‘ನೆಮ್ಮದಿಯ ನೆಲೆ’-ಎಸಳು 8
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು, ಸರಳ ವಿವಾಹ ಸುಸೂತ್ರವಾಗಿ ನೆರವೇರಿ, ಪತಿಗೃಹದಲ್ಲಿ ಅಚ್ಚುಮೆಚ್ಚಿನ ಸೊಸೆಯಾಗಿ, ಪುಟ್ಟ ಕಂದನ ಆಗಮನವೂ ಆಯಿತು.. ….ಮುಂದಕ್ಕೆ ಓದಿ)
ಮೊಮ್ಮಗನ ಆಗಮನ ಎಲ್ಲರಿಗೂ ಹಿಗ್ಗನ್ನು ತಂದಿತ್ತು. ಹದಿನೈದು ದಿನ ಕಳೆದು ನಾನು ಮಗುವಿನೊಡನೆ ಮೈಸೂರಿನ ಅಮ್ಮನ ಮನೆಗೆ ಹೊರಟೆ. ನನ್ನತ್ತೆಯೇ “ಮಗೂ ಸುಕನ್ಯಾ, ನಿಮ್ಮ ತಂದೆತಾಯಿಗಳು ನಮ್ಮ ಮಾತಿಗೆ ಬೆಲೆಕೊಟ್ಟು ನಿನ್ನನ್ನು ಇಲ್ಲಿಯೇ ಇರಿಸಿದ್ದರು. ಈಗ ನಾವು ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಲ್ಲಾ. ಎಷ್ಟೇ ಆಗಲಿ ಅವರಿಗೂ ತಾವು ಬಾಣಂತನದ ಸೇವೆ ಮಾಡಬೇಕೆಂಬ ಆಸೆ. ನಡೆ ನಾನೇ ಬಿಟ್ಟು ಬರುತ್ತೇನೆ. ನೋಡಬೇಕೆನಿಸಿದರೆ ನಾವೇ ಬರುತ್ತೇವೆ. ನಿನಗೆಷ್ಟು ದಿನ ಇರಬೇಕೆನ್ನಿಸುತ್ತೋ ಇದ್ದು ಬಾ” ಎಂದು ತೀರ್ಮಾನಿಸಿದರು.
ಮೈಸೂರಿಗೆ ನಾನು ಮಗುವಿನೊಡನೆ ಹೊರಡುವ ತಯಾರಿಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು. ಮಗು ಬಾಣಂತಿಗಾಗಿ ತಯಾರಿಸಿದ ಎಣ್ಣೆ, ಪುಡಿಗಳು, ಲೇಹ್ಯ, ಮಗುವಿಗೆ ಹಾಸಲು, ಹೊದೆಯಲು ಸಿದ್ಧಪಡಿಸಿದ್ದ ಮೆತ್ತನೆಯ ಹತ್ತಿಯ ಬಟ್ಟೆಯ ತುಣುಕುಗಳು, ಊಟ ತಿಂಡಿಯಾದ ಮೇಲೆ ಬಾಣಂತಿಗೆ ಹಾಕಿಕೊಳ್ಳಲು ವೀಳ್ಯದೆಲೆ, ಅಡಿಕೆ, ಕೊಬ್ಬರಿ, ಜಾಕಾಯಿಪುಡಿ, ಸುಣ್ಣ ಸೇರಿಸಿ ಕುಟ್ಟಿ ಮಾಡಿದ್ದ ವಿಶೇಷ ತಾಂಬೂಲ, ಹಳೆಯಬೆಲ್ಲ, ಹಳೆಯ ಹುಣಿಸೆಹಣ್ಣು, ಅಬ್ಬಾ ! ಒಂದೇ ಎರಡೇ, ಎಲ್ಲಾ ಸರಂಜಾಮುಗಳೂ ಸಿದ್ಧವಾದವು. ಅವುಗಳನ್ನು ನೋಡಿದ ನನ್ನವರು “ಅಮ್ಮಾ ನಿನ್ನ ಹೆಸರಿನಲ್ಲಿ ಒಂದು ಚಿಕ್ಕ ಆಫೀಸು ತೆರೆದುಬಿಡುತ್ತೇನೆ. ಅಲ್ಲಿ ಇಂಥಹ ಬಾಣಂತನಕ್ಕೆ ಬೇಕಾದ ಸಲಕರಣೆಗಳನ್ನು ತಯಾರಿಸಿ ಕೊಡಲಾಗುತ್ತದೆ ಎಂದು ಬೋರ್ಡ್ ಬರೆಸುತ್ತೇನೆ. ಒಳ್ಳೆಯ ವ್ಯಾಪಾರ ಗ್ಯಾರಂಟಿ. ಬರುವ ಆದಾಯದಲ್ಲಿ ನನಗರ್ಧ, ನಿನಗರ್ಧ” ಎಂದು ತಮಾಷೆ ಮಾಡಿದರು.
“ಏ ದಯಾ, ನಿನ್ನದು ಯಾವಾಗಲೂ ಲೆಕ್ಕಾಚಾರ ಹಾಕುವುದೇ ಆಯಿತು. ನಾನು ಹೇಳುವುದನ್ನು ಕೇಳಿಲ್ಲಿ. ನಿನ್ನಕ್ಕ ಬಸಿರು ಹೊತ್ತಾಗ ಅಲ್ಲಿನ ಡಾಕ್ಟರ್ ಅವಳಿಗೆ ಬೆಡ್‌ರೆಸ್ಟ್ ಎಂದುಹೇಳಿ ನಮ್ಮೆಲ್ಲರನ್ನೂ ಬೆಚ್ಚುವಂತೆ ಮಾಡಿದ್ದರು. ಅವಳಿಗೆ ಅವಳಿ ಮಕ್ಕಳಾಗುವ ಸಂಭವವಿದೆಯೆಂದು ಎಚ್ಚರವಾಗಿರಬೇಕೆಂದು ತಾಕೀತು ಮಾಡಿದ್ದರು. ಹೀಗಾಗಿ ಅವಳ ಬಾಣಂತನ ಅವರತ್ತೆಯ ಮನೆಯಲ್ಲಿಯೇ ಆಯಿತು. ನಾನೇನಿದ್ದರೂ ನಿಮಿತ್ತ ಮಾತ್ರವಾಗಿ ಅಲ್ಲಿಗೆ ಹೋಗಿ ಒಂದೆರಡು ತಿಂಗಳಿದ್ದು ಬಂದಿದ್ದೆ. ಇನ್ನು ನಿನ್ನ ಅತ್ತಿಗೆಯರು ಅವರುಗಳಿದ್ದ ಕಡೆಗೇ ಅವರ ತಾಯಂದಿರನ್ನು ಕರೆಸಿಕೊಂಡಿದ್ದರು. ಈಗ ನಾವು ಏನು ಹೇಳಿದರೂ, ಏನು ಮಾಡಿದರೂ ಆಕ್ಷೇಪಿಸದ ಬೀಗರು ಸಿಕ್ಕಿದ್ದಾರೆ. ಮುದ್ದಿನ ಸೊಸೆ ಸಿಕ್ಕಿದ್ದಾಳೆ. ಎಷ್ಟೋ ವರ್ಷಗಳ ನಂತರ ನಮ್ಮ ಮನೆಗೆ ಪುಟ್ಟ ಕಂದನ ಆಗಮನವಾಗಿದೆ. ಈ ಸಂತಸ ಸಂಭ್ರಮಗಳಿಗೆ ಎಷ್ಟು ಲೆಕ್ಕ ಹಾಕುತ್ತೀ ಹೇಳು?” ಎಂದರು. ಅವರಮ್ಮನ ಮಾತುಗಳನ್ನು ಕೇಳಿದ ನನ್ನವರು ನನ್ನತ್ತ ತೃಪ್ತಿಯ ನೋಟ ಬೀರಿದರು.
ನಾನು, ಅತ್ತೆ, ಮಾವ, ನನ್ನವರೊಡನೆ ಮಗುವನ್ನು ಕರೆದುಕೊಂಡು ಟ್ಯಾಕ್ಸಿಯಲ್ಲಿ ಮೈಸೂರಿನ ನನ್ನ ಹೆತ್ತವರಿದ್ದ ಮನೆಯನ್ನು ತಲುಪಿದೆವು. ನನ್ನನ್ನು ಮತ್ತು ಮಗುವನ್ನು ಆರತಿಯೆತ್ತಿ ಬರಮಾಡಿಕೊಂಡರು ಅಪ್ಪ, ಅಮ್ಮ, ಅತ್ತಿಗೆಯರು, ಅಣ್ಣಂದಿರು.
ಅತ್ತೆಯವರು “ಭಾಗೀರಥಮ್ಮನವರೇ ಬನ್ನಿ, ಈ ಸಾಮಾನುಗಳನ್ನು ಸುಕನ್ಯಾಳ ರೂಮಿನಲ್ಲಾಗಲೀ, ಸ್ಟೋರಿನಲ್ಲಾಗಲೀ ಇರಿಸಿಬಿಡಿ ” ಎಂದರು ತಂದಿದ್ದ ಸರಂಜಾಮುಗಳನ್ನು ಅಮ್ಮನಿಗೆ ಹಸ್ತಾಂತರಿಸಿದರು. ಅವರುಗಳು ತೆಗೆದಿರಿಸಿದ ಸಾಮಾನುಗಳನ್ನು ಕಂಡು ಅತ್ತಿಗೆಯರು ಬಾಯಮೇಲೆ ಬೆರಳಿಟ್ಟುಕೊಂಡರು. “ಲೇ ಸುಕನ್ಯಾ, ಆ ಮನೆಯಿಂದ ಇಷ್ಟು, ಇಲ್ಲಿ ಅತ್ತೆ ಮಾವ ಟೊಂಕಕಟ್ಟಿ ನಿಂತು ಇಡೀ ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ಅಟ್ಟದ ಮೇಲಿದ್ದ ತೊಟ್ಟಿಲು ಹೊರಗೆ ಬಂದು ಮೊಮ್ಮಗನು ಮಲಗಲು ಅನುವಾಗುವಂತೆ ಸಜ್ಜುಗೊಂಡಿದೆ. ಮನೆಯ ತೊಲೆಗಳನ್ನೆಲ್ಲ ಗಂಜಲದಿಂದ ತೊಳೆಸಿ, ಔಷಧಿ ಸಿಂಪಡಿಸಿ ಸೊಳ್ಳೆ ಪರದೆ ತರಿಸಿ ಅದನ್ನು ಕಟ್ಟಲು ಗೂಟಗಳನ್ನೂ ತರಿಸಿದ್ದಾರೆ. ಅತ್ತೆ ನಮ್ಮಿಬ್ಬರನ್ನೂ ಬೇಕಾದಷ್ಟು ಸಾರಿ ಕರೆದರೂ ನಾವೇ ಬಿಮ್ಮನೆ ಬಿಗಿದುಕೊಂಡು ಹಳೇಕಾಲದವರೆಂದು ಮೂಗುಮುರಿದು ನಮಗಿಷ್ಟ ಬಂದಂತೆ ನಮ್ಮ ಅಮ್ಮಂದಿರನ್ನು ಬೆದರಿಸುತ್ತಾ ಬಾಣಂತನ ಮಾಡಿಸಿಕೊಂಡೆವು. ಅದರಿಂದಾಗಿ ಈ ಎಲ್ಲಾ ಸುಖಗಳಿಂದ ವಂಚಿತರಾದೆವು” ಎಂದರು.
“ಹೂ ಈಗೇನಾಯಿತು ಅತ್ತಿಗೆ ಇನ್ನೂ ಕಾಲ ಮಿಂಚಿಲ್ಲ. ಇನ್ನೊಮ್ಮೆ ಬಾಣಂತಿಯಾಗಲು ಟ್ರೈಮಾಡಬಹುದು” ಎಂದೆ.
“ಅವ್ವಯ್ಯಾ, ಇಟೀಸ್ ಟೂ ಲೇಟ್ ಸುಕನ್ಯಾ ” ಎಂದು ನಗುತ್ತಾ ನಮ್ಮತ್ತೆಯವರು ತೆಗೆದಿಟ್ಟಿದ್ದ ಸಾಮಾನುಗಳನ್ನು ಎತ್ತಿಕೊಂಡು ಒಳನಡೆದರು.
ನನ್ನವರು, ಅತ್ತೆ, ಮಾವ ಊಟ ಮುಗಿಸಿಕೊಂಡು ನಂಜನಗೂಡಿಗೆ ಹಿಂತಿರುಗಿದರು. ನಾನು ಬರುವುದಕ್ಕಿಂತ ಮುಂಚೆಯೇ ಮನೆಗೆ ಬಂದು ಎಲ್ಲರನ್ನೂ ಸ್ವಾಗತಿಸಿ ಆದರಿಸಿ ಉಪಚರಿಸಿದ ಅಣ್ಣಂದಿರ ಕುಟುಂಬ ಸಂಜೆಯವರೆಗೆ ಇದ್ದು ಅಮ್ಮನಿಗೆ ನೆರವಾಗುತ್ತಾ ರಾತ್ರಿ ಊಟವನ್ನೂ ಮುಗಿಸಿಕೊಂಡು ತಂತಮ್ಮ ಮನೆಗಳಿಗೆ ಹಿಂತಿರುಗಿದರು. ಮನೆಗಳಿಗೆ ಹಿಂತಿರುಗಿದರು.
ನಾನು ಮೈಸೂರಿಗೆ ಮಗುವಿನೊಂದಿಗೆ ಬಂದ ವಿಷಯ ತಿಳಿದ ಅಕ್ಕ, ಭಾವ ತಮ್ಮ ಮಕ್ಕಳೊಂದಿಗೆ ಬಂದು ಒಂದೆರಡು ದಿವಸವಿದ್ದು ಹೋಗಿದ್ದು ಹೆತ್ತವರಿಗೆ ಸಂತಸ ತಂದಿತ್ತು. ಮೊದಲು ಯಾವುದೇ ಕೆಲಸಕ್ಕಾಗಲಿ ಹೇಳಿ ಕಳುಹಿಸಿ ಕರೆಸಿಕೊಳ್ಳುವುದೋ, ಅಥವಾ ಫೋನ್ ಮಾಡಿ ಕರೆಸಿಕೊಳ್ಳುವುದೋ ಮಾಡಬೇಕಾಗಿತ್ತು. ಅಂತಹುದರಲ್ಲಿ ಈಗ ಎಲ್ಲವೂ ತಿರುವುಮುರುವಾಗಿತ್ತು. ಅತ್ತಿಗೆಯರು, ಅಣ್ಣಂದಿರು, ಮಕ್ಕಳು ಆಗಿಂದಾಗ್ಗೆ ಬಂದು ಹೋಗುತ್ತಿದ್ದರು. ಏನಾದರೂ ಬೇಕಿದ್ದರೆ ಸಂಕೋಚವಿಲ್ಲದೆ ಕೇಳು, ಫೋನ್ ಮಾಡುತ್ತಿರೆಂದು ಹೇಳುತ್ತಿದ್ದುದನ್ನು ಕೇಳಿ ನಾನೇನು ಕನಸು ಕಾಣುತ್ತಿಲ್ಲವೇ ಎಂದುಕೊಳ್ಳುತ್ತಿದ್ದೆ. ಹಾಗೇ ನನ್ನ ಮಗನ ಆಗಮನ ಒಂದುರೀತಿಯ ಶುಭಸಂಕೇತವಾಗಿ ಇರಬಹುದೆಂದುಕೊಳ್ಳುತ್ತಿದ್ದೆ.
ವಾರಕ್ಕೆ ಒಮ್ಮೆ ನನ್ನವರೊಡನೆ ಅತ್ತೆ, ಮಾವನವರೂ ಮೊಮ್ಮಗನನ್ನು ನೋಡಲು ಹಾಜರಾಗುತ್ತಿದ್ದರು. ಅವರು ಬರುವಾಗಲೆಲ್ಲ ಏನುಬೇಕು? ಯಾವ ಪುಡಿ ಮುಗಿದಿದೆ? ಲೇಹ್ಯ ಏನಾದರೂ ಬೇಕೆ? ತುಪ್ಪ ಹೀಗೆ ಎಲ್ಲವನ್ನೂ ಕೇಳಿ ಅಗತ್ಯವೆನಿಸಿದ್ದನ್ನು ಮಾಡಿಕೊಂಡು ಬರುತ್ತಿದ್ದರೇ ವಿನಃ ಬರಿಕೈಯಲ್ಲಿ ಎಂದೂ ಬಂದವರೇ ಅಲ್ಲ.
ಮಗುವಿಗೆ ನಾಲ್ಕು ತಿಂಗಳು ತುಂಬಿ ಐದಕ್ಕೆ ಬೀಳುತ್ತಿದ್ದಂತೆ ಸರಳರೀತಿಯಲ್ಲಿ ನಾಮಕರಣ ನಡೆಯಿತು. “ಆದಿತ್ಯ” ಎಂಬ ಹೆಸರಿಟ್ಟು ನಂಜನಗೂಡಿಗೆ ಕಳುಹಿಸಿಕೊಟ್ಟರು. ಮೊದಲೇ ಮನೆಗೆಲಸಕ್ಕೆ ನನ್ನ ಕೈ ಹಾಕಿಸದಿದ್ದ ನನ್ನತ್ತೆ ಈಗಂತೂ ನಾನು ಕೇಳುವುದಕ್ಕಿಂತ ಮುಂಚೆಯೇ ಬೇಕಾದ್ದನ್ನು ಪೂರೈಸುತ್ತಿದ್ದರು. ಹರೆಯ ಬಂದವರಂತೆ ಚುರುಕಾಗಿ ಓಡಾಡುತ್ತಾ ಕೆಲಸ ನಿಭಾಯಿಸುತ್ತಿದ್ದರು. ಮೊಮ್ಮಗನೊಡನೆ ಆಡುವುದಕ್ಕೆ ಸಮಯ ಹೊಂದಿಸಿಕೊಳ್ಳುತ್ತಿದ್ದರು. ಮನೆಯಿಂದ ಹೊರಗಡೆಯೇ ಹೆಚ್ಚು ಕಾಲಹರಣ ಮಾಡುತ್ತಿದ್ದ ಮಾವನವರು ಈಗ ತಮ್ಮ ಕೆಲಸ ಮುಗಿದ ತಕ್ಷಣ ಮನೆಗೆ ಹಾಜರಾಗುತ್ತಿದ್ದರು. ನನ್ನ ಮಗನ ಊಟ, ನಿದ್ರೆ ವೇಳೆಬಿಟ್ಟು ಮಿಕ್ಕವೇಳೆಯಲ್ಲೆಲ್ಲ ಅಜ್ಜಿ ಇಲ್ಲವೇ ಅಜ್ಜನ ತೊಡೆಯಲ್ಲೇ ಅವನ ಠಿಕಾಣಿ. ನನ್ನವರ ದಿನಚರಿ ಮಾತ್ರ ಮಗನ ಆಗಮನದಿಂದಲೂ ಬದಲಾವಣೆ ಆಗಲೇಇಲ್ಲ. ಸುತ್ತಮುತ್ತಲಿನ ಆಪ್ತೇಷ್ಟರು, ದೇವಸ್ಥಾನದ ಅಂಗಳ, ಆಗೊಮ್ಮೆ ಈಗೊಮ್ಮೆ ಮೈಸೂರಿನ ಮನೆಗೆ ಹೋಗಿಬರುವುದು. ಆಗೆಲ್ಲ ಅಲ್ಲಿನ ಅಜ್ಜ, ಅಜ್ಜಿಯರೊಡನೆ ಓಡನಾಟ, ಅಪರೂಪಕೊಮ್ಮೆ ಅತ್ತೆ, ಮಾವನವರೂ ಜೊತೆಗಿರುತ್ತಿದ್ದರು.
ಈ ಮಧ್ಯೆ ನನ್ನವರ ಅಣ್ಣಂದಿರ, ಅಕ್ಕಂದಿರ ಕುಟುಂಬಗಳು ಒಂದೆರಡು ಸಾರಿ ಬಂದು ಹೋಗಿದ್ದರು. ಅದನ್ನು ಕಂಡ ನನ್ನತ್ತೆ “ಲೋ ಮಕ್ಕಳಾ, ವರ್ಷಕ್ಕೊಮ್ಮೆ ಒಂದೊಂದು ಸಾರಿ ಅಥವ ಅದಕ್ಕಿಂತ ವಿರಳವಾಗಿ ಕೇವಲ ಒಂದು ವಾರದ ಮಟ್ಟಿಗೆ ಬಂದು ಹೋಗುತ್ತಿದ್ದವರು ಈಗ ‘ಮರಿದಯಾನಂದ’ ಹುಟ್ಟಿದ ಮೇಲೆ ಹೀಗೆ ! ಯಾಕ್ರೋ? ಇವರಿಗೇ ಹತ್ತಿರವಾಗಿ ಆಸ್ತಿ ಎಲ್ಲಾ ಅವರ ಹೆಸರಿನಲ್ಲೇ ಮಾಡಿಬಿಡುತ್ತೇವೆಂಬ ಭಯವೇ?” ಎಂದು ಹಾಸ್ಯ ಮಾಡುತ್ತಿದ್ದರು. ಆಗೆಲ್ಲಾ “ಅಮ್ಮಾ ಆಸ್ತಿಗೆಲ್ಲಾ ಆಸೆಪಡುವ ಮಕ್ಕಳೇನಮ್ಮ ನಾವು? ಮೊದಲು ನಮ್ಮ ಮಕ್ಕಳು ಚಿಕ್ಕವರಾಗಿದ್ದರು, ನಮ್ಮ ಉದ್ಯೋಗವೂ ಹೊಸದು. ನಮ್ಮಗಳದ್ದೇ ತಾಪತ್ರಯಗಳಿದ್ದವು. ಈಗ ಎಲ್ಲ ಒಂದು ಹಂತಕ್ಕೆ ಬಂದಿದೆ. ಅಲ್ಲದೆ ಎಷ್ಟೋ ವರ್ಷಗಳ ನಂತರ ನಮ್ಮ ಮನೆಗೆ ಪುಟ್ಟ ಕಂದನ ಆಗಮನವಾಗಿದ್ದು ಅಯಸ್ಕಾಂತದಂತೆ ನಮ್ಮನ್ನು ಸೆಳೆಯುತ್ತಿದೆ” ಎಂದು ವಿವರಿಸುತ್ತಿದ್ದರು. ಒಟ್ಟಿನಲ್ಲಿ ಎಲ್ಲರ ಅಕ್ಕರೆಯ ಮಡಿಲಲ್ಲಿ ನನ್ನ ಮಗ ಬೆಳೆದದ್ದೇ ಗೊತ್ತಾಗಲಿಲ್ಲ.
ಅವನಿಗೆ ಮೂರುವರ್ಷ ತುಂಬಿದಾಗ ಮತ್ತೆ ನಾನು ಗರ್ಭಧರಿಸಿದೆ. ಈ ಸಾರಿ ಮೊದಲಿನಂತೆ ಯಾವುದೇ ಚರ್ಚೆ ವಿವಾದಗಳೂ ನಡೆಯದೆ ಅತ್ತೆ ಮನೆಯಲ್ಲೇ ಇದ್ದು ಹೆರಿಗೆಯ ನಂತರ ಮೈಸೂರಿಗೆ ಹೋದೆ. ಈ ಸಾರಿ ಮಗಳಿಗೆ ಜನ್ಮ ನೀಡಿದ್ದೆ. ಆಗ ನನ್ನನ್ನೂ ಮಗಳನ್ನು ಬಿಟ್ಟುಹೋಗಲು ಬಂದಿದ್ದ ಅತ್ತೆಮಾವ, ನನ್ನವರು ದೊಡ್ಡ ಮಗನನ್ನು ತಮ್ಮೊಡನೆಯೇ ಇರಿಸಿಕೊಂಡರು. ತಾವು ಬರುವಾಗೆಲ್ಲ ಅವನನ್ನೂ ಕರೆದುಕೊಂಡು ಬರುತ್ತೇವೆ, ಇಲ್ಲಿಯೇ ಬಿಟ್ಟರೆ ಇಬ್ಬರನ್ನೂ ನೋಡಿಕೊಳ್ಳುವುದು ಕಷ್ಟವಾದೀತು. ತಪ್ಪಾಗಿ ಭಾವಿಸಬೇಡಿ ಎಂದು ನನ್ನ ಅಪ್ಪ ಅಮ್ಮನಿಗೆ ಸಮಾಧಾನ ಹೇಳಿದರು. ಆಗ ನನ್ನಮ್ಮ “ನೀವು ಯಾವ ಜನ್ಮದಲ್ಲಿ ನಮ್ಮ ಆತ್ಮೀಯರಾಗಿದ್ದರೋ ಕಾಣೆ, ಲೋಕಾರೂಢಿಗೆ ಅಪವಾದ ಆಗಿದ್ದೀರಿ “ಎಂದು ಮನಃಪೂರ್ವಕವಾಗಿ ಅವರನ್ನು ಅಭಿನಂದಿಸಿದರು. ಯಥಾರೀತಿಯಲ್ಲಿಯೇ ನನ್ನ ಬಾಣಂತನ ಮುಗಿದು ಮಗುವಿನ ನಾಮಕರಣವಾಯಿತು. ಮಗಳಿಗೆ “ಮಾಧವಿ” ಎಂದು ಹೆಸರಿಟ್ಟೆವು. ಸಂತಸದಿಂದ ಊರಿಗೆ ಕಳುಹಿಸಿಕೊಟ್ಟರು. ಅಲ್ಲಿಗೆ ಸಂತೃಪ್ತಿಯ ಜೀವನ ನನ್ನದಾಗಿತ್ತು.
ಮಕ್ಕಳು ಬೆಳೆಯುತ್ತಿದ್ದಂತೆ ನನ್ನ ಮನದಲ್ಲಿ ಹುದುಗಿದ್ದ ಬಯಕೆ ಹೊರಗೆ ಬರಲಾರಂಭಿಸಿತು. ಮೈಸೂರಿಗೆ ಹೋದಾಗಲೆಲ್ಲ ಅಣ್ಣಂದಿರ ಮಕ್ಕಳನ್ನು ಮನೆಗೆ ಕರೆಸಿಕೊಳ್ಳುವುದು, ಅವರುಗಳು ಬಿಡುವಾಗಿದ್ದಾರೆ ಎಂದಾಗ ನಾನು ಮಕ್ಕಳೊಡನೆ ಅವರ ಮನೆಗೆ ಹೋಗಿಬರುವುದು ಮಾಡುತ್ತಿದ್ದೆ. ಆದರೆ ಈ ರೀತಿ ರಿವಾಜುಗಳು ಅತ್ತಿಗೆಯರಿಗೆ ಇಷ್ಟವಾಗಲಿಲ್ಲ ಎಂದು ಸ್ವಲ್ಪ ದಿನಗಳಲ್ಲೇ ಗೊತ್ತಾಯಿತು. ಪ್ರೀತಿ, ಅಕ್ಕರೆ, ಸಂಬಂಧಗಳೆಲ್ಲ ಬಲವಂತವಾಗಿ ಬರಿಸುವಂತಹದ್ದಲ್ಲ. ಋಣಾನುಬಂಧವಿದ್ದರೆ ಮಕ್ಕಳೇ ಮುಂದೆ ಬೆಳೆಸಿಕೊಳ್ಳುತ್ತಾರೆ ಎಂದು ಆ ಪ್ರಯತ್ನಗಳನ್ನು ಕೈಬಿಟ್ಟೆ. ಸಿಕ್ಕಾಗ ಮಾತು, ಫೋನ್ ಮಾಡಿದಾಗ ಉತ್ತರ ಅಷ್ಟಕ್ಕೇ ನಮ್ಮ ಒಡನಾಟ ಸೀಮಿತವಾಯಿತು.
ವರ್ಷಗಳು ಉರುಳಿದಂತೆ ಚೆನ್ನಾಗಿಯೇ ಇದ್ದ ಅಮ್ಮ ಒಂದಿನ ರಾತ್ರಿ ಮಲಗಿದ್ದವರು ಬೆಳಗ್ಗೆ ಮೇಲೇಳಲೇ ಇಲ್ಲ. ನಿದ್ರೆಯಲ್ಲೇ ದೇವರ ಪಾದ ಸೇರಿಹೋಗಿದ್ದರು. ಅಪ್ಪ ಒಂಟಿಯಾದರು. ಏಕೋ ಅಮ್ಮನಿಲ್ಲದ ಮನೆಯಲ್ಲಿ ಇರಲು ಆಗದೇ ಅವರು ಜಮೀನು, ಮನೆ ಎಲ್ಲವನ್ನೂ ಮಾರಿಬಿಡಲು ತೀರ್ಮಾನಿಸಿಬಿಟ್ಟರು. ಈ ಸುದ್ಧಿ ಅತ್ತಿಗೆಯರನ್ನು ಚಿಂತೆಗೀಡುಮಾಡಿತು. ಅದನ್ನು ತಡೆದುಕೊಳ್ಳಲಾರದೆ ನನ್ನ ಮುಂದೆ ಹೇಳಿಕೊಂಡು ಪೇಚಾಡಿಕೊಂಡರು. “ಅಲ್ಲಾ ಸುಕನ್ಯಾ, ನಾವುಗಳಿರುವುದು ಟೂ ಬೆಡ್‌ರೂಮ್ ಫ್ಲ್ಯಾಟುಗಳಲ್ಲಿ. ಒಂದು ರೂಮು ನಮಗಾದರೆ ಇನ್ನೊಂದು ಮಕ್ಕಳಿಗೆ. ಮಕ್ಕಳಾಗಲೇ ಹೈಸ್ಕೂಲು ಮುಗಿಸಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಅವರಿಗೂ ಪ್ರೈವೇಸಿ ಬೇಕಾಗುತ್ತೆ. ಅಲ್ಲದೆ ನಾವಿಬ್ಬರೂ ಕೆಲಸಕ್ಕೆ ಹೋಗುವವರು. ಬೆಳಗ್ಗೆ ಹೋದರೆ ಹಿಂದಿರುಗುವುದು ಸಂಜೆಯೇ. ಮನೆಯಲ್ಲಿ ಮಾವನವರು ಒಬ್ಬರೇ ಆಗುತ್ತಾರೆ. ಅವರಿಗೆ ಹೊತ್ತಿಗೊತ್ತಿಗೆ ಬಿಸಿಬಿಸಿ ಉಟಮಾಡಿ ಅಭ್ಯಾಸ. ಅದೆಲ್ಲ ಹೇಗೆ ನಮ್ಮಲ್ಲಿ ಸಾಧ್ಯ. ಇರೋ ಮನೆಯಲ್ಲಿಯೇ ಏನಾದರೂ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಮಾವನವರಿಗೆ ನೀನು ಒಪ್ಪಿಸು. ನಿನ್ನ ಮಾತು ಕೇಳುತ್ತಾರೆ. ನಾವುಗಳೂ ಆಗೀಗ ಹೋಗಿಬಂದು ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.
ನಾನು ಅವರುಗಳು ಹೇಳಿದ ಮಾತುಗಳನ್ನು ಅಪ್ಪನಿಗೆ ಹೇಳಲು ಹೋಗಲಿಲ್ಲ. ನನ್ನ ಮನಸ್ಸು ಹೇಳುತ್ತಿತ್ತು. ಅಪ್ಪ ತಮ್ಮ ಮಕ್ಕಳ ಮನೆಯಲ್ಲಿ ಖಂಡಿತ ಇರುವುದಿಲ್ಲ ಎಂದು. ನೋಡೋಣ ಮುಂದೇನಾಗುತ್ತದೆಯೋ, ಇಲ್ಲೇನೂ ವ್ಯವಸ್ಥೆಯಾಗದಿದ್ದರೆ ನಮ್ಮೂರಿಗೇ ಕರೆದುಕೊಂಡು ಹೋಗಿಬಿಡಬೇಕು. ಈ ಬಗ್ಗೆ ನನ್ನವರನ್ನು, ಮತ್ತು ಅತ್ತೆಯವರನ್ನೂ ವಿಚಾರಿಸಬೇಕು ಅಂದುಕೊಂಡೆ.
ಅಮ್ಮನ ತೋಟ, ಮನೆ, ಅಪ್ಪನ ಜಮೀನು ಎಲ್ಲವೂ ಮಾರಾಟವಾಯಿತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹಣವೂ ಅಪ್ಪನ ಕೈಸೇರಿತು. ಅದನ್ನು ಅಪ್ಪ ಐದು ಭಾಗವಾಗಿ ಮಾಡಿದರು. ಮಕ್ಕಳಿಗೆ ಹಂಚಿದರು. ತಮ್ಮದೊಂದು ಬಾಗವನ್ನು ತಮ್ಮಲ್ಲಿಟ್ಟುಕೊಂಡು ತಮ್ಮ ಕಾಲಾನಂತರ ಅದು ತನ್ನಿಬ್ಬರು ಹೆಣ್ಣುಮಕ್ಕಳಿಗೆ ಸೇರಬೇಕೆಂದು ಉಯಿಲು ಬರೆಸಿಬಿಟ್ಟರು. ಈ ಹಂಚಿಕೆ ನನ್ನ ಅತ್ತಿಗೆಯರಿಗೆ ಅಷ್ಟು ಸಮಾಧಾನ ತರಲಿಲ್ಲ. ಧುಮುಗುಟ್ಟುತ್ತ ತಮ್ಮ ಮನೆಗಳಿಗೆ ಹಿಂತಿರುಗಿದರು.
ಅವರೆಲ್ಲರೂ ಹೋದಮೇಲೆ ನಾನೂ ಅಪ್ಪ, ಅಕ್ಕ ಮೂರೇ ಜನ ಮನೆಯಲ್ಲಿ ಉಳಿದೆವು. ರಾತ್ರಿ ಊಟವಾದಮೇಲೆ ಅಪ್ಪ ನಮ್ಮಿಬ್ಬರನ್ನು ಕರೆದು ಹತ್ತಿರ ಕೂಡಿಸಿಕೊಂಡರು. ನಾನು ಲೆಕ್ಕ ಬರೆಯುವ ಹೋಟೆಲ್ ಮಾಲೀಕರದ್ದೇ ಒಂದು ಮನೆ ಖಾಲಿಯಾಗಿದೆ. ಎರಡು ರೂಮುಗಳಿರುವ ಮನೆ. ಎಲ್ಲ ರೀತಿಯಲ್ಲಿ ಅನುಕೂಲವಿದೆ. ನನ್ನನ್ನು ನೋಡಿಕೊಳ್ಳಲು ನಮ್ಮ ಜಮೀನು ನೋಡಿಕೊಳ್ಳುತ್ತಿದ್ದವರ ಪೈಕಿ ‘ಸಿದ್ದ’ ಇದ್ದಾನಲ್ಲ ಅವನು ಹೆಂಡತಿಯ ಜೊತೆ ಅಲ್ಲಿಗೆ ಬರಲು ಒಪ್ಪಿದ್ದಾನೆ. ಎಲ್ಲಾ ಏರ್ಪಾಡಾಗಿದೆ. ಇವೆಲ್ಲವನ್ನೂ ಅವರುಗಳ ಮುಂದೆಯೇ ಹೇಳೋಣವೆಂದರೆ ಮುಂದೇನು? ಎಂದು ಬಾಯಿಮಾತಿಗೂ ಕೇಳದೆ ಎದ್ದುಹೋದರು. ನಾನು ಇದನ್ನು ನಿರೀಕ್ಷಿಸಿಯೇ ಇದ್ದೆ. ನೀವುಗಳು ಇನ್ನೆಷ್ಟು ದಿನ ನಿಮ್ಮನಿಮ್ಮ ಮನೆಗಳಿಂದ ದೂರವಾಗಿ ನನ್ನೊಡನೆ ಇರಲು ಸಾಧ್ಯ. ಅದು ಸಾಧುವೂ ಅಲ್ಲ. ನಾಳೆ ನಾಡಿದ್ದರಲ್ಲಿ ನಿಮ್ಮ ಅಣ್ಣಂದಿರು, ಅತ್ತಿಗೆಯರನ್ನು ಕರೆಸುತ್ತೇನೆ. ಅವರುಗಳು ಇಲ್ಲಿನ ಯಾವಯಾವ ಸಾಮಾನುಗಳನ್ನು ಇಷ್ಟಪಡುತ್ತಾರೋ ಅವನ್ನು ತೆಗೆದುಕೊಂಡು ಹೋಗಲಿ. ಉಳಿದವನ್ನು ಮಾರಾಟಮಾಡಲಿ. ನನಗಂತೂ ಇಲ್ಲಿನ ಯಾವುದೇ ವಸ್ತುಗಳೂ ಬೇಡ. ನಿನ್ನಮ್ಮನ ಫೊಟೋ ಮಾತ್ರ ನಾನಿಟ್ಟುಕೊಳ್ಳುತ್ತೇನೆ. ಅಲ್ಲಿ ನನ್ನ ಸೌಕರ್ಯಕ್ಕೆ ಏನುಬೇಕೋ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದೇನೆ. ಉಮಾಳ ಗಂಡ ಶ್ಯಾಮು ಫೋನ್ ಮಾಡಿದ್ದರು. ನಾಳೆ ಬೆಳಗ್ಗೆ ಬರುತ್ತಾರಂತೆ. ಸುಕನ್ಯಾಳನ್ನು ಅವರು ನಂಜನಗೂಡಿಗೆ ಬಿಟ್ಟು ಅವರೂರಿಗೆ ಹೋಗಲು ನಾನೇ ಹೇಳಿದ್ದೇನೆ. ನೀವುಗಳು ಯಾವಾಗ ಬರಬೇಕೆನ್ನಿಸುತ್ತದೋ ನನ್ನಲ್ಲಿಗೆ ಬನ್ನಿ. ಈಗ ನಿಮ್ಮ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡು ಮಲಗಿ” ಎಂದು ಕೈಯೆತ್ತಿ ನಮ್ಮಿಬ್ಬರ ತಲೆಮುಟ್ಟಿ ಆಶೀರ್ವದಿಸಿ ತಮ್ಮ ರೂಮಿಗೆ ಮಲಗಲು ಹೊರಟುಹೋದರು.
“ಅಮ್ಮ ಹೋದಮೇಲೆ ಅಪ್ಪನ ವರ್ತನೆ ಬದಲಾಗಿಬಿಟ್ಟಿದೆಯಲ್ಲಾ? ಅಕ್ಕಾ ನಾನು ಅವರ ವ್ಯವಸ್ಥೆಯಾಗುವವರೆಗೂ ಇಲ್ಲೇ ಇದ್ದು ನಂತರ ಬರುತ್ತೇನೆಂದು ಅತ್ತೆ ಮಾವನವರಿಗೆ ಹೇಳಿದ್ದೇನೆ. ಅವರೂ ಒಪ್ಪಿದ್ದಾರೆ. ಆದರೆ ಇಲ್ಲಿ”
“ಹೂ ನನಗೆ ಆ ಭಾಗ್ಯವಿಲ್ಲ. ನಾನು ಮದುವೆಯಾಗಿ ಹೋಗಿರುವ ಮನೆಯವರು ಅನುಕೂಲಸ್ಥರೇ, ಅದರಲ್ಲಿ ಎರಡು ಮಾತಿಲ್ಲ. ಹಾಗಿದ್ದೂ ನಾನು ಅಪ್ಪನ ಮನೆಗೆ ಬಂದಾಗಲೆಲ್ಲ ಏನಾದರೂ ಡಿಮ್ಯಾಂಡ್ ಮಾಡಿ ಪಡೆದುಕೊಂಡು ಹೋಗುತ್ತಿದ್ದೆ. ಕಾರಣ ನಮ್ಮತ್ತೆ ಬರಿಕೈಲಿ ಹೋದರೆ ಹಂಗಿಸುತ್ತಿದ್ದರು. ಅವರಿಗೆ ತೃಪ್ತಿಯೆಂಬುದೇ ಇಲ್ಲ. ನನ್ನವರು ನನ್ನನ್ನೂ ಮಕ್ಕಳನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಆದರೆ ತಾಯಿಯು ಹಾಕಿದ ಗೆರೆ ದಾಟುವ ಧೈರ್ಯವನ್ನು ಅವರಿನ್ನೂ ಬೆಳೆಸಿಕೊಂಡೇ ಇಲ್ಲ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅವರಿಗೆ ತಾಯಿಯೇ ಸರ್ವಸ್ವ. ಹೀಗಾಗಿ ನನಗೆ ಎಲ್ಲವೂ ಇದೆ, ಆದರೆ ನನ್ನದೂಂತ ಏನೂ ಇಲ್ಲ. ಅಂದರೆ ನಾನು ಹೇಳಿದಂತೆ ನಡೆಯುವವರ್‍ಯಾರೋ ಇಲ್ಲ. ನಾನು ಇಲ್ಲಿಗೆ ಬರುವಾಗಲೇ ‘ಅಲ್ಲಿ ಕೆಲಸ ಮುಗಿದಮೇಲೆ ಹೆಚ್ಚುದಿನ ಠಿಕಾಣಿಹೂಡಬೇಡ. ಬೇಗನೇ ಬಾ. ಹಾಗೇ ಒಂದು ಎಚ್ಚರಿಕೆ, ಅತಿಯಾದ ಭಾವುಕತೆಯಿಂದ ನಿನ್ನಪ್ಪನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆಂದು ಬಿಡಬೇಡ. ಅದೇ ಊರಿನಲ್ಲಿರುವ ನಿನ್ನ ಅಣ್ಣಂದಿರೇ ಜವಾಬ್ದಾರಿ ತೆಗೆದುಕೊಳ್ಳದೆ ತಮ್ಮ ಪಾಡಿಗೆ ತಾವಿದ್ದಾರೆ. ನೆನಪಿರಲಿ’ ಎಂದು ಹುಕುಂ ಮಾಡಿ ಕಳುಹಿಸಿದ್ದಾರೆ. ಇವೆಲ್ಲ ವಿಷಯಗಳನ್ನು ಹೆತ್ತವರ ಮುಂದೆ ಹೇಳಿದರೆ ನೊಂದುಕೊಳ್ಳುತ್ತಾರೆಂದು ನನ್ನ ಅಂತರಂಗದಲ್ಲಿಯೇ ಅಡಗಿಸಿಕೊಂಡು ಬದುಕು ನಡೆಸುತ್ತಿದ್ದೇನೆ. ಇವತ್ತು ನಿನ್ನೆದುರಿಗೆ ಹೇಳಿಕೊಳ್ಳಬೇಕೆನಿಸಿತು ಹೇಳಿಬಿಟ್ಟೆ. ನೀನು ಅದೃಷ್ಟವಂತೆ. ಹಾಗೇ ಇರು. ಆಗಿದಾಗ್ಗೆ ಫೋನ್ ಮಾಡುತ್ತಿರು. ಬಾ ಪ್ಯಾಕ್ ಮಾಡಿಕೊಳ್ಳೋಣ. ಅದಕ್ಕೆ ಮೊದಲು ಮನೆಯನ್ನೆಲ್ಲ ಒಂದು ಕೊನೆಯ ಸಾರಿ ಸುತ್ತುಹಾಕಿ ಬರೋಣ ” ಎಂದು ಕೈಹಿಡಿದು ಕುಳಿತಲ್ಲಿಂದ ನನ್ನನ್ನು ಎಬ್ಬಿಸಿದಳು.
ನಾನೂ ಹೆಚ್ಚು ಕೆದಕದೆ ಅವಳೊಡನೆ ಮನೆಯನ್ನೆಲ್ಲಾ ಒಂದು ಸುತ್ತು ಹಾಕಿದೆ. ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿ ಬೆಳಗ್ಗೆಗಾಗಿ ಬೇಕಾದ ತಯಾರಿ ನಡೆಸಿ ಮಲಗಿಕೊಂಡೆವು. ಬಹಳ ಹೊತ್ತು ಹೊರಳಾಡಿ ಹೊರಳಾಡಿ ನಮಗೆ ಯಾವಾಗ ನಿದ್ರೆ ಹತ್ತಿತೋ ಗೊತ್ತಾಗಲಿಲ್ಲ. ಬೆಳಗಾಗಿ ಅಪ್ಪ ಬಂದು ರೂಮಿನ ಬಾಗಿಲಲ್ಲಿ ನಿಂತು “ಮಕ್ಕಳೇ ಇನ್ನೂ ಎದ್ದಿಲ್ಲವೇ?” ಎಂದು ಕೂಗಿದಾಗಲೇ ಎಚ್ಚರ. ಗಡಬಡಿಸಿಕೊಂಡು ಇಬ್ಬರೂ ರೂಮಿನಿಂದ ಹೊರಗೆ ಬಂದೆವು.
ಮನೆಗೆಲಸದ ಸಾಕಮ್ಮ ಆಗಲೇ ಬಂದು ಬಾಗಿಲು ಸಾರಿಸಿ ರಂಗವಲ್ಲಿಯಿಟ್ಟು ಮನೆಯನ್ನು ಸ್ವಚ್ಛಮಾಡಲು ಟೊಂಕಕಟ್ಟಿ ನಿಂತಿದ್ದಳು. ನಾವಿಬ್ಬರೂ ಬೇಗಬೇಗ ಪ್ರಾತಃವಿಧಿಗಳನ್ನು ಮುಗಿಸಿಕೊಂಡು ತಿಂಡಿ ಸಿದ್ಧಗೊಳಿಸಿದೆವು. ಅಷ್ಟರಲ್ಲಿ ಭಾವನವರ ಆಗಮನವಾಗಿಬಿಟ್ಟಿತು. ಸ್ವಲ್ಪ ಹೊತ್ತಿನಲ್ಲಿಯೇ ನನ್ನವರು, ಅತ್ತೆ ಮಾವ ಮಕ್ಕಳು ಹಾಜರ್. ನಾನು ಅಚ್ಚರಿಯಿಂದ ಕಣ್ಣರಳಿಸುತ್ತ “ಇದೇನತ್ತೆ ಧಿಢೀರಂತ” ಎಂದೆ.
“ಹಾ ಸುಕನ್ಯಾ ಮಕ್ಕಳು ನಿನ್ನನ್ನು ತುಂಬ ನೆನೆಸಿಕೊಳ್ಳುತ್ತಿದ್ದರು. ಹಾಗೇ ದಯಾ ಸಹ ನಡೀರಮ್ಮ ಹೋಗಿ ಮಾವನವರನ್ನು ಮಾತನಾಡಿಸಿಕೊಂಡು ಬರೋಣವೆಂದು ಹೊರಡಿಸಿದ ಅದಕ್ಕೇ ಥಟ್ ಅಂತ ಬಂದೆವು” ಎಂದರು.
ಭಾವನವರಂತೂ ಅಕ್ಕನನ್ನು “ಉಮಾ ಹೊತ್ತಾಗುತ್ತೆ ಹೊರಡೋಣವೇ?” ಎಂದು ಅವಸರಪಡಿಸಿದರು. ಅದನ್ನು ಗಮನಿಸಿದ ಅಪ್ಪ ಅವರನ್ನುದ್ದೇಶಿಸಿ “ಅಳಿಯಂದಿರೇ, ಸುಕನ್ಯಾಳ ಮನೆಯವರೆಲ್ಲ ಇಲ್ಲಿಗೇ ಬಂದಿರುವುದರಿಂದ ನೀವು ಅಲ್ಲಿಗೆ ಅವಳನ್ನು ಬಿಡಲು ಹೋಗುವುದು ತಪ್ಪಿತು. ಈಗ ಊಟ ಮುಗಿಸಿಕೊಂಡೇ ಹೋಗಬಹುದಲ್ಲಾ?” ಎಂದರು.
“ಇಲ್ಲ ಮಾವಾ, ಅಮ್ಮ ನಂಜನಗೂಡಿಗೆ ಹೋಗಿ ಶಿವಮೊಗ್ಗಾಕ್ಕೆ ಬರುವುದು ತಡವಾಗುತ್ತೆ. ನಂಜನಗೂಡಿಗೆ ಫೋನ್ ಮಾಡಿಬಿಡು. ಅವರ ಮನೆಯವರ ಜವಾಬ್ದಾರಿ ನಿನಗೇಕೆ? ನಿಮ್ಮ ಮಾವನವರು ಹೇಳುವಾಗ ಏನೋ ಗಡಿಬಿಡಿಯಾಗಿ ಹಾಗೆ ಹೇಳಿರಬಹುದು. ನೀನು ನೇರವಾಗಿ ಇಲ್ಲಿಗೇ ಬಂದುಬಿಡು ಎಂದಿದ್ದರು. ಅದಕ್ಕೇ ನಾನು ಬೇಗನೇ ಬಂದೆ” ಎಂದರು. ಅವರ ಮಾತಿನ ಒಳ ಅರ್ಥ ಅಪ್ಪನಿಗಾಯ್ತೋ ಇಲ್ಲವೋ ನನಗಂತೂ ತಿಳಿಯಿತು. ನಮ್ಮವರು, ಅತ್ತೆ ಮಾವ ಬಂದಿದ್ದರ ಕಾರಣ ನನಗೆ ಆಗ ಗೊತ್ತಾಯಿತು. ಅತ್ತೆಯವರೆಲ್ಲಿದ್ದಾರೆಂದು ಅತ್ತ ತಿರುಗಿದೆ. ಅವರು ಮಕ್ಕಳೊಂದಿಗೆ ಒಳಗಿದ್ದರು. ಸುಮ್ಮನೆ ವಿಷಯಗಳನ್ನು ಲಂಬಿಸಬಾರದೆಂದು “ಆಯಿತು ಭಾವ, ನೀವಿನ್ನು ಹೊರಡಿ, ನಾನು ಅಕ್ಕನಿಗೆ ಹೇಳುತ್ತೇನೆ” ಎಂದು ಒಳನಡೆದೆ.
ನನ್ನ ಹಿಂದೆಯೇ ಬಂದ ಅಪ್ಪ “ಸುಕನ್ಯಾ ಒಂದ್ನಿಮಿಷ ಬಾಯಿಲ್ಲಿ” ಎಂದು ನನ್ನನ್ನು ಕರೆದರು. ತಮ್ಮ ರೂಮಿನಿಂದ ಒಂದು ಪ್ಯಾಕೆಟ್ ಹಿಡಿದುಕೊಂಡು ಬಂದು “ಇದನ್ನು ನಿನ್ನಕ್ಕನಿಗೆ ಅರಿಸಿನ ಕುಂಕುಮವಿಟ್ಟು ಕೊಡು” ಎಂದರು. ನಾನು ಆಯಿತೆಂದು ಅದನ್ನು ಹಿಡಿದು ಕುಂಕುಮದ ಬಟ್ಟಲನ್ನು ತರಲು ದೇವರ ಕೋಣೆಯತ್ತ ನಡೆದೆ. ಅಷ್ಟೊತ್ತಿಗಾಗಲೇ ಎಲ್ಲವನ್ನೂ ಸಜ್ಜುಗೊಳಿಸಿ ಕೈಯಲ್ಲಿ ಹಿಡಿದು ನಿಂತಿದ್ದರು ನನ್ನತ್ತೆಯವರು. ಅಬ್ಬಾ ! ಈ ಮಹಾತಾಯಿಯ ಮುಂದಾಲೋಚನೆಗೆ ಎಷ್ಟು ವಂದನೆಗಳನ್ನು ಅರ್ಪಿಸಿದರೂ ಸಾಲದೆಂದೆನ್ನಿಸಿತು.
ಅಕ್ಕನನ್ನು ಕೂಡಿಸಿ ಅರಿಶಿನ ಕುಂಕುಮವಿತ್ತು ಹೂಕೊಟ್ಟು ಮಡಿಲುದುಂಬಿದೆ. ಅವಳು ಹಿರಿಯರಿಗೆಲ್ಲ ನಮಸ್ಕರಿಸಿ ಮಕ್ಕಳನ್ನು ಮುದ್ದಿಸಿ ನನಗೆ ಫೋನ್ ಮಾಡುತ್ತಿರೆಂದು ಹೇಳಿ ಭಾವನವರ ಹಿಂದೆ ಹೋಗಿ ಕಾರನ್ನೇರಿದಳು. ‘ಹಸುವಿನ ಹಿಂದೆ ಕರುವಿನಂತೆ’ ಯಾವುದೇ ಪ್ರತಿರೋಧ ತೋರದೆ ಹೊರಟ ಅಕ್ಕನನ್ನು ಭಾರವಾದ ಹೃದಯದಿಂದ ಬೀಳ್ಕೊಟ್ಟು ಒಳಬಂದೆ.
ಮನೆಯಲ್ಲಿ ಮಕ್ಕಳ ಕಲರವದಿಂದ ಉಲ್ಲಾಸದ ವಾತಾವರಣವಾಯಿತು. ಯಾರೂ ಯಾವ ವಿಷಯದ ಬಗ್ಗೆಯೂ ಚಕಾರವೆತ್ತಲಿಲ್ಲ. ಅಪ್ಪ ಮಕ್ಕಳೊಡನೆ ಮಕ್ಕಳಾಗಿ ನಲಿದಾಡಿದರು. ಮಧ್ಯಾನ್ಹದ ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು ರಾತ್ರಿ ಅಪ್ಪನಿಗೆ ಊಟಕ್ಕೆ ಏನುಬೇಕೆಂದು ಕೇಳಿ ತಯಾರಿಸಿಟ್ಟು ನಾವುಗಳೂ ಊರಿಗೆ ಹೊರಡಲು ಸಿದ್ಧರಾದೆವು.
ಅಪ್ಪನ ಆಣತಿಯಂತೆ ನಾನು ಅತ್ತೆಯವರಿಗೆ ಅತ್ತೆ ನನಗೆ ಕುಂಕುಮ ತೆಗೆದುಕೊಂಡು ಉಡುಗೊರೆಗಳನ್ನು ಸ್ವೀಕರಿಸಿದೆವು. ಅತ್ತೆ ಮಾವ ಮತ್ತು ನನ್ನವರು ಅಪ್ಪನಿಗೆ ” ನಿಮ್ಮ ಮಗಳನ್ನು, ಮೊಮ್ಮಕ್ಕಳನ್ನು ನೋಡಬೇಕೆನಿಸಿದಾಗಲೆಲ್ಲ ನಮ್ಮೂರಿಗೆ ನಮ್ಮ ಮನೆಗೆ ಯಾವುದೇ ಸಂಕೋಚವಿಲ್ಲದೆ ಬರಬಹುದು. ಹೆಣ್ಣುಕೊಟ್ಟ ಮನೆ, ನಾವು ಅವರಿಗೆ ಆತಿಥ್ಯ ಮಾಡಬೇಕು, ಅವರಿಂದ ಮಾಡಿಸಿಕೊಳ್ಳಬಾರದು ಎಂಬ ಭಾವನೆಯನ್ನು ನೀವಿಟ್ಟುಕೊಳ್ಳಬೇಡಿ. ನಮಗೆ ನಾವೆಲ್ಲರೂ ಒಂದೇ ಎಂಬ ಭಾವನೆ. ತಾರತಮ್ಯವಿಲ್ಲ. ನಮ್ಮ ಮಕ್ಕಳಿಗೂ ಅದನ್ನು ಕಲಿಸಿಲ್ಲ” ಎಂದು ಹೇಳಿದರು. ಅಪ್ಪ ಅವರು ಹೇಳಿದ್ದಕ್ಕೆಲ್ಲ ಮೌನವಾಗಿ ತಲೆ ಅಲ್ಲಾಡಿಸಿದರೇ ವಿನಃ ಯಾವುದೇ ಉತ್ತರವನ್ನೂ ಹೇಳಲಿಲ್ಲ.
ಕೊನೆಯ ಬಾರಿ ನಾನು ಹುಟ್ಟಿ ಬೆಳೆದು ಹೊಸ ಬದುಕಿಗೆ ಕಾಲಿಟ್ಟ ಮನೆಯನ್ನು ಕಣ್ಣು ತುಂಬಿಸಿಕೊಳ್ಳುತ್ತಾ ನಮ್ಮವರೊಡನೆ ಟ್ಯಾಕ್ಸಿ ಏರಿ ಕುಳಿತೆ. ನನ್ನಪ್ಪನೂ ಕಣ್ತುಂಬಿಕೊಂಡು ನಮ್ಮನ್ನೆಲ್ಲಾ ಬೀಳ್ಕೊಟ್ಟರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31404
-ಬಿ.ಆರ್ ನಾಗರತ್ನ, ಮೈಸೂರು
ಮನುಷ್ಯ ಜಾತಿಯ ಬಗೆ ಬಗೆಯ ಮುಖವಾಡಗಳನ್ನು ಅನಾವರಣ ಗೊಳಿಸುವ ಸಂಚಿಕೆ. ಕಥೆ ಸಾಗುತ್ತಿರುವ ರೀತಿ ತುಂಬಾ ಸೊಗಸಾಗಿದೆ.
ಅಬ್ಬಾ, ಎಷ್ಟು ಮುಖಗಳು, ಎಂತೆತ ಭಾವನೆಗಳು.. ಸಂಬಂಧ ಕ್ಕಿಂತ ಹಣಕ್ಕೆ ಪ್ರಾಧಾನ್ಯ ಕೊಡುವ ಜನಗಳು… ಛೆ.. ನಾಗರತ್ನ ನೀವಂತೂ ಒಬ್ಬೊಬ್ಬರ ಮನಸ್ಸಿನಾಳಕ್ಕೆ ಇಳಿದು ಭಾವನೆಗಳನ್ನು ಅದೆಷ್ಟು ಚೆನ್ನಾಗಿ ವರ್ಣಿಸಿದ್ದೀರಿ
ಓದುತ್ತಾ ಓದುತ್ತಾ ಕಣ್ಣು ತುಂಬಿ ಬಂದಿತು
ಜೀವನದಲ್ಲಿ ಸಹಜವಾಗಿ ಇರುವ ಏರುಪೇರುಗಳನ್ನು ಕಥೆಯಲ್ಲಿ ಹೆಣೆದುಕೊಂಡು ಹೋದ ಪರಿ ಬಹಳ ಸೊಗಸಾಗಿದೆ.. ಅತ್ಮೀಯವಾಗಿದೆ. ಧನ್ಯವಾದಗಳು ಮೇಡಂ.
ಧಾರಾವಾಹಿ ಓದಿ ಪ್ರತಿಕ್ರಿಯಿಸಿ ದ ಸಾಹಿತ್ಯ ಬಂಧುಗಳಿಗೆ ನನ್ನ ಧನ್ಯವಾದಗಳು.
ಸಾವು ನೋವುಗಳು ಕಲಿಸುವ ಪಾಠ ದೊಡ್ಡದು. ಹಣ, ಆಸ್ತಿ, ವಸ್ತುಗಳ ಮೋಲಿನ ವ್ಯಾಮೋಹ , ಬಗೆ ಬಗೆಯ ಮನೋಭಾವಗಳು , ವ್ಯಕ್ತಿತ್ವಗಳ ಪರಿಚಯ ಕಥೆಯಲ್ಲಿ ಬಹಳ ಚಂದದಿಂದ ಮೂಡಿಬಂದಿದೆ.
ಎಂದಿನಂತೆ ಚಂದದ ನಿರೂಪಣೆ .
ಮುಂದಿನ ಭಾಗದ ನಿರೀಕ್ಷೆಯೊಂದಿಗೆ ನಿಮಗೆ ಧನ್ಯವಾದಗಳು.
ಧನ್ಯವಾದಗಳು ಗೆಳತಿ