ದಿನಚರಿ ಬದಲಾಗಿದೆ
ಜನ ಬೀದಿಯಲ್ಲಿ ಕಾಣುತ್ತಿಲ್ಲ ಇತ್ತೀಚೆಗೆ
ಮುಗುಮ್ಮಾಗಿ ಒಳಸರಿದು
ಸಾವಿನ ಸೆರಗ ದೂಡುತ್ತಿದ್ದಾರೆ ದೂರಕೆ
ಆದರೂ…ಭೀತಿ ಕಂಗಳನು ಬಿಗಿದಪ್ಪಿ ಕೂತಿದೆ
ಬಗಲಲೇ ಅವಿತು ಬಲಿಗಾಗಿ ಬಾಯ್ಬಿಡುತಿದೆ
ಜನ ಮನೆಮುಂದೆ ಕೂರದೆ
ಕರಿನೆರಳ ಕೂಗಿಗೆ ಬಾಗಿಲು ತೆರೆಯದೆ
ತರಕಾರಿಗಾಗಿ ಹೊರಬರದೆ
ಒಳತೂರಿಕೊಳ್ಳುತಿರುವರು ಸರ್ರನೆ
ಮಾತಿಗೆ ಸಿಕ್ಕಿ ಕಡೆಗೆ ಪ್ರಾಣಕ್ಕೆ ಕುತ್ತೆಂಬ…ಭಯ!
ಜನ ಮಾತಾಡುತ್ತಿಲ್ಲ ಸಲೀಸಾಗಿ
ಸೋಂಕಿರಬಹುದೆಂಬ ಅಂಜಿಕೆಗಾಗಿ
ಮುಖ ಮುರಿವಂತೆ ಮೂತಿ ಸಿಂಡರಿಸಿ ನಗು ಮರೆಸಿ
ಒಳನುಸುಳಿಕೊಳುವ ತವಕ , ಅರ್ಧಕ್ಕೇ ಮಾತು ಕತ್ತರಿಸಿ
ಜನ ಮೊದಲಿನಂತೆ ಆತ್ಮಬಲದಿಂದ ಓಡಾಡುತ್ತಿಲ್ಲ
ಕೊರಗಿ ಕೊರಗೀ ಕೊರಳ ತಗ್ಗಿಸಿ ..ಕುಗ್ಗಿ ನರಳುತಿರುವರು
ಮರೆತುಬಿಟ್ಟರು ಜನ ಬೆರೆಯುವುದ..
ತೊರೆದುಬಿಟ್ಟರು ಎಲ್ಲ ಒಟ್ಟಿಗಿರುವುದ
ಬಂದರು ಮಕ್ಕಳು ನಿಜ, ಮನಸಿಲ್ಲದ ಮನಸಿನಿಂದ
ಕೂಡಿಟ್ಟ ಹಣವ ತೆಗೆದರು ವೇದನೆಯಿಂದ
ದಾನವಿತ್ತರು ಹಸಿದವರಿಗೆ ದಾಖಲೆಯ ಬಯಕೆಯಿಂದ
ಮಾನಧನರೆಲ್ಲರು ಶಿವಧ್ಯಾನಕೆ ಶರಣಾಗಿದ್ದಾರೆ
ರೋಗದ ದುರ್ದಾನ ತೆಗೆದುಕೊಂಡವರ
ಕಾರುಣ್ಯಕೆಲ್ಲಿ ಎಣೆಯಾಗುವೆವೋ ಎನುತ
ಒಳಗೊಳಗೇ ನಡುಗುತಿದ್ದಾರೆ
ಏನಾಯಿತೋ ನಮ್ಮ ದಿನಚರಿ ಈಗ…..?
ಏಕಾಏಕಿಯ ಈ ಅಚ್ಚರಿಗೆ ಪೂರ್ಣವಿರಾಮ ಯಾವಾಗ?
-ಬಿ.ಕೆ.ಮೀನಾಕ್ಷಿ, ಮೈಸೂರು.
ಇಂದಿನ ಪರಿಸ್ಥಿತಿಯ ಅನಾವರಣ.
ಈ ದಿನಗಳ ವಾಸ್ತವ.ಕವನ ಚೆನ್ನಾಗಿದೆ.
ಹೌದು..ಕಠೋರ ವಾಸ್ತವದ ಅನಾವರಣ ಬಹಳ ಚೆನ್ನಾಗಿ ಮೂಡಿಬಂದಿದೆ ಕವನ ರೂಪದಲ್ಲಿ. ನಾವೂ ಕಾಯುತ್ತಿದ್ದೇವೆ್, ಇದರ ಪೂರ್ಣವಿರಾಮಕ್ಕಾಗಿ!
ಒಳ್ಳೆಯ ಕವಿತೆ.ಸಂಧರ್ಭದ ಬರ್ಬರತೆಗೆ ಭಾಷೆಯನ್ನು ನವಿರುಗಟ್ಟಿಸಿದ ಪರಿ ಚೇತೋಹಾರಿ.ಅಪ್ಪಟ ಕವಿಯೊಬ್ಬರು ಬರೆವ ಕವಿತೆ.
ಅನ್ಯಕೆಲಸದಲ್ಲಿ ತೊಡಗಿದ ನಿಮಿತ್ತ, ಗಮನಿಸಲಾಗಲಿಲ್ಲ. ನಮ್ಮೆಲ್ಲರ ಕಾಯುವಿಕೆಯೂ ಕೇವಲ ಕಾಯುವಿಕೆಯಾಗಬಾರದೆಂಬುದಷ್ಟೇ ದೂರದ ಆಸೆ.
ಹೇಮಮಾಲಾ, ಉಷಾ ಮೇಡಂ, ನಯನ, ಶಂಕರಿಶರ್ಮ ಮೇಡಂ, ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದ ಗಳು.
ಕಾರ್ಮೋಡ ಮುಸುಕಿದ ಮನಸು, ಚೇತನವಿಲ್ಲದ ಶರೀರ
ದಂತಾಗಿಹ ಸಂದರ್ಭವನ್ನು ಬಹಳ ಚೆನ್ನಾಗಿ ಬಿಂಬಿಸಿ
ದ್ದೀರಾ, ಮೀನಾಕ್ಷಿಯವರೆ.
ವಾಸ್ತವ ದಿನಚರಿಯ ಅನಾವರಣ ಅಭಿನಂದನೆಗಳು ಗೆಳತಿ ಮೀನಾಕ್ಷಿ.
ಕರೋನಾ ಭೀತಿಯ ಕರಿನೆರಳಿನ ಭೀತಿಯ ಅನಾವರಣದ ವಾಸ್ತವ ಚಿತ್ರಣ, ಪರಿಸ್ಥಿತಿಗಾಗಿ ಅನುಕಂಪವನ್ನು ಹುಟ್ಟಿಸುತ್ತದೆ.