ಲಹರಿ

 ಕನ್ನಡಕದ ಅಂಗಡಿಯಲ್ಲಿ…

Share Button


“ಊ ಹೂಂ..ಬೇಡ ಮೇಡಂ..ಅಜ್ಜಿತರ ಕಾಣ್ ತೀರ,”
“ಹೌದಾ,ಹಾಗಾದ್ರೆ ಇದು”
“ಅಯ್ಯೋ, ಅದು ಸಂತೆ ಕನ್ನಡಕ ಅನ್ಸುತ್ತೆ”,
“ಛೇ,ಇದು ಬೇಡ,ಅಲ್ಲಿ ಮೊದಲನೇ ಸಾಲಲ್ಲಿ ಮೂರನೆಯದು ಇದೆಯಲ್ಲ ಅದು ಕೊಡಿ”
ಅದು ಸಿಕ್ಕಿ ಧರಿಸಿದಾಗ”ಮೇಡಂ ಇದು ಗಾಂಧಿ ಕನ್ನಡಕ,ವಯಸ್ಸಾದವರಿಗೆ ಸರಿ,ಬೇರೆ ನೋಡಿ”
“ಏನ್ರೀ ನೀವು, ಯಾವುದೂ ಒಪ್ಪುತ್ತಿಲ್ಲ,ಹೋಗ್ಲಿ ಇದೊಂದು ನೋಡಿಬಿಡಿ,”
“ಹಾಂ,ಇದು ನೋಡಿ ನಿಮಗೆ ತುಂಬಾ ಚೆನ್ನಾಗಿ ಒಪ್ಪುತ್ತೆ”,
“ಹೌದಾ,ಸದ್ಯ ಕೊನೆಗೂ ಒಂದು ಒಪ್ಪಿಕೊಂಡ್ರಲ್ಲ.”
ಇದು ನಾನು ಇತ್ತೀಚೆಗೆ ಕನ್ನಡಕ ಕೊಳ್ಳಲು ಹೋದಾಗ ನಡೆದದ್ದು.

“ಚಾಲಿಸ್ ಪೆ ಚಾಳಿಸ್ ” ಅನ್ನೋ ಹಾಗೆ ನಲವತ್ತು ಕಳೆದ ಬಳಿಕ ಕಣ್ಣು ಮಂಜಾಗಲು ಶುರುವಾಗಿ, ಹತ್ತಿರದ ವಸ್ತು ಅಕ್ಷರಗಳು ಯಾವುದೂ ಕಾಣಿಸದಾಯಿತು. ಪಾಠ ಮಾಡುವಾಗ ಬೋರ್ಡ್ ಮೇಲೆ ಬರವಣಿಗೆಯೂ ಕಷ್ಟವಾಗತೊಡಗಿತು.”ಸರಿ ಬೇರೆ ಇನ್ನೇನು ಮಾಡುವುದು ಕನ್ನಡಕ ಹಾಕದೇ ಬೇರೆ ದಾರಿಯಿಲ್ಲ ” ಅನಿಸಿ ಕಣ್ಣು ಪರೀಕ್ಷೆಗೆ ಸಿದ್ದಳಾದೆ.

ನನ್ನ ಹುಟ್ಟು ಸೋಮಾರಿತನದಿಂದಾಗಿ “ಯಾರಪ್ಪ ಕನ್ನಡಕದಂಗಡಿ ಹುಡುಕುತ್ತಾ ತಿರುಗುವುದು, ಹತ್ತಿರದಲ್ಲೇ ಯಾವುದಾದರೂ ಸಿಕ್ಕರೆ ಸಾಕು” ಅನ್ನಿಸಿದಾಗ ನೆನಪಾದದ್ದು, ನಾನು ದಿನಾ ಕೆಲಸಕ್ಕೆ ಹೋಗಲು ಬಸ್ ಹತ್ತುವ ಜಾಗದಲ್ಲಿ, ನನ್ನ ಸ್ಕೂಟಿ ನಿಲ್ಲಿಸುವ ಕಂಪೌಂಡ್ ನ ಪಕ್ಕದಲ್ಲಿದ್ದ ಒಂದು ಚಿಕ್ಕ ಕನ್ನಡಕದ ಅಂಗಡಿ.

ಸರಿ, ಒಂದು ದಿನ ಸಂಜೆ ಕೆಲಸದಿಂದ ಹಿಂದಿರುಗಿ ಮನೆಗೆ ತೆರಳುವ ಮುನ್ನ, ಕಣ್ಣು ಪರೀಕ್ಷೆಗೆ ಅಂತ ಆ ಅಂಗಡಿ ಮುಂದೆ ಸ್ಕೂಟಿ ನಿಲ್ಲಿಸಿ ಒಳಹೊಕ್ಕು ನೋಡಿದೆ. ಅದೊಂದು ಚಿಕ್ಕ ಅಂಗಡಿ, ಅಲ್ಲಿ ಇದ್ದದ್ದು, ಒಂದು ಗೋಡೆಯ ಮೇಲಿದ್ದ ಗಾಜಿನ ಕಪಾಟುಗಳಲ್ಲಿದ್ದ ತರಹೇವಾರಿ ಕನ್ನಡಕಗಳು, ಅದರ ಎದುರು ಎತ್ತರದ ಮೇಜುಗಟ್ಟೆಗಳು. ಎದುರಿನ ಗೋಡೆಗೆ ಹತ್ತಿಕೊಂಡಿದ್ದ ಒಂದು ಸೋಫಾ, ಮತ್ತು ಗಲ್ಲಾದಲ್ಲಿ ಕುಳಿತಿದ್ದ ಒಬ್ಬ ಕುಳ್ಳ, ಬಕ್ಕ ತಲೆಯ, ಉಂಡೆ ಉಂಡೆ ಕೆನ್ನೆ, ಗಲ್ಲಗಳ ಮಧ್ಯ ವಯಸ್ಕ ವ್ಯಕ್ತಿ ಮಾತ್ರ.

ಹೋದ ತಕ್ಷಣ ಎದ್ದು ನಿಂತು ಆ ವ್ಯಕ್ತಿ “ಬನ್ನಿ,ಬನ್ನಿ ಮೇಡಮ್ಮೂ, ನೀವು ದಿನಾ ಸ್ಕೂಟಿಲಿ ನಮ್ಮಂಗಡಿ ಎದುರು ಓಡಾಡುತ್ತಾ ಇರುವಾಗ ನೋಡಿದ್ದೀನಿ. ಏನ್ ಆಗಬೇಕು ಹೇಳಿ” ಅಂದರು. ನನ್ನಕಣ್ಣಿನ ತೊಂದರೆ ಹೇಳಿಕೊಂಡ ಬಳಿಕ “ಬನ್ನಿ,ಬನ್ನಿ,ಇಲ್ಲಿ” ಅಂತಾ ಹೇಳಿ ಒಳಗೆ ಒಂದು ಚಿಕ್ಕ ಕತ್ತಲೆ ರೂಂ ನಲ್ಲಿ ಒಂದು ದೊಡ್ಡ ಯಂತ್ರದ ಎದುರು ಕೂರಿಸಿದರು.

ಬಳಿಕ ಎದುರಿನ ಒಂದು ಬೆಳಕಿನ ಪರದೆಯ ಮೇಲಿದ್ದ ಅಕ್ಷರಗಳ ನೋಡಲು ಹೇಳುತ್ತಾ,ಕಣ್ಣಿಗೆ ಒಂದು ಲೋಹದ ಚೌಕಟ್ಟಿನಂತಹದ್ದೇನೋ ಹಾಕಿ, ಅದರಲ್ಲಿ ಬೇರೆ ಬೇರೆ ಗಾಜಿನ ಪಟ್ಟಿಗಳನ್ನೂ ಹಾಕುತ್ತಾ, ತೆಗೆಯುತ್ತಾ ಹೋದರು. “ಈಗ ಕಾಣುತ್ತಾ,ಈಗ ಕಾಣುತ್ತಾ, “ಅನ್ನುತ್ತಾ ಕೊನೆಗೆ ಯಾವುದೋ ಒಂದು ಗಾಜಿನಲ್ಲಿ ನನಗೆ “ಪರವಾಗಿಲ್ಲ ಕಾಣುತ್ತೆ ” ಅನ್ನಿಸಿದಾಗ ಆ ಮಸೂರವನ್ನು ಆರಿಸಿಯಾಯಿತು.

ನಂತರ ಹೊರ ಬಂದು ಆ ಮಸೂರಕ್ಕೆ ತಕ್ಕ ಕನ್ನಡಕದ ಫ್ರೇಮ್ ಆರಿಸುವ ಕೆಲಸ. ನಾನು ಕಪಾಟಿನಲ್ಲಿ ಜೋಡಿಸಿಟ್ಟಿದ್ದ ಫ್ರೇಮ್ ಗಳನ್ನು ನೋಡುತ್ತ,ಚಂದ ಅನ್ನಿಸಿದ್ದು ತೆಗೆಸಿ ಹಾಕಿಕೊಂಡು ಎದುರಿಗಿದ್ದ ಕನ್ನಡಿಯಲ್ಲಿ ನೋಡುತ್ತಿದ್ದಾಗ, ಇದ್ದಕ್ಕಿದ್ದಂತಯೇ ನನ್ನ ಬೆನ್ನ ಹಿಂದೆ ಯಾರೋ “ಮೇಡಂ ಇದು ಚೆನ್ನಾಗಿಲ್ಲ ಬೇಡ” ಅಂದರು.

ಅಚ್ಚರಿಯಿಂದ ಹಿಂದೆ ತಿರುಗಿ ನೋಡಿದರೆ ,ಆಗ ತಾನೇ ನನ್ನಂತೆಯೇ ಕಣ್ಣು ಪರೀಕ್ಷೆಗೆ ಬಂದಿದ್ದ ಮಹಿಳೆಯೊಬ್ಬರು, ಸೋಫಾದಲ್ಲಿ ಕುಳಿತು ನನ್ನನ್ನೇ ನೋಡುತ್ತ ಮುಗುಳ್ನಕ್ಕರು. ” ಇನ್ನೊಬ್ಬರ ಅಭಿಪ್ರಾಯವನ್ನು ಕೇಳುವುದು ಕೂಡ ಸರಿ ” ಅನ್ನಿಸಿತು. ಅದರಲ್ಲೂ ನಮ್ಮ ದೇಶದಲ್ಲಿ ಯಾರನ್ನಾದರೂ ಏನಾದರೂ ಕೇಳಿದರೆ,ಎಲ್ಲವೂ ಸಿಗದೇ ಹೋದರೂ, ಪುಕ್ಕಟ್ಟೆ ಉಪದೇಶ, ಸಲಹೆ, ಸೂಚನೆ ಗಳಂತೂ ಧಾರಾಳವಾಗಿ ಸಿಗುತ್ತವೆ.  ಹಾಗೆಯೇ ನನ್ನ ಕನ್ನಡಕದ ಆಯ್ಕೆಗೆ ಸುಲಭವಾಗಿ ಈ ಮಹಿಳೆ ಸಿಕ್ಕಿ ಬಿಟ್ಟರು.ನಂತರ ಹಲವಾರು ಫ್ರೇಮ್ ಗಳ ನಾನು ಹಾಕಿ ನೊಡುತ್ತಾ ಹೋದಂತೆಲ್ಲ ಅವರು ಒಂದೊಂದಾಗಿ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾ, ಕೊನೆಗೆ ಪೂರ್ಣ ಗಾಜಿನಿಂದ ಆದ ಒಂದು, ಕಪ್ಪು ಪ್ಲಾಸ್ಟಿಕ್ ನ ಚೌಕಟ್ಟಿನ ಒಂದು ಆರಿಸಿ ಕೊಟ್ಟರು.

ಅವರಿಗೆ “ಥಾಂಕ್ಸ್” ಹೇಳಿ, ನಂತರ ಮಾಲೀಕರ ಕಡೆ ತಿರುಗಿ “ಇವೆರಡರಲ್ಲಿ ಯಾವುದಾದರೂ ಒಂದು ಬೇಕು, ದರ ಹೇಳಿ  “ಅಂದಾಗ, ಅವರು “ಮೇಡಮ್ಮು,ನೀವು ಸ್ವಲ್ಪ ದಡ ಬಡ ಮಾಡ್ತೀರಾ, ನಿಮ್ಗೆ ಈ ಗಾಜಿಂದು ಆಗಕ್ಕಿಲ್ಲ , ಒಂದೇ ದಿನಕ್ಕೆ ಒಡ್ಕೊತೀರ, ಆ ಇನ್ನೊಂದೇ ತೊಗೊಳ್ಳಿ,” ಅಂದಾಗ ನಗು ಬಂದರೂ” ಹೇಳೋದು ಸತ್ಯವೇ ಅಲ್ಲವೇ “ಅನಿಸಿತು. ಅವರು ಹೇಳಿದ್ದನ್ನೇ ಆರಿಸಿ, ದುಡ್ಡು ಕಟ್ಟಿದೆ. ಅವರು ಹೇಳಿದ ದಿನಾಂಕಕ್ಕೆ ಇಸಿದುಕೊಳ್ಳುವೆ, ಅಂತಾ ಹೇಳಿ ಬಂದೆ. ಹೇಳಿದ ದಿನದಂದು ಹೋಗಿ ತಂದು ಬಳಸಲು ಶುರು ಮಾಡಿದಾಗ, ಒಂದೆರಡು ದಿನ ತಡವರಿಸುವ ಹಾಗಾದರೂ,ನಂತರ ರೂಡಿಯಾಯಿತು.

ನನ್ನ ಗಂಡನಿಗೆ ಮಾತ್ರ ಸಮಾಧಾನವಿಲ್ಲ.
“ಯಾವುದೋ ಚಿಕ್ಕ ಅಂಗಡಿಗೆ ಹೋಗಿದ್ದೀಯ,ಅಲ್ಲಿ ಗುಣಮಟ್ಟ ಹೇಗೋ ಏನೋ, ಕಣ್ಣು ಹಾಳಾದರೆ,? ದುಡ್ಡು ಕೂಡ ಜಾಸ್ತಿ ಯಾಯಿತು”ಎಂದೆಲ್ಲ ಉಪದೇಶ ಶುರುವಾಯಿತು.ಜೊತೆಗೆ ಅವರೂ ಕೂಡ ಇನ್ನೊಂದು ಪ್ರಸಿದ್ದ ಬ್ರಾಂಡ್ ನ ಅಂಗಡಿಯಲ್ಲಿ ಕಣ್ಣು ಪರೀಕ್ಷೆ ಮಾಡಿಸಿಕೊಂಡರು. ನನ್ನ ಕನ್ನಡಕಕ್ಕಿಂತ ಚಂದದ, ಇನ್ನೂ ಉತ್ತಮ ಗುಣಮಟ್ಟದ, ಜೊತೆಗೆ ಬೆಲೆಯೂ ಕಡಿಮೆಯದನ್ನು ತಂದು ಧರಿಸಿ “ನೋಡು,ನೀನು ಹೋಗಿ ಹಳ್ಳಕ್ಕೆ ಬಿದ್ದೆಯಲ್ಲ,ನನಗೆ ಎಷ್ಟು ಚೆನ್ನಾಗಿ ಇರೋದು ಸಿಕ್ತು” ಎಂದು ಬೀಗತೊಡಗಿದಾಗ ಪಿಚ್ಚೆನಿಸಿತು.

“ಏನೋ ಒಂದು ಕನ್ನಡಕ ಅಂತಾ ಸಿಕ್ತಲ್ಲ ಬಿಡು,ಸದ್ಯ ದಿನ ನಿತ್ಯದ ಕೆಲಸ ಮಾಡಿಕೊಂಡು ಹೋದರೆ  ಸಾಕು” ಅನ್ನಿಸಿ, ಅದನ್ನೇ ಬಳಸಲಾರಂಭಿಸಿದೆ. ಸ್ನೇಹಿತರು, ಸಹೋದ್ಯೋಗಿಗಳೆಲ್ಲ “ಕನ್ನಡಕ ಚೆನ್ನಾಗಿದೆ, ನಿಮಗೆ ಬೇರೆಯೇ ಲುಕ್ ಕೊಟ್ಟಿದೆ” ಎಂದಾಗ ಸ್ವಲ್ಪ ಸಮಾಧಾನ ಎನಿಸಿತು. ಆದರೆ ಆ ಸಮಾಧಾನ ಹೆಚ್ಚು ದಿನ ಉಳಿಯಲಿಲ್ಲ.ಒಂದು ದಿನ ಏನೋ ಬರೆಯಲು ಕನ್ನಡಕ ಹುಡುಕಿ , ಹಾಕಿಕೊಳ್ಳುವ ಎಂದು ಕೈಗೆತ್ತಿ ಕೊಂಡರೆ ಫ್ರೇಮ್ ನ ಒಂದು ಭಾಗ ಬಿರುಕು ಬಿಟ್ಟು ಮಸೂರ ಹೊರ ಇಣುಕುತ್ತಿತ್ತು.

“ಛೆ,ತೊಗೊಂಡು ಇನ್ನೂ ಮೂರು ತಿಂಗಳು ಕೂಡ ಆಗಿಲ್ಲ,ಇಷ್ಟು ಬೇಗ ಮುರಿಯಿತೆ?”ಅನ್ನಿಸಿತು.  ಸಂಜೆ ಶಾಲೆಯಿಂದ ಮನೆಗೆ ಬರುವಾಗ ಕನ್ನಡಕದ ಅಂಗಡಿಗೆ ಹೋಗಿ ಕೊಟ್ಟಾಗ, ಆ ಮನುಷ್ಯನಿಗೂ ಅಚ್ಚರಿಯೇ “ಅರೆ ಮೇಡಮ್ಮೂ, ಇಷ್ಟು ಬೇಗ ಮುರ್ಕೊಂಡ್ರ! ಇರ್ಲಿ ನಾಳೆ  ಬನ್ನಿ, ಅಂಟಿಸಿ ಇಟ್ಟಿರುತ್ತಿನಿ” ಎಂದು ಹೇಳಿದರು. ಅದರಂತೆ ಮಾರನೆಯ ದಿನವೇ
ಸರಿಪಡಿಸಿಕೊಟ್ಟರು. ತೊಗೊಂಡು ಮನೆಗೆ ಬಂದರೆ ಮತ್ತದೇ ನನ್ನ ಗಂಡನ ರಾಗ “ಒಳ್ಳೆ ಅಂಗಡೀಲಿ ತೊಗೊ ಅಂದ್ರೆ ಕೇಳ್ಲಿಲ್ಲ ನೀನು, ಈಗ ನೋಡು ಮೂರೇ ತಿಂಗಳಿಗೆ ರಿಪೇರಿ” ಎಂದು ಬೈದರು.  “ಇರ್ಲಿ ಬಿಡಿ,ನಾನೇ ಸ್ವಲ್ಪ ಒರಟಾಗಿ ವರೆಸುವಾಗ ಆಗಿದ್ದು” ಅಂದು ಹೇಳಿ ಸುಮ್ಮನಾದೆ.

ಆದರೆ ಮತ್ತೆ ತಿಂಗಳು , ಎರಡು ತಿಂಗಳಿಗೆ ಫ್ರೇಮ್ ಬಿಟ್ಟುಕೊಳ್ಳಲು ತೊಡಗಿ ಮತ್ತೆ ಮತ್ತೆ ಅಂಗಡಿಯವರು ಅಂಟಿಸಿಕೊಟ್ಟರು. ಪ್ರತಿ ಬಾರಿಯೂ “ಮೇಡಮ್ಮೂ ಸ್ವಲ್ಪ ಹುಷಾರು, ಜೋರಾಗಿ ಉಜ್ಜಿ ವರೆಸಬೇಡಿ,” ಅಂತ ಹೇಳಿ ಮುಗುಳ್ನಕ್ಕು ಕೊಡುತ್ತಿದ್ದರು. ಆದರೆ ನನ್ನ ಒರಟು ಕೈ ಕೇಳುವುದೇ?  ಮತ್ತೆ ಇನ್ನೊಂದು ದಿನ ಹೋದಾಗ ಆ ವ್ಯಕ್ತಿ” ,ಮೇಡಮ್ಮೂ ಈ ಸಾತಿ ಹೊಸಾ ಫ್ರೇಮ್ ಕೊಟ್ಟು ಬಿಡ್ತೀನಿ ಬಿಡಿ..ನಾಳೆ ಬನ್ನಿ,”ಎಂದಾಗ  “ಅಯ್ಯೋ ಮತ್ತೆಇನ್ನೊಂದು ಫ್ರೇಮ್ ಹೊಸದಾಗಿ ಕೊಳ್ಳಬೇಕಲ್ಲ, ಇನ್ನಷ್ಟು ದುಡ್ಡು ಖರ್ಚು” ಅನ್ನಿಸಿ ಕೊರಗಿದರೂ,”ಇನ್ನೇನು ಮಾಡೋದು,ಇನ್ಮೇಲೆ ನಾನೇ ಸ್ವಲ್ಪ ಎಚ್ಚರಿಕೆಯಿಂದ ಬಳಸಿದರಾಯಿತು” ಅಂದುಕೊಂಡು ಬಂದೆ.

ಆದರೆ ಮಾರನೇ ದಿನ ಹೊಸಾ ಫ್ರೇಮ್ ನೊಂದಿಗೆ ಕನ್ನಡಕ ಹಿಂದಿರುಗಿಸಿದ ಆ ಮನುಷ್ಯ ನಾನು ಎಷ್ಟು ಹೇಳಿದರೂ ದುಡ್ಡು ತೆಗೆದುಕೊಳ್ಳದೆ ಹೋದರು. “ನೋಡಿ ಮೇಡಮ್ಮೂ, ನೀವು ಒಂದು ದಿನವೂ ಇಷ್ಟು ಬೇಗ  ಕಿತ್ತು ಹೋಗೋ ಕನ್ನಡಕ ಕೊಟ್ಟೆ ಅಂತ ನಮಿಗೆ ಅಂದಿಲ್ಲ, ನೀವು ಹಂಗೇ ಇರ್ಬೇಕಾದ್ರೇ ನಾವು ದುಡ್ಡು , ತೊಗೊಂಡ್ರೆ ಹೆಂಗೆ?”ಎಂದು ಹೇಳಿ ನಿರಾಕರಿಸಿದರು. ನಾನು ಬಿಡದೆ, “ಪೂರ್ತಿ ಅಲ್ಲದಿದ್ದರೂ,ಅರ್ಧ ಆದ್ರೂ ತೊಗೊಳ್ಳಿ,ನನ್ನಿಂದ ನಿಮಗೆ ಲಾಸ್ ಆಗೋದು ಬೇಡ,”ಎಂದರೂ, “ಇಲ್ಲ ಮೇಡಮ್ಮು, ನಮ್ದುಗೆ ನಮ್ದು ಅಂಗ್ಡಿ ಗಿರಾಕಿ ಮುಖ್ಯ, ದುಡ್ಡು ಬತ್ತದೇ, ಹೋಯ್ತದೆ,ಆದ್ರೆ ನೀವು ಬೇಸ್ರ ಮಾಡ್ಕೋ ಬಾರ್ದು ನೋಡಿ”ಅಂತ ಹೇಳಿ ಕನ್ನಡಕ ಕೊಟ್ಟು ಕಳುಹಿಸಿದರು.

ಇದಾಗಿ ಈಗ ಆರು ತಿಂಗಳಾಯಿತು,ನನ್ನ ಕನ್ನಡಕವನ್ನು ಒಂದು ಸಣ್ಣ ಗೀರೂ ಬೀಳದಂತೆ ಎಚ್ಚರದಿಂದ ಕಾಪಾಡಿಕೊಂಡಿದ್ದೇನೆ.

– ಸಮತಾ. ಆರ್

28 Comments on “ ಕನ್ನಡಕದ ಅಂಗಡಿಯಲ್ಲಿ…

  1. ಕನ್ನಡಕದ ಪುರಾಣ ಚೆನ್ನಾಗಿ ಮೂಡಿ ಬಂದಿದೆ ಮೇಡಂ.

  2. ಕನ್ನಡಕದ ಅಂಗಡಿಯವರು ನಿಜವಾಗ್ಲೂ ಗ್ರೇಟ್ nice experience

  3. ದೈನಂದಿನ ಘಟನೆಗಳ ಬಗ್ಗೆ ಸೊಗಸಾಗಿ ಬರೆಯುತ್ತೀರಿ.. ನವಿರು ಹಾಸ್ಯದ ಶೈಲಿ ಇಷ್ಟವಾಯಿತು. . ಎಲ್ಲಾ ಬರಹಗಳನ್ನು ಒಟ್ಟು ಸೇರಿಸಿ, ಪುಸ್ತಕ ಮಾಡಿ..

    1. ನಿಮ್ಮ ಪ್ರೋತ್ಸಾಹ ಕ್ಕಾಗಿ ವಂದನೆಗಳು ಮೇಡಂ.. ಪುಸ್ತಕ ಮಾಡುವ ಆಸೆಯೇನೋ ಇದೆ..ನೋಡುವ ಯಾವಾಗ ಕಾಲ ಕೂಡಿ ಬರುವುದೋ…

  4. ಉತ್ತಮವಾದ ಸುಂದರ ಅನುಭವಗಳನ್ನು ಸಾಲಾಗಿ ಜೋಡಿಸಿದ ನಿಮಗೆ ಅಭಿನಂದನೆಗಳು

  5. ಬರೆಹ ಆಪ್ತ ಸಮತಾ..ಎಷ್ಟೆಂದರೆ‌ ನನಗೂ ಅಲ್ಲೇ ಕನ್ನಡಕ ಕೊಳ್ಳಬೇಕೆನ್ನುವಷ್ಟು..ಹೆ..ಹೆ..

  6. ಚೆಂದದ ಬರೆಹ ಸಮತಾ..ನನಗೂ ಪರಿಚಯಿಸಿ ಕನ್ನಡಕ ಕೊಳ್ಳಬೇಕು

  7. ಸಮತಾ ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  8. ನಮ್ಮ ‌‌ದಿನನಿತ್ಯದ ಅನುಭವವನ್ನು ಲೇಖನ ಬರೆಯುವುದು ಒಂದು ಕಲೆ,,ನಿಮ್ಮ ನಿರೂಪಣೆಯ ಶೈಲಿ
    ಸಹಜವಾಗಿರುತ್ತದೆ,,ಮೇಡಂ ಹೇಳಿದ ಹಾಗೇ ಒಂದ ಪುಸ್ತಕ ಮಾಡಿ,

  9. ಆತ್ಮ ಸಮ್ಮಾನ ಮತ್ತು ಹೃದಯ ಶ್ರೀಮಂತಿಕೆಗೆ, ಆಡಂಬರ ಅಬ್ಬರಗಳ ಅಗ್ಯತ್ಯವಿಲ್ಲ ಎಂಬುದು ಮತ್ತೊಮ್ಮೆ ರುಜುವಾತಾದಂತಾಯಿತು. ಲೇಖನ ಸುಲಲಿತವಾಗಿ ಮೂಡಿ ಬಂದಿದೆ. ಅಭಿನಂದನೆಗಳು.

  10. ಲಘುಹಾಸ್ಯ ಭರಿತ ಕನ್ನಡಕ ಲೇಖನ ಪೊಗದಸ್ತಾಗಿದೆ..ಧನ್ಯವಾದಗಳು ಮೇಡಂ.

  11. ಕನ್ನಡ+ಕ ದ ಕಥೆ ಕನ್ನಡದಲ್ಲಿ ಚೆನ್ನಾಗಿ ಮೂಡಿಬಂದಿದೆ. ಆದರೆ ಕೊನೆಯ ಸಾಲುಗಳು ಯಾಕೋ ಮಂಜುಮುಸುಕಿದಂತೆ ಕಾಣಿಸುತಿತ್ತು, ಬಹುಶಹ ನಾನು ಕನ್ನಡಕ ಹಾಕಿ ಓದಬೇಕು ಅನಿಸತ್ತೆ. ದಯವಿಟ್ಟು ಅದೆ,…. ಕನ್ನಡಕದ ಅಂಗಡಿ, ನೀವು ಕನ್ನಡಕ ತಗೊಂಡ ಅಂಗಡಿ, ವಿಳಾಸ ಕೊಡಿ.

  12. ಅಂಕಣ ಬಹಳ ಚೊಕ್ಕವಾಗಿ ಸುಲಲಿತವಾಗಿ ಮೂಡಿ ಬಂದಿದೆ ಸಮತ.

Leave a Reply to ಗಾಯತ್ರಿ ಸಜ್ಜನ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *