗಳೇನಾದರೂ ಇದ್ದರೆ ಒಂದೆರಡನ್ನು ತೆಗೆದು ಉಳಿದುವನ್ನು ಅಲ್ಲೇ ಇಡುತ್ತಿದ್ದರು.

”ಹಾ..ನಿಲ್ಲಿಸು ಮಹಾರಾಯಿತಿ, ನಿಮ್ಮ ಅಮ್ಮ ಎಂದಾದರು ಬ್ಯಾಂಕಿನ ಲಾಕರಿನಿಂದ ಒಡವೆಗಳನ್ನು ತೆಗೆಯುವಾಗ ಅಲ್ಲಿಯೇ ಕೆಲವನ್ನು ಮಾತ್ರ ಆರಿಸಿಕೊಂಡು ತಂದಿದ್ದುಂಟಾ? ನೀನೇನಾದರೂ ಪ್ರಶ್ನಿಸಿದರೆ ಅಂತಹ ಕೆಲಸ ಯಾವತ್ತೂ ಮಾಡಬಾರದು. ಅಪಾಯ, ಆ ಗಡಿಬಿಡಿಯಲ್ಲಿ ಯಾವುದಾದರೊಂದು ಕೆಳಗೆ ಬಿದ್ದೋ, ಪಕ್ಕದಲ್ಲಿ ಎತ್ತಿಟ್ಟು ಮರೆತರೋ ನಷ್ಟ ಯಾರಿಗೆ? ಅನುಮಾನ ಬಂದರೂ ಯಾರನ್ನು ಕೇಳುವುದು? ಎಂದು ತಂದರೆ ಪೂರ್ತಿಯಾಗಿ ಗಂಟನ್ನೇ ಮನೆಗೆ ತಂದು ಬೇಕದ್ದನ್ನು ಆರಿಸಿಕೊಂಡ ನಂತರ ಉಳಿದವನ್ನು ಮತ್ತೆ ಲಾಕರಿನಲ್ಲಿ ಇಟ್ಟು ಬರುತ್ತಿದ್ದರು. ಎಂದಿನಂತೆ ಮನೆಗೆ ತಂದಿದ್ದಾರೆ. ಅಷ್ಟರಲ್ಲಿ ನಿಮ್ಮ ಚಿಕ್ಕಮ್ಮನ ಸಾವಿನ ಸುದ್ಧಿ ಕೇಳಿ ತಕ್ಷಣ ಹೊರಟುಹೋಗಿದ್ದಾರೆ. ಅನಿರೀಕ್ಷಿತವಾಗಿ ಅವರೂ ತಂಗಿಯನ್ನೇ ಹಿಂಬಾಲಿಸಿದರು” ಎಂದ ಗೌತಮ್.

ಗಂಡನ ಮಾತುಗಳನ್ನು ಕೇಳಿ ಸುಮನಾ ”ಹೌದುರೀ, ನೀವು ಹೇಳುವುದೆಲ್ಲವೂ ಸರಿ. ಆದರೆ ನಮ್ಮ ಅಮ್ಮ ಕಷ್ಟಪಟ್ಟು ನಮ್ಮಪ್ಪ ಕೊಡುತ್ತಿದ್ದ ಹಣದಲ್ಲಿ ಆಗಿಷ್ಟು ಈಗಿಷ್ಟು ಉಳಿಸಿ ಮಾಡಿಸಿದ್ದು, ನನಗಾಗಿ ಕೊಟ್ಟಿದ್ದು ಕೆಲವು, ಮೊಮ್ಮಗಳಿಗಾಗಿ ಪ್ರೀತಿಯಿಂದ ಮಾಡಿಸಿದ್ದು ಹಲವು. ಅವುಗಳಿಗೆ ಈಗ ಬೆಲೆ ಕಟ್ಟಲಾಗದು. ಅದಕ್ಕೇ ನನಗೆ ತುಂಬ ದುಃಖವಾಗುತ್ತಿದೆ. ಹೋಗಲಿ ಅವರ ಬಲಗೈ ಬಂಟಿ ಕಮಲಮ್ಮನ್ನ ಕೇಳೋಣವೆಂದು ಕೊಂಡರೆ ಆಕೆ ಊರಿಗೆ ಹೋಗಿ ಒಂದು ತಿಂಗಳ ಮೇಲಾಯ್ತು. ಪತ್ತೇನೇ ಇಲ್ಲ” ಎಂದು ಗೊಣಗಿದಳು ಸುಮನಾ.

”ಅಲ್ಲವೇ ಅಗಾಗ್ಗೆ ಫೋನ್ ಮಾಡುತ್ತಿರುತ್ತಾಳೆ ಅದೇ ಕಮಲಮ್ಮ. ನೀನೇ ಕೇಳಬಹುದಿತ್ತಲ್ಲಾ? ಅವಳಿಲ್ಲದೆ ನಿಮ್ಮ ಅಮ್ಮ ಯಾವ ಕೆಲಸವನ್ನೂ ಒಬ್ಬರೇ ಮಾಡಿದ್ದಿಲ್ಲ. ಎಲ್ಲಿಗೂ ಹೋಗಿದ್ದಿಲ್ಲ. ಬಸವನ ಹಿಂದೆ ಬಾಲದಂತೆ ಯಾವಾಗಲೂ ಅವರ ಹಿಂದೆಯೇ ಇರುತ್ತಿದ್ದವಳು” ಎಂದ ಗೌತಮ್.

”ಹೇಗೆ ಕೇಳಲಿ? ಬಾಯೇ ಬರುತ್ತಿಲ್ಲ. ಪೋನ್ ಮಾಡಿದಾಗಲೆಲ್ಲ ಅವಳದ್ದೇ ಏನೇನೋ ತಾಪತ್ರಯಗಳ ಸರಮಾಲೆಯನ್ನೇ ಹೇಳಿಕೊಳ್ಳಲು ಪ್ರಾರಂಭಿಸಿಬಿಡುತ್ತಾಳೆ. ಅಮ್ಮನನ್ನು ನೆನಪಿಸಿಕೊಂಡು ಅಳುತ್ತಿರುತ್ತಾಳೆ. ನಂತರ ನೀವೇನೂ ಚಿಂತೆಮಾಡಬೇಡಿ ಚಿಕ್ಕಮ್ಮಾ, ನಮ್ಮ ಜಮೀನಿನ ವ್ಯವಹಾರ ಮುಗಿದಕೂಡಲೇ ನಮ್ಮ ಹೈಕಳನ್ನು ಕರೆದುಕೊಂಡು ಬಂದುಬಿಡ್ತೀನಿ. ದೊಡ್ಡಮ್ಮನ ಮನೆಯನ್ನೆಲ್ಲಾ ನೇರಪ್ಪು ಮಾಡಿಕೊಡುತ್ತೇನೆ. ನಿಮ್ಮಮನೆ ಬಾಡಿಗೆಕೊಟ್ಟು ಇಲ್ಲಿಗೇ ಬಂದುಬಿಡಿ. ನೀವಂತೂ ಕೆಲಸ ಬಿಟ್ಟಿದೀರ. ಗೌತಮಣ್ಣ ಇಲ್ಲಿಂದಲೇ ಅವರ ಕೆಲಸಕ್ಕೆ ಹೋಗಬಹುದು. ನನ್ನ ಠಿಕಾಣಿ ಇದ್ದೇ ಇದೆಯಲ್ಲಾ. ಹಿಂದಿನ ಮನೇಲಿ. ಯಾವುದಕ್ಕೂ ಚಿಂತೆ ಮಾಡಬೇಡಿ. ಎಂದೆಲ್ಲಾ ಹೇಳ್ತಾಳೆ. ಯಾವುದಾದರೂ ಒಂದು ಮಾತನಾಡಿದರೆ ನಾನೂ ಕೇಳಬಹುದು. ಅತ್ತ ಊರಿಗೆ ಹೋಗಿ ಅಲ್ಲಿಯೇ ಶಿವನಪಾದ ಸೇರಿದ ಅಮ್ಮನ ಕಾರ್ಯಗಳೆಲ್ಲವನ್ನೂ ಮುಗಿಸಿ ಬರುವುದಕ್ಕೆ ಹದಿನೈದು ದಿನಗಳ ಮೇಲಾಯ್ತು. ನಾವುಗಳು ಹಿಂದಿರುಗಿ ಬರುವಷ್ಟರಲ್ಲಿ ಕಮಲಮ್ಮನಿಗೆ ಅವಳ ಊರಿನಿಂದ ಬುಲಾವ್ ಬಂದಿತ್ತು. ಆಗ ಇವೆಲ್ಲ ಹುಡುಕಾಟ ಇನ್ನೂ ನಡೆದಿರಲಿಲ್ಲ. ಅಥವಾ ಅವಳೇ ಏನಾದರೂ..”

”ಛೇ..ಛೇ.. ಬಿಡ್ತು ಅನ್ನು ಸುಮನಾ, ನಿನ್ನಿಂದ ಬರುವ ಮಾತೇ ಇದು. ಅಪ್ಪಿತಪ್ಪಿ ಕೂಡ ಈ ರೀತಿ ಯೋಚನೆ ಮಾಡಬೇಡ. ನಿಮ್ಮ ಅಮ್ಮ ಕಮಲಮ್ಮನನ್ನು ಕೆಲಸದವಳ ರೀತಿಯಲ್ಲಿ ನೋಡಿಕೊಳ್ಳುತ್ತಿರಲಿಲ್ಲ. ಅವಳೂ ಅಷ್ಟೇ ನಿಯತ್ತಿನವಳು”
”ಅದು ನನಗೂ ಗೊತ್ತು.. ಕಮಲಮ್ಮ ಊರಿನಿಂದ ಬರಲಿ ಆಮೇಲೆ ಮುಂದಿನ ಮಾತು”
”ಹಾಗೆಂದು ಅವಳು ಹಿಂದಿರುಗಿದ ನಂತರ ತಕ್ಷಣ ಈ ವಿಷಯ ತೆಗೆಯಬೇಡ. ಬಹಳ ಸೂಕ್ಷ್ಮವಾದ ವಿಷಯ. ಯಾರ ಮುಂದೆಯೂ ಈ ವಿಷಯ ಬಾಯಿಬಿಡಬೇಡ. ಕಷ್ಟಪಟ್ಟಿರುವುದು ಎಲ್ಲಿಯೂ ಹೋಗುವುದಿಲ್ಲ ”ಎಂದು ಹೆಂಡತಿಗೆ ತಾಕೀತು ಮಾಡಿದ ಗೌತಮ್ ತನ್ನ ಕೆಲಸ ಗಮನಿಸಲು ಹೊರಟ.

ಗಂಡ ಏನೇ ಸಮಾಧಾನ ಹೇಳಿದ್ದರೂ ಸುಮನಾ ತನ್ನ ಪ್ರಯತ್ನವನ್ನು ನಡೆಸಿಯೇ ಇದ್ದಳು. ಮಾರನೆಯ ದಿನದಿಂದ ಬೆಳಗ್ಗೆಯೇ ಬೇಗನೆದ್ದು ಮನೆಗೆಲಸ ಮುಗಿಸಿ ಗೌತಮನಿಗೆ ತಿಂಡಿಕೊಟ್ಟು ಮಧ್ಯಾನ್ಹದ ಊಟದ ಡಬ್ಬಿ ಕಟ್ಟಿಕೊಟ್ಟು ತನಗೆ ಮಧ್ಯಾನ್ಹಕ್ಕೆ ಊಟದ ಡಬ್ಬಿ ಹಿಡಿದು ಅಮ್ಮನ ಮನೆಗೆ ಬರುತ್ತಿದ್ದಳು. ಮನೆಯಲ್ಲಿ ಎಲ್ಲ ಕಡೆಯಲ್ಲಿ ಹುಡುಕಾಟ ನಡೆಸುತ್ತಿದ್ದಳು. ಹಳೆಯ ಪೇಪರ್, ಮ್ಯಾಗಜಿನ್, ಹಳೆಯ ಕೆಲವು ಸಾಮಾನುಗಳನ್ನು ಗುಡ್ಡೆಹಾಕಿ ವಿಲೇವಾರಿ ಮಾಡುವಾಗ ಪ್ರತಿಯೊಂದನ್ನೂ ಚೆನ್ನಾಗಿ ಪರೀಕ್ಷಿಸುತ್ತಿದ್ದಳು. ಅಡುಗೆ ಮನೆಯಲ್ಲಿದ್ದ ಡಬ್ಬಗಳು, ಪಾತ್ರೆ ಪರಡಿಗಳು, ಚಜ್ಜ್ಜಾಗಳ ಮೇಲೆ, ವಾರ್ಡ್‌ರೋಬ್‌ಗಳ ಒಳಗೆ, ಕೊನೆಗೆ ಮಂಚದ ಕೆಳಗಿದ್ದ ಡ್ರಾಗಳನ್ನೂ ಎಳೆದು ಅಲ್ಲಿದ್ದ ಎಕ್ಸ್ಟ್ರಾ ದಿಂಬು, ಹೊದಿಕೆ, ಕರ್ಟನ್ಗಳು, ಎಲ್ಲವನ್ನೂ ಪರೀಕ್ಷೆ ಮಾಡುತ್ತಿದ್ದಳು. ಇಷ್ಟಾದರೂ ಊಹುಂ.. ಎಲ್ಲಿಯೂ ಒಡವೆಗಳ ಸುಳಿವಿಲ್ಲ. ಹೀಗೇ ಮತ್ತೊಂದು ತಿಂಗಳೂ ಕಳೆದುಹೋಯಿತು. ಗೌತಮನಂತೂ ಹೆಂಡತಿಯ ರೀತಿ ಕಂಡು ”ಸುಮನಾ ಏಕೆ ಈ ಕೆಲಸಗಳನ್ನೆಲ್ಲ ಒಬ್ಬಳೇ ಮೈಮೇಲೆ ಹಾಕಿಕೊಂಡು ಮಾಡುತ್ತೀಯಾ. ಕಮಲಮ್ಮ ಬಂದಮೇಲೆ ಅವಳ ಕೈಯಲ್ಲಿ ಮಾಡಿಸಿದರಾಯಿತು. ನಾವೇನು ನಾಳೆಯೇ ಇಲ್ಲಿಗೆ ಶಿಫ್ಟ್ ಆಗುತ್ತಿಲ್ಲವಲ್ಲಾ” ಎಂದು ಹೇಳುತ್ತಿದ್ದ.

ಕೆಲಸ ಬಿಟ್ಟಮೆಲೆ ಹೊತ್ತುಹೋಗುವುದೇ ಕಷ್ಟವಾಗಿದೆ. ಕಮಲಮ್ಮ ಬರುವಷ್ಟರಲ್ಲಿ ಸ್ವಲ್ಪ ಹಳೆಯ ಸಾಮಾನುಗಳನ್ನು ಹೊರಹಾಕಿದರೆ ಮಿಕ್ಕದ್ದು ಸುಲಭವಾಗುತ್ತೆಂದು ತಾನು ಮಾಡುತ್ತಿರುವ ಕೆಲಸದ ಬಗ್ಗೆ ಹೇಳಿ ಅವನನ್ನು ಸುಮ್ಮನಾಗಿಸಿದ್ದಳು.
ಹೀಗೆ ಒಂದುದಿನ ತನ್ನ ತಡಕಾಟ ಹುಡುಕಾಟದಲ್ಲಿ ನಿರತಳಾಗಿದ್ದ ಸುಮನಾಳಿಗೆ ಕಾಲಿಂಗ್ ಬೆಲ್ಲು ಸದ್ದಾಗಿದ್ದು ಕೇಳಿಸಿತು. ಗಡಿಯಾರದ ಕಡೆ ದೃಷ್ಟಿ ಹರಿಸಿದಳು. ಅರೆ ! ಇನ್ನೂ ನಾಲ್ಕು ಗಂಟೆ. ಇಷ್ಟು ಹೊತ್ತಿಗೆ ಗೌತಮ್ ಬರುವುದಿಲ್ಲ. ಮತ್ಯಾರಿರಬಹುದು ಎಂದು ಯೊಚಿಸುತ್ತಾ ವೆರಾಂಡಾದ ಕಿಟಕಿಯಲ್ಲಿ ಬಗ್ಗಿ ನೋಡಿದಳು. ಕೆಲಸದ ಕಮಲಮ್ಮ ಹೊರಗಿನ ಮೆಟ್ಟಿಲಮೇಲೆ ಚೀಲಗಳನ್ನು ಇಟ್ಟು ನಿಂತಿದ್ದಾಳೆ. ಮನದಲ್ಲೆ ಹಿಗ್ಗುತ್ತಾ ತಡಮಾಡದೆ ಬಾಗಿಲು ತೆರೆದಳು.

ಆಕೆ ಬಾಗಿಲು ತೆರೆದದ್ದೇ ತಡ ”ಅಲ್ಲಾ ಚಿಕ್ಕಮ್ಮಾ ಗೇಟು ತೆಗೆದುಹಾಕಿ ಒಳಗೇನು ಮಾಡುತ್ತಿದ್ದೀರಿ? ನಾನು ಆ ಮನೆ ಕಡೆ ಹೋಗಿದ್ದೆ. ನೀವು ಬೆಳಗ್ಗೇನೇ ಇಲ್ಲಿಗೆ ಹೋಗಿದ್ದಾರೆಂದರು ಅಂಗಡಿ ಕಿಟ್ಟಪ್ಪ. ನಾನು ಬರ್‍ತಿನಿ ಅಂತ ಹೇಳಿರಲಿಲ್ಲವಾ. ನೀನೊಬ್ಬಳೇ ಏನು ಮಾಡುತ್ತಿದ್ದೀಯಾ. ನಿಮಗೆ ಫೋನ್ ಮಾಡೋಣಾಂದ್ರೆ ಆ ನನ್ನ ಭಾವನ ಮೊಮ್ಮಗ ಹೋದವಾರ ನನ್ನ ಮೊಬೈಲನ್ನ ನೀರಿಗೆ ಬೀಳಿಸಿಬಿಟ್ಟ. ಅದು ಕೆಟ್ಟು ಹೋಗದೆ. ಬೇರೆಕಡೆಯಿಂದ ಮಡೋಣವೆಂದರೆ ನನಗೆ ನಿಮ್ಮ ನಂಬರೇ ಜ್ಞಪ್ತಿಗೆ ಬರುತ್ತಿಲ್ಲ. ಹೆಂಗೂ ಹೋಗ್ತೀನಲ್ಲ ಅಂತ ಸುಮ್ಮಗಾದೆ. ಇಲ್ಲಿ ನೋಡಿದ್ರೆ ನೀವೇ ಎಲ್ಲ ಶುರೂ ಹಚ್ಕೊಂಡಿದ್ದೀರಾ” ಎಂದು ಆಕೆ ತನ್ನ ತಾರಕ ಸ್ವರದಲ್ಲಿ ಹೇಳುತ್ತಾ ”ಎಲ್ಲಿ ಆ ಹಿಂದುಗಡೆ ಮನೆ ಕೀಲಿಕೈ ತತ್ತಾ” ಎಂದೋಳು ಇಲ್ಲೇ ಅದೆ ಎಂದು ತೆಗೆದುಕೊಂಡು ತಾನು ತಂದಿದ್ದ ಸಾಮಾನುಗಳನ್ನು ಔಟ್ಹೌಸಿನಲ್ಲಿಟ್ಟು ನಲ್ಲಿಯಲ್ಲಿ ಕೈಕಾಲು ತೊಳೆದು ಬಂದಳು ಕಮಲಮ್ಮ. ಅವಳ ಚಟುವಟಿಕೆಗಳನ್ನು ನೋಡುತ್ತಾ ನಿಂತಿದ್ದ ಸುಮನಾ ಅವಳೊಂದಿಗೆ ಹೇಗೆ ಮಾತು ಪ್ರಾರಂಭಿಸಬೇಕು ಎಂದು ತಿಳಿಯದೇ ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸಿದಳು.

ಒಂದು ಕಡೆಯಿಂದ ಎಲ್ಲ ರೂಮುಗಳನ್ನೂ ಎಡತಾಕುತ್ತಾ ಬಂದ ಕಮಲಮ್ಮ ”ಅಮ್ಮಾ..ಏ..ಚಿಕ್ಕಮ್ಮಾ ಇದೇನು ಹಳೇಪಳೇವನ್ನೆಲ್ಲ ಕಿತ್ತು ಒಗೆದಂಗೆ ಅದೆ. ಒತ್ತಾರೇನೆ ಬಂದರಂತೆ, ಒಟ್ಟೆಗೇನು ಮಾಡಿಕೊಳ್ಳುತ್ತಿದ್ರಿ?” ಎಂದು ಪ್ರಶ್ನ್ನಿಸಿದಳು.
”ಹಾ..ಕಮಲಮ್ಮಾ ಅಲ್ಲಿಂದಲೇ ಊಟ ತರ್‍ತಿದ್ದೆ. ಈಗ ನಿನಗೇನು ಬೇಕು ಹೇಳು. ದೋಸೆ ಹಿಟ್ಟಿದೆ ಎರಡು ನಿಮಿಷದಲ್ಲಿ ಮಾಡಿಕೊಡ್ತೀನಿ ಎಂದಳು ಸುಮನಾ.”
”ಹೇ ನನಗೇನೂ ಬೇಡ. ಊರಿಂದ ಹೊಂಟಾಗಲೇ ಗಡದ್ದಾಗಿ ಉಂಡು ಬಂದಿದ್ದೀನಿ. ರಾತ್ರಿಗಂಟ ಇನ್ನೇನೂ ಬೇಡ. ಎಲಾ ಇತ್ಲಾಗಿ ಬನ್ನಿ. ಹಾಲು ತಂದಿದ್ದೀನಿ. ಕಾಯೋಕೆ ಇಡಬೇಕು. ಕಾಫಿ ಮಾಡ್ತೀನಿ ಎಂದು ಅಡುಗೆ ಮನೆಗೆ ಹೋದಳು. ಸುಮನಾ ಪಕ್ಕಕ್ಕೆ ಸರಿದು ನಿಂತು ಅವಳಿಗೆ ಜಾಗಕೊಟ್ಟು ಊರಿನ ಕೆಲಸವೆಲ್ಲ ಮುಗೀತಾ?” ಎಂಂದಳು.

”ಹೂ..ಎಲ್ಲಾ ಒಂದು ಘಟ್ಟಮುಟ್ಟಿತು. ಪಟ್ಟಾಗಿ ಕೂರಲಿಲ್ಲಾಂದ್ರೆ ನನಗೆ, ನನ್ನ ಮಕ್ಕಳಿಗೆ ಚಿಪ್ಪೇ ಗತಿ ಆಗ್ತಿತ್ತು. ದೊಡ್ಡಮ್ಮಾರು ಹೇಳಿದಂಗೆ ನಮಗೆ ದಕ್ಕುವಂತಿದ್ರೆ ದಕ್ಕೇದಕ್ತದೆ. ಅಂಗೇ ಆಯ್ತು” ಎಂದಳು.

ಇದೇ ಸರಿಯಾದ ಸಮಯವೆಂದು ಸುಮನಾ ” ಕಮಲಮ್ಮಾ ನೀವೇನೂ ತಿಳಿದುಕೊಳ್ಳಲ್ಲಾಂದ್ರೆ ಒಂದು ಮಾತು” ಎಂದಳು.
”ಅದೇನು ಹೇಳಮ್ಮಾ ನಾನೇನು ನಿಮಗೆ ಹೊಸಬಳೇ. ನೀವು ಐದುತಿಂಗಳ ಮಗುವಾಗಿದ್ದಾಗ ಈ ಮನ್ಯಾಗೆ ದಿಕ್ಕುದೆಸೆಯಿಲ್ಲದೆ ಕೆಲಸ ಕೇಳಿಕೊಂಡು ಬಂದವಳು ನಾನು. ಆಗ ನಿಮ್ಮಮ್ಮ ಅದೇ ನನ್ನ ದೊಡ್ಡಮ್ಮ ಇರಲು ತಾವು ಕೊಟ್ಟು ಉಡಲು ಬಟ್ಟೆ, ಉಣ್ಣಲು ಹಿಟ್ಟು ಕೊಟ್ಟು ಕಾಪಾಡಿದರು. ಇವತ್ತೇನಾದ್ರೂ ನಾನೂ, ನನ್ನ ಮಕ್ಕಳು ಬದುಕಿದ್ದೀವೆ ಅಂದ್ರೆ ಆ ತಾಯಿಯಿಂದ. ಏನು ಬೇಕಾದರೂ ಕೇಳಿ” ಎಂದಳು ಕಮಲಮ್ಮ.

”ಏನಿಲ್ಲ ಅಮ್ಮ ಚಿಕ್ಕಮ್ಮನ ಊರಿಗೆ ಹೊಗುವ ಒಂದೆರಡು ದಿನ ಮುಂಚೆ ಬ್ಯಾಂಕಿಗೆ ಹೋಗಿದ್ದರಾ?”
”ಹೂ. ನಾನೂ ಅವರ ಜೊತೆ ಹೋಗಿದ್ದೆ. ಅದೇನೋ ವಸಿ ದುಡ್ಡು ಬೇಕೂಂತ ತಗೊಂಡ್ರು. ಆಮ್ಯಾಕೆ ಅಮ್ಮ ಒಂದ್ನಿಮಿಷ ತಡಿ” ಎಂದವಳೇ ಔಟ್ಹೌಸಿನ ಕಡೆಗೆ ಸರಸರ ನಡೆದುಹೋದಳು. ಹತ್ತು ನಿಮಿಷವಾಗಿರಬಹುದು. ಒಂದು ಹಳೆಯ ಬಟ್ಟೆಗಂಟು ಹಿಡಿದು ಬಂದಳು ಕಮಲಮ್ಮ ”ಇದರಲ್ಲಿ ಒಡವೆಗಳನ್ನು ಇರಿಸಿರುವ ಚೀಲಗಳಿವೆ. ಅದೇನೋ ಫಂಕ್ಷನ್ ಅದೇಂತ ಬ್ಯಾಂಕಿನಿಂದ ದೊಡ್ಡಮ್ಮಾರು ತಂದ್ರು. ಹೊಳ್ಳಿ ಮಡಗಾಕೆ ಸಂಜೆ ಆಯ್ತು. ಮಾರನೆಯ ದಿನ ಆಯ್ತವಾರ. ಬ್ಯಾಂಕಿಗೆ ರಜ. ಸೋಮವಾರ ಇಟ್ರಾಯ್ತು ಅಂದ್ರು. ಅಷ್ಟೊತ್ತಿಗೆ ನಿಮ್ಮ ಚಿಕ್ಕಮ್ಮನ ಸುದ್ಧಿ ತಿಳಿದು ನಿಂತ ಹೆಜ್ಜೇಲೇ ಹೊರಟುಹೋದರು. ಆಗ ದೊಡ್ಡಮ್ಮನೊರು ಇದನ್ನ ನನ್ನ ಕೈಲಿಟ್ಟು ಭದ್ರವಾಗಿ ಮಡಗು ಕಮಲ. ನಾನು ಊರಿಂದ ಬಂದಮೇಲೆ ಬ್ಯಾಂಕಿಗೆ ಇಟ್ರಾಯ್ತು ಅಂದರು. ಹೋದವರು ತಾವೂ ಅವಸರ ಅವಸರವಾಗಿಯೇ ಶಿವನ ಪಾದ ಸೇರಿಕೊಂಡುಬಿಟ್ಟರು. ಅಲ್ಲಿನ ಕೆಲಸಗಳನ್ನೆಲ್ಲ ಮುಗಿಸಿ ವಾಪಸಾಗ್ತಿದ್ದಂಗೆ ನಮ್ಮನೆ ಹರಿಕಥೆ ಶುರುವಾಯ್ತು. ನಾನೂ ಕಬ್ಬಿಣ ಕಾದಾಗಲೇ ಬಡೀಬೇಕು ಅಂತ ಎದ್ದೆನೋ ಬಿದ್ದೆನೋ ಅಂತ ಊರಿಗೆ ಓಡಿದೆ, ಇದು ನೆಪ್ಪಿಗೆ ಬರಲೇ ಇಲ್ಲ. ನೀವು ಅಷ್ಟೊಂದು ಕಿತ ಫೋನ್ ಮಾಡಿದ್ರಲ್ಲಾ ಒಂದು ಸಾರಿನಾದ್ರೂ ಇದರ ಬಗ್ಗೆ ಕೇಳ್ನೇ ಇಲ್ಲ. ನಾನು ದೊಡ್ಡ ಮನೇಲಿ ಇದನ್ನು ಇಡೋದು ಬೇಡಾಂತ ಹಳೆ ಬಟ್ಟೆ ಸುತ್ತಿ ಹಿಂದುಗಡೆ ಮನೆಯಲ್ಲಿ ಭದ್ರವಾಗಿ ಇರಿಸಿದ್ದೆ. ಈಗ ನೀವು ಹೇಳಿದ ತಕ್ಷಣ ನೆಪ್ಪಾಯ್ತು. ಕಮಲಮ್ಮನ ಕೈಯಿಂದ ಗಂಟನ್ನು ಪಡೆದುಕೊಂಡ ಸುಮನಾಳಿಗೆ ಇದುವರೆಗೆ ಅನುಭವಿಸಿದ ಕಳವಳ, ಆತಂಕ, ದುಃಖ, ನಿರಾಸೆಗಳೆಲ್ಲ ಮಾಯವಾಗಿ ನಂಬಿಕಸ್ಥೆ ಕಮಲಮ್ಮನನ್ನು ತಬ್ಬಿ ಹಿಡಿದುಕೊಂಡು ಬಿಕ್ಕಿದಳು.

ತಾಯಿಯನ್ನು ನೆನಪಿಸಿಕೊಂಡು ಅಳುತ್ತಿದ್ದಾಳೆ ಎಂದು ತಿಳಿದ ಕಮಲಮ್ಮ ”ಅಳಬೇಡವೇ ಚಿಕ್ಕಮ್ಮಾ, ನನಗೂ ದೊಡ್ಡಮ್ಮಾರು ಇನ್ನೂ ಕೆಲವು ವರ್ಷ ಇರಬೇಕಾಗಿತ್ತು ಅನ್ನಿಸ್ತದೆ. ಆದರೆ ನನ್ನ ಜೀವ ಇರೋಗಂಟ ಈ ಮನೆಯಲ್ಲಿದ್ದು ಕೆಲಸ ಮಾಡ್ಕೊಂಡು ನಿಮ್ಮೊಂದಿಗಿರ್‍ತೀನಿ” ಎಂದು ತಾಯಿ ಮಗಳನ್ನು ಸಂತೈಸುವಂತೆ ಹೆಗಲ ಮೇಲಿದ್ದ ಸುಮನಾಳ ತಲೆಯನ್ನು ತಟ್ಟಿ ಸಮಾಧಾನ ಹೇಳಿದಳು. ಅದೇ ಹೊತ್ತಿಗೆ ಅಡುಗೆ ಮನೆಯಲ್ಲಿ ಇಟ್ಟಿದ್ದ ಹಾಲು ಉಕ್ಕಿದ ಸದ್ದು ಕೇಳಿಸಿತು.

”ನೋಡಿದ್ರಾ ನನ್ನ ಮಾತಿಗೆ ಉಕ್ಕಿದ ಹಾಲೇ ಸಾಕ್ಷಿ. ಬನ್ನಿ ಕಾಫಿ ಮಾಡಿ ಕೊಡ್ತೀನಿ ”ಎಂದು ಅವಳಿಂದ ಬಿಡಿಸಿಕೊಂಡು ಒಳ ನಡೆದಳು ಕಮಲಮ್ಮ.
ಮಗಳು ತನ್ನ ತಾಯಿಯನ್ನು ಹಿಂಬಾಲಿಸುವಂತೆ ಗಂಟನ್ನು ಕೈಯಲ್ಲಿ ಹಿಡಿದು ಒಳನಡೆದಳು ಸುಮನಾ. ಕಮಲಮ್ಮನಿಗೆ ತನ್ನ ತಾಯಿಯಲ್ಲಿದ್ದ ಗೌರವ, ಕೃತಜ್ಞತೆ, ಪ್ರೀತಿ ವಿಶ್ವಾಸದ ಬಾಂಧವ್ಯದ ನಂಟು ಆ ದಿನ ಬೆಲೆಬಾಳುವ ಒಡವೆಗಳ ಗಂಟನ್ನು ಕಾಪಾಡಿದ್ದವು. ಅವಳಲ್ಲಿದ್ದ ನಂಬುಗೆಯ ನಂಟು ದೊಡ್ಡದೋ ಅಥವ ತನಗೆ ಉಳಿಸಿಕೊಟ್ಟ ಗಂಟು ದೊಡ್ಡದೋ ಎಂಬ ತೂಗುಯ್ಯಾಲೆಯಲ್ಲಿತ್ತು ಅವಳ ಮನಸ್ಸು.

ಬಿ.ಆರ್.ನಾಗರತ್ನ, ಮೈಸೂರು

7 Responses

  1. ನಯನ ಬಜಕೂಡ್ಲು says:

    Beautiful story

  2. Padmini says:

    ಮನುಷ್ಯ ಸ್ವಭಾವದ ಚಿತ್ರಣ ಚೆನ್ನಾಗಿದೆ.

  3. Padma Anand says:

    ಕುತೂಹಲಭರಿತ ಸುಂದರ ಕಥೆ, ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿಯಂತಿದೆ. ಅಭಿನಂದನೆಗಳು.

  4. ನಾಗರತ್ನ ಬಿ. ಅರ್. says:

    ನಾನು ಬರೆದ ಕಥೆಯನ್ನು ಓದಿ ಪ್ರತಿಕ್ರಿಯಿಸಿದ ಸಾಹಿತ್ಯ ಸಹೃದಯರಿಗೆ ಹೃತ್ಪೂರ್ವಕ ಧನ್ಯವಾದಗಳು

  5. ಶಂಕರಿ ಶರ್ಮ says:

    ನಂಬಿಕೆಯ ಗಂಟು ಉಳಿಸಿಕೊಂಡಿದ್ದ ಕಮಲಮ್ಮನ ನಿರ್ಮಲ ನಡತೆ ಮೆಚ್ಚುವಂತಹುದು. ಸೊಗಸಾದ ನಿರೂಪಣಾ ಶೈಲಿಯ ಕಥೆ ಬಹಳ ಇಷ್ಟವಾಯ್ತು ಮೇಡಂ.

  6. ನಾಗರತ್ನ ಬಿ. ಅರ್. says:

    ಧನ್ಯವಾದಗಳು ಶಂಕರಿಶರ್ಮ ಮೇಡಂ

  7. Samatha.R says:

    ಚಂದದ ಕಥೆ ಮೇಡಂ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: