ಬಾ…ಬಾ..ಗುಬ್ಬಿ..!
ಹಲವಾರು ವರ್ಷಗಳ ಹಿಂದೆ ಗುಬ್ಬಚ್ಚಿಗಳು ನಮ್ಮ ಮನೆಯ ಸದಸ್ಯತನದ ಹಕ್ಕು ಪಡೆದವುಗಳಾಗಿದ್ದವು. ನಮ್ಮ ಕರಾವಳಿ ಕರ್ನಾಟಕದ ಮನೆಗಳು ಹೆಚ್ಚಿನವು ಹುಲ್ಲಿನ ಛಾವಣಿ ಹೊಂದಿದ್ದರೆ, ಶ್ರೀಮಂತರ ಮನೆಗಳು ನಾಡ ಹಂಚಿನವುಗಳಾಗಿದ್ದವು. ಮನೆ ಹಕ್ಕಿಗಳೆಂದೇ ಗುರುತಿಸಲ್ಪಡುವ ನಮ್ಮ ಈ ಪುಟ್ಟ ಗುಬ್ಬಿಹಕ್ಕಿಗಳು ಮರದಲ್ಲಿ ಗೂಡು ಕಟ್ಟುವುದು ಕಡಿಮೆ..ಮನುಷ್ಯ ಸಹವಾಸ ಇಷ್ಟಪಡುವ ಇವುಗಳು ಬಡವ ಬಲ್ಲಿದರೆಂಬ ಭೇದವಿಲ್ಲದೆ ಮನೆ ಮುಂಬಾಗಿಲಿನ ಮೇಲೆ ಅಡ್ಡದಲ್ಲಿ ಗೂಡು ಕಟ್ಟುವುದು ಮಾಮೂಲು. ಅದರ ಗೂಡಿನಿಂದ ಕಡ್ಡಿಗಳು ಕೆಳಗುದುರಿ ಮುಂಬಾಗಿಲಲ್ಲೇ ನೆಲವು ರಾಡಿಯಾಗುವುದು; ಸ್ವಲ್ಪವೂ ಬೇಸರಿಸದೆ ಅವುಗಳನ್ನು ದಿನವಿಡೀ ಸ್ವಚ್ಛ ಮಾಡುವುದೂ ನಮ್ಮೆಲ್ಲರ ದಿನ ನಿತ್ಯದ ಕೆಲಸಗಳಲ್ಲೊಂದು. ಅವುಗಳ ಚಿಲಿಪಿಲಿ ಸದ್ದು ನಮಗೆ ಸುಪ್ರಭಾತ. ಅವುಗಳು ಗೂಡು ಕಟ್ಟಲು ರಟ್ಟಿನಿಂದ, ಮರದ ಹಲಗೆಯಿಂದ ತರೆಹೇವಾರಿ ಡಬ್ಬಗಳನ್ನು ಮಾಡಿ ಇಡುತ್ತಿದ್ದೆವು. ಅವುಗಳಿಗೆ ಕಾಳು ಹಾಕುವ ಪ್ರಮೇಯವೇ ಇರುತ್ತಿರಲಿಲ್ಲ.. ಯಾಕೆ ಗೊತ್ತೇ.. ನಮ್ಮ ಹೊಲದಲ್ಲಿರುವ ಕಾಳುಗಳು, ಮನೆಯ ಕೋಣೆಗಳಲ್ಲಿ ಅಲ್ಲಲ್ಲಿ ಮನೆ ತುಂಬಿಸುವ ಹಬ್ಬದ ದಿನ ಕಟ್ಟುವ ಭತ್ತದ ಒಣ ತೆನೆಯ ಕಾಳುಗಳು ಅವುಗಳಿಗೆ ಇಡೀ ವರ್ಷಕ್ಕೆ ಸಾಕಾಗುತ್ತಿತ್ತು! ಅದರ ಪುಟ್ಟ ಚೂಪಾದ ಕೊಕ್ಕಿನಿಂದ, ಭತ್ತದಿಂದ ಸಿಪ್ಪೆ ಬೇರ್ಪಡಿಸಿ ಅಕ್ಕಿ ತಿನ್ನುವುದನ್ನು ನೋಡುವುದೇ ಒಂದು ಖುಷಿ. ಭತ್ತದ ಪೈರು ಕಟಾವು ಸಮಯದಲ್ಲಿ, ಅಂಗಳದಲ್ಲಿ ಒಣ ಹಾಕಿದ ಕಾಳುಗಳು ಅವುಗಳಿಗೆ ಭರ್ಜರಿ ಹಬ್ಬದೂಟ! ಹತ್ತಾರು ಗುಬ್ಬಿಗಳು ಪುರ್ರೆಂದು ಹಾರಿ ಬಂದು ಕಾಳು ತಿನ್ನುವುದು ನೋಡುವುದು ನಾವು ಮಕ್ಕಳಿಗೆ ಕಣ್ಣಿಗೆ ಹಬ್ಬ!
ಗುಬ್ಬಚ್ಚಿ ಗೂಡು ಕಟ್ಟಿ ಮನೆಯಲ್ಲಿ ವಾಸಿಸುತ್ತಿದ್ದರೆ, ಮನೆಗೆ ಬಹಳ ಅದೃಷ್ಟ, ಸಂತಾನ, ಸಂಪತ್ತುಗಳ ಭಾಗ್ಯ ಎನ್ನುವ ನಂಬಿಕೆಯಿದೆ. ಆದ್ದರಿಂದಲೇ ಅದನ್ನು ಎಲ್ಲರೂ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಅವುಗಳ ತತ್ತಿಗಳನ್ನು ಸಾಮಾನ್ಯ ಬಿಳಿ ಬಣ್ಣದಲ್ಲಿ ಮಾತ್ರವಲ್ಲದೆ, ಬೂದು, ನಸು ನೀಲಿ, ಬಿಳಿಯಲ್ಲಿ ಕಂದು ಚುಕ್ಕೆಗಳು ಇತ್ಯಾದಿ ಚಂದದ ಬಣ್ಣಗಳಿಂದಲೂ ಕಾಣಬಹುದು. ಅವುಗಳನ್ನು ತಿನ್ನಲು ಕೇರೆ ಹಾವು ಮಾಡಿನಲ್ಲಿ ಓಡಾಡುವುದೂ.. ನಾವು ಮಕ್ಕಳಿಗೆ, ಅದರ ಕೆಳಭಾಗದ ಬಿಳಿಬಣ್ಣ ಕಂಡು ಹೆದರಿ ಮನೆಯಿಂದ ಹೊರಗೋಡುವುದೂ ಮಾಮೂಲಿನ ಸಂಗತಿಗಳೆಂಬಂತೆ ನಡೆಯುತ್ತಿತ್ತು.
ಈಗೆಲ್ಲಿದೆ ನಮ್ಮ ಈ ಪ್ರೀತಿಯ ಗುಬ್ಬಚ್ಚಿ? ಎಲ್ಲೂ ಕಾಣದಂತೆ ಮಾಯವಾಗಿದೆಯಲ್ಲಾ! ಕಾರಣಗಳು ಹಲವಾರು..
ಮುಖ್ಯವಾಗಿ, ನಮ್ಮ ಚರವಾಣಿಯಲ್ಲಿ ಬಳಕೆಯಾಗುವ ತರಂಗಗಳು ಇವುಗಳ ನಾಶಕ್ಕೆ ಮೂಲ ಎನ್ನುತ್ತಾರೆ. ಜೊತೆಗೆ, ಕಲುಷಿತ ವಾತಾವರಣ, ಶಬ್ದ ಮಾಲಿನ್ಯ, ಅರಣ್ಯ ನಾಶ ಇತ್ಯಾದಿಗಳು. ಕಾರಣಗಳು ಏನೇ ಇರಲಿ, ಅವುಗಳ ಸಂತಾನ ನಾಶದಂಚಿನಲ್ಲಿ ಇರುವುದಂತೂ ಸತ್ಯ ತಾನೇ? ಇವು ಮಾತ್ರವಲ್ಲ ಪ್ರಪಂಚದಾದ್ಯಂತ ಇಂತಹವೇ ಹಲವಾರು ಪಕ್ಷಿಗಳು ಅಳಿದು ಹೋಗಿವೆ ಅಥವಾ ಅಳಿವಿನ ಅಂಚಿನಲ್ಲಿವೆ. ಅವುಗಳ ಉಳಿವಿಗೋಸ್ಕರ, ಅವುಗಳ ಸಂತಾನಾಭಿವೃದ್ಧಿಗಾಗಿ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಪ್ರಕೃತಿ ಪ್ರೇಮಿಗಳು ಹಾಗೂ ಪಕ್ಷಿಪ್ರಿಯರ ಸಂಘಟನೆಗಳು ಒಟ್ಟಾಗಿ, ಫ್ರಾನ್ಸ್ ನಲ್ಲಿ 2010ರಲ್ಲಿ ಮೊತ್ತ ಮೊದಲಿಗೆ ಆಂದೋಲನವು ಆರಂಭವಾಯಿತು. ಅಂತೆಯೇ, ಅಂದಿನ ನಿರ್ಧಾರದಂತೆ, ಪ್ರತಿ ವರ್ಷ ಮಾರ್ಚ್ 20ನೇ ತಾರೀಕಿನಂದು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುವುದು. ಈ ವಿಶೇಷ ದಿನದಂದು, ಜಗತ್ತಿನಾದ್ಯಂತ ಬೇರೆ ಬೇರೆ ಕಡೆಗಳಲ್ಲಿ, ಅಳಿವಿನಂಚಿನಲ್ಲಿರುವ ಜೀವ ವೈವಿಧ್ಯಗಳ ಉಳಿವಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಆದರೆ 2008ನೇ ಇಸವಿಯ ಮೊದಲೇ ನಮ್ಮ ದೇಶದ ನಾಸಿಕ್ ನಲ್ಲಿರುವ ಮೊಹಮ್ಮದ್ ದಿಲ್ವಾರ್ ಎಂಬ ಬಹು ದೊಡ್ಡ ಸಂರಕ್ಷಣಾವಾದಿಗಳು NFSI(Nature Forever Society India) ಮತ್ತು ಫ್ರಾನ್ಸಿನ ಪರಿಸರವಾದಿಗಳ ಸಂಘಟನೆಯ ಜೊತೆ ಸೇರಿ ಸಹಸ್ರಾರು ಗುಬ್ಬಚ್ಚಿಗಳನ್ನು ಸಂರಕ್ಷಿಸಿದ್ದರು. ಅದಕ್ಕಾಗಿಯೇ ಅವರು 2008ರಲ್ಲಿ ಪ್ರತಿಷ್ಠಿತ “Heros of Environment” ಎಂಬ ಗೌರವಕ್ಕೂ ಪಾತ್ರರಾಗಿದ್ದರು.
ನಾವು ಈ ಒಂದು ದಿನವನ್ನು ವಿಶೇಷವಾಗಿ ಗುಬ್ಬಚ್ಚಿಗಳಿಗಾಗಿ ಮೀಸಲಿಟ್ಟರೆ ಸಾಕೇ? ಇಲ್ಲ.. ಪರಿಸರದಲ್ಲಿಯಲ್ಲಿರುವ ಪ್ರತಿಯೊಂದು ಜೀವಿಯೂ ನಿಸರ್ಗದ ಅಭೂತಪೂರ್ವ ಕೊಂಡಿಗಳಾಗಿವೆ. ಒಂದೇ ಒಂದು ಕೊಂಡಿ ಕಳಚಿದರೂ ನಿಸರ್ಗದಲ್ಲಿ ಅಸಮತೋಲನೆ ಏರ್ಪಡುವುದು ಖಂಡಿತಾ. ಪರಿಸ್ಥಿತಿ ಕೈ ಮೀರಿ ಹೋಗುವ ಮೊದಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಇನ್ನಾದರೂ, ಪ್ರಕೃತಿ ಮಾತೆಯ ಎಲ್ಲಾ ಮಕ್ಕಳು ಸಹಜೀವನ ನಡೆಸುವಂತಾಗಿ, ನಮ್ಮ ಗುಬ್ಬಚ್ಚಿಗಳು ಮೊದಲಿನಂತೇ ಚಿಂವ್ ಚಿಂವ್, ಚಿಲಿ ಪಿಲಿ ಎನ್ನುತ್ತಾ ನಮ್ಮೆಲ್ಲರ ಅಂಗಳದಲ್ಲಿ ಕಾಳು ತಿನ್ನುವಂತಾಗಲಿ ಎಂದು ಆಶಿಸೋಣ ಅಲ್ಲವೇ?
ನಮ್ಮ ಪುಟ್ಟ ಗುಬ್ಬಿಗೊಂದು ಚಿಕ್ಕ ಕವನ(ಶಿಶು ಗೀತೆ):
ಗುಬ್ಬಿ ಗೂಡು
ಗಂಡು ಗುಬ್ಬಿ ಹಕ್ಕಿ ಬಂತು
ಕೊಕ್ಕಿನಲ್ಲಿ ಕಡ್ಡಿ ತಂತು
ಮಾಡಮೂಲೆಯಲ್ಲಿ ಒಂದು ಗೂಡ ಕಟ್ಟಿತು
ಅಮ್ಮ ಗುಬ್ಬಿ ಹಾರಿ ಬಂತು
ಗೂಡಿನೊಳಗೆ ತಾನು ಕುಳಿತು
ಚಂದದಿಂದ ಬಿಳಿಯ ಮೂರು ಮೊಟ್ಟೆ ಇಟ್ಟಿತು
ಅಪ್ಪ ಗುಬ್ಬಿ ಕಾಳು ತರಲು
ಹೊರ ಹೋದ ಸಮಯದಲ್ಲಿ
ಅಮ್ಮ ಗುಬ್ಬಿ ಮೊಟ್ಟೆಗಳಿಗೆ ಕಾವು ಕೊಟ್ಟಿತು
ಕೆಲವು ದಿನ ಕಳೆಯುತಿರಲು
ಮೊಟ್ಟೆಯೊಡೆದು ಮರಿಯು ಬರಲು
ಗುಬ್ಬಚ್ಚಿ ಮರಿಯು ಹಸಿವಿನಿಂದ ಬಾಯಿ ಬಿಟ್ಟಿತು
ದಿನವು ಒಂದು ಕಳೆಯುತಿರಲು
ಮೂರು ಗುಬ್ಬಿ ಮರಿಗಳಿರಲು
ಅಮ್ಮ ಗುಬ್ಬಿ ಹಾರಿ ಬಂದು ತುತ್ತ ನೀಡಿತು
ರೆಕ್ಕೆ ಪುಕ್ಕ ಬೆಳೆದ ಮೇಲೆ
ಮರಿಗಳೆಲ್ಲ ಹಾರೆ ಮೇಲೆ
ಗುಬ್ಬಿ ಇರದ ಗೂಡು ತಾನು ಖಾಲಿಯಾಯಿತು
-ಶಂಕರಿ ಶರ್ಮ, ಪುತ್ತೂರು.
ಗುಬ್ಬಿ ಹಕ್ಕಿಯ ಕತೆ ವ್ಯಥೆ ಗಳನು ಸುಂದರವಾಗಿ ವಿವರಿಸಿದ್ದೀರಿ. ಕವನ ವಂತೂ ಸೂಪರ್.
ಧನ್ಯವಾದಗಳು ಮೇಡಂ.
ಗುಬ್ಬಿ ಹಕ್ಕಿಯ ಲೇಖನ,ಶಿಶು ಗೀತೆ ಓದಿ ಮನ ಮುಗೊಂಡಿತು
ಧನ್ಯವಾದಗಳು ಅಕ್ಕಾ
ಗುಬ್ಬಚ್ಚಿಯ ಲೇಖನ ಅದರ ಜೊತೆಗೆ ಪುಟ್ಟ ಕವನ ಚಂದದ ನಿರೂಪಣೆ ಮೇಡಂ.ಅಭಿನಂದನೆಗಳು
ಧನ್ಯವಾದಗಳು ಮೇಡಂ.