ವಿಶಿಷ್ಟ ಷಷ್ಠಿ
ನವರಾತ್ರಿ, ದೀಪಾವಳಿ, ತುಳಸಿಪೂಜೆ ಇತ್ಯಾದಿ ದೊಡ್ಡ ಹಬ್ಬಗಳೆಲ್ಲ ಮುಗಿದು ಚಳಿಗಾಲದ ಜಾತ್ರೆಗಳು, ಉತ್ಸವಗಳು ಪ್ರಾರಂಭವಾಗುತ್ತಿವೆ ಅಲ್ಲವೆ? ಅವುಗಳಲ್ಲಿ ಮೊತ್ತ ಮೊದಲಾಗಿ ಬರುವ ಸುಬ್ರಹ್ಮಣ್ಯ ಷಷ್ಠಿ ಉತ್ಸವವು ನಮ್ಮ ಜಿಲ್ಲೆಯಲ್ಲಿ ಅತೀ ಪ್ರಾಮುಖ್ಯತೆಯನ್ನು ಪಡೆದಿದೆ, ಯಾಕೆ ಗೊತ್ತೇ.. ನಮ್ಮದು ನಾಗಾರಾಧನೆಯ ನಾಡು. ಮಾರ್ಗಶಿರಮಾಸ ಶುಕ್ಲಪಕ್ಷದ ಆರನೇ ದಿನವನ್ನು ಚಂಪಾಷಷ್ಠಿ ಎನ್ನುವರು. ಈ ದಿನ ಹರನ ಕುವರ ಕಾರ್ತಿಕೇಯನ ಜನನವಾಯಿತೆಂಬ ನಂಬಿಕೆಯಿದೆ. ಈಗ ಈ ಷಷ್ಠಿ ಮಹೋತ್ಸವಕ್ಕಿರುವ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ.
ಹಿಂದೆ ವಜ್ರನಾಕ ಎಂಬ ಮಹಾ ಪರಾಕ್ರಮಶಾಲಿ ಅಸುರನಿದ್ದನು. ಅವನ ಮಡದಿ ವಜ್ರಾಂಗಿನಿ. ಇವರ ಮೂವರು ಮಕ್ಕಳಲ್ಲೊಬ್ಬನೇ ತಾರಕಾಸುರ. ಇವನು ಮಹಾಬಲಶಾಲಿ, ಪರಾಕ್ರಮಿ. ಜೊತೆಗೆ, ಕಠಿಣ ತಪವನ್ನಾಚರಿಸಿ, ತನ್ನ ಸಾವು ಹರನ ಸುತನಿಂದ ಮಾತ್ರ ಎಂಬುದಾಗಿ ವರವನ್ನು ಪಡೆದಿದ್ದ.
ಇತ್ತ ಶಿವನು ದಕ್ಷಯಜ್ಞದಲ್ಲಿ ತನ್ನ ಪತ್ನಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಒಬ್ಬಂಟಿಗನಾಗಿ ಯೋಗಿಯಂತೆ ತಪಸ್ಸಿನಲ್ಲಿ ಮಗ್ನನಾಗಿದ್ದನು. ಆದ್ದರಿಂದ ‘ಶಿವನಿಗೆ ಪುತ್ರ ಜನನವಾಗುವ ಸಾಧ್ಯತೆಯೇ ಇಲ್ಲ; ತನಗೆ ಸಾವೇ ಇಲ್ಲ, ತಾನಿನ್ನು ಚಿರಂಜೀವಿ’ ಎಂದು ಬೀಗುತ್ತಾ, ಅಹಂಕಾರದಿಂದ ತ್ರಿಲೋಕಗಳನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳುವ ಹವಣಿಕೆಯಲ್ಲಿದ್ದ ತಾರಕಾಸುರ. ದೇವಲೋಕವನ್ನು ವಶಪಡಿಸಿಕೊಳ್ಳಲು ಸ್ವರ್ಗಲೋಕಕ್ಕೆ ಪದೇ ಪದೇ ನಡೆಸುತ್ತಿದ್ದ ಧಾಳಿಯಿಂದಾಗಿ ಅದು ಸುರರ ಕೈತಪ್ಪಿ ಹೋಗುವ ಚಿಂತೆಯು ಸ್ವರ್ಗಾಧಿಪತಿ ಇಂದ್ರನಿಗೆ ಕಾಡಲಾರಂಭಿಸಿತು. ತಾರಕಾಸುರನ ವಧೆಯಾಗಬೇಕಾದರೆ ಶಿವನಿಗೆ ಪುತ್ರ ಜನನವಾಗಬೇಕು.. ಅಂದರೆ ಅವನಿಗೆ ಮದುವೆಯಾಗಬೇಕು. ಇದು ಸಾಧ್ಯವೇ..? ಎಂದು ಚಿಂತಿಸಿದ ದೇವೇಂದ್ರ. ಸ್ವರ್ಗಕ್ಕೆ ಕಷ್ಟ ಬಂದಾಗ ದೇವೇಂದ್ರನು ಯಾರಲ್ಲಿ ಮೊದಲು ಸಹಾಯಕ್ಕಾಗಿ ಓಡುವುದು? ಹೌದು.. ನಮಗೆಲ್ಲಾ ಗೊತ್ತೇ ಇದೆ.. ಆಪದ್ಭಾಂಧವ.. ಶ್ರೀಹರಿ. ಸರಿ ..ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಆರಾಮವಾಗಿ ಪವಡಿಸಿ, ಲಕ್ಷ್ಮೀದೇವಿ ಕೈಯಿಂದ ಕಾಲೊತ್ತಿಸಿಕೊಳ್ಳುತ್ತಿದ್ದ ವಿಷ್ಣು ದೇವರ ಬಳಿ ಕಷ್ಟವನ್ನು ತೋಡಿಕೊಂಡ, ದೇವೇಂದ್ರ. ಯೋಚಿಸಿದ ಭುಜಗಶಯನನು, ‘ಇದಕ್ಕಿರುವ ದಾರಿಯೆಂದರೆ ಹರನ ತಪಸ್ಸನ್ನು ಕೆಡಿಸುವುದು ಹಾಗೂ ಮದುವೆಯಾಗುವಂತೆ ಮನಸ್ಸನ್ನು ಪರಿವರ್ತಿಸುವುದು. ಇದಕ್ಕೆ ಸರಿಯಾದ ವ್ಯಕ್ತಿ ಕಾಮದೇವ’ ಎಂದುಕೊಂಡ. ಹಾಗೆಯೇ ಮನ್ಮಥನಿಗೆ ಕರೆ ಹೋಯಿತು. ವಿಷಯ ತಿಳಿದ ಕಾಮದೇವನಿಗೆ ಬಹಳ ಭಯವಾಯಿತು. ‘ಸಿಟ್ಟಲ್ಲಿ ಶಿವನು ತನ್ನ ಮೂರನೇ ಕಣ್ಣನ್ನು ತೆರೆದರೆ ನನ್ನ ಗತಿಯೇನು?!’ ಎಂದು ಯೋಚಿಸಿದ. ಆದರೂ ಸ್ವರ್ಗದ ಉಳಿವಿಗೆ ಹಾಗೂ ಲೋಕೋದ್ಧಾರಕ್ಕಾಗಿ ತನ್ನ ಪ್ರಾಣಾರ್ಪಣೆಗೂ ಸಿದ್ಧವಿದ್ದ ಮನ್ಮಥನು, ತನ್ನ ಪ್ರೀತಿಯ ರತಿಯನ್ನು ಸಮಾಧಾನಿಸಿ ಶಿವನು ತಪಸ್ಸುಗೈಯ್ಯುತ್ತಿರುವಲ್ಲಿಗೆ ಹೋಗುವನು. ಅಲ್ಲಿ, ಮನ್ಮಥನು ಬಿಟ್ಟ ಸುಮಶರವು ಮಹೇಶ್ವರನ ತಪಸ್ಸನ್ನು ಭಂಗಗೊಳಿಸುವಲ್ಲಿ ಸಫಲವಾಯಿತು.
ಇತ್ತ, ತನ್ನ ತಂದೆ ದಕ್ಷಪ್ರಜಾಪತಿಯಿಂದ ಅವಮಾನಿತಳಾಗಿ ತನ್ನ ಯೋಗಾಗ್ನಿಯಿಂದಲೇ ಶರೀರ ಸುಟ್ಟುಕೊಂಡು ದೇಹತ್ಯಾಗ ಮಾಡಿದ ಮಹೇಶ್ವರಿಯು ಪರ್ವತರಾಜನ ಮಗಳು ಪಾರ್ವತಿಯಾಗಿ ಮರುಜನ್ಮ ಪಡೆಯಿತ್ತಾಳೆ. ಬೆಳೆಯುತ್ತಿರುವಾಗಲೇ ಸದಾ ಹರನ ಧ್ಯಾನದಲ್ಲಿ ನಿರತಳಾಗಿರುತ್ತಾಳೆ. ಪ್ರಾಯಕ್ಕೆ ಬಂದ ಪಾರ್ವತಿಯು, ತಪೋನಿರತ ಶಿವನಿದ್ದ ಪರ್ವತದಲ್ಲೇ ತಪಸ್ಸನ್ನು ಆಚರಿಸುತ್ತಿರುತ್ತಾಳೆ.
ಕಾಮದೇವನ ಸುಮಬಾಣ ತಗುಲಿ ಕಣ್ತೆರೆದ ಶಂಕರನು, ತಪೋಭಂಗಗೊಳಿಸಿದವರು ಯಾರೆಂದು ಬಹಳ ಕೋಪಗೊಂಡು ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ. ತಕ್ಷಣವೇ ಎದುರಿಗಿದ್ದ ಮನ್ಮಥನು ಅವನ ಕೋಪಾಗ್ನಿಗೆ ಸುಟ್ಟು ಬೂದಿಯಾಗುತ್ತಾನೆ. ಆದರೆ ತಗಲಿದ ಸುಮಬಾಣದ ದೆಸೆಯಿಂದಾಗಿ ಅಲ್ಲೇ ಶಿವಧ್ಯಾನ ನಿರತಳಾಗಿದ್ದ ಪಾರ್ವತಿಯನ್ನು ಕಂಡು, ಅವಳ ಬಗ್ಗೆ ತನ್ನ ಆಂತರ್ಯದಿಂದಲೇ ತಿಳಿದುಕೊಳ್ಳುವನು. ತನ್ನ ತಪ್ಪಿನ ಅರಿವಾಗಿ ಮನ್ಮಥನಿಗೆ ಹರನು ಜೀವದಾನ ನೀಡುವನು. ಹಾಗೆಯೇ ಕಾಮದೇವನು ಅನಂಗನಾಗಿ ಸಕಲರ ಮನಗಳಲ್ಲಿ ಉಳಿಯುವನು. ಶಿವ ಪಾರ್ವತಿಯರ ವಿವಾಹವದ ಬಳಿಕ ಜನಿಸಿದ ಬಾಲನೇ ಕಾರ್ತಿಕೇಯ.
ಮಯೂರವಾಹನನಾದ ಬಾಲಕ ಷಣ್ಮುಖನು ದೇವಾದಿದೇವತೆಗಳ ಪ್ರಾರ್ಥನೆಯಂತೆ ಖೂಳ ತಾರಕಾಸುರನನ್ನು ತರಿದು ಲೋಕೋದ್ಧಾರಕ್ಕೆ ಕಾರಣನಾಗುತ್ತಾನೆ. ಈ ದಿನವನ್ನು ಷಷ್ಠಿ ಮಹೋತ್ಸವವಾಗಿ ಆಚರಿಸಲಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ.
ನಮ್ಮಲ್ಲಿ ಷಣ್ಮುಖನನ್ನು ಸರ್ಪ ರೂಪದಲ್ಲಿ ಪೂಜಿಸುವುದು ರೂಢಿ. ಸಹಜ ಶರೀರನಾದ ಸ್ಕಂದನನ್ನು ನಾಗರೂಪದಲ್ಲಿ ಪೂಜಿಸಲು ಕಾರಣವಾದ ಪೂರಕ ಕಥೆಯೊಂದು ಬಹಳ ಕುತೂಹಲಕಾರಿಯಾಗಿದೆ..ಕೇಳಿ.
ತಾರಕಾಸುರನನ್ನು ಕೊಂದು ಸಕಲ ದೇವಾದಿದೇವತೆಗಳಿಂದ ಸ್ತುತಿಸಿ, ಹೊಗಳಲ್ಪಟ್ಟ ಮಯೂರವಾಹನನಿಗೆ ಮನದೊಳಗೆ ಸ್ವಲ್ಪ ಅಹಂಕಾರ ಹುಟ್ಟಿಕೊಳ್ಳತೊಡಗಿತು. ನಾನೇ ಎಲ್ಲರಿಂದ ದೊಡ್ಡವನು, ಬಲಶಾಲಿ ಎಂದು ಬೀಗಿ ಜಂಬಪಡುತ್ತಾ ಮೇಲೇರತೊಡಗಿದನು. ಮೇಲೇರುತ್ತಾ.. ಮೇಲೇರುತ್ತಾ ಎಲ್ಲಾ ಲೋಕಗಳನ್ನು ದಾಟಿ ಅತ್ಯಂತ ಮೇಲಿನ ಲೋಕವಾದ ಸತ್ಯಲೋಕವನ್ನು ತಲಪುವನು. ಸತ್ಯಲೋಕವು ಬ್ರಹ್ಮದೇವನ ಆವಾಸ ಸ್ಥಾನ. ಬ್ರಹ್ಮದೇವನು ತನ್ನ ಪತ್ನಿ ಸರಸ್ವತಿಯ ಜೊತೆ ಏಕಾಂತದಲ್ಲಿರುವ ವೇಳೆಯಲ್ಲಿಯೇ ನವಿಲುವಾಹನನು ಅಲ್ಲಿಗೆ ತಲಪಿಬಿಟ್ಟಿದ್ದನು. ಬಹಳ ಸಿಟ್ಟುಗೊಂಡ ಚತುರ್ಭುಜನು, ಪುಟ್ಟ ಬಾಲಕನಿಗೆ ತಿಳಿಯದೆ ಘಟಿಸಿದ ತಪ್ಪೆನ್ನುವುದನ್ನೂ ಲೆಕ್ಕಿಸದೆ, ‘ನೀನು ಕುರೂಪಿಯಾದ ಸರೀಸೃಪವಾಗಿ ಭೂಮಿಯಲ್ಲಿ ಜೀವಿಸು’ ಎಂಬುದಾಗಿ ಘೋರ ಶಾಪವನ್ನೀಯುವನು. ಮೂರ್ಲೋಕಗಳಲ್ಲೇ ಅತ್ಯಂತ ಸುಂದರನಾಗಿದ್ದ ಬಾಲಕ ಕಾರ್ತಿಕೇಯನು ತಕ್ಷಣವೇ ಬೃಹದಾಕಾರದ, ಅಸಹ್ಯ ರೂಪದ ವಿಷಯುಕ್ತ ಹಾವಾಗಿ ಭೂಲೋಕದಲ್ಲಿರುವ ತನ್ನ ತಾಯಿ, ಕೈಲಾಸ ಪರ್ವತ ಸ್ಥಿತೆ ಪಾರ್ವತಿಯ ಪಾದಗಳ ಬಳಿಯೇ ಬಿದ್ದುಬಿಡುವನು! ಕಕ್ಕಾಬಿಕ್ಕಿಯಾದ ತಾಯಿಯು ತನ್ನ ಮಗನ ದುಸ್ಥಿತಿಯನ್ನು ಕಂಡು ರೋದಿಸತೊಡಗುತ್ತಾಳೆ. ಪರಿಸ್ಥಿತಿಯನ್ನು ಅರಿತ ನಟರಾಜನು ಬ್ರಹ್ಮನನ್ನು ಕರೆಸಿ ಪರಿಹಾರವನ್ನು ಕೇಳಲಾಗಿ, ಕೊಟ್ಟ ಶಾಪವನ್ನು ಹಿಂಪಡೆಯಲಾಗದ ಬ್ರಹ್ಮನು ಮಹಾವಿಷ್ಣುವಿನ ಮೊರೆ ಹೋಗುತ್ತಾನೆ. ಶ್ರೀಮನ್ನಾರಾಯಣನು, ‘ಬಾಲ ಷಣ್ಮುಖನು ತನ್ನ ಎರಡೂ ರೂಪಗಳಲ್ಲಿಯೂ ಪೂಜಿಸಲ್ಪಡಲಿ. ನಾಗರೂಪದಲ್ಲಿ ವಾಸುಕಿ ಎಂಬ ನಾಮವುಳ್ಳವನಾಗಿ, ಸಕಲ ನಾಗಗಳ ನಾಯಕನಾಗಿ ವಿಜೃಂಭಿಸುತ್ತಾ, ಭಕ್ತರ ಕಷ್ಟಗಳನ್ನು ಪರಿಹಾರ ಮಾಡಿದರೆ; ಸಹಜ ರೂಪದ ಕಾರ್ತಿಕೇಯನು ಭಕ್ತರ ಮನದಲ್ಲಿ ಆಧ್ಯಾತ್ಮಿಕತೆಯನ್ನು ಉದ್ದೀಪನಗೊಳಿಸುವ ಕಾರ್ಯವೆಸಗಿ ಮಾನವರನ್ನುದ್ಧರಿಸಲಿ’ ಎಂಬುದಾಗಿ ವರವನ್ನಿತ್ತು ಕರುಣಿಸುವನು. ಆದ್ದರಿಂದ ಇಂದಿಗೂ ಸುಬ್ರಹ್ಮಣ್ಯನು ಎರಡೆರಡು ರೂಪಗಳಲ್ಲಿ ಭಕ್ತರನ್ನು ಪೊರೆಯುತ್ತಿರುವನು.
ನಿಮಗೆಲ್ಲಾ ಗೊತ್ತಿರುವಂತೆ, ಮೂಲ ಕಥೆ ಒಂದೇ ಆಗಿದ್ದರೂ, ಬೇರೆ ಬೇರೆ ಋಷಿ ಮುನಿಗಳು ಬರೆದ ಪುರಾಣ ಕಥೆಗಳಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತವೆ. ಮೇಲೆ ಹೇಳಿದ ಕಥೆಯ ಇನ್ನೊಂದು ರೂಪವಿದೆ ನಮ್ಮ ಸ್ಕಂದಪುರಾಣದಲ್ಲಿ.. ಅದನ್ನು ಕೇಳೋಣವೇ..?
ಲೋಕಕಂಟಕನಾದ ತಾರಕಾಸುರನನ್ನು ಸಂಹರಿಸಿದ ಹದಿಹರೆಯದ ಕಾರ್ತಿಕೇಯನು ಒಮ್ಮೆ ಸಕಲ ಲೋಕ ಸಂಚಾರಕ್ಕಾಗಿ ಹೊರಟಿದ್ದ. ಹಾಗೆಯೇ ಹೋಗುತ್ತಾ ಬ್ರಹ್ಮಲೋಕಕ್ಕೆ ತಲಪಿದ ಕುಮಾರನು ಯೌವನದ ಮದದಿಂದ ಬ್ರಹ್ಮನನ್ನೇ ಅಪಹಾಸ್ಯ ಮಾಡಿ ಅವಮಾನಿಸಿದ. ಆಗ ಬ್ರಹ್ಮನು ಮನನೊಂದು, ಭಯಂಕರ ವಿಷವುಳ್ಳ ಘಟಸರ್ಪವಾಗುವಂತೆ ಷಣ್ಮುಖನನ್ನು ಶಪಿಸುತ್ತಾನೆ. ಆ ಕೂಡಲೇ ಸ್ಕಂದನು ಕುಂಡಲಿನೀ ರೂಪದ ಭಯಂಕರ ಸರ್ಪವಾಗಿ ಮಾರ್ಪಡುತ್ತಾನೆ. ಈ ಸುದ್ದಿ ತಿಳಿದ ಪಾರ್ವತಿ ದೇವಿಯು ಮಗನನ್ನು ಮೊದಲ ರೂಪದಲ್ಲೇ ಪಡೆಯಲು ಷಷ್ಠಿ ಉಪವಾಸ ವ್ರತವನ್ನು ಕೈಗೊಳ್ಳುತ್ತಾಳೆ. ವ್ರತದ ಉದ್ಯಾಪನೆ, ಅಂದರೆ ಕೊನೆಯ ಸಮಾರೋಪದ ದಿನ ಮಹಾವಿಷ್ಣುವಿನ ಸಹಿತ ಸಕಲ ದೇವಾದಿದೇವತೆಗಳೆಲ್ಲ ಪಾಲ್ಗೊಳ್ಳುವರು. ಜೊತೆಗೆ ಘಟಸರ್ಪ ರೂಪದಲ್ಲಿದ್ದ ಸ್ಕಂದನೂ ಅಲ್ಲಿಗೆ ಬರುತ್ತಾನೆ. ಈ ಶುಭ ಸಂದರ್ಭದಲ್ಲಿ ಹರಿಯ ಕರಸ್ಪರ್ಶದಿಂದ ಕುಮಾರ ತನ್ನ ಮೊದಲ ಸುಂದರ ರೂಪವನ್ನು ಪಡೆಯುತ್ತಾನೆ. ಈ ಪುಣ್ಯ ದಿನವನ್ನೇ ಸುಬ್ರಹ್ಮಣ್ಯ ಷಷ್ಠಿ ಎಂದು ಆಚರಿಸಲಾಗುತ್ತದೆ. ಮಾನವ ದೇಹದ ಕುಂಡಲಿನಿಯಲ್ಲಿ ಕುಳಿತ ವಾಸುಕೀದೇವರು, ಮಂಡಲ ಮಂಡಿತ ನಾಗರೂಪದಲ್ಲಿದ್ದ ಕಾರ್ತಿಕೇಯನೇ ಆಗಿದ್ದು ಸಕಲ ಭಕ್ತಾದಿಗಳಿಂದ ಆರಾಧಿಸಲ್ಪಡುತ್ತಾನೆ.
ಈ ದಿನದಂದು ಇಡೀ ದಿನ ಉಪವಾಸವಿದ್ದು ಸುಬ್ರಹ್ಮಣ್ಯ ದೇಗುಲಗಳಿಗೆ ಹೋಗಿ ಭಕ್ತಿಯಿಂದ ಪೂಜೆಗೈಯುವುದು ಸಂಪ್ರದಾಯ. ಸುಮಾರು ನಾಲ್ಕೈದು ದಶಕಗಳ ಹಿಂದೆ; ನಮ್ಮ ಚಿಕ್ಕಂದಿನಲ್ಲಿ ಈ ದಿನವೆಂದರೆ ನಮಗೆಲ್ಲ ನಿಜವಾಗಿಯೂ ಹಬ್ಬವೇ! ಎಂದೂ ಉಪವಾಸ ಮಾಡದ ಮನೆಮಂದಿಯೆಲ್ಲ ಈ ದಿನ ಉಪವಾಸ ವ್ರತ ಕೈಗೊಳ್ಳುವರು.. ಮನೆ ಹೆಣ್ಮಕ್ಕಳಿಗೆ ಬೆಳಗ್ಗಿನ ಉಪಾಹಾರ ತಯಾರಿಯ ಗೋಜಿಲ್ಲ. ತೋಟದ ತೆಂಗಿನಮರದಿಂದ ಆಗ ತಾನೇ ಕಿತ್ತು ತಂದ ತಾಜಾ ಸೀಯಾಳದ ನೀರು ಕುಡಿಯಲು ನಮಗೆಲ್ಲ ಪೈಪೋಟಿ. ಅದರೊಳಗಿರುವ ರುಚಿಯಾದ ಎಳೆ ತಿರುಳು, ಮಕ್ಕಳಾದ ನಮ್ಮ ಹೊಟ್ಟೆಪಾಲು. ವಿಪರೀತ ಚಳಿಯಲ್ಲಿ ನಡುಗುತ್ತ ಎಲ್ಲರು ಒಟ್ಟುಗೂಡಿ ಅತೀ ಸಮೀಪವೆಂದರೆ ನಾಲ್ಕು ಮೈಲು ದೂರವಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಡೆದುಕೊಂಡು ಹೋಗಿ, ಜಾತ್ರೋತ್ಸವವನ್ನು ನೋಡಿ, ತಡ ಮಧ್ಯಾಹ್ನದ ಪ್ರಸಾದ ಭೋಜನವನ್ನು ಸ್ವೀಕರಿಸಿ ಸಂಭ್ರಮಪಡುತ್ತಿದ್ದುದು ಈಗ ಸಿಹಿನೆನಪುಗಳ ಪಟ್ಟಿಯಲ್ಲಿ ಸೇರಿಹೋಗಿದೆ. ರಾತ್ರಿಗೆ ಫಲಾಹರದೊಂದಿಗೆ ಷಷ್ಠಿ ಉಪವಾಸ ವ್ರತದ ಸಂಭ್ರಮಕ್ಕೆ ಮಂಗಳ ಹಾಡಲಾಗುವುದು.
ಈ ವ್ರತದಿಂದ ಸುಬ್ರಹ್ಮಣ್ಯ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾದ ಭಕ್ತರ ಸಕಲ ಇಷ್ಟಾರ್ಥಗಳೂ ನೆರವೇರುವುದಲ್ಲದೆ, ಮುಖ್ಯವಾಗಿ ಸಂತಾನ ಫಲ, ಚರ್ಮವ್ಯಾಧಿ ನಿವಾರಣೆಯಂತಹ ವಿಶೇಷ ಭಾಗ್ಯಗಳು ಕೂಡಾ ಪ್ರಾಪ್ತಿಯಾಗುವುವು ಎಂಬುದು ಭಕ್ತ ಜನರ ದೃಢವಾದ ನಂಬಿಕೆ.
ಇಂದಿನ ದಿನಗಳಲ್ಲಿ ಹಿಂದಿನ ಸಂಭ್ರಮವು ಅಷ್ಟೇನೂ ಕಾಣದಿದ್ದರೂ ತುಂಬಾ ಶ್ರದ್ಧೆಯಿಂದ ಷಷ್ಠಿ ವ್ರತ ಆಚರಿಸುವುದನ್ನು ಕಾಣಬಹುದು. ಸುಬ್ರಹ್ಮಣ್ಯ ದೇಗುಲಗಳಲ್ಲಿ ಭಕ್ತ ಜನರು ಹರಕೆಗಳನ್ನು ತೀರಿಸಿ, ಪ್ರಸಾದ ಸ್ವೀಕರಿಸಿ ಧನ್ಯರಾಗುವರು. ನಾವೆಲ್ಲರು ಕೂಡಾ ಶುದ್ಧ ಮನಸ್ಸಿನಿಂದ ವ್ರತವನ್ನಾಚರಿಸಿ ಷಣ್ಮುಖನ ಕೃಪೆಗೆ ಪಾತ್ರರಾಗೋಣ… ಅಲ್ಲವೇ?
-ಶಂಕರಿ ಶರ್ಮ, ಪುತ್ತೂರು.
ಪುರಾಣದ ಕುರಿತಾದ ಮಾಹಿತಿಗಳನ್ನೊಳಗೊಂಡ ಬರಹ.
ಧನ್ಯವಾದಗಳು ನಯನ ಮೇಡಂ.
ವಿಶಿಷ್ಟ ಷಷ್ಠಿ ಲೇಖನ ವಿಶೇಷ ಮಾಹಿತಿ ತಿನ್ನು ಒಳಗೊಂಡು ಚೆನ್ನಾಗಿ ಮೂಡಿ ಬಂದಿದೆ.ಅಭಿನಂದನೆಗಳು.
ಧನ್ಯವಾದಗಳು ನಾಗರತ್ನ ಮೇಡಂ.
ಸುಬ್ರಹ್ಮಣ್ಯ ಸ್ವಾಮಿಗೆ ಸರ್ಪ ರೂಪ ಏಕೆ ಬಂತೆಂದು ಬಹಳ ದಿನಗಳಿಂದ ಹುಡುಕುತ್ತಿದೆ… ಅನಂತ ಧನ್ಯವಾದಗಳು ನಿಮಗೆ
ಹೌದು ಮೇಡಂ..ನನಗೂ ಇದೇ ಸಂಶಯವಿತ್ತು. ಅದನ್ನು ತಿಳಿದುಕೊಳ್ಳುವ ಒಳ್ಳೆಯ ಅವಕಾಶ ಒದಗಿಬಂತು.
ಧನ್ಯವಾದಗಳು ತಮಗೆ