ಬದುಕಿನ ಅರ್ಥ ಶೋಧಿಸುವ ‘ಭಾವಬಿಂದು’
‘ಭಾವಬಿಂದು’ ಪರಿಣಿತ ರವಿಯವರ ಹನಿಗವನಗಳ ಸಂಕಲನ. ಕಳೆದ ವರ್ಷ ಅವರ ‘ವಾತ್ಸಲ್ಯ ಸಿಂಧು’ (ಕಥಾ ಸಂಕಲನ), ‘ಸುಪ್ತಸಿಂಚನ'(ಕವನ ಸಂಕಲನ) ಏಕಕಾಲದಲ್ಲಿ ಬಿಡುಗಡೆಗೊಂಡು ಓದುಗರ ಗಮನ ಸೆಳೆದಿದ್ದುವು. ಇದು ಅವರ ಮೂರನೇ ಕೃತಿ. “ಬದುಕು ಮತ್ತು ಭಾವನೆಗೆ ನಿಕಟ ನಂಟಿದೆ. ಭಾವನೆಗಳಿಲ್ಲದ ಬದುಕು ಗಾಳಿಯಿಲ್ಲದ ಬಲೂನಿನಂತೆ” ಎನ್ನುವ ಕವಯತ್ರಿಯ ಬದುಕಿನ ಭಾವಯಾನದಲ್ಲಿ ಬಿರಿದ ಭಾವತಳಿರುಗಳು ಈಗ ‘ಭಾವಬಿಂದು’ಗಳಾಗಿವೆ.
ಪರಿಣಿತರ ವಿದ್ಯಾಗುರು ವಿ ವಿ ಕಾಲೇಜು ಮಂಗಳೂರಿನ ಆಂಗ್ಲ ಸಾಹಿತ್ಯ ವಿಭಾಗ ಮುಖ್ಯಸ್ಥರಾದ ಡಾ. ರಾಜಲಕ್ಷ್ಮೀ ಎನ್ ಕೆ ಇವರು ಮೆಚ್ಚು ನುಡಿಯಲ್ಲಿ ಪ್ರಿಯ ಶಿಷ್ಯೆಯ ರಚನೆಗಳನ್ನು ಪರಾಮರ್ಶಿಸಿ ಹರಸಿದ್ದಾರೆ. ಕವಿ ಕಲಾವಿದ ವೆಂಕಟ್ ಭಟ್ ಎಡನೀರು ಬೆನ್ನುಡಿ ಬರೆದಿದ್ದಾರೆ. ಸಂಕಲನದಲ್ಲಿ ನೂರವೈತ್ತು ಹನಿಗವನಗಳಿವೆ. ಪರಿಣಿತರ ಸೃಜನಶೀಲ ಮನಸ್ಸು ಅಕ್ಷರಗಳಲ್ಲಿ ಬಿಡಿಸಿದ ಚಿತ್ತಾರವಿದು. *’ ಮನವೆಂಬ ಅಂಗಳದಿ| ನನ್ನ ಕನಸುಗಳೆಲ್ಲಾ| ಚಿತ್ತಾರದ ರಂಗೋಲಿಯಂತೆ| ರಂಗು ರಂಗಾಗಿ ಹರಡಿವೆ'(ಕನಸು)* ವಾಸ್ತವದ ಕಟು ಅನುಭವದಲ್ಲಿ ಕಾವ್ಯ ಈ ರೀತಿ ಅರಳಿ ಹರಡಿಕೊಂಡರೂ *’ಮಿಂಚಂತೆ ಮರೆಯಾದ| ಗತಕಾಲವ ನೆನೆದಾಗ| ಒಡೆದ ಗಾಜನ್ನು ಕಲ್ಲಿಂದ| ಪುಡಿಪುಡಿ ಮಾಡಿದಂತಾಯಿತು'(ಗತಕಾಲ)* ಎನ್ನುತ್ತಾರೆ.
ಹೊಸಗನ್ನಡ ಸಾಹಿತ್ಯ ಹೊಸತನಕ್ಕೆ ತುಡಿಯುತ್ತಿರುವುದನ್ನು ಕಾಣಬಹುದು. ಹೊಸರೀತಿಯ ಬರಹಗಾರರು, ಓದುಗರು ಸೃಷ್ಟಿಯಾಗುತ್ತಿದ್ದಾರೆ. ಕತೆ, ಕವನ, ಕಾದಂಬರಿ, ಜೀವನಚರಿತ್ರೆ,ಪ್ರವಾಸ ಕಥನ, ಯಶೋಗಾಥೆಗಳು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿವೆ. ಸಾಹಿತ್ಯ ಪ್ರೀತಿ ಒಂದು ಸಂಸ್ಕೃತಿಯಾಗಿ ಬೆಳೆಯುತ್ತಿದೆ. ಇದು ಹನಿಗವನ, ಮಿನಿಗವನ, ಕಿರುಕವನ, ಚುಟುಕುಗಳ ಸಮೃದ್ಧಿ ಕಾಲ. ಪತ್ರಿಕೆಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಎಗ್ಗಿಲ್ಲದೆ ಹರಿದು ಬರುತ್ತಿದೆ. ಕಿರಿದರೊಳು ಪಿರಿದರ್ಥ ಅದರ ಜಾಣ್ಮೆ. ಆಲೋಚನೆಗೆ, ಚಿಂತನೆಗೆ ಹಚ್ಚುವುದು ಹಿರಿಮೆ. ಕಾವ್ಯಗುಣದ ಈ ಪ್ರಕಾರದಲ್ಲಿ ವರ್ಣನೆ, ಹೋಲಿಕೆ, ವಿಡಂಬನೆ ಇದೆ. ತತ್ವ, ಸತ್ವ, ಅರ್ಥ, ಧ್ವನಿ, ದ್ವಂದ್ವ ಎಲ್ಲವೂ ಇದೆ. ‘ಭಾವಬಿಂದು’ ಈ ಎಲ್ಲಾ ಗುಣಗಳನ್ನು ಕಾಯ್ದುಕೊಂಡಿದೆ.
ಪರಿಣಿತರ ರಚನೆಗಳು ಸಂವೇದನಾ ಸಾಮರ್ಥ್ಯದಿಂದ ಅರ್ಥ ಪ್ರಪಂಚವನ್ನು ತೆರೆದು ಕೊಳ್ಳುತ್ತದೆ. ‘ *ಅಲ್ಲೊಂದು ಹಾರುವ ಹಕ್ಕಿ| ಇಲ್ಲೊಂದು ಹಾಡುವ ಮಗು| ಹಕ್ಕಿಗೆ ಹಾರಿದ್ದೇ ದಾರಿ| ಮಗುವಿಗೆ ಹಾಡಿದ್ದೇ ರಾಗ (ರಾಗ)* ಅಪ್ರಬುದ್ಧ ಚರ್ಯ ಸ್ವಂತಿಕೆಯಲ್ಲಿಯೇ ತನ್ನತನವನ್ನು ಕಾಯ್ದುಕೊಳ್ಳುವುದು ಹೀಗೆ.
ಮೌನ ಮೊಗ್ಗು ಮಾತು ಹೂವು ಎಂಬ ಮಾತಿದೆ. ಇಲ್ಲಿ ಮಾತು ಹೂವಿನಂತೆ ಅರಳಿದರೂ ಎದೆ ಬರಿವ ಮಾತಿಗಿಂತ ಮೌನವೇ ಇಷ್ಟವಾಗುತ್ತದೆ. *’ ಮೌನವೇ ಇಷ್ಟ ಎನಗೆ| ಎದೆಯ ಬಿರಿದ ಮಾತಿಗಿಂತ| ಮೌನದೆನ್ನ ಮಾತುಗಳು| ಮಾತಿಗಿಂತ ಅತಿ ಭಿನ್ನ'(ಇಷ್ಟ)* ಎನ್ನುವುದು ಸ್ಪಷ್ಟ.
ಲಾಲಿಸಿ ಪಾಲಿಸಿ ಬೆಳೆಸಿದವರು ಕೆಲವೊಮ್ಮೆ ಯಾವ ಪ್ರಯೋಜನಕ್ಕೂ ಬರುವುದಿಲ್ಲವೆಂದಾಗ ನೋವು ಸಹಜ. ಆದರೆ ನಮ್ಮ ಕರ್ಮವನ್ನು ನಾವು ಮಾಡುತ್ತಲೇ ಇರಬೇಕು. ಫಲ ನಿರೀಕ್ಷಿಸಬಾರದು. *’ನಾನೆಟ್ಟ ಗಿಡದಿ ಅರಳಿದ| ಸುಮವೇಕೋ ಕಂಪ ಸೂಸುತ್ತಿಲ್ಲ| ಮುಂಜಾವಿನ ನಸುಕಿನಲ್ಲಿ| ಬಿರಿದರೂ ಸುಗಂಧವೇ ಇಲ್ಲ'(ಇಲ್ಲವೇ ಇಲ್ಲ)* , ಆದರೆ *’ಬಾಳ ಬಂಡಿಯ ತೇರನು| ಚಂದದಲಿ ಎಳೆವೆನು| ಜೊತೆಯಿತಲು ನೀನು| ಎದೆಗುಂದೆನು ನಾನು'( ನಾನು-ನೀನು)* ಎಂಬಲ್ಲಿ ಭರವಸೆಯಿದೆ. ದ್ವಂದ್ವಾರ್ಥದ ಮೂಲಕ ‘ನೀನು’ ಎಂಬ ಪದ ದೇವರಾಗಿಯೂ ಕೈ ಹಿಡಿದ ಪತಿಯಾಗಿಯೂ ಸೂಚಿಸಲ್ಪಟ್ಟಿದೆ.
ತಾನು ಹಚ್ಚಿದ ದೀಪ ತನ್ನ ಮನೆ,ಮನವನ್ನಷ್ಟೇ ಬೆಳಗುವುದು ಹಿತವಲ್ಲ. ಎಲ್ಲವನ್ನೂ ಬೆಳಗಬೇಕೆಂಬ ಸದಾಶಯ ಕವಯತ್ರಿಯದ್ದು. *’ದೀಪ ಹಚ್ಚುತ್ತೇನೆ| ಕಗ್ಗತ್ತಲೆ ಹೊರಗಿದ್ದರೂ| ಎನ್ನ ಮನೆಮನವ| ಬೆಳಗಲೆಂಬ ಸ್ವಾರ್ಥವಿಲ್ಲ'(ದೀಪ)* ಇಲ್ಲಿ ವಿಶ್ವ ಸಂತತಿಗೆಲ್ಲ ಬೆಳಕು ಹಾಯಬೇಕೆಂಬ ಆಶಯವಿದೆ. *’ಬೆಳಕಿನ ಬೆಳಕಿಗಿಂತ| ಕತ್ತಲೆಯ ಕತ್ತಲೆಯೆ| ಏಕೋ ಮುದ ನೀಡುತ್ತಿದೆ| ಜಾರುವ ಕಂಬನಿಯ ಒರೆಸಲೆಂದೇ'(ಕಂಬನಿ)*. *ಎಣ್ಣೆಯೂ ಆರಿತು| ಬತ್ತಿಯೂ ಕರಗಿತು| ಗಾಳಿಯೂ ಬೀಸಿತು| ಮತ್ತೆ ಕತ್ತಲೆ ಕವಿಯುತು'(ಕತ್ತಲು)* ಮೊದಲಾದ ಸಾಲುಗಳು ಕತ್ತಲು ಬೆಳಕಿನ ಅಸ್ತಿತ್ವವನ್ನು ಸಾರುತ್ತಾ ಬದುಕಿನ ಮೂಕ ರೋಧನಕ್ಕೆ ಸಾಕ್ಷಿಯಾಗುತ್ತದೆ. *’ಹೆಪ್ಪುಗಟ್ಟಿದ ಮೋಡ| ಮಳೆಯಾಗಿ ಸುರಿಯಿತು| ಎದೆಯೊಳಗಿನ ನೋವು| ಕಣ್ಣೀರಾಗಿ ಹರಿಯಿತು'(ನೋವು)* , ಮಡುಗಟ್ಟಿದ ಯಾತನೆಯ ಮಧ್ಯೆಯೂ ಕವಯತ್ರಿ ಬಯಸುವುದು ಸಾಮಾಜಿಕ ಸ್ವಾಸ್ಥವನ್ನು – *’ಕಾದಿಹಳು ಇಳೆ| ಸುರಿಯಲಿ ಮಳೆ| ಕೊಚ್ಚಿ ಹೋಗಲಿ ಕೊಳೆ| ಕಿತ್ತೆಸೆದು ಜಗದ ಕಳೆ'(ಕಳೆ)* ಇದಕ್ಕೆ ಸಾಕ್ಷಿ.
ಗತಕಾಲದ ಸ್ಮರಣೆಗಳು, ವರ್ತಮಾನದ ಚಿತ್ರ ವಿಚಿತ್ರಗಳು ಒಮ್ಮೆಲೇ ಸ್ಮೃತಿ ಪಟಲದಲ್ಲಿ ಮೂಡಿದಾಗ ಸಹಜವಾಗಿ ದೈಹಿಕ ಬಲ ಕುಗ್ಗುವುದಿಲ್ಲ. *’ಕನಸು ಕಮರಿದರೂ| ಛಲದ ಚೈತನ್ಯವಿರಲು | ನೂರು ಬಾರಿ ಬಿದ್ದರೂ| ಏಳುವ ಬಲವಿಹುದು'(ಬಲ)* ಇದು ಒಂದು ಸವಾಲೂ ಹೌದು. ಮಹಿಳೆಯ ವ್ಯಕ್ತಿತ್ವದ ವಿಭಿನ್ನ ಮುಖಗಳು ಪರಿಣಿತರ ದೃಷ್ಟಿಯಲ್ಲಿ- *’ಆಕೆ ಬೆಂಕಿಯ ಚೆಂಡಾಗುವಳು| ಉರಿವ ಜ್ವಾಲಾಮುಖಿಯಾಗುವಳು| ಸುಡುವ ಅಗ್ನಿಯಾಗುವಳು| ಬೆಳಗುವ ನಂದಾದೀಪವೂ ಆಗುವಳು'(ಆಕೆ).* ಸ್ತ್ರೀ ಬೆಳಕಿನ ಹಾಗೆ. ಬೆಂಕಿಯಾಗಿ ಸುಡುವಳು. ನಂದಾದೀಪವಾಗಿ ಬೆಳಗುವಳು. ಅಂತೆಯೇ *’ನನ್ನೊಳಗಿನ ಮೌನ| ನನ್ನಲ್ಲೇ ಇದ್ದು ಬಿಡಲಿ| ಹೊರಬಂದರೆ ಅದು| ಸುಟ್ಟೀತು ಹಲವರ'(ಸುಟ್ಟೀತು)* . ಹೆಣ್ಣು ಸಹನಾಶಕ್ತಿಯ ಪ್ರತೀಕ. ಮೌನ ಸ್ಪೋಟಿಸಿದರೆ ದುರಂತಕ್ಕೆ ಸಾಧ್ಯತೆ ಎಂಬುದು ಇದರ ತಾತ್ಪರ್ಯ. ಇಲ್ಲಿ ಸೂಚ್ಯಾರ್ಥ, ಭಾವಾರ್ಥವನ್ನು ಗಮನಿಸಬಹುದು.
ಫಲ ಲಭಿಸಬೇಕಾದರೆ ಶ್ರಮ ಅಗತ್ಯ. ಸೌಧ ಸುಂದರವಾಗಿದ್ದರೆ ತಳಪಾಯ ಗಟ್ಟಿಯಿರಬೇಕು. ಅಂತೆಯೇ *’ರಸಭರಿತ ಮಾವು| ಕಂಡಾಗ ನನಗೆ| ಏನೋ ಗೊತ್ತಿಲ್ಲ| ಬೇರು ನೆನಪಾಗುವುದು'(ಬೇರು)*. ಮಕ್ಕಳು ದೊಡ್ಡವರಾಗಿ ಉನ್ನತ ಸ್ಥಾನಮಾನ ಗಳಿಸಿದರೆ, ಅವರನ್ನು ಸಾಕಿ ಸಲಹಿ ಬೆಳೆಸಿದ ತಂದೆತಾಯಿರನ್ನು ಮರೆಯಬಾರದಲ್ಲವೇ?… *’ಆಂತರ್ಯದ ಮಣ್ಣ| ಫಲವತ್ತು ಮಾಡಿ| ಮಾನವೀಯತೆಯ ಬೀಜ| ಬಿತ್ತಬೇಕಿದೆ ನೋಡಾ'(ಬಿತ್ತಬೇಕು)-* ಇದು ವಿಶ್ವಮಾನವ ಸಂದೇಶ. ಆದರೆ *’ಹಾಡುವ ಆಸೆ| ಸ್ವರವೇ ಇಲ್ಲ| ಕುಣಿಯುವ ತವಕ| ಕಾಲೇ ಇಲ್ಲ'(ಆಸೆ)* -ಅನುಭವ ಸತ್ಯ!
ಹೆಣ್ಣಿನ ತಲ್ಲಣ, ಬಯಕೆಗಳನ್ನು ಅಭಿವ್ಯಕ್ತಿಸುವ ಕೆಲವು ಹನಿಗಳು ಅನುಭವಕ್ಕೆ ಹತ್ತಿರವಾಗಿ ಅಕ್ಷರಗಳಲ್ಲೂ ಹರಳುಗಟ್ಟಿವೆ. *’ಆವಿಯಾದ ಸ್ವಪ್ನಗಳೇ| ಮಳೆಯಾಗಿ ಸುರಿದು ಬಿಡಿ| ದುಗುಡಗಳ ಮರೆತು| ಹಾಯಾಗಿ ನೆನೆದು ಬಿಡುವೆ'(ಬಯಕೆಗಳು)* ಹೀಗಿದ್ದೂ ಬಾಲ್ಯವನ್ನು ನೆನೆದಾಗ ಏನೋ ಖುಷಿಯಾಗುತ್ತದೆ. *’ಹನಿಹನಿಯಾಗಿ| ಮರದಿ ತೊಟ್ಟಿಕ್ಕುವ| ಇಬ್ಬನಿಯ ಹನಿಯಂತೆ| ಆ ಮಧುರ ಬಾಲ್ಯ'(ಬಾಲ್ಯ)* ಸುಂದರ.
ಪರಿಣಿತ ರವಿಯವರ ಭಾವ ವಿಸ್ತಾರ, ಅನುಭವದ ಹರಹು, ಮಾನವೀಯ ಕಳಕಳಿ ಇಲ್ಲಿ ಕಾವ್ಯ ಶಿಲ್ಪದಲ್ಲಿ ಬಿಗಿಗೊಂಡಿದೆ. ಕಿರಿದಾದ ರಚನೆಗಳು ಹಿರಿದಾದ ಅರ್ಥ ಸ್ಫುರಿಸುತ್ತದೆ. ತೆರೆಯ ಮರೆಯ ಸತ್ಯಗಳು, ಸ್ವಸ್ಥ-ಅಸ್ವಸ್ಥ ಮನಸಿನ ವಿವಿಧ ಆಕಾರ ವಿಕಾರಗಳು, ಹೆಣ್ಮನದ ತವಕ ತಲ್ಲಣಗಳು, ಪ್ರಕೃತಿ ಜೊತೆಗಿನ ಅನುಸಂಧಾನ ಸಶಕ್ತ ಪದಬಂಧಗಳಲ್ಲಿ ದಾಖಲಾಗಿವೆ. ನಮ್ಮ ಸಮಾಜ ವ್ಯವಸ್ಥೆ, ಮಾನವೀಯ ಸಂಬಂಧಗಳು, ಮೌಲ್ಯಗಳು ಕೆಲವೇ ಸಾಲುಗಳಲ್ಲಿ ಅಭಿವ್ಯಕ್ತಗೊಂಡಿವೆ. ಬದುಕಿನ ಅರ್ಥವನ್ನು ಶೋಧಿಸುತ್ತಿವೆ.
ಸರಳವಾದ ಭಾಷೆ, ಒಂದಕ್ಕಿಂತ ಹೆಚ್ಚು ಅರ್ಥ ವಿಸ್ತರಿಸುವ ಸಾಲುಗಳು ಗಮನ ಸೆಳೆಯುತ್ತವೆ. ಒಂದೇ ಅರ್ಥ ಸ್ಫುರಿಸುವ ಕವನಗಳೂ ಕೂಡಾ ಸಂಕಲನವನ್ನು ಸೇರಿಕೊಂಡಿವೆ. ಪರಿಣಿತ ಅವರ ಭಾವನೆಗಳು, ಚಿಂತನೆಗಳು ಇಲ್ಲಿ ಹರಳುಗಟ್ಟಿವೆ. ಕ್ಲೀಷೆ ಇಲ್ಲ ಕ್ಲೇಶವೂ ಇಲ್ಲ. ಮನ ಮುಟ್ಟುತ್ತದೆ. ಎದೆ ತಟ್ಟುತ್ತದೆ.
-ರಾಧಾಕೃಷ್ಣ ಕೆ. ಉಳಿಯತ್ತಡ್ಕ
‘ಭಾವಬಿಂದು’ ಹನಿಗವನಗಳ ಸಂಕಲನದಲ್ಲಿನ ಪ್ರತ್ಯೇಕ ಕವನಗಳ ವಿಮರ್ಶೆಯ ಜೊತೆಗೆ ಕವಯಿತ್ರಿಯವರನ್ನು ಪರಿಚಯಿಸುವ ಲೇಖನ ಚೆನ್ನಾಗಿದೆ.