ಬೊಗಸೆಬಿಂಬ

ಮುಪ್ಪಡರಿತೆಂದು ಮಂಕಾಗದಿರಿ

Share Button

ಉತ್ಸಾಹ ಅಸುನೀಗಿದ ಮುಖ ಹೊತ್ತು ಕುಳಿತಿರುವ ಆಕೆಯನ್ನು ನೋಡಿದಾಗೆಲ್ಲ ಹೃದಯ ತಾನೇ ತಾನಾಗಿ ಮರುಕದ ಮೂಸೆಯೊಳಗೆ ಜಾರಿ ಬತ್ತಿದ ಕಣ್ಣಾಲಿಗಳೊಮ್ಮೆ ತುಂಬಿ ನಿಲ್ಲುತ್ತವೆ. ಹಸಿಗರಿಕೆಹುಲ್ಲಿನಂತೆ ನಳನಳಿಸಿ ನಗೆ ಹಬ್ಬಿಸುತ್ತಿದ್ದ ಆ ಮಹಿಳೆ ಅದೇಕೋ ಇತ್ತೀಚೆಗೆ ತೀರ ಮನದ ಸಂತಸವನ್ನೆಲ್ಲ ಗಾಳಿಗೆ ತೂರಿ ಹೀಗೆ, ಏಕಾಂಗಿಯಂತೆ ಹಾದಿ ತಪ್ಪಿದ ಹರಿಣದಂತೆ ಕಾಣುತ್ತಾಳಲ್ಲಾ ಏನಾಗಿದೆ ಆಕೆಗೆ?

ಯಾರನ್ನಾದರೂ ವಿಚಾರಿಸಿ ಬೇಡದ ವಿಷಯಗಳ ತಲೆಯಲ್ಲಿ ತುಂಬಿಕೊಂಡು ಮನಸ್ಸಿನಲ್ಲಿ ಕಳೆ ಬೆಳೆಸಿಕೊಳ್ಳಲಿಚ್ಛೆಯಿಲ್ಲದೆ, ಹೇಗಾದರೊಮ್ಮೆ ಮಾತಾಡಿಸಲೇ ಬೇಕೆಂದು ಹಠ ತೊಟ್ಟಿದ್ದಾಯಿತು. ಅಂತೆಯೇ ಒಮ್ಮೆ ಹೊರಗೆಲ್ಲೋ ಹೋಗಿ ಬರುವಾಗ ಅವರು ದಾರಿಯಲ್ಲಿ ಸಿಗುವ ಗಣಪತಿ ದೇವಸ್ಥಾನದ ಮೆಟ್ಟಿಲ ಮೇಲೆ ಏಕಾಂಗಿಯಾಗಿ ಕುಳಿತಿದ್ದುದನ್ನು ಕಂಡು, ತಕ್ಷಣ ಲಗುಬಗೆಯಲ್ಲಿ ಹೆಜ್ಜಗಳು ಅವರ ಹತ್ತಿರ ಹೋಗಲು ಕಾತರಿಸಿದವು.

‘ರಂಗಮ್ನೋರೇ….. ರಂಗಮ್ನೋರೇ’……ಬೆಚ್ಚಿಬಿದ್ದ ಆಕೆ ಓಹೋ ‘ನೀವು…. ಆಕಡೆ ಮನೆಗೆ ಬಂದಿರೋವ್ರಲ್ಲವಾ? ಚೆನ್ನಾಗಿದ್ದೀರಾ? ನಾನು ರಂಗಮ್ಮನಲ್ಲ, ರಾಜಮ್ಮ’. ಹೀಗೆ ಒಂದೆರಡು ಲೋಕಾಭಿರಾಮವಾಯಿತು. ಮತ್ತೆ ಸಿಗುವೆನೆಂದು ವಾಪಸ್ಸಾಗಿದ್ದೂ ಆಯಿತು. ಹೀಗೆ ನಾಲ್ಕಾರು ಬಾರಿಯ ಭೇಟಿಯಲ್ಲಿ ಕೊಂಚ ಸನಿಹವಾದರು. ಮನಸ್ಸು ಬಿಚ್ಚಿಡಬಹುದೆನಿಸಿತು.

‘ಅದ್ಸರಿ ಅದ್ಯಾಕೆ ಆಕಾಶ ಹೊತ್ತಿರುತ್ತೀರಿ ತಲೆ ಮೇಲೆ? ಇಳಿಸಬಾರದೇ? ಕೊಡಿ ನನಗಾದ್ರೂ..ನಾನೂ ಸ್ವಲ್ಪ ಹೊರಬಹುದು’. ನಕ್ಕವರೇ ತಮ್ಮ ಗಂಡನ ನಿವೃತ್ತಿ, ಸಮಯ ಕೊಲ್ಲುವ ಬಗೆ, ಹಣಕಾಸಿನಲ್ಲಿ ಸಲೀಸಾಗಿ ಕಯ್ಯಾಡಿಸಲಾಗದ ಇಕ್ಕಟ್ಟು..ಒಂದಲ್ಲಾ ಎರಡಲ್ಲಾ ಅವರ ಚಿಂತೆ! ಹಾಗಾದ್ರೆ ಮೊದಲಿರಲಿಲ್ಲವಾ ಇದೆಲ್ಲಾ? ಇತ್ತು. ಆದರೆ ಇವರಿಗೆ ಕೈತುಂಬುವ ದುಡಿಮೆ ಇತ್ತಲ್ಲ? ರಿಟೈರ್‍ಡಾದ ಮೇಲೆ ಸಾಕಷ್ಟು ಹಣ ಬಂದಿದೆ…..? ಪೆನ್ಷನ್ ಇದೆ ಅಲ್ವಾ? ಏನಿದ್ದರೇನಮ್ಮಾ? ಮಗನೇ ಕೈಬಿಟ್ಟು ಹೋದನಲ್ಲಾ? ಮೊದಲೂ ಹೋಗಿದ್ದ ಅಲ್ಲವೇ? ಅವಳ್ಯಾರನ್ನೋ ಕಟ್ಟಿಕೊಂಡು ಹೋಗಿದ್ದೇ ಚಿಂತೆ. ನೀವು ಕಟ್ಟಿದ್ದಾ? ಅಲ್ಲ.. ಮತ್ತೆ ಚಿಂತೆಯೇಕೆ? ಮೊದಲೇ ಕಟ್ಟಿಕೊಂಡು ಹೋಗಿದ್ದಲ್ಲವೇ? ನಿಮ್ಮವರ ನಿವೃತ್ತಿಗಿಂತ ಮೊದಲು? ನಿಜಾ.. ಮತ್ತೀಗೇಕೆ ಈ ಯೋಚನೆಗಳು? ಏನೂ ಇಲ್ಲ ಇವರಿಗೆ ಹೀಗಾಯ್ತಲ್ಲಾ ಅಂತ! ಹೇಗಾಯ್ತಲ್ಲಾ ಅಂತ? ಅದೇ ರಿಟೈರ್‍ಡು..ಆಗ್ಲೇ ಬೇಕಲ್ಲಾ? ಹೌದು ಆಗಿಬಿಡ್ತಲ್ಲ..ಮುಂದೆ ಹೇಗೆ ನಮ್ಮ ಜೀವನ? ಹಾಗಾದ್ರೆ ಈ ಹಿಂದೆ ನೀವು ತುಂಬಾ ಸುಖವಾಗಿದ್ರೇನೋ.. ಅಯ್ಯೋ ಏನು ಸುಖವಮ್ಮಾ..ಸಂಸಾರದ ನೊಗಕ್ಕೆ ಕೊರಳು ಕೊಟ್ಟದ್ದೇ ಆಯ್ತು ಅವತ್ತಿಂದ ಈವತ್ತಿನವರೆಗೂ ಅದೇ ನೋವುಗಳು. ಹಾಗಾದ್ರೆ ಕಷ್ಟ ಇವತ್ತಿನದಲ್ಲ..! ಮತ್ಯಾಕೆ ಇವತ್ತು ಬಂದೊದಗಿದ ಕಷ್ಟಗಳೇನೋ ಅನ್ನುವ ಹಾಗೆ ಕೊರಗ್ತಿದೀರಿ? ನಮಗಲ್ಲದೆ ಕಷ್ಟ ಇನ್ಯಾರಿಗೆ ಬರಬೇಕು? ಅದರಲ್ಲೂ ಏನಿದೆ ನಿಮಗೆ ಕಷ್ಟ? ಇರಲು ಮನೆಯಿದೆ..ಖರ್ಚಿಗೆ ಪೆನ್ಷನ್ ಇದೆ. ಅಷ್ಟೋ ಇಷ್ಟೋ ದುಡ್ಡಿಟ್ಟಿದೀರಿ…ಆಪತ್ಕಾಲಕ್ಕೆ!

(ಚಿತ್ರಕೃಪೆ: ಅಂತರ್ಜಾಲ)

ಆಕೆ ಒಂದು ಕ್ಷಣ ಮುಖ ನೋಡುತ್ತಾ ಸುಮ್ಮನೆ ಕುಳಿತರು. ವಯಸ್ಸಾಯಿತೆಂದು ಕೊರಗುತ್ತಾ ಕುಳಿತದ್ದು, ಬೇಡದ ಕಷ್ಟಗಳನ್ನು ಹೇಳಿಕೊಂಡು ಸುಮ್ಮಸುಮ್ಮನೆ ಸಂಕಟ ಪಡುತ್ತಿದ್ದುದೆಲ್ಲ ಅವರಿಗೆ ಅರ್ಥವಾಗಿಹೋಯಿತು. ಆದರೂ.. ಪಕ್ಕದ  ಮನೇವು ಏನಂತಾರೆ ಗೊತ್ತೇ? ಇನ್ಮುಂದೆ ಹುಷಾರು. ನಮ್ಮನ್ನ ನಾವೇ ಕಾಪಾಡ್ಕೋಬೇಕು. ಯಾವ ಮಕ್ಳು ಮರಿಗಳೂ ಕಾಪಾಡಲ್ಲ ಅಂತಿರ್‍ತಾರೆ. ಆಗಂತೂ ನನಗೆ ಯಾರೂ ಇಲ್ವಲ್ಲಪ್ಪ ಅಂತ ಬೇಜಾರಾಗುತ್ತೆ. ಅನ್ನಲಿ ಬಿಡಿ ನೀವೇಕೆ ಕೇಳ್ತೀರಿ? ವಯಸ್ಸಾದ ಮೇಲೆ ಜೀವನ ಕಷ್ಟ. ನೀವು ಆರೋಗ್ಯ ಚೆನ್ನಾಗಿ ನೋಡ್ಕೋಬೇಕು ಅಂತ ಈಕಡೆ ಪಕ್ಕದವರು ಎಚ್ಚರಿಕೆ ಹೇಳುತ್ತಲೇ ಇರ್‍ತಾರೆ. ಹೇಳಲಿ ಬಿಡಿ ಅಯ್ಯೋ! ನಂಗೆ ಶುಗರ್ರು ಬಿ.ಪಿ. ಎಲ್ಲಾ ಇದಿಯಲ್ಲಮ್ಮ..ಇರ್‍ಲಿ ಬಿಡಿ ಜಗತ್ತಲ್ಲಿ ನಿಮ್ಮೊಬ್ಬರಿಗೇನಾ ಇರೋದು? ನಮ್ಮನೆಯವರಿಗೇನಾದ್ರೂ ಆಗಿಬಿಟ್ರೆ ಅಂತ ಭಯಾ.. ಈ ಜಗತ್ತು ವಿಶಾಲವಾಗಿದೆ ರಾಜಮ್ಮೋರೆ. ಏನೇನೂ ಇಲ್ಲದ, ಮಾನ ಮುಚ್ಚಲಿಕ್ಕೂ ಬಟ್ಟೆಯಿರದ, ತಿನ್ನಲಿಕ್ಕೆ ಅನ್ನವೂ ಗತಿಯಿಲ್ಲದ ಸಾವಿರಾರು ಬಡಬಗ್ಗರು ಪ್ರಪಂಚದಲ್ಲಿ ನಮ್ಮ ಸುತ್ತಮುತ್ತ ಹೇಗಿದ್ದಾರೆ ಗೊತ್ತೇ? ಅವರೂ ನಿಮ್ಮಂತೆ ಯೋಚಿಸಿದ್ದರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು.

ನಿಮಗೇನಾಗಿದೆ. ಎಲ್ಲ ರೀತಿಯಲ್ಲೂ ಸುಖವಾಗಿದ್ದೀರಿ. ಬರೀ ಇಲ್ಲ ಇಲ್ಲ ಅಂತ ಕೊರಗಿ ಕಣ್ಣೀರು ಹಾಕಿ ನಿಮ್ಮೆಜಮಾನರನ್ನೂ ಚಿಂತೆಗೆ ಸಿಲುಕಿಸಬೇಡಿ. ಕಷ್ಟ ಇಲ್ಲವೇ ಇಲ್ಲ. ಬಂದರೂ ಬರಲಿ ಗೋವಿಂದನ ದಯೆ ಇರಲಿ ಅಂತ ಹಾಯಾಗಿರಲು ಆಗೋಲ್ಲವೇ?ರಾಜಮ್ಮ ಮುಖ ಕೆಳಗೆ ಹಾಕಿದರು. ಬರ್‍ತೇನೆ ಎಂದು ತಲೆಯೆತ್ತಿ ಹೊರಟಾಗ ಆಗಾಗ ಸಿಗ್ತಿರಮ್ಮಾ ನೀನು ಎಂದರು ರಾಜಮ್ಮ. ಹೌದು ಇಂತವರಿಗೆ ಆಗಾಗ ಸಿಕ್ಕಿ ಕೊಂಚ ಅವರ ಬಗ್ಗೆ ಅವರಿಗೆ ಆತ್ಮವಿಶ್ವಾಸ ಮೂಡಿಸಬೇಕೆಂಬುದೇ ಈಗ ಗುರಿಯಾಗಿದೆ.

– ಬಿ.ಕೆ.ಮೀನಾಕ್ಷಿ, ಮೈಸೂರು.

12 Comments on “ಮುಪ್ಪಡರಿತೆಂದು ಮಂಕಾಗದಿರಿ

  1. ಹಾ ಗೆಳತಿ ಈರೀತಿ ಬದುಕಿನಲ್ಲಿ ಭರವಸೆ ತುಂಬುವ ಜನ ಬೇಕು.ಆದರೆ ಅಂಥಹವರು ಬೆರಳೆಣಿಕೆಯಷ್ಟು.ಚಂದದ ಬರಹ ಅದಕ್ಕೊಂದು ನನ್ನ ನಮಸ್ಕಾರಗಳು.

  2. ಏನೋ ಚಿಂತೆಯಿಂದ ಮನಸ್ಸು ಕುಗ್ಗಿದಾಗ ಅದಕ್ಕೆ ಆಸರೆಯಾಗಿ ಬೇಕಾಗಿರುವುದು ಧೈರ್ಯ ತುಂಬುವ ನುಡಿಗಳು..ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ ತಮ್ಮ ಲೇಖನ.. ಧನ್ಯವಾದಗಳು ಮೇಡಂ.

  3. ನಿಮ್ಮ ಕುಗ್ಗಿದವರಿಗೆ ಧೈರ್ಯ ತುಂಬುವ ಲೇಖನ ಬಹಳ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *