ಹಿಡಿಂಬಾ ಮಂದಿರ,ಎಷ್ಟೊಂದು ಸುಂದರ!

Share Button

2012 ರ ಎಪ್ರಿಲ್ ನಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬಂದೆವು. ’ಮನಾಲಿ’ಯಲ್ಲಿರುವ ಹಿಡಿಂಬಾ ದೇವಾಲಯ ಅವುಗಳಲ್ಲಿ ಒಂದು. ಮನಾಲಿ ಪಟ್ಟಣದಿಂದ ಕಾರಿನಲ್ಲಿ ಪ್ರಯಾಣ ತುಂಬಾ ಮುದ ಕೊಟ್ಟಿತು. ಬೆಟ್ಟಗಳ ನಡುವೆ, ಹಸಿರಿನ ವನಸಿರಿಯ ಮಧ್ಯೆ ಹಾದು ಹೋಗುವ ಅಂಕು-ಡೊಂಕಾದ ರಸ್ತೆ. ಇಲ್ಲಿ ದೇವದಾರು, ಓಕ್, ಪೈನ್ ಇತ್ಯಾದಿ  ಮರಗಳು ಸೊಂಪಾಗಿ ಬೆಳೆದಿದ್ದು, ಸುಮಾರಾಗಿ ’ಊಟಿಯ’ ಪರಿಸರವನ್ನು ಹೋಲುತ್ತದೆ.

ನಮ್ಮ ಸುತ್ತಲೂ ಕಡಿದಾದ ಬೆಟ್ಟಗಳು, ಅಲ್ಲಲ್ಲಿ ಕಾಣಿಸುವ ಸೇಬಿನ ತೋಟಗಳು, ನೂರಾರು ಸಣ್ಣ ಪುಟ್ಟ ಝರಿಗಳು..ದಾರಿಯುದ್ದಕ್ಕೂ ಜತೆಯಾಗುವ ’ಬಿಯಾಸ್’ ನದಿ ಅಥವಾ ಇನ್ಯಾವುದೋ ಉಪನದಿಯ ಜುಳು-ಜುಳು ನಾದ. ಇಲ್ಲಿನ ನದಿಯಗಳಲ್ಲಿ ಬೆಳಗಿನ ಸಮಯ ನೀರಿನ ಹರಿವು ಸ್ವಲ್ಪ ಕಡಿಮೆ ಇರುತ್ತದೆ. ಸಂಜೆ ಆಗುತ್ತಿದ್ದಂತೆ  ನೀರಿನ ರಭಸ ಹೆಚ್ಚುತ್ತದೆ. ಹಿಮಾಲಯ ಪರ್ವತ ಶ್ರೇಣಿಯಿಂದ ಹಿಮ ಕರಗಿ ನದಿಗೆ ಸೇರುವುದೇ ಇದಕ್ಕೆ ಕಾರಣ. ಸ್ವಲ್ಪ ಪ್ರಯಾಣದ ನಂತರ  ಹಿಡಿಂಬಾ ಮಂದಿರ ತಲಪಿದೆವು.

ತಮಾಷೆಗೆಂದೋ, ಕುಚೋದ್ಯಕ್ಕೆಂದೋ-  ಸ್ಥೂಲಕಾಯದ ಸ್ತ್ರೀಯರನ್ನು ’ಹಿಡಿಂಬೆ’ ಗೆ ಹೋಲಿಸಿ ಲೇವಡಿ ಮಾಡುವವರಿದ್ದಾರೆ. ಹಾಗಾಗಿ, ರಾಕ್ಷಸಿ ಹಿಡಿಂಬೆಯ ದೇವಾಲಯ ಅವಳ ಉಪಮೆಗೆ ತಕ್ಕಂತೆ ಬಲು ದೊಡ್ಡದಿರಬಹುದೆಂದು ಊಹಿಸಿದ್ದೆ. ನನ್ನ  ನಿರೀಕ್ಷೆ ತಪ್ಪಾಯಿತು.

 ಹಿಡಿಂಬಾ ದೇವಾಲಯವು ಚಿಕ್ಕದಾದರೂ ಚೊಕ್ಕವಾಗಿತ್ತು. ಮರದ ಕುಸುರಿ ಕೆಲಸವನ್ನೊಳಗೊಂಡ ಪುಟ್ಟದಾದ ಬಾಗಿಲು, ಸುಮಾರು 5 ಅಡಿ ಎತ್ತರ, 3 ಅಡಿ ಅಗಲವಿದ್ದಿರಬಹುದು. ಅದಕ್ಕಿಂತ ಉದ್ದದವರು ತಲೆ/ಬೆನ್ನು ಬಾಗಿಸಿದರೆ ಮಾತ್ರ ಮಂದಿರದ ಒಳಗೆ ಹೋಗಲು ಸಾಧ್ಯ. ದೇವಾಲಯದ ಒಳಗೆ ಒಂದು ಪುಟ್ಟ ಗುಹೆ ಇದೆ.  ಹಿಡಿಂಬೆ ಇಲ್ಲಿ ಕುಳಿತು ತಪಸ್ಸನ್ನು ಆಚರಿಸಿದಳು ಎಂಬ ನಂಬಿಕೆ. ಖಂಡಿತವಾಗಿಯೂ, ಹಿಡಿಂಬೆ ಧಡೂತಿಕಾಯದವಳಾಗಿದ್ದರೆ, ಅವಳಿಗೆ ಅಲ್ಲಿ ತಪಸ್ಸಿಗೆ ಕೂರಲು ಅಸಾಧ್ಯ! ನಾವು ಹಿಡಿಂಬೆಗೆ ಇಷ್ಟು ಅವಮಾನ ಮಾಡುವುದು ಸರಿಯೇ ಅನಿಸಿತು. ಅನತಿ ದೂರದಲ್ಲಿ ಘಟೋತ್ಕಚನ ಗುಡಿಯಿದೆ.
.
ಅಲ್ಲಿ ಅಲಂಕೃತ ಯಾಕ್ ಪ್ರಾಣಿಗಳಿದ್ದುವು. ಅವುಗಳ ಮೇಲೆ ಪ್ರವಾಸಿಗಳನ್ನು ಸವಾರಿ ಮಾಡಿಸಿ ಹಣ ಸಂಪಾದಿಸುವವರು ಕೆಲವರು. ಹಾಗೆಯೇ 30  ರೂ. ಕೊಟ್ಟರೆ ಮುದ್ದಾದ ಮೊಲಗಳನ್ನು ಎತ್ತಿಕೊಂಡು ಫೋಟೊ ತೆಗೆಯಬಹುದಾಗಿತ್ತು.
.
ಕೊರೆಯುವ ಚಳಿ, ಆಗೊಮ್ಮೆ ಈಗೊಮ್ಮೆ ಹಾದು ಹೊಗುವ ಮೋಡಗಳು, ಶಿಸ್ತಿನ ಸಿಪಾಯಿಗಳಂತೆ ಬೆಳೆದು ನಿಂತ ದೇವದಾರು ವೃಕ್ಷಗಳ ಮಧ್ಯೆ, ಅನನ್ಯವಾದ ಶಾಂತ ಪರಿಸರ. ನಗರದ ದೇವಾಲಯಗಳಂತೆ ಕಿಕ್ಕಿರಿದ ಜನ ಸಂದಣಿಯಿಲ್ಲ,ಮೊರೆಯುವ ಮೈಕಾಸುರನಿಲ್ಲ, ಚಪ್ಪಲಿ ಕಳೆದು ಹೋದೀತೆಂಬ ಚಿಂತೆಯೂ ಇಲ್ಲ, ಭಿಕ್ಷುಕರ ಕಾಟವೂ ಇಲ್ಲ… ಇಲ್ಲಿರುವುದು ಕೇವಲ ಶಾಂತತೆ.

– ಹೇಮಮಾಲಾ.ಬಿ

1 Response

  1. Sangeetha Muraleedhar says:

    ಹಿಡಿಂಬಾ ಮಂದಿರದ ಬಗ್ಗೆ ಚೆನ್ನಾಗಿ ನಿರೂಪಿಸಿದ್ದೀರಾ.. ಇಷ್ಟವಾಯಿತು!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: