ಅಕ್ಕಾ ಕೇಳವ್ವಾ….ಚರಣ 2- ಚಿನ್ನದ ಹುಡುಗಿ
ಕೌಶಿಕನ ತ್ಯಜಿಸಿ ದಿಗಂಬರೆಯಾಗಿಕಲ್ಯಾಣದತ್ತ ಹೆಜ್ಜೆಹಾಕಿದೆ.ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ?ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ.ವಚನ ಸಾಹಿತ್ಯ ಲೋಕದಲ್ಲಿಧೃವತಾರೆಯಂತೆ ಮಿನುಗಿದೆ.ನಿನ್ನೊಲುಮೆಯಚನ್ನಮಲ್ಲಿಕಾರ್ಜುನನಅರಸುತ್ತಾಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ ಜಂಜಾಟಗಳಿಂದ ನೊಂದು ಬೆಂದವರು, ತಮ್ಮ ಬಾಳಿನಲ್ಲಿ ಎದುರಾದ ಸವಾಲುಗಳ ವಿರುದ್ಧಎದುರಿಸಲಾಗದೇ ಬದುಕಿಗೆ ವಿದಾಯ ಹೇಳಿದವರ ಪಟ್ಟಿಯೂದೊಡ್ಡದಿದೆಅಲ್ಲವೇ?ಈ ಪಟ್ಟಿಗೆ ನನ್ನ ಗೆಳತಿಯೂ ಸೇರ್ಪಡೆಯಾದಾಗ ಹಲವಾರು ಪ್ರಶ್ನೆಗಳು ನನ್ನನ್ನುಕಾಡಿದವು.
ಮೊನ್ನೆ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದ ಹಾಗೇ ಬರಸಿಡಿಲಿನಂತೆ ಬಂದೆರಗಿದ ಸುದ್ದಿ – ಕುಸುಮಾಳ ಆತ್ಮಹತ್ಯೆ ಒಂದು ತಿಂಗಳ ಹಿಂದೆಯಷ್ಟೆ ಅವಳಿಗೆ ಮೈಸೂರಿಗೆ ವರ್ಗಾವಣೆ ಆಗಿತ್ತು. ಎಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ-ಏನಾಗಿತ್ತು ಕುಸುಮ ಮೇಡಂಗೆ? ವಿಧ್ಯಾರ್ಥಿಗಳು, ಸಹೋದ್ಯೋಗಿಗಳು, ಆಫೀಸಿನವರು ಎಲ್ಲರದೂ ಅದೇ ಪ್ರಶ್ನೆ.ಯಾರೂ ಅವಳ ಆತ್ಮಹತ್ಯೆಯ ಸುದ್ದಿ ನಂಬಲು ಸಿದ್ದರಿರಲಿಲ್ಲ. ಕಾರಣ- ಅವಳಲ್ಲಿದ್ದ ಜೀವನೋತ್ಸಾಹ.
ಕುಸುಮ ನಸುಗಪ್ಪಿನ, ಸಾಧಾರಣರೂಪಿನ ಹುಡುಗಿ.ಆದರೆ ಅವಳ ಚೆಂದದ ಉಡುಪು, ನಗುಮುಖ, ನಡೆ ನುಡಿಎಲ್ಲರ ಗಮನ ಸೆಳೆಯುವಂತಿದ್ದವು, ಅವಳು ಸಹೋದ್ಯೋಗಿಗಳಲ್ಲಿ ತೋರುತ್ತಿದ್ದ ಆತ್ಮೀಯತೆ, ವಿಧ್ಯಾರ್ಥಿಗಳಲ್ಲಿ ತೋರುತ್ತಿದ್ದ ಪ್ರೀತಿ, ವಿಶ್ವಾಸ ಹಾಗೂ ಕೆಲಸದಲ್ಲಿ ತೋರುತ್ತಿದ್ದ ಶ್ರದ್ಧೆ ಎಲ್ಲವೂ ಅನುಕರಣೀಯವಾಗಿದ್ದವು. ಅವಳು ಅಧ್ಯಾಪಕರ ಕೊಠಡಿಯಲ್ಲಿ ಇದ್ದಳೆಂದರೆ ಅಲ್ಲಿನ ವಾತಾವರಣವೇ ಬದಲಾಗುತ್ತಿತ್ತು. ನಾನು ಆಗಾಗ ಅವಳನ್ನು ರೇಗಿಸುತ್ತಿದ್ದೆ-‘ಕೋಲಾರದಿಂದ ಬಂದಿರುವ ಬೆಡಗಿ, ಕೋಲಾರದ ಚಿನ್ನವೆಲ್ಲಾ ನಿನ್ನ ಮೈಮೇಲಿದೆಯಲ್ಲೇ‘. ಇವಳಿಗೆ ನಾವಿಟ್ಟ ಹೆಸರು-ಚಿನ್ನದ ಹುಡುಗಿ- ಅಂತ.
ಕುಸುಮ ವಿಧ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಡಂ. ಸದಾ ಅವಳ ಸುತ್ತ ವಿಧ್ಯಾರ್ಥಿಗಳ ದಂಡು. ನನ್ನಇನ್ನೊಬ್ಬ ಗೆಳತಿ ಅವಳನ್ನು ರೇಗಿಸುತ್ತಿದ್ದಳು -‘ಯಾರ ಪಠ್ಯದಲ್ಲೂಬರದಂತಹ ಅನುಮಾನಗಳು ನಿನ್ನ ಪಠ್ಯದಲ್ಲಿ ಹೇಗೆ ಬರುತ್ತೆಕುಸುಮಾ?ಬಹುಶಃ ನೀನು ಬಳಸುವ ಪರ್‌ಫ್ಯೂಮ್ ನಿಂದ ಇಷ್ಟೊಂದು ಹುಡುಗರು ನಿನ್ನ ಹಿಂಬಾಲಿಸುತ್ತಾರಾ?’ ಇತಿಹಾಸ ಬೋಧಿಸುತ್ತಿದ್ದ ಕುಸುಮ, ಅದು ಹೇಗೆ ಭೂತಕಾಲದ ಘಟನೆಗಳನ್ನು ಅಷ್ಟು ರಸವತ್ತಾಗಿ ಬೋಧಿಸುತ್ತಿದ್ದಳೋ? ಸತ್ತು ಸ್ವರ್ಗದಲ್ಲಿದ್ದ ರಾಜ ಮಹಾರಾಜರ ಮೆರವಣಿಗೆಯನ್ನೇ ತನ್ನ ತರಗತಿಯಲ್ಲಿ ಹೊರಡಿಸುತ್ತಿದ್ದಳು. ನಾನು ತಮಾಷೆ ಮಾಡುತ್ತಿದ್ದೆ-‘ಭೂತಗಳನ್ನೆಲ್ಲಾ ವರ್ತಮಾನಕ್ಕೆಕರೆತಂದು ವಿಧ್ಯಾರ್ಥಿಗಳ ಭವಿಷ್ಯರೂಪಿಸುತ್ತೀಯಾ. ಅಂಗೈ ಅಗಲ ಭೂಮಿಗಾಗಿ, ಬೊಗಸೆ ತುಂಬ ನಾಣ್ಯಕ್ಕಾಗಿ ಯುದ್ಧಮಾಡಿ ಜನರ ಬದುಕನ್ನೇ ಛಿದ್ರಗೊಳಿಸುವ ಜನರ ಇತಿಹಾಸ ಬೋಧಿಸುತ್ತೀಯಾ?’-ಎಂದು. ಸಾಹಿತ್ಯ ಬೋಧಿಸುವ ನನಗೆ ಅವಳು ಮರುಸವಾಲು ಹಾಕುತ್ತಿದ್ದಳು -‘ಕಣ್ಣಿಗೆಕಾಣದ, ಕಿವಿಗೆ ಕೇಳದ ಸಂಗತಿಗಳನ್ನು ಹೇಗೆ ವಿಧ್ಯಾರ್ಥಿಗಳಿಗೆ ಬೋಧಿಸುತ್ತೀಯಾ?’- ಹೀಗೇ ನಡೆಯುತ್ತಿತ್ತು ನಮ್ಮ ಸಂವಾದ.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಕುಸುಮ ತನ್ನತಾಯಿಯ ಮಡಿಲಲ್ಲೇ ಬೆಳೆದಿದ್ದಳು. ಪ್ರತಿಭಾನ್ವಿತೆಯಾಗಿದ್ದ ಕುಸುಮ ಎಂ.ಎ ಯಲ್ಲಿ ಮೊದಲನೇ ರ್‍ಯಾಂಕ್ ಪಡೆದಿದ್ದಳು. ತನ್ನ ಬಾಲ್ಯದ ಗೆಳೆಯನನ್ನೇ ಪ್ರೀತಿಸಿ ಮದುವೆಯಾದಳು. ಇದು ಅವರಿಬ್ಬರ ಮನೆಯವರಿಗೂ ಬೇಡದ ಮದುವೆಯಾಗಿತ್ತು. ಅವಳಿಗೆ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಸಿಕ್ಕಿತು.ಅವಳ ಗಂಡ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇರಿದನು. ಅವರು-‘ಒಲವೆ ನಮ್ಮ ಬದುಕು’-ಎಂಬಂತೆ ಬಾಳುತ್ತಿದ್ದರು. ಎರಡು ಮಕ್ಕಳು ಅವರ ಮಮತೆಯ ಮಡಿಲನ್ನು ತುಂಬಿದವು. ಅವಳ ಬಾಣಂತಿತನ ಮಾಡಲಾಗಲೀ, ಮೊಮ್ಮಕ್ಕಳ ಲಾಲನೆ ಪಾಲನೆಗಾಗಲೀ ಅವರಮ್ಮ ಬರಲಿಲ್ಲ. ಅವಳ ಹೆರಿಗೆಯಾದಾಗ-‘ಸುಮ, ಅಮ್ಮ ಅಥವಾ ಅತ್ತೆ ಬಂದಿದ್ದಾರಾ?’-ಅಂದರೆ, ‘ಇಲ್ಲಪ್ಪಾ ಗಂಡಪ್ಪನದೇ ಬಾಣಂತಿತನ’ಎಂದು ನಕ್ಕುಬಿಡುತ್ತಿದ್ದಳು. ನನ್ನಅಮ್ಮ ಅವಳಿಗೆ ಅಂಟಿನುಂಡೆ ಮಾಡಿಕೊಟ್ಟಾಗ ಅವಳ ಕಣ್ಣಂಚಿನಲ್ಲಿ ನೀರುತುಂಬಿತ್ತು. ಎರಡನೇ ಮಗುವೂ ಹೆಣ್ಣಾದಾಗ ನೋಡಲು ಬಂದ ನೆರೆ ಹೊರೆಯವರು-‘ಅಯ್ಯೋ, ಈ ಬಾರಿಯೂ ಹೆಣ್ಣೇ’, ಎಂದಾಗ, ಕುಸುಮ-‘ನಮಗಿಲ್ಲದ ಬೇಸರ ಅವರಿಗ್ಯಾಕೆ. ಶ್ರದ್ಧಾಂಜಲಿ ಸಭೆಗೆ ಬಂದಹಾಗೆ ಮುಖ ಮಾಡುತ್ತಾರಲ್ಲ’- ಎಂದು ನಕ್ಕುಬಿಡುತ್ತಿದ್ದಳು. ಮನೆ, ಮಕ್ಕಳು, ಕಾಲೇಜು..ಇಷ್ಟೆಲ್ಲಾ ಜವಾಬ್ದಾರಿಗಳ ನಡುವೆಯೂ ಅವಳು ಕುಗ್ಗಿದ್ದನ್ನು ನಾನು ಎಂದೂ ಕಾಣಲಿಲ್ಲ. ಬದಲಾಗಿ ಹೆರಿಗೆ ರಜೆಯ ಸಮಯದಲ್ಲಿ ಅಪೂರ್ಣವಾಗಿದ್ದ ತನ್ನ ಡಾಕ್ಟರೇಟ್ ಪ್ರಭಂಧವನ್ನು ಪೂರ್ಣಗೊಳಿಸಿ ಡಾಕ್ಟರೇಟ್ ಪದವಿ ಪಡೆದಳು.
ನಾನು ಅವಳ ಜೊತೆ ಎಂಟು ವರ್ಷಗಳ ಕಾಲ ಕೆಲಸ ಮಾಡಿದೆ. ಒಂದು ದಿನವೂ ಅವಳು ಗೊಣಗಿದ್ದನ್ನಾಗಲೀ,ಮಕ್ಕಳ ಬಗ್ಗೆ ಅಥವಾ ಗಂಡನ ಬಗ್ಗೆ ದೂರು ಹೇಳಿದ್ದನ್ನು ಕೇಳಲೇ ಇಲ್ಲ. ಅವಳಿಗೆ ಮೈಸೂರಿಗೆ ವರ್ಗಾವಣೆ ಆದಾಗ ನನಗೆ ತುಂಬಾ ಬೇಸರವಾಯಿತು. ಅವಳು ಅಜಾತಶತ್ರುವಾಗಿದ್ದಳು. ಅವಳ ಉತ್ಸಾಹ, ಲವಲವಿಕೆ, ನಗು ಎಲ್ಲರಲ್ಲೂ ಚೈತನ್ಯ ತುಂಬುತ್ತಿದ್ದವು. ಅವಳ ಮಾತು, ನಗು ಇಲ್ಲದೇ ಅಧ್ಯಾಪಕರ ಕೊಠಡಿ ಬಿಕೋ ಎನ್ನಿಸುತ್ತಿತ್ತು. ವಿಧ್ಯಾರ್ಥಿಗಳೂ ಅವಳನ್ನು ತುಂಬಾ ನೆನಪು ಮಾಡಿಕೊಳ್ಳುತ್ತಿದ್ದರು. ಅವಳಿಗೆ ಆತ್ಮೀಯವಾದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಂದು ಜನವರಿ ಒಂದನೇ ತಾರೀಖು. ಹೊಸ ವರ್ಷದ ಆರಂಭ. ಆಗಲೇ ಬಂತು ಕುಸುಮಳ ಆತ್ಮಹತ್ಯೆಯ ಸುದ್ದಿ. ಈ ಸುದ್ದಿ ಸುಳ್ಳಾಗಲೀ ಎಂದು ಮನಸ್ಸುಚೀರುತ್ತಿತ್ತು.’ಕುಸುಮ, ನೀನು ಏಕೆ ಹೀಗೆ ಮಾಡಿದೆ? ಮುದ್ದಾದ ಮಕ್ಕಳನ್ನು ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂತು.?ನಿನ್ನ ನಗುವಿನ ಹಿಂದಿದ್ದ ನೋವು, ನಿರಾಸೆಗಳನ್ನು ಏಕೆ ನನ್ನಿಂದ ಮುಚ್ಚಿಟ್ಟೆ?ನಿನ್ನ ಒಲವಿನ ಗೂಡನ್ನು ಗೆದ್ದಲು ಆಕ್ರಮಿಸಿದ್ದು ನಮಗೆ ಗೊತ್ತಾಗಲೇ ಇಲ್ಲ.
ಹೆಂಡತಿ ಆತ್ಮಹತ್ಯೆ ಮಾಡಿಕೊಂಡರೆ ಗಂಡನನ್ನು ದೂರುವುದು ಸರ್ವೇಸಾಮಾನ್ಯ ಆದರೆ ಅವಳನ್ನು ರಕ್ಷಿಸಲು ಹೋದವನು ಅವಳೊಂದಿಗೇ ಬೆಂಕಿಗೆ ಆಹುತಿಯಾಗಿದ್ದ. ಪ್ರೀತಿಸಿ ಮದುವೆಯಾದವರು, ಜೋಡಿ ಹಕ್ಕಿಗಳಂತೆ ಬಾಳಿದವರು ಜೊತೆಯಾಗಿಯೇ ಈ ಲೋಕವನ್ನು ತ್ಯಜಿಸಿದ್ದರು. ಎಲ್ಲರ ಪಾಲಿಗೂ ಕುಸುಮಳ ಆತ್ಮಹತ್ಯೆ ಒಂದು ಒಗಟಿನಂತಿತ್ತು. ಬಿಡಿಸಲು ಪ್ರಯತ್ನಿಸಿದಷ್ಟೂ ಕಗ್ಗಂಟಾಗುತ್ತಿತ್ತು.
ಅಂದು ಹುಣ್ಣಿಮೆ.ಆಗಸದಲ್ಲಿ ಹೊಳೆಯುತ್ತಿದ್ದ ಚಂದ್ರನನ್ನೇ ನೋಡುತ್ತಿದ್ದೆ. ಕುಸುಮ ನೆನಪಾದಳು. ಅದೇತಂಪು, ಅದೇ ಶಾಂತಿ ಅವಳಲ್ಲಿ ಯಾವಾಗಲೂ ಕಾಣುತ್ತಿತ್ತು. ಬೆಳದಿಂಗಳಿನಂತಿದ್ದಳು ಕುಸುಮ. ಹಾಗೇ ನಿದ್ರೆಗೆ ಜಾರಿದೆ. ಕನಸಿನಲ್ಲಿ ಕುಸುಮ ಚಂದಿರನಿಂದ ಕೆಳಗಿಳಿದು ಬಂದಳು.ನನ್ನ ಪಕ್ಕದಲ್ಲೇ ಕುಳಿತಳು .ನಿದ್ರೆ ಬಂತಾ ಗೆಳತಿ..ಸ್ವಲ್ಪ ಸಮಯ ನನ್ನ ಮಾತು ಕೇಳುವೆಯಾ?ಯಾವಾಗಲೂ ಚೆಂದದ ಸೀರೆಯುಟ್ಟು, ನಗು ನಗುತ್ತಲೇ ಇರ್‍ತೀಯಲ್ಲ, ನಿನಗೆ ಬಾಳಿನಲ್ಲಿ ಸಮಸ್ಯೆಗಳೇ ಇಲ್ಲವಾ?ಎಂದು ಕೇಳುತ್ತಿದ್ದೆಯಲ್ಲಾ ಗೆಳತಿ- ಏನು ಹೇಳಲಿ, ಎಲ್ಲಿಂದಆರಂಭಿಸಲಿ? ನನ್ನ ಜೀವನದುದ್ದಕ್ಕೂ ಸಮಸ್ಯೆಗಳು ತುಂಬಿತ್ತು. ಯಾರನ್ನು ದೂಷಿಸಲಿ?ಮದುವೆ ನನ್ನದೇ ಆಯ್ಕೆಯಾಗಿತ್ತು. ಅಮ್ಮ ಹೇಳಿದ್ದರು – ಆ ಹುಡುಗನ ಜೊತೆ ನೀನು ಸುಖವಾಗಿರಲು ಸಾಧ್ಯವೇ ಇಲ್ಲ. ಆದರೆ ಹುಚ್ಚು ಪ್ರೀತಿಯಲ್ಲಿ ಕೊಚ್ಚಿ ಹೋಗಿದ್ದೆ ನಾನು. ಅಮ್ಮನ ಮಾತುಗಳಲ್ಲಿನ ಸತ್ಯ ಕಾಣಲೇಇಲ್ಲ. ನನಗೆ ಶೈಕ್ಷಣಿಕ ರಂಗದಲ್ಲಿ ಎನಾದರೂ ಸಾಧಿಸಬೇಕೆಂಬ ಹಂಬಲ. ಕುಟುಂಬದ ಜವಾಬ್ದಾರಿಯ ಜೊತೆಜೊತೆಗೇ ಸಂಶೋಧನಾರಂಗದಲ್ಲೂ ಬೆಳೆಯುವ ಆಸಕ್ತಿ ನನಗೆ. ಅವನಿಗೆ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟರೆ ಬೇರೆ ಪ್ರಪಂಚವೇ ಇರಲಿಲ್ಲ. ಲೋಕದ ಕಣ್ಣಿಗೆ ಅವನೊಬ್ಬ ಆದರ್ಶ ಪತಿ. ಮನೆಯ ಅರ್ಧ ಕೆಲಸ ಅವನೇ ಮಾಡಿ ಮುಗಿಸುತ್ತಿದ್ದ ಮಕ್ಕಳನ್ನು ಹೆತ್ತು ಹೊತ್ತವಳು ನಾನು. ಆದರೆ ಸಾಕಿ ಸಲಹಿದ್ದು ಅವನೇ.ಅವರಿಗೆ ಊಟ ಮಾಡಿಸಿ, ಲಾಲಿ ಹಾಡಿ ಮಲಗಿಸುತ್ತಿದ್ದ. ನನ್ನಲ್ಲೂ ಅದನ್ನೇ ನಿರೀಕ್ಷಿಸುತ್ತಿದ್ದ. ನಾನು ಅವನ ನೆರಳಿನಂತೆ ಇರಬೇಕೆಂದು ಬಯಸುತ್ತಿದ್ದ.
ನಾನು ಡಾಕ್ಟರೇಟ್ ಪದವಿ ಪಡೆದಾಗ ಮೊದಲ ಬಾರಿಗೆ ಅವನ ಅಸೂಯೆಯ ಬಿಸಿ ತಟ್ಟಿತು. ನನಗೆ ‘ಉತ್ತಮ ಶಿಕ್ಷಕಿ’ ಪ್ರಶಸ್ತಿ ಬಂದಾಗ ಅಸಹನೆಯಿಂದ ಕೂಗಾಡಿದ. ವಿಧ್ಯಾರ್ಥಿಗಳಾಗಲೀ, ಸಹೋದ್ಯೋಗಿಗಳಾಗಲೀ ಮನೆಗೆ ಬಂದರೆ ಚೇಳಿನಂತೆ ಕುಟುಕುತ್ತಿದ್ದ. ಕೆಲವೊಮ್ಮೆ-‘ಕೆಲಸ ಬಿಟ್ಟು ಬಿಡು. ಮನೇಲಿ ಮಕ್ಕಳನ್ನು ನೋಡಿಕೊಂಡು ಸುಖವಾಗಿರು’-ಎಂದೆಲ್ಲಾ ಹೇಳಲು ಆರಂಭಿಸಿದ.ನೀನು ಶೇಕ್ಸ್‌ಪಿಯರ್‌ನ ‘ಒಥೆಲೋ’ ನಾಟಕ ಮಾಡುವಾಗ ಇದು ನನ್ನ ಕಥೆಯೇನೋ ಎಂದೆನಿಸುತ್ತಿತ್ತು. ಆದರೆ ಇಲ್ಲಿ ‘ಇಯಾಗೋ’ ಒಬ್ಬ ವ್ಯಕ್ತಿಯಲ್ಲ! ಬದಲಿಗೆ ನಮ್ಮ ಹೊರಗೂ ಒಳಗೂ ಇದ್ದ ಪುರುಷಪ್ರಧಾನ ಸಮಾಜಆಗಿತ್ತು .ಅವನಿಗೆ ನಾನು ಅವನ ಪ್ರೀತಿಯ ಹೆಂಡತಿಯಾಗಬೇಕಿತ್ತು. ಮಕ್ಕಳ ಮಮತೆಯ ತಾಯಿಯಾಗಬೇಕಿತ್ತು. ಅಷ್ಟೆ. ನಾನು ಮತ್ತೇನೂ ಮಾಡಬಾರದಿತ್ತು. ನಾನು ಉಪನ್ಯಾಸಕ ವೃತ್ತಿಯಲ್ಲಿ ತೋರುವ ಆಸಕ್ತಿ, ಶ್ರದ್ಧೆ, ನಿಷ್ಟೆ ಅವನಿಗೆ ನುಂಗಲಾರದ ತುತ್ತಾಗಿತ್ತು. ದಿನೇ ದಿನೇ ನಮ್ಮಲ್ಲಿನ ಮನಸ್ತಾಪಗಳು ವಿರಾಟರೂಪ ತಳೆದವು. ನನ್ನ ಕನಸುಗಳೆಲ್ಲಾ ನುಚ್ಚು ನೂರಾದವು. ಗೆಳತಿ ನಾನು ಸೋತು ಹೋಗಿದ್ದೆ .ಆ ಕ್ಷಣ ನನಗನ್ನಿಸಿತು. ನಾನು ಈ ಮನಸ್ಥಿತಿಯಲ್ಲಿ ಅವನ ಪ್ರೀತಿಯ ಮಡದಿಯೂ ಆಗಲಾರೆ, ಮಕ್ಕಳಿಗೆ ಮಮತೆಯ ತಾಯಿಯೂ ಆಗಲಾರೆ, ಉತ್ತಮ ಶಿಕ್ಷಕಿಯೂ ಆಗಲಾರೆ ನನ್ನ ಬದುಕಿಗೆ ಅರ್ಥವೇಇಲ್ಲ. ನನ್ನ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದೆನ್ನಿಸಿತು. ಪ್ರತಿನಿತ್ಯ ಈ ಅಸೂಯೆಯೆಂಬ ಅಗ್ನಿಕುಂಡದಲ್ಲಿ ಬೇಯುವುದಕ್ಕಿಂತ ಒಮ್ಮೆಲೇ ಬದುಕಿಗೆ ವಿದಾಯ ಹೇಳಿಬಿಟ್ಟೆ. ಎಷ್ಟು ದಿನ ಈ ಮುಖವಾಡ ಹಾಕಿರಲಿ ಗೆಳತಿ?
ಅಕ್ಕ, ಹೂವಿನಂತ ಮನಸ್ಸಿನ ಕುಸುಮ, ಅವಳನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡ, ಇವರ ದುರಂತ ಸಾವಿಗೆ ಕಾರಣ ಯಾರು? ಇಬ್ಬರೂ ವಿದ್ಯಾವಂತರು, ಬಾಲ್ಯದ ಗೆಳೆಯರು, ಪ್ರೀತಿಸಿ ಮದುವೆಯಾದವರು :-
ಬೆಚ್ಚನೆಯ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು
ಇಚ್ಚೆಯನರಿವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ
ಬೆಚ್ಚನೆಯ ಮನೆಯಿತ್ತು, ವೆಚ್ಚಕ್ಕೆ ಹೊನ್ನಿತ್ತು ಆದರೆ ಇಚ್ಚೆಯನರಿವ ಮನಸ್ಸು ಇಬ್ಬರಲ್ಲೂ ಇರಲಿಲ್ಲವೇನೋ?ಅವರ ನಿರೀಕ್ಷೆಗಳು ಈಡೇರಲಿಲ್ಲವೇನೋ? ಇಬ್ಬರೂ ಈ ಸಮಾಜದಲ್ಲಿನ ಗಂಡು, ಹೆಣ್ಣಿನ ಪಾತ್ರಗಳ ರಚನೆಯಲ್ಲಿ ಬೆಂದು ಹೋದರೇನೋ? ವಿದ್ಯೆಯಿಂದ ಲಭಿಸಬೇಕಾದ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಅವರಿಗೆ ದಕ್ಕಲಿಲ್ಲವೇನೋ? ವಿದ್ಯೆ ಬರೀ ಡಿಗ್ರಿ ಪಡೆಯುವುದಕ್ಕಷ್ಟೇ ಸೀಮಿತವಾಯಿತೇ? ಹೆಣ್ಣನ್ನು ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಮಾಡಿದ ವಿದ್ಯೆ ಅವಳ ಧೈರ್ಯವನ್ನೇ ಕಸಿದುಬಿಟ್ಟಿತೇ? ಪ್ರೀತಿಯ ಅಡಿಪಾಯವೇ ಪರಸ್ಪರ ಗೌರವ, ನಂಬಿಕೆ ಅಲ್ಲವೇ? ಪ್ರೀತಿ ವಸಂತಋತುವಿನಲ್ಲಿ ತೇಲಿಬರುವ ಮಲ್ಲಿಗೆಯ ಕಂಪಿನಂತೆ. ಈ ಭಾವವನ್ನು ಬಂಧನಕ್ಕೊಳಪಡಿಸಲಾದೀತೇ ಅಕ್ಕಾ?
-ಗಾಯತ್ರಿ ಸಜ್ಜನ್
ವಿದ್ಯೆ ಹೆಣ್ಣಿಗೆ ಆತ್ಮವಿಶ್ವಾಸ ದೊಟ್ಟಿಗೆ ಎಲ್ಲವನ್ನೂ ಕೊಟ್ಟಿದೆ,,
ಆದರೆ ಅವಳ ಪ್ರತಿಭೆ, ಮತ್ತು ಪ್ರಗತಿ ಗಂಡಿಗಿಂತ ಮೀರಿರಬಾರದು ಎಂದು ಚೌಕಟ್ಟು ಹಾಕಿದೆ ಈ ಪುರುಷ ಸಮಾಜ,.ಅಸೂಯೆ ,ಅನುಮಾನ,ಹೆಂಡತಿ ಯ ಹಿರಿಮೆಯನ್ನು ಸಹಿಸದ ಅವರ ಮನೋಭಾವಕ್ಕೆ ಸಹಿಸಿ ಸಾಕಾಗಿ ರೋಸಿ ಆತ್ಮಹತ್ಯೆ ಗೆ ಶರಣಾಗುತ್ತಾರೇನು,,,
ಮದುವೆಯ ಬಂಧನದಿಂದ ಹೊರ ಬಂದು ಬದುಕುತ್ತೀನೆಂದರು ಗಂಡ ಬಿಟ್ಟವಳೆಂದು ಇನ್ನೂ ಬೇರೆ ಬಗೆಯಲ್ಲಿ ಅವಳನ್ನು ಕುಟುಕುತ್ತದೆ ಈ ಸಮಾಜ
ಕತೆ ಓದಿ ಮನಸ್ಸು ಕರಗಿತು,,,ಹೆಣ್ಣು ಮಕ್ಕಳ ಬಾಳಿನ ಗೋಳಿಗೆ ಕೊನೆ ಇಲ್ಲವೆ,,?
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
ಮನ ಕಲಕಿತು..ಅಡುಗೆ ಮನೆಯಿಂದ ಅಂತರಿಕ್ಷದ ವರೆಗೆ ಸಾಧನೆ ಮಾಡಿದ ಸ್ತ್ರೀ ಕುಲಕ್ಕೆ ಸೇರಿದವರು ನಾವೆಂದು ಹೆಮ್ಮೆ ಪಡಬೇಕಾ? ಅಥವಾ ಈಗಲೂ ಹೀಗೆಲ್ಲಾ ಆಗುತ್ತಿರುವದನ್ನು ಕಂಡು ಹೆಣ್ಣಾಗಿ ಹುಟ್ಟಿದ್ದಕ್ಕೆ ವ್ಯಥೆ ಪಡಬೇಕಾ?
ಪ್ರಬುದ್ಧ ಬರಹ
ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು
ವಿದ್ಯೆ ಬೇರೆ ಸಂಸ್ಕಾರ ಬೇರೆ ಸುಶಿಕ್ಷಿತ ಮನಸ್ಸು… ಇವೆಲ್ಲವೂ ನಮ್ಮೂಡನೆ ಜೊತೆಯಲ್ಲಿ ಸಾಗಿದಾಗ ಮಾತ್ರ ಬದುಕು ಸುಂದರ ಇಲ್ಲವೇ ದುರ್ಭರ ರೋಸಿಹೋದ ಬದುಕಿಗೆ ವಿದಾಯ ಹೇಳುವಾಗ ಒಂದು ಕ್ಷಣ ಮಕ್ಕಳ ಬಗ್ಗೆ ಯೋಚಿಸಿ ದ್ದರೆ.. ತುಂಬಾ ಮನಕಲಕಿದ ಘಟನೆ ಅದರ ನಿರೂಪಣೆ ಬಹಳ ಸೊಗಸಾಗಿ ಮೂಡಿ ಬಂದಿದೆ ಮೇಡಂ.ಅಭಿನಂದನೆಗಳು.
ಬದುಕು ಮುಖವಾಡಗಳಿಂದಾವೃತ.
ಪುರುಷ ಪ್ರಧಾನ ವ್ಯವಸ್ಥೆಯ ನಮ್ಮ ಸಮಾಜದಲ್ಲಿ ಇಂತಹ ಸಾವಿರಾರು ಕುಸುಮಗಳು ಅರಳಲಾಗದೆ ನಗುವಿನ ಮುಖವಾಡ ಧರಿಸಿ ಸುಗಂಧ ಬೀರಲು ಪ್ರಯತ್ನ ಪಟ್ಟು ಕೊನೆಗೆ ಸೋತಾಗ ಹತಾಶೆಯ ಬದುಕು ಭಾರವಾಗಿ ಬಾಡಿ ಹೋಗುತ್ತಿವೆ.ಅಕ್ಕನಂತೆ ಬಂಧನವ ಕಿತ್ತೊಗೆದು ನಡೆಯಲು ಸಾಧ್ಯವಾಗದು . ಮಹಿಳಾ ಶೋಷಣೆಗೆ ಕೊನೆ ಎಂದು?
ಹೌದು, ಮನುಷ್ಯ ಜೀವಿಸುವುದೇ ತರೆಹೇವಾರಿ ಮುಖವಾಡಗಳನ್ನು ಹೊತ್ತು. ತನ್ನ ಅಸೀಮ ಗುರಿಯತ್ತ ಸಾಗಲು ಅಡ್ಡಿ ಉಂಟಾದಾಗ ಕುಸುಮಳ ಮನಸ್ಸು ಒಡೆದುದು ಮಾತ್ರ ದುರಂತ. ಎಂದಿನಂತೆ ಚಂದದ ಬರಹ ..ಗಾಯತ್ರಿ ಮೇಡಂ..ಧನ್ಯವಾದಗಳು.