ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 12
ಕಛ್ ನಿಂದ ದ್ವಾರಕೆಯತ್ತ …
19 ಜನವರಿ 2019ರಂದು ಬೆಳಗ್ಗೆ ಕಛ್ ನಿಂದ ಮುಂಜಾನೆ ಹೊರಟೆವು. ಅಂದು ನಮ್ಮ ಪಯಣ ಜಾಮ್ ನಗರದಲ್ಲಿರುವ ದ್ವಾರಕೆಯತ್ತ ಅಂದಾಜು 450 ಕಿ.ಮೀ ದೂರ ಹೋಗಬೇಕಿತ್ತು. ಪ್ರಸ್ತುತ ದ್ವಾರಕಾ ನಗರವು ಗುಜರಾತ್ ರಾಜ್ಯದ ಜಾಮ್ ನಗರ ಜಿಲ್ಲೆಯ ಪಶ್ಚಿಮ ದಿಕ್ಕಿನ ತುತ್ತತುದಿಯಲ್ಲಿ, ಅರಬೀ ಸಮುದ್ರದ ದಡದಲ್ಲಿದೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನು ರಾಜ್ಯಭಾರ ಮಾಡಿದ ದ್ವಾರಕೆಯು ಕಾಲ್ಪನಿಕ ನಗರವೆಂಬ ವಾದವು ಒಂದೆಡೆಯಾದರೆ, ಸಮುದ್ರದಲ್ಲಿ ಮುಳುಗಿ ಹೋದ ದ್ವಾರಕೆಯ ಅವಶೇಷಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿಯೂ ಇದೆ. ಹಾಗಾಗಿ, ನಮಗೆಲ್ಲರಿಗೂ ದ್ವಾರಕೆಯ ಬಗ್ಗ್ಗೆ ಭಕ್ತಿ ಹಾಗೂ ಕುತೂಹಲ ಎರಡೂ ಮೇಳೈಸಿದ್ದುವು.
ಸಂಜೆ ಐದು ಗಂಟೆಗೆ ದ್ವಾರಕೆಯ ‘ಹೋಟೆಲ್ ನಿಲಯ್’ ತಲಪಿದೆವು. ಟ್ರಾವೆಲ್ಸ್4ಯು ತಂಡದ ಗಣೇಶ್ ಅವರು ನಮಗೆ ತಿಳಿಯಪಡಿಸಿದಂತೆ, ದ್ವಾರಕೆಯಲ್ಲಿ ಮತ್ತು ಸುಮಾರು 15 ಕಿ.ಮೀ ಸುತ್ತುಮುತ್ತಲಿನ ಪ್ರದೇಶದಲ್ಲಿ ನದಿ, ಬೋರ್ ವೆಲ್ ಇತ್ಯಾದಿ ಜಲಮೂಲಗಳಿಂದ ಸಿಗುವ ನೀರು ಸಮುದ್ರದ ನೀರಿನಂತೆ ಉಪ್ಪಾಗಿರುತ್ತದೆ. ಹೋಟೆಲ್ ನಲ್ಲಿ ಕೈತೊಳೆಯಲು, ಸ್ನಾನಕ್ಕೆ ಕೂಡ ಉಪ್ಪು ನೀರಿನ ಸರಬರಾಜು ಇರುತ್ತದೆ. ಕುಡಿಯಲು ಮಾತ್ರ ಸಿಹಿನೀರನ್ನು ಒದಗಿಸುತ್ತಾರೆ ಎಂದಿದ್ದರು. ಅವರು ಹೇಳಿದ ಹಾಗೆಯೇ ನಮಗೆ ಕೊಡಲಾಗಿದ್ದ ಕೋಣೆಯ ಎಲ್ಲಾ ನಲ್ಲಿಗಳಲ್ಲಿ ಬರುತ್ತಿದ್ದ ನೀರು ಉಪ್ಪು ರುಚಿ ಹೊಂದಿತ್ತು. ಅದೇ ನೀರಿನಲ್ಲಿ ಸ್ನಾನ ಮಾಡುವ ಅನಿವಾರ್ಯತೆ. ಗಮನಿಸಿದ ಅಂಶವೇನೆಂದರೆ, ನಾವು ದಕ್ಷಿಣಭಾರತದಲ್ಲಿ ಸಮುದ್ರದ ಉಪ್ಪು ನೀರಿನಲ್ಲಿ ಸ್ನಾನ ಮಾಡಿದರೆ, ಆಮೇಲೆ ಸಿಹಿನೀರಿನಲ್ಲಿಯೂ ಸ್ನಾನ ಮಾಡಬೇಕು. ಇಲ್ಲದಿದ್ದರೆ ಚರ್ಮಕ್ಕೆ ಹಿಂಸೆಯಾಗುತ್ತದೆ. ಆದರೆ, ದ್ವಾರಕೆಯ ಉಪ್ಪುನೀರಿನಲ್ಲಿ ಸ್ನಾನ ಮಾಡಿದಾಗ ಈ ರೀತಿ ಅನಿಸಲಿಲ್ಲ.
‘ಕುಶಸ್ಥಲಿ’ಯು ದ್ವಾರಕೆಯಾದ ಬಗೆ
ನಾವಿದ್ದ ಹೋಟೇಲ್ ನಿಂದ 20 ನಿಮಿಷ ನಡೆದುಕೊಂದು ಹೋದರೆ ದ್ವಾರಕೆಯ ಮಂದಿರ ಎಂದು ತಿಳಿಸಿದ್ದರು. ಸ್ವಲ್ಪ ವಿಶ್ರಾಂತಿಯ ನಂತರ, ಸ್ಥಳೀಯ ಅರ್ಚಕರ ನೇತೃತ್ವದಲ್ಲಿ ದೇವಸ್ಥಾನವನ್ನು ತಲಪಿದೆವು. ದೇವಸ್ಥಾನದ ಹೊರಗಡೆ ಕೆಲವು ವಿದೇಶೀಯರೂ ಕೂಡ ಇಸ್ಕಾನ್ ಕೇಂದ್ರದ ಕೇಸರಿ ಬಣ್ಣದ ಪಂಚೆಯನ್ನುಟ್ಟು ಭಕ್ತಿಭಾವದಿಂದ ಭಜನೆ ಮಾಡುತ್ತಿದ್ದರು. ಅವರು ರಷ್ಯಾದವರೆಂದು ಗೊತ್ತಾಯಿತು. ಇಲ್ಲಿ ಕೃಷ್ಣನನ್ನು ಭಕ್ತರು ‘ದ್ವಾರಕಾಧೀಶ್ ಕೀ ಜೈ’ ಎನ್ನುತ್ತಾ ಸ್ತುತಿಸುತ್ತಾರೆ.
ಅಲ್ಲಿಯ ಅರ್ಚಕರು ವಿವರಿಸಿದ ಸ್ಥಳಪುರಾಣದ ಪ್ರಕಾರ, ಶ್ರೀ ಕೃಷ್ಣನು ತನ್ನ ಸೋದರಮಾವನಾದ ದುರುಳ ಕಂಸನನ್ನು ಮಥುರೆಯಲ್ಲಿ ಸಂಹರಿಸಿದ ಮೇಲೆ ಕಂಸನ ಮಾವನಾದ ಜರಾಸಂಧನು ಯಾದವ ಪರಿವಾರವನ್ನು ದ್ವೇಷಿಸಿಲಾರಂಭಿಸಿ, ಹಲವಾರು ಬಾರಿ ಯಾದವರನ್ನು ಹಿಂಸಿಸಿದ. ಸ್ವಬಾಂಧವರನ್ನು ರಕ್ಷಿಸುವ ಸಲುವಾಗಿ, ಶ್ರೀಕೃಷ್ಣನು ಹೊಸ ವಾಸಸ್ಥಳವನ್ನು ನಿರ್ಮಿಸುವ ಸಲುವಾಗಿ ಸಮುದ್ರರಾಜನಿಗೆ, ಸೌರಾಷ್ಟ್ರದಲ್ಲಿ, ಹಿಂದೆ ಸರಿದು ಸ್ಥಳ ಬಿಟ್ಟುಕೊಡುವಂತೆ ವಿನಂತಿಸಿದ. ಸಮುದ್ರರಾಜನು ‘ಕುಶಸ್ಥಲಿ’ ಎಂದು ಕರೆಲ್ಪಡುತ್ತಿದ್ದ ಜಾಗವನ್ನು, ವಾಪಾಸ್ಸು ತೆಗೆದುಕೊಳ್ಳುವೆನೆಂಬ ಷರತ್ತಿನ ಮೇರೆಗೆ ಬಿಟ್ಟುಕೊಟ್ಟ. ಈ ಸ್ಥಳದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಮಗನಾದ ಕುಶನು ರಾಜ್ಯಭಾರ ಮಾಡಿದ್ದನಂತೆ.
ದೇವಶಿಲ್ಪಿ ವಿಶ್ವಕರ್ಮನ ಸಹಾಯದಿಂದ ‘ಕುಶಸ್ಥಲಿ’ಯಲ್ಲಿ ಅದ್ಭುತವಾದ, ವಿಶಾಲವಾದ ಹಾಗೂ ಸಕಲ ಸಂಪತ್ತಿನಿಂದ ಕಂಗೊಳಿಸುವ ಕೋಟೆ ನಿರ್ಮಾಣವಾಯಿತು. ನೂತನವಾಗಿ ನಿರ್ಮಿಸಿದ ಭವ್ಯವಾದ ನಗರಕ್ಕೆ ಹಲವಾರು ಬಾಗಿಲುಗಳು ಇದ್ದುದರಿಂದ ಇದಕ್ಕೆ ‘ದ್ವಾರಾವತಿ’ ಎಂಬ ಹೆಸರೂ ಇತ್ತು. ಶ್ರೀಕೃಷ್ಣನ ಬಾಲ್ಯದ ಗೆಳೆಯ ‘ಸುದಾಮ’ನು ಒಂದು ಬಾರಿ ತನ್ನ ಮಡದಿಯ ಆಗ್ರಹದ ಮೇರೆಗೆ, ಶ್ರೀಕೃಷ್ಣನನ್ನು ಭೇಟಿಯಾಗಲೆಂದು ‘ದ್ವಾರಾವತಿ’ಗೆ ಬರುತ್ತಾನೆ. ವೈಭವೋಪೇತವಾದ ನಗರದ ಪ್ರವೇಶಕ್ಕೆ ನೂರಾರು ‘ದ್ವಾರ’ ಅಥವಾ ಬಾಗಿಲುಗಳಿದ್ದುದರಿಂದ, ಎಲ್ಲಿ ಹೋಗಲಿ ಎಂದು ಗೊತ್ತಾಗದೆ ‘ದ್ವಾರ್ ಕ:” ಎಂದು ಹುಡುಕುತ್ತಾ ಅಲೆದನಂತೆ. ಅದನ್ನು ಕೇಳಿಸಿದ ಶ್ರೀಕೃಷ್ಣನು ತಾನೇ ಖುದ್ದಾಗಿ ಬಂದು ಸುದಾಮನನ್ನು ಸ್ವಾಗತಿಸಿ, ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿ, ಆತಿಥ್ಯ ನೀಡಿ ಸತ್ಕರಿಸಿ, ಆತನು ತಂದ ಹಿಡಿ ಅವಲಕ್ಕಿಯನ್ನು ಪ್ರೀತಿಯಿಂದ ಸ್ವೀಕರಿಸಿ ಅನುಗ್ರಹಿಸಿದುದು ಆದರ್ಶ ಗೆಳೆತನಕ್ಕೆ ಸಾಕ್ಷಿಯಾಗಿದೆ. ಹೀಗೆ ‘ದ್ವಾರ್ ಕ:’ ಎಂದು ಸುದಾಮನು ಕೇಳಿದ ಕಾರಣ, ನಗರದ ಹೆಸರು ‘ದ್ವಾರಕೆ’ ಆಯಿತು ಎಂಬುದು ಉಪಕಥೆ.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=31420
-ಹೇಮಮಾಲಾ.ಬಿ
ಮೊದಲು ಅರಿತಿದ್ದರೂ ದ್ವಾರಕೆ ಯ ಬಗ್ಗೆ ತಿಳಿದುಕೊಳ್ಳುವುದೊಂದು ರೀತಿಯ ಸಂತಸ ನೀಡುತ್ತದೆ ಮನಸಿಗೆ.
ಎಂದಿನಂತೆ ಇಂದೂ ಪ್ರವಾಸ ಕಥನ ಆಕರ್ಷಕವಾಗಿ ಮೂಡಿ ಬಂದಿದೆ.ಗೆಳತಿ ಹೇಮಾ ಅಭಿನಂದನೆಗಳು ನಿಮಗೆ.
ಧನ್ಯವಾದಗಳು
2018ರ ನವೆಂಬರಿನಲ್ಲಿ ನಾವೂ ಅಲ್ಲಿಗೆ ಹೋದದ್ದರ ನೆನಪಾಯಿತು
ಚಂದದ ಪ್ರವಾಸ ಕಥನ
ಧನ್ಯವಾದಗಳು
ಅದ್ಭುತ ಶಿಲ್ಪಕಲೆ ಯಿಂದ ನಿರ್ಮಿತ ದ್ವಾರಕಾ ಮಂದಿರ,ಕೃಷ್ಣ ಸುಧಾಮರ ಭೇಟಿಯಾದಕಥನ ದಿಂದ ಒಡಗೂಡಿದ ಪ್ರವಾಸ ಕಥನ ತುಂಬಾ ಇಷ್ಟವಾಯಿತು
ಧನ್ಯವಾದಗಳು
ಪ್ರವಾಸಕಥನವನ್ನು ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ದ್ವಾರಕೆಯು, ಸಮುದ್ರ ರಾಜನು ಬಿಟ್ಟುಕೊಟ್ಟ “ಕುಶಸ್ಥಲಿ” ಎನ್ನುವ ಸ್ಥಳದಲ್ಲಿ ರೂಪುಗೊಂಡಿರುವ ಹೊಸ ಮಾಹಿತಿಯೊಂದಿಗಿನ ಪ್ರವಾಸ ಕಥನವು ಬಹಳ ಚೆನ್ನಾಗಿದೆ, ಕುತೂಹಲಕಾರಿಯಾಗಿದೆ. ಧನ್ಯವಾದಗಳು, ಮಾಲಾ ಅವರಿಗೆ.