ರಥ ಸಪ್ತಮಿ
ಓಂ ಸೂರ್ಯಂ ಸುಂದರಲೋಕನಾಥಮಮೃತಂ ವೇದಾಂತಸಾರಂ ಶಿವಂ
ಜ್ಞಾನಂ ಬ್ರಹ್ಮಮಯಂ ಸುರೇಶಮಮಲಂ ಲೋಕೈಕಚಿತ್ತಸ್ವಯಂ
ಇಂದ್ರಾದಿತ್ಯನರಾಧಿಪಂ ಸುರಗುರುಂ ತ್ರೈಲೋಕ್ಯಚೂಡಾಮಣಿಂ
ಬ್ರಹ್ಮವಿಷ್ಣುಶಿವಸ್ವರೂಪಹೃದಯಂ ವಂದೇ ಸದಾ ಭಾಸ್ಕರಂ.
ನಯನ ಮನೋಹರ ಜಗದೊಡೆಯನೂ ಆಮೃತನು ವೇದಾಂತಸಾರನೂ ಆದ, ಬ್ರಹ್ಮಜ್ಞಾನಿಯೂ ದೇವತೆಗಳಿಗೆ ಈಶನೂ, ಪವಿತ್ರನೂ, ಜೀವಲೋಕದ ಮನಸ್ಸಿಗೆ ಮೂಲ ಪ್ರೇರಕನೂ ಆದ, ಇಂದ್ರನಿಗೂ, ದೇವತೆಗಳಿಗೂ, ಮಾನವರಿಗೂ ಮೂರುಲೋಕಕ್ಕೂ ಅಧಿಪತಿಯಾದ, ತ್ರಿಮೂರ್ತಿಗಳ ಹೃದಯಚೇತನವಾದ, ಸಮಸ್ತಲೋಕಕ್ಕೂ ಬೆಳಕನ್ನೀಯುವ ಆ ಸೂರ್ಯದೇವನನ್ನು ನಾನು ಸದಾ ವಂದಿಸುತ್ತೇನೆ.
ಮಾಘ ಮಾಸದ ಸಪ್ತಮಿಯಂದು ಸೂರ್ಯದೇವನು ತನ್ನ ರಥವನ್ನು ಉತ್ತರ ದಿಕ್ಕಿನೆಡೆ ತಿರುಗಿಸುವ ದಿನವೇ ರಥ ಸಪ್ತಮಿ. ಕಾಶ್ಯಪ ಮುನಿ ಹಾಗೂ ಆದಿತಿಯ ಮಗನಾದ ಸೂರ್ಯದೇವನ ಜನುಮದಿನ. ವಸಂತ ಋತುವಿನ ಆಗಮನದ ಕಲರವದ ಜೊತೆ ಜೊತೆಗೇ ರೈತರ ಮನೆಗಳಲ್ಲಿ ಸುಗ್ಗಿಯ ಸಂಭ್ರಮ. ಸೂರ್ಯನ ರಥದ ಏಳು ಕುದುರೆಗಳು – ಬೆಳಕಿನ ಏಳು ಬಣ್ಣಗಳ ಹಾಗೂ ವಾರದ ಏಳು ದಿನಗಳ ಸಂಕೇತವಾದರೆ ರಥದ ಹನ್ನೆರಡು ಚಕ್ರಗಳು ಹನ್ನೆರಡು ರಾಶಿಗಳ ಸಂಕೇತ ಹಾಗೂ ಹನ್ನೆರಡು ರಾಶಿಗಳು ಸೇರಿದಾಗ ಒಂದು ವರ್ಷವಾಗುವುದು. ರವಿಯ ಕಿರಣಗಳು ಆಯಾ ಮಾಸದಂದು ಒಂದೊಂದು ಚಕ್ರವನ್ನು ಸ್ಪರ್ಶಿಸುವ ಅಪೂರ್ವ ನೋಟವನ್ನು ಕೊನಾರ್ಕದಲ್ಲಿ ಕಾಣಬಹುದು. ಒರಿಸ್ಸಾದ ಕೊನಾರ್ಕ ದೇಗುಲ ಮತ್ತು ಗುಜರಾತಿನ ಮುದೇರ ದೇಗುಲಗಳಲ್ಲಿ ಹಬ್ಬದ ವಾತಾವರಣ ಇಂದು.
ಸೂರ್ಯನಿಂದಲೇ ಸೃಷ್ಟಿ, ಸೂರ್ಯನಿಂದಲೇ ಮಳೆ, ಬೆಳೆ, ಪ್ರಪಂಚದೆಲ್ಲೆಡೆ ಜನರು ಸೂರ್ಯನನ್ನು ಆರಾಧಿಸುವರು. ಎಲ್ಲ ನಾಗರೀಕತೆಗಳಲ್ಲೂ ಸೂರ್ಯನಿಗೆ ಪ್ರಮುಖ ಸ್ಥಾನ ಲಭ್ಯ. ಗಗನದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಕಂಡ ಆದಿ ಮಾನವನು – ದೇದೀಪ್ಯಮಾನವಾಗಿ ಹೊಳೆಯುವ ಸೂರ್ಯನನ್ನು ತಂದೆಯೆಂದೂ, ತಂಪಾದ ಬೆಳದಿಂಗಳನ್ನು ಚೆಲ್ಲುವ ಚಂದ್ರನನ್ನು ತಾಯಿ ಎಂತಲೂ ಪೂಜಿಸಿದರು. ಪ್ರಾಚೀನ ನಾಗರೀಕತೆಗಳಲ್ಲಿ ಸೂರ್ಯನನ್ನು ಯಾವ ಯಾವ ಹೆಸರಿನಿಂದ ಕರೆದರು, ಹೇಗೆ ಆರಾಧಿಸಿದರು ಎಂದು ತಿಳಿಯೋಣವೇ?
ಇಂಡೋ ಯುರೋಪಿಯನ್ ರಾಷ್ತ್ರಗಳಲ್ಲಿ ಸೂರ್ಯನು ಎಲ್ಲಾ ಲೋಕಗಳ ಅಧಿಪತಿಯೆಂದೂ, ಪ್ರತಿದಿನ ಎಲ್ಲವನ್ನೂ ವೀಕ್ಷಿಸಲು ಒಂದು ಸುತ್ತು ಬರುವನೆಂದೂ ನಂಬಿದ್ದರು. ಹಾಗಾಗಿ ಸೂರ್ಯನನ್ನು ಒಂದು ಚಕ್ರ ಎಂದೇ ಭಾವಿಸಿದ್ದರು. ಭಾರತದಲ್ಲಿಯೂ -‘ಸೂರ್ಯಸ್ಯ ಚಕ್ರಂ’ ಎಂದು ಹೇಳಿದ್ದಾರೆ. ಗ್ರೀಕರು ಮತ್ತು ಆಂಗ್ಲೋ ಸ್ಯಾಕ್ಸನ್ ಜನಾಂಗದವರಲ್ಲಿ ಆಕಾಶ ಮಾರ್ಗದಲ್ಲಿ ರಥದಲ್ಲಿ ಕುಳಿತು ಸೂರ್ಯನು ಸಂಚಾರ ಮಾಡುತ್ತಾನೆ ಎಂಬ ಕಲ್ಪನೆಯೂ ಇದೆ. ನಾರ್ಸ್ ಪುರಾಣಗಳಲ್ಲಿ ಸೂರ್ಯನ ರಥವನ್ನು ಅವಾರ್ಕ್ ಮತ್ತು ಆಲ್ಸ್‌ವ್ ಎಂಬ ಎರಡು ಕುದುರೆಗಳು ಎಳೆಯುತ್ತವೆ ಎಂದು ನಂಬುವರು. ಭಾರತದಲ್ಲಿ ಏಳು ಕುದುರೆಗಳನ್ನು ಸೂರ್ಯನ ರಥಕ್ಕೆ ಜೋಡಿಸಿದ್ದಾರೆ. ಇದು ವೈಜ್ಞಾನಿಕವಾದ ಸತ್ಯವೂ ಹೌದು – ಸೂರ್ಯನ ಬೆಳಕಿನಲ್ಲಿ ಸಪ್ತ ವರ್ಣಗಳಿರುವುದು ಎಲ್ಲರಿಗೂ ತಿಳಿದ ವಿಷಯವೇ ಅಲ್ಲವೇ?
ಇಂಗ್ಲೆಂಡ್‌ನಲ್ಲಿರುವ ಸ್ಟೋನ್ ಹೆಂಜ್ ಎನ್ನುವ ಪುರಾತನವಾದ ಶಿಲೆಗಳ ವಿಶಿಷ್ಟವಾದ ವಿನ್ಯಾಸ (ಕವಿಶೈಲದಲ್ಲಿರುವ ಶಿಲೆಗಳ ವಿನ್ಯಾದ ಹಾಗೆ) ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿ ಸೂರ್ಯ ಚಲನೆಯ ದಿಕ್ಕು ಬದಲಾವಣೆಯನ್ನು ನಿಖರವಾಗಿ ತೋರಿಸುತ್ತದೆ. ಆ ಶಿಲೆಗಳ ಮಧ್ಯ ಭಾಗದಲ್ಲಿ ನಿಂತು ನೋಡಿದಾಗ ಆ ಶಿಲೆಯ ತುದಿ ಸೂರ್ಯನಿಗೆ ಸಮಾನಂತರವಾಗಿ ಕಾಣುವುದು. ಹೀಗೆ ಸೂರ್ಯನನ್ನು ವೀಕ್ಷಿಸಿದ ಧಾರ್ಮಿಕ ಗುರುಗಳು – ವ್ಯವಸಾಯ ಮಾಡುವ ಜನರಿಗೆ ಬಿತ್ತನೆ ಮಾಡಲು ಹಾಗೂ ಕೊಯಿಲು ಮಾಡಲು ಪ್ರಶಸ್ತವಾದ ಸಮಯವನ್ನು ಕರಾರುವಾಕ್ಕಾಗಿ ಹೇಳುತ್ತಿದ್ದರಂತೆ.
ಈಜಿಪ್ಟ್‌ನಲ್ಲಿ ಸೂರ್ಯನಿಗೆ ಪ್ರಮುಖವಾದ ಸ್ಥಾನ. ಅಲ್ಲಿನ ದೊರೆ ತನ್ನ ತಲೆಯ ಮೇಲೆಯೇ ಸೂರ್ಯನ ಆಕೃತಿಯನ್ನು ಇಟ್ಟುಕೊಂಡಿರುವ ಚಿತ್ರಗಳು ಕಾಣಸಿಗುತ್ತವೆ. ಇವರು ಉದಯಿಸುವ ರವಿಗೆ ‘ಹೊರಸ್’ ಎಂದು, ಮಧ್ಯಾನ್ಹ ಕಾಣುವ ಆದಿತ್ಯನಿಗೆ ‘ರಾ’ ಎಂದೂ ಹಾಗೂ ಅಸ್ತಮಿಸುವ ಸವಿತ್ರನಿಗೆ ‘ಆಸಿರಿಸ್’ ಎಂದೂ ಕರೆದರು. ತಮ್ಮ ಹೆಸರಿನ ಜೊತೆಗೇ ಸೂರ್ಯನ ಹೆಸರನ್ನೂ ಜೋಡಿಸಿ, ತಾವು ಅವನಷ್ಟೇ ಶಕ್ತಿಶಾಲಿಗಳೆಂದು ಪ್ರದರ್ಶಿಸಿದರು. ಸೂರ್ಯನು ಹಡಗಿನಲ್ಲಿ ಚಲಿಸುವನೆಂಬ ಪ್ರತೀತಿ ಇದೆ. ಪುನರ್ ಜನ್ಮದಲ್ಲಿ ನಂಬಿಕೆಯಿರಿಸಿದ್ದ ಈಜಿಪ್ಷಿಯನ್ನರು, ತಮ್ಮ ಪಿರಮಿಡ್ಡುಗಳಲ್ಲಿ ಒಂದು ಹಡಗಿನ ಆಕೃತಿಯನ್ನು ಮಾಡಿ ಇಡುತ್ತಿದ್ದರು. ನೈಲ್ ನದಿಯ ಸನಿಹ ಇರುವ ನಗರ ಕಾರ್ನಕ್ (ಇಂದಿನ ಲಕ್ಸರ್ ಪಟ್ಟಣ) ನಲ್ಲಿ ಒಂದು ಭವ್ಯವಾದ ಸೂರ್ಯ ದೇವಾಲಯವನ್ನು ನಿರ್ಮಿಸಿದ್ದಾರೆ.
ಯು.ನೆ.ಸ್ಕೋ. ನಿಂದ ಹೆರಿಟೇಜ್ ಸೈಟ್ ಎಂದು ಗುರುತಿಸಲ್ಪಟ್ಟಿರುವ ಸೂರ್ಯನ ದೇಗುಲ ‘ಎಲ್ ಕ್ಯಾಸ್ಟಿಲೋ’ ಎಂಬ ಪಿರಮಿಡ್. ಇದು ಮೆಕ್ಸಿಕೋನ ಕುಕ್ಕುಲ್ಕಾನ ಎಂಬ ನಗರದಲ್ಲಿದೆ. ಇಲ್ಲಿ ಸೂರ್ಯ ಗ್ರಹಣದಂದು ನರಬಲಿ ಕೊಡುವ ಪದ್ದತಿ ಇತ್ತು. ಸೆಂಟ್ರಲ್ ಮತ್ತು ದಕ್ಷಿಣ ಅಮೆರಿಕಾದಲ್ಲಿಯೂ ಸೂರ್ಯನ ಆರಾಧನೆಯನ್ನು ಮಾಡುತ್ತಿದ್ದರು. ಪೆರುವಿನಲ್ಲಿ ರಾಜನು ಸೂರ್ಯನ ಅವತಾರವೆಂದೂ, ರಾಣಿಯು ಚಂದ್ರನ ಅವತಾರವೆಂದೂ ನಂಬುವರು. ಪೆರುವಿನ -‘ಮಾಚು ಪೀಚು’ ವಿನಲ್ಲಿ ಇಂಕಾ ನಾಗರೀಕತೆಯ ಕಾಲದಲ್ಲಿ ರಚಿಸಿದ ವಿಶಿಷ್ಟವಾದ ಶಿಲೆಗಳ ವಿನ್ಯಾಸ ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಸೂರ್ಯ ರಶ್ಮಿಗಳು ನಿಖರವಾದ ಸಮಯದಲ್ಲಿ ಆ ಶಿಲೆಗಳನ್ನು ಸ್ಪರ್ಶಿಸುತ್ತವೆ. ಇವರು ಆಚರಿಸುತ್ತಿದ್ದ ಹಬ್ಬ -‘ಇಂಟಿರೇಯ್ಮಿ’- ಬಹಳ ವಿಚಿತ್ರವಾಗಿ ತೋರುವುದು. ಆ ಹಬ್ಬದಂದು ಒಂದು ಹಗ್ಗದಿಂದ ಸೂರ್ಯನನ್ನು ಕಟ್ಟಿ ಮೇಲೆಳೆಯುವ ಪದ್ಧತಿ. ಚಳಿಗಾಲದಲ್ಲಿ ಹಗಲಿನ ಅವಧಿ ಕಡಿಮೆಯಾಗುತ್ತಾ ಬಂದಂತೆ ಎಲ್ಲಿ ಸೂರ್ಯ ಕಣ್ಮರೆಯಾಗಿ ಸಂಪೂರ್ಣ ಕತ್ತಲೆ ಆವರಿಸಿ ಬಿಡುವುದೋ ಎಂಬ ಭಯ, ಆತಂಕದಿಂದ ಹುಟ್ಟಿರಬಹುದಾದ ಸಂಪ್ರದಾಯ. ಇಲ್ಲಿ ವಾಸಿಸುವ -‘ಅಪಾಚೆ ಮತ್ತು ಸಿಯೋಕ್ಸ್ ಪಂಗಡದವರು ಸೂರ್ಯನಿಂದ ಶಕ್ತಿ ಮತ್ತು ಆರೋಗ್ಯ ಪಡೆಯಲು ಸೂರ್ಯ ನೃತ್ಯ ಮಾಡುವರು.
ಜಪಾನಿನಲ್ಲಿ ಸೂರ್ಯನು ಪ್ರಮುಖವಾದ ಸ್ಥಾನವನ್ನು ಅಲಂಕರಿಸಿದ್ದಾನೆ. ಅವರ ಬಾವುಟದಲ್ಲಿಯೇ ಸೂರ್ಯನ ಚಿತ್ರ ಬಿಡಿಸಿದ್ದಾರೆ. ಇವರು ತಮ್ಮ ನಾಡನ್ನು ‘ಉದಯಿಸುವ ಸೂರ್ಯನ ನಾಡೆಂದು’ ಕರೆಯುತ್ತಾರೆ. ಸ್ವರ್ಗದ ಅಧಿಪತಿ ‘ಅಮಾಟೆರಸು’ ಸೂರ್ಯನ ಅವತಾರವೆಂದೂ ಹಾಗೂ ಇವಳ ಗರ್ಭದಿಂದಲೇ ಜಪಾನಿನ ಮೊದಲ ದೊರೆ ಜನಿಸಿದನು ಎಂಬ ಪ್ರತೀತಿ ಇದೆ. ಬಹುಪಾಲು ಪ್ರಾಚೀನ ನಾಗರೀಕತೆಗಳಲ್ಲಿ ಸೂರ್ಯನು ಪುರುಷ ರೂಪದಲ್ಲಿದ್ದರೆ ಜಪಾನಿನಲ್ಲಿ ಮಾತ್ರ ಸೂರ್ಯ ಸ್ತ್ರೀ ರೂಪದಲ್ಲಿ ಗುರುತಿಸಲ್ಪಟ್ಟಿದ್ದಾನೆ. ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಸೂರ್ಯನೇ ಸೃಷ್ಟಿಕರ್ತನೆಂದೂ ಹಾಗೂ ನಕ್ಷತ್ರಗಳು ಇವನಿಂದಲೇ ಸೃಷ್ಟಿಯಾದವು ಎಂಬ ನಂಬಿಕೆ ಮನೆ ಮಾಡಿದೆ.
ಪ್ರಾಚೀನ ನಾಗರೀಕತೆಗಳಾದ – ಬ್ಯಾಬಿಲೋನ್, ಸುಮೇರಿಯ, ಮೆಸೊಪೊಟೇಮಿಯ, ಇಂಡಿಯ, ಚೈನಾ, ಆಫ್ರಿಕ, ಗ್ರೀಸ್, ರೋಮ್, ಮೆಕ್ಸಿಕೋ, ದಕ್ಷಿಣ ಅಮೆರಿಕ ಮತ್ತು ಇಜಿಪ್ಟ್‌ಗಳಲ್ಲಿ ಸೂರ್ಯನನ್ನು ಪೂಜಿಸುತ್ತಿದ್ದರು. ಭಾರತದಲ್ಲಿ ಮೊದಲಿಗೆ ಸೂರ್ಯಾರಾಧನೆಯ ವಿವರಗಳು ಋಗ್ವೇದದಲ್ಲಿ ಕಂಡು ಬರುತ್ತವೆ. ಇಲ್ಲಿನ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣದಲ್ಲಿ ಸೂರ್ಯದೇವನನ್ನು ನಾಮಪ್ರಿಯನೆಂದೂ ಕರೆದು ಅವನ್ನು ಹಲವಾರು ಹೆಸರುಗಳಿಂದ ಆರಾಧಿಸಿದ್ದಾರೆ. ಕರ್ಣನು ಸೂರ್ಯನ ವರಪ್ರಸಾದವೆಂಬ ಕತೆ ಎಲ್ಲರಿಗೂ ಪರಿಚಿತವೇ, ವನವಾಸದ ಕಾಲದಲ್ಲಿ ರಾಮ, ಸೀತೆಯರು ನಿತ್ಯ ಸೂರ್ಯನನ್ನು ಪೂಜಿಸುತ್ತಿದ್ದರು ಎಂಬ ಮಾಹಿತಿಯೂ ಪ್ರಸ್ತುತವಿದೆ.
ಸೂರ್ಯನಿಗೆ ಹಲವು ನಾಮಧೇಯಗಳಿವೆ. ಗ್ರೀಸ್‌ನವರು -‘ಹೆಲಿಯೋಸ್’, ‘ಅಪೋಲೋ’, ‘ಫೀಬಸ್’ ಎಂದು ಕರೆದರು. ರೋಮನ್ನರು ‘ಸೋಲ್’ ಎಂದರು. ಪರ್ಷಿಯಾ ದೇಶದವರು ‘ಮಿತ್ರ’ ಎನ್ನುವರು. ಸುಮೇರಿಯದವರು ‘ಉತು’ ಎಂದರೆ ಬ್ಯಾಬಿಲೋನಿಯಾದವರು ‘ಶಮಾಶ್’ ಎನ್ನುತ್ತಾರೆ. ಮಧ್ಯಪ್ರಾಚ್ಯದವರು ‘ಬಾಲ್’ ಎಂದು ಸಂಬೋಧಿಸಿದ್ದಾರೆ. ಭಾರತದಲ್ಲಿ – ಮಿತ್ರ, ರವಿ, ಸೂರ್ಯ, ಬಾನು, ಖಗ, ಪೂಷ್ಣೆ, ಹಿರಣ್ಯಗರ್ಭ, ಮರೀಚ, ಆದಿತ್ಯ, ಸವಿತೃ, ಅರ್ಕ, ಭಾಸ್ಕರ – ಮುಂತಾದ ಹೆಸರುಗಳಿಂದ ಅರ್ಚಿಸುವರು. ಮಿತ್ರನಾದ ಸೂರ್ಯದೇವನೇ, ಸದಾ ಹೊಳೆಯುವ ರವಿಯೇ, ಆಧ್ಯಾತ್ಮದ ಅರಿವಿನ ಬೆಳಕಾದ ಸೂರ್ಯನೇ, ಸದಾ ಪ್ರಕಾಶಿಸುತ್ತಿರುವ ಬಾನುವೇ, ಕ್ರಿಯಾಶೀಲನಾಗಿರುವ ಖಗನೇ, ಎಲ್ಲರನ್ನೂ ಪೋಷಿಸುವ ಪೂಷ್ಣೆಯೇ, ವಿಶ್ವ ಶಕ್ತಿಯಾದ ಹಿರಣ್ಯಗರ್ಭನೇ, ಅರಿವಿನ ಕಿರಣಗಳಾದ ಮರೀಚನೇ, ಆದಿತಿಯ ಮಗನಾದ ಆದಿತ್ಯನೇ, ಎಲ್ಲವನ್ನೂ ಪ್ರಚೋದಿಸುವ ಸವಿತ್ರನೇ, ಜೀವನೋತ್ಸಾಹ ನೀಡುವ ಅರ್ಕನೇ ಹಾಗೂ ಜ್ಞಾನದ ಬೆಳಕನ್ನು ನೀಡುವ ಭಾಸ್ಕರನೇ – ನಿನಗಿದೋ ನಮಸ್ಕಾರ.
ರಥ ಸಪ್ತಮಿಯಂದು ಸೂರ್ಯನನ್ನು ಆರಾಧಿಸಲು ನೂರಾಎಂಟು ಸೂರ್ಯ ನಮಸ್ಕಾರಗಳನ್ನು ಮಾಡುವ ಪ್ರತೀತಿ ಭಾರತದ ಯೋಗ ಶಾಸ್ತ್ರದಲ್ಲಿದೆ. ಒಂದು ಮಂಡಲ ಎಂದರೆ ಹದಿಮೂರು ಸೂರ್ಯ ನಮಸ್ಕಾರಗಳು. ಸೂರ್ಯ ನಮಸ್ಕಾರದಿಂದ ದೇಹದ ಎಲ್ಲಾ ಅಂಗಾಂಗಳಿಗೆ ಸೂಕ್ತವಾದ ವ್ಯಾಯಾಮ ದೊರೆಯುವುದು. ಸಾಧಕನ ಪ್ರಥಮ ಆದ್ಯತೆ – ಸಧೃಢ ಆರೋಗ್ಯವಂತ ಶರೀರ. ಸೂರ್ಯ ನಮಸ್ಕಾರ ಒಂದು ಸರಳ, ಸುಂದರ ಹಾಗೂ ಲಯಬದ್ಧವಾದ ವ್ಯಾಯಾಮ. ಇದನ್ನು ಎಲ್ಲ ವಯೋಮಾನದವರು, ಅಶಕ್ತರೂ, ಅನಾರೋಗ್ಯ ಪೀಡಿತರೂ ಸಹ ಮಾಡಬಹುದು. ಸೂರ್ಯ ನಮಸ್ಕಾರವನ್ನು ಸಂಕ್ಷಿಪ್ತ ರೂಪದ ಯೋಗಾಭ್ಯಾಸ ಎನ್ನಬಹುದು. ಇಲ್ಲಿ ಕೆಲವು ಆಯ್ದ ಆಸನಗಳನ್ನು ಬೀಜಾಕ್ಷರ ಮಂತ್ರಗಳನ್ನು ಉಚ್ಚರಿಸುತ್ತಾ, ಉಸಿರಾಟವನ್ನು ಗಮನಿಸುತ್ತಾ ಮಾಡುವುದರಿಂದ – ಆಸನ, ಪ್ರಾಣಯಾಮ ಮತ್ತು ಧ್ಯಾನ – ಇವುಗಳೆಲ್ಲದರ ಪರಿಣಾಮ ಉಂಟಾಗುವುದು. ಸೂರ್ಯ ನಮಸ್ಕಾರದಿಂದ ಆಕರ್ಷಕ ದೈಹಿಕ ನಿಲುವು ದೊರಕುವುದು. ಹೃದಯ ಮತ್ತು ರಕ್ತ ಪರಿಚಲನೆ, ಜೀರ್ಣ ಕ್ರಿಯೆ, ಉಸಿರಾಟದ ವ್ಯವಸ್ಥೆ, ವಿಸರ್ಜನಾ ವ್ಯವಸ್ಥೆ, ನರವ್ಯೂಹ ವ್ಯವಸ್ಥೆ, ನಿರ್ನಾಳ ಗ್ರಂಥಿಗಳ ಕಾರ್ಯ ಮುಂತಾದವುಗಳು ಸಮರ್ಪಕವಾಗಿ ನಡೆಯುವುವು. ಸೂರ್ಯ ನಮಸ್ಕಾರದಿಂದ ದೈಹಿಕ ಆರೋಗ್ಯ, ಮಾನಸಿಕ ಸಂಯಮ, ಇಂದ್ರಿಯ ನಿಗ್ರಹ ಹಾಗೂ ಆಧ್ಯಾತ್ಮಿಕ ಅರಿವು ಲಭ್ಯವಾಗುವುದು. ಇಂದು ಪ್ರಧಾನಿಯವರಾದ ಮಾನ್ಯ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಯೋಗ ಯಜ್ಞವು ವಿಶ್ವದ ಎಲ್ಲೆಡೆ ನಿರಂತರವಾಗಿ ನಡೆಯುತ್ತಿದೆ. ಸುಮಾರು 180 ದೇಶಗಳಲ್ಲಿ ಯೋಗಾಭ್ಯಾಸವನ್ನು ಜನರು ನಿಯಮಿತವಾಗಿ ಅಭ್ಯಸಿಸುತ್ತಿದ್ದಾರೆ.
ಆದಿತ್ಯಸ್ಯ ನಮಸ್ಕಾರಾನ್ ಯೇ ಕುರ್ವಂತಿ ದಿನೇ ದಿನೇ
ದೀರ್ಘಮಾಯುರ್ಬಲಂ ವೀರ್ಯಂ ತೇಜಸ್ತೇಷಂ ಚ ಜಾಯತೇ
ಅಕಾಲಮೃತ್ಯುಹರಣಂ ಸರ್ವವ್ಯಾಧಿವಿನಾಶನಂ
ಸೂರ್ಯಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಂ
ಪ್ರತಿನಿತ್ಯ ಯಾರು ಸೂರ್ಯ ನಮಸ್ಕಾರವನ್ನು ತಪ್ಪದೇ ಮಾಡುತ್ತಾರೋ ಅವರಿಗೆ ದೀರ್ಘಾಯಸ್ಸು, ಬಲ, ವೀರ್ಯ, ತೇಜಸ್ಸು ಲಭಿಸುತ್ತದೆ. ಆದುದರಿಂದ ಸರ್ವ ರೋಗಗಳನ್ನು ನಿವಾರಿಸಿ ಅಕಾಲ ಮೃತ್ಯುವಿನಿಂದ ಪಾರು ಮಾಡುವ ಆ ಸೂರ್ಯ ದೇವನ ಪಾದೋದಕವನ್ನು ಶ್ರದ್ದಾಭಕ್ತಿಯಿಂದ ಜಠರದಲ್ಲಿ ಧರಿಸೋಣ.
-ಡಾ.ಗಾಯತ್ರಿ ದೇವಿ ಸಜ್ಜನ್ , ಶಿವಮೊಗ್ಗ
ವಾವ್ ಸತ್ವಪೊರ್ಣವಾದ ಮಾಹಿತಿ ಯುಳ್ಳ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ.ಧನ್ಯವಾದಗಳು.
ಸಾಂಪ್ರದಾಯಿಕ ಲೇಖನಕ್ಕಿಂತ ವಿಭಿನ್ನವಾಗಿ ಸಂಪೂರ್ಣ ಪ್ರಪಂಚದ ಅನೇಕ ದೇಶಗಳ ಇತಿಹಾಸ ಮಾಹಿತಿಯನ್ನು ಒಳಗೊಂಡಿದೆ ಸಂತೋಷವಾಯ್ತು . ಆಸಕ್ತ ಇತಿಹಾಸ ವಿದ್ಯಾರ್ಥಿ ಗಳಿಗೆ ಉತ್ತಮ ಮಾಹಿತಿಯನ್ನೊಳಗೊಂಡಿದೆ. ಧನ್ಯವಾದಗಳು ಮೇಡಂ .
ಮಾಹಿತಿಪೂರ್ಣ ಲೇಖನ
ಮಾಹಿತಿಪೂರ್ಣ ಲೇಖನ
ರಥ ಸಪ್ತಮಿಯ ಆಚರಣೆಯ ಮಹತ್ವ, ಜಗದಾಧಿಪತಿ ಸೂರ್ಯದೇವನ ವಿವಿಧ ವಿಶೇಷ ಹೆಸರುಗಳ ವಿವರವಾರ ಮಾಹಿತಿ, ನಾನು ದಿನಾ ಮಾಡುತ್ತಿರುವ ಸೂರ್ಯ ನಮಸ್ಕಾರದ ಮಹತ್ವ … ಎಲ್ಲದರ ಬಗೆಗೆ ಸೊಗಸಾದ ಪ್ರಬುದ್ಧ ಲೇಖನ. ಧನ್ಯವಾದಗಳು.
ರಥಸಪ್ತಮಿಯ ಎಲ್ಲಾ ವಿಷಯಗಳನ್ನೊಳಗೊಂಡ ಲೇಖನ. ಚೆನ್ನಾಗಿದೆ.
Very informative and well presented article
ಲೇಖನವನ್ನು ಓದಿ ತಮ್ಮ ಅನಿಸಿಕೆಗಳನ್ನು ತಿಳಿಸಿದಂತಹ ಎಲ್ಲರಿಗೂ ವಂದನೆಗಳು