ಕೈಗುಣ
ಒಂದು ದಿನ ಒಬ್ಬಾಕೆ ಮೂರು ಚೀಲ ಹೊತ್ತು ತಂದು ನಮ್ಮ ಮನೆಯ ಮೆಟ್ಟಲಲ್ಲಿ ಕೂತಳು. ಹಪ್ಪಳ, ಸಂಡಿಗೆ, ಸಾರಿನ ಪುಡಿ, ಕೋಡುಬಳೆ, ಇತ್ಯಾದಿ ತಂದಿರುವೆ. ಏನಾದರೂ ತೆಗೆದುಕೊಳ್ಳಿ ಎಂದಳು. ಮಧ್ಯಾಹ್ನದ ಹೊತ್ತು, ಬಿರು ಬಿಸಿಲಿನಲ್ಲಿ ದಣಿದು ಬಂದಳಲ್ಲ ಪಾಪ ಎಂದು ಕನಿಕರಿಸಿ ವಾಂಗಿಭಾತು ಪುಡಿ, ಕೋಡುಬಳೆ ತೆಗೆದುಕೊಂಡೆ. ಅದರನಂತರ ಪ್ರತೀ ತಿಂಗಳೂ ಬರುವ ಪರಿಪಾಟ ಇಟ್ಟುಕೊಂಡಳು. ನೀವು ಕಳೆದ ಸಲ ಹೇಳಿದ್ದೀರೆಂದು ಚಿಕ್ಕಿ ತಂದಿರುವೆ ಎಂದೋ, ಉಪ್ಪಿನಕಾಯಿ ಹೇಳಿದ್ದಿರಲ್ಲ ಎಂದೋ ಸುಳ್ಳು ಸುಳ್ಳೇ ನುಡಿದು, ಯಾವುದಾದರೂ ವಸ್ತು ತೆಗೆದುಕೊಳ್ಳದಿದ್ದರೆ ಹೋಗುವುದೇ ಇಲ್ಲ. ಗೋಗರೆತ ನೋಡುವಾಗ ಅಯ್ಯೋ ಹೊಟ್ಟೆಪಾಡಿಗಾಗಿ ಏನೆಲ್ಲ ಒದ್ದಾಡಬೇಕು ಎಂಬ ಆರ್ದಭಾವದಿಂದ ಚಿಕ್ಕಿಯೋ, ಕೋಡುಬಳೆಯೋ ಏನಾದರೂ ಒಂದು ವಸ್ತು ತೆಗೆದುಕೊಂಡು ಕಳುಹಿಸುತ್ತಿದ್ದೆ.
ಹಾಗೆಯೇ ಈ ತಿಂಗಳೂ ಮಧ್ಯಾಹ್ನ ಮೂರು ಗಂಟೆಗೆ ಸರಿಯಾಗಿ ಬಂದು ಕರೆಗಂಟೆ ಬಾರಿಸಿದಳು. ಕಿಟಕಿಯಲ್ಲೆ ನೋಡಿ, ಬೇಡವೇ ಬೇಡ ಎಂದು ಬಾಗಿಲು ತೆರೆಯಲಿಲ್ಲ. ಹಾಗನ್ನಬೇಡಿ, ಮೊದಲು ನಿಮ್ಮ ಮನೆಗೆ ಬಂದಿದ್ದೇನೆ. ಬೋಣಿ ಮಾಡಿ. ಕೊರೋನಾದಿಂದ ನಮಗೆ ಎರಡು ತಿಂಗಳು ವ್ಯಾಪಾರವೇ ಆಗಿಲ್ಲ. ಸುಮಾರು ಜನರನ್ನು ಕೆಲಸದಿಂದಲೂ ತೆಗೆದರು. ನಾವು ನಾಲ್ಕೈದು ಮಂದಿ ಮಾತ್ರ ಇರುವುದೀಗ. ಕಷ್ಟವಾಗಿ ಬಿಟ್ಟಿದೆ ಎಂದಳು.
ಹೌದಪ್ಪ, ಆದರೆ ಈ ತಿಂಗಳು ನನಗೆ ಏನೂ ಬೇಡ. ಹಪ್ಪಳ , ಸಂಡಿಗೆ ಡಬ್ಬದಲ್ಲಿ ಎಲ್ಲ ಇದೆ.
‘ಕೋಡುಬಳೆ ಬೇಕು ಎಂದಿದ್ದರಲ್ಲ, ಕಳೆದ ತಿಂಗಳು. ನೋಡಿ ಒಂದೇ ಪ್ಯಾಕ್ ಇದೆ. ನಿಮಗೆಂತಲೇ ತಂದಿರುವುದು. ಶುದ್ದ ಕಾಯಿಯಿಂದ ತಯಾರಿಸಿರುವುದು. ಬಲು ಚೆನ್ನಾಗಿದೆ. ಮೈದಾ ಎಲ್ಲ ಹಾಕಿಲ್ಲ’
ನಾನು ಕೋಡುಬಳೆ ಬೇಕು ಎಂದುು ಹೇಳಲೇ ಇಲ್ಲವಲ್ಲ. ನಮಲ್ಲಿ ಯಾರೂ ಎಣ್ಣೆ ತಿಂಡಿ ತಿನ್ನಲ್ಲ. ನಾವೂ ವಯಸ್ಸಾದವರು ಇರುವುದು. ತಿನ್ನಲು ಜನ ಇಲ್ಲ ಎಂದೆ.
ಹಾಗಾದರೆ ಹಪ್ಪಳ ಇದೆ. ಎಣ್ಣೆಯಲ್ಲಿ ಕರಿಯಬೇಕೆಂದಿಲ್ಲ. ಮೈಕ್ರೋ ಓವನಿನಲ್ಲಿ ಸುಡಬಹುದು ಎಂದು ನಾಲ್ಕಾರು ಕಟ್ಟು ಹೊರ ತೆಗೆದಳು.
ಈಗ ಯಾವುದೂ ಬೇಡ. ಹಪ್ಪಳ ನಮ್ಮ ಊರಿಂದ ಕಳುಹಿಸಿದ್ದಾರೆ ಎಂದೆ.
ಹಾಗಾದರೆ ಸಂಡಿಗೆ, ಪೇಣಿ ತೆಗೆದುಕೊಳ್ಳಿ. ಅಷ್ಟು ದೂರದಿಂದ ಬಸ್ ಜಾರ್ಜು ಹಾಕಿ ಬಂದಿದ್ದೇನೆ. ನಿಮ್ಮಲ್ಲಿಗೇ ಮೊದಲು ನಾನು ಬರುವುದು. ಈಗ ವ್ಯಾಪಾರ ಸುರು ಮಾಡುತ್ತ ಇದ್ದೇನಷ್ಟೇ. ನೀವು ಬೋಣಿ ಮಾಡಿದರೆ ನನಗೆ ವ್ಯಾಪಾರ ಆಗುತ್ತದೆ. ಸತ್ಯ ಹೇಳುತ್ತೇನೆ. ಕಳೆದ ಸಲ ನೀವು ಬೋಣಿ ಮಾಡಿದಮೇಲೆ ಎರಡು ಸಾವಿರ ರೂಪಾಯಿ ವ್ಯಾಪಾರವಾಗಿತ್ತು. ನಗುನಗುತ್ತ ನೀವು ವ್ಯಾಪಾರ ಮಾಡುತ್ತೀರಿ. ಚಾಮುಂಡಿ ಅಮ್ಮನ ಕೃಪೆ ಇರಲಿ. ಎಂದು ಹೇಳಿದಳು.
ಅಯ್ಯೊ ರಾಮನೆ, ನನ್ನ ಕೈಗುಣ ಇಷ್ಟು ಒಳ್ಳೆಯದಿದೆಯಾ? ಅವಳಿಗೆ ವ್ಯಾಪಾರ ಇಲ್ಲದಂತೆ ಮಾಡಿ ಪಾಪ ಏಕೆ ಕಟ್ಟಿಕೊಳ್ಳಲಿ. ನನ್ನಿಂದಾಗಿ ವ್ಯಾಪಾರ ಆಗುವುದಾದರೆ ಆಗಲಿ ಎಂದು ರೂ. 150 ಕೊಟ್ಟು ಕೋಡುಬಳೆ ತೆಗೆದುಕೊಂಡೆ. ಕೋಡುಬಳೆಗೆ ನಾಲ್ಕು ಹೆಚ್ಚೇ ಹೊಗಳಿಕೆ ಬಂತು. ನನಗೆ ಗೊತ್ತು. ಅವಳು ಮೊದಲೇನೂ ನಮ್ಮಲ್ಲಿಗೆ ಬರುವುದಲ್ಲ. ಚೀಲ ಎಲ್ಲ ಅರ್ಧಖಾಲಿಯಾಗಿರುತ್ತದೆ. ಅವಳು ಸ್ವಲ್ಪ ಹೆಚ್ಚೇ ದರ ನನಗೆ ಹೇಳುತ್ತಾಳೆಂದು. ಮಾತಾಡುವ ಕಲೆ, ವ್ಯಾಪಾರ ಮಾಡುವ ರೀತಿ ಅವಳಿಗೆ ಚೆನ್ನಾಗಿ ಸಿದ್ದಿಸಿದೆ.
ಕೋಡುಬಳೆ ಕೊಂಡು ಒಳಗೆ ಬಂದು ಕೂತಾಗ ಒಂದು ಚಿಂತೆ ಕಾಡಿತು. ಕೈಗುಣ ಒಳ್ಳೆಯದಿದೆ ಎಂದು ಹೀಗೆ ಪ್ರತೀ ತಿಂಗಳೂ ಬಂದು ಕಾಡಿದರೆ ಏನು ಮಾಡುವುದು? ಅವಳನ್ನು ನೋಡಿದರೆ ಕನಿಕರ ಮೂಡುತ್ತದೇ ವಿನಃ ನುಡಿದರೆ ಕಬ್ಬಿಣದ ಸಲಾಕೆಯಂತೆ ಬೇಡ ಎಂದು ಹೇಳಲೂ ನನಗೆ ಬರುವುದಿಲ್ಲ.
-ರುಕ್ಮಿಣಿಮಾಲಾ, ಮೈಸೂರು
ಚೆನ್ನಾಗಿದೆ ಲೇಖನ
ಧನ್ಯವಾದ
ಅನುಭವ ಕಥನ ಚೆನ್ನಾಗಿದೆ ರುಕ್ಮಿಣಿಮಾಲಾ…
ವ್ಯಾಪಾರಿಗಳು ಕೆಲವು ವೇಳೆ ಹೀಗೇ ಮಾಡ್ತಾರೆ..ನಾವು ಒಮ್ಮೆ ಕನಿಕರ ತೋರಿಸಿತೋ ಅದನ್ನೇ ದುರ್ಬಳಕೆ ಮಾಡುತ್ತಾರೆ.ನನ್ನ ಅನುಭವ ಕೂಡ….
ಹೌದು. ಧನ್ಯವಾದ
ಚೆನ್ನಾಗಿದೆ ಮೇಡಂ ಲೇಖನ. ಹೌದು ಇಂತಹವರ ಕಷ್ಟ ನೋಡುವಾಗ ಅವರ ನೋವಿಗೆ ಸ್ಪಂದಿಸದೆ ಇರಲಾಗುವುದೇ ಇಲ್ಲ. ಹಾಗಂತ ತೀರ ಒತ್ತಾಯ ಮಾಡಿದ್ರೆ ಸಹಿಸುವುದೂ ಕಷ್ಟ.
ಧನ್ಯವಾದ
ಸೊಗಸಾಗಿದೆ ಕಥೆ
ನಮ್ಮಲ್ಲಿ ಮಂಡಕ್ಕಿ ಮಾರುವವಹೀಗೆ ಬಂದು ತೆಗೊಳ್ಳಿ ಮ್ಮ ಎಂದು ಬಂದು ಕೂತರೆ ಏಳೋಲ್ಲ ತೆಕ್ಕೊಳ್ದೆ nau .ella kade hage nau pap ಎಂದು ಕನಿಕರಿಸಿಯೇನಮ್ಮನ್ನು ಮಂಕು maduvaru
ಹೀಗೇಯೇ.. ಎಲ್ಲಾ ವ್ಯಪಾರಿಗಳ ಕಥೆ. ಅಂಗಡಿಯಲ್ಲಿ ರಷ್ ಇದ್ರೆ, ನಮ್ಮನ್ನು ಕಾಯಿಸಲು ಒಳ್ಳೆ ಮಾತು ತೆಗೀತಾರೆ. ನಿಲ್ಲಿ ಅಮ್ಮಾ, ನೀವಿಲ್ಲಿದ್ರೆ ಒಳ್ಳೇ ವ್ಯಾಪಾರ ಆಗ್ತದೆ.., ಇಲ್ಲಾಂದ್ರೆ ನೀವು ಹೇಳಿದಂತೆ ಕೈಗುಣದ ಮಾತು.! ನಗಬೇಕೋ ಅಳಬೇಕೋ ತಿಳಿಯುವುದಿಲ್ಲ.. ಅಲ್ಲವೇ??..ಚಂದದ ಬರಹ
ಇದು ಹೆಚ್ಚು ಕಡಿಮೆ ಎಲ್ಲಾ ಮಹಿಳೆಯರ ಅನುಭವವೇ.ನನಗೂ ಕೂಡ ಒಬ್ಬ ಸೊಪ್ಪು ಮಾರುವ ಅಜ್ಜಿ ಹಾಗೆ ಹೇಳುತ್ತೆ ಪಾಪ ಚಿಕ್ಕ ಚಿಕ್ಕ ವ್ಯಾಪಾರಿಗಳು ಅವತ್ತಿನ ದುಡಿಮೆಯಿಂದ ಅವತ್ತಿನ ಜೀವನ ನಡೆಸೋ ರು
ಒಂದು ಚಿಕ್ಕ ಮುಗ್ಧ ಮಾರ್ಕೆಟಿಂಗ್ strategy ashte. ತುಂಬಾ ಚೆನ್ನಾಗಿದೆ ಬರಹ