ಮ್ಯೂಚುವಲ್ ಫಂಡ್ ಎಂದರೆ ?

Share Button

ಮ್ಯೂಚುವಲ್ ಫಂಡ್ ಎಂದರೆ ಷೇರಿನಲ್ಲಿ ಹೂಡಿಕೆ ಮಾತ್ರವಲ್ಲ

ಷೇರು ಸೂಚ್ಯಂಕಗಳು ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿವೆ. ನೇರವಾಗಿ ಷೇರುಗಳಲ್ಲಿ ಹೂಡುವ ಸಾಧ್ಯತೆ ಇಲ್ಲದವರು ಮ್ಯೂಚುವಲ್ ಫಂಡ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ಅನೇಕ ಮಿಥ್ಯೆಗಳು ಚಾಲ್ತಿಯಲ್ಲಿವೆ. ಈ ತಪ್ಪು ಕಲ್ಪನೆಗಳನ್ನು ಬಗೆಹರಿಸಿ ವಾಸ್ತವ ಏನೆಂಬುದನ್ನು ನಿಮಗಾಗಿ ಬಿಚ್ಚಿಡುತ್ತಿದ್ದೇವೆ. ಬನ್ನಿ, ಮಿಥ್ಯೆಯನ್ನು ಕಳೆದು ಸತ್ಯವನ್ನು ಅರಿಯೋಣ.

1. ಮ್ಯೂಚುವಲ್ ಫಂಡ್‌ಗಳು ಷೇರು ಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ಮಾತ್ರ ಸೂಕ್ತ

ವಾಸ್ತವ : ಮ್ಯೂಚುವಲ್ ಪಂಡ್‌ಗಳು (ಎಂಎಫ್) ಹೂಡಿಕೆಯ ಸಾಧನ. ಆದರೆ ಷೇರುಗಳಲ್ಲಿನ ಹೂಡಿಕೆಗೆ ಮಾತ್ರ ಸೀಮಿತವಾಗಿಲ್ಲ. ಹಣಕಾಸು ಮಾರುಕಟ್ಟೆ ಮತ್ತು ಸಾಲ ಪತ್ರಗಳು, ಸರಕಾರಿ ಸೆಕ್ಯುರಿಟೀಸ್, ಠೇವಣಿ ಪತ್ರಗಳು, ವಾಣಿಜ್ಯ ಪತ್ರಗಳು, ಕಾರ್ಪೊರೇಟ್ ಬಾಂಡ್‌ಗಳಲ್ಲಿ ಕೂಡ ಹೂಡುತ್ತವೆ. ಎಂಎಫ್‌ಗಳಲ್ಲಿ ಹೂಡುವುದರಿಂದ ಪ್ರಯೋಜನ ಏನೆಂದರೆ ಇಲ್ಲಿ ಹೂಡಿಕೆ ಮತ್ತು ಸಂಬಂಧಪಟ್ಟ ರಿಸ್ಕ್‌ಗಳನ್ನು ಫಂಡ್ ಮ್ಯಾನೇಜರ್‌ಗಳೆಂಬ ನುರಿತ ವೃತ್ತಿಪರರು ನಿರ್ವಹಿಸುತ್ತಾರೆ. ವಿಶ್ಲೇಷಕರ ತಂಡ ಅವರ ಬೆನ್ನಿಗಿರುತ್ತದೆ. ಹೂಡಿಕೆದಾರರು ನಾನಾ ವಲಯಗಳು ಮತ್ತು ಕಂಪನಿಗಳ ಸ್ಥಿತಿಗತಿಗಳನ್ನು, ಅವುಗಳ ಬೆಳವಣಿಗೆಯ ಸಾಧ್ಯತೆಗಳನ್ನು ದಿನಂಪ್ರತಿ ಪರಿಶೀಲಿಸಬೇಕಾದ ಅಗತ್ಯ ಇರುವುದಿಲ್ಲ. ವೈವಿಧ್ಯಮಯ ಹೂಡಿಕೆಯ ಅನುಕೂಲ ಇರುತ್ತದೆ. ಹಲವಾರು ವಲಯಗಳ ಷೇರುಗಳಲ್ಲಿ ಎಂಎಫ್‌ಗಳು ಹೂಡುತ್ತವೆ. ನೇರವಾಗಿ ಹೂಡುವವರಿಗೆ ಇದು ಸಾಧ್ಯವಾಗದಿರಬಹುದು.

2. ಎಂಎಫ್ ಹೂಡಿಕೆಗೆ ಸಮಯ ಸಂದರ್ಭ ನೋಡಿಕೊಳ್ಳಬೇಕೇ?

ಈಕ್ವಿಟಿಗಳಲ್ಲಿ ಹೂಡಿಕೆ ದೀರ್ಘಕಾಲೀನವಾಗಿರಬೇಕು. ಇದಕ್ಕಾಗಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮತ್ತು ವ್ಯವಸ್ಥಿತ ವರ್ಗವಣೆ ಯೋಜನೆ (ಎಸ್‌ಟಿಪಿ) ಸೂಕ್ತ. ಎಸ್‌ಐಪಿಯಲ್ಲಿ ನಿಯಮಿತವಾಗಿ ನಿರ್ದಿಷ್ಟ ಮೊತ್ತವನ್ನು ಹೂಡುತ್ತಿರಿ. ತಿಂಗಳು, ತ್ರೈಮಾಸಿಕವಾಗಿರಬಹುದು. ಮಾರುಕಟ್ಟೆಯ ಏರಿಳಿತಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಶಿಸ್ತುಬದ್ಧವಾಗಿ ಹೂಡಿಕೆ ಮಾಡುವ ಪದ್ಧತಿಯಿದು. ಯಾವುದೇ ಸಂದರ್ಭದಲ್ಲಿ ಸರಾಸರಿ ವೆಚ್ಚದಲ್ಲಿ ಹೂಡಿಕೆ ಸಾಧ್ಯವಾಗುತ್ತದೆ. ದೀರ್ಘಕಾಲೀನ ಹೂಡಿಕೆಗೆ ಸಮಯ ಮುಖ್ಯವೆನಿಸುವುದಿಲ್ಲ. ಬದ್ಧತೆ ಬೇಕಿರುತ್ತದೆ ಅಷ್ಟೇ. ಒಂದು ವೇಳೆ ನಿಮ್ಮಲ್ಲಿ ಭಾರಿ ಮೊತ್ತದ ಹಣವಿದ್ದರೆ, ಅದನ್ನೂ ದೀರ್ಘಕಾಲಿಕ ಹೂಡಿಕೆಗೆ ವಿನಿಯೋಗಿಸಬಹುದು. ಇದಕ್ಕಾಗಿ ಒಂದು ಡೆಬ್ಡ್ ಫಂಡ್, ಲಿಕ್ವಿಡ್ ಅಥವಾ ಅಲ್ಟ್ರಾ ಶಾರ್ಟ್-ಟರ್ಮ್ ಫಂಡ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ಇಡಿ. ನಂತರ ಸಣ್ಣ ಮೊತ್ತವನ್ನು ಈಕ್ವಿಟಿ ಫಂಡ್‌ಗೆ ನಿಯಮಿತವಾಗಿ ವರ್ಗಾಯಿಸಬಹುದು. ಈ ನಿಟ್ಟಿನಲ್ಲಿ ಹಣಕಾಸು ಸಲಹೆಗಾರರ ನೆರವನ್ನೂ ಪಡೆಯಿರಿ.

3. ನಿವ್ವಳ ಆಸ್ತಿ ಮೌಲ್ಯ (ಎನ್‌ಎವಿ) ಕಡಿಮೆ ಇರುವ ಯೋಜನೆಗಳಲ್ಲಿ ಹೂಡಿದರೆ ಲಾಭ ಗಳಿಸಬಹುದು

ಮ್ಯೂಚುವಲ್ ಫಂಡ್‌ಗಳ ನಿರ್ದಿಷ್ಟ ಯೋಜನೆಯ ಪ್ರದರ್ಶನವನ್ನು ಸೂಚಿಸಲು ನಿವ್ವಳ ಆಸ್ತಿ ಮೌಲ್ಯವನ್ನು (ಎನ್‌ಎವಿ) ಬಳಸುತ್ತಾರೆ. ಆದ್ದರಿಂದ ನೀವು ಕೆಳಮಟ್ಟದ ಎನ್‌ಎವಿ ಅಥವಾ ಅತ್ಯಕ ಎನ್‌ಎವಿಯಲ್ಲಿ ಹೂಡಿದ್ದೀರಾ ಎಂಬುದು ಮುಖ್ಯವಾಗುವುದಿಲ್ಲ. ವಾಸ್ತವವಾಗಿ ಫಂಡ್‌ಗಳಲ್ಲಿನ ನಿಮ್ಮ ಹೂಡಿಕೆಗೆ ಎಷ್ಟು ಪರ್ಸೆಂಟ್ ಆದಾಯ ಸಿಗುತ್ತದೆ ಎಂಬುದು ಮುಖ್ಯ. ಆದ್ದರಿಂದ ಎನ್‌ಎವಿ ಕಡಿಮೆ ಇದೆಯೇ ಎಂಬುದಕ್ಕಿಂತ ಇತರ ವಿಚಾರಗಳಿಗೆ ಗಮನಿಸಿ. ಉದಾಹರಣೆಗೆ ಫಂಡ್‌ನ ಇದುವರೆಗಿನ ಸಾಧನೆ, ಫಂಡ್ ನಿರ್ವಹಣೆ, ಫಂಡ್‌ನ ಏರಿಳಿತಗಳು. ಯಾಕೆಂದರೆ ಇವುಗಳೇ ಆದಾಯಕ್ಕೆ ಸಂಬಂಧಿಸಿ ನಿರ್ಣಾಯಕವಾಗಿರುತ್ತವೆ.

4. ಎನ್‌ಎಫ್‌ಒ (ನ್ಯೂ ಫಂಡ್ ಆಫರ್) ಹಾಲಿ ಯೋಜನೆಗಿಂತ ಸೂಕ್ತ

ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹಳತಕ್ಕಿಂತ ಹೊಸತು (ಎನ್‌ಎಫ್‌ಒ) ಎಂಬ ಮಿಥ್ಯೆ ಇದೆ. ಎನ್‌ಎಫ್‌ಒಗಿಂತ ದೀರ್ಘಕಾಲೀನ ಮತ್ತು ಉತ್ತಮ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಹೊಸ ಯೋಜನೆಯೇ ಅತ್ಯುತ್ತಮ ಎಂಬ ಭಾವನೆ ಸರಿಯಲ್ಲ.

5. ಡಿವಿಡೆಂಡ್ ಘೋಷಣೆಯಾದ ಬಳಿಕ ಫಂಡ್ ಖರೀದಿ

ಸಾಕಷ್ಟು ಮಂದಿ ಡಿವಿಡೆಂಡ್ ಘೋಷಣೆಯಾದ ಬಳಿಕ ಫಂಡ್ ಖರೀದಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಡಿವಿಡೆಂಡ್ ಮಾತ್ರ ಮ್ಯೂಚುವಲ್ ಫಂಡ್ ಬಗ್ಗೆ ನಿರ್ಣಾಯಕವಲ್ಲ. ಎನ್‌ಎವಿಯ ಏರಿಳಿತಗಳು ಫಂಡ್‌ನ ಪ್ರದರ್ಶನವನ್ನು ಬಿಂಬಿಸುತ್ತವೆಯೇ ಹೊರತು, ಡಿವಿಡೆಂಡ್ ಅಲ್ಲ ಎಂಬುದನ್ನು ಮರೆಯಬಾರದು. ಸಾಮಾನ್ಯವಾಗಿ ಸಂಗ್ರಹಿತ ಲಾಭವನ್ನು ಡಿವಿಡೆಂಡ್ ರೂಪದಲ್ಲಿನ ವಿತರಿಸುತ್ತಾರೆ. ಡಿವಿಡೆಂಡ್ ಘೋಷಣೆಯಾಗದಿದ್ದಾಗ ಎನ್‌ಎವಿಯಲ್ಲಿ ಏರಿಕೆಯಾಗುವುದನ್ನು ಗಮನಿಸಬಹುದು.

6. ಎನ್‌ಎವಿ ಹೆಚ್ಚಾದಾಗ ಕಡಿಮೆ ಎನ್‌ಎವಿಯಲ್ಲಿ ಮರು ಹೂಡಿಕೆ

ಹಲವು ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳನ್ನು ಷೇರಿಗೆ ಹೋಲಿಸಿಕೊಂಡು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಎನ್‌ಎವಿ ಏರಿದಾಗ ಫಂಡ್‌ನಿಂದ ಹೊರ ನಡೆದು ಕಡಿಮೆ ಎನ್‌ಎವಿ ಇರುವ ಫಂಡ್‌ಗಳಲ್ಲಿ ಹೂಡುತ್ತಾರೆ. ಆದರೆ ಎನ್‌ಎವಿ ಎಂದರೆ ಫಂಡ್‌ನಲ್ಲಿರುವ ಆಸ್ತಿಯನ್ನು ಯುನಿಟ್‌ಗಳ ಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಮಾರುಕಟ್ಟೆ ಮೌಲ್ಯ ಮಾತ್ರ. ಆದ್ದರಿಂದ ಇದು ಹೂಡಿಕೆ ಅಥವಾ ಹಿಂತೆಗೆತಕ್ಕೆ ನಿರ್ಣಾಯಕವಾಗುವ ಅಂಶ ಅಲ್ಲ ಎಂಬುದು ಮನದಲ್ಲಿರಲಿ. ಎನ್‌ಎವಿ ಎನ್ನುವುದು ನಿರ್ದಿಷ್ಟ ದಿನ ಫಂಡ್ ಹೊಂದಿರುವ ಷೇರುಗಳ ಮಾರುಕಟ್ಟೆ ಮೌಲ್ಯವಷ್ಟೇ. ಆದ್ದರಿಂದ ಆತುರಪಡದೆ ದೀರ್ಘಕಾಲೀನ ಹೂಡಿಕೆಯಿಂದ ಲಾಭ ಪಡೆಯಬಹುದು.

7. ಫಂಡ್ ಮತ್ತು ಷೇರುಪೇಟೆಯ ಸಂಬಂಧ

ಕೆಲವರು ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯ ಏರಿಳಿತಕ್ಕೆ ನೇರ ಸಂಬಂಧ ಇದೆ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು. ಈಕ್ವಿಟಿ ಎಂಎಫ್ ಯೋಜನೆಯೊಂದು 30- 40 ಷೇರುಗಳಲ್ಲಿ ಹೂಡುತ್ತದೆ. ಆದ್ದರಿಂದ ಷೇರು ವಿನಿಮಯ ಕೇಂದ್ರವನ್ನೇ ಇದು ಬಿಂಬಿಸುತ್ತದೆ ಎನ್ನಲಾಗದು. ಷೇರು ಸೂಚ್ಯಂಕಗಳು ಕುಸಿದಿದ್ದಾಗಲೂ ಕೆಲವು ಷೇರುಗಳು ಲಾಭ ಗಳಿಸುತ್ತವೆ. ಫಂಡ್ ವ್ಯವಸ್ಥಾಪಕರು ಬರಬಹುದಾದ ಪ್ರತಿಫಲವನ್ನು ಗಮನಿಸುತ್ತಾ ಸಾಲಪತ್ರ, ಷೇರು, ನಗದು ಇತ್ಯಾದಿಯಾಗಿ ಹೂಡಿಕೆಯನ್ನು ಬದಲಿಸಬಹುದು. ಇದರಿಂದ ಷೇರು ಪೇಟೆ ಕುಸಿದಾಗಲೂ ಭಾರಿ ನಷ್ಟದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

8. ಮ್ಯೂಚುವಲ್ ಫಂಡ್ ಹೂಡಿಕೆ ಯುವಜನತೆಗೆ ಮಾತ್ರ ಸೂಕ್ತವೇ?

ಸಾಮಾನ್ಯವಾಗಿ ವ್ಯಕ್ತಿಯ ವಯಸ್ಸು ಅವರ ` ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ’ವನ್ನು ಬಿಂಬಿಸುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಕೂಡ ಭಿನ್ನ ವಯೋಮಾನದವರಿಗೆ ತಕ್ಕಂತೆ ಅಪಾಯದ ಪ್ರಮಾಣದ ಆಯ್ಕೆ ಇರುತ್ತದೆ. ಉದಾಹರಣೆಗೆ ನಿವೃತ್ತರು ಇಲ್ಲಿ ಕಡಿಮೆ ಅಪಾಯದ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯುವಜನತೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಬಹುದು.

9. ತೆರಿಗೆ ಅಧಿಕಾರಿಗಳು ಹಿಂಬಾಲಿಸುವ ಸಾಧ್ಯತೆ?

ಮ್ಯೂಚುವಲ್ ಫಂಡ್‌ಗಳಲ್ಲಿನ ಪ್ರತಿ ಹೂಡಿಕೆಯ ಮೊತ್ತವನ್ನೂ ತೆರಿಗೆ ಅಧಿಕಾರಿಗಳು ಹಿಂಬಾಲಿಸುವುದಿಲ್ಲ. ಆದರೆ 2 ಲಕ್ಷ ರೂ. ಮತ್ತು ಹೆಚ್ಚಿನ ಮೌಲ್ಯದ ಖರೀದಿಯ ವರದಿ ವಾರ್ಷಿಕ ಮಾಹಿತಿ ವರದಿಯ ಮೂಲಕ (ಎ‌ಐ‌ಆರ್) ತೆರಿಗೆ ಇಲಾಖೆಗೆ ಹೋಗುತ್ತದೆ.

10. ಎಂಎಫ್ ಅಡಮಾನವಿಟ್ಟು ಸಾಲ ಪಡೆಯಬಹುದೇ?

ಮ್ಯೂಚುವಲ್ ಫಂಡ್ ಅನ್ನು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸೆಕ್ಯುರಿಟಿಯಾಗಿಟ್ಟು ಸಾಲ ಪಡೆಯಬಹುದು. ಆದರೆ ಎಂಎಫ್‌ನ ಹಕ್ಕುಗಳನ್ನು ಸಾಲ ಮರುಪಾವತಿಯಾಗುವ ತನಕ ಬ್ಯಾಂಕ್‌ಗೆ ಒಪ್ಪಿಸಬೇಕಾಗುತ್ತದೆ.

 

-ಕೇಶವ ಪ್ರಸಾದ್.ಬಿ.ಕಿದೂರು

(ವಿಜಯ ಕರ್ನಾಟಕದಲ್ಲಿ ಪ್ರಕಟಿತ)

 

1 Response

  1. Jennifer Shawn says:

    Very useful info for those who intend to invest in stocks and mutual funds. Thanks Keshav!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: