ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 29
“ನಯನ ಮನೋಹರ ನಾಮ್ಚಿ ಮಂದಿರಗಳು”
ನಮ್ಮ ಪ್ರವಾಸದ ಒಂಭತ್ತನೇ ದಿನ.. ಬೆಳಗ್ಗೆ ಎಂಟು ಗಂಟೆ ಹೊತ್ತಿಗೆ ಭರ್ಜರಿ ಉಪಹಾರವನ್ನು ಸವಿದು, ಪ್ರಸಿದ್ಧ ಚಾರ್ ಧಾಮ್ ನ ಪ್ರತಿಕೃತಿಗಳನ್ನೊಳಗೊಂಡ ದೇವಾಲಯ ಸಮುಚ್ಚಯದ ದರ್ಶನಕ್ಕೆ ಪ್ರಯಾಣ. ಇದು ಗೇಂಗ್ಟೋಕ್ ನಿಂದ ಸುಮಾರು 79ಕಿ.ಮೀ. ದೂರದ, ದಕ್ಷಿಣ ಸಿಕ್ಕಿಂನ ನಾಮ್ಚಿ ಎಂಬಲ್ಲಿದೆ. ಮೂಲ ಚಾರ್ ಧಾಮ್ ಗಳಾದ ಬದ್ರೀನಾಥ, ಜಗನ್ನಾಥ ,ದ್ವಾರಕ (ಮೂರು ವಿಷ್ಣು ದೇಗುಲಗಳು) ಮತ್ತು ರಾಮೇಶ್ವರ(ಶಿವ ದೇಗುಲ) ದರ್ಶನ ಅಸಾಧ್ಯವಾದಲ್ಲಿ; ಇಲ್ಲಿಯ ದರ್ಶನದಿಂದ ಸಂಪೂರ್ಣ ಪುಣ್ಯ ಪ್ರಾಪ್ತಿಯಾಗುವುದೆಂದು ಎಂದು ಪ್ರತೀತಿ.
ಸುಂದರ ತೀಸ್ತಾ ನದಿಯ ದಂಡೆಯಲ್ಲೇ ಸಾಗಿತ್ತು ನಮ್ಮ ಪಯಣ. ಮನೋಹರ ಹಸಿರು ಸಿರಿ, ವಿಶಾಲವಾದ ನದಿ ನೀರಿನ ಹರಿವು, ದುರ್ಗಮ ಬೆಟ್ಟಗಳ ಸಾಲು, ಇವೆಲ್ಲವನ್ನೂ ಆಸ್ವಾದಿಸುತ್ತಾ, ಕಡಿದಾದ ರಸ್ತೆಯಲ್ಲಿ ಸಾಗಿದುದೇ ತಿಳಿಯಲಿಲ್ಲ. ನಮ್ಮ ಟ್ಯಾಕ್ಸಿ ಚಾಲಕನ ಚಾಕಚಕ್ಯತೆ ನಮ್ಮನ್ನು ನಿಬ್ಬೆರಗಾಗಿಸಿದುದು ಸತ್ಯ. ಪಯಣದ ಮಧ್ಯೆ ಹೋಟೇಲೊಂದರಲ್ಲಿ ಕಾಫಿ ಮತ್ತು ಒಣ ಹಣ್ಣು ಸೇವನೆ ಎಲ್ಲರಲ್ಲೂ ಉತ್ಸಾಹವನ್ನು ತುಂಬಿಸಿತು. ಮಧ್ಯಾಹ್ನ1:15ಕ್ಕೆ ನಾಮ್ಚಿ ತಲಪಿದಾಗ ಅಲ್ಲಿಯ ಅಹ್ಲಾದಕರ ವಾತಾವರಣ ಮನಸ್ಸಿಗೆ ಮುದ ನೀಡಿತು. ಪ್ರವಾಸಿಗರ ದಟ್ಟಣೆಯಿಂದಾಗಿ ವಾಹನ ಪಾರ್ಕಿಂಗ್ ಸಮಸ್ಯೆಯನ್ನೂ ಎದುರಿಸಬೇಕಾಯಿತು. ನಾಮ್ಚಿ ಪಟ್ಟಣದಿಂದ ಐದು ಕಿ.ಮೀ.ದೂರದಲ್ಲಿರುವ ಬೆಟ್ಟದ ಶಿಖರದ (Solophok Hill) ಸಮತಟ್ಟು ಪ್ರದೇಶದಲ್ಲಿ ಸುಮಾರು 7 ಎಕರೆ ಜಾಗದಲ್ಲಿ ದೇಗುಲ ಸಮುಚ್ಚಯ ಪಸರಿಸಿಕೊಂಡಿದೆ. 2011ರ ನವೆಂಬರ್ ತಿಂಗಳಲ್ಲಿ ಈ ಸಮುಚ್ಚಯವು ಸಾರ್ವಜನಿಕರ ವೀಕ್ಷಣೆಗೆ ತೆರೆಯಲ್ಪಟ್ಟಿತು. 29 ಎಕರೆಗಳಷ್ಟು ಜಾಗದಲ್ಲಿ ಅಲ್ಲಿನ ಸರಕಾರವು ಸಾಂಸ್ಕೃತಿಕ ಹಾಗೂ ತೀರ್ಥಯಾತ್ರಾಸ್ಥಳದ ಅಭಿವೃದ್ಧಿಗಾಗಿ ಸುಮಾರು 50ಕೋಟಿ ರೂ.ಗಳಷ್ಟು ಹಣವನ್ನು ವ್ಯಯಿಸಿದೆ.
ಪೌರಾಣಿಕ ಹಿನ್ನೆಲೆಯೊಂದಿಗೆ ಪ್ರಸಿದ್ಧಿ ಪಡೆದಿರುವುದು ಈ ಜಾಗದ ವಿಶೇಷತೆ. ಅರ್ಜುನನ ಅಹಂಕಾರವನ್ನು ದಮನಿಸಲು ಸ್ವತಃ ಮಹಾದೇವನು ಕಿರಾತ ವೇಷ ಧರಿಸಿ ಅರ್ಜುನನೊಡನೆ ಯುದ್ಧ ಮಾಡಿ ಅವನನ್ನು ಸೋಲಿಸಿದುದು ಇದೇ ಇಂದ್ರಕೀಲಕ ಪರ್ವತದಲ್ಲಿ ಎಂಬ ನಂಬಿಕೆ.
ಮಧ್ಯಾಹ್ನದೂಟವನ್ನು ಗೇಂಗ್ಟೋಕ್ ನಲ್ಲಿಯೇ ಸಿದ್ಧ ಪಡಿಸಿ ತಂದಿದ್ದರು, ರಾಜೇಶಣ್ಣನ ಟೀಮಿನವರು. ಆದರೆ ಊಟ ಮಾಡಲು ಸರಿಯಾದ ಜಾಗ ಹುಡುಕುವ ಕೆಲಸವಿತ್ತು. ಆ ತನಕ ದೇಗುಲಗಳನ್ನು ವೀಕ್ಷಿಸುವ ಅವಕಾಶ ನಮಗಿತ್ತು. ಪಾದರಕ್ಷೆಗಳನ್ನು ಚೀಲದಲ್ಲಿರಿಸಿ ಕೌಂಟರ್ ಗಳಲ್ಲಿ ಕೊಟ್ಟು ರಸೀದಿ ಪಡೆಯುವ ಸೊಗಸಾದ, ಅಚ್ಚುಕಟ್ಟಾದ ವ್ಯವಸ್ಥೆ ನಿಜಕ್ಕೂ ಶ್ಲಾಘನೀಯ. ಪ್ರವಾಸಿಗರ ಅನುಕೂಲಕ್ಕಾಗಿ ಪ್ರಥಮ ಹಂತದಲ್ಲಿ, ಎದುರುಗಡೆಗೆ, ಅಲ್ಲಿರುವ ಮಂದಿರಗಳ ವಿವರಣೆ ಸಹಿತದ ಸೂಚನಾ ಫಲಕ ರಾರಾಜಿಸುತ್ತಿತ್ತು. ಶಿವಲಿಂಗಗಳು, ಚಾರ್ ಧಾಮ್ ಗಳು,ಸಾಯಿಬಾಬಾ ಮಂದಿರ ಹಾಗೂ ಮಲಗಿರುವ ದೊಡ್ಡದಾದ ನಂದಿವಿಗ್ರಹದ ಪಕ್ಕದಲ್ಲಿ, ಎತ್ತರವಾದ (ಸುಮಾರು17ಅಡಿ) ಕಿರಾತೇಶ್ವರನ ಬೃಹದ್ ಮೂರ್ತಿಗಳಿಂದೊಡಗೂಡಿ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲ್ಪಟ್ಟ ಪ್ರದೇಶವಾಗಿತ್ತು ಅದು. ಅಗತ್ಯ ಸ್ಥಳಗಳಲ್ಲಿದ್ದ ಸೂಚಕಗಳು, ಒಬ್ಬೊಬ್ಬರೇ ಪ್ರವಾಸಿಗರಿಗೂ ನಿರ್ಭಯವಾಗಿ ಎಲ್ಲಾ ಮಂದಿರಗಳನ್ನು ಸರಿಯಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿತ್ತು. ಅಂತೆಯೇ ನಮ್ಮಲ್ಲಿಯೂ ಕೆಲವರು ಗುಂಪಾಗಿ, ಇನ್ನು ಕೆಲವರು ಒಂಟಿಯಾಗಿಯೇ ವೀಕ್ಷಣೆಗೆ ಹೊರಟೆವು.
ಅತ್ಯಂತ ವಿಶಾಲವಾದ ಸಮುಚ್ಚಯದ ಮಧ್ಯ ಭಾಗದಲ್ಲಿ ಅತೀ ಎತ್ತರದ (87 ಅಡಿಗಳು) ಪದ್ಮಾಸನಾರೂಢ ಶಿವನ ವಿಗ್ರಹ ಎದ್ದು ಕಾಣುತ್ತಿತ್ತು. ಸುತ್ತಲೂ ಬಣ್ಣ ಬಣ್ಣದ ದೇವಾಲಯಗಳು ಕಂಗೊಳಿಸಿದರೆ, ನಡೆದಾಡುವ ದಾರಿ, ಮೆಟ್ಟಿಲುಗಳು ಅತ್ಯಂತ ನಯ, ಸ್ವಚ್ಛ, ಸುಂದರ. ಅಲ್ಲಲ್ಲಿ ನೆಟ್ಟ ಹೂಗಿಡಗಳು ಹೂವರಳಿ ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ. 12 ಜ್ಯೋತಿರ್ಲಿಂಗಗಳು, ಮೂಲ ಜ್ಯೋತಿರ್ಲಿಂಗಗಳ ಪ್ರತಿರೂಪವಾಗಿವೆ.
ಜ್ಯೋತಿರ್ಲಿಂಗಗಳಿಗೆ ಪ್ರತ್ಯೇಕವಾಗಿ ಪುಟ್ಟ ಪುಟ್ಟ ಮಂದಿರಗಳು. ಒಳಗೆ, ಲಿಂಗದ ಮೇಲೆ ನಿರಂತರ ಜಲಧಾರೆಯ ವ್ಯವಸ್ಥೆ. ಕೇಂದ್ರ ಸ್ಥಾನದಿಂದ ದೇವರ ಸ್ತೋತ್ರವು ಎಲ್ಲಾ ಮಂದಿರಗಳಲ್ಲೂ ಕೇಳುವ ವ್ಯವಸ್ಥೆ ಮನಸ್ಸಲ್ಲಿ ಭಕ್ತಿ ಮೂಡುವಂತೆ ಮಾಡಿತು. ಶ್ಲೋಕ ಪಠಿಸುತ್ತಾ ಕುಳಿತ ಪೂಜಾರಿಯವರು ಭಕ್ತರ ಕೈಗೆ ಕೆಂಪು ದಾರ ಸುತ್ತಿ, ಒಣ ಹಣ್ಣು ಪ್ರಸಾದ ಕೊಟ್ಟು ಆಶೀರ್ವದಿಸುತ್ತಿದ್ದರು. ಇಡೀ ಸಮುಚ್ಚಯವನ್ನು ಸುತ್ತಾಡಲು ಗಂಟೆಗಳೇ ಸಾಲದೇನೋ. ಬೃಹತ್ ಶಿವ ಮೂರ್ತಿಯ ಕೆಳಗಡೆ ಅತ್ಯಂತ ವಿಶಾಲವಾದ ಹಜಾರ ಪ್ರಶಾಂತವಾಗಿದ್ದು ಧ್ಯಾನ ಮಂದಿರದಂತಿದೆ. ಅಲ್ಲಿಂದಲೇ ಎಲ್ಲಾ ಮಂದಿರಗಳಿಗೂ ಸಂಕೀರ್ತನಾ ಹಾಡು ಕೇಳುವ ವ್ಯವಸ್ಥೆಯನ್ನು ಮಾಡಲ್ಪಟ್ಟಿದೆ. ನಾವೆಲ್ಲರೂ ಅಲ್ಲಿ ಸ್ವಲ್ಪ ಸಮಯ ಧ್ಯಾನಾಸಕ್ತರಾಗಿ ಸಮಯ ಕಳೆದುದು ನಿಜವಾಗಿಯೂ ಆನಂದದ ಕ್ಷಣಗಳು. ಆ ಮಂದಿರದ ಎದುರುಗಡೆಗೆ ದೊಡ್ಡ ಕಾರಂಜಿ ಕೆರೆಯಿದ್ದರೂ, ವಾರಕ್ಕೊಮ್ಮೆ ಮಾತ್ರ ಬಣ್ಣದ ಕಾರಂಜಿ ಚಿಮ್ಮಿಸುವ ವ್ಯವಸ್ಥೆಯಿದ್ದುದು ತಿಳಿಯಿತು. ಒಲ್ಲದ ಮನಸ್ಸಿನಿಂದಲೇ ಹಿಂತಿರುಗಬೇಕಿತ್ತು..ಯಾಕೆಂದರೆ,ಅದಾ
ಪ್ರವಾಸಿಗರಿಗಾಗಿ ಇರುವ ದೊಡ್ಡ ಹೋಟೆಲ್ ನ ವಿಶಾಲವಾದ ಹಜಾರದಲ್ಲಿ ನಮ್ಮ ಊಟದ ವ್ಯವಸ್ಥೆಯಾಯಿತು. ರುಚಿಕಟ್ಟಾದ ಸರಳ ಊಟ ತಣ್ಣಗಾಗಿದ್ದರೂ ತೃಪ್ತಿ ತಂದಿತು. ನೀರಿನ ಅಭಾವದಿಂದಾಗಿ ಸ್ವಲ್ಪ ಪರದಾಡಬೇಕಾಗಿ ಬಂದರೂ ಮನ ಮನಸ್ಸು ಹಾಯೆನಿಸಿತು. ನಮ್ಮೆಲ್ಲರ ವಾಹನಗಳು ಡಾರ್ಜಿಲಿಂಗ್ ನತ್ತ ಮುಖ ಮಾಡಿದಾಗ ಗಂಟೆ ಸುಮಾರು 3:30. ತಣ್ಣಗಿನ ಗಾಳಿಗೆ ಮುಖವೊಡ್ಡಿ ಸಾಗಿತು ನಮ್ಮ ಪಯಣ ತಣ್ಣಗಿನ ಪ್ರವಾಸೀಧಾಮದತ್ತ..
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ :
-ಶಂಕರಿ ಶರ್ಮ, ಪುತ್ತೂರು.
Nice madam ji. ಚಾರ್ ದಾಮ್ ಯಾತ್ರೆಯ ಸವಿ ಹೇಮಮಾಲಾ ಅವರು ತಮ್ಮ ಪ್ರವಾಸ ಕಥನದಲ್ಲಿ ಬಹಳ ಸೊಗಸಾಗಿ ವಿವರಿಸಿದ್ದಾರೆ.
ಹೌದು, ಹೇಮಮಾಲಾರವರ ಚಾರ್ಧಾಮ ಪ್ರವಾಸ ಕಥನ ಅತ್ಯುತ್ತಮ ಮಾಹಿತಿಗಳನ್ನೊಳಗೊಂಡ ಸೊಗಸಾದ ಪುಸ್ತಕ… ನಾನೂ ಎರಡೆರಡು ಸಲ ಓದಿರುವೆ.
ಚಂದದ ಪ್ರವಾಸಕಥನ .ಓದುತ್ತಿದ್ದಂತೆ ನನಗೂ ಹೋದಂತೆ ಭಾಸವಾಯಿತು
Akka .
ಧನ್ಯವಾದಗಳು ಅಕ್ಕೋ.
ನಿಮ್ಮ ಪ್ರವಾಸ ಕಥನಕ್ಕೆ ಕಾಯುತ್ತಾ ಇದ್ದೆ. ಚೆನ್ನಾಗಿದೆ.
ಧನ್ಯವಾದಗಳು.
ಚೆನ್ನಾಗಿದೆ.