ಎತ್ತಣ ಮಾಮರ..ಎತ್ತಣ ಕೋಗಿಲೆ..

Share Button

ಇಂಗ್ಲೆಂಡಿನ ಸೋಮರ್‌ಸೆಟ್ ಪ್ರಾಂತ್ಯದ ‘ಬಾತ್’ ನಗರದಲ್ಲಿರುವ ಬಿಸಿನೀರ ಬುಗ್ಗೆಯನ್ನು ಕಂಡಾಗ ಮನದಂಗಳದಲ್ಲಿ ತೇಲಿ ಬಂದದ್ದು ಹಿಮಾಲಯದ ತಪ್ಪಲಲ್ಲಿರುವ ಬಿಸಿನೀರಬುಗ್ಗೆಗಳು. ಯಮುನೋತ್ರಿ, ಕೇದಾರದಲ್ಲಿರುವ ಗೌರೀಕುಂಡ, ಬದರೀನಾಥ, ಮಣಿಕರ್ಣಿಕ ಇತ್ಯಾದಿ.

ಇಂಗ್ಲೆಂಡಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ‘ರೋಮನ್ ಬಾತ್’ ನೋಡಲು ಹೊರಟಾಗ ಅಲ್ಲಿನ ಸ್ಥಳ ಪುರಾಣವನ್ನು ಗೂಗಲ್ ಸರ್ವಜ್ಞನಿಂದ ಕೇಳಿ ತಿಳಿದೆ. ಮ್ಯಾಂಚೆಸ್ಟರ್‌ನಲ್ಲಿ ವೈದ್ಯರಾಗಿದ್ದ ಮಗಳು ಅಪರ್ಣ, ಅಳಿಯ ಬಾಲಚಂದ್ರ ಹಾಗೂ ಮೊಮ್ಮಗ ತೇಜಸ್ವಿಯೊಂದಿಗೆ ‘ಬಾತ್’ಗೆ ಭೇಟಿ ನೀಡಿದೆವು. ಮ್ಯಾಂಚೆಸ್ಟರ್‌ನಿಂದ ಬಾತ್‌ಗೆ ೨೩೩ ಕಿ.ಮೀ. ಸುಮಾರು ಮೂರೂವರೆ ಗಂಟೆಗಳ ಕಾಲ ಪಯಣ. ದಾರಿ ಸವೆದದ್ದೇ ಗೊತ್ತಾಗಲಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ಸಾಲು ಸಾಲು ಮರಗಳು, ಮೇ ತಿಂಗಳಾದ್ದರಿಂದ ಆಹ್ಲಾದಕರವಾದ ವಾತಾವರಣ, ಎಲ್ಲೆಡೆ ಹೂವಿನ ತೋರಣಗಳು ನಮ್ಮನ್ನು ಸ್ವಾಗತಿಸುತ್ತಿದ್ದವು. ಹತ್ತು ತಿಂಗಳ ಮೊಮ್ಮಗ ಕೇಕೆ ಹಾಕುತ್ತಿದ್ದ.

‘ರೋಮನ್ ಬಾತ್’ ಎಂದೇ ಹೆಸರು ಹೊತ್ತ ಈ ಬಿಸಿನೀರ ಬುಗ್ಗೆ ಹತ್ತು ಹಲವು ಬಾರಿ ಪರಕೀಯರ ದಾಳಿಗೆ ತುತ್ತಾಗಿ ನಲುಗಿ ಹೋಗಿತ್ತು. ಮೊಟ್ಟಮೊದಲು ‘ಸೆಲ್ಟಿಕ್’ ಜನಾಂಗದವರು ತಾವು ಆರಾಧಿಸುತ್ತಿದ್ದ ‘ಸುಲಿಸ್’ ಎಂಬ ದೇವತೆಗಾಗಿ ನಿರ್ಮಿಸಿದ ದೇವಾಲಯ ಇದು. ಇವರು ಸೂರ್ಯನನ್ನು ‘ಸುಲಿಸ್’ ಎಂದು ಪೂಜಿಸುತ್ತಿದ್ದರು. ಸೂರ್ಯನಿಗೆ ‘ಮಿನರ್ವ’ ಎಂದು ಕರೆಯುವ ವಾಡಿಕೆಯೂ ಇದೆ. ದೇವಾಲಯದ ಮುಂಭಾಗದಲ್ಲಿ ಹಾವುಗಳಿಂದ ಸುತ್ತುವರೆಯಲ್ಪಟ್ಟ ‘ಗಾರ್‌ಗನ್’ನ ದೊಡ್ಡದಾದ ಮುಖವನ್ನು ಶಿಲೆಯಲ್ಲಿ ಕೆತ್ತಿದ್ದಾರೆ. ಈ ಮೂರ್ತಿಯನ್ನು ಕೆಲವರು ಸೂರ್ಯನ ವಿಗ್ರಹವೆಂದೂ ಮತ್ತೂ ಕೆಲವರು ಜಲದೇವತೆಯಂದೂ ಗುರುತಿಸುತ್ತಾರೆ. ನೀರು ಬಿಸಿಯಾಗಲು ಸೂರ್ಯನ ಶಾಖ ಅತ್ಯಗತ್ಯ ಎಂಬ ನಂಬಿಕೆ ಇದ್ದೀತು. ಮೆಂಡಿಪ್ ಬೆಟ್ಟಗಳ ಮೇಲೆ ಬಿದ್ದ ಮಳೆನೀರು, ಅಲ್ಲಿನ ಭೂಪ್ರದೇಶದಲ್ಲಿರುವ ಸುಣ್ಣಕಲ್ಲುಗಳ ಮಧ್ಯೆ ಹರಿಯುತ್ತಾ ಸುಮಾರು 2,700 ರಿಂದ 4,300 ಮೀಟರ್ ಆಳಕ್ಕೆ ಜಾರುತ್ತಾಳೆ. ಭೂಗರ್ಭದಲ್ಲಿರುವ ‘ಜಿಯೋ ಥರ್ಮಲ್’ ಶಾಖದಿಂದ 69 ಡಿಗ್ರಿ ಯಿಂದ 96  ದಿಗ್ರಿ ಸೆಲ್ಸಿಯಸ್ ವರೆಗೆ ಬಿಸಿಯಾದ ನೀರಿನ ಆವಿಯಿಂದ ಉಂಟಾದ ಒತ್ತಡದಿಂದ ಭೂಮಿಯ ಮೇಲ್ಪದರಕ್ಕೆ ಬಿಸಿನೀರು ಚಿಮ್ಮುವುದು. ಪ್ರತಿನಿತ್ಯ 1,17,000 ಲೀಟರಿನಷ್ಟು ನೀರು ಬಿಸಿನೀರ ಬುಗ್ಗೆಯಿಂದ ಚಿಮ್ಮುವುದು ಎಂದರೆ ನಂಬುವಿರಾ? ಈ ನೀರಿನಲ್ಲಿ ಸೋಡಿಯಂ, ಕ್ಯಾಲ್ಸಿಯಂ, ಕ್ಲೋರೈಡ್ ಹಾಗೂ ಸಲ್ಫೇಟ್ ಹೇರಳವಾಗಿದೆ.

ಇಂಗ್ಲೆಂಡಿನ ರಾಣಿ ಒಂದನೆಯ ಎಲಿಜಬೆತ್ ಕಾಲದಲ್ಲಿ ಈ ಸ್ಥಳವು ಸುಂದರವಾಗಿ ರೂಪುಗೊಂಡಿತು. ಇಲ್ಲಿ ನೋಡಲೇಬೇಕಾದ ನಾಲ್ಕು ಪ್ರಮುಖ ಸ್ಥಳಗಳು – ಪವಿತ್ರವಾದ ಬಿಸಿನೀರ ಬುಗ್ಗೆ, ರೋಮನ್ನರ ದೇವಾಲಯ, ರೋಮನ್ನರ ಸ್ನಾನಗೃಹ ಹಾಗೂ ಪುರಾತನ ವಸ್ತುಗಳನ್ನು ಸಂಗ್ರಹಿಸಿರುವ ಮ್ಯೂಸಿಯಂ. ನಾವು ಮೊದಲಿಗೆ ಬಿಸಿನೀರಿನ ಬುಗ್ಗೆಯ ಬಳಿ ಹೋದೆವು. ಈ ಸ್ಥಳದ ಬಳಿ ಯಾರೂ ಸುಳಿಯದಂತೆ ದೊಡ್ಡ ದೊಡ್ಡ ಗಾಜುಗಳನ್ನು ಹಾಕಿದ್ದಾರೆ. ನೀರಿನ ಶಾಖ 45  ಡಿಗ್ರಿ ಯಿಂದ 50 ಡಿಗ್ರಿ ಸೆಂಟಿಗ್ರೇಡ್ ಇರುವುದರಿಂದ ರಭಸವಾಗಿ ಚಿಮ್ಮುವ ನೀರಿನ ಜೊತೆಜೊತೆಗೇ ಬಿಸಿಯಾದ ಉಗಿಯೂ ಕಾಣುವುದು. ಪಕ್ಕದಲ್ಲೇ ಇರುವ ಒಂದು ಕೊಳದ ಸುತ್ತಲೂ ಮೆಟ್ಟಿಲುಗಳು ಹಾಗೂ ಮೇಲ್ಭಾಗದಲ್ಲಿ ರೋಮನ್ ಚಕ್ರವರ್ತಿಗಳ ಪ್ರತಿಮೆಗಳು ಇವೆ. ಮೊದಲು ರೋಮನ್ನರು, ಸೆಲ್ಟಿಕ್ ಜನಾಂಗದವರು ಇಲ್ಲಿ ಸ್ನಾನಗೃಹಗಳನ್ನು ನಿರ್ಮಿಸಿದ್ದರು. ಈ ಕೊಳದಲ್ಲಿ ಬಿಸಿನೀರಬುಗ್ಗೆಯ ಜೊತೆ ತಣ್ಣನೆ ನೀರು ಬೆರೆತು ಹದವಾದ ಬೆಚ್ಚನೆಯ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುವುದು. ನಾನು ನೀರನ್ನು ಬೊಗಸೆಯಲ್ಲಿ ತುಂಬಲು ಬಾಗಿದಾಗ ಮಗಳು ‘ಅಮ್ಮಾ, ಈ ನೀರನ್ನು ಮುಟ್ಟಬಾರದು ಎಂಬ ಫಲಕ ಹಾಕಿದ್ದಾರೆ ನೋಡು’ ಎಂದು ಎಚ್ಚರಿಸಿದಳು. ನನಗೆ ಆ ವಿಚಿತ್ರವಾದ ಪ್ರಕಟಣೆಯ ಪೂರ್ವಾಪರ ಅರ್ಥವಾಗಲಿಲ್ಲ. ನಂತರ ಅಲ್ಲಿನ ಫಲಕದ ಮೇಲಿದ್ದ ವಿವರಗಳನ್ನು ಬಾಲು ಓದಿದರು. ಆ ಕೊಳದಲ್ಲಿ ಸ್ನಾನ ಮಾಡಿದ ಒಬ್ಬ ಬಾಲಕಿ ಮರಣ ಹೊಂದಿದಾಗ ನೀರಿನ ಕೂಲಂಕುಷ ಪರೀಕ್ಷೆ ನಡೆಸಲಾಯಿತು. ನೀರಿನಲ್ಲಿ ‘ಪ್ಯಾಥೊಜೆನ್ಸ್’ ಇದ್ದುದರಿಂದ ಈ ಸಾವು ಸಂಭವಿಸಿದೆ ಎಂದು ವೈದ್ಯರು ಘೋಷಿಸಿದರು. ಅಂದಿನಿಂದ ಈ ಕೊಳದ ನೀರನ್ನು ಯಾರೂ ಮುಟ್ಟಬಾರದು ಎಂಬ ಕಾನೂನು ಜಾರಿ ಮಾಡಿದ್ದಾರೆ. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ.

ರೋಮನ್ ಸ್ನಾನಗೃಹಗಳಲ್ಲಿ ಮೂರು ಬಗೆಯ ಸ್ನಾನಗೃಹಗಳು ಇವೆ. ‘ಕಾಲ್‌ಡೇರಿಯಮ್’ ಎಂದರೆ ಬಿಸಿನೀರಿನ ಸ್ನಾನ, ‘ಟೆಪಿಡೇರಿಯಮ್’ ಎಂದರೆ ಬೆಚ್ಚನೆಯ ನೀರಿನ ಸ್ನಾನ ಹಾಗೂ ‘ಫ್ರಿಜಿಡೇರಿಯಮ್’ ಎಂದರೆ ತಂಪಾದ ನೀರಿನ ಸ್ನಾನ. ಇಲ್ಲಿನ ವಸ್ತು ಪ್ರದರ್ಶನಾಲಯದಲ್ಲಿ ಈ ಪ್ರದೇಶದ ಇತಿಹಾಸದ ಪ್ರಮುಖ ಘಟ್ಟಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಸುಮಾರು 12,000 ನಾಣ್ಯಗಳನ್ನು ಬಿಸಿನೀರ ಚಿಲುಮೆಯ ತಳದಿಂದ ಆರಿಸಿ ಮ್ಯೂಸಿಯಂನಲ್ಲಿ ಪ್ರದರ್ಶಿಸಿದ್ದಾರೆ. ಮಾಹಿತಿ ನೀಡಲು ‘ಆಡಿಯೋ ಗೈಡ್’ ಲಭ್ಯ. ಇಲ್ಲಿ ಹನ್ನೆರಡು ಭಾಷೆಗಳಲ್ಲಿ ಕೇಳುವ ಅವಕಾಶ.

ಈ ಪ್ರಕೃತಿ ವಿಸ್ಮಯವನ್ನು ತೆರೆದಿಟ್ಟ ‘ರೋಮನ್ ಬಾತ್’ ನೋಡಿದಾಗ – ನನಗೆ ನೆನಪಾದದ್ದು ಯಮುನೋತ್ರಿಯ ಬಿಸಿನೀರಬುಗ್ಗೆ. ಹಿಮಾಲಯದ ತಪ್ಪಲಲ್ಲಿರುವ ಯಮುನೋತ್ರಿ ಸುಂದರವಾದ ತಾಣ. ಸುತ್ತಲೂ ಕಾಣುವ ಹಿಮಾಲಯದ ಬೆಳ್ಳಿ ಶಿಖರಗಳು, ಹಿಮ ಕರಗಿ ಕೆಳಗೆ ಧುಮುಕುವ ನೀರಿನ ಝರಿಗಳು, ಆಳವಾದ ಕಣಿವೆಗಳಲ್ಲಿ ಝುಳುಝುಳು ಹರಿಯುವ ಹಳ್ಳಕೊಳ್ಳಗಳು. ನೋಡಲು ಕಣ್ಣೆರಡೂ ಸಾಲದು. ಹಿಮಾಲಯದ ಪಶ್ಚಿಮ ಭಾಗದಲ್ಲಿರುವ ಯಮುನೋತ್ರಿ – ಯಮುನೆಯ ಉಗಮ ಸ್ಥಾನ. ಹಿಂದಿಯಲ್ಲಿ ‘ಜಮುನ’ ಎಂದೂ ಕರೆಯಲ್ಪಡುವಳು. ಜಂಕಿ ಚಟ್ಟಿಯಲ್ಲಿ ಇರುವ ಬಿಸಿನೀರಿನ ಬುಗ್ಗೆ ಒಂದು ಪ್ರಕೃತಿ ವಿಸ್ಮಯವೇ ಸರಿ. ಭೂಗರ್ಭದಲ್ಲಿರುವ ಶಿಲೆಗಳಲ್ಲಿರುವ ‘ಜಿಯೋಥರ್ಮಲ್’ ಶಾಖದಿಂದ ನೀರು ಆವಿಯಾಗಿ, ಆವಿಯ ಒತ್ತಡದಿಂದ ಬಿಸಿನೀರ ಬುಗ್ಗೆಗಳು ಉಂಟಾಗುತ್ತವೆ. ಸುಮಾರು 3,293 ಮೀಟರ್ ಎತ್ತರದಲ್ಲಿರುವ ಈ ಬಿಸಿನೀರ ಬುಗ್ಗೆಗೆ ‘ಸೂರ್ಯಕುಂಡ’ ಎಂತಲೂ ಕರೆಯುವರು. ಮಹಾರಾಜ ಪ್ರತಾಪ್ ಸಿಂಹ ಇಲ್ಲಿನ ದೇವಸ್ಥಾನದ ನಿರ್ಮಾತೃ. ಉತ್ತರಾಖಂಡದಲ್ಲಿ 6,387 ಮೀಟರ್  ಎತ್ತರದಲ್ಲಿರುವ ಯಮುನೋತ್ರಿ ಗ್ಲೇಸಿಯರ್‌ನಿಂದ ಜನಿಸುವ ಯಮುನೆ, ಗಂಗೆಯನ್ನು ತ್ರಿವೇಣಿ ಸಂಗಮದಲ್ಲಿ ಸೇರುವಳು. ಕೃಷ್ಣನ ಬಾಲ್ಯದ ಲೀಲೆಗಳೆಲ್ಲ ಯಮುನೆಯ ದಡದಲ್ಲಿಯೇ ಅಲ್ಲವೇ?

ಯಮುನೋತ್ರಿ

ಯಮುನೋತ್ರಿಗೆ ಬರುವ ಯಾತ್ರಾರ್ಥಿಗಳು ಸುಮಾರು ಹದಿನಾಲ್ಕು ಕಿ.ಮೀ. ನಡೆಯಬೇಕು, ಆಗದಿದ್ದಲ್ಲಿ ಕುದುರೆ ಸವಾರಿ ಮಾಡಬಹುದು. ಇಲ್ಲವೇ ಡೋಲಿಗಳೂ ಲಭ್ಯ. ಹವಾಮಾನ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ನಾವು ಕಾಲ್ನಡಿಗೆಯಲ್ಲೇ ಹೊರಟೆವು. ಮುಂಜಾನೆ ಏಳು ಗಂಟೆಗೇ ಹೊರಟವರು ಹನ್ನೊಂದು ಗಂಟೆಗೆ ಯಮುನೆಯ ದೇವಾಲಯ ತಲುಪಿದೆವು. ದಾರಿಯಲ್ಲಿ ತಿಂದ ಚಿತ್ರಾನ್ನದ ಸವಿ ಹೆಚ್ಚೇ ಎನಿಸಿತ್ತು.

ಪುರಾಣಗಳು ಹೇಳುವಂತೆ ಯಮುನೆಯ ತಂದೆ ಸೂರ್ಯ ಹಾಗೂ ತಾಯಿ ಮೋಡಗಳ ಅಧಿದೇವತೆಯಾದ ಸಂಜ್ಞಾ. ಯಮನ ತಂಗಿಯೇ ಯಮಿ ಅಥವಾ ಯಮುನೆ. ಚಳಿಗಾಲದ ದಿನವೊಂದರಲ್ಲಿ ಅನ್ನ ಬೇಯಿಸಲು ಒಣ ಕಟ್ಟಿಗೆ ಇಲ್ಲದೆ ಹಸಿವಿನಿಂದ ಕಂಗೆಟ್ಟದ್ದವನಿಗೆ ನೆರವು ನೀಡಲು ಯಮುನೆ ಬಿಸಿನೀರ ಬುಗ್ಗೆಯಾಗಿ ಧರೆಗೆ ಇಳಿದು ಬರುವಳು. ಇಲ್ಲಿನ ಬಿಸಿನೀರ ಬುಗ್ಗೆಯ ಸುತ್ತಾ ಒಂದು ಕಟ್ಟೆ ಕಟ್ಟಿದ್ದಾರೆ. ಸನಿಹದಲ್ಲೇ ಯಮುನೆಯ ದೇವಾಲಯವಿದೆ. ಪುರೋಹಿತರು ಇಲ್ಲಿಗೆ ಬರುವ ಭಕ್ತರಿಗೆ – ಕರವಸ್ತ್ರಗಳಲ್ಲಿ ಅಕ್ಕಿ ಮತ್ತು ಆಲೂಗಡ್ಡೆಗಳನ್ನು ಗಂಟು ಕಟ್ಟಿ ಕುದಿಯುತ್ತಿರುವ ಬಿಸಿನೀರ ಬುಗ್ಗೆಗಳಲ್ಲಿ ತೇಲಿಬಿಟ್ಟು, ಬೆಂದ ಮೇಲೆ ಪ್ರಸಾದವೆಂದು ನೀಡುವರು. ಪಕ್ಕದಲ್ಲಿಯೇ ಪಿತೃ ತರ್ಪಣ ಮಾಡಿಸುವ ಪುರೋಹಿತರು. ಬಿಸಿಯಾದ ಬಂಡೆಗಲ್ಲುಗಳ ಮೇಲೆ ಕುಳಿತು ಚಡಪಡಿಸುವ ಭಕ್ತರು, ಪಕ್ಕದಲ್ಲೇ ಇರುವ ಕೊಳದಲ್ಲಿರುವ ಬೆಚ್ಚನೆಯ ನೀರಿನಲ್ಲಿ ಮೀಯುವ ಭಕ್ತರು. ಯಮುನೆಯ ದರ್ಶನ ಮಾಡಿ ಹಿಂತಿರುಗುವಾಗ ಹಿಮಮಣಿಗಳು ಬೀಳುತ್ತಿದ್ದವು. ನಾವಂತೂ ಸಂಭ್ರಮದಿಂದ ಆಗಸದಿಂದ ಬೀಳುತ್ತಿದ್ದ ಹಿಮಮಣಿಗಳನ್ನು ಬೊಗಸೆಯಲ್ಲಿ ಹಿಡಿದು ಒಬ್ಬರ ಮೇಲೊಬ್ಬರು ತೂರಾಡಿದೆವು. ಸ್ವಲ್ಪ ಹೊತ್ತಿನಲ್ಲೇ ಹಿಮವು ತನ್ನ ರೂಪ ಬದಲಿಸಿತು. ಈಗ ಹಿಮವು ಬಿಳಿ ಪಾರಿವಾಳದ ಪುಕ್ಕಗಳಂತೆ ನಿಧಾನವಾಗಿ ಗಗನದಿಂದ ಜಾರುತ್ತಿತ್ತು. ದಾರಿಯಲ್ಲಿ ಪ್ರವಾಸಿಗರ ಸಂಖ್ಯೆ ತುಸು ಹೇಚ್ಚೇ ಇತ್ತು. ಜೊತೆಯಲ್ಲಿ ಕುದುರೆಗಳೂ, ಡೋಲಿಗಳೂ ನಮ್ಮನ್ನು ಅಲ್ಲಲ್ಲಿ ತಡೆದವು. ಎರಡು, ಮೂರು ಕುದುರೆಗಳನ್ನು ನಡೆಸುತ್ತಿದ್ದ ಹುಡುಗನೊಬ್ಬ ಶಿಳ್ಳೆ ಹೊಡೆದ ತಕ್ಷಣ ಎಲ್ಲಾ ಕುದುರೆಗಳೂ ಓಡಿ ಪ್ರಯಾಣಿಕರು ಕೆಳಗೆ ಬಿದ್ದಿದ್ದನ್ನು ನೋಡಿ ಗಾಬರಿಯಾಯಿತು. ಯಮುನೆಯ ಪವಾಡವೋ ಏನೋ ಕುದುರೆ ಸವಾರಿ ಮಾಡುತ್ತಿದ್ದವರ ಮೂಳೆ ಮುರಿದಿರಲಿಲ್ಲ.ಯಮುನೋತ್ರಿ – ಯಾತ್ರಾರ್ಥಿಗಳಿಗೆ ಪವಿತ್ರವಾದ ತಾಣ. ಚಾರಣ ಪ್ರಿಯರಿಗೆ ಸವಾಲೆಸೆಯುವ ಗಿರಿಶಿಖರಗಳು. ವಿಜ್ಞಾನಿಗಳಿಗೆ ಕುತೂಹಲ ಹುಟ್ಟಿಸುವ ಸಂಶೋಧನೆಯ ತಾಣ.

 

ಯಮುನೋತ್ರಿಯ ಬಿಸಿನೀರಬುಗ್ಗೆ.

‘ರೋಮನ್ ಬಾತ್’ ನಲ್ಲಿ ನೀರನ್ನು ಮುಟ್ಟಬೇಡಿ ಎಂಬ ಫಲಕ ನೋಡಿದವಳಿಗೆ ನಗು ಬಂತು. ನಮ್ಮಲ್ಲಿ ಪುಣ್ಯಕ್ಷೇತ್ರಗಳ ಬಳಿ ಇರುವ ನದಿ ನೀರಲ್ಲಿ ಮುಳುಗು ಹಾಕದೇ ಬರುವುದುಂಟೇ? ಹಾಗೇನಾದರೂ ಸರ್ಕಾರ ಕಾನೂನು ಜಾರಿ ಮಾಡಿದಲ್ಲಿ ದೊಡ್ಡ ಚಳುವಳಿಯೇ ನಡೆದೀತು ಅಲ್ಲವೇ? ನಮ್ಮಲ್ಲಿ ನದೀ ನೀರಿಗೆ ನಾಣ್ಯಗಳನ್ನು ಎಸೆಯುವ ಪದ್ಧತಿ ಇದೆಯಷ್ಟೇ? ಪಾಶ್ಚಿಮಾತ್ಯರಲ್ಲೂ ಈ ಪದ್ಧತಿ ಕಂಡುಬರುತ್ತದೆ. ಅಲ್ಲಿನ ಕೊಳಗಳಲ್ಲಿ ನಾಣ್ಯಗಳ ರಾಶಿಯೇ ಬಿದ್ದಿರುತ್ತದೆ. ಯಮುನೆಯಲ್ಲಿ ಮಿಂದವರಿಗೆ ಏಳು ಜನ್ಮದಲ್ಲಿ ಮಾಡಿದ ಪಾಪಗಳೂ ಪರಿಹಾರವಾಗುವುದು ಎಂಬ ನಂಬಿಕೆಯೂ ಇದೆ. ನೀರಿನಲ್ಲಿರುವ ಲವಣಾಂಶಗಳಿಂದ ಚರ್ಮರೋಗಗಳು ಗುಣವಾಗುವುದು ಎಂಬ ವೈಜ್ಞಾನಿಕ ಅಂಶವೂ ಇಲ್ಲಿ ಪ್ರಸ್ತುತ. ರೋಮನ್ನರಲ್ಲೂ ಈ ನಂಬಿಕೆ ಇತ್ತು. ಈ ‘ಸುಲಿಸ್’ ದೇವತೆಯ ಕೊಡುಗೆಯಾದ ‘ಆಕ್ವಾ ಸುಲಿಸ್’ನಲ್ಲಿ ಮಿಂದರೆ ಎಲ್ಲಾ ಖಾಯಿಲೆಗಳೂ ವಾಸಿ ಆಗುವುವು ಎಂಬ ನಂಬಿಕೆಯೂ ಇತ್ತು. ಅಚ್ಚರಿ ಮೂಡಿಸುವ ವಿಷಯವೆಂದರೆ – ಎರಡೂ ಬಿಸಿನೀರಬುಗ್ಗೆಗಳೂ ‘ಸೂರ್ಯನ ವರಪ್ರಸಾದವೇ’.’ಬಾತ್’ನಲ್ಲಿ ಪ್ರವಾಸಿಗರಿಗೆ ಎಲ್ಲ ಸೌಲಭ್ಯಗಳೂ ಲಭ್ಯ. ತಮ್ಮ ತಮ್ಮ ವಾಹನಗಳಲ್ಲಿ ಪಯಣಿಸಿ ಪ್ರವಾಸಿ ತಾಣವನ್ನು ಸುಲಬವಾಗಿ ತಲುಪಬಹುದು. ಇಲ್ಲಿನ ಪಯಣ ಆಹ್ಲಾದಕರ. ಸಂಭ್ರಮ, ಸಡಗರದೊಂದಿಗೇ ನಮ್ಮ ಪ್ರವಾಸ ಮುಗಿಯುತ್ತದೆ.

ಆದರೆ ಯಮುನೋತ್ರಿ – ಯಾತ್ರಿಗಳ ಶಾರೀರಿಕ ಸಧೃಢತೆಗೆ, ಮಾನಸಿಕ ಸ್ಥಿರತೆಗೆ ಒಂದು ಸವಾಲಾಗಿ ನಿಲ್ಲುತ್ತದೆ. ಇದು ಒಂದು ಯಾತ್ರೆ. ಆತ್ಮ ಸಾಕ್ಷಾತ್ಕಾರ ಪಡೆಯುವ ಸಾಧನ. ಧಾರ್ಮಿಕ ನಂಬಿಕೆಗಳ ಮೇಲೆ ನಿಂತಿರುವ ಪ್ರಕೃತಿಯ ಮಡಿಲಲ್ಲಿರುವ ಈ ತಾಣಗಳು, ಯಾತ್ರಿಗಳಲ್ಲಿ ಬೆರಗು ಹುಟ್ಟಿಸುತ್ತಾ, ಸೃಷ್ಟಿಕರ್ತನ ಆಲಯದ ದರ್ಶನ ಮಾಡಿಸುತ್ತಾ ನಮ್ಮ ಬದುಕಿನ ಸಾರ್ಥಕ ಕ್ಷಣಗಳೆನಿಸುವವು. ಅಲ್ಲವೇ?

-ಡಾ.ಗಾಯತ್ರಿದೇವಿ ಸಜ್ಜನ್

8 Responses

  1. Rukmini says:

    Nice article

  2. ನಯನ ಬಜಕೂಡ್ಲು says:

    ಕುತೂಹಲಕರ ವಿಚಾರಗಳನ್ನೊಳಗೊಂಡ ಲೇಖನ.

  3. ಡಾ. ಕೃಷ್ಣಪ್ರಭ ಎಂ says:

    ಮಾಹಿತಿ ಪೂರ್ಣ ಲೇಖನ

  4. Kusuma patel says:

    Nice article.

  5. Hema says:

    ಬರಹ ಸೂಪರ್…ನಮ್ಮ ಯಮುನೋತ್ರಿಯ ಚಾರಣ ಹಾಗೂ ಅಲ್ಲಿಯ ಬಿಸಿನೀರಿನ ಬುಗ್ಗೆಯನ್ನು ನೆನಪಿಸಿತು.

  6. Anonymous says:

    Nice informative article

  7. ವಿದ್ಯಾ says:

    ತುಂಬಾ ಚೆನ್ನಾಗಿ ದೆ

  8. Dr Hemanth says:

    Dear Madam ,
    I was your student at Sahyadri science college whilst doing my puc in the year 90/91. It was pleasant surprise to have come across your article. If my memory serves well , you were teaching us English then . Anyway, I have very fond memory of you as an excellent teacher with loads of maternal instinct and care towards your students.

Leave a Reply to ವಿದ್ಯಾ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: