ಕವಿ ಕೆ.ಎಸ್.ನ ನೆನಪು

ಕವಿ ನೆನಪು 30 : ಪೂರ್ವಜರ ಊರು ಕಿಕ್ಕೇರಿಯ ಮೊದಲ ಪ್ರವಾಸ.

Share Button
ಕವಿ ಕೆ ಎಸ್ ನ

ಕಳೆದ ವರುಷ  ಹಿಂದೂ ದಿನಪತ್ರಿಕೆಯಲ್ಲಿ ಕವಿ ಕೆ ಎಸ್ ನ ಹುಟ್ಟಿದ ಮತ್ತು ಬಾಲ್ಯವನ್ನು ಕಳೆದ ಮನೆ ಎಂದು ಕಿಕ್ಕೇರಿಯ ಒಂದು ಹಳೆಯ ಮನೆಯ ಚಿತ್ರ ಪ್ರಕಟವಾಗಿತ್ತು. ವಾಸ್ತವವಾಗಿ  ಕೆ ಆರ್‌ ಪೇಟೆ ತಾಲೂಕಿನ ಕಿಕ್ಕೇರಿ ನಮ್ಮ ತಂದೆಯವರ ಪೂರ್ವಜರ ಸ್ಥಳ. ನಮ್ಮ ತಂದೆಯವರು ಹುಟ್ಟಿದ್ದು ಹೊಸಹೊಳಲು ಎಂಬ ಗ್ರಾಮದಲ್ಲಿ. ನಮ್ಮ ಅಜ್ಜಿ ನಾಗಮ್ಮ ಅವರ ತವರುಮನೆ. ಕವಿ ಹುಟ್ಟಿದ ಹಿಂದಿನ ವರುಷ ಕಾರಣಾಂತರದಿಂದ (ಬಹುಶಃ ಪ್ಲೇಗ್ ನ ದಾಳಿಯಿಂದ) ತಮ್ಮ ಮನೆ ಆಸ್ತಿಗಳನ್ನು ಬಂದಷ್ಟು ಹಣಕ್ಕೆ ವಿಲೇವಾರಿ ಮಾಡಿ ಮೈಸೂರಿನ ಹಳ್ಳದಕೇರಿಗೆ (ಈಗಿನ ಕೆ ಎಸ್ ಆರ್ ಟಿ ಸಿ ಯ ಹಿಂದಿನ ರಸ್ತೆ) ಪ್ರದೇಶಕ್ಕೆ ಅವರೆಲ್ಲ ವಲಸೆಗೊಂಡರು. ನಮ್ಮ ತಂದೆ ಆತ್ಮಚರಿತ್ರೆಯನ್ನು ಬರೆದು ವಿವರಗಳನ್ನು ದಾಖಲಿಸದೆ ಇರುವುದರಿಂದ ಈ ವಾಸ್ತವಾಂಶಗಳು ಕೇವಲ ಮೌಖಿಕ ಮಟ್ಟದಲ್ಲಿ ಉಳಿದುಕೊಂಡಿದೆ.

ನಮ್ಮ ತಂದೆ ಮೊದಲ ಬಾರಿ ಕಿಕ್ಕೇರಿಯನ್ನು ನೋಡಿದ್ದು1970 ರಲ್ಲಿ. ಆ ಊರಿನ ಯುವಕ ಸಂಘ ಒಂದು ಅದ್ದೂರಿಯ ಸತ್ಕಾರ ಸಮಾರಂಭ ಏರ್ಪಡಿಸಿದಾಗ. ಹಾ ಮಾ ನಾಯಕರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಅನಂತಮೂರ್ತಿ ಹಾಗೂ ಸುಜನಾ (ಎಸ್ ಜೆ ನಾರಾಯಣಸೆಟ್ಟಿ ಅವರ ನಿಜ ಜೀವನದ ಹೆಸರು .“ಯುಗಸಂಧ್ಯಾ” ಎಂಬ ಮಹಾಕಾವ್ಯ ಬರೆದಿದ್ದಾರೆ. ಹೊಸ ಹೊಳಲಿನವರು)  ಕವಿಯ ಕಾವ್ಯ ಕುರಿತು ಮಾತನಾಡಿದರು.

ಮರುದಿನ ನಮ್ಮ ತಂದೆ ಕಿಕ್ಕೇರಿಯಲ್ಲಿ ವಾಸವಿದ್ದ ಕೆಲವು ನೆಂಟರನ್ನು ಭೇಟಿಯಾದರು. ಆಗ ಒಬ್ಬ ಯುವಕ ಬಂದು ”ನಮ್ಮ ತಾಯಿಯವರನ್ನು ಕುರಿತು ನೀವು ಶಾನುಭೋಗರ ಮಗಳು ಪದ್ಯ ಬರೆದಿದ್ದೀರಿ” ಎಂದು ಸಂತಸ ವ್ಯಕ್ತಪಡಿಸಿದನಂತೆ.

ಕಿಕ್ಕೇರಿಯಲ್ಲಿ ಕೆ ಎಸ್ ನ ಪೂರ್ವಜರು ಇದ್ದ ಮನೆ

ಕಿಕ್ಕೇರಿಯ ಕಿಕ್ಕೇರಮ್ಮ, ಬ್ರಹ್ಮಲಿಂಗೇಶ್ವರ ಹಾಗೂ ಲಕ್ಷ್ಮಿನರಸಿಂಹ ದೇವಾಲಯಗಳು (ಹಾಗೆಯೇ ಹೊಸಹೊಳಲಿನ ದೇವಾಲಯಗಳು ಕೂಡ) ಹೊಯ್ಸಳ ಶಿಲ್ಪಕಲೆಗೆ ಹೆಸರುವಾಸಿಯಾದವು. ಬೇಲೂರು,ಹಳೇಬೀಡು, ಸೋಮನಾಥಪುರಗಳ ದೇವಾಲಯಗಳಿಗೆ ಹೆಗಲೆಣೆಯಾದವು.

ಕಿಕ್ಕೇರಿಯ ಜನರಿಗೆ ನಮ್ಮ ತಂದೆಯವರನ್ನು ಕಂಡರೆ ಅತೀವ ಅಭಿಮಾನ (ಇಡೀ ಮಂಡ್ಯ ಜಿಲ್ಲೆಯಲ್ಲಿ ಇಂಥ ಕವಿ ಪ್ರೀತಿ ಹೊನಲು ಹೊನಲಾಗಿದೆ. ಮೂರು ವರುಷ ಮಂಡ್ಯದಲ್ಲಿ ಬ್ಯಾಂಕ್ ಸೇವೆ ಸಲ್ಲಿಸಿರುವ ನನಗೆ ಇದರ ಅಪೂರ್ವ ಅನುಭವವಾಗಿದೆ). ಕರ್ನಾಟಕ ಸರ್ಕಾರ ರಚಿಸಿರುವ ಕೆ ಎಸ್ ನ ಟ್ರಸ್ಟ್ ಕಿಕ್ಕೇರಿಯನ್ನು ಸಾಂಸ್ಕೃತಿಕ ಕೇಂದ್ರವಾಗಿಸುವ, ಕವಿಯ ಮನೆಯನ್ನು  ಈಗ ವಾಸ ಇರುವವರಿಂದ ಪಡೆದು ವಸ್ತುಸಂಗ್ರಹಾಲಯ ನಿರ್ಮಿಸುವ ಹಾಗೂ ಅಲ್ಲಿನ 650 ಎಕರೆಗೂ ಹೆಚ್ಚು ವಿಸ್ತಾರವಾದ ಕೆರೆಯನ್ನು ಕೆ ಎಸ್ ನ ಸರೋವರ ಎಂದು ನಿರ್ಮಿಸುವ ಕ್ರಿಯಾಯೋಜನೆಯನ್ನು ಹೊಂದಿದೆ. ಅವೆಲ್ಲ ಸಾಕಾರಗೊಂಡರೆ “ಕಿಕ್ಕೇರಿ” ಕಾವ್ಯಪ್ರಿಯರೆಲ್ಲರ ನೆಚ್ಚಿನ ಭೇಟಿಯ ತಾಣವಾದೀತು.

 (ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31065

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

4 Comments on “ಕವಿ ನೆನಪು 30 : ಪೂರ್ವಜರ ಊರು ಕಿಕ್ಕೇರಿಯ ಮೊದಲ ಪ್ರವಾಸ.

  1. ಅಪರೂಪದ ವಿಚಾರಗಳನ್ನೊಳಗೊಂಡ ಲೇಖನ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ

  2. ನಿಮ್ಮ ತಂದೆಯವರ ಹುಟ್ಟೂರು ಕಿಕ್ಕೇರಿಯ ಬಗೆಗಿನ ವಿವರಗಳು ಮುದನೀಡಿದವು. ಅಪೂರ್ವ ಮಾಹಿತಿಗಳು ತುಂಬಿರುವ ಈ ಲೇಖನ ಮಾಲೆಯು ಬಹಳ ಚೆನ್ನಾಗಿದೆ. ಧನ್ಯವಾದಗಳು ಸರ್.

  3. ಹೌದು ಸರ್. ಕೆ.ಎಸ್.ನ. ಎಲ್ಲರ ಹೃದಯಕ್ಕೆ ಲಗ್ಗೆ ಹಾಕಿದವರು. ಅವರ ನಿವಾಸಗಳು ಸ್ಮಾರಕಗಳಗಬೇಕು. ಸರಕಾರ ಕಿವಿಗೊಡಬೇಕು ಈ ಕರೆಗೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *