ದುರ್ವಿಧಿ
ಅದೊಂದು ದೊಡ್ಡ ಮರ. ಆ ಮರದ ಎದುರಲ್ಲೇ ಕವಿಯೊಬ್ಬನ ಮನೆ. ಅವನು ದಿನವೂ ಮರದ ಮೇಲಿನ ಆಗುಹೋಗುಗಳನ್ನು ನೋಡುತ್ತಿದ್ದಾನೆ.
ಆ ಮರದ ಪೊಟರೆಯಲ್ಲಿ ಗಿಳಿಗಳೆರಡು ಸಂಸಾರ ಹೂಡಿವೆ. ಕೆಲವು ತಿಂಗಳಲ್ಲಿ ಮೂರು ಮೊಟ್ಟೆ ಇಟ್ಟಿತು ಹೆಣ್ಣು ಗಿಳಿ. ಮುದ್ದು ಮರಿಗಳ ಆಗಮನಕ್ಕಾಗಿ ಮೊಟ್ಟೆಗಳಿಗೆ ಕಾವು ಕೊಡತೊಡಗಿತು. ದೊಂದು ದಿನ ಗಂಡು ಗಿಳಿ ಆಹಾರ ತರಲು ಹೊರ ಹೋಗಿದ್ದು ಬರಲೇ ಇಲ್ಲ. ಆತಂಕಗೊಂಡ ಹೆಣ್ಣು ಪೊಟರೆಯಿಂದ ಹೊರಬಂದು ತನ್ನ ಇನಿಯನನ್ನು ಹುಡುಕತೊಡಗಿತು.
ಅದೋ ಅಲ್ಲಿಯೇ ಕಾದಿತ್ತು ದುರ್ವಿಧಿ! ಆ ಸಮಯಕ್ಕೇ ಹೊಂಚುಹಾಕುತ್ತಿದ್ದ ಹಾವೊಂದು ಆ ಗೂಡು ಹೊಕ್ಕಿತು. ಮೊಟ್ಟೆಗಳ ನುಂಗಿ ತೇಗಿ ಸರಸರ ಹೊರಟೇ ಹೋಯಿತು.
ಮರಳಿ ಬಂದ ಹಕ್ಕಿ ಹೌಹಾರಿತು. ವಿಲಿವಿಲಿಸಿ ಬಿಕ್ಕಿ ಬಸವಳಿಯಿತು.
ಇದನ್ನೆಲ್ಲ ಆ ಕವಿ ಕಂಡ. ದು:ಖ ವಶನಾದ. ʼಹಾವುಗಳು ಎಂಥ ಕ್ರೂರ ಜಂತುಗಳು! ಮೊಟ್ಟೆಗಳೇ ಬೇಕಿತ್ತೆ ಆ ಹಾವಿಗೆ ಆಹಾರ?ʼ ಎಂದು ಹೃದಯ ಹಿಂಡಿ ಹಲುಬಿದ. “ಹಿಡಿ, ಇದೋ ಶಾಪ! ಆಗಲೀ ಸರ್ಪ ನಾಶ” ಅಂತ ಬಡಬಡಿಸಿದ.
ಅದೇ ಸಮಯಕ್ಕೆ ಅಡುಗೆ ಮನೆಯಿಂದ ಕವಿಯ ಮಡದಿ ಅಲ್ಲಿ ಬಂದಳು, ಮೆಲುನುಡಿಯಲ್ಲಿ, “ಕವಿವರ್ಯರೇ, ʼಆಮ್ಲೆಟ್ʼ ತಟ್ಟೆಮೇಲಿಟ್ಟದ್ದೇನೆ. ಬಿಸಿ ಬಿಸಿಯಿದೆ, ಬೇಗನೆ ತಿನ್ನಿ. ಊಟಕ್ಕೆ ʼನಾಟಿಸಾರುʼ ಬೇಕೆಂದಿದ್ದಿರಿ. ಅದರ ತಯಾರಿಯೂ ಸಾಗಿದೆ” ಅಂದಳು!
– ಅನಂತ ರಮೇಶ್ , ಬೆಂಗಳೂರು
ತಾ ಅಂದಿದ್ದು ತನಗೇ ಬಂದು ಸುತ್ತಿಕೊಂಡಿತು
ನೀತಿ ಪಾಠ ಹೇಳುವ ಬರಹ
ಧನ್ಯವಾದಗಳು.
ಹಹ್ಹ ವಿಡಂಬನಾತ್ಮಕ ಲೇಖನ.ಅಭಿನಂದನೆಗಳು ಸಾರ್.
ಧನ್ಯವಾದಗಳು.
ಚೆನ್ನಾಗಿದೆ. ಒಳ್ಳೆಯ ಸಂದೇಶವಿದೆ ಕತೆಯಲ್ಲಿ.
ಧನ್ಯವಾದಗಳು.
ಅರ್ಥಪೂರ್ಣವಾದ ಪುಟ್ಟ ಕಥೆ
ಧನ್ಯವಾದಗಳು.
ಸೊಗಸಾದ ವಿಡಂಬನಾತ್ಮಕ ಕಥೆ ಮನಮುಟ್ಟುವಂತಿದೆ.
ಧನ್ಯವಾದಗಳು.