ನವೆಂಬರ್‌ ಅಂದ್ರೆ ನಂಗಿಷ್ಟ..

Share Button

ಪ್ರಾಥಮಿಕ ಶಾಲಾ ದಿನಗಳಿಂದಲೂ ನವೆಂಬರ ತಿಂಗಳು ಬಂತೆಂದರೆ ನಮಗೆಲ್ಲಾ‌ಎಲ್ಲಿಲ್ಲದ ಖುಷಿ. ನನಗಂತೂ ನವೆಂಬರ್ ಹದಿನಾಲ್ಕು ಮಕ್ಕಳ ದಿನಾಚರಣೆ‌ ಅಂದರೆ ಗಾಳಿಪಟದ ಹಬ್ಬದ ಸಡಗರ. ಆದರೆ ಪರಿಸ್ಥಿತಿಗನುಗುಣವಾಗಿ ಅಂದಿನ ದಿನಗಳಲ್ಲಿ ರದ್ದಿ ಪೇಪರು, ಕಿರಾಣಿ ಸಾಮಗ್ರಿಗೆ ಕಟ್ಟಿದ ದಾರ ಮತ್ತು‌ ಅನ್ನದಿಂದ‌ ಅಂಟು ಮಾಡಿ ನನಗಿಷ್ಟದ ಗಾಳಿಪಟ ತಯಾರಿಸಿ ಎಲ್ಲರಷ್ಟೇ ಖುಷಿಯಿಂದ ಹಾರಿಸುತಿದ್ದೆ. ಕೆಲ ಮಿತ್ರರು ಬಣ್ಣ ಬಣ್ಣದ ಹಾಳಿಯ ಗಾಳಿಪಟವನ್ನು ಡೌಲಿನಿಂದ ಹಾರಿಸುತಿದ್ದರೂ ನನಗೇನೂ ಅನಿಸುತಿರಲಿಲ್ಲ. ಇದನೆಲ್ಲಾ‌ ಅರಿತ‌ ಅಪ್ಪ ಆ ವರ್ಷ ಯಲ್ಲಾಪುರದ ತನ್ನ ಗೆಳೆಯ ಮಾಲಶೇಟ್‌ ಎಂಬುವನೊಡನೆ ನವೆಂಬರ್ ಹದಿಮೂರನೇ ತಾರೀಖಿನ ರಾತ್ರಿಯೇ ಬಣ್ಣ ಬಣ್ಣದ ಕಾಗದ ದೊಡ್ಡದೊಡ್ಡ ನೂಲಿನ ಉಂಡೆಯೊಡನೆ ಬಂದು ರಾತ್ರಿ ನನಗೊಂದು‌ ಅಣ್ಣನಿಗೊಂದು ಗಾಳಿಪಟ ತಯಾರಿಸಿ ಮುಂಜಾನೆ‌ ಆಗಸದಲಿ ಹಾರಿಸಿದಾಗಿನ ಖುಷಿ ಇನ್ನೂ ನನ್ನೆದೆಯಲಿ ಹಚ್ಚ ಹಸಿರು. ಮುಂದಿನ ಎರಡು ವರ್ಷಗಳ ತನಕ‌ ಅದೇ ಜೋಪಾನವಾಗಿರಿಸಿ ಮತ್ತೆ ಮತ್ತೆ ಪಂಡಿತ ನೆಹರೂ‌ಅವರ ಮಕ್ಕಳ ದಿನಾಚರಣೆ ಆಚರಿಸಿ ಸಂಭ್ರಮಿಸುತಿದ್ದೆವು ; ಅದಕೇ ನವೆಂಬರ್ ತಿಂಗಳು ಅಂದರೆ ನಂಗಿಷ್ಟ.

ನಲವತ್ತು ವರ್ಷಗಳ ಹಿಂದೆರಾಜ್ಯೋತ್ಸವ ಸಂಭ್ರಮದಿ ಅಂಕೋಲೆಯ ಕರ್ನಾಟಕ ಸಂಘದ ವತಿಯಿಂದ ಝೇಂಡಾಕಟ್ಟೆಯಲಿ ಕವಿಗೋಷ್ಠಿ. ಹಿರಿಯ ಸಮಾಜವಾದಿ ಧುರೀಣ ಶಂಕರಕೇಣಿಯವರು ಕರ್ನಾಟಕ ಸಂಘದ ‌ಅಧ್ಯಕ್ಷರಾದರೆ, ಶಿಕ್ಷಕರಾದ ವಂದಿಗೆಯ ಜೀ.ವಿ.ನಾಯಕರು ಕಾರ್ಯದರ್ಶಿಗಳು. ಸಹ ಕಾರ್ಯದರ್ಶಿಯಾದ ನಾನು ಅಂದಿನ ಕವಿಗೋಷ್ಠಿಯಲ್ಲಿ ಕವಿತೆ ‌ಓದುವದಲ್ಲದೇ‌ ಅದರ ನಿರ್ವಹಣೆಯ ಅವಕಾಶವೂ ನನ್ನ ಪಾಲಿನದಾಗಿತ್ತು. ಆ ದಿನಗಳಲ್ಲಿ ಕವಿಗೋಷ್ಠಿಯ ನಿರ್ದೇಶಕ ‌ಎಂದರೆ‌ ಅದೊಂದು ಹೆಮ್ಮೆಯ ಸಂಗತಿ. ಅದಲ್ಲದೇ ಮೊಟ್ಟ ಮೊದಲ ಬಾರಿಗೆ‌ ಆಮಂತ್ರಣ ಪತ್ರಿಕೆಯಲಿ ನನ್ನ ಹೆಸರು ಪ್ರಕಟವಾಗಿತ್ತು. ಅದನ್ನು ಕಣ್ಣಲಿ ಕಣ್ಣಿಟ್ಟು ನೂರು ಬಾರಿ ನೋಡಿಕೊಂಡು ಖುಷಿಪಟ್ಟೆ. ಕವಿಗಳ ಹೆಸರು ಕರೆದು‌ ಅವರ ಸಾಹಿತ್ಯದ ಪರಿಚಯಿಸಿ ಕವಿತೆ ‌ಓದುವದರೊಂದಿಗೆ ‌ಅತ್ಯಂತ ಸೊಗಸಾಗಿ ಕಾರ್ಯಕ್ರಮ ನಿರ್ವಹಿಸಿ ಕೊಟ್ಟಿದ್ದಕ್ಕೆ ಹಿರಿಯರಿಂದ ಶಹಬ್ಬಾಸ್‌ಗಿರಿ. ಮರುದಿನ ಪ್ರಮುಖ ಪತ್ರಿಕೆಗಳಲೆಲ್ಲಾ ಫೋಟೋದೊಂದಿಗೆ ಈ ಕಾರ್ಯಕ್ರಮದ್ದೇ ಸುದ್ದಿ. ಎಲ್ಲಕಿಂತ ಹೆಚ್ಚಾಗಿ ಜೀವನದಲ್ಲಿ ಮೊಟ್ಟ ಮೊದಲು ಪೇಪರಿನಲ್ಲಿ ಫೋಟೋದೊಂದಿಗೆ ಹೆಸರು ಬಂದ್ದಿದ್ದಕ್ಕೆ ಹೇಳತೀರದ ಖುಷಿ ಅನುಭವಿಸಿದೆ !!!

ಅಮ್ಮನ ರೇಷನ್ ಸೀರೆ ಕಂಡು ‘ರೇಷ್ಮೆ ಸೀರೆ ಎಂದುಕೊಂಡೆ’ ಎಂಬ ಕುಟುಕಿನ ಮಾತಿಗೆ ಬೆಂದ ‌ಅಮ್ಮನಿಗಾಗಿ ಮತ್ತು‌ ಅಪ್ಪನಿಗೆ ಸ್ವಂತ ದುಡಿಮೆಯಿಂದ ಮೊದಲ ಸಲ ಬಟ್ಟೆ ಕೊಡಿಸಿದ್ದೂ ಈ ನವೆಂಬರ್ ತಿಂಗಳಿನಲ್ಲಿಯೇ ; ಅದಕೇ ನವೆಂಬರ್ ತಿಂಗಳು ಅಂದರೆ ನಂಗಿಷ್ಟ.

ಬದುಕಿನ‌ ಆಶಾಕಿರಣದಂತಿರುವ ನಮ್ಮ ಮಕ್ಕಳು ಮತ್ತು ಅಳಿಯ ಕಾವ್ಯಾ-ಸಂತೋಷ್ ಮತ್ತು ನವ್ಯರ ಹುಟ್ಟುಹಬ್ಬವೂ ಸಹ ನವೆಂಬರ್ ತಿಂಗಳಲ್ಲೇ ಎಂದು ಹೇಳಿಕೊಳ್ಳಲು ನನಗೆ ಅಭಿಮಾನ ಮತ್ತು ಪ್ರೀತಿ ಎನಿಸುತ್ತಿದೆ. ಇಂದಿನ ಸುಖೀ ಕುಟುಂಬ ಪದ್ದತಿಯ ‌ಅರ್ಥ ಮನೆಗೊಂದು ಮಗ ಮತ್ತು ಮಗಳು ; ಅವರೂ ಮುಂದಿನ ದಿನಗಳಲ್ಲಿ ಡಾಕ್ಟರ್ ಮತ್ತು ‌ಇಂಜನೀಯರ್ ಆಗಲೇ ಬೇಕೆಂದು ಪ್ರಾಥಮಿಕ ಶಾಲೆಯಿಂದಲೇ ಪಾಲಕರು ತಾಲೀಮು ನಡೆಸುವರು. ನಮಗಂತೂ ಹಾಗೆ ಅನಿಸೇ ಇಲ್ಲ ‘ಎರಡೂ ಹೆಣ್ಮಕ್ಕಳೇ’ ಎಂಬ ಕುಹಕದ ಕಟು ನುಡಿಗಳ ಅಂದು ಅನ್ನಿಸಿಕೊಂಡರೂ ಮಕ್ಕಳಿಬ್ಬರೂ ತಮಗಿಷ್ಟವಾದ ಶಿಕ್ಷಣ ಪಡೆದು, ತಮ್ಮದೇ ‌ಆದ ‌ಅಭಿರುಚಿಯಲಿ ಬೆಳಕಿನ ದಾರಿಯಲ್ಲಿ ನಡೆಯುತ್ತಿರುವದು ನಿಜಕ್ಕೂ ಬೆರಗಿನ ಸಂಗತಿಯೇ ! ಉತ್ತರಕನ್ನಡ‌ ಅಂದು ರೈಲಿನಿಂದ ವಂಚಿತವಾಗಿತ್ತು. ನನ್ನ ಮೂವತ್ತನೇ ವಯಸ್ಸಿನ ತನಕ ನನಗೆ ರೇಲ್ವೆಯ ಪರಿಚಯವೇ‌ ಇಲ್ಲವಾಗಿತ್ತು. ಕಾವ್ಯ ಹುಟ್ಟಿದ ದಿನವೇ ನಾನು ಸಮೀಪದಿಂದ ರೇಲ್ವೆ ಕಂಡಿದ್ದು ಮತ್ತು ಪ್ರಥಮ ಬಾರಿಗೆ ರೇಲು ಪಯಣ ಅನುಭವಿಸಿದ್ದು ; ನವ್ಯಳ ಬೆಂಗಳೂರಿನ ಬದುಕಿನ ಪಯಣವೂ ಸೋಜಿಗವೇ.

ಗೋಕಾಕ ಚಳುವಳಿ, ಕನ್ನಡ ಪರ ಹೋರಾಟ, ಕನ್ನಡ ಸಂಘಟನೆ, ಕನ್ನಡ ರಾಜ್ಯೋತ್ಸವದಂದು ಕನ್ನಡ ಮೆರವಣಿಗೆ, ವಿಷ್ಣು ನಾಯ್ಕ, ಶ್ಯಾಮ ಹುದ್ದಾರರಂತಹ ಹಿರಿಯಕನ್ನಡ ಮನಸುಗಳೊಡನೆಯ ಒಡನಾಟ ‌ಇವೆಲ್ಲವೂ ನನಗೆ ದಕ್ಕಿದ್ದು ನವೆಂಬರಿನಲ್ಲಿಯೇ. ಚಂಪಾರವರ ನೇತೃತ್ವದಲ್ಲಿ ಗೋಕಾಕ ಚಳುವಳಿಯ ಕಾವಿನ ಬಿಸಿ ಏರಿದ್ದೂ ನವಂಬರಿನಲ್ಲಿಯೇ. ಅಲ್ಲಿ ವಾಟಾಳ, ಇಲ್ಲಿ ಪಾಪು ಕನ್ನಡಕಾಗಿ ಬದುಕಿನುದ್ದಕೂ ಹೋರಾಟ ನಡೆಸುತ್ತಲೇ ಬಂದರು. ನವೆಂಬರದಲ್ಲಿ ‌ಇಂತಹ ಹೋರಾಟಗಳು ನಿಜಕ್ಕೂ ರೋಮಾಂಚಿತಗಳೇ. ಅಂದಿನ ಆ ದಿನಗಳಲ್ಲಿ ಅಂಕೋಲೆಯಲ್ಲಿ ರಾಜ್ಯೋತ್ಸವದಂದು ಗೆಳೆಯ ಅರವಿಂದ ಕಟಗಿಯ ಮುಂದಾಳತ್ವದಲ್ಲಿ ಮಹಾ ಮೆರವಣಿಗೆ ನಡೆಯುತಿದ್ದದ್ದು ಇಂದಿಗೂ ಅಬಾಲವೃದ್ಧರಾಧಿಯಾಗಿ ‌ಎಲ್ಲರೂ ನೆನೆಯುವವರೇ. ಮನ ಸೆಳೆಯುವ ರೂಪಕಗಳು, ವೇಷ ಭೂಷಣಗಳು ಎಲ್ಲರೆದೆಯಲ್ಲೂ‌ ಅಂದು ತಾಳ ಹಾಕುತಿತ್ತು. ಯಾವುದೇ ಹೋರಾಟದ, ಸಾಹಿತ್ಯದ ಹಿನ್ನೆಲೆ‌ ಇಲ್ಲದೇ ನನ್ನ‌ಇಪ್ಪತ್ತನೇ ವಯಸ್ಸಿಗೆ ಅಂಕೋಲೆಗೆ ಹೊಟ್ಟೆ ತುಂಬಿಸಿಕೊಳ್ಳಲು ಬಂದ ನನಗೆ ಕೊನೆಗೂ ಕೈ ಹಿಡಿದು ನಡೆಸಿದ್ದು, ನನ್ನನ್ನೊಬ್ಬ ಮನುಷ್ಯನನ್ನಾಗಿ ಮಾಡಿ ಬದುಕಿನುದ್ದಕ್ಕೂ ಪೊರೆದದ್ದು ಈ “ಕನ್ನಡ” ವೇ ; ನವೆಂಬರ್ ತಿಂಗಳೇ !!!

1956  ನವಂಬರ್‌ ಒಂದರಂದು ಭಾಷಾವಾರು ಪ್ರಾಂತ್ಯದಂತೆ ‘ಕನ್ನಡ ನಾಡಿನ’ ಉದಯವಾಗಿದೆ. ಒಡೆದು ಹಂಚಿ ಹೋದ ಕರ್ನಾಟಕ ಮತ್ತೆ‌ಒಂದಾಗಿ ಕನ್ನಡಿಗರ ಅನೇಕ ವರ್ಷಗಳ ಕನಸು ನನಸಾಗಿರುತ್ತದೆ. ಆದರೂ ಅಂದಿನಿಂದ ಇಂದಿನವರೆಗೂ ಆಗಾಗ ಅಲ್ಲಲ್ಲಿ ಭಾಷೆ-ನೆಲ-ಜಲದ ಕುರಿತು ಅಪಸ್ವರಗಳು ಕೇಳಿಬರುತಿದೆ ; ಅದೂ ನವಂಬರ್ ತಿಂಗಳಲ್ಲೇ ! ಮೊನ್ನೆ ಮೊನ್ನೆ ಮಹಾರಾಷ್ಟ್ರದ‌ ಉಪಮುಖ್ಯಮಂತ್ರಿ ‘ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರದ್ದು’ ಎಂಬ ಕ್ಯಾತೆ ತೆಗೆದು ಸಮಸ್ತ ಕನ್ನಡಿಗರಿಂದ ಮುಖಕ್ಕೆ ಮಂಗಳಾರತಿ ಮಾಡಿಕೊಂಡಿರುವರು. ಪ್ರಗತಿಪರ ಹೋರಾಟಗಾರ, ಹಿರಿಯ ಪತ್ರಕರ್ತ, ಸೃಜನಶೀಲ ಲೇಖಕ ಹಾಗೂ ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷರಾದ ನಾಗರಾಜ ಹರಪನಹಳ್ಳಿಯವರು ಅವರ ಹೇಳಿಕೆಯನ್ನು ಶೀಘ್ರವಾಗಿ ಪ್ರತಿಭಟಿಸಿ ಸೂಕ್ತ ಸಮಯದಲ್ಲಿ ಕನ್ನಡತನ ಮೆರೆದಿರುವರು.

ಕಳೆದ ಐದು ವರ್ಷಗಳ ಹಿಂದೆ ಸುನಂದಾಳೊಂದಿಗೆ ಕೇರಳದ ಚೆಂಗಾನೂರಿನಲ್ಲಿ ಕನ್ನಡಕಾರ್ಯಕ್ರಮ ‌ಒಂದಕ್ಕೆ ಹೋಗಿದ್ದೆ. ಅಂದಿನ ಕರ್ನಾಟಕ ಸಾಹಿತ್ಯ‌ ಅಕಾಡೆಮಿಯ‌ ಅಧ್ಯಕ್ಷರಾದ ಮಾಲತಿ ಪಟ್ಟಣಶೆಟ್ಟಿಯವರು ವೇದಿಕೆಯ ಮೇಲಿದ್ದ ಕೇರಳದ ಮುಖ್ಯಮಂತ್ರಿಗಳೊಡನೆ ಕಿವಿಯಲ್ಲಿ ಏನೋ ಉಸುರುತ್ತಿರುವದು ಕಂಡು “ಕಾಸರಗೋಡು ನಮಗೆ ಬಿಟ್ ಬಿಡ್ರಿ” ಎಂದು ಹೇಳುತ್ತಿರುವಂತೆ ನಮಗೆಲ್ಲಾ ಅನಿಸಿ ಅಲ್ಲಿ ಆಗ ನವೆಂಬರ್ ತಿಂಗಳಿನ ಕನ್ನಡತನ ಮೆರೆಯಿತು.

ಮೂವತ್ತೈದು ವರ್ಷಗಳ ಹಿಂದೆ‌ಎಂದೋ ಇವಳು ಬರೆದ ಪ್ರೇಮಪತ್ರ ನವೆಂಬರಿನಲಿ ನನ್ನ ಕೈಸೇರಿತು ! ಅದಕೇ ನವಂಬರ ತಿಂಗಳೆಂದರೆ ನಂಗಿಷ್ಟ.

-ಪ್ರಕಾಶ ಕಡಮೆ

4 Responses

  1. Hema says:

    ಚೆಂದದ, ಆಪ್ತ ಬರಹ.

  2. ನಯನ ಬಜಕೂಡ್ಲು says:

    ಸುಂದರ ನೆನಪುಗಳ ಚಿತ್ತಾರ ಬರಹದ ತುಂಬಾ.

  3. Savithri bhat says:

    ನಿಮ್ಮ ಜೀವನದಲ್ಲಿ ಬಂದ ಸುಂದರ ನವೆಂಬರ್ ದಿನಗಳ ನೆನಪುಗಳು ಚೆನ್ನಾಗಿತ್ತು.

  4. ಶಂಕರಿ ಶರ್ಮ, ಪುತ್ತೂರು says:

    ನವೆಂಬರ್ ತಿಂಗಳ ನವಿರಾದ ನೆನಪುಗಳ ಮೆರವಣಿಗೆ ಬಹಳ ಇಷ್ಟವಾಯ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: