ಪುಸ್ತಕ ಪರಿಚಯ – ಮೊಬೈಲ್ ಮೈಥಿಲಿ ಮತ್ತು ಮುಗ್ಧ ಕತೆಗಳು.
ಲೇಖಕಿ :- ಕೆ ಸುರಭಿ ಕೊಡವೂರು
ಕೆ. ಸುರಭಿ ಕೊಡವೂರು ಅವರ ಮೊಬೈಲ್ ಮೈಥಿಲಿ ಪುಸ್ತಕವು ಬಹಳ ಸೊಗಸಾಗಿದೆ. ಇದನ್ನು ಓದುವಾಗ ಲೇಖಕಿಯ ಮನಸ್ಸಿನ ಕಥೆ ಹೇಳುವ ಉತ್ಸಾಹ ಎದ್ದು ಕಾಣುತ್ತದೆ. ಈ ಪುಸ್ತಕದಲ್ಲಿ ಸರಳವಾದ ಕತೆಯ ಅಂದವಾದ ಬಣ್ಣಿಸುವಿಕೆಯನ್ನು ಓದುಗರು ಕಾಣಬಹುದು.
ಈ ಪುಸ್ತಕದಲ್ಲಿ ಕೇವಲ ಮಕ್ಕಳ ಕಥೆಗಳಲ್ಲದೆ ಕೆಲವು ಸ್ಥಳೀಯ ಪರಂಪರೆಯ ಬಗ್ಗೆ ಉಲ್ಲೇಖವಿರುವ ಕಥೆಯೂ ಇರುವುದು ಬಹಳ ಖುಷಿ ನೀಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ “ಹುಲಿ ಕೊಂದ ಸ್ವಾಮಿಗಳು” ಎಂಬ ಕಥೆ. ಇದರಲ್ಲಿ ಪಲಿಮಾರು ಮಠದ ಶ್ರೀ ರಘು ಪ್ರವೀರ ತೀರ್ಥರ ದಂತಕತೆಯ ಒಂದು ಭಾಗವನ್ನು ಕಥೆಯ ರೂಪದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೆ ಈ ಪುಸ್ತಕದಲ್ಲಿ ಸುರಭಿ ಅವರು ತಮ್ಮ ಆಸುಪಾಸಿನ ಊರುಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಕಥೆಗಳನ್ನು ನಾವು ಕಾಣಬಹುದು. ಸಾಮಾನ್ಯವಾಗಿ ಲೇಖಕರು ಯಾವುದಾದರೂ ಊರಿನ ಹೆಸರನ್ನು ತಾವೇ ಸೃಷ್ಟಿಸುತ್ತಾರೆ. ಆದರೆ ಇದರಲ್ಲಿ ಪುತ್ತೂರು, ಪಣಂಬೂರು, ಮಲ್ಪೆ ಇತ್ಯಾದಿ ಹೆಸರುಗಳನ್ನು ನಾವು ಕಾಣಬಹುದು.
ಪುಸ್ತಕದಲ್ಲಿರುವ ಪಾತ್ರಗಳು ಕಾಲ್ಪನಿಕ ವಾದರೂ ಕಥೆಯನ್ನು ಓದುವಾಗ ನೈಜವಾದ ಘಟನೆಯ ಅನುಭವವನ್ನು ನೀಡುವಂತೆ ಕಥೆಗಳನ್ನು ಬರೆದ ಸುರಭಿ ಅವರಿಗೆ ಬರವಣಿಗೆಯಲ್ಲಿ ಅತ್ಯುತ್ತಮ ಭವಿಷ್ಯವಿದೆ ಎಂಬುದು ನನ್ನ ಅಭಿಪ್ರಾಯ.
ಇವತ್ತು ತಾಂತ್ರಿಕ ಜಗತ್ತು ಬೆಳೆದಂತೆ ಮಕ್ಕಳ ಸಾಹಿತ್ಯಕ್ಕೆ ದೊರೆಯುತ್ತಿರುವ ಪ್ರೋತ್ಸಾಹ ಬಹಳ ಕಡಿಮೆಯಾಗಿದೆ. ಅಂತೆಯೇ ಮಕ್ಕಳಲ್ಲಿ ಓದುವ ಹವ್ಯಾಸವೂ ಮಾಯವಾಗುತ್ತಿದೆ. ಈ ವಿಚಾರದಲ್ಲಿ ಮತ್ತೆ ಬದಲಾವಣೆ ಬರಬೇಕಾಗಿದೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ ಹೆತ್ತವರು ಅವರವರ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಓದಿನತ್ತ ಸಾಗುವಲ್ಲಿ ಪ್ರೋತ್ಸಾಹಿಸಬೇಕಾಗಿದೆ. ಓದಿನಿಂದ ಸಿಗುವ ಅಗಾಧ ಜ್ಞಾನ ಬೇರಾವುದರಿಂದಲೂ ಸಿಗಲಾರದು ಎನ್ನುವುದು ನನ್ನ ಅನಿಸಿಕೆ.
ಚಿಕ್ಕ ವಯಸ್ಸಿನಲ್ಲಿ ಸುರಭಿ ಅವರು ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇರಿಸಲು ಹೊರಟಿದ್ದಾರೆ. ಅವರಿಂದ ಇನ್ನೂ ಉತ್ತಮ ಕೃತಿಗಳು ರಚಿಸಲ್ಪಡಲಿ ಅನ್ನುವುದು ನನ್ನ ಹಾರೈಕೆ.
– ಸುದರ್ಶನ್. ಬಿ
ಪುಸ್ತಕ ಪರಿಚಯ ಮಾಡಿರುವ ರೀತಿ ಚೆನ್ನಾಗಿದೆ.ಹಾಗೇ ಓದುವ ಹವ್ಯಾಸ ಕಂಡು ಸಂತಸವಾಯಿತು. ಶುಭ ಹಾರೈಕೆಗಳು.
ಸೊಗಸಾದ ಪುಸ್ತಕ ವಿಮರ್ಶೆ ಮತ್ತು ಪರಿಚಯ…ಧನ್ಯವಾದಗಳು.
ಪುಸ್ತಕ ಚೆನ್ನಾಗಿ ಪರಿಚಯಿಸಿದ್ದೀರಿ. ಧನ್ಯವಾದಗಳು