ಮಗನಿಂದ ಮದುವೆ ಮಾಡಿಸಿಕೊಂಡ ತಂದೆ

Share Button

ಬದುಕಿನಲ್ಲಿ ಅತೀವ ಕಷ್ಟಕೋಟಲೆಗಳು ಎದುರಾದಾಗ ಹೇಳುವ ಮಾತಿದೆ. ‘ನಾನು ಈ ಜನ್ಮದಲ್ಲಿ ಯಾರಿಗೂ ಯಾವ ದ್ರೋಹವನ್ನೂ ಮಾಡಿಲ್ಲ. ಆದರೂ ನನಗೆ ಯಾಕೆ ಇಂತಹ ಶಿಕ್ಷೆ?’ ಎಂದು ಪರಿತಪಿಸುವವರನ್ನು ಕಾಣುತ್ತೇವೆ. ಹೌದು, ಜನ್ಮಾಂತರದ ಒಂದಿನಿತು ಪಾಪದ ಲೇಶವಿದ್ದರೂ ಈ ಜನ್ಮದಲ್ಲಿ ಅದಕ್ಕನುಗುಣವಾಗಿ ಕಷ್ಟಪಡಬೇಕಾದ ಸಂದರ್ಭ ಬರಬಹುದು. ಹಾಗೆಯೇ ‘ಋಣಾನುಬಂಧ ರೂಪೇಣ ಪತಿ, ಪತ್ನಿ, ಸುತಾಲಯ’ ಎಂಬುದು ಸಂಸ್ಕೃತದಲ್ಲೊಂದು ಸೂಕ್ತಿ. ಗುಣಸಂಪನ್ನನಾದ, ಪ್ರೀತಿಸುವ ಪತಿ  ಹೆಣ್ಣಿಗೆ ದೊರಕಬೇಕಾದರೆ, ಇಚ್ಛೆಯನರಿತು ನಡೆಯುವ ಒಳ್ಳೆಯ ಪತ್ನಿ ಗಂಡನಿಗೆ ಸಿಗಬೇಕಿದ್ದರೆ, ದಂಪತಿಗಳಿಗೆ ಒಳ್ಳೆಯ ಮಕ್ಕಳು ಲಭಿಸಬೇಕಾದರೆ, ಅಂತೆಯೇ ಶಾಂತಿ  ಸಮಾಧಾನದಿಂದ ವಾಸ ಮಾಡುವುದಕ್ಕೆ ಉತ್ತಮ ಮನೆ ಸಿಗಬೇಕಾದರೂ ಪೂರ್ವಪುಣ್ಯ ಋಣಾನುಬಂಧ ಬೇಕಂತೆ. ಈಗಂತೂ ವಯಸ್ಸಾದ ತಂದೆ-ತಾಯಿಯರಿಗೆ ವೃದ್ಧಾಶ್ರಮವೇ ಗತಿ. ಹೆತ್ತವರು ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ ಸಲಹಿ ದೊಡ್ಡವರಾಗಿ ಮಾಡಿದ ಮೇಲೆ ರೆಕ್ಕೆ ಬಲಿತ ಹಕ್ಕಿ ಹಾರಿಹೋಗುವಂತೆ ಹೆತ್ತವರನ್ನು ಹಿಂದಿರುಗಿ ನೋಡದೆ ಹೋಗುವವರೇ ಹೆಚ್ಚು. ಅವರಿಗೋ ವೃದ್ಧಾಶ್ರಮವೋ, ಅನಾಥಾಶ್ರಮವೋ ಅಲ್ಲದೆ ಇನ್ನೇನು? ವೃದ್ಧಾಶ್ರಮಕ್ಕೆ ಕಳುಹಿಸಲು ಕೈಲಾಗದವರಿಗೆ ಸ್ವಂತ ಮನೆಯಲ್ಲೇ ನರಕವಾಸ, ತನಗೂ ಮುಂದೊಂದು ದಿನ ಇಂತಹ ಸಂದರ್ಭ ಬರಬಹುದೆಂಬ ಯೋಚನೆಯೇ ಅವರಿಗೆ ಇರುವುದಿಲ್ಲ.

          ಪಿತೃಸೇವೆ, ಪಿತೃವಾಕ್ಯ ಪರಿಪಾಲನೆ ಮಾಡಿದವರನ್ನು ಪುರಾಣದೊಳಗೆ ಕಾಣುತ್ತೇವೆ. ಪಿತೃವಾಕ್ಯ ಪರಿಪಾಲನೆಗೆ ಶ್ರೀರಾಮನನ್ನೇ ಯೋಗ್ಯ ಉದಾಹರಣೆಯಾಗಿ ಲೋಕದಲ್ಲಿ ಬಳಸುತ್ತಾರೆ. ಪಿತೃಸೇವೆಗೆ ಶ್ರವಣ ಕುಮಾರನು. ಕಣ್ಣು ಕಾಣಿಸದ ತಂದೆ-ತಾಯಿಯರನ್ನು ತೀರ್ಥ ಯಾತ್ರೆಗೆ ಹೊತ್ತುಕೊಂಡು ಸಾಗಿದವ. ನಾವಿಲ್ಲಿ ಗಮನಿಸುವ ವ್ಯಕ್ತಿ ಪಿತೃವಾಕ್ಯ ಪರಿಪಾಲನೆಯಾಗಲೀ ಪಿತೃಸೇವೆಯಾಗಲೀ ಮಾಡಿದವರಲ್ಲ. ಬದಲಾಗಿ ತನ್ನಿಚ್ಛೆಯಂತೆ ಮಗನಿಂದ ಮದುವೆ ಮಾಡಿಸಿಕೊಂಡ ತಂದೆ ಯಾರು?  ಎಂಬುದನ್ನು ನೋಡೋಣ !

          ನಾನೀಗ ಹೇಳ ಹೊರಟ ವ್ಯಕ್ತಿಯೇ ಶಂತನು ಹಿರಿಯ ಚಕ್ರವರ್ತಿ, ಇವನು  ಚಂದ್ರವಂಶದ ಒಬ್ಬ ಹಿರಿಯ ಚಕ್ರವರ್ತಿ. ಇವನ ತಂದೆ ಪ್ರತೀಪ ಮಹಾರಾಜ, ತಾಯಿ ಸುನಂದಿ. ದೇವಾಪಿ ಮತ್ತು ಬಾಹ್ಲೀಕ ಎಂಬ ಇಬ್ಬರು ಸಹೋದರರು. ಶಂತನು ಪೂರ್ವಜನ್ಮದಲ್ಲಿ ಮಹಾಭಿಷ ಎಂಬ ಹೆಸರಿನಿಂದ ಸೂರ್ಯವಂಶದ ಕ್ಷತ್ರಿಯ ರಾಜನಾಗಿದ್ದ. ಇವನು ತನ್ನ ಪುಣ್ಯಬಲದಿಂದ ಒಮ್ಮೆ ಬ್ರಹ್ಮಸಭೆಯನ್ನು ಸೇರುವಂತಾಯಿತು. ಸಭೆಯಲ್ಲಿದ್ದ ಬ್ರಹ್ಮನಿಗೆ ಗಂಗಾದೇವಿಯು ಬೀಸಣಿಕೆಯಿಂದ ಗಾಳಿ ಹಾಕುವ ಮೂಲಕ ತನ್ನ ಸೇವೆಯನ್ನು ಮಾಡುತ್ತಿದ್ದಳು. ಹೀಗಿರುವಾಗ ಗಾಳಿಗೆ ಅವಳ ಸೆರಗು ಹಾರಿತು. ಸಭೆಯಲ್ಲಿದ್ದವರೆಲ್ಲ ತಲೆತಗ್ಗಿಸಿದರು. ಮಹಾಭಿಷ ಮಾತ್ರ ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಇದನ್ನು ಅರಿತ ಬ್ರಹ್ಮನು ಇಬ್ಬರನ್ನುದ್ದೇಶಿಸಿ ‘ನೀವಿಬ್ಬರೂ ಭೂಮಿಯಲ್ಲಿ ಸ್ವಲ್ಪ ಸಮಯ ಗಂಡ-ಹೆಂಡತಿಯಾಗಿರುವಂತಾಗಲಿ‘ ಎಂದು ಶಾಪವಿತ್ತನು. ಇದರ ಫಲವಾಗಿ ಮಹಾಭಿಷ, ಶಂತನು ರಾಜನಾಗಿ ಜನ್ಮವೆತ್ತಿದನು.

ಗಂಗೆ ಪತ್ನಿಯಾದ ಬಗೆ

ಒಂದು ದಿನ ಶಂತನು ರಾಜಕುಮಾರ ಬೇಟೆಯಾಡುತ್ತಾ ಗಂಗಾನದೀ ತೀರಕ್ಕೆ ಬಂದು ದಣಿವಾರಿಸಿಕೊಳ್ಳಲೋಸುಗ ಒಂದು ಬಂಡೆಯ ಮೇಲೆ ಕುಳಿತ. ಕುಳಿತವನಿಗೆ ತನ್ನ ಮನವನ್ನೂ ಅರಮನೆಯನ್ನೂ ಬೆಳಗುವ ಸಂಗಾತಿ ಬೇಕೆಂಬ ಇಚ್ಛೆ ಮನಸ್ಸಿಗಾಯಿತು. ಸ್ವಲ್ಪ ದೂರದಲ್ಲಿಯೇ ಸರ್ವಾಂಗ ಸುಂದರಿಯಾದ ಗಂಗಾದೇವಿ ಅಲ್ಲಿ ಪ್ರತ್ಯಕ್ಷಳಾದಳು. ತಾವಿಬ್ಬರೂ ವಿವಾಹವಾಗೋಣವೆಂದು ಗಂಗೆಯಲ್ಲಿ ತನ್ನ ಮನೋಭಿಲಾಷೆಯನ್ನು ವ್ಯಕ್ತಪಡಿಸಿದನು. ಆಗ ಆಕೆ ಮಹಾರಾಜಾ, ನಿನ್ನವಳಾಗುವುದಕ್ಕೆ ನನ್ನ ಸಮ್ಮತಿ ಇದೆ. ಆದರೆ… ನೀನು ಮಾತ್ರ ನನ್ನದೊಂದು ಷರತ್ತಿಗೆ ಒಪ್ಪಬೇಕು. ನಮ್ಮಿಬ್ಬರ ವಿವಾಹ ಜೀವನದಲ್ಲಿ ನಾನು ಸರ್ವತಂತ್ರ ಸ್ವತಂತ್ರಳು. ನಾನೇನು ಮಾಡಿದರೂ ನೀನು ಪ್ರಶ್ನಿಸಬಾರದು. ಹಾಗಾದಲ್ಲಿ ಮಾತ್ರ ನಾವಿಬ್ಬರೂ ವಿವಾಹವಾಗುವುದಕ್ಕೆ ಅಡ್ಡಿಯಿಲ್ಲ. ಒಂದು ವೇಳೆ ಈಗ ಒಪ್ಪಿಕೊಂಡು ಆ ಮೇಲೆ ಅಡ್ಡಿಪಡಿಸಿದರೆ, ಕೂಡಲೇ ಹೊರಟು ಹೋಗುವೆನು ಎಂದಳು ಗಂಗೆ.  ಶಂತನು ಆಕೆಯ ಷರತ್ತಿಗೆ ಒಪ್ಪಿಗೆ ನೀಡಿ ಅವಳನ್ನು ಸ್ವೀಕರಿಸಿ ಅರಮನೆಗೆ ಕರೆತಂದು ಮದುವೆಯಾದನು. ಕಾಲಕ್ರಮದಲ್ಲಿ ಗಂಗೆ ಪುತ್ರನಿಗೆ ನೀಡಿದಳು. ರಾಜನಾದರೋ ಪುತ್ರೋತ್ಸವವಾದ ಸಂಭ್ರಮದಲ್ಲಿದ್ದರೆ, ಹಡೆದ ತಾಯಿ ಶಿಶುವನ್ನೊಯ್ದು ಗಂಗಾನದಿಯಲ್ಲಿ ತೇಲಿಬಿಟಳು. ರಾಜನು ಅವಳಲ್ಲಿ ಪ್ರಶ್ನಿಸುವಂತಿಲ್ಲವಲ್ಲ!

ಹೀಗೆ ವರ್ಷ ಹೋದಂತೆ ಎರಡನೆ ಮಗು, ಮೂರನೆಯದು, ನಾಲ್ಕನೆಯದು ಆದ ಹಾಗೆಯೇ ಗಂಗಾ ಪ್ರವಾಹಕ್ಕೆ ಬಲಿಯಾಯಿತು. ರಾಣಿಗೆ ಅಂದು ಕೊಟ್ಟಿದ್ದ  ಭಾಷೆಗೆ ಕಟ್ಟುಬಿದ್ದ ರಾಜ ಸುಮ್ಮನಿರಬೇಕಾಯಿತು. ಏಳು ಶಿಶುಗಳು ಹೀಗೆ ಗಂಗೆಯ ನೀರಿನಲ್ಲಿ ತೇಲಿಹೋದುವು. ಎಂಟನೆ ಬಾರಿಯೂ ರಾಣಿಯು ಬಾಲ ಸೂರ್ಯನಂತ ತೇಜಸ್ವಿ ಶಿಶುವನ್ನು ಹೆತ್ತಳು. ಮಗುವನ್ನು ಹರಿಯುವ ಗಂಗೆಗೆ ಬಿಸಾಡಲು ಒಯ್ಯುವಾಗ ಕೆಂಡಾಮಂಡಲನಾದ ರಾಜ ಹಿಂದಿನಿಂದಲೇ ಬಂದು ‘ರಾಣಿ..ಇದೇನು ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀಯೇ? ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ ಎಂಬ ಮಾತಿದೆ. ಆದರೆ ನೀನು ಒಂದಲ್ಲ ಏಳು ಶಿಶುಗಳನ್ನು ನಾಶ ಮಾಡಿದ ತಾಯಿ ಎಂತಹವಳು ? ನಿನ್ನ ಈ ದುಷ್ಕೃತ್ಯವನ್ನು ನಾನಿನ್ನೂ ಸಹಿಸಲಾರೆ, ಈ ಮಗುವನ್ನೂ ನೀರುಪಾಲು ಮಾಡಲು ಬಿಡಲಾರೆ’ ಎಂದ ರಾಜ.

          ಆಗ ರಾಣಿ ನಸುನಕ್ಕು ‘ರಾಜಾ ನನ್ನನ್ನು ದೂಷಿಸಬೇಡ, ಕೆಲವು ವೇಳೆ ನಾವು ವಿಧಿಯ ಆಟಕ್ಕೆ ಮಣಿಯಬೇಕಾಗಿದೆ. ನನ್ನಿಂದ ಕೊಲ್ಲಲ್ಪಟ್ಟ ಏಳು ಪುತ್ರರೂ ಏಳು ವಸುಗಳು. ಈಗ ಹುಟ್ಟಿದವನು ಎಂಟನೆಯವನು. ವಸಿಷ್ಠರ ಶಾಪಕ್ಕೊಳಗಾದ ಅಷ್ಟವಸುಗಳು ನಮಗೆ ಪುತ್ರರಾಗಿ ಆವಿರ್ಭವಿಸಿದ್ದಾರೆ. ಶಾಪ ವಿಮೋಚನೆಯಾಗಿ ಅವರೆಲ್ಲ ಅವರವರ ಸ್ಥಾನದಲ್ಲಿದಾರೆ. ನನಗೆ ಕೊಟ್ಟ ವಚನಕ್ಕೆ ವಿರೋಧವಾಗಿ ನೀನು ನಡೆದುಕೊಂಡಿದ್ದೀಯೆ. ಆದ್ದರಿಂದ ನಾನು ಈ ಕುಮಾರನ ಸಹಿತ ಹೊರಟು ಹೋಗುತ್ತೇನೆ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಇವನ ವಿದ್ಯಾಭ್ಯಾಸ ತರುವಾಯ ನಿನಗೇ ತಂದೊಪ್ಪಿಸುವೆ. ಮುಂದೆ ಇವನು ಲೋಕಪ್ರಖ್ಯಾತನಾಗುತ್ತಾನೆ’ ಎಂದು ಹೇಳಿ ಕಣ್ಮರೆಯಾದಳು. ವಾಪಾಸು ಏಕಾಂಗಿತನ ಉಂಟಾಯಿತು ರಾಜನಿಗೆ.

          ಹೀಗೆ ಕೆಲವು ಕಾಲ ಕಳೆಯಲು ಒಂದು ದಿನ ರಾಜನು ಗಂಗಾನದಿ ತೀರಕ್ಕೆ ಬಂದಾಗ ಒಬ್ಬ ತೇಜಸ್ವಿ ಬಾಲಕನನ್ನು ಕಂಡನು. ಅವನು ತನ್ನ ಬಾಣಗಳಿಂದ ಹರಿವ ನದಿ ನೀರನ್ನು ಒಂದು ಕಡೆ ಕಟ್ಟಿ ನಿಲ್ಲಿಸಿದ್ದ. ರಾಜನಿಗೆ ಹಿಂದಿನ ನೆನಪು ಮರುಕಳಿಸಿತು. ರಾಜನು ಬಾಲಕನನ್ನು ನೋಡುತ್ತಿದ್ದ ಹಾಗೆ ಗಂಗಾದೇವಿ ಪ್ರತ್ಯಕ್ಷಳಾಗಿ ‘ಸ್ವಾಮೀ…, ಅವನು ನಮ್ಮ ಬಾಲಕನು. ಆ ದಿನ ನಿಮ್ಮಿಂದ ಒಯ್ಯಲ್ಪಟ್ಟು ಇಷ್ಟು ದೊಡ್ಡವನನ್ನಾಗಿ ಮಾಡಿದ್ದೇನೆ. ಮಾತ್ರವಲ್ಲ ಪರಶುರಾಮರಿಂದ ಶಸ್ತ್ರಾಸ್ತ್ರ ವಿದ್ಯೆ ಕಲಿತಿದ್ದಾನೆ. ಇನ್ನಿವನು ನಿಮ್ಮಲ್ಲಿ ಬೆಳೆಯುತ್ತಾನೆ. ಚಂದ್ರವಂಶದಲ್ಲಿ ಅತ್ಯುನ್ನತವೆನಿಸಿ ಅಮರನಾಗುತ್ತಾನೆಎಂದು ಹೇಳಿ  ಅಂತರ್ಧಾನಳಾದಳು. ಅರಮನೆಗೆ ಕರೆತಂದ ಶಂತನು ಬಾಲಕನಿಗೆ ‘ದೇವವ್ರತ’ನೆಂದು ಹೆಸರಿಡುತ್ತಾನೆ.

ಸತ್ಯವತಿ ಪತ್ನಿಯಾದ ಬಗೆ

ಮುಂದೊಂದು ದಿನ ಶಂತನು ಬೇಟೆಯಾಡುತ್ತಾ ಬಂದವನು ಯಮುನಾ ನದಿ ತೀರದಲ್ಲಿ ದಣಿವಾರಿಸಿಕೊಳ್ಳುತ್ತಾ ಸೃಷ್ಟಿ ಸೌಂದರ್ಯ ಸವಿಯುತ್ತಾ ಇದ್ದಾಗ ನದಿಯಲ್ಲಿ ದೋಣಿ ನಡೆಸುತ್ತಿದ್ದ ಒಬ್ಬ ತರುಣಿಯನ್ನು ಕಂಡನು. ಅವಳ ಮೈಯ ಸುಗಂಧವು ಯೋಜನ ಪರ್ಯಂತ ಹಬ್ಬಿತ್ತು.  ಆಕೆಯನ್ನು ನೋಡಿದ ರಾಜನು ;ಸುಂದರೀ… ನೀನು ಯಾರು? ನೀನು ರೂಪವತಿಯಾಗಿಯೂ ಸುಗಂಧ ಸೂಸುವಳಾಗಿಯೂ ಇದ್ದಿ. ನಿನ್ನಲ್ಲಿ ಮೋಹಗೊಂಡಿದ್ದೇನೆ. ನನ್ನನ್ನು ಮದುವೆಯಾಗು’ ಎಂದು ಕೇಳಿದನು. ಆಗ ಅವಳು ‘ನನ್ನ ತಂದೆಯಾದ ದಾಶರಾಜನು ಈ ನದಿ ದಡದಲ್ಲಿ ಮನೆ ಮಾಡಿಕೊಂಡಿರುವನು. ನನ್ನ ಹೆಸರು ಮತ್ಸ್ಯಗಂಧಿ, ವಿವಾಹದ ವಿಷಯಕ್ಕೆ ತಂದೆಯಲ್ಲಿ ಕೇಳು’ ಎಂದು ಅವನಲ್ಲಿಗೆ ಕಳುಹಿಸಿದಳು. ಶಂತನು ಅವನಿದ್ದಲ್ಲಿಗೆ ತೆರಳಿ ತನ್ನ ಇಂಗಿತವನ್ನು ತಿಳಿಸಿದನು. ಅದಕ್ಕೆ ಬೆಸ್ತರಾಜನು ‘ರಾಜಾ… ನೀನು ನನ್ನ ಪುತ್ರಿಯನ್ನು ಕೈಹಿಡಿಯುವಿಯಾದರೆ ನಾನು ಬಹಳ ಸಂತೋಷಪಡುವೆನು. ಆದರೆ ನನ್ನದೊಂದು ಷರತ್ತು. ನಿನಗೆ ಅವಳಲ್ಲಿ ಹುಟ್ಟುವ ಮಕ್ಕಳಿಗೆ ರಾಜ್ಯ ಸಲ್ಲಬೇಕು. ಈ ನನ್ನ ಕರಾರನ್ನು ಈಡೇರಿಸುವುದಾದರೆ ನನ್ನ ಮಗಳನ್ನು ಮದುವೆಯಾಗಬಹುದು’ ಎಂದನು. ಈ ಮಾತು ಕೇಳಿದ ಶಂತನು ನಿರಾಸೆಯಿಂದ ಅರಮನೆಗೆ ಹಿಂತಿರುಗಿದನು.

          ಒಂದೆರಡು ದಿನಗಳಿಂದ ತಂದೆಯು ಸರ್ವಕಾರ್ಯಗಳಲ್ಲೂ ನಿರುತ್ಸಾಹದಿಂದ ಇರುವುದನ್ನು ಮಗ ದೇವವ್ರತ ಗಮನಿಸಿದ. ಇದಕ್ಕೇನು ಮಾಡುವುದೆಂದು ಆಲೋಚಿಸಿ ಪಿತನೊಂದಿಗಿದ್ದ ವೃದ್ದ ಮಂತ್ರಿಯಿಂದ ವಿಷಯ ತಿಳಿದ ದೇವವ್ರತ, ಕೂಡಲೇ ಯಮುನಾ ತೀರಕ್ಕೆ ದಾಶರಾಜನ ಮನೆಯನ್ನು ಹುಡುಕಿಕೊಂಡು ಬಂದ. ಬಂದವನೇ ಅಂಬಿಗರೊಡನೆಯನಲ್ಲಿ ನನ್ನ ಪಿತನು ನಿನ್ನ ಮಗಳಲ್ಲಿ ಮೋಹಿತನಾಗಿರುವುದರಿಂದ ಅವರಿಗೆ ಆಕೆಯನ್ನು ಮದುವೆ ಮಾಡಿಸುವ ಪ್ರಸ್ತಾಪಕ್ಕೆ ಬಂದಿದ್ದೇನೆ ಎಂದ. ಬೆಸ್ತರಾಜನು ತರುಣನ ಮಾತನ್ನು ಕೇಳಿ ಬೆರಗಾದ. ಲೋಕದಲ್ಲಿ ಪ್ರಾಯಕ್ಕೆ ಬಂದ ಮಗನಿಗೆ ತಂದೆಯು ಮದುವೆ ಮಾಡಿಸುವುದು ರೂಢಿ. ಅದರಲ್ಲಿ ಮಗನೇ ತಂದೆಗೆ ಮದುವೆ ಮಾಡಿಸುವುದಕ್ಕೆ ಮುಂದಾಗಿದ್ದಾನೆ!! ‘ಯುವರಾಜ ಮೊನ್ನೆ ನಿನ್ನ ತಂದೆಯವರಲ್ಲಿ ಹೇಳಿದುದನ್ನೇ ಈಗ ನಿನ್ನಲ್ಲಿಯೂ ಹೇಳುತ್ತಿದ್ದೇನೆ. ಅವಳಲ್ಲಿ ಹುಟ್ಟುವ ಮಕ್ಕಳಿಗೆ ಪಟ್ಟಾಭಿಷೇಕವಾಗುವುದಾದರೆ ಮಾತ್ರ ಈ ಪ್ರಸ್ತಾಪವನ್ನು ಮುಂದುವರಿಸಬಹುದು. ಅನ್ಯತಾ ಸಾಧ್ಯವಿಲ್ಲ.’ ಎಂದನು.

ನನ್ನ ಪಿತನು ಮದುವೆಯಾದ ನನ್ನ ಚಿಕ್ಕಮ್ಮನ ಮಕ್ಕಳಿಗೇ  ರಾಜ್ಯಭಾರ ಸಿಗಲಿ. ಅದಕ್ಕೆ ನನ್ನ ಅಭ್ಯಂತರವೇನಿಲ್ಲ ಎಂದ ದೇವವ್ರತ. “ನೀನೀಗ ಪಿತೃವಾತ್ಸಲ್ಯಕ್ಕೆ ಕಟ್ಟುಬಿದ್ದು ಒಪ್ಪಿಗೆ ನೀಡಿದರೂ ಮುಂದೆ ನಿನ್ನ ಮಕ್ಕಳು ಒಪ್ಪಬಹುದೇ” ಎಂದ ಬೆಸ್ತರೊಡೆಯ. ಗಾಂಗೇಯನಿಗೆ ಅವನ ದೂರದರ್ಶಿತ್ವ  ಮನವರಿಕೆಯಾಯ್ತು. ಹಿಂದೆ ಶ್ರೀರಾಮ, ಪರಶುರಾಮ ಮುಂತಾದವರು ಪಿತೃವಾಕ್ಯ ಪರಿಪಾಲನೆ ಮಾಡಿದ್ದು ನೆನಪಾಗಿ ‘ಭೋಗಕ್ಕಿಂತ ತ್ಯಾಗ ಹಿರಿದು’, ಅದರಲ್ಲಿ ಅಪಾರ ಸಂತೋಷವಿದೆ. ಸಮಾಧಾನವಿದೆ ಎಂದುಕೊಂಡು ಹೇಳಿದ “ಓ. ಬೆಸ್ತರೊಡೆಯನೆ , ನನ್ನ ಪ್ರತಿಜ್ಞೆಯನ್ನು ಕೇಳು. ನಾನು ನನ್ನ ಜನ್ಮದಾತನಿಗಾಗಿ ಆಜನ್ಮ ಬ್ರಹ್ಮಚಾರಿಯಾಗಿ ಇರುವೆ. ಇದಕ್ಕೆ ಸೂರ್ಯದೇವನೆ ಸಾಕ್ಷಿ. ಏಕಾದಶ ರುದ್ರರು, ದ್ವಾದಶಾದಿತ್ಯರು, ದೇವಾಧಿದೇವತೆಗಳು ಸಾಕ್ಷಿ.   ಹೆತ್ತವ್ವಯ ಸಾಕ್ಷಿಯಾಗಿ ಸಾರುತ್ತಿದ್ದೇನೆ. ನಿನ್ನ ಮಗಳಿಗೆ ಹುಟ್ಟುವ ಮಕ್ಕಳಿಗೆ ರಾಜ್ಯವು ಸಲ್ಲಲಿ.. ಈ ಜಗತ್ತಿನಲ್ಲಿರುವ ಸಕಲ ನಾರೀಕುಲವು ನನ್ನ ತಾಯಿ ಭಾಗೀರಥಿಗೆ  ಸಮಾನ. ಅಪುತ್ರನಾಗುವೆನೆಂದು ನಾನು ಚಿಂತಿಸುವುದಿಲ್ಲ. ತಂದೆಯವರ ಅಭೀಷ್ಟ ಈಡೇರುವುದರಿಂದ ನನಗೆ ಅಕ್ಷಯಲೋಕ ದೊರಕುವುದು ಖಂಡಿತ’  ಎಂದು ಭೀಕರ ಪ್ರತಿಜ್ಞೆಯನ್ನು ಮಾಡಿದನು.

         ಅಂಬಿಗರೊಡನೆಯನಿಗೆ ಪರಮಾಶ್ಚರ್ಯವಾಗಿ ಕಣಿವೆಯಿಕ್ಕದೆ ನೋಡಿದನು. ಆಕಾಶದಿಂದ ಸುಮನಸರು ಪುಷ್ಪವೃಷ್ಟಿಯನ್ನು ಮಾಡಿ ಜನಕನಿಗೋಸುಗ ಭಾವೀ ಜೀವನವನ್ನು ಮುಡುಪಾಗಿಟ್ಟಿರುವೆ. ಇಂದಿನಿಂದ ನಿನ್ನ ಹೆಸರು ಭೀಷ್ಮನೆಂದು ಪ್ರಖ್ಯಾತಿಯಾಗಲಿ ಎಂದರು. ಅಷ್ಟದಿಕ್ಕುಗಳಲ್ಲೂ ‘ಭೀಷ್ಮ, ಭೀಷ್ಮ‘ ಎಂದು ಪ್ರತಿಧ್ವನಿಯಾಯಿತು. ದೇವವ್ರತನು ಭೀಷ್ಮನಾದನು. ಶಂತನು ಮಹಾರಾಜ ತನ್ನ ಸುಪುತ್ರನ ಕಠಿಣ ಪ್ರತಿಜ್ಞೆಯನ್ನೂ ಮಹಾತ್ಯಾಗವನ್ನೂ ಮೆಚ್ಚಿಕೊಂಡು ‘ಪುತ್ರಾ, ನಿನ್ನ ಈ ಅಸದೃಶವಾದ ತ್ಯಾಗಕ್ಕೆ ಬಹಳ ಸಂತೋಷಪಟ್ಟು ವರವನ್ನು ಕರುಣಿಸುತ್ತಿದ್ದೇನೆ. ನೀನು ಇಚ್ಛಿಸಿದಾಗ ನಿನಗೆ ಮರಣ ಒದಗಲಿ. ನೀನು ಇಚ್ಛಾಮರಣಿಯಾಗು’ ಎಂದು ಆಶೀರ್ವದಿಸಿದನು.

ವಿಜಯಾ ಸುಬ್ರಹ್ಮಣ್ಯ , ಕುಂಬಳೆ

7 Responses

  1. Anonymous says:

    ಚೆನ್ನಾಗಿ ನಿರೂಪಿಸಿದ್ದೀರಿ

  2. km vasundhara says:

    ಗೊತ್ತಿರುವ ಕತೆಯಾಗಿದ್ದರೂ ನಿಮ್ಮ ನಿರೂಪಣಾ ಶೈಲಿಯು ಪುನಃ ಓದಿಸಿತು.

  3. ನಯನ ಬಜಕೂಡ್ಲು says:

    ಚೆನ್ನಾಗಿದೆ

  4. ನಾಗರತ್ನ ಬಿ.ಆರ್ says:

    ವಾವ್ ಎಂದಿನಂತೆ ಪುರಾಣ ಕಥೆಯ ಮೆಲುಕು ಉತ್ತಮ ನಿರೂಪಣೆ ಸೂಗಸಾಗಿ ಬಂದಿದೆ ಮೇಡಂ ಧನ್ಯವಾದಗಳು.

  5. ಮಹೇಶ್ವರಿ ಯು says:

    ಒಳ್ಳೆಯ ನಿರೂಪಣೆ.

  6. Padma Anand says:

    ಸುಲಲಿತ ನಿರೂಪಣೆಯಿಂದಾಗಿ ಮನ ಮೆಚ್ಚಿತು

  7. ಶಂಕರಿ ಶರ್ಮ says:

    ಪೌರಾಣಿಕ ಕಥೆಗಳು ಓದಿದಷ್ಟೂ ಹೊಸದೆನಿಸುತ್ತವೆ. ಬಹು ಸುಂದರ ನಿರೂಪಣೆ ವಿಜಯಕ್ಕಾ, ಧನ್ಯವಾದಗಳು.

Leave a Reply to ನಾಗರತ್ನ ಬಿ.ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: