ಕರೋನ ಸಮಯದಲ್ಲಿ ಕಲಿಕೆ ಇರಲಿ ನಿರಂತರ..
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ನುಡಿಯನ್ನು ಎಲ್ಲರೂ ಕೇಳಿರುತ್ತೇವೆ ಅಂತೆಯೇ ಈ ಮಹಾಮಾರಿ ಕರೋನದ ಕಾರ್ಮೋಡ ಭೂಮಿಯನ್ನು ಆವರಿಸಿರುವ ಈ ಸಂಧರ್ಭದಲ್ಲಿ ಮನೆಯೇ ನಿಜವಾದ ಪಾಠಶಾಲೆಯಾಗಬೇಕಿದೆ ಹಾಗೇ ಮನೆಯಲ್ಲಿ ತಂದೆ ತಾಯಿ ನಿಜವಾದ ಗುರುಗಳಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾಗಿದೆ.
ಶಾಲೆಗಳಲ್ಲಿ ಗುರುಗಳು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಿ ಮಕ್ಕಳ ಸರ್ವತೋಮುಖ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೇ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲೇಯೂ ಶಿಕ್ಷಕರು ಗಮನ ಹರಿಸುವುದರಿಂದ ಮಕ್ಕಳ ಕಲಿಕೆಗೆ ಸಹಕರಿಯಾಗುತ್ತದೆ.. ಆದರೆ ಕರೋನ ಎಂಬ ಮಹಾಮಾರಿ ತನ್ನ ಕಬಂಧ ಬಾಹುವನ್ನು ಚಾಚಿ ತನ್ನ ವಿಕೃತಿಯನ್ನು ಮೆರೆಯುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಹಿತ ದೃಷ್ಟಿಯಿಂದ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಶಿಕ್ಷಕರು ಆನ್ಲೈನ್ ಕ್ಲಾಸುಗಳ ಮುಕಾಂತರ ತರಗತಿಗಳನ್ನು ನಡೆಸುತ್ತಿದ್ದರು ಅದು ಮಕ್ಕಳ ಮೇಲೆ ಅಷ್ಟೊಂದು ಪರಿಣಾಮವನ್ನು ಬೀರದಿರುವುದು ವಿಷಾದನೀಯ ಸಂಗತಿಯಾಗಿದೆ.ಮಕ್ಕಳು ಕಲಿಕೆಯ ನೆಪ ಹೇಳಿ ಮೊಬೈಲ್ ಹಿಡಿದು ಬೆಳಿಗ್ಗೆಯಿಂದ ಸಂಜೆಯ ವರೆಗೂ ಕುಳಿತಿರುವಾಗ ಅವರು ಪಾಲಕರಿಗೆ ಹೇಳುವ ಕಾರಣ “ಆನ್ಲೈನ್ ಕ್ಲಾಸುಗಳು”. ಪಾಲಕರು ಸದಾಕಾಲ ಮಕ್ಕಳ ಜೊತೆಯಲ್ಲಿಯೇ ಕುಳಿತು ಅವರ ತರಗತಿಗಳನ್ನು ವೀಕ್ಷಿಸಲು ಆಗುವುದಿಲ್ಲ ಆದ್ದರಿಂದ ಪಾಲಕರುಗಳು ಮಕ್ಕಳ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿ ಉಧ್ಭವವಾಗಿದೆ. ಅಷ್ಟೇ ಅಲ್ಲದೆ ಮಕ್ಕಳು ದಿನದ ಬಹಳಷ್ಟು ಸಮಯವನ್ನು ಮೊಬೈಲಿನ ಜೊತೆಯಲ್ಲಿ ಕಳೆಯುವುದರಿಂದ ಮೊಬೈಲು ಹೊರಸೂಸುವ ಕಿರಣಗಳಿಂದ ಮಕ್ಕಳ ಕಣ್ಣಿನ ಮೇಲೆಯು ವ್ಯತೀರಿಕ್ತ ಪರಿಣಾಮಗಳು ಉಂಟಾಗುತ್ತವೆ.
ಬರೆಯುವುದಿದೆ, ಓದುವುದಿದೆ ಎಂದು ತಡರಾತ್ರಿಯವರೆಗೆ ಮೊಬೈಲ್ ಹಿಡಿದು ಕುಳಿತುಕೊಳ್ಳುವ ಮಕ್ಕಳಲ್ಲಿ ಮಲಗಲು ಸಹಾಯ ಮಾಡುವ ಹಾಗೂ ನಿದ್ರೆಯ ಚಕ್ರವನ್ನು ನಿಯಂತ್ರಿಸುವ ಮೇಲಾಟೋನಿನ್ ಎಂಬ ಹಾರ್ಮೋನು ಸರಿಯಾಗಿ ಉತ್ಪತ್ತಿ ಆಗದೆ
ಆರೋಗ್ಯದ ಮೇಲೂ ಪ್ರಭಾವ ಬೀರಿ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಬಹುದು. ಈಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಮಕ್ಕಳಲ್ಲಿ ಕಲಿಕೆಯು ನಿರಂತರವಾಗಿ ಸಾಗಬೇಕಾಗಿರುವುದರಿಂದ ಕಲಿಕಾ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾಗಿದೆ, ಸರ್ಕಾರದ ವಿದ್ಯಾಗಮ ಎಂಬ ವಿನೂತನ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಸಾಕಷ್ಟು ಅನುಕೂಲಕರವಾಗಿತ್ತು. ಆದರೆ ಸುರಕ್ಷತಾ ದೃಷ್ಟಿಯಿಂದ ಅದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ದೂರದರ್ಶನ ಮಾಧ್ಯಮಗಳು ಕಲಿಕೆಗೆ ಸಹಕಾರಿಯಾಗಿದ್ದರೂ ಮಕ್ಕಳ ನಿರಂತರ ಕಲಿಕೆಗೆ ಮನೆಯೇ ನಿಜವಾದ ಶಾಲೆಯಾಗಬೇಕಾಗಿದೆ ಹಾಗೂ ತಂದೆ ತಾಯಿ ಮಕ್ಕಳನ್ನು ನಿರಂತರ ಕಲಿಕೆಯಲ್ಲಿ ತೊಡಗುವಂತೆ ಮಾಡಬೇಕು. ಇದು ನಗರ ಪ್ರದೇಶದಲ್ಲಿ ಸಾಧ್ಯವಾದರೂ ಗ್ರಾಮೀಣ ಭಾಗದಲ್ಲಿ ಕಷ್ಟ ಸಾಧ್ಯವೆಂಬುದು ಕಟುಸತ್ಯ. ಹೀಗಿರುವಾಗ ಶಿಕ್ಷಕರ ಜೊತೆ ಗ್ರಾಮೀಣ ಭಾಗದಲ್ಲಿನ ಯುವಕರು ಕೈ ಜೋಡಿಸಬೇಕಾಗುತ್ತದೆ ಕರೋನ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹಳ್ಳಿಗಳಲ್ಲಿನ ಯುವಕರು ಮಕ್ಕಳ ನಿರಂತರ ಕಲಿಕೆಗೆ ಪ್ರೋತ್ಸಾಹಿಸಬೇಕು.
ಯಾವುದೇ ಸಂಧರ್ಭದಲ್ಲೂ ಕರೋನ ಎಂಬ ಮಹಾಮಾರಿ ಮಕ್ಕಳ ಕಲಿಕೆಗೆ ಅಡ್ಡಿ ಪಡಿಸಿ ಮಕ್ಕಳು ದಾರಿ ತಪ್ಪದಂತೆ ಗಮನ ಹರಿಸಬೇಕಾಗಿದೆ ಮತ್ತು ಮಕ್ಕಳನ್ನು ನಿರಂತರ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವುದು ಶಿಕ್ಷಕರ ಹಾಗೂ ಪಾಲಕರ ಹೊಣೆಯಾಗಿದೆ….
-ರಾಜೇಶ ಎಸ್ ಜಾಧವ , ಬಾಗಲಕೋಟ
Nice bro
ಇವತ್ತಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ ಬರಹ. ಮಕ್ಕಳ ಬಗ್ಗೆ ನೀವು ಹೇಳಿರುವ ಅಂಶಗಳು ಸರಿಯಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಬೆಳಕು ಚೆಲ್ಲುವ ಕಿರು ಲೇಖನ ಚೆನ್ನಾಗಿದೆ.