ಪ್ರಕೃತಿ-ಪ್ರಭೇದ

ಪ್ರಾರ್ಥನಾ ಮ್ಯಾಂಟಿಸ್

Share Button

ಸ್ಮೃತಿ ಅಜ್ಜಿಯ ಮನೆಗೆ ಗೌರಿ ಗಣೇಶ ಹಬ್ಬಕ್ಕೆಂದು ಬಂದಿದ್ದಳು. ಅಜ್ಜಿಯ ಮನೆಯಲ್ಲಿ ಚೆಂದದ ಹೂತೋಟ ಇತ್ತು. ಗುಲಾಬಿ, ಸೇವಂತಿಗೆ, ಮಲ್ಲಿಗೆ ಹೂವಿನ ಗಿಡಗಳು ಇದ್ದುವು. ಒಂದು ಮಾವಿನ ಮರವೂ ಇತ್ತು. ವಿವಿಧ ಜಾತಿಯ ಪಕ್ಷಿಗಳು ಬಂದು ಮರದ ಕೊಂಬೆಗಳಲ್ಲಿ ಕುಳಿತು ವಿಧವಿಧವಾಗಿ ಹಾಡುತ್ತಿದ್ದುವು. ಸ್ಮೃತಿ ತನ್ನ ಮಾವನ ಮಗ ಆದಿತ್ಯನ ಜೊತೆ ಇದನ್ನೆಲ್ಲಾ ಕಂಡು ಖುಷಿ ಪಡುತ್ತಿದ್ದಳು. ಈ ತರಹ ತೋಟ ಅವಳಿದ್ದ ಮುಂಬಯಿ ನಗರದಲ್ಲಿ ಎಲ್ಲಿ ಬರಬೇಕು?

ಸ್ಮೃತಿ ಮತ್ತು ಆದಿತ್ಯ ಇಬ್ಬರೂ ಹಾಲು, ಬಿಸ್ಕತ್ತುಗಳನ್ನು ಮುಗಿಸಿ ತೋಟಕ್ಕೆ ಹೋದರು. ಬೆಳಗಿನ ತಂಗಾಳಿ ತಂಪಾಗಿ ಬೀಸುತ್ತಿತ್ತು. ಹೂಗಳನ್ನು ಇಬ್ಬರೂ ನೋಡುತ್ತ ಓಡಾಡುತ್ತಿದ್ದರು. ಸ್ಮೃತಿಗೆ ಒಂದು ಹೂವಿನ ಪೊದೆಯಲ್ಲಿ ಏನೋ ಅಲುಗಾಡಿದ ಹಾಗೆ ಕಂಡಿತು. ಹತ್ತಿರದಿಂದ ನೋಡಿದಾಗ ಅದೊಂದು ವಿಚಿತ್ರ ಪ್ರಾಣಿ ಅನ್ನಿಸಿತು. ಬೇರೆ ಗ್ರಹದಿಂದ ಬಂದಿದೆಯೋ ಅನ್ನುವ ಹಾಗಿತ್ತು. ಅದು ತನ್ನ ಕೈಕಾಲುಗಳನ್ನು ಮತ್ತು ತಲೆಯನ್ನು ರೊಬೋಟ್ ತರಹ ಚಲಿಸಲು ಶುರುಮಾಡಿತು. ಸ್ಮೃತಿ ಜೋರಾಗಿ ಕೂಗಿದಳು. ಆದಿತ್ಯನನ್ನು ಕರೆದಳು. ಪಾಪ! ಅವನಿನ್ನೂ ಚಿಕ್ಕವ. ಅವನಿಗೂ ಅದು ಏನು ಎಂದು ತಿಳಿಯಲಿಲ್ಲ.

ಇಬ್ಬರೂ ಮನೆಯೊಳಗೆ ಓಡಿದರು. ಅಜ್ಜಿಯ ಹತ್ತಿರ ಹೋಗಿ ವಿಷಯವನ್ನು ತಿಳಿಸಿದರು. ಅಜ್ಜಿ ತಿಂಡಿ ಮಾಡುವ ತಯಾರಿಯಲ್ಲಿದ್ದರು. ಇಬ್ಬರೂ ಅಜ್ಜಿಯನ್ನು ಬಿಡದೆ ತೋಟಕ್ಕೆ ಕರೆದುಕೊಂಡು ಹೋಗಿ ಆ ಗಿಡದ ಮುಂದೆ ನಿಲ್ಲಿಸಿದರು. ಪುಣ್ಯಕ್ಕೆ ಆ ವಿಚಿತ್ರ ಪ್ರಾಣಿ ಅಲ್ಲಿಯೇ ಇತ್ತು. ಅಜ್ಜಿ ಅದನ್ನು ನೋಡಿ ‘ಓ! ಇದೊಂದು ಪ್ರಾರ್ಥನಾ ಮ್ಯಾಂಟಿಸ್’ ಎಂದು ಉದ್ಗಾರ ತೆಗೆದರು. ‘ಅಂದರೆ ಏನಜ್ಜಿ?’ ಎಂದು ಇಬ್ಬರೂ ಪ್ರಶ್ನೆ ಹಾಕಿದರು. ಅಜ್ಜಿ ‘ಇದೊಂದು ಬಗೆಯ ಕೀಟ’ ಎಂದು ಹೇಳಿದರು. ಪ್ರಾರ್ಥನಾ ಮ್ಯಾಂಟಿಸ್ ನಮಗೆ ಉಪಕಾರ ಮಾಡುವ ಕೀಟ. ಈ ಕೀಟ ಕುಳಿತುಕೊಳ್ಳುವ ರೀತಿ ಪ್ರಾರ್ಥನೆ ಮಾಡುವಾಗ ಕೈಜೋಡಿಸುತ್ತೇವಲ್ಲ ಹಾಗಿರುತ್ತದೆ. ಮುಂದಿನ ಎರಡು ಕಾಲುಗಳನ್ನು ಹಾಗೆ ಜೋಡಿಸಿಕೊಂಡಿರುತ್ತದೆ. ಆದ್ದರಿಂದ ಪ್ರಾರ್ಥನಾ ಮ್ಯಾಂಟಿಸ್’ ಎಂದು ಹೆಸರು.

ಈ ಕಾಲುಗಳ ಒಳಭಾಗದಲ್ಲಿ ಮುಳ್ಳುಗಳಂತೆ ರಚನೆಗಳಿರುತ್ತವೆ. ಇವು ಬೇಟೆಯಾಡಿದ ಹುಳು, ಚಿಟ್ಟೆ, ಅಥವಾ ಕೀಟ ಜಾರಿ ತಪ್ಪಿಸಿಕೊಳ್ಳದಂತೆ ಹಿಡಿಯುತ್ತವೆ. ಒಟ್ಟು ಮೂರು ಜೊತೆ ಕಾಲುಗಳಿದ್ದು ಎರಡು ದೊಡ್ಡ ಕಣ್ಣುಗಳಿವೆ. ತಲೆಯ ಮೇಲೆ ಎರಡು ಪುಟ್ಟ ಮೀಸೆಗಳಿವೆ. ತಲೆಯನ್ನು ಎಲ್ಲಾ ಕೋನದಲ್ಲೂ, ರೀತಿಯಲ್ಲೂ ತಿರುಗಿಸುತ್ತದೆ. ಎಂಟರಿಂದ ಹತ್ತು ಸೆ.ಮೀ. ಉದ್ದವಾಗಿರುವ ಕೀಟ ಮ್ಯಾಂಟಿಸ್. ಸಾಮಾನ್ಯವಾಗಿಹಸಿರು ಬಣ್ಣದಲ್ಲಿರುತ್ತದೆ. ಸ್ವಲ್ಪ ದೂರಕ್ಕೆ ಹಾರಬಲ್ಲದು. ಇದು ನಮಗೆ ಉಪಕಾರಿ ಕೀಟ. ಬೇರೆ ವಿನಾಶಕಾರಿ ಕೀಟಗಳನ್ನು ಮಿಡತೆಗಳನ್ನು ತಿಂದು ಸಹಾಯ ಮಾಡುತ್ತದೆ. ಇದಕ್ಕೆ ‘ಜೈವಿಕ ನಿಯಂತ್ರಣ’ ಎಂದು ಹೆಸರು. ನಾವು ಮ್ಯಾಂಟಿಸ್‌ನ್ನ ಕಂಡರೂ ಕೊಲ್ಲಬಾರದು. ಅಜ್ಜಿ ಇಷ್ಟೆಲ್ಲಾ ವಿಷಯಗಳನ್ನು ಸ್ಮೃತಿ ಮತ್ತು ಆದಿತ್ಯನಿಗೆ ತಿಳಿಸಿದರು. ಎಲ್ಲರೂ ನಂತರ ಬಿಸಿಬಿಸಿ ದೋಸೆ ತಿನ್ನಲು ಅಡಿಗೆಮನೆಯತ್ತ ನಡೆದರು.

ನೆನಪಿಡಿ : ಅನೇಕ ಕೀಟಗಳು ನಮಗೂ ಮತ್ತು ಪರಿಸರಕ್ಕೂ ಪ್ರಯೋಜನಕಾರಿ. ಅವುಗಳನ್ನು ರಕ್ಷಿಸೋಣ.

– ಡಾ.ಎಸ್. ಸುಧಾ, ಮೈಸೂರು

   

7 Comments on “ಪ್ರಾರ್ಥನಾ ಮ್ಯಾಂಟಿಸ್

  1. ಪ್ರಕೃತಿಯೊಂದಿಗೆ ಮಕ್ಕಳ ಒಡನಾಟದ ಕಥೆ..ಚೆಂದದ ಬರಹ..

  2. ಕಥೆಯ ಮೂಲಕ ನಮ್ಮ ಪರಿಸರದ ಪ್ರತಿ ಕಾಳಜಿ ಯನ್ನು ಮೂಡಿಸುವ ಒಂದು ಪ್ರಯತ್ನ. Very nice. ಈ ಪ್ರಕೃತಿಯ ಮಡಿಲಲ್ಲಿ ಅಡಗಿರುವ ಕೌತುಕಗಳು ಹಲವಾರು, ಅವನ್ನೆಲ್ಲ ಆಸ್ವಾದಿಸುವ ಮನಸೇ ನಮಗಿಲ್ಲ ಇವತ್ತು.

  3. ಸುಧಾ ಅವರಿಗೆ ಕೀಟ ಪ್ರಪಂಚ ಅತ್ಯಂತ ಆಪ್ತವಾದದ್ದು. ಅವರ ವಿಜ್ಞಾನ ಬರೆಹಗಳು ಸರಳವಾಗಿ ದ್ದಾರೂ ಅತ್ಯಂತ ವೈಜ್ಞಾನಿಕ ಮಾಹಿತಿಗಳನ್ನು ಒಳಗೊಂಡಿರುತ್ತವೆ ಮಕ್ಕಳು ಮಾತ್ರವಲ್ಲ ಹಿರಿಯರೂ ಇಂತಹ ಬರೆಹಗಳಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ

  4. *ವಿಭಿನ್ನ ಶೈಲಿಯ ಅರ್ಥಪೂರ್ಣ ಮಾಹಿತಿ*
    ಸ್ಮೃತಿ ಮತ್ತು ಆದಿತ್ಯನ ಪಾತ್ರಗಳೊಂದಿಗೆ ಅಜ್ಜಿಯ ಜೊತೆ ನಡೆಸುವ ಸಂಭಾಷಣೆ ನಿಜಕ್ಕೂ ಮಾಹಿತಿಗಳ ಮಹಾಪೂರವನ್ನೇ ಹರಿಸಿತು. ನನ್ನ ಅನಿಸಿಕೆ ಪ್ರಕಾರ ಮಕ್ಕಳಿಗೆ ಪಾಠವನ್ನು ಈ ರೀತಿಯ ಸಾಮಗ್ರಿಗಳೊಂದಿಗೆ, ಉದಾಹರಣೆಗಳೊಂದಿಗೆ, ಚಿತ್ರಗಳ ಮೂಲಕ ತಿಳಿಯಪಡಿಸಿದರೆ ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ. ಜೊತೆಗೆ ಮಕ್ಕಳ ಕಲ್ಪನಾಶಕ್ತಿ ಸಮಗ್ರವಾಗಿ ಬೆಳೆಯುತ್ತದೆ.
    ನಿಮ್ಮ ಲೇಖನ ಶೈಲಿಯು ತುಂಬಾ ಇಷ್ಟವಾಯಿತು ಮೇಡಂ. ಪ್ರಾರ್ಥನಾ ಮ್ಯಾ೦ಟಿಸ್ ನಂತಹ ಹಲವು ಪ್ರಭೇದಗಳ ಕೀಟಗಳ ಬಗ್ಗೆ ಚಿತ್ರಗಳನ್ನು ನೋಡಿರುವೆ. ಮಾಹಿತಿಯ ಕೊರತೆ ಇತ್ತು. ನೀವು ಇದರ ಬಗ್ಗೆ ಚಿಕ್ಕ ಚಿಕ್ಕ ಮಾಹಿತಿಯನ್ನು ನೀಡಿದ್ದೀರಿ. ಇಂತಹ ಅದೆಷ್ಟೋ ಪ್ರಾಣಿ-ಪಕ್ಷಿ, ಕೀಟಗಳ ಪ್ರಪಂಚವನ್ನು ನಾವು ಎಷ್ಟು ತಿಳಿದುಕೊಂಡರು ಸಾಲದಾಗಿದೆ. ಒಂದೊಂದಾಗಿ ನಾವು ಇಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗಬೇಕು. ಅದರಲ್ಲೂ ವಿಜ್ಞಾನ ಕಲಿಕೆ ಇಂದು ತೀರ ಅತ್ಯಗತ್ಯ. ಜೀವವೈವಿಧ್ಯದ ಸರಪಳಿ ನಿರಂತರವಾಗಿದೆ. ಒಂದು ಇನ್ನೊಂದನ್ನು ತಿಂದು ಪರಿಸರ ಸಮತೋಲನವನ್ನು ಕಾಪಾಡಿಕೊಂಡು, ತಾನು ಬದುಕಿ ಇತರರನ್ನು ಬದುಕಿ ಸುತ್ತಿರುವ ಈ ಸುಂದರ ಪ್ರಕೃತಿಗೆ ನಾವು ಯಾವಾಗಲೂ ಚಿರಋಣಿಯಾಗಿರಬೇಕು!.
    ಈ ನಿಟ್ಟಿನಲ್ಲಿ *ಡಾ ಸುಧಾ, ಮೈಸೂರು* ರವರ ಚಿತ್ರ-ಲೇಖನವನ್ನೂ ನನ್ನ ಮಕ್ಕಳನ್ನು ಒಳಗೊಂಡಂತೆ ನಾನು ಇತರ ಮಕ್ಕಳ ಪೋಷಕರ ವಾಟ್ಸಪ್ ಗ್ರೂಪಿಗೆ ಹಾಕಿದ್ದೇನೆ. ಇದರಲ್ಲಿ ಕೆಲವು ಮಕ್ಕಳು ಕಲಿತರೆ ಸಾರ್ಥಕವಾಗುತ್ತದೆ. ಸುಧಾ ಮೇಡಂ ರವರು ಈ ನಿಟ್ಟಿನಲ್ಲಿ ಅಭಿನಂದನಾರ್ಹರು. ಪರಿಸರದೊಂದಿಗಿನ ನಮ್ಮ ಸುಮಧುರ ಬಾಂಧವ್ಯ ಇದೇ ರೀತಿ ನಿರಂತರವಾಗಿ ಇರಲೇಬೇಕು.
    ನಾಳೆ (ಜೂನ್ 05) ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ನಿಮ್ಮ ಲೇಖನ ಸಕಾಲಿಕ. ಮತ್ತೊಮ್ಮೆ ನಿಮಗೆ ಅಭಿನಂದನೆಗಳು ಮೇಡಂ.
    -ಕಾಳೀಹುಂಡಿ ಶಿವಕುಮಾರ್, ಮೈಸೂರು.

  5. ಪ್ರಕೃತಿಯಿಂದ ಕಲಿಯುವಂತಹುದು ಅಪಾರ…ಸೊಗಸಾದ ಬರಹ.

  6. ನಾನು ಇದನ್ನು ನನ್ನ ಮಕ್ಕಳಿಗೆ ಪರಿಚಯಿಸಿದ್ದೆ. ನನ್ನ ಮಗ ಎಲ್ಲಾದರೂ ಈ ಕೀಟ ಕಂಡರೆ ಅಮ್ಮಾ ನಿನ್ನ ಪ್ರಾರ್ಥನಾ ಕೀಟ ಬಂತು ಎಂದು ಓಡಿ ಬಂದು ನನ್ನನ್ನು ಕರೆದೊಯ್ದು ತೋರಿಸುತ್ತೇನೆ. ಅದರ ಹೆಸರಿನ ಬಗ್ಗೆ ನನಗೆ ಸಂದೇಹವಿತ್ತು. ನಿಮ್ಮ ಲೇಖನದ ಮೂಲಕ ಮಾಹಿತಿ ಸಿಕ್ಕಿತು. ಉತ್ತಮ ಬರೆಹ. ಉತ್ತಮ‌ ನಿರೂಪಣೆ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *