ವಿಶೇಷ ದಿನ

ವಿಶ್ವ ಗುಬ್ಬಚ್ಚಿ ದಿನ

Share Button
   
ಚಿಂವ್ ಚಿಂವ್ ಗುಬ್ಬಿ ಮರಿ ಎತ್ತ ಹೋದೆ ಎನ್ನುತ್ತಾ ನಾವಿಂದು ಗುಬ್ಬಿಗಳ ದಿನವನ್ನು ಆಚರಿಸಲು ಹೊರಟಿದ್ದೇವೆ. ಅಳಿವಿನ ಅಂಚಿಗೆ ಸರಿದಿರುವ ಪುಟ್ಟ ಪಕ್ಷಿಗಳ ಗೈರುಹಾಜರಿಗೆ ನಮ್ಮ ಮೊಬೈಲ್ ಟವರ್ ಗಳೇ ಕಾರಣವೆಂದು ಹೇಳಲಾಗುತ್ತದೆ. ಇದಕ್ಕೆ ಇರಬೇಕು “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ “ಎನ್ನೋ ಗಾದೆಯನ್ನು ನಮ್ಮ ಹಿರಿಯರು ಹೇಳಿದ್ದು. ಅಂಥ ಸಣ್ಣ ಜೀವಿಯೊಂದು ಮಾನವರೊಟ್ಟಿಗೆ ಸದಾಕಾಲವೂ ಜೀವಿಸುತ್ತಿತ್ತು.

ನಮ್ಮ ಮನೆಯು ಮಂಗಳೂರು ಹೆಂಚಿನಿಂದ ಕಟ್ಟಿದ ಎತ್ತರವಾದ  , ತೆರೆದ ಪಡಸಾಲೆಯನ್ನು ಹೊಂದಿತ್ತು. ಬಾಲ್ಯದಲ್ಲಿ ನನಗೆ ತಿಳಿದಿರುವಂತೆ ಗುಬ್ಬಿ ಗೂಡೊಂದು ಸೂರುಕಟ್ಟಿನಲ್ಲಿ ಯಾವಾಗಲೂ ಗೋಚರಿಸುತ್ತಿತ್ತು. ಮುಂಜಾನೆ ನೇಸರನ ಆಗಮನದೊಟ್ಟಿಗೆ ಗುಬ್ಬಿಗಳ ಚಿಂವ್ ಚಿಂವ್ ದನಿ ಮುದವೆನಿಸುತ್ತಿತ್ತು. ಅವುಗಳಿಗೆ ಪಡಸಾಲೆಯಲ್ಲಿ ಧಾನ್ಯದ ಚೀಲಗಳು ಸುಲಭವಾಗಿ ಸಿಗುವಂತಿರುತ್ತಿದ್ದವು. ಹೊರಗೆ ಚೆಲ್ಲಿದ ಕಾಳುಗಳೇ ಸಾಕಲ್ಲವೇ ಆ ಪುಟ್ಟ ಪಕ್ಷಿಗಳ ಹೊಟ್ಟೆ ತುಂಬಲು. ಆಸೆ , ದುರಾಸೆಗಳನ್ನು ಮನುಜನಿಗೆ ಬಿಟ್ಟುಕೊಟ್ಟಿರುವ ಉಳಿದೆಲ್ಲಾ ಜೀವಿಗಳು ಅದೆಷ್ಟು ಶ್ರೇಷ್ಠ ಅಲ್ಲವೇ? (ಸಾಕು ಎನ್ನಿಸಲು ಸಾಧ್ಯವಿರುವುದು ಮನುಷ್ಯ ತಿನ್ನುವ ಅನ್ನಕ್ಕೆ ಮಾತ್ರ . ಅದನ್ನು ಹೊರತುಪಡಿಸಿ ಇನ್ನಾವುದಕ್ಕೂ ತೃಪ್ತನಾಗುವುದೇ ಇಲ್ಲ !)

ಇರಲಿ ಅದೇನೆ ಆದರೂ ನಮ್ಮೊಂದಿಗೆ ಒಡನಾಟವನ್ನು ಹೊಂದಿದ್ದ  ಗುಬ್ಬಚ್ಚಿ ಗಳು ಕ್ರಮೇಣ ಮರೆಯಾಗಿ ಅಚ್ಚರಿ ಮೂಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಕಾರಣ ನಾವೇ ಎನ್ನುವ ಸತ್ಯದ ಅರಿವು ನಮಗೂ ಇದೆ. ಅನ್ಯಗ್ರಹದ  ಜೀವಿಗಳ ಕಡೆಗೆ  ಚಿತ್ತ ನೆಟ್ಟ  ಮಾನವನಿಗೆ ತಾನಿರುವ ಗ್ರಹದ ಜೀವಿಗಳ ಉಳಿವಿಗಾಗಿ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯತೆ ಇದೆ ತಾನೇ?

PC: Internet
ಈಗಿನ ಆಧುನಿಕತೆಯ ಪರಿಣಾಮವಾಗಿ ಮನೆಗಳು ಬದಲಾಗಿವೆ. ಗುಬ್ಬಿ ಗೂಡು ಕಟ್ಟುವ ಸಾಧ್ಯತೆಯೂ ಇಲ್ಲವಾಗಿದೆ. ಹಾಗಾಗಿ ಗುಬ್ಬಿಯೂ ಇಲ್ಲ, ಗುಬ್ಬಚ್ಚಿ ಗೂಡೂ ಇಲ್ಲ. ಆಗ ಕಾಗಕ್ಕ, ಗುಬ್ಬಕ್ಕ ಎನ್ನುವ ಕಥೆಗಳು ಸಾಮಾನ್ಯವಾಗಿದ್ದವು.ನಮ್ಮ ಕಲ್ಪನೆಗೆ ಮೆರುಗು ಕೊಡುವ ರೀತಿಯಲ್ಲಿ ಅಜ್ಜಿಯರು ರಾತ್ರಿಯ ತಿಂಗಳ ಬೆಳಕಿನಲ್ಲಿ ಕಥೆ ಹೇಳುತ್ತಿದ್ದರು. ಆದರೆ ಈಗಿನ ಕಾರ್ಟೂನ್ ಕಥೆಗಳಿಗಿಂತಲೂ ಭಿನ್ನ ಮತ್ತು ಆಪ್ಯಾಯಮಾನವಾಗಿದ್ದವು. ಕಾಲ ಬದಲಾಗಿದೆ ನಮ್ಮ ಮನೆಯ ಅಂಗಳದಲ್ಲಿ ಓಡಾಡಿಕೊಂಡಿದ್ದ ಗುಬ್ಬಿಗಳನ್ನು ಫೋಟೋದಲ್ಲಿ ತೋರಿಸಿ  ನಮ್ಮ ಮಕ್ಕಳಿಗೆ ಪರಿಚಯಿಸುವಂತಾಗಿದೆ. ಇನ್ನಾದರೂ ಇರುವ ಪಕ್ಷಿಗಳನ್ನು ಸಂರಕ್ಷಿಸೋಣ. ಅವುಗಳಿಗೆ ಹಿಡಿಯಷ್ಟು ಅಕ್ಕಿ ಚೆಲ್ಲಿ ಅಂಗಳದ ಆಶ್ರಯ ನೀಡೋಣ. ಪಟ್ಟಣದಲ್ಲಿ ಅಲ್ಲದಿದ್ದರೂ ನಮ್ಮ ಹಳ್ಳಿಗರ ಮನೆಯಲ್ಲಿ ಅವುಗಳ ಸದಸ್ಯತ್ವವನ್ನು ಕಾಯ್ದಿರಿಸೋಣ. ಅವುಗಳಿಗಾಗಿ ತಾರಸಿಯಲ್ಲಿ ನೀರೋ , ಧಾನ್ಯವೋ ಇಟ್ಟು ಸ್ವಾಗತಿಸೋಣ. ವಿಶ್ವ ಗುಬ್ಬಚ್ಚಿ ದಿನದಂದು ಅವುಗಳ ಉಳಿವಿಗಾಗಿ ಪ್ರಯತ್ನ ಮಾಡೋಣ . ಏನಂತೀರಿ ನೀವು?
.

-ಸರಿತಾ ಮಧು ,  ನಾಗೇನಹಳ್ಳಿ

8 Comments on “ವಿಶ್ವ ಗುಬ್ಬಚ್ಚಿ ದಿನ

  1. ಮತ್ತೆ ಗುಬ್ಬಿಯ ನೆನಪು ಅಚ್ಚಳಿಯದಂತೆ ಮಾಡಿದಿರಿ.ಧನ್ಯವಾದಗಳು ಮೇಡಂ

  2. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲವಂತೆ….. ಮೊಬೈಲ್ tower ಗಳು ಒಂದು ರೀತಿ ಬ್ರಹ್ಮಸ್ತ್ರ ದಂತೆ ಗೋಚರಿಸುತ್ತವೆ… ಅವುಗಳ ಎತ್ತರ…. ಇನ್ನೂ ಗುಬ್ಬಚ್ಚಿ ಅಳಿಸಲು ಅವಗಳನು ನಿರ್ಮಾಣ ಮಾಡಿದಂಥ ವಿಪರ್ಯಾಸ……

  3. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ..ಸೂಪರ್ ವಾಸ್ತವ ಸಂಗತಿ ಯು ಅನಾವರಣ.. ಚೆನ್ನಾಗಿ ಮೂಡಿ ಬಂದಿದೆ.ಅಭನಂದನೆಗಳು ಗೆಳತಿ.

  4. ಅರಗಿಸಿಕೊಳ್ಳಲಾಗದ ವಾಸ್ತವ… ಗುಬ್ಬಚ್ಚಿಗಳ ವಿನಾಶ! ಬಹು ಸೊಗಸಾದ ಮನಮುಟ್ಟುವಂತಹ ನಿರೂಪಣೆ.. ಧನ್ಯವಾದಗಳು ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *