ಕವಿ ನೆನಪು 31: ಕೆ ಎಸ್ ನ ಅವರ ಮಂತ್ರಾಲಯದ ಪ್ರವಾಸಗಳು
ಒಂದು ದಿನ ಏಕೋ ಅಮ್ಮ ಬೇಸರದಿಂದ “ಕವಿ ಅಂತ ಕಟ್ಟಿಕೊಂಡು ಏನು ಸುಖ. ಬರೀ ತಾಪತ್ರಯವೇ ಆಯ್ತು” ಎಂದೆಲ್ಲಾ ಅಡುಗೆ ಮನೆಯಿಂದಲೇ ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದರು.ಯಥಾಪ್ರಕಾರ ಅಪ್ಪನದು ಮೌನ.ಅಷ್ಟರಲ್ಲಿ ಅಂಚೆಯವ ಒಂದು ಕಾಗದ ಕೊಟ್ಟು ಹೋದ. ಅದನ್ನು ತೆರೆದು ಓದಿದ ಅಪ್ಪ “ಲೇ”ಎಂದರು.
ತಕ್ಷಣ ಅಮ್ಮ “ಕಾಫೀನೂ ಇಲ್ಲ, ಕಲಗಚ್ಚೂ ಇಲ್ಲ ಸದ್ಯ ಅಡುಗೆ ಕೆಲಸ ಆದರೆ ಸಾಕಾಗಿದೆ” ಎಂದು ತಮ್ಮ ಎಂದಿನ ದನಿಯಲ್ಲಿ ಉತ್ತರಿಸಿದರು.
“ಅದಲ್ವೆ,ರಾಯಚೂರಿನಿಂದ ರಾಜಮ್ಮನವರ ಗಂಡ ಅನಂತಯ್ಯನವರು ಕಾಗದ ಬರೆದಿದ್ದಾರೆ (ಅನಂತಮೂರ್ತಿ ರಾಯಚೂರಿನ ಪ್ರಸಿದ್ಧ ಸಮಾಜ ಸೇವಕರು ಮತ್ತು ಡಾ.ರಾಜಲಕ್ಷ್ಮಿ ಅಲ್ಲಿನ ಖ್ಯಾತ ವೈದ್ಯರು. ನರ್ಸಿಂಗ್ ಹೋಮ್ ಹೊಂದಿದ್ದರು) ಮುಂದಿನ ತಿಂಗಳು ಹತ್ತನೆಯ ತಾರೀಖು ರಾಯಚೂರಿನಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳಬಹುದೇ ಅಂತ ಕೇಳ್ತಾ ಇದ್ದಾರೆ.ಅವರ ಭಾವಮೈದುನನ ಹತ್ತಿರ ಟ್ರೈನ್ ಟಿಕೆಟ್ ಕಳಿಸ್ತಾರಂತೆ, ರಾಯಚೂರಿಗೆ ಹೋದ ದಿನ ಬೆಳಗ್ಗೆ ಮಂತ್ರಾಲಯಕ್ಕೆ ಹೋಗಿ ದರ್ಶನ ಪ್ರಸಾದ ಮುಗಿಸಿ ಬಂದು, ಸಾಯಂಕಾಲ ಕಾರ್ಯಕ್ರಮ ಅಂತೆ.ಮಾರನೆಯ ದಿನ ಬೆಳಗ್ಗೆ ಅವರ ಮನೇಲಿ ಉಪಾಹಾರ ಗೋಷ್ಠಿ.ಎಷ್ಟು ಜನ ಬರ್ತೀರಿ ಅಂತ ಕೇಳಿದಾರೆ?” ಒಂದೇ ಉಸುರಿನಲ್ಲಿ ಹೇಳಿದರು ನಮ್ಮ ತಂದೆ. ಶಾಂತವಾಯಿತು ಅಬ್ಬರಿಸುತ್ತಿದ್ದ ಕಡಲು. ಅಮ್ಮನಿಗೀಗ ಮಂತ್ರಾಲಯದತ್ತ ಚಿತ್ತ. ನಮ್ಮ ತಂದೆ ಅವರನ್ನು ಬಿಟ್ಟು ಹೋಗುವುದಿಲ್ಲ ಎಂಬುದು ಅವರಿಗೆ ಖಾತರಿಯಾಗಿತ್ತು.
“ಇಬ್ಬರೇ ಅಂತ ಬರೀರಿ. ಉಳಿದವಿರಿಗೆಲ್ಲ ಪಾಪ ಎಲ್ಲಿ ಬಿಡುವಿರುತ್ತೆ? ಚಟ್ಣಿಪುಡಿ ಮುಗಿದಿದೆ.ಈಗಲೇ ಮಾಡಿಡುತ್ತೀನಿ.” ಎಂದರು.
ನಮ್ಮ ತಂದೆ ಅದೇ ವೇಗದಲ್ಲಿ ಒಂದು ಸಮ್ಮತಿ ಪತ್ರ ಬರೆದು “ಲೋ ಸತ್ಯಾ(ಒಮ್ಮೆಮ್ಮೆ ನನ್ನನ್ನು ತಮ್ಮ ಪ್ರೀತಿಯ ಸೋದರ ಸತ್ಯನಾರಾಯಣನ ನೆನಪಿನಲ್ಲಿ ನನ್ನನ್ನು ಹೀಗೆ ಕರೆಯುತ್ತಿದ್ದರು. ನಾವಿಬ್ಬರು ಸ್ವಲ್ಪ ನೋಡಲು ಒಂದೇ ತರಹ ಇದ್ದೇವೆ), ಸ್ವಲ್ಪ ಜಾಗ್ರತೆ ಇದನ್ನ ಪೋಸ್ಟಿಗೆ ಹಾಕು” ಎಂದರು.
ನಾನು “ಆಗಲಿ,ಪೋಸ್ಟ್ ಮಾಸ್ಟರ್ ತಿರುಪತಯ್ಯನವರ ಕೈಗೇ ಕೊಡುತ್ತೇನೆ ಚಿಂತೆ ಬೇಡ” ಎಂದು ತಮಾಷೆ ಮಾಡಿದಾಗ,
“ಹಾಗೇ ಮಾಡು” ಎನ್ನುತ್ತ ತಮ್ಮ ಯಾವುದೋ ಕವಿತೆಯ ಸಾಲುಗಳನ್ನು ಗುನುಗತೊಡಗಿದರು.
ಅಮ್ಮನ ಬಳಿ ಹೋಗಿ “ಏನಾಯ್ತು ನಿನ್ನ ತಾಪತ್ರಯ ನಿವೇದನೆ?”ಎಂದು ಕೀಟಲೆ ಮಾಡಿದೆ.
“ಎಲ್ಲ ಇದ್ದದ್ದೇ ಹೋಗೋ. ನಿನಗೂ ಮದುವೆಯಾಗ್ಲಿ ಇವೆಲ್ಲ ಅರ್ಥವಾಗುತ್ತೆ” ಎನ್ನುತ್ತ ತಮ್ಮ ಕಾಯಕದಲ್ಲಿ ಮುಳುಗಿಹೋದರು. ಹೀಗೆ ಒಂದು ಪ್ರವಾಸದ ಆಹ್ವಾನ ಸಂಸಾರಶಾಂತಿಯನ್ನು ಕೊಂಡು ತಂದಿತ್ತು.
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31129
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಚೆನ್ನಾಗಿದೆ ಸರ್
ಚೆನ್ನಾಗಿ. ಬರೆದಿರುವಿರಿ
ಮಹಾನ್ ವ್ಯಕ್ತಿಗಳಾದ ತಮ್ಮ ತಂದೆಯವರ ಶಾಂತ ಸ್ವಭಾವದ ಪರಿಚಯವಾಯ್ತು.. ಲೇಖನ ಮಾಲೆಯು ಅದ್ಭುತವಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.
ನಾನು ಗಮನಿಸಿದ ಕೆಲವು ಅಣ್ಣ ತಮ್ಮ; ಅಕ್ಕ ತಂಗಿ;ಗಂಡ ಹೆಂಡತಿಯರಲ್ಲಿ ಈ ರೀತಿಯ ಜಗಳ ಕಾಣಿಸುತ್ತದೆ. ಗಂಡ ಹೆಂಡತಿಯರ ಜಗಳ ನೋಡಿದ್ರೆ ಅವರಿಗೆ ಈ ಜನ್ಮದಲ್ಲಿ ರಾಜಿ ಆಗುವುದಿಲ್ಲ ಅನ್ನಿಸ್ತದೆ !. ಆತ್ಮೀಯತೆ ಸ್ನೇಹಗಳಿಗೆ ಧಕ್ಕೆ ತರದ ಇಂತಹ ಜಗಳಗಳು ನಮ್ಮ ಮನಸ್ಸನ್ನು ಇನ್ನೂ ಹತ್ತಿರ ಇಡಬಲ್ಲುದೆ !!
ನಿಜ