ಭೂರಮೆಗೆ ಓಜೋನ್ ಪದರದ ರಕ್ಷೆ

Share Button

ಪ್ರತಿ ವರ್ಷ ಸೆಪ್ಟೆಂಬರ್ 16 ನ್ನು ವಿಶ್ವ ಓಜೋನ್ ದಿನ ಎಂದು ಆಚರಿಸಿ ಓಜೋನ್ ಪದರದ ರಕ್ಷಣೆ ಹಾಗೂ ಮಹತ್ವದ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆದುಬರುತ್ತಿದೆ. ಮಳೆಗಾಲದಲ್ಲಿ ಕೊಡೆಯು ಮಳೆಯಿಂದ ನಮ್ಮನ್ನು ರಕ್ಷಿಸುವ ಹಾಗೆ ನಿಸರ್ಗ ನಿರ್ಮಿತ ಓಜೋನ್ ಪದರ ಸೂರ್ಯನಿಂದ ಬರುವ ಹಾನಿಕಾರಕ ಅತಿನೇರಳೆ ಕಿರಣಗಳಿಂದ ಭೂಮಾತೆಯನ್ನು ರಕ್ಷಿಸುತ್ತಿದೆ.

ಓಜೋನ್ ಎಂದರೇನು?
ಓಜೋನ್ ಎನ್ನುವುದು ನಸುನೀಲಿ ಬಣ್ಣದ ನೈಸರ್ಗಿಕ ಅನಿಲದ ಪದರವಾಗಿದೆ. ಓಜೋನ್ ಆಕ್ಸಿಜನ್‌ನ ಮೂರು ಪರಮಾಣುಗಳನ್ನು ಹೊಂದಿರುವ ನಸುನೀಲಿ ಬಣ್ಣದ ವಿಶಿಷ್ಠ ಅಣುವಾಗಿದ್ದು ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ಸಂಸ್ಕರಿಸುತ್ತದೆ. ಭೂಮಿಯ ವಾತಾವರಣದ ಮೊದಲೇ ಎರಡು ಪದರಗಳಾದ ಟ್ರೋಪೋಸ್ಪಿಯರ್ ಹಾಗೂ ಸ್ಟ್ರಾಟೋಸ್ಪಿಯರ್‌ಗಳಲ್ಲಿ ಜೀವರಕ್ಷಕ ಓಜೋನ್ ಪದರ ಕಂಡುಬರುತ್ತದೆ.

ಓಜೋನ್ ದಿನಾಚರಣೆ ಆಚರಣೆಯ ಅಗತ್ಯವೇನಿದೆ?
1985 ರಲ್ಲಿ ಓಜೋನ್ ಪದರದಲ್ಲಿ ರಂಧ್ರ ಹಾಗೂ ಪದರ ತೆಳುವಾಗಿರುವುದು ಕಂಡುಬಂದಿತು.ಇದರಿಂದ ಸಂಭವಿಸಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿತ ಜಗತ್ತಿನ ವಿವಿಧ ದೇಶಗಳ ಸರಕಾರದ ಮುಖ್ಯಸ್ಥರು 1987 ರ ಸೆಪ್ಟೆಂಬರ್ 16ರಂದು ವಿಯೆನ್ನಾದಲ್ಲಿ ಅಂತರಾಷ್ಠೀಯ ಸಮ್ಮೇಳನವನ್ನು ನಡೆಸಿ ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಜಾಗೃತಿ ಮೂಡಿಸುವ “ಮಾಂಟ್ರೆಲ್ ಪ್ರೋಟೊಕಾಲ್ “ಗೆ 24  ದೇಶಗಳು ಸಹಿಮಾಡಿದವು. ಈ ಮಹತ್ವದ ದಿನವನ್ನು ನೆನೆಯುವ ಮತ್ತು ನಾಗರೀಕರಲ್ಲಿ ಓಜೋನ್ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಸೆಪ್ಟೆಂಬರ್ 16 ರಂದು ವಿಶ್ವ ಓಜೋನ್ ದಿನವನ್ನಾಗಿ ಆಚರಿಸಲಾಗುತ್ತಿದೆ.

ಓಜೋನ್ ಪದರದ ಮಹತ್ವ
ಭೂಮಿಯಲ್ಲಿ ಜೀವಿಗಳು ಬದುಕಿ ಬಾಳಲು ಓಜೋನ್ ಪದರ ಬೇಕೇ-ಬೇಕು. ಜೀವಗೋಳದ ವ್ಯಾಪ್ತಿಯಲ್ಲಿ ಗಾಳಿಯ ಇತರೆ ಅಂಶಗಳಂತೆ ಇರುವ ಓಜೋನ್ ಭೂಮಿಯ ಮೇಲ್ಮೈಗಿಂತ 15-50  ಕಿ.ಮೀ.ಎತ್ತರದಲ್ಲಿ ರೂಪುಗೊಂಡಿರುವುದು ಭೂಮಿಯ ನೈಸರ್ಗಿಕ ಇತಿಹಾಸದಲ್ಲಿ ಜೀವಿಗಳ ವಿಕಾಸಕ್ಕೆ ಸಿಕ್ಕ ಬಹುದೊಡ್ಡ ಕೊಡುಗೆ. ಸೂರ್ಯನಿಂದ ಬರುವ ಶೇ.97-98 ಅತಿನೇರಳ ಕಿರಣಗಳನ್ನು ಹೀರಿಕೊಂಡು ಜೀವರಾಶಿಯನ್ನು ರಕ್ಷಿಸುತ್ತಿದೆ.


ಆತಂಕಕ್ಕೆ ಕಾರಣ-ಓಜೋನ್ ರಂಧ್ರ
ಓಜೋನ್ ರಂಧ್ರ ಒಂದರೆ ಜೋನ್ ಪದರ ಸಂಪೂರ್ಣವಾಗಿ ನಾಶವಾಗಿದೆ ಎಂದು ಗಾಬರಿ ಪಡಬೇಕಾಗಿಲ್ಲ. ಅಪಾಯಕಾರಿ ವಿಕಿರಣಗಳಿಂದ ಓಜೋನ್ ಪದರದ ಸಾಂದ್ರತೆ ಕಡಿಮೆಯಾಗುತ್ತಿದೆ ಅಥವಾ ತೆಳುವಾಗುತ್ತಿದೆ ಎಂದರ್ಥ. ಅತೀನೇರಳ ಕಿರಣಗಳಿಂದ ನಮ್ಮನ್ನು ರಕ್ಷಿಸುವ ಪೃಥ್ವಿಗೆ ನಿಸರ್ಗ ನಿರ್ಮಿತ ಕವಚವಾದ ಓಜೋನ್ ಪದರವು 250 ರಿಂದ 305 ಡಾಬ್ಸನ್ ಯೂನಿಟ್ನಷ್ಟು ದಪ್ಪವಿರಬೇಕು.ಆದರೆ ಈ ಹಿಂದೆ ಓಜೋನ್ ಪದರದಲ್ಲಿ ರಂಧ್ರವಾಗಿದೆ,ಅದರ ಸಾಂದ್ರತೆ ಕಡಿಮೆ ಆಗಿದೆ ಎಂದು ತಿಳಿದಾಗ ಕೇವಲ 90 ಡಾಬ್ಸನ್ ನಷ್ಟಿತ್ತು.

ಓಜೋನ್ ಪದರದ ಸವಕಳಿಗೆ ಕಾರಣಗಳು
ಮಾನವ ನಿರ್ಮಿತ ತಪ್ಪುಗಳಿಂದಾಗಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವ ಓಜೋನ್ ಪದರ ಜನಜೀವನವನ್ನು ತೊಂದರೆಗೀಡು ಮಾಡುತ್ತಿರುವುದು ಆತಂಕದ ಸಂಗತಿ .ವಾಯುಮಾಲಿನ್ಯ ಮತ್ತು ಪರಿಸರದ ನಾಶದಿಂದಾಗಿ ಪ್ರಕೃತಿ ನಿರ್ಮಿತ ರಕ್ಷಣಾ ಕವಚ ಶಿಥಿಲಗೊಳ್ಳುತ್ತಿದೆ.  ಮಾನವನ ಅಟ್ಟಹಾಸಕ್ಕೆ ಬಲಿಯಾದ ವಸ್ತು-ವಿಶೇಷಗಳ ಪಟ್ಟಿಯಲ್ಲಿ ಓಜೋನ್ ಪದರವು ಒಂದು.. ಪ್ರಕೃತಿಯ ಸಮತೋಲನವನ್ನು ನಾಶಗೊಳಿಸುತ್ತಿರುವ ಮಾನವನ ಕೈಗಾರಿಕಿಕರಣದ ಚಟುವಟಿಕೆಗಳು, ಕಾರ್ಖಾನೆಗಳಿಂದ ಹೊರಹೊಮ್ಮುವ ಹಾನಿಕಾರಕ ವಿಷಾನಿಲಗಳು,ವಾಹನಗಳು ಬಿಡುವ ಹೊಗೆಯಲ್ಲಿರುವ ವಿಷಾನಿಲಗಳು ಶಿಥಲೀಕರಣ ಯಂತ್ರದಿಂದ ಹೊರಹೊಮ್ಮುವ ಅನಿಲಗಳು ಓಜೋನ್ ಪದರಕ್ಕೆ ಮಾರಕವಾಗಿವೆ. ಮೀಥೇನ್,ಕಾರ್ಬನ್ ಮಾನಾಕ್ಸೈಡ್, ಸಿ.ಎಪ್.ಸಿ.(ಕ್ಲೋರೋಪ್ಲೋರೋಕಾರ್ಬನ್),ಮೀಥೈಲ್ ಬ್ರೋಮೈಡ್ ಮುಂತಾದ ಅನಿಲಗಳು ಓಜೋನ್ ಪದರ ತೆಳುವಾಗಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಕಲ ಜೀವರಾಶಿಗಳ ರಕ್ಷಾಕವಚ ಓಜೋನ್ ವಲಯವಾಗಿದ್ದು ಅದನ್ನು ಕಾಪಾಡಿಕೊಳ್ಳುವುದು ಮನುಷ್ಯನ ಆದ್ಯ ಕರ್ತವ್ಯವಾಗಿರುತ್ತದೆ.

ಓಜೋನ್ ಪದರ ನಾಶದಿಂದಾಗುವ ಪರಿಣಾಮಗಳು
ಭೂಮಿಯ ಮೇಲಿನ ಓಜೋನ್ ಪದರ ನಾಶವಾದರೆ ಸೂರ್ಯನಿಂದ ಬರುವ ಅತಿನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಜೀವಿಗಳ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ….. ಚರ್ಮದ ಕ್ಯಾನ್ಸರ್,ಉಸಿರಾಟದ ತೊಂದರೆ,ಚರ್ಮದ ಅಲರ್ಜಿ ಡಿ‌ಎನ್‌ಎ ಜೀವಕೋಶಗಳನ್ನು ನಾಶಗೊಳಿಸಿ ಅನುವಂಶೀಯ ಅವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಪ್ರಾಣಿಸಂಕುಲ ಪರಿಸರ ವ್ಯವಸ್ಥೆ ಮತ್ತು ಅನುವಂಶಿಕ ನಷ್ಟವು ಇಂದಿನ ಹಾಗೂ ಮುಂದಿನ ಕುಲದ ಅಸ್ತಿತ್ವದ ಮೇಲೆ ಅತಂಕವೊಡ್ಡಿದೆ.

ಹೊಣೆಯರಿತ ನಡವಳಿಕೆ ನಮ್ಮದಾಗಲಿ
ಓಜೋನ್ ಇಲ್ಲದ ಭೂಮಿಯು ಮೇಲ್ಛಾವಣಿ ಇಲ್ಲದ ಮನೆಯಂತೆ,ಆದುದರಿಂದ ಮಾನವ ತನ್ನ ದುರಾಸೆ ತ್ಯಜಿಸಿ ಕ್ಷಣಿಕ ಸುಖದ ಆಸೆಗೆ ಬೆನ್ನುಹಾಕಿ ತಾನು ಬದುಕುವ ನೆಲ ಜಲವನ್ನು ಗೌರವಿಸಿ ಹಿತಮಿತವಾಗಿ ಬಳಸುವ ಹೊಣೆಯರಿತ ನಡವಳಿಕೆಯನ್ನು ಅಳವಡಿಸಿದಾಗ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲು ಎಡೆಯಾಗಬಹುದು. ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಅದರ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ.”ಬದುಕು ಮತ್ತು ಬದುಕಗೊಡು”ಎಂಬ ಭಾರತೀಯರ ಪುರಾತನ ಆಶಯವನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸುವ ಪ್ರಜ್ಞೆ ನಮ್ಮದಾಗಲಿ.

– ಮಹೇಶ್ ಕೆ.ಎನ್, ಕಡ್ಲೇಗುದ್ದು, ಚಿತ್ರದುರ್ಗ

5 Responses

  1. ಬಿ.ಆರ್.ನಾಗರತ್ನ says:

    ಓಝೊನ್ ಬಗ್ಗೆ ಉತ್ತಮ ಮಾಹಿತಿ ನೀಡಿರುವ ನಿಮಗೆ ವಂದನೆಗಳು ಸಾರ್.

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಬರಹ. ವಿದ್ಯಾರ್ಥಿಗಳಿಗೂ ಈ ಮಾಹಿತಿಗಳು ಕಲಿಕೆಯಲ್ಲಿ ಉಪಯೋಗವಾಗಬಲ್ಲುವು.

  3. Hema says:

    ಉತ್ತಮ ಮಾಹಿತಿ.

  4. ಶಂಕರಿ ಶರ್ಮ says:

    ಭೂಮಾತೆಯ ಛತ್ರಿಯು ಹಾಳಾಗುತ್ತಿರುವ ಬಗ್ಗೆ, ಅದರ ಅಗತ್ಯತೆ, ಕಾರಣಗಳು..ಹೀಗೆ ಹತ್ತು ಹಲವು ವಿಚಾರಪೂರ್ಣ ಮಾಹಿತಿಗಳನ್ನೊಳಗೊಂಡ ಸಕಾಲಿಕ ಲೇಖನ ಚೆನ್ನಾಗಿದೆ.

  5. Anonymous says:

    ಅತ್ಯಂತ ಅಗತ್ಯವಾದ ಮಾಹಿತಿಗಳನ್ನು ನೀಡಿದ್ದೀರಿ. ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: