ತುಳುನಾಡಿನಲ್ಲಿ ನರಕ ಚತುರ್ದಶಿಯ ಆಚರಣೆ
ದೀಪಾವಳಿಯು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಮನೆ ಮತ್ತು ಮನದ ಅಂಧಕಾರವ ಹೋಗಲಾಡಿಸಿ ಬೆಳಕಿನ ಪ್ರಕಾಶತೆಯಲ್ಲಿ ಪ್ರಜ್ವಲಿಸುವಂತೆ ಮಾಡುವ ಸಂತಸದ ಹಬ್ಬ. ದೇಶದ ನಾನಾಕಡೆಯಲ್ಲಿ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಕೆಲವು ಕಡೆ ಮೂರು ದಿನಗಳ ದೀಪಾವಳಿ ಹಬ್ಬ ಆಚರಿಸಿದರೆ, ಇನ್ನು ಕೆಲವು ಕಡೆ ಐದು ದಿನಗಳ ಕಾಲ ಸಂಭ್ರಮದಿಂದ ಮನೆಮಂದಿಯೆಲ್ಲ ಕೂಡಿಕೊಂಡು ಆಚರಣೆ ಮಾಡುತ್ತಾರೆ.
ನರಕ ಚತುರ್ದಶಿಯ ಹಿಂದಿನ ದಿನ ನೀರು ತುಂಬುವ ಶಾಸ್ತ್ರ ವನ್ನು ಮಾಡುತ್ತಾರೆ. ಮನೆಗೆ ತೋರಣದಿಂದ ಅಲಂಕಾರ ಮಾಡಿ, ಬಚ್ಚಲು ಮನೆಯನ್ನು ಸ್ವಚ್ಚ ಗೊಳಿಸಿ, ಸ್ನಾನದ ಹಂಡೆಯನ್ನು ಹೊಳೆಯುವಂತೆ ತೊಳೆದು, ಶೇಡಿಯಿಂದ ಚಿತ್ರ ಬರೆದು, ಹೂ ಬಳ್ಳಿಗಳಿಂದ ಅಲಂಕರಿಸಿ, ಬಾವಿಯಿಂದ ನೀರು ಸೇದಿ ಜಾಗಟೆಯನು ಬಾರಿಸುತ್ತ ನೀರನ್ನು ಹೊತ್ತೊಯ್ದು ಹಂಡೆಗೆ ತುಂಬಿಸಿ ಆರತಿ ಬೆಳಗುತಿದ್ದರು. ಮಾರನೆಯ ದಿನ (ನರಕ ಚತುರ್ದಶಿ) ಸೂರ್ಯೋದಯದ ಮುನ್ನ ಮನೆಮಂದಿಯೆಲ್ಲ ಪರಿಮಳಯುಕ್ತವಾದ ಎಣ್ಣೆ ಉಪಯೋಗಿಸಿ ಅಭ್ಯಂಗ ಸ್ನಾನವನ್ನು ಮಾಡುವುದು ವಾಡಿಕೆ. ಮಕ್ಕಳು ಹಿರಿಯರೆಲ್ಲರೂ ಹೊಸ ಬಟ್ಟೆ ಉಟ್ಟು ಸಂಭ್ರಮಿಸಿ ಕೊಂಡು ದೇವರ ಪೂಜೆಯಲ್ಲಿ ಭಾಗಿಯಾಗುತ್ತಾರೆ. ದೇವರಿಗೆ ನೈವೇಧ್ಯವ ಅರ್ಪಿಸಿ, ಕಿರಿಯರು ಹಿರಿಯರ ಆಶೀರ್ವಾದ ಪಡೆದು ಪರಸ್ಪರ ಸಿಹಿ ಹಂಚಿಕೊಂಡು ಬಂಧುಗಳೊಡನೆ ಹಬ್ಬದ ಶುಭಾಶಯವನ್ನು ವಿನಿಮಯಮಾಡುತ್ತಾರೆ.ಈ ದಿನದ ಮುಸ್ಸಂಜೆಯ ಸಮಯದಲ್ಲಿ ಮನೆಯ ಒಳಗೂ ಮತ್ತು ಹೊರಗೂ ದೀಪವನ್ನು ಇಡುತ್ತಾರೆ. ಮಕ್ಕಳು ಹಿರಿಯರ ಜೊತೆಗೂಡಿ ವಿವಿಧ ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ.
ನರಕ ಚತುರ್ದಶಿಯ ದಿನದಂದು ಹಿಂದೂ ಪುರಾಣದ ಪ್ರಕಾರ ನರಕಾಸುರನ ವಧೆಯಾಯಿತು ಎಂದು ಹೇಳಲ್ಪಡಲಾಗಿದೆ.ಪ್ರಬಲ ರಾಕ್ಷಸರಲ್ಲಿ ಒಬ್ಬನಾದ ಬಲಿಷ್ಠ ನರಕಾಸುರನು(ಭೌಮಾಸುರ ) ಮಾನವರಿಗೆ ಮತ್ತು ದೇವತೆಗಳಿಗೆ ತುಂಬಾ ಪೀಡೆ ಕೊಡುತ್ತಿದ್ದನು. ಈ ದುಷ್ಟ ರಾಕ್ಷಸನು ಸ್ತ್ರೀಯರಿಗೂ ಅನ್ಯಾಯ ಮಾಡುತಿದ್ದ. ಅವನು 16,000 ರಾಜ ಕನ್ಯೆಯರನ್ನು ಅಪಹರಿಸಿ ಅವರನ್ನು ಬಂಧನದಲ್ಲಿ ಇರಿಸಿ ಅವರನ್ನು ಮದುವೆಯಾಗುವ ಯೋಜನೆ ಮಾಡಿದ್ದನು. ದೇವತೆಗಳ ಕೋರಿಕೆಯ ಪ್ರಕಾರ ಶ್ರೀ ಕೃಷ್ಣನು ಸತ್ಯಭಾಮೆ ಜೊತೆಗೂಡಿ ನರಕಾಸುರನ ವಧೆ ಮಾಡಿ ರಾಜ ಕನ್ಯೆಯರನ್ನು ಬಂಧನದಿಂದ ವಿಮುಕ್ತಿ ಗೊಳಿಸಿದನು. ನರಕಾಸುರನು ಸಾಯುವ ಕೊನೆಕ್ಷಣದಲ್ಲಿ ಶ್ರೀ ಕೃಷ್ಣನಲ್ಲಿ “ಈ ದಿನ ಯಾರು ಅಭ್ಯಂಗ ಸ್ನಾನ ಮಾಡುತ್ತಾರೋ ಅವರಿಗೆ ನರಕ ಪ್ರಾಪ್ತಿ ಯಾಗಬಾರದು” ಎಂಬ ವರವನ್ನು ಕೇಳುತ್ತಾನೆ. ಹಾಗಾಗಿ ನರಕಚತುರ್ಥಿ ಎಂಬ ಹೆಸರು ಉಲ್ಲೇಖವಾಗಿದೆ. ಯುದ್ಧ ಮುಗಿದ ನಂತರ ಶ್ರೀ ಕೃಷ್ಣನು ಮೈಯಲ್ಲಿ ಅಂಟಿದ ರಕ್ತದ ಕಲೆಯನ್ನು ತೊಳೆಯಲು ಅಭ್ಯಂಗ ಸ್ನಾನ ಮಾಡುತ್ತಾನೆ.ನಂತರ ಸ್ತ್ರೀ ಯರು ಆರತಿಬೆಳಗಿ ಸಂಭ್ರಮಿಸುತ್ತಾರೆ. ಇದರ ಪ್ರತೀಕವಾಗಿ ಜನರು ಈ ಆಶ್ವಯುಜ ಚತುರ್ಥಿ ದಿನದಂದು ಅಭ್ಯಂಗ ಸ್ನಾನ ಮಾಡಿ ಶುಚಿರ್ಭುತವಾಗಿ ಕಲ್ಮಶವನ್ನು ತೊಳೆದು ಪುಣ್ಯವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಂಬಿಕೆ.
ದೀಪಾವಳಿ ಹಬ್ಬದ ಹಿನ್ನಲೆಯನ್ನು ವಿವರಿಸುವ ಬರಹ ಚೆನ್ನಾಗಿದೆ.
ಧನ್ಯವಾದಗಳು ಮೇಡಂ
ಸಕಾಲಿಕ ಸುಂದರ ಲೇಖನ.
ಸುಂದರ ಬರಹ..