ನೀನಿಲ್ಲದ ಮ್ಯಾಲೆ ಈ ಲೋಕವಿನ್ಯಾತಕೆ
ಆಸೆ ಕನಸುಗಳ ದಿಬ್ಬಣವೂ ಎನಗೆ ಬೇಕೆ
ಉಲ್ಲಾಸದ ಹೂತೋರಣ ಮಾಂದಳಿರು ಏಕೆ
ಲೋಕ ನಾಕವಾದರೂ ನಿನ್ನೊಲವು ಇಲ್ಲದಿರೆ
ತಂಗಾಳಿಯೊಡಲಿನಲಿ ತಂಪಾದೆ ನೀನು
ಬೆಳಕಿನಂತೆ ಎಲ್ಲೆಲ್ಲೂ ಸುಳಿಯುತ್ತಿದ್ದೆ ನೀನು
ಮಣ್ಣ ಕಣ ಕಣದಲೂ ಅಡಿಯಿಡುತ್ತಿದ್ದೆ
ಅದಕಾಗಿ ಪ್ರೀತಿಸಿದೆ ಮನಸಾರೆ ಪ್ರೇಮಿಸಿದೆ
ಬೆಳದಿಂಗಳೇ ಮಾಯವಾಯ್ತು ಎಲ್ಲಿರುವೇ ನೀನು
ದಿನರಾತ್ರಿ ಬಲುನೊಂದು ಬೆಂದಂತೆ ಬೆವರಿದೆ ನಾನು
ಬೆದರಬೇಡವೇ ಲೋಕದ ಲೆಕ್ಕಾಚಾರಕೆ ನೀನು
ಹಗಲಿರುಳು ಹಂಬಲಿಸಿದೆ ಮಗುವಿನಂತೆ ಮನವು
ಹೊಂಗೆಯ ಮರದಲಿ ಭೃಂಗದ ಝೇಂಕಾರ
ತಂಬೆಲರಿನ ತೊಟ್ಟಿಲಲ್ಲಿ ಕೋಗಿಲೆಯ ಇಂಚರ
ನೀ ತಂದೆ ನನ್ನೆದೆಗೆ ಶೃಂಗಾರದ ಮಾಮರ
ಕನವರಿಸಿ ಮೈಮರೆತೆ ನಿನ್ನೊಲವಿನದೇ ಸಂಚಾರ
-ಚಿನ್ನು ಪ್ರಕಾಶ್ , ಶ್ರೀರಾಮನಹಳ್ಳಿ
.
ಬ್ಯೂಟಿಫುಲ್. ಕವನದ ತುಂಬಾ ಪ್ರಕೃತಿಯ ಮಿಳಿತ ಸೊಗಸಾಗಿದೆ.
ಕವನ ಸೊಗಸಾಗಿದೆ
ಚಂದದ ಕವನ.