ಪುಸ್ತಕ ಪರಿಚಯ : ಹಾಣಾದಿ
ಕಪಿಲ ಪಿ ಹುಮನಾಬಾದೆ ಅವರು ಬರೆದ “ಹಾಣಾದಿ” ಕಾದಂಬರಿಯು ಬಹಳ ಚೆನ್ನಾಗಿ ಮೂಡಿ ಬಂದಿದೆ. ಯಾವುದಾದರೂ ಚಲನಚಿತ್ರ ನಿರ್ದೇಶಕ ಇದನ್ನು ಓದಿದರೆ ಇದರ ಮೇಲೊಂದು ಚಿತ್ರವನ್ನು ಮಾಡುವ ಚಿಂತನೆಯನ್ನು ಮಾಡಿಯಾರು ಎಂದು ನನಗನ್ನಿಸಿತು. ಇದರಲ್ಲಿ ಆರಂಭದಿಂದ ಕೊನೆಯವರೆಗೂ ರೋಚಕತೆ ಹಾಗೂ ಕುತೂಹಲವನ್ನು ಕಾಪಾಡಿಕೊಂಡು ಬರಲಾಗಿದೆ. ಕೊನೆಯಲ್ಲಿ ಗುಬ್ಬಿ ಆಯಿ ಮೃತ ಆತ್ಮವೆಂದು ತಿಳಿದಾಕ್ಷಣ ನನಗಂತೂ ಒಂದು ಕ್ಷಣ ಜುಮ್ಮೆನ್ನಿಸಿತು. ಇದು ಕಥೆಗೆ ಒಂದು ಉತ್ತಮ
ತಿರುವು ಆಗಿದೆ. ಅದಲ್ಲದೆ ಇದರಲ್ಲಿ ಭೂತ ಪ್ರೇತ ವೆಂಬ ಮಾನವನ ಮೂಢನಂಬಿಕೆ ಹಾಗೂ ಅದರ ಪರಿಣಾಮವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದಾಗಿದೆ. ಈ ಮೂಢನಂಬಿಕೆಯಿಂದಾಗಿ ಯಾವುದೇ ತಪ್ಪಿಲ್ಲದ ಬಾದಾಮಿ ಗಿಡದೊಂದಿಗೆ ಒಂದು ಪರಿಶ್ರಮಿ ಜೀವವೂ ಬಲಿಯಾಯಿತು.
ಇಲ್ಲಿ ಕೇವಲ ಮೂಢನಂಬಿಕೆಯ ಬಗ್ಗೆ ಮಾತ್ರ ಹೇಳಿಲ್ಲ, ಬದಲಾಗಿ ನಗರಕ್ಕೆ ಕೆಲಸವನ್ನರಸಿ ಹೋಗಿ ಅಲ್ಲೇ ಬೇರೂರಿ ಊರಿನ ಕಡೆಗೆ ತಲೆಯೂ ಹಾಕದಂತಹ ಯುವಜನತೆಗೆ ಒಂದು ಒಳ್ಳೆಯ ಪಾಠವನ್ನು ಹೇಳಲಾಗಿದೆ. ಕೇವಲ ಮನಿಯಾರ್ಡರ್ ಮೂಲಕ ಹಣ ಕಳುಹಿಸಿ ಕೈ ತೊಳೆದು ಕೊಳ್ಳುವವರ ಸಂಖ್ಯೆ ವರ್ತಮಾನದಲ್ಲಿ ಜಾಸ್ತಿಯಾಗುತ್ತಿದೆ. ನಗರಕ್ಕೆ ಹೋಗಿ ಉಳಿದುಕೊಳ್ಳುವಲ್ಲಿ ಯಾವುದೇ ತೊಂದರೆಯಿಲ್ಲ, ಆದರೆ ನಾವು ಹುಟ್ಟಿ ಬೆಳೆದ ಜಾಗದ ಬಗ್ಗೆಯೂ ಒಂದು ಯೋಚನೆ, ಸೆಳೆತ ಇರಬೇಕು. ಇಲ್ಲವಾದಲ್ಲಿ ಊರೇ ನಾಶವಾಗಿ ಹೋದರೂ ಗೊತ್ತಾಗಲಾರದು ಎಂಬುದಕ್ಕೆ ಈ ಕಾದಂಬರಿಯಲ್ಲಿ ಬರುವ ಪಾತ್ರಗಳೇ ಉದಾಹರಣೆ. ಒಟ್ಟಲ್ಲಿ ಹಾಣಾದಿ ಒಂದು ಉತ್ತಮ ಕಾದಂಬರಿ ಎಂದು ಹೇಳಬಹುದು.
-ಸುದರ್ಶನ್. ಬಿ,
ಪುಸ್ತಕ ವಿಮರ್ಶೆಯು ಚೆನ್ನಾಗಿ ಮೂಡಿಬಂದಿದೆ..ಜೊತೆಗೇ ಅದನ್ನು ಓದಬೇಕೆನ್ನುವ ಇಚ್ಛೆಯನ್ನೂ ಮೂಡಿಸುವಂತಿದೆ..ಧನ್ಯವಾದಗಳು.