ಕೋಗಿಲೆಯ ಕುಹು ಕುಹೂ..
ಗೂಡು ಕಟ್ಟದೇ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಟ್ಟು ಹೋಗುವ ಸೋಮಾರಿ ಪಕ್ಷಿ ಕೋಗಿಲೆಯ ಮೊಟ್ಟೆಗಳನ್ನು ತನ್ನದೇ ಮೊಟ್ಟೆಗಳೆಂದು ನಂಬುವ ಕಾಗೆಯು ಕಾವು ನೀಡಿ ಮರಿ ಮಾಡಿ ಗುಟುಕು ತಿನ್ನಿಸಿ ಬೆಳೆಸುವುದು. ಕೋಗಿಲೆಮರಿ ಒಂಚೂರು ಬೆಳೆದಾಗ ಅದರ ದನಿ ಮತ್ತು ರೂಪಗಳಿಂದ ಇದು ಬೇರೊಂದು ಜಾತಿಯ ಪಕ್ಷಿಯೆಂಬ ಸತ್ಯವನ್ನು ಅರಿಯುವ ಕಾಗೆ ಕೋಗಿಲೆಮರಿಯನ್ನು ಕುಕ್ಕಿ ಕುಕ್ಕಿ ಗೂಡಿನಿಂದ ಹೊರ ಓಡಿಸುವುದು.
ನಾವು ಚಿಕ್ಕವರಿದ್ದಾಗ ಅಮ್ಮ ಹೇಳುತ್ತಿದ್ದ ಕೋಗಿಲೆಯ ಕತೆಯಿದು. ಅಮ್ಮ ಹೇಳಿದ ಹಲವು ಕತೆಗಳಂತೆ ಕೋಗಿಲೆಯದ್ದೂ ಒಂದು ಕತೆಯೆಂದು ಭಾವಿಸಿದ್ದೆ. ಅದಕ್ಕೆ ಕಾರಣವು ಇತ್ತು. ಯಾವ ತಾಯಿಯಾದರೂ ತನ್ನ ಮಗುವನ್ನು ಬಿಟ್ಟಿರುತ್ತಾಳೆಯೇ? ಇದು ಸಾಧ್ಯವೆಂದರೆ ನಮ್ಮಮ್ಮ ಏಕೆ ಹಾಗೆಲ್ಲ ಮಾಡಲಿಲ್ಲ? ಪಕ್ಷಿಯೊಂದು ಬೇರೊಂದು ಪಕ್ಷಿಯ ಮೊಟ್ಟೆಗೆ ಕಾವುಕೊಟ್ಟು ಗುಟುಕು ತಿನ್ನಿಸಿ ಬೆಳೆಸಲು ಸಾಧ್ಯವೇ? ಹಾಗಾದರೆ ಶಾಲೆಯ ರಜೆ ದಿನಗಳಲ್ಲಿ ಅತ್ತೆಮನೆ ದೊಡ್ಡಮ್ಮನ ಮನೆಗೆಂದು ಊರಿಗೆ ಹೋಗುತ್ತಿದ್ದ ನಮ್ಮನ್ನು ಅತ್ತೆಯಾಗಲಿ ದೊಡ್ಡಮ್ಮನಾಗಲಿ ಅಮ್ಮನಷ್ಟು ಅಕ್ಕರೆ ಹಾಗೂ ವಾತ್ಸಲ್ಯದಿಂದ ನೋಡಿಕೊಳ್ಳಲಿಲ್ಲವೇಕೆ?
ನಾನು ಓದಿ ದೊಡ್ಡವನಾದಂತೆ ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರಗಳು ದೊರೆತವು. ಹಾಗೆಯೇ ಅಮ್ಮ ಹೇಳಿದ್ದು ಕೋಗಿಲೆಯ ಕತೆಯಲ್ಲ, ಕೋಗಿಲೆಯ ಜೀವನ ಕ್ರಮವೆಂದು ಅರ್ಥವಾಯಿತು. ಹಲವು ವಿಸ್ಮಯಗಳಿರುವ ಪ್ರಕೃತಿಯಲ್ಲಿ ಕೋಗಿಲೆ ಮೊಟ್ಟೆಯಿಡುವ ಕ್ರಮವು ಕೂಡ ಒಂದು ಸೋಜಿಗದ ಸಂಗತಿ. ಮೊಟ್ಟೆಯಿಟ್ಟು ಕಾವುಕೊಟ್ಟು ಮರಿ ಮಾಡುವುದಕ್ಕೆಂದು ಎಂದಿಗೂ ಗೂಡು ಕಟ್ಟದ ಕೋಗಿಲೆ ಕಾಗೆಯ ಗೂಡಿನಲ್ಲಿ ಮೊಟ್ಟೆಯಿಡುವುದು. ಅದಕ್ಕೆಂದೇ ಕಾಗೆಗಳು ಬೆರೆತು ಮೊಟ್ಟೆಯಿಡುವ ಸಮಯದಲ್ಲೇ ಜೋಡಿ ಕೋಗಿಲೆಗಳು ಸಹ ಒಂದಾಗಿ ಮೊಟ್ಟೆಯಿಡಲು ಸಜ್ಜಾಗುತ್ತವೆ. ಜೊತೆಗೆ ಮತ್ತೊಂದು ತಂತ್ರವನ್ನು ಹೆಣೆಯುತ್ತವೆ. ಮೊಟ್ಟೆಯಿಟ್ಟು ಕಾವಲಿಗೆ ಕೂತ ಜೋಡಿ ಕಾಗೆಗಳನ್ನು ಗಂಡು ಕೋಗಿಲೆ ಹೋಗಿ ಅಣಕಿಸಿ ಕೆಣಕುತ್ತದೆ. ಸಿಟ್ಟಾದ ಜೋಡಿ ಕಾಗೆಗಳು ಗಂಡು ಕೋಗಿಲೆಯ ಬೆನ್ನಟ್ಟಿ ಅತ್ತ ಹೋಗುತ್ತಲೂ ಇದನ್ನೇ ಕಾದು ಕುಳಿತ ಹೆಣ್ಣು ಕೋಗಿಲೆ ಕಾಗೆಯ ಮೊಟ್ಟೆಗಳ ನಡುವೆ ತನ್ನ ಮೊಟ್ಟೆಗಳನ್ನಿಡುವುದು. ಕೋಗಿಲೆ ಮತ್ತು ಕಾಗೆ ಎರಡು ಮೊಟ್ಟೆಗಳ ಹೋಲಿಕೆ ಒಂದೇರೀತಿ ಇರುವುದರಿಂದ ವಾಪಸ್ಸು ಹಿಂತಿರುಗಿ ಬರುವ ಕಾಗೆಗಳು ಗೂಡಿನಲ್ಲಿರುವ ಮೊಟ್ಟೆಗಳಿಗೆ ಕಾವುನೀಡಿ ಮರಿಮಾಡಿ ಗುಟುಕು ತಿನ್ನಿಸಿ ಬೆಳೆಸುತ್ತವೆ.
.
ಹೊರಬಂದ ಕೋಗಿಲೆಯು
ಹಸಿರೆಲೆಗಳ ನಡುವೆ
ತನ್ನಮ್ಮನ ನೆನೆದು
ಅತ್ತು, ಕರೆದು, ಬಿಕ್ಕುವಾಗ
ನಾವಂದುಕೊಂಡೆವು
ಆಹಾ! ಎಷ್ಟು ಕಿವಿಗಿಂಪು
ಕೋಗಿಲೆಯ ಕುಹು ಕುಹೂ…
.
ಸುಂದರ ಬರಹ..ಕೋಗಿಲೆಯ ಜೀವನ ಕ್ರಮ
ಚಂದದಬರಹ ಸಹೋದರ .
ತುಂಬಾ ಚೆನ್ನಾಗಿದೆ. ಕೋಗಿಲೆಯ ಕುಹು ಕುಹು ಕೂಗಿಗಿತ್ತ ವ್ಯಾಖ್ಯಾನ ಈ ವಿಚಾರವನ್ನು ಯೋಚಿಸುವಂತೆ ಮಾಡಿದೆ
ಚೆನ್ನಾಗಿದೆ
ಚೆನ್ನಾಗಿದೆ ಬರಹ.
‘ಕೋಗಿಲೆಯ ಮರಿಗೆ ಅನಾಥಪ್ರಜ್ಞೆ’ ಇರಬಹುದೆಂಬ ಭಾವನೆಯು ವಿಶಿಷ್ಟ, ವಿಭಿನ್ನ ಹಾಗೂ ಆಪ್ತ. ಕವನ ಸೊಗಸಾಗಿದೆ
ಈ ದೃಷ್ಟಿಯಿಂದ ಎಂದೂ ಯೋಚಿಸಿರಲಿಲ್ಲ….ಅದಕ್ಕೇ ಹೇಳುವುದು ರವಿ ಕಾಣದ್ದನ್ನು ಕವಿ ಕಾಣುವ ಎಂದು. ಒಳ್ಳೆಯ ಲೇಖನ.
ಕೋಗಿಲೆಗೂ ಅನಾಥಭಾವ ಕಾಡಿ ಕುಹೂ ಕುಹೂ ಎಂದಿತೇ.. ಸೊಗಸಾದ ಕವನ.