‘ನೆಮ್ಮದಿಯ ನೆಲೆ’-ಎಸಳು 16
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ ಬರುತ್ತದೆ…ಈ ನಡುವೆ ಗೆಳತಿ ಸಂಧ್ಯಾಳೊಂದಿಗೆ ಒಡನಾಟ ,ಪ್ರವಾಸ ಶುರುವಾಯಿತು…ಅದೂ ಕೃತಕವೆನಿಸಿತು ..ಮುಂದಕ್ಕೆ ಓದಿ)
ಶ್ರೀಕಂಠೇಶ್ವರನ ದೇವಸ್ಥಾನದ ಮುಂಭಾಗದಲ್ಲೇ ಕಾರು ನಿಂತಿತ್ತು. ಅದರಿಂದ ಇಳಿದ ಸುಕನ್ಯಾಳಿಗೆ ಅಭೂತಪೂರ್ವ ಸ್ವಾಗತ ! ಮಗ, ಸೊಸೆ, ಮೊಮ್ಮಕ್ಕಳು, ಮಗಳು, ಅಳಿಯ. ಆಕೆಯ ಭಾವ, ಮೈದುನರ ಕುಟುಂಬ , ಅಣ್ಣಂದಿರು, ಅತ್ತಿಗೆಯರು, ಅವರ ಮಕ್ಕಳು ಎಲ್ಲರೂ ಒಟ್ಟಾಗಿ ಮೇಳೈಸಿದ್ದಾರೆ. ಇದೇನು ಕನಸೋ ನನಸೋ ಎಂದು ಮೈಚಿವುಟಿಕೊಂಡು ಸುಕನ್ಯಾ ಕನಸಲ್ಲವೆಂಬುದನು ತಿಳಿದು ಪ್ರಶ್ನಾರ್ಥಕವಾಗಿ ದಯಾನಂದನತ್ತ ನೋಡಿದಳು. ಅವನ ಗಂಭೀರ ಮುಖದಲ್ಲಿ ಒಂದು ತುಂಟನಗು. ಓ ಇದು ಇನ್ನೊಂದು ಸರ್‍ಪ್ರೈಸ್ ! ಇರಬೇಕೆಂದುಕೊಂಡಳು.
‘ಹ್ಯಾಪೀ ಮಾರೀಡ್ ಲೈಫ್ ಟು ಬೋತ್ ಆಫ್ ಯು, ಗಾಡ್ ಬ್ಲೆಸ್ ಯು’ ಎಂದು ಶುಭಾಶಯ ಹೇಳುತ್ತಾ ಕೈಮುಂದೆ ಮಾಡಿದ ಸೊಸೆಯನ್ನೇ ದಿಟ್ಟಿಸಿ ನೋಡಿದಳು ಸುಕನ್ಯಾ. ಅವಳ ಕಣ್ಣುಗಳಲ್ಲಿ ಕ್ಷಮಾಯಾಚನೆಯ ಸುಳಿವು ಕಂಡಂತಾಯಿತು. ‘ಸೋ.. ಮತ್ಯಾಕೆ ಎಳೆದಾಟ, ಫರ್‌ಗೆಟಿಟ್, ಫರ್‌ಗಿವ್‌ಇಟ್’ ಎಂದು ಮನಸ್ಸು ಪಿಸುಗುಟ್ಟಿತು. ಅವಳು ಚಾಚಿದ್ದ ಕೈಯನ್ನು ಕುಲುಕಿ ಧನ್ಯವಾದ ಹೇಳುತ್ತಿದ್ದಂತೆ ಓಡಿಬಂದ ಮೊಮ್ಮಕ್ಕಳನ್ನು ಅಪ್ಪಿ ಮುದ್ದಿಸಿದಳು. ಎಲ್ಲರಿಂದಲೂ ಅಭಿನಂದನೆಗಳನ್ನು ಸ್ವೀಕರಿಸುತ್ತಿದ್ದಂತೆ ‘ಪೂಜೆಗೆಲ್ಲಾ ಅಣಿಯಾಗಿದೆ ಇಬ್ಬರೂ ಬನ್ನಿ’ ಎಂದು ದಯಾನಂದನ ಅಕ್ಕ ಅವರಿಬ್ಬರನ್ನೂ ದೇವಸ್ಥಾನದೊಳಕ್ಕೆ ಕರೆದೊಯ್ದರು.
ಪೂಜೆ ಪುನಸ್ಕಾರಗಳೆಲ್ಲ ಮುಗಿದಮೇಲೆ ಒಬ್ಬರಿಗೊಬ್ಬರು ಹಾರಗಳನ್ನು ಬದಲಾಯಿಸಿಕೊಂಡಿದ್ದಾಯಿತು. ನಂತರ ದೇವರ ಮುಂದಿಟ್ಟಿದ್ದ ಒಂದು ಕವರನ್ನು ಪರೋಹಿತರು ದಯಾನಂದನ ಕೈಗಿತ್ತು ಇಬ್ಬರನ್ನೂ ಆಶೀರ್ವದಿಸಿದರು. ಸುಕನ್ಯಾ ಅದೇನೆಂದುಕೊಳ್ಳುತ್ತಿದ್ದಂತೆ ಅದನ್ನು ದಯಾನಂದ ಸುಕನ್ಯಾಳ ಕೈಯಿಗೆ ವರ್ಗಾಯಿಸಿದನು. ಅವಳಿಗೆ ಅದೇನೆಂದು ಅಲ್ಲೇ ತೆಗೆದು ನೋಡುವ ಕುತೂಹಲ ಉಂಟಾಯಿತು. ಅಷ್ಟರಲ್ಲಿ ‘ಅಮ್ಮಾ ಆ ಲಕೋಟೆಯನ್ನು ಇಲ್ಲಿಕೊಡು, ಜೋಪಾನವಾಗಿಟ್ಟು ಆನಂತರ ನಿನಗೆ ಕೊಡುತ್ತೇನೆ. ಈಗ ಹೊಟ್ಟೆ ತಾಳಹಾಕುತ್ತಿದೆ. ತಿಂಡಿ ರೆಡಿಯಿದೆಯೆಂದು ಅಚ್ಯುತಣ್ಣ ಈಗ ಫೋನ್ ಮಾಡಿದ್ದರು. ದಯವಿಟ್ಟು ಅಲ್ಲಿಗೆ ಹೋಗೋಣ ನಡೆಯಿರಿ ‘ಎಂದಳು ಮಗಳು ಮಾಧವಿ. ಮನಸ್ಸಿಲ್ಲದ ಮನಸ್ಸಿನಿಂದ ಅವಳಿಗೆ ಲಕೋಟೆಯನ್ನು ಇತ್ತು ಮತ್ತೊಮ್ಮೆ ದೇವರತ್ತ ಕೈಮುಗಿದು ಎಲ್ಲರೊಡನೆ ದೇವಾಲಯದಿಂದ ಹೊರಬಂದಳು ಸುಕನ್ಯಾ.
ಮನೆಯ ಮುಂದೆ ಇಳಿದ ಸುಕನ್ಯಾ ಬೆರಗಾಗಿ ನಿಂತುಬಿಟ್ಟಳು. ‘ಅರೆ ! ಇದು ನಾವಿದ್ದ ಮನೆ, ಎಷ್ಟು ಚೆನ್ನಾಗಿ ಅಂದಗೊಳಿಸಿದ್ದಾರೆ. ಅತ್ತೆಯವರ ಜೊತೆ ಬಂದಾಗ, ನಾವಿದ್ದಾಗ ಹೇಗಿತ್ತೋ ಹಾಗೇ ಇದೆ. ಇತ್ತೀಚೆಗೆ ನವೀಕರಿಸಿದ್ದಾರೆ ಅಚ್ಯುತಮಾವ’ ಎಂದು ಉದ್ಗಾರ ತೆಗೆಯುತ್ತಾ ಮಿಕ್ಕವರು ಕಾರಿನಿಂದಿಳಿದರೋ ಬಿಟ್ಟರೋ ಎನ್ನುವ ಕಡೆ ಗಮನವೀಯದೆ ಒಳನಡೆದಳು.
ಚಿಕ್ಕ ಹುಡುಗಿಯಂತೆ ಇಡೀ ಮನೆಯನ್ನು ಸುತ್ತಿಬಂದಳು. ಮುಂಬಾಗಿಲ ಮೆಟ್ಟಿಲು, ಅಕ್ಕಪಕ್ಕದ ಜಗುಲಿ, ಎರಡೂ ಕಡೆಗಳಲ್ಲಿ ಕಡೆದು ನಿಲ್ಲಿಸಿದ ಕಂಬಗಳು, ಹೊಸದಾಗಿ ಬಣ್ಣ ಬಳಿದುಕೊಂಡು ಹಾಗೇ ಉಳಿದಿವೆ. ಆದರೆ ಒಳಗೆ ಸಾಕಷ್ಟು ಬದಲಾವಣೆಗಳಾಗಿವೆ. ಹಾಲಿನಲ್ಲಿದ್ದ ಮೆಟ್ಟಿಲುಗಳು ಮಾಯವಾಗಿವೆ. ಹಾಲು ಸಾಕಷ್ಟು ವಿಶಾಲವಾಗಿ ಕಾಣಿಸುತ್ತಿದೆ. ಅದರ ಎರಡೂ ಪಕ್ಕಗಳಲ್ಲಿ ರೂಮುಗಳು, ವಾರ್ಡ್‌ರೋಬ್ , ಅಟ್ಯಾಚ್ಡ್ ಬಾತ್, ನಂತರ ಹಾಲನ್ನು ದಾಟಿ ಹೊರಗೆ ಕಾಲಿಟ್ಟರೆ ಬಲಭಾಗದಲ್ಲಿ ಅಡುಗೆಮನೆ, ಎಡಭಾಗದಲ್ಲಿ ಮತ್ತೊಂದು ಬಾತ್‌ರೂಮು, ಹಿಂದಿನ ಬಾಗಿಲು, ಅಲ್ಲಿ ಒಂದು ಮನೆ, ವಿಶಾಲವಾದ ಅಡುಗೆಮನೆ, ಬಾವಿಗೆ ಪಂಪ್ ಹಾಕಿಸಲಾಗಿದೆ, ಮಧ್ಯಮಧ್ಯೆ ಇದ್ದ ಸುತ್ತಲಿನ ಕಂಭಗಳು ಈಗಿಲ್ಲ. ಒಟ್ಟಾರೆಯಾಗಿ ಹಳೆಯಮನೆಗೆ ಹೊಸದೊಂದು ರೂಪು, ಉಪಯುಕ್ತತೆ ಪಡೆದು ಸಿಂಗಾರಗೊಂಡಿತ್ತು. ಆದರೆ ಹಿಂಭಾಗದಲ್ಲಿ ಹೊರಗೆ ಒಂದು ಮನೆ, ವಿಶಾಲವಾದ ಅಡುಗೆಮನೆ ಏಕೆ ಮಾಡಿಸಿದ್ದಾರೆ? ಏನೋ ಮುಂದಿನ ಯೋಜನೆ ಇರಬೇಕು ಎಂದುಕೊಂಡಳು ಸುಕನ್ಯಾ.
‘ಅಮ್ಮಾ ಎಲ್ಲಿದ್ದೀಯೆ? ಎಲ್ಲರೂ ನಿನಗಾಗಿ ಕಾಯುತ್ತಿದ್ದಾರೆ ಬಾ’ ಎಂದು ಕೂಗಿದಳು ಮಾಧವಿ.
‘ಹಾ.. ಬಂದೆ ಬಂದೆ ‘ಎನ್ನುತ್ತಾ ಎಲ್ಲರೊಡನೆ ಎಲ್ಲಾ ತರಕಾರಿಗಳನ್ನು ಹಾಕಿ ಮಾಡಿದ ಸಾಗುವಿನ ಜೊತೆ ತೆಂಗಿನಕಾಯಿ ಚಟ್ನಿ, ಪೂರಿ, ಕೇಸರಿಬಾತ್, ಹೊಟ್ಟೆತುಂಬಾ ತಿಂದಳು. ಸುಕನ್ಯಾಳ ಮನದಲ್ಲಿ ಏನೋ ಸಂತಸ, ನವಉಲ್ಲಾಸ ಮೂಡಿತ್ತು. ಗಂಡನನ್ನು ಹುಡುಕಿ ‘ರೀ, ಜಮೀನನ್ನು ನೋಡಬೇಕೆನ್ನಿಸುತ್ತಿದೆ. ಹೋಗಿ ಬರೋಣವೇ?’ ಎಂದಳು.
‘ಅಮ್ಮಾ ಅದಕ್ಯಾಕೆ ಇಷ್ಟೊಂದು ಅವಸರ, ಅದೂ ಈ ಉರಿಬಿಸಿಲಲಲ್ಲಿ, ಸ್ವಲ್ಪ ವಾತಾವರಣ ತಂಪಾಗಲಿ ಹೋಗುವಿಯಂತೆ. ಹಾ.. ಅಂದಹಾಗೆ ಮರೆತಿದ್ದೆ, ಅಪ್ಪಕೊಟ್ಟ ಲಕೋಟೆ ಒಡೆದು ನಿಧಾನವಾಗಿ ಓದು. ಎಲ್ಲವೂ ನಿನಗೇ ಅರ್ಥವಾಗುತ್ತೆ’ ಎಂದು ಒಳಗೆ ಹೋಗಿ ಲಕೋಟೆಯನ್ನು ತಂದು ತನ್ನಮ್ಮನ ಕೈಗೆ ಕೊಟ್ಟಳು.
ಮಗಳು ಕೊಟ್ಟ ಲಕೋಟೆಯನ್ನು ಒಡೆದು ಅದರಲ್ಲಿದ್ದ ಪತ್ರವನ್ನು ಹೊರತೆಗೆದಳು. ಅದೊಂದು ಆಸ್ತಿಯ ಹಕ್ಕುಪತ್ರವಾಗಿತ್ತು. ‘ಇದೇನು? ‘ಎನ್ನುತ್ತಿರುವಂತೆ ದಯಾನಂದ ‘ಸುಕನ್ಯಾ ಬಾಯಿಲ್ಲಿ ಕುಳಿತುಕೋ, ನೋಡು ನಾನಿದುವರೆಗೂ ನಿನ್ನಿಂದ ಮುಚ್ಚಿಟ್ಟ ಸಂಗತಿಯನ್ನು ಈಗ ನಿನ್ನ ಮುಂದೆ ಬಿಚ್ಚಿಟ್ಟಿದ್ದೇನೆ. ನಾನು ನಿವೃತ್ತನಾದ ಮೇಲೆ ನನಗೆ ಸರಕಾರದಿಂದ ಸಂದಾಯವಾದ ಹಣದಲ್ಲಿ ಮೈಸೂರಿನಲ್ಲೇ ಒಂದು ಮನೆಯನ್ನು ಕೊಳ್ಳುವುದೋ, ಅಥವಾ ನಮಗಿರುವ ಸೈಟಿನಲ್ಲಿ ಒಂದು ಹೊಸಮನೆಯನ್ನು ಕಟ್ಟುವುದೋ ಎಂಬ ಜಿಜ್ಞಾಸೆಯಲ್ಲಿದ್ದೆ. ಅದೇವೇಳೆಗೆ ಅಚ್ಯುತನಿಂದ ಫೋನ್ ಬಂತು ‘ದಯಣ್ಣಾ ನನ್ನ ಮಕ್ಕಳಿಬ್ಬರೂ ವಿದೇಶದಲ್ಲಿರುವುದು ನಿಮಗೆ ಗೊತ್ತಲ್ಲಾ’ ಎಂದ. ನಾನು ‘ಅದಕ್ಕೇನೀಗ?’ ಎಂದೆ. ‘ಏನಿಲ್ಲ ನನಗೆ ಜಮೀನಿನ ಉಸ್ತುವಾರಿ ನೋಡಿಕೊಳ್ಳಲು ತುಂಬ ಕಷ್ಟವಾಗುತ್ತಿದೆ. ಅಲ್ಲದೆ ಅಕ್ಕನಿಂದ ಕೊಂಡ ಮನೆಯೂ ರಿಪೇರಿಗೆ ಬಂದಿದೆ. ಇವನ್ನೆಲ್ಲ ಯೋಚಿಸಿ ಇವೆರಡನ್ನೂ ಒಟ್ಟಾಗಿ ಮಾರಿಬಿಡೋಣ ಎಂದು ತೀರ್ಮಾನಿಸಿದ್ದೇನೆ. ಅದನ್ನು ನಿಮಗೆ ತಿಳಿಸಿ ನಿಮ್ಮ ಅಭಿಪ್ರಾಯ ಕೇಳೋಣವೆಂದು ಮಾಡಿದೆ’ ಎಂದ. ಆಗ ನನ್ನ ಮನಸ್ಸಿನ ಮುಂದೆ ನಿಂತವಳು ನೀನೇ. ನಿನಗೆ ಈ ಮನೆ ಜಮೀನು ಎಷ್ಟು ಇಷ್ಟವಾಗಿತ್ತು ಎಂದು ನಾನು ಬಲ್ಲೆ. ಹೀಗಾಗಿ ಅವೆರಡನ್ನೂ ನಾನೇ ಖರೀದಿಸಿ ಮನೆಯನ್ನು ನವೀಕರಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಅಚ್ಯುತನಿಗೆ ನನ್ನ ನಿರ್ಧಾರವನ್ನು ತಿಳಿಸಿದೆ. ಅದಕ್ಕವನು ಸಂತೋಷದಿಂದ ಒಪ್ಪಿಕೊಂಡ. ಅಮ್ಮನಿಂದ ಅವನು ಖರೀದಿಸಿದ್ದಕ್ಕಿಂತ ಸ್ವಲ್ಪ ಹೆಚ್ಚಿಸಿದ.
‘ನಾನು ಏನಪ್ಪಾ ನಮ್ಮಲ್ಲಿಯೂ ಪ್ರೀತಿವಿಶ್ವಾಸವಿರಲಿ, ಆದರೆ ವ್ಯವಹಾರದಲ್ಲಿ ಅದನ್ನು ತರಬೇಡ’ ಎಂದೆ. ಅದಕ್ಕವನು ‘ಆ ಮನೆಯನ್ನು ತೆಗೆದುಕೊಂಡಾಗಿನಿಂದ ಇಲ್ಲಿಯವರೆಗೆ ಅದಕ್ಕಾಗಿ ಹೆಚ್ಚು ಖರ್ಚುಮಾಡಿಕೊಂಡಿಲ್ಲ ನಿಜ, ಆದರೂ ಈಗ ಅದು ಹಳೆಯದಾಗಿದೆ, ರಿಪೇರಿಗೆ ಬಂದಿದೆ. ಜಮೀನಿನಲ್ಲಿ ಹೊಸದಾಗೇನೂ ಮಾರ್ಪಾಡು ಮಾಡಿಲ್ಲ. ಅಮ್ಮ ಮಾಡಿದ್ದನ್ನು ಸಂರಕ್ಷಿಸಿ ಹಾಗೇ ಇರಿಸಿದ್ದೇನೆ. ವಯಸ್ಸಾದ ಹಸುಗಳ ಬದಲಾಗಿ ಬೇರೆ ಹಸುಗಳನ್ನು ತಂದಿದ್ದೇನಷ್ಟೇ’ ಎಂದ.
‘ಸರಸರ ಖರೀದಿಸಿದ್ದಾಯಿತು. ಆಗಲೇ ನಿನಗೆ ಹೇಳೋಣವೆಂದುಕೊಂಡೆ. ಮಾಧವಿ ಬೇಡ, ಎಲ್ಲವನ್ನೂ ಮಾಡಿದಮೇಲೆ ಹೇಳೋಣವೆಂದು ತಡೆದಳು. ನಂತರ ನವೀಕರಣದ ಕೆಲಸ ಕೈಗೆತ್ತಿಕೊಂಡೆ. ನಾನು ಹೀಗೆಹೀಗೆ ಮಾಡಬೇಕೆಂದು ಸಲಹೆ ನೀಡುತ್ತಿದ್ದೆ. ಆದರೆ ಅದರ ಪೂರ್ಣ ಜವಾಬ್ದಾರಿ ತೆಗೆದುಕೊಂಡು ಪೂರೈಸಿಕೊಟ್ಟವರು ನನ್ನ ಗೆಳೆಯ ವಿಶ್ವ ಮತ್ತು ಅಚ್ಯುತ. ತಮ್ಮದೇ ಮನೆಯ ಕೆಲಸವೆನ್ನುವಷ್ಟು ಮುತುವರ್ಜಿಯಿಂದ ಎಲ್ಲವನ್ನೂ ಈ ರೂಪಕ್ಕೆ ತಂದಿದ್ದಾರೆ. ಜಮೀನಿನಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೇನೆ. ಇನ್ನೊಂದು ವಿಷಯ ಮರೆತಿದ್ದೆ. ಹಿಂದುಗಡೆ ಇರುವ ವಾಸದ ಮನೆಯನ್ನು ಕೊಟ್ಟಿರುವುದು ಕೇಟರಿಂಗ್ ಮಾಡುವ ಕುಟುಂಬದವರಿಗೆ. ಅವರೇ ಇನ್ನುಮೇಲೆ ನಮಗೂ ಅನ್ನದಾತರು. ಅಡುಗೆ ಕೆಲಸದಿಂದ ನಿನಗೆ ಮುಕ್ತಿ. ಹೊರಗಿನ ಕೆಲಸಕ್ಕೆ ಒಬ್ಬಾಕೆ ಬರುತ್ತಾಳೆ. ಅಮ್ಮ ಇದ್ದಾಗ ಬರುತ್ತಿದ್ದರಲ್ಲ ಅವರ ಮಗಳಾದ ಕೆಂಪಮ್ಮಾಂತ. ನಾನೂ ಈ ಲೆಕ್ಕಪತ್ರಗಳ ವ್ಯವಹಾರ, ಖಾಸಗಿ ಕಾಲೇಜುಗಳ ಸಹವಾಸ ಎಲ್ಲಕ್ಕೂ ತಿಲಾಂಜಲಿ ಇತ್ತು ಇನ್ನು ಇಲ್ಲೇ ನಮ್ಮ ಜಮೀನು, ಮನೆ ನೋಡಿಕೊಂಡು ಇರುವುದೆಂದು ತೀರ್ಮಾನಿಸಿದ್ದೇನೆ. ಹೇಗಿದ್ದರೂ ನನಗೆ ಬರುವ ಪೆನ್ಷನ್ ನಮ್ಮ ಜೀವನಕ್ಕೆ ಸಾಕಾಗುತ್ತದೆ. ಇನ್ನು ನನಗೆ ನೀನು. ನಿನಗೆ ನಾನು ಜೊತೆಯಾಗಿರೊಣ. ನಿನ್ನ ಅಭಿಲಾಷೆಯೂ ಇದೇ ಅಲ್ಲವೇ? ಏನಂತೀಯಾ? ಇದನ್ನೇ ನಾನು ಅವತ್ತು ಸರ್‍ಪ್ರೈಸ್ ಎಂದದ್ದು. ಇಲ್ಲಿಯವರೆಗೂ ಏನೂ ಹೇಳದೇ ಹೀಗೆ ಮಾಡಿದೆನೆಂದು ಕೋಪವಿಲ್ಲ ತಾನೇ? ‘ಎಂದ ದಯಾನಂದ.
‘ಇಂದು ಸಂಜೆಗೆ ಜಮೀನಿನ ಬಳಿಗೆ ಕರೆದುಕೊಂಡು ಹೋಗುತ್ತೇನೆ. ನೀನೇ ಕಣ್ಣಾರೆ ಅಲ್ಲಿನ ಬದಲಾವಣೆಗಳನ್ನು ನೋಡುವೆಯಂತೆ. ಈಗ ಸದ್ಯಕ್ಕೆ ಎಲ್ಲರೊಡನೆ ಮಾತುಕತೆಯಾಡು. ಮಧ್ಯಾನ್ಹದ ಊಟಕ್ಕೆ ಅಡುಗೆ ತಯಾರಾಗುತ್ತಿದೆಯಾ ನೋಡು. ನಾನು ಹಾಗೇ ವಿಶ್ವನ ಮನೆಗೆ ಹೋಗಿ ಬರುತ್ತೇನೆ. ಅವರ ಮನೆಯವರನ್ನೂ ಊಟಕ್ಕೆ ಕರೆದುಕೊಂಡು ಬರುತ್ತೇನೆ’ ಎಂದು ಹೊರಕ್ಕೆ ಹೊರಟ ದಯಾನಂದ.
ಸುಕನ್ಯಾಳಿಗೆ ಜಮೀನಿನ ಕಡೆ ಹೋಗಬೇಕೆಂಬ ಬಯಕೆ ಹುಚ್ಚೆದ್ದು ಕುಣಿಯಿತಾದರೂ ಸಂಜೆಯವರೆಗೆ ಕಾಯಬೇಕು. ತೀರಾ ಅವಸರವನ್ನು ತೋರಿಸಿಕೊಳ್ಳಬಾರದೆಂದು ತನ್ನ ಆಸೆಯನ್ನು ಅದುಮಿಟ್ಟುಕೊಂಡು ಅಡುಗೆ ಮನೆಯತ್ತ ನಡೆದಳು.
ಸುಕನ್ಯಾ ಬಂದದ್ದನ್ನು ಗಮನಿಸಿದ ಅಡುಗೆ ಭಟ್ಟ ದಂಪತಿಗಳು’ ಬನ್ನೀ ಅಮ್ಮಾ, ಇನ್ನು ಏನಿದ್ದರೂ ಮೆಣಸಿನಕಾಯಿ ಬಜ್ಜಿ, ಹಪ್ಪಳ, ಸಂಡಿಗೆ ಕರಿಯುವುದು ಬಾಕಿಯಿದೆ. ಎಲ್ಲವೂ ಸಿದ್ಧವಾಗಿದೆ. ಈಗಿನ್ನೂ ಹನ್ನೆರಡೂವರೆ, ಒಂದೂವರೆಗೆಲ್ಲ ಊಟಕ್ಕೆ ಬಡಿಸಬಹುದು’ ಎಂದರು.
‘ಹೌದೇ ಭಟ್ಟರೇ, ಏನೇನು ಹೇಳಿದ್ದಾರೆ? ಏನೇನು ಆಗಿದೆ? ಎಂದು ಕೇಳಿದಳು ‘ಸುಕನ್ಯಾ.
‘ಬೇಳೆ ಹೋಳಿಗೆ, ಮಾವಿನಹಣ್ಣಿನ ಸೀಕರಣೆ, (ಮಾವಿನ ಹಣ್ಣು ನಿಮ್ಮಗಿಡದ್ದೇ) ವಾಂಗೀಬಾತ್, ಎರಡು ತರಹದ ಪಲ್ಯ, (ಹುರುಳೀಕಾಯಿ, ಸೊಪ್ಪಿನದು) ಹೆಸರುಬೇಳೆ ಕೋಸಂಬರಿ, ಒಬ್ಬಟ್ಟಿನ ಸಾರು, ಮೊಸರು, ಮಜ್ಜಿಗೆ, ಉಪ್ಪಿನಕಾಯಿ, ನಂಜನಗೂಡಿನ ರಸಬಾಳೆ ಹಣ್ಣು, ಬೀಡಾ. ಇವೆಲ್ಲ ನಿಮಗಿಷ್ಟವಾದದ್ದೆಂದು ಯಜಮಾನರು ಹೇಳಿದರು. ಅವರ ಮಾತಿಗೆ ನಿಮ್ಮ ಮಕ್ಕಳೂ ದನಿಗೂಡಿಸಿದರು. ಹಾ ಅಮ್ಮಾ ನಿಮಗೇನಾದರೂ ಮತ್ತೊಂದು ಕಪ್ಪು ಕಾಫಿ ಬೇಕಿತ್ತೇ? ಅಥವಾ ಪಾನಕವೇನಾದರೂ, ಮತ್ಯಾರಿಗಾದರೂ ಬೇಕೆಂದು ಕೇಳಲೇ? ‘ಎಂದರು.
‘ಬೇಡಿ ಭಟ್ಟರೇ, ಊಟಕ್ಕೆ ಸಿದ್ಧವಾದನಂತರ ಕರೆದರಾಯಿತು. ಎಲ್ಲರೂ ರೆಸ್ಟ್ ಮೂಡಿನಲ್ಲಿದ್ದಾರೆ. ಅಂದಹಾಗೆ ನೀವು ಯಾವಕಡೆಯವರು? ನಿಮ್ಮ ಮಕ್ಕಳು ಮರಿ, ತನಿಖೆ ಮಾಡುತ್ತಿದ್ದೇನೆಂದು ತಪ್ಪು ತಿಳಿಯಬೇಡಿ’ ಎಂದಳು ಸುಕನ್ಯಾ.
‘ಹಾಗೇನಿಲ್ಲಮ್ಮಾ ಇನ್ನುಮೇಲೆ ನಾವು ಇಲ್ಲೇ ಇರುವವರಲ್ಲವೇ, ತಿಳಿದುಕೊಳ್ಳಬೇಕು. ನನ್ನ ಹೆಸರು ಸುಬ್ಬಾಭಟ್ಟ, ನನ್ನ ಹೆಂಡತಿ ಕಾವೇರಿ, ನಾನು ಇದೇ ನಂಜನಗೂಡಿನಲ್ಲೇ ಹುಟ್ಟಿ ಬೆಳೆದಿದ್ದು. ಪಿ.ಯು.ಸಿ.ವರೆಗೆ ವಿದ್ಯಾಭ್ಯಾಸ ಮಾಡಿ ಪಾಕಶಾಸ್ತ್ರದಲ್ಲಿ ತರಬೇತಿ ಪಡೆದಿದ್ದೇನೆ. ಒಂದು ಬೇಕರಿಯಲ್ಲೂ ದುಡಿದಿದ್ದೇನೆ. ನಮ್ಮ ಕುಲಕಸುಬೇ ಅಡುಗೆ. ನಾವು ಮೂರುಜನ ಅಣ್ಣತಮ್ಮಂದಿರು, ಹಿರಿಯರಿದ್ದಾಗ ಎಲ್ಲರೂ ಒಟ್ಟಿಗೆ ಇದ್ದೆವು. ನಂತರ ನನ್ನ ತಮ್ಮಂದಿರಿಬ್ಬರೂ ಮೈಸೂರಿನಲ್ಲಿ ದೊಡ್ಡ ಅಡುಗೆ ಕಂಟ್ರಾಕ್ಟರ್ ಹತ್ತಿರ ಸೇರಿಕೊಂಡುಬಿಟ್ಟರು. ನಾನು ಮಾತ್ರ ಇಲ್ಲೇ ಇರುವ ಮನಸ್ಸು ಮಾಡಿದೆ. ಇದ್ದ ಒಂದು ಮನೆ ತೀರ ಶಿಥಿಲವಾಗಿದ್ದು ಅದನ್ನು ರಿಪೇರಿ ಮಾಡಿಸಲು ಸಾಧ್ಯವಾಗದೆ ಅದನ್ನು ಮಾರಿ ಮೂರೂಜನ ಹಂಚಿಕೊಂಡೆವು. ಸ್ವಲ್ಪ ಸಾಲವೂ ಇತ್ತು. ಅದನ್ನೆಲ್ಲ ತೀರಿಸಿದ್ದಾಯಿತು. ಉಳಿದ ಹಣದಲ್ಲಿ ಜಾಗಖರೀದಿಸಿ ಮನೆ ಕಟ್ಟಿಸಲು ಸಾಲುವುದಿಲ್ಲ. ಮುಂದೆ ನೋಡೋಣವೆಂದು ಚಿಕ್ಕಚಿಕ್ಕ ಬಾಡಿಗೆ ಮನೆಗಳಲ್ಲಿದ್ದೇ ಯಾರಾದರೂ ಸಮಾರಂಭಗಳಿಗೆ ಕರೆದರೆ ಅಲ್ಲಿ ಹೋಗಿ ಅಡುಗೆ ಮಾಡುತ್ತಿದ್ದೆನು. ನಾವಿದ್ದ ಮನೆಯಲ್ಲಿಯೇ ಏನೂ ಮಾಡಿಕೊಡಲು ಸಾಧ್ಯವಿರಲಿಲ್ಲ. ಹೇಗೋ ಬದುಕಿನ ಬಂಡಿಯನ್ನೆಳೆಯುತ್ತಿದ್ದೆನು. ಮಗಳೊಬ್ಬಳಿದ್ದಾಳೆ ಮದುವೆ ಮಾಡಿಕೊಟ್ಟಿದ್ದೇವೆ. ಒಬ್ಬ ಮೊಮ್ಮಗನೂ ಇದ್ದಾನೆ. ಬೆಂಗಳೂರಿನಲ್ಲಿ ವಾಸವಿದ್ದಾಳೆ. ಅವರೂ ಅಡುಗೆ ಕೆಲಸವನ್ನೇ ಮಾಡಿಕೊಂಡಿದ್ದಾರೆ. ಜೊತೆಗೆ ಚಿಕ್ಕ ಚಿಲ್ಲರೆ ಅಂಗಡಿಯೊಂದನ್ನೂ ನಡೆಸುತ್ತಾರೆ. ಅದನ್ನು ಮಗಳೇ ನೋಡಿಕೊಳ್ಳುತ್ತಾಳೆ. ಅವಳ ಅತ್ತೆ ಮಾವ ಎಲ್ಲರೂ ಒಟ್ಟಿಗಿದ್ದಾರೆ. ನಿಮ್ಮ ದಯಾನಂದಪ್ನೋರು ಇರುವುದಕ್ಕೆ ಮನೆಯೊಂದನ್ನು ಕೊಡುತ್ತೇನೆ ನಿಮ್ಮ ಕೇಟರಿಂಗ್ ಕೆಲಸ ಮಾಡಿಕೊಳ್ಳಿ. ಜೊತೆಗೆ ನಮ್ಮನ್ನೂ ನೋಡಿಕೊಳ್ಳಿ ಎಂದರು. ಇಲ್ಲಿ ನೋಡಿ ನಮಗೆ ಸ್ವೀಟ್ಸ್ ಮಾಡಲು, ಬೇಕರಿ ಐಟಂ ಮಾಡಲು ಬೇಕಾದ ಎಲ್ಲ ಅನುಕೂಲಗಳನ್ನೂ ಮಾಡಿಕೊಟ್ಟಿದ್ದಾರೆ. ಅಂಗಡಿಯವರಿಗೆ, ಬೇಕರಿಯವರಿಗೆ ನಾವು ಇಲ್ಲಿ ತಯಾರಿಸಿ ಕಳುಹಿಸಿಕೊಡಬಹುದು. ನಾವಿದ್ದ ಮನೆಗಳಲ್ಲಿ ಈ ಅನುಕೂಲಗಳು ಇರಲಿಲ್ಲ. ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕೇಳುವವರಿದ್ದರೂ ನಾವು ಮಾಡಿಕೊಡಲಾಗದೇ ಅಸಹಾಯಕರಾಗಿದ್ದೆವು. ಈಗ ನಮಗೊಂದು ನಿರ್ದಿಷ್ಟ ನೆಲೆ ಒದಗಿಸಿದ್ದಾರೆ. ಈ ವ್ಯವಸ್ಥೆ ನಿಮಗೆ ಇಷ್ಟವಾಗುತ್ತೇಂತ ಭಾವಿಸಬಹುದೇ? ‘ಎಂದು ವಿನೀತರಾಗಿ ನುಡಿದರು ಸುಬ್ಬಾಭಟ್ಟರು.
‘ಛೇ ಛೇ ಭಟ್ಟರೇ, ದೊಡ್ಡ ಮಾತಾಯಿತು. ಹಾಗೆಲ್ಲಾ ಹೇಳಬೇಡಿ. ಸಹಜವಾಗಿಯೇ ಕೇಳಿದೆ. ನಮ್ಮವರು ಯೋಚಿಸಿಯೇ ತೀರ್ಮಾನ ತೆಗೆದುಕೊಂಡಿರುತ್ತಾರೆ. ಚಿಂತೆ ಮಾಡಬೇಡಿ. ನಮ್ಮ ಮನೆಯಲ್ಲಿ ಎರಡು ಮಾತಿಲ್ಲ. ಒಬ್ಬರಿಗೊಬ್ಬರು ನೆರವಾಗುವುದೇ ಮನುಷ್ಯ ಧರ್ಮ. ಅಡುಗೆ ಮುಗಿಸಲು ಅವಸರವೇನೂ ಇಲ್ಲ. ಸಾವಧಾನವಾಗಿ ಆಗಲಿ ‘ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದಳು ಸುಕನ್ಯಾ.
ಸುಕನ್ಯಾ ಅಡುಗೆಯವರ ಮುಂದೆ ಹೇಳಿದಂತೆ ಬಂಧು ಬಳಗದವರೆಲ್ಲ ಹಾಕಿದ್ದ ಜಮಖಾನದ ಮೇಲೆಯೇ ದಿಂಬುಗಳನ್ನು ಒರಗಿಕೊಂಡು ಮೆಲು ಸಂಭಾಷಣೆ ನಡೆಸುತ್ತಾ ಅಡ್ಡಾಗಿದ್ದರು. ಬಂದವರಿಗೆಲ್ಲ ಸಾಕಾಗುವಷ್ಟು ಜಮಖಾನೆ, ದಿಂಬುಗಳನ್ನು ಸಿದ್ಧಪಡಿಸಿದ್ದ ಅಚ್ಯುತಮಾವನ ಮುಂದಾಲೋಚನೆಗೆ ಮನದಲ್ಲೇ ವಂದಿಸಿದಳು. ಮತ್ತೊಮ್ಮೆ ಮನೆಯನ್ನೆಲ್ಲಾ ವೀಕ್ಷಿಸಿದಳು. ಮನಸ್ಸಿನಲ್ಲಿ ಏನೋ ಒಂದು ರೀತಿಯ ನಿರಾಳತೆ ಮೂಡಿತ್ತು. ಅತ್ತೆ, ಮಾವ ಇಲ್ಲೇ ಇದ್ದಾರೇನೋ ಎಂಬ ಭಾವನೆ ತುಂಬಿಕೊಳ್ಳುವಷ್ಟರಲ್ಲಿ ದಯಾನಂದ ಆತನ ಗೆಳೆಯ ವಿಶ್ವ ಮತ್ತವರ ಕುಟುಂಬ, ಅಚ್ಯುತನ ಸಂಸಾರದವರು ಬರುತ್ತಿರುವ ಸೂಚನೆ ಸಿಕ್ಕಿ ಅವರೆಲ್ಲರನ್ನು ಸ್ವಾಗತಿಸಲು ಹೊರಬಾಗಿಲಿಗೆ ಬಂದಳು ಸುಕನ್ಯಾ. ‘ಸುಕನ್ಯಾ ಹೇಗಿದೆ ಮನೆ? ಹಿಡಿಸಿತೋ? ‘ಎಂದು ಕೇಳಿದ ಅಚ್ಯುತನ ಮಾತಿಗೆ ಅಲ್ಲಾ ನೀವು ನಮ್ಮನೆಗೆ ಫೋನ್ ಮಾಡಿದಾಗ ಇದರ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಡಲಿಲ್ಲವಲ್ಲಾ ಮಾವ’ ಎಂದಳು.
‘ಹೇಳಬಾರದೆಂದು ಬಲವಾಗಿ ತಾಕೀತು ಮಾಡಿದ್ದರಮ್ಮಾ ಅಪ್ಪಾ ಮಗಳು. ಈಗೇನಾಯ್ತು ನಿನ್ನಾಸೆಯಂತೆ ಎಲ್ಲವೂ ಆಯಿತಲ್ಲಾ? ಜಮೀನನ್ನು ನೋಡಿದೆಯಾ?’ ಎಂದ ಅಚ್ಯುತ.
‘ಇನ್ನೂ ಇಲ್ಲ, ನಾನೇ ಸಂಜೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೇನಪ್ಪಾ’ ಎಂದ ದಯಾನಂದ.
‘ಸರಿ ಹಾಗಾದರೆ, ಭಟ್ಟರೇ ಅಡುಗೆ ರೆಡೀನಾ? ಹಾ ಊಟಕ್ಕೆ ಹಾಲಿನಲ್ಲೇ ಕುಳಿತುಕೊಳ್ಳುವುದೇ? ಹಾಗಿದ್ದರೆ ಇದೋ ನೋಡಿ ಕೆಲವು ಟೇಬಲ್ಲುಗಳಿವೆ. ಚೇರುಗಳನ್ನು ಹೊಂದಿಸಿಕೊಂಡು ಕುಳಿತುಕೊಳ್ಳಬಹುದು. ಕೆಳಗೇ ಕುಳಿತುಕೊಳ್ಳಲು ಇದೇ ಜಮಖಾನೆಗಳನ್ನು ಮಡಿಸಿ ಉದ್ದಕ್ಕೆ ಹಾಸಿಕೊಳ್ಳಬಹುದು’ ಎಂದು ಚಕಚಕನೆ ಸಿದ್ಧಪಡಿಸಲು ಪ್ರಾರಂಭಿಸಿಯೇ ಬಿಟ್ಟರು ಅಚ್ಯುತ.
ಎರಡೂ ಕಡೆಯ ಬಂಧುಗಳು ಆತ್ಮೀಯ ಸ್ನೇಹಿತರು, ಅವರ ಕುಟುಂಬದವರು, ರೈತಾಪಿ ಜನರೂ ಸೇರಿ ಸುಮಾರು ಐವತ್ತು ಜನ ಆಗಬಹುದಲ್ಲವೇ ದಯಾ ಎಂದ ಅಚ್ಯುತನ ಮಾತಿಗೆ ಹೂ ..ಆಗಬಹುದು. ಹಾಲಿನಲ್ಲೇ ಬ್ಯಾಚ್ ಬೈ ಬ್ಯಾಚ್ ಮಾಡಿದರಾಯ್ತು ಎಂದ ದಯಾನಂದ.
ಊಟವು ಬಹಳ ರುಚಿಕಟ್ಟಾಗಿತ್ತು. ಎಲ್ಲರೂ ಒಬ್ಬರಿಗೊಬ್ಬರು ನಗುತ್ತಾ ಮಾತನಾಡುತ್ತಾ ಊಟ ಮಾಡಿದ್ದು ಸಂತೋಷಕರವಾಗಿತ್ತು. ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಕಾಫಿ, ಟೀ ಸಮಾರಾಧನೆಯನ್ನೂ ಮುಗಿಸಿದರು. ಸುಕನ್ಯಾ ಜಮೀನಿನತ್ತ ಹೋಗಲು ಸಿದ್ಧಳಾಗಿ ನಿಂತಿದ್ದುದನ್ನು ಕಂಡು ದಯಾನಂದ ‘ಇನ್ನೂ ಸ್ವಲ್ಪ ಹೊತ್ತು ತಂಪಾದಮೇಲೆ ಹೋಗಬಹುದಲ್ಲಾ ಸುಕನ್ಯಾ’ ಎಂದ.
‘ಬೇಡಿ ಕತ್ತಲಾಗುವದಕ್ಕೂ ಮುಂಚೆ ಹೋಗಿ ಬಂದು ಬಿಡೋಣ’ಎಂದು ಅವಸರ ಪಡಿಸಿದಳು ಸುಕನ್ಯಾ.
‘ಆಯ್ತು, ಜಮೀನಿನ ಹತ್ತಿರ ಹೋಗಲು ಯಾರ್‍ಯಾರು ಬರುತ್ತೀರಾ?’ ಎಂದು ಎಲ್ಲರನ್ನುದ್ದೇಶಿಸಿ ಕೇಳಿದ ದಯಾನಂದ.
‘ಅಪ್ಪಾ ನಾವೆಲ್ಲರೂ ನೆನ್ನೆಯೇ ಒಂದು ಸುತ್ತು ಹೋಗಿ ನೋಡಿಕೊಂಡು ಬಂದದ್ದಾಗಿದೆ. ನೀವು ಅಮ್ಮನನ್ನು ಕರೆದುಕೊಂಡು ಹೋಗಿ ಬನ್ನಿ ‘ಎಂದು ಉಳಿದೆಲ್ಲರ ಪರವಾಗಿ ಮಾಧವಿಯೇ ಹೇಳಿಬಿಟ್ಟಳು.
‘ಹೌದೇ? ಹಾಗಾದರೆ ನಾವು ಹೊರಡೋಣವೇ?’ ಎಂದು ಗಂಡನ ಕಡೆಗೆ ನೋಡಿದಳು ಸುಕನ್ಯಾ.
ಅವಳ ಆತುರ, ಕಾತರ ಕಂಡ ದಯಾನಂದ ಮನಸ್ಸಿನಲ್ಲೇ ನಗುತ್ತಾ ಮುಂದೆ ಮಾತನಾಡದೆ ಹೊರಟುನಿಂತ. ಬೆಳಗ್ಗೆ ಮೈಸೂರಿನಿಂದ ನಂಜನಗೂಡಿಗೆ ಅವರನ್ನು ಕರೆತಂದಿದ್ದ ದಯಾನಂದನ ಗೆಳೆಯ ವಿಶ್ವನ ಕಾರು ಮನೆಯ ಮುಂದೆ ನಿಂತಿತ್ತು. ಇವರಿಬ್ಬರೂ ಹೊರಗೆ ಬಂದದ್ದು ನೋಡಿ ‘ಜಮೀನಿನ ಹತ್ತಿರ ತಾನೇ ಹೊರಟಿರುವುದು? ಬನ್ನಿ ಹೋಗೋಣ’ ಎಂದ ಸಾರಥಿ. ದಯಾನಂದ ಉತ್ತರ ಹೇಳುವುದರೊಳಗೆ ಸುಕನ್ಯಾ ‘ಬನ್ನಿ ಬೇಗ ಹೋಗಿ ಬಂದುಬಿಡಬಹುದು’ ಎಂದು ತಾನೇ ಮುಂದಾಗಿ ಕಾರಿನ ಕಡೆಗೆ ನಡೆದಳು. ನಿರ್ವಾಹವಿಲ್ಲದೆ ದಯಾನಂದನೂ ಅವಳನ್ನು ಹಿಂಬಾಲಿಸಿದ. ತನ್ನತ್ತೆಯ ಜೊತೆ ಆಗಾಗ್ಗೆ ಜಮೀನಿನ ಹತ್ತಿರ ಬರುತ್ತಿದ್ದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕಿಟಕಿಯಾಚೆ ದೃಷ್ಟಿ ನೆಟ್ಟಳು. ಅಲ್ಲಿಗೆ ಹೋಗುವ ಹಾದಿಯಲ್ಲಿ ಸಾಕಷ್ಟು ಬದಲಾವನೆಗಳನ್ನು ಕಂಡಳು.
ತಮ್ಮ ಜಮೀನಿನ ಸುತ್ತಲಿದ್ದ ಕಾಂಪೌಂಡು ಸುಣ್ಣಬಣ್ಣ ಬಳಿದುಕೊಂಡು ಸಿಂಗಾರಗೊಂಡಿತ್ತು. ಗೇಟು ತೆರೆದು ಒಳಕ್ಕೆ ಅಡಿಯಿಟ್ಟ ಸುಕನ್ಯಾ ತನ್ನ ನೋಟವನ್ನು ಸುತ್ತಲೂ ಹರಿದಾಡಿಸಿದಳು. ಒಕ್ಕಲುತನ ಮಾಡಿಕೊಂಡಿದ್ದ ಕುಟುಂಬದ ನಿವಾಸ, ಸ್ವಲ್ಪ ಮುಂದೆ ಇದ್ದ ಹಸುಗಳ ಕೊಟ್ಟಿಗೆ, ಮೊದಲಿಗಿಂತ ವಿಸ್ತಾರಗೊಂಡು ನವೀಕರಣಕೊಂಡಿತ್ತು. ಹಣ್ಣಿನ ಮರಗಳು, ತರಕಾರಿ, ಸೊಪ್ಪಿನ ಮಡಿಗಳು, ಹೂವಿನ ಗಿಡಗಳು, ಮೊದಲಿದ್ದ ಸಂಖ್ಯೆಗಿಂತ ಹೆಚ್ಚಾಗಿ ಕಾಣಿಸಿದವು. ಹಾಗೇ ಮುಂದೆ ಔಷಧೀಯ ಸಸ್ಯಗಳು ಬೆಳೆದು ನಿಂತಿದ್ದವು. ಅದರ ವಿಸ್ತೀರ್ಣ ಹೆಚ್ಚಾದಂತೆ ಕಂಡುಬಂತು. ಹಾಗೇ ಒಂದು ಸಣ್ಣ ಕುಠೀರದಂತಹ ಮನೆ ಕಾಣಿಸಿತು. ಅದು ಮೊದಲಿರಲಿಲ್ಲ. ಅಚ್ಚರಿಯಿಂದ ಗಂಡನಕಡೆಗೆ ನೋಡಿದಳು.
‘ಅದು ಆಯುರ್ವೇದ ತಿಳಿದಿರುವ ಪಂಡಿತರು ಇರಲು ಅನುವು ಮಾಡಿಕೊಟ್ಟಿದ್ದೇನೆ. ಇವರ ತಂದೆಯವರು ಅಮ್ಮನ ಗುರುಗಳಾಗಿದ್ದರು. ಇವರೂ ಅದೇ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಜೊತೆಗೆ ಕೈಕಾಲು ಮುರಿದರೆ ಅದನ್ನು ಸರಿಪಡಿಸುವ ವಿದ್ಯೆಯನ್ನೂ ಕಲಿತಿದ್ದಾರೆ. ಮದುವೆ ಮಾಡಿಕೊಳ್ಳದೆ ಒಬ್ಬರೇ ಇದ್ದಾರೆ. ‘ಗುಂಡಾಜೋಯಿಸ’ರೆಂದು ಅವರ ಹೆಸರು. ದೇವಸ್ಥಾನದ ಅರ್ಚಕರ ಮನೆಯ ಹಿಂಭಾಗದಲ್ಲಿದ್ದ ಒಂದು ಕೊಠಡಿಯಲ್ಲಿ ವಾಸವಿದ್ದರು. ಅಲ್ಲೇ ತಮಗೆ ಗೊತ್ತಿರುವ ವಿದ್ಯೆಯಿಂದ ಸೇವೆ ನೀಡುತ್ತಾ ಜೀವನ ನಡೆಸುತ್ತಿದ್ದರು. ಔಷಧಿಗಳಿಗೆ ಬೇಕಾದ ಗಿಡಮೂಲಿಕೆಗಳಿಗಾಗಿ ನಮ್ಮಲ್ಲಿಗೆ ಬರುತ್ತಿದ್ದರೆಂದು ಅಚ್ಯುತ ಹೇಳಿದ. ವಿಷಯ ತಿಳಿದು ನಾನೇ ಅವರ ಕೆಲಸಗಳಿಗೆ ಅನುಕೂಲವಾಗಲೆಂದು ಇಲ್ಲಿಗೇ ಬಂದು ಇರುತ್ತೀರಾ? ಎಂದು ಆಹ್ವಾನಿಸಿದೆ. ಅದಕ್ಕವರು ಸಂತೋಷದಿಂದ ಒಪ್ಪಿಕೊಂಡರು. ಅವರ ವಾಸಕ್ಕೂ ಯೋಗ್ಯವಾಗುವಂತೆ ಕುಠೀರವನ್ನು ಸಿದ್ಧಪಡಿಸಿಕೊಟ್ಟಿದ್ದಾನೆ ಅಚ್ಯುತ. ಬಾ ನಿನಗೆ ಅವರನ್ನು ಪರಿಚಯಿಸುತ್ತೇನೆ’ಎಂದ ದಯಾನಂದ.
ಅವರಿಬ್ಬರನ್ನೂ ಹಿಂಬಾಲಿಸಿ ನಡೆಯುತ್ತಿದ್ದ ರೈತ ಮುದ್ದಯ್ಯ ‘ಅವ್ವಾ ಅವರು ಇವತ್ತು ಅರ್ಚಕರ ಮನೆಯಲ್ಲಿ ಏನೋ ಪೂಜೆಯಂತೆ. ಅಲ್ಲಿಗೆ ಹೋಗಿದ್ದಾರೆ ಮನೆಯಲ್ಲಿ ಅವರಿಲ್ಲ ‘ಎಂದು ಹೇಳಿದ. ‘ರಾತ್ರಿಗೆ ಬರುತ್ತಾರೆ ‘ಎಂದ.
‘ಓ ಹೋಗಲಿ ಬಿಡು, ಮುದ್ದಪ್ಪಾ ಇನ್ನು ಮುಂದೆ ಇಲ್ಲೇ ಇರ್‍ತೀವಲ್ಲ ನಂತರ ಯಾವಾಗಲಾದರೂ ಭೇಟಿ ಮಾಡಿದರಾಯಿತು. ಇನ್ನು ಮುಂದಿರುವುದೆಲ್ಲ ಹೊಲವಲ್ಲವೇ? ಬೇಸಿಗೆಯಲ್ಲೂ ಏನನ್ನೋ ಬೆಳೆಸಿದ ಹಾಗಿದೆ? ಅವೇನು ಗಿಡಗಳು? ಎಂದು ಕೇಳಿದಳು.
ಹೂನ್ರವ್ವಾ, ಕಾಳುಕಡಿ, ಹತ್ತಿ, ಹಸುಗಳಿಗೆ ಜೋಳ, ಆಕಡೆ ಸ್ವಲ್ಪ ಮೆಣಸಿನ ಗಿಡ ಹಾಕಿದ್ದೇವೆ, ಅರಳು ಗಿಡಗಳು, ಅವ್ವಾ ನೀವು ಅಪ್ಪಾವರು ಇಲ್ಲಿಗೇ ಬಂದಿರೋದು ಕೇಳಿ ಬಾಳಾ ಖುಷಿಯಾಯ್ತು. ದೊಡ್ಡಮ್ಮಾವ್ರಿಗೂ ನಿಮ್ಮನ್ನು ಕಂಡರೆ ಬಾಳಾ ಪ್ರೀತಿಯಿತ್ತು. ಅದಕ್ಕೆ ತಕ್ಕಂತೆ ಅಪ್ಪಾ ಕೈಬಿಟ್ಟ ಜಮೀನು ಮತ್ತು ಮನೆಯನ್ನು ಹಿಂದಕ್ಕೆ ತಕ್ಕೊಂಡ್ರು. ಬೇಸಾಯ್ತು ಬನ್ನಿ ವಸಿ ಹಾಲು ಕಾಯಿಸಿ ಕೊಟ್ಟೇನು’ ಎಂದು ಕರೆದ.
‘ಬೇಡ ಮುದ್ದಪ್ಪ, ಈಗಷ್ಟೇ ಕಾಫಿ ಕುಡಿದು ಬಂದಿದ್ದೇವೆ. ರಾತ್ರಿಗೆ ಬಳಸಲಿಕ್ಕೆ ಮನೆಗೆ ಸ್ವಲ್ಪ ಹಾಲನ್ನು ಕಳಿಸಿಕೊಡು ‘ಎಂದು ಹೇಳಿದ ದಯಾನಂದ.
‘ಅಪ್ಪಾರೇ ನೀವು ಬರುತ್ತೀರಾ ಅಂತ ಇವತ್ತು ಬೇಗನೆ ಹಾಲು ಕರೆದು ಬಾಕ್ಸಿನಲ್ಲಿ ಹಾಕಿಟ್ಟಿದ್ದೀನಿ, ಈಗಲೇ ತಂದೆ’ ಎಂದು ಯಾರನ್ನೋ ಕೂಗುತ್ತಾ ಮನೆಯ ಕಡೆಗೆ ಹೋದ. ಮನೆಯಿಂದ ಹೊರಬಂದ ಹುಡುಗಿಯನ್ನು ನೋಡಿದಳು ಸುಕನ್ಯಾ.
‘ಭಪ್ಪರೇ ! ಎಂಥಹ ಚೆಲುವು, ಬಿಸಿಲು, ಮಳೆ, ಗಾಳಿಯೆನ್ನದೆ ಮನೆಯವರ ಸಮಕ್ಕೆ ಹೊರಗೆ ದುಡಿಯುವ ಹೆಣ್ಣು. ಆದರೂ ಮಾಸದ ಚೆಲುವು. ಸಹಜ ಸುಂದರಿ, ವಾವ್ !’ ಎಂದುಕೊಳ್ಳುತ್ತಾ ಮತ್ತೊಮ್ಮೆ ಅವಳ ಕಡೆಗೆ ನೋಡಿದಳು. ಸುಮಾರು ಇಪ್ಪತ್ತೈದರೊಳಗಿನ ವಯಸ್ಸಿರಬಹುದು. ಮನೆಯೊಳಗೆ ಯಾವ ಕೆಲಸದಲ್ಲಿದ್ದಳೋ ಸೀರೆಯ ನೆರಿಗೆಯನ್ನು ಎತ್ತಿಸಿಕ್ಕಿಸಿದ್ದಳು. ಹಸಿರು ಬಣ್ಣದ ಸೀರೆಗೆ ಕೆಂಪು ಅಂಚು, ಅದೇ ಬಣ್ಣದ ರವಿಕೆ. ತಿದ್ದಿತೀಡಿದಂತಹ ಕಣ್ಣು, ಮೂಗು, ಬಾಯಿ. ದಟ್ಟವಾದ ಕಪ್ಪು ಕೂದಲನ್ನು ಬಾಚಿ ಹೆಣೆದಿದ್ದ ಜಡೆ ಎದೆಯ ಮುಂಭಾಗದಲ್ಲಿ ಮಲಗಿತ್ತು. ಕೈಯ ತುಂಬ ಹಸಿರು ಕೆಂಪಿನ ಗಾಜಿನ ಬಳೆಗಳು. ಅವಳ ಬಿಳಿಯ ಬಣ್ಣದೆದುರು ಎದ್ದು ಕಾಣುತ್ತಿದ್ದವು. ಕೊರಳಲ್ಲಿ ಕರಿಮಣಿ ಪೋಣಿಸಿದ ಮಾಂಗಲ್ಯದ ಸರ, ಕಿವಿಯಲ್ಲಿ ಕೆಂಪುಕಲ್ಲಿನ ಓಲೆಗಳು, ಕಾಲಿನಲ್ಲಿ ಬೆಳ್ಳಿಯ ಕಡಗ, ಕಾಲ್ಗೆಜ್ಜೆ, ಕಾಲುಂಗುರ, ತನ್ನ ಸೊಂಟದ ಮೇಲೆ ಇರಿಸಿಕೊಂಡಿದ್ದ ಟಿಫನ್‌ಬಾಕ್ಸ್. ಕಡೆದು ನಿಲ್ಲಿಸಿದ ಶಿಲ್ಪದಂತೆ ಕಂಡಳು.
ಏನೊಂದೂ ಮಾತನಾಡದೆ ತನ್ನನ್ನೇ ನೋಡುತ್ತಿದ್ದ ಯಜಮಾನಿಯನ್ನು ನೋಡಿ ಆ ಹುಡುಗಿ ‘ಅವ್ವಾ ಅದ್ಯಾಕೆ ನನ್ನೇ ನೋಡ್ತಿದ್ದೀರ? ಜ್ಞಪ್ತಿ ಮಾಡ್ಕೊಳ್ಳಿ ನೀವು ಅಜ್ಜಿಯವರ ಜೊತೆ ಇಲ್ಲಿಗೆ ಬರುತ್ತಿದ್ರೀ. ಆಗ ನಾನು ತುಂಬ ಚಿಕ್ಕವಳು. ನಾನು ಕೆಂಪೀ ಮಗಳು ಗಂಗೆ. ನನ್ನ ಯಜಮಾನ ನಿಮ್ಮ ಭೂಮೀಲೇ ಗೇಯ್ಮೆ ಮಾಡೋದು. ನಾನು ಇರೋದು ಇಲ್ಲೇ. ಇವನು ನಮ್ಮಣ್ಣ, ನಿಮ್ಮ ಮನೆಕೆಲಸಕ್ಕೆ ಬರೋಳು ನಾನೇ. ಇವತ್ತು ನಿಮ್ಮ ಮನೆಗೆ ಊಟಕ್ಕೆ ಬರೋಹಂಗಿರಲಿಲ್ಲ. ಅದಕ್ಕೇ ಬರಲಿಲ್ಲ’ ಎಂದು ಅರಳು ಹುರಿದಂತೆ ಒಂದೇ ಸಮನೆ ಮಾತನಾಡುತ್ತಾ ‘ಇಕ್ಕೊಳ್ಳಿ ಹೆಂಗಿದ್ರೂ ಕಾರಿನಲ್ಲಿ ಬಂದೀರಿ, ಇದರಲ್ಲಿ ಮೂರು ಲೀಟರ್ ಹಾಲಿದೆ. ನಾಳೆಗೆಂದು ಹೆಪ್ಪೇನೂ ಹಾಕಬೇಡಿ, ಚೆನ್ನಾಗಿ ಕಾಯಿಸಿಟ್ಟಿದ್ದೀನಿ. ಮಕ್ಕಳುಮರಿ, ದೊಡ್ಡೋರು ಯಾರಾದರೂ ಕುಡಿಯೋರಿಗೆ ಉಪಯೋಗಿಸಿಕೊಳ್ಳಿ. ಬೆಳಗ್ಗೆ ಹಾಲು ತಲುಪಿಸೋದು ತಡವಾದ್ರೆ ಕಾಫಿಗೆ ಉಪಯೋಗವಾಗ್ತದೆ’ ಎಂದು ಹಾಲಿದ್ದ ಬಾಕ್ಸನ್ನು ಸುಕನ್ಯಾಳ ಕೈಯಿಗೆ ಕೊಟ್ಟಳು.
‘ಅವ್ವಾ ಇವಳು ಯಾವಾಗಲೂ ಹಿಂಗೇ ವಟವಟಾಂತ ಒಂದೇ ಸಮಾ ಒಡಕೋತಾಳೆ. ವಸಿ ನೀವು ಬಿಗಿ ಮಡಗಬೇಕು. ಇಲ್ಲಾಂದ್ರೆ ನಿಮ್ಮ ತಲೆಮ್ಯಾಲೇ ಮೆಣಸರೆದುಬಿಡ್ತಾಳೆ ಜೋಪಾನ ‘ಎಂದು ಹಾಸ್ಯ ಮಾಡಿದ ಮುದ್ದಪ್ಪ.
ಅಣ್ಣ, ತಂಗಿಯರ ಮಾತುಗಳನ್ನು ಕೇಳುತ್ತಾ ಸುಕನ್ಯಾ ಅವಳಿಂದ ಪಡೆದ ಬಾಕ್ಸನ್ನು ಹಿಡಿದು ಗಂಡನ ಕಡೆ ತಿರುಗಿ ‘ಹೊರಡೋಣವೇ? ‘ಎಂದಳು, ‘ಸರಿಯಪ್ಪಾ ನಾವಿನ್ನು ಬರುತ್ತೇವೆ’ ಎಂದು ಸುಕನ್ಯಾಳೊಡನೆ ಹೊರಬಂದು ಕಾರು ಹತ್ತಿದ ದಯಾನಂದ.
ಮನೆಗೆ ಹಿಂತಿರುಗಿದ ಸುಕನ್ಯಾ ಕೈಕಾಲು ಮುಖ ತೊಳೆದು ದೇವರ ಮನೆಗೆ ಹೋದಳು. ಬೆಳಗ್ಗೆ ಹಚ್ಚಿದ್ದ ನಂದಾದೀಪವಿನ್ನೂ ಸಣ್ಣಗೆ ಉರಿಯುತ್ತಿತ್ತು. ಅಲ್ಲಿದ್ದ ದೇವರ ಪಟಕ್ಕೆ ಕೈಮುಗಿಯುತ್ತಾ ತನಗೆ ಗೊತ್ತಿಲ್ಲದೆಯೇ ಕೊನೆಗೂ ನನ್ನಾಸೆಯಂತೆ ಅದೂ ಶ್ರೀಕಂಠೇಶ್ವರನ ಸನ್ನಿಧಾನದಲ್ಲಿಯೇ ಅಂದು ನನ್ನ ಹೊಸಬಾಳಿಗೆ ನಾಂದಿ ಹಾಡಿದ್ದು ಮತ್ತೆ ಆತನ ಸನ್ನಿಧಾನದಲ್ಲಿಯೇ ನನಗೆ ನೆಮ್ಮದಿಯ ನೆಲೆ ಒದಗಿಸಿದೆ ಭಗವಂತಾ, ಎಂದು ಕೃತಜ್ಞತೆಯನ್ನರ್ಪಿಸಿದಳು. ಕೊನೆಗೂ ಇದು ಹೀಗೆ ಕೈಗೂಡಿದ್ದನ್ನು ಪದಗಳಿಂದ ಬಣ್ಣಿಸಲಾಗದಷ್ಟು ಹಿಗ್ಗನ್ನು ಆಕೆಗೆ ತಂದಿತ್ತು. ಬರಿಯ ಲೆಕ್ಕಾಚಾರದ ಮನುಷ್ಯ, ಈತ ಭಾವನೆಗಳಿಲ್ಲದ ನಿರ್ಲಿಪ್ತ ಎಂದೆಲ್ಲಾ ಅಂದುಕೊಂಡಿದ್ದ ಆಕೆಯ ಪತಿ ದಯಾನಂದ ಈಗ ಅವಳಿಗಾಗಿ ಮಾಡಿರುವ ವ್ಯವಸ್ಥೆಗಳನ್ನು ಕಂಡು, ಜೊತೆಗೆ ಕೆಲವರಿಗೆ ಅವನು ಮಾಡಿದ್ದ ಸಹಾಯಗಳನ್ನು ತಿಳಿದು ನಾನೆಂತಹ ತಪ್ಪು ತೀರ್ಮಾನಕ್ಕೆ ಬಂದಿದ್ದೆ ಎಂದು ಪಶ್ಚಾತ್ತಾಪ ಪಟ್ಟಳು. ಅವನ ಈಗಿನ ಕೃತ್ಯಗಳಿಂದ ಅವಳ ಮನಸ್ಸು, ಹೃದಯ ತುಂಬಿಬಂದಿತ್ತು. ಅದೇವೇಳೆಗೆ ದಯಾನಂದನೂ ಕೈಕಾಲು ಮುಖ ತೊಳೆದು ಅವಳು ಕುಳಿತಿದ್ದ ದೇವರ ಕೋಣೆಗೆ ಬಂದುನಿಂತ. ತಕ್ಷಣ ಸುಕನ್ಯಾ ಅವನ ಕಾಲಿಗೆ ಭಕ್ತಿಭಾವದಿಂದ, ಪ್ರೀತಿಯಿಂದ ನಮಸ್ಕರಿಸಿದಳು. ಆತನೂ ಪ್ರೀತಿಯಿಂದ ಅವಳನ್ನು ಮೇಲೆತ್ತಿ ತನ್ನೆದೆಗೆ ಆನಿಸಿಕೊಂಡನು. ಎರಡೂ ಹೃದಯಗಳು ನೆಮ್ಮದಿಯಿಂದ ಮಿಡಿದವು. ಅದೇ ವೇಳೆಗೆ ಶ್ರೀಕಂಠೇಶ್ವರನ ದೇವಾಲಯದಿಂದ ಗಂಟೆಯ ನಿನಾದ ಮೊಳಗಿ ಎಲ್ಲವೂ ಶುಭವೆಂದಿತ್ತು.
.
(ಮುಗಿಯಿತು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=32013
-ಬಿ.ಆರ್ ನಾಗರತ್ನ, ಮೈಸೂರು
ಶ್ರೀಮತಿ ಬಿ.ಆರ್.ನಾಗರತ್ನ ಅವರು ಬರೆದ ‘ನೆಮ್ಮದಿಯ ನೆಲೆ’ ಕಾದಂಬರಿಯು 16 ಕಂತುಗಳಲ್ಲಿ ಹರಿದು ಬಂದು ಈ ಸಂಚಿಕೆಯಲ್ಲಿ ಮುಕ್ತಾಯವಾಗಿದೆ. ಇದು ‘ಸುರಹೊನ್ನೆ’ಯಲ್ಲಿ ಪ್ರಕಟಾವಾದ ಮೊದಲ ಕಾದಂಬರಿ. ಉತ್ತಮ ಅಭಿರುಚಿಯುಳ್ಳ ಈ ಕಾದಂಬರಿಯನ್ನು ಕೊಟ್ಟ ಬಿ.ಆರ್.ನಾಗರತ್ನ ಅವರಿಗೆ ಧನ್ಯವಾದಗಳು.
ಬರಹಗಾರರಿಗೆ ಓದುಗರ ಸಕಾರಾತ್ಮಕ ಪ್ರತಿಕ್ರಿಯೆಗಳೇ ಸ್ಪೂರ್ತಿ…ನಿಮ್ಮ ಪ್ರತಿಕ್ರಿಯೆ ತಿಳಿಸುವಿರಿ ತಾನೇ ?
-ಹೇಮಮಾಲಾ.ಬಿ
Super agittu
ಕಾದಂಬರಿಯು ಸೊಗಸಾಗಿ ಮೂಡಿ ಬಂತು. ಅಭಿನಂದನೆಗಳು…
ಕಾದಂಬರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಪ್ರತಿ ಕಂತುಗಳೂ ಕುತೂಹಲ ಕರವಾಗಿ ಓದಿಸಿಕೊಂಡು ಹೋಯಿತು.ಮದ್ಯೆ ಜೀವನದ ಸಹಜ ಏರುಪೇರು ಕಂಡರೂ ಕೊನೆಗೆ ನೆಮ್ಮದಿಯ ನೆಲೆ ಕಂಡು ಸಂತಸವಾಯಿತು.ಧನ್ಯವಾದಗಳು ..
ತುಂಬಾ ಸೊಗಸಾಗಿ ಮೂಡಿ ಬಂತು ಕಾದಂಬರಿ. ನಡು ನಡುವೆ ಬರುತಿದ್ದ ಜಮೀನು, ಹಳ್ಳಿ ಮನೆಯ ಚಿತ್ರಣದ ಸೊಬಗನ್ನು ಬಣ್ಣಿಸಲು ಪದಗಳ ಕೊರತೆ. ಬಹಳ ಇಷ್ಟವಾಯಿತು ಕಾದಂಬರಿ. ಧನ್ಯವಾದಗಳು ಮೇಡಂ ಒಂದು ಒಳ್ಳೆಯ ಕತೆಯನ್ನು ಓದಿಸಿದ್ದಕ್ಕೆ.
ಧನ್ಯವಾದಗಳು ಸಹೃದಯರಿಗೆ
ಕಾದಂಬರಿಯ ಕೊನೆಯ ಕಂತು…ಸುಕನ್ಯಾಳಿಗೆ ನೆಮ್ಮದಿಯ ನೆಲೆ ಸಿಕ್ಕಿದ ರೀತಿ ಬಹಳ ಇಷ್ಟವಾಯ್ತು. ಸಹಜವಾಗಿ ಓದಿಸಿಕೊಂಡು ಹೋಗುತ್ತಿದ್ದ ಸರಳ ಸುಂದರ ಕಥಾ ಹಂದರ ಬಹಳ ಸೊಗಾಸಾಗಿತ್ತು..ಧನ್ಯವಾದಗಳು ನಾಗರತ್ನ ಮೇಡಂ. ಇನ್ನೂ ಹೆಚ್ಚು ಸುಂದರ ಕಾದಂಬರಿಗಳು ನಿಮ್ಮ ಲೇಖನಿಯಲ್ಲಿ ಮೂಡಿಬರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುವೆ.
ಹೃತ್ಪೂರ್ವಕ ಧನ್ಯವಾದಗಳು ಮೇಡಂ.
Happy ending. very nice.
Thank you very much sudha madam
ಕುತೂಹಲ ಮೂಡಿಸಿ ಸರಳವಾಗಿ ಓದಿಸಿಕೊಂಡ ಕಥೆ .
ಬದುಕಿನ ಮಜಲುಗಳನ್ನು, ಎಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ಆವರಿಸುವ ಭಾವಗಳ ಏರಿಳಿತಗಳನ್ನು ಚಂದದ ನಿರೂಪಣೆಯೊಂದಿಗೆ ಸರಳ ಭಾಷೆಯೊಂದಿಗೆ ಕಾಣಬಹುದು.
ಹಳ್ಳಿ ಬದುಕಿನ ಸೊಗಡು, ಪರಿಸರದ ಸೌಂದರ್ಯ , ಜೀವನ ಶೈಲಿಯ ಚಿತ್ರ ನಿಜಕ್ಕೂ ಕಣ್ಣಿಗೆ ಕಟ್ಟಿದಂತಿದೆ .
ಅಂತೆಯೇ ನಗರ ಜೀವನದಲ್ಲಿ ಬದುಕಿನ ಆಯಾಮಗಳು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವುದು, ಮನುಷ್ಯನ ಮನೋಭಾವಗಳು, ಆಸೆ , ಅಭಿರುಚಿಗಳು ಓದುಗನ ಮನದಲ್ಲಿ ನೆಲೆನಿಲ್ಲುತ್ತವೆ .
ಸಂಬಂಧಗಳ ನಡುವಿನ ಬಂಧ ಅನುಬಂಧ , ಪ್ರೀತಿ, ಪ್ರೇಮ, ವಿರಸ, ಆಲೋಚನೆಗಳು , ವ್ಯಕ್ತಿತ್ವಗಳಲ್ಲಿನ ವಿಭಿನ್ನತೆ ಕಥೆಯ ಜೀವಾಳ .
ಚಂದದ ಕಥೆಯೊಂದನ್ನು ಸೊಗಸಾದ ನಿರೂಪಣ ನೈಪುಣ್ಯತೆಯೊಂದಿಗೆ ನೀಡಿದ ನಿಮಗೆ ಅಭಿನಂದನೆಗಳೊಂದಿಗೆ ಧನ್ಯವಾದಗಳು .
ಬಾಳಿನಲ್ಲಿ ಏನೇ ಕಷ್ಟ ನಷ್ಟಗಳು ಬಂದರೂ, ತಾಳ್ಮೆ ಹಾಗೂ ಸಕಾರಾತ್ಮಕ ದೃಷ್ಟಿಕೋನದಿಂದ ಬಾಳು ‘ನೆಮ್ಮದಿಯ ನೆಲೆ’ ಯಾಗಬಹುದು ಎಂಬುದನ್ನು ಲೇಖಕಿ ಅಚ್ಚುಕಟ್ಟಾಗಿ ಕಟ್ಟುಕೊಟ್ಟಿದ್ದಾರೆ. ಸಾಂದರ್ಭಿಕ ಚಿತ್ರಗಳೂ ಸೊಗಸಾಗಿವೆ. ಲೇಖಲಿಗೆ, ‘ಸುರಹೊನ್ನೆ’ ಗೆ ಅಭಿನಂದನೆಗಳು.
ಧನ್ಯವಾದಗಳು ಗೆಳತಿ
ಬಾಳಿನಲ್ಲಿ ತಾಳ್ಮೆ ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ಅಳವಡಿಸಿಕೊಂಡಲ್ಲಿ ನೆಮ್ಮದಿಯಿಂದ ಸಾರ್ಥಕವಾದ ಬಾಳನ್ನು ಬಾಳಬಹುದು ಎಂಬ ಸಂದೇಶವನ್ನು ಸಾರುವ ನೆಮ್ಮದಿಯ ನೆಲೆ ಸುಂದರವಾದ ಸಾಂದರ್ಭಿಕ ಚಿತ್ರಗಳೊಂದಿಗೆ ಅಚ್ಚುಕಟ್ಟಾಗಿ ಮೂಡಿಬಂತು. ಲೇಖಕಿ ಶ್ರೀಮತಿ ನಾಗರತ್ನ ಅವರಿಗೆ, ಪ್ರಕಟಿಸಿದ ‘ಸುರಹೊನ್ನೆ’ ಗೆ ಅಭಿನಂದನೆಗಳು.
ಮತ್ತೊಮ್ಮೆ ನಾನು ಬರೆದ ಕಾದಂಬರಿಯನ್ನು ಓದಿ ಪ್ರತಿಕ್ರಿಯಿಸಿ ದ ಸಾಹಿತ್ಯ ಸಹೃದಯರಿಗೆ ಅದನ್ನು ಅಚ್ಚುಕಟ್ಟಾಗಿ ಸಾಂದರ್ಭಿಕ ಚಿತ್ರ ಗಳನ್ನು ಹಾಕಿ ಪ್ರಕಟಿಸಿದ ಸುರಹೊನ್ನೆ ಅಂತರ್ಜಾಲ ಪತ್ರಿಕೆಯ ಸಂಪಾದಕರಾದ ಗೆಳತಿ ಹೇಮಾ ರವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಕಾದಂಬರಿ ಚೆನ್ನಾಗಿ ಮೂಡಿ ಬಂದಿದೆ. ಸುಕನ್ಯಾಳಿಗೆ ನೆಮ್ಮದಿಯ ನೆಲೆ ಸಿಕ್ಕಿತು. ಕಥೆ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯಿತು. ಮುಕ್ತಾಯ ಕೂಡ ಸುಖ,ಸಂತೋಷ ನೆಮ್ಮದಿ, ಸಂಭ್ರಮದಲ್ಲಿ ಅಂತ್ಯಗೊಂಡಿದ್ದು ಉತ್ತಮ ಊಟವಾದ ನಂತರ ಐಸ್ ಕ್ರೀಮ್ ಸವಿದ ಹಾಗೆ ಇತ್ತು.
ಅಭಿನಂದನೆಗಳು ನಾಗರತ್ನ ರವರೆ…….ತಮ್ಮ ಮೊದಲ ಕಾದಂಬರಿ ಚೆನ್ನಾಗಿತ್ತು. ಇನ್ನು ಹೆಚ್ಚು ಕಾದಂಬರಿ ನಿಮ್ಮಿಂದ ಪ್ರಕಟವಾಗಲಿ ಎಂದು ಆಶಿಸುತ್ತೇನೆ
ಧನ್ಯವಾದಗಳು ಗೆಳತಿ ಮಾಲತಿ ಓದುಗರ ಅಭಿಪ್ರಾಯ ಅನಿಸಿಕೆಗಳು ಬರಹಗಾರರಿಗೆ ಚೈತನ್ಯ ತುಂಬುವ ಅಮೃತ ಬಿಂದುಗಳು.
ಮೊದಲನೇ ಕಾದಂಬರಿಯಲ್ಲೇ ಕಥಾ ನಾಯಕಿಗೂ, ಓದುಗರಿಗೂ ನೆಮ್ಮದಿ ತಂದು ಕೊಟ್ಟು ಒಳ್ಳೆ ನೆಲೆ ಕಾಣಿಸಿದ ನಾಗರತ್ನ ಅವರಿಗೆ ಅಭಿನಂದನೆಗಳು, ಮುಂದಿನ ಕಾದಂಬರಿ ಬೇಗನೇ ನಿಮ್ಮಿಂದ ಬರಲಿ ಎಂದು ಆಶಿಸುತ್ತೇನೆ