ರಕ್ತದಾನವೆಂಬ ಮಹದಾನ..  

Spread the love
Share Button


ನಮ್ಮ ಈ ಜಗತ್ತು ಹೇಗೆ ಮುಕ್ಕಾಲು ಭಾಗ ನೀರಿನಿಂದ ಆವರಿಸಿರುವುದೋ, ಹಾಗೆಯೇ, ಮಾನವ ದೇಹದಲ್ಲೂ ಮುಕ್ಕಾಲು ಭಾಗ, ಅಂದರೆ ಸುಮಾರು ಆರು ಲೀಟರ್‍ ಗಳಷ್ಟು ದ್ರವವೇ ತುಂಬಿದೆ..ಅದುವೇ ರಕ್ತ. ಶರೀರವಿಡೀ ನರ ಮಂಡಲದ ಮೂಲಕ ಚಲಿಸಿ, ನಮಗೆ ಬೇಕಾದ ಶಕ್ತಿಯನ್ನು ಒದಗಿಸುವ ಕೆಲಸ ಮಾಡುತ್ತದೆ ಈ ಪರಿಶುದ್ಧ ರಕ್ತ. ಜೀವಮಾನವಿಡೀ ಎಡೆಬಿಡದೆ  ಅದನ್ನು ಸರಿಯಾಗಿ ಬೇಕಾದಲ್ಲೆಡೆಗೆ ಸಾಗಿಸುವ ಕೆಲಸ ಮಾಡುತ್ತದೆ, ನಮ್ಮ ಮುಷ್ಟಿ ಗಾತ್ರದ ಪುಟ್ಟ ಪಂಪು..ಹೃದಯ. ಶ್ವಾಸಕೋಶವು, ಶುದ್ಧವಾದ ಪ್ರಾಣ ವಾಯುವನ್ನು ಹೀರಿಕೊಂಡು, ಅದರಲ್ಲಿರುವ ಆಮ್ಲಜನಕವನ್ನು ತನ್ನ ರಕ್ತನಾಳಗಳಿಂದ ಹೀರಿ, ಕೆಂಪುರಕ್ತ ಕಣಗಳಿಗೆ ಶಕ್ತಿಯನ್ನು ತುಂಬಿ, ಶರೀರದ ಆರೋಗ್ಯವನ್ನು ಕಾಪಾಡುತ್ತದೆ.  ಈ ರೀತಿಯ, ಶರೀರದ ಎಲ್ಲಾ ಭಾಗಗಳ ನಿರಂತರ ಕಾರ್ಯವು ಆರೋಗ್ಯಕರ ಕಾಯಕ್ಕೆ ಪೂರಕ. ಶರೀರಕ್ಕೆ ಅವಶ್ಯಕತೆಯಿರುವ ರಕ್ತದ ಪ್ರಮಾಣದಲ್ಲಿ ಏರುಪೇರಾದರೆ ಶರೀರದ ಶಕ್ತಿಯು ಕುಂದಿ ಜೀವಕ್ಕೆ ಅಪಾಯ ಸಂಭವಿಸಬಹುದು. ಹೆಚ್ಚಾಗಿ, ಮಹಿಳೆಯರ ಹೆರಿಗೆ, ಅಥವಾ ವಿಪರೀತ ಗಾಯಗಳಾದ ಸಂದರ್ಭಗಳಲ್ಲಿ ಹೆಚ್ಚಿನ ರಕ್ತ ನಷ್ಟದಿಂದಾಗಿ ಇಂತಹ ಅಪಾಯ ಉಂಟಾಗಬಹುದು. ಅನಾರೋಗ್ಯದ ಕಾರಣ ಕಂಡುಬರುವ ರಕ್ತ ಹೀನತೆ ಅಥವಾ ರಕ್ತವನ್ನೇ ಆಗಾಗ ಬದಲಿಸಬೇಕಾಗುವಂತಹ ಕ್ಯಾನ್ಸರ್ ನಂತಹ ರೋಗಗಳು.. ಇವುಗಳಿಗೆಲ್ಲಾ ಮುಖ್ಯವಾಗಿ ಆಯಾಯ ರೋಗಿಗಳಿಗೆ ರಕ್ತವನ್ನು ಶರೀರಕ್ಕೆ ಹೊರಗಿನಿಂದ ನೀಡಿ ಚಿಕಿತ್ಸೆ ಮಾಡಬೇಕಾಗುತ್ತದೆ. ಅದಕ್ಕಾಗಿ ಬೃಹತ್ ಪ್ರಮಾಣದ ಉಚಿತ ರಕ್ತದ ಲಭ್ಯತೆಗಾಗಿ,,ರಕ್ತದಾನಿಗಳಿಂದ ಅದನ್ನು ಪಡೆದು, ರಕ್ತ ಬ್ಯಾಂಕ್ ಗಳಲ್ಲಿ ಶೇಖರಿಸಿ ಉಪಯೋಗಿಸಲಾಗುತ್ತದೆ. ಇಂತಹ ರಕ್ತದಾನವು ಅಸಂಖ್ಯ ಜನರ ಪ್ರಾಣವನ್ನು ಕಾಪಾಡುವುದರ ಜೊತೆಗೆ ರಕ್ತ ಹೀನತೆಯಿಂದ ಬಳಲುವವರ ಆರೋಗ್ಯವನ್ನು ಸುಧಾರಿಸಿ ಮರಣ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಮತ್ತು ಸುದೀರ್ಘ ಆರೋಗ್ಯವಂತ ಜೀವನವನ್ನು ನಡೆಸಲು ನೆರವಾಗುತ್ತದೆ.

ಜಾಗತಿಕ ಮಟ್ಟದಲ್ಲಿ, ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ (WHO) ನೇತೃತ್ವದಲ್ಲಿ, ವರ್ಷದಲ್ಲಿ ಆರು ದಿನಗಳನ್ನು ಮತ್ತು ಒಂದು ವಾರವನ್ನು, ಜಗತ್ತಿನ ಜನತೆಯ ಆರೋಗ್ಯ ಕಾಳಜಿಯ ನಿಮಿತ್ತ ವಿವಿಧ ರೂಪಗಳಲ್ಲಿ, ವಿವಿಧ ಹೆಸರುಗಳಿಂದ  ಆಚರಿಸಲ್ಪಡುತ್ತವೆ.

 1. ವಿಶ್ವ ಆರೋಗ್ಯ ದಿನ.
 2. ವಿಶ್ವ ಟಿ.ಬಿ.ದಿನ.
 3. ವಿಶ್ವ ಮಲೇರಿಯಾ ದಿನ.
 4. ವಿಶ್ವ ತಂಬಾಕು ನಿಷೇಧ ದಿನ.
 5. ವಿಶ್ವ  ಹೆಪಟೈಟಿಸ್ ದಿನ
 6. ವಿಶ್ವ ಏಡ್ಸ್ ದಿನ.
 7. ವಿಶ್ವ ರೋಗ ನಿರೋಧಕ ಸಪ್ತಾಹ.

ಇವುಗಳೊಂದಿಗೆ ಎಂಟನೆಯದಾಗಿ, 2004ನೇ ಇಸವಿಯ ಜೂನ್14ನೇ ತಾರೀಕನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು. ಈ ದಿನವು, ಸಾವಿರಾರು ಜೀವಗಳನ್ನು ಉಳಿಸಲು ನೆರವಾದ  ಜೀವ ರಕ್ಷಕ ರಕ್ತವನ್ನು ದಾನ ಮಾಡಿ, ಉತ್ಕೃಷ್ಟ ಕೊಡುಗೆಯನ್ನು ಸಮಾಜಕ್ಕೆ ಅರ್ಪಿಸುವ ಮಹಾದಾನಿಗಳಿಗೆ ಧನ್ಯವಾದವನ್ನರ್ಪಿಸಿ, ಅವರನ್ನು ಗುರುತಿಸಿ, ಅಭಿನಂದಿಸಿ ಸನ್ಮಾನಿಸುವುದು ಹಾಗೂ ವಿಶ್ವದಾದ್ಯಂತ, ರಕ್ತದಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮೂಲ ಉದ್ದೇಶವಾಗಿದೆ. ಮಾತ್ರವಲ್ಲದೆ, ಸುರಕ್ಷಿತವಾದ ರಕ್ತ ಮತ್ತು ರಕ್ತದ ಘಟಕಗಳ ಅಗತ್ಯತೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಆರೋಗ್ಯವಂತರನ್ನು ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವುದು ಕೂಡಾ ಇದರಲ್ಲಿ ಮುಖ್ಯವಾಗಿದೆ. ಎಲ್ಲಾ ರಕ್ತವೂ ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ರಕ್ತವನ್ನು A, B, O ಗುಂಪುಗಳನ್ನಾಗಿ ವಿಭಜಿಸಿ, ಪ್ರತಿಯೊಬ್ಬ ಮನುಷ್ಯನ ರಕ್ತದ ಗುಂಪನ್ನು ಕಂಡುಹಿಡಿಯುವ ವಿಧಾನದ ಬಗ್ಗೆ ಯಶಸ್ವಿ ಸಂಶೋಧನೆ ನಡೆಸಿ, ನೋಬೆಲ್ ಪ್ರಶಸ್ತಿ ಭಾಜನರಾದ  ವಿಜ್ಞಾನಿ Karl Landsteiner ಅವರು ಹುಟ್ಟಿದ ದಿನವಾದ ಜೂನ್ 14ನೇ ತಾರೀಕನ್ನೇ ಅದಕ್ಕಾಗಿ ಆರಿಸಲಾಗಿದೆ.

ನಮ್ಮ ದೇಶ ಸಹಿತ, ಸುಮಾರು 73  ದೇಶಗಳಲ್ಲಿ ಸಾಕಷ್ಟು ರಕ್ತ ಸಂಗ್ರಹವಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳಿಲ್ಲದಿರುವುದೇ ಇದಕ್ಕೆ ಕಾರಣ. ರಕ್ತದ ಅವಶ್ಯಕತೆಗಾಗಿ ರೋಗಿಯ ಬಂಧುಗಳ ನೆರವು ಅಥವಾ ರಕ್ತ ಸಂಗ್ರಣಾಗಾರದಲ್ಲಿರುವ ಸೀಮಿತ ಪ್ರಮಾಣದ  ರಕ್ತವನ್ನು ದುಡ್ಡು ಕೊಟ್ಟು ಖರೀದಿಸಬೇಕಾಗುತ್ತದೆ. ಶುದ್ಧ ರಕ್ತವನ್ನು ಕೃತಕವಾಗಿ ತಯಾರಿಸಲು ಇನ್ನೂ ಸಾಧ್ಯವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ರೆಡ್ ಕ್ರಾಸ್ ನಂತಹ ಇತರ ಸ್ವಯಂ ಸೇವಾ ಸಂಘಗಳ ಅವಿರತ ಪರಿಶ್ರಮದಿಂದ ಈಗ ಸುಮಾರು 60ದೇಶಗಳಲ್ಲಿ ಮಹಾ ದಾನಿಗಳ ನೆರವಿನಿಂದ, ರಕ್ತದ ಬೇಡಿಕೆಗೆ ಅನುಗುಣವಾಗಿ ಅದರ ಪೂರೈಕೆ ಆಗುತ್ತಿದೆ. “ಸಕಲರಿಗೂ ಸುರಕ್ಷಿತ ರಕ್ತ” ಎಂಬುದು ಕಳೆದ ವರ್ಷದ ಧ್ಯೇಯ ವಾಕ್ಯವಾಗಿದ್ದರೆ, ಹಿಂದಿನ ಕೆಲವು ವರ್ಷಗಳ ಮನಮುಟ್ಟುವ ಕೆಲವು ಘೋಷಣಾ ವಾಕ್ಯಗಳು ಇಂತಿವೆ..

 • “ರಕ್ತವನ್ನು ಕೊಟ್ಟು ಜೀವವನ್ನು ಉಳಿಸಿ.”
 • “ರಕ್ತವನ್ನು ಈಗಲೇ ಕೊಡಿ ಮತ್ತು ಯಾವಾಗಲೂ ಕೊಡಿ.”
 • “ರಕ್ತವು ನಮ್ಮೆಲ್ಲರನ್ನು ಒಂದುಗೂಡಿಸುತ್ತದೆ.”
 • “ನನ್ನನ್ನು ಉಳಿಸಿದ ನಿನಗಿದೋ ನನ್ನ ನಮನ.”
 • “ತಾಯಿಯರನ್ನು ಉಳಿಸಲು ಸುರಕ್ಷಿತ ರಕ್ತ.”
 • “ರಕ್ತದಾನ ಮಾಡಿ..ಜೀವನದ ಅಮೂಲ್ಯ ಉಡುಗೊರೆಯನ್ನು ನೀಡಿ.”ಇತ್ಯಾದಿ…..

ಆರೋಗ್ಯವಂತ ಮಹಿಳೆಯು ನಾಲ್ಕು ತಿಂಗಳಿಗೊಮ್ಮೆ ಮತ್ತು ಪುರುಷನು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.. ಹದಿನೆಂಟರಿಂದ ಅರುವತ್ತು ವರುಷದ ವರೆಗೆ ಮಾತ್ರ. ಧೂಮಪಾನ, ಮದ್ಯವ್ಯಸನವುಳ್ಳವರು, ಗರ್ಭಿಣಿಯರು, 45 ಕೆ.ಜಿ. ಗಿಂತ ಕಡಿಮೆ ತೂಕವುಳ್ಳವರು, ಮಧುಮೇಹಿಗಳು, ರಕ್ತದಾನ ಮಾಡುವಂತಿಲ್ಲ. ನನಗೆ ರಕ್ತದಾನ ಮಾಡಲು ಆಸೆ ಇದ್ದರೂ, ಮನೆ, ನೌಕರಿ, ಮಕ್ಕಳು ಎಲ್ಲವನ್ನೂ ನಿಭಾಯಿಸುತ್ತಾ ..ಹೀಗೇ.. ದಿನ ಮುಂದೋಡುತ್ತಲೇ ಇತ್ತು. ಕೊನೆಗೂ ಭಗವಂತ ನನ್ನಾಸೆಯನ್ನು ಈಡೇರಿಸಿದ! ನಮ್ಮ ಸಮುದಾಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನನಗೆ ಸ್ವಯಂಸೇವೆ  ಮಾಡುವ ಸಂದರ್ಭ ಒದಗಿ ಬಂತು.ಅಲ್ಲಿ  ರಕ್ತದಾನ ಶಿಬಿರವೂ ನಡೆಯುತ್ತಿತ್ತು. ಕೆಲಸ ಮುಗಿದ ಬಳಿಕ ಅವರ ಅನುಮತಿ ಪಡೆದು ರಕ್ತದಾನಕ್ಕೆ ಅನುವಾದೆ. ಆಗ ನನ್ನ ವಯಸ್ಸು 59..ಮುಂದಿನ ವರ್ಷ ಕಳೆದರೆ ದಾನಕ್ಕೆ ಅರ್ಹಳಲ್ಲವಾದ್ದರಿಂದ ಖುಷಿಯಲ್ಲೇ ತಯಾರಾದೆ. ಆದರೆ ಮನದೊಳಗೇ ಆತಂಕ… ಕೆಲವರಿಗೆ ವಾಂತಿ, ತಲೆಸುತ್ತು ಇಂತಹ ತೊಂದರೆಗಳಾದ ಬಗ್ಗೆ ತಿಳಿದಿತ್ತು. ನನ್ನ ರಕ್ತದ ಗುಂಪನ್ನು ಅಲ್ಲಿಯ ಡಾಕ್ಟರ್ ಗೆ ತಿಳಿಸಿ ಮಂಚದಲ್ಲಿ ಮಲಗಿದಾಗಲೇ ಎದೆ ಭಯದಿಂದ ಹೊಡೆದುಕೊಳ್ಳಲಾರಂಭಿಸಿತು. ಬಲದ ಕೈಗೆ ಸೂಜಿ ಚುಚ್ಚಿ, ರಕ್ತ ತೆಗೆಯಲು ಆರಂಭಿಸುವಾಗ, ಹಿಚುಕಲು ಅದೇ ಕೈಗೆ  ಒಂದು ಮೃದುವಾದ ಚೆಂಡನ್ನು ಕೊಟ್ಟರು. ನನಗೋ ರಕ್ತವು ಚೀಲದಲ್ಲಿ ತುಂಬುವುದನ್ನು ನೋಡುವ ಆಸೆ, ಆದರೆ ಅದನ್ನು ನೋಡಲು ಅವಕಾಶ ಕೊಡಲಿಲ್ಲ.. ಹೆದರಿಕೆಯಾಗುವುದೆಂದು! ಅಂತೂ  ಒಂದ್ಹತ್ತು ನಿಮಿಷಗಳಲ್ಲಿ ಕೆಲಸ ಮುಗಿಸಿ ಎಬ್ಬಿಸಿದಾಗ ಸ್ವಲ್ಪ ನಿತ್ರಾಣವಾದಂತೆನಿಸಿತು . ಒಬ್ಬರು ಒಂದು ಲೋಟ ಕಿತ್ತಳೆಯ ತಂಪು ಪಾನೀಯ ತಂದು ಕೊಟ್ಟರು. ಕುಡಿದು, ಖಾಲಿ ಇದ್ದ ಪಕ್ಕದ ಮಂಚದಲ್ಲಿ ಐದು ನಿಮಿಷ ಮಲಗಿ ಎದ್ದಾಗ ಸ್ವಲ್ಪ ಉಲ್ಲಾಸವೆನಿಸಿತು. ಅಂತೂ.. ರಕ್ತದಾನ ಮಾಡಬೇಕೆಂಬ ನನ್ನ ಮಹದಾಸೆ ಈಡೇರಿತ್ತು. ಅದಕ್ಕಾಗಿ ಕೊಟ್ಟ ಒಂದು ಪ್ರಶಸ್ತಿ ಪತ್ರವು ಬೆಚ್ಚಗೆ ಕಪಾಟೊಳಗೆ ಕೂತಿದೆ ಇಂದಿಗೂ..!


ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಹೊಸ ರಕ್ತಕಣಗಳ ಉತ್ಪತ್ತಿಯಾಗುವುದು. ಇದರಿಂದ, ರಕ್ತದಲ್ಲಿರುವ ಕೊಲೆಸ್ಟೊರಾಲ್ ಅಂಶ ಸಹಜ ಸ್ಥಿತಿಯಲ್ಲಿದ್ದು ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ. ಅತಿ ತೂಕ ಕೂಡಾ ನಿಯಂತ್ರಣಕ್ಕೆ ಬರುವುದು. ಈ ರೀತಿಯಲ್ಲಿ ನಿಯಮಿತ ರಕ್ತದಾನವು, ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ಸಂಗ್ರಹಿಸಿದ ರಕ್ತವನ್ನು 35ದಿನಗಳ ಒಳಗಾಗಿ ಉಪಯೋಗಿಸಬೇಕಾಗುತ್ತದೆ. ರಕ್ತದ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಬೃಹತ್ಪ್ರಮಾಣದ ಅಸಮತೋಲನವು ಈಗ ಕಾಡುತ್ತಿರುವ ಸಮಸ್ಯೆಯಾಗಿದೆ. ವೃತ್ತಿಪರ ರಕ್ತದಾನಿಗಳ ಸಂಖ್ಯೆ ಅತ್ಯಂತ ಕಡಿಮೆ.  ರಕ್ತದಾನದಿಂದ ಅಪಾಯವು ಖಂಡಿತಾ ಇಲ್ಲ ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು.  ಆದರೆ ಕೆಲವರು ಹಣದ ದುರಾಸೆಯಿಂದ ರಕ್ತವನ್ನು ದಾನ ಮಾಡುವುದೂ ಇದೆ..ಇದು ಕಾನೂನು ಬಾಹಿರ. 2020 ಒಳಗಾಗಿ ವಿಶ್ವದ ಉಳಿದೆಲ್ಲಾ ರಾಷ್ಟ್ರಗಳಲ್ಲೂ ಸ್ವಯಂಪ್ರೇರಿತ ರಕ್ತದಾನದಿಂದಲೇ ಬೇಡಿಕೆ ಪೂರೈಕೆಯಾಗಬೇಕೆಂಬ ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಹೊಂದಿದೆ.

ಯುವಕನಾಗಿರುವ ನನ್ನ ಮಗ ನಿಯಮಿತವಾಗಿ ರಕ್ತ ದಾನ ಮಾಡುವ ಹವ್ಯಾಸವಿರಿಸಿಕೊಂಡಿರುವನು. ಸಮಾಜದಲ್ಲಿ, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನದ ಮಹತ್ವವನ್ನು ಅರಿತು, ಈ ಮಹಾದಾನಕ್ಕೆ ಮನ ಮಾಡಿದರೆ, ಸಕಾಲಕ್ಕೆ ಒದಗುವ ರಕ್ತದಿಂದ ಅಸಂಖ್ಯ ಜೀವಗಳು ಉಳಿಯುವುದರಲ್ಲಿ ಸಂಶಯವಿಲ್ಲ. ಆದರೂ ಇದು ಬೃಹತ್ಪ್ರಮಾಣದಲ್ಲಿ, ಆಂದೋಲನ ರೂಪದಲ್ಲಿ ಹೊರಹೊಮ್ಮಬೇಕಾದರೆ, ಅದರ ಸರಿಯಾದ ತಿಳುವಳಿಕೆ ಜನಸಾಮಾನ್ಯರಿಗೆ ಮನದಟ್ಟಾಗಬೇಕಾದುದು ಅಗತ್ಯ. ಅದಕ್ಕಾಗಿ ಹೊಸ ರೂಪದ ಪ್ರಕ್ರಿಯೆ ಆರಂಭವಾಗಬೇಕಾಗಿದೆ. ಸ್ವಯಂಪ್ರೇರಿತ ರಕ್ತ ದಾನಿಗಳ ಸಂಖ್ಯೆ ಹೆಚ್ಚಿದಂತೆ, ಸದೃಢ ಸಮಾಜ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.

-ಶಂಕರಿ ಶರ್ಮ, ಪುತ್ತೂರು.

 

2 Responses

 1. Savithri bhat says:

  ಉತ್ತಮ ಮಾಹಿತಿ ಇರುವ ಲೇಖನ. ಬಹಳ ಚೆನ್ನಾಗಿ ಬರೆದಿರಿ. ನಿಮ್ಮ ರಕ್ತ ದಾನ ಅನುಭವ ಚೆನ್ನಾಗಿ ನಿರೂಪಿಸಿದ್ದೀರಿ ಅಕ್ಕಾ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: