ಕಾವ್ಯವಾಚನ
ಬಲು ಶುಷ್ಕ ವೇದಿಕೆಯ ಕಾವ್ಯವಾಚನ
ಒಂದಷ್ಟು ದೃಶ್ಯವೂ ಜತೆಗೂಡಿದರೆ ಚೆನ್ನ
ತೀರ್ಮಾನಕೆ ಬಂದರದೋ ಆ ಯುವಕವಿಗಣ
ತಡವೇಕೆ, ಈ ಗೋಷ್ಠಿಯಲೇ ಆಗಲಿ ಅನುಷ್ಠಾನ.
ಬಂದ ವೇದಿಕೆಗೆ ಚಿಗುರುಮೀಸೆಯ ಕವಿ
ಅವನ ಹೊಚ್ಚ ಹೊಸ ಕವನದ ಹೆಸರು ಗುರಿ
ಅಗಲಿಸಿ ತನ್ನ ಹೆಗಲ ಮೇಲಿದ್ದ ಕೆಂಪು ಚೀಲ
ಹೊರತೆಗೆದ ಸಡಗರದಿಂದ ಬಿಲ್ಲು ಜತೆಗೆ ಬಾಣ
ವೇದಿಕೆಯಿಡೀ ಭ್ರಮಿಸುತ್ತ ,ಸಂಭ್ರಮಿಸುತ್ತ
ವಾಚಿಸುತ್ತ ಗುರಿಯಿಟ್ಟ ಅಧ್ಯಕ್ಷರತ್ತ, ಜನರತ್ತ
ಕೊನೆಗೂ ಮುಗಿದುದು ಅವನ ವಿಲಕ್ಷಣ ಕವನ
ನಿರಾಳ ಜನರಿಂದ ಬಿತ್ತು ಭರ್ಜರಿ ಕರತಾಡನ
ಮುಂದಿನ ಕವಿ ತಂದಿದ್ದ ಒಂದು ಬಂದೂಕ
ಅವನಿಗಿತ್ತು ಶೋಷಣೆಗೇ ಗುಂಡಿಕ್ಕುವ ತವಕ
ಶ್ರೋತೃಗಳಿಗಂತೂ ಈಗ ಕೂತಲ್ಲೇ ನಡುಕ
ಆಟಿಕೆಯ ಪಿಸ್ತೂಲೆಂದು ತಿಳಿದಾಗ ನಿರಾತಂಕ
ಶಿಶುಗೀತೆಯ ಕವಿಯದು ಮುಂದಿನ ಸರದಿ
ಅವನ ತಾಬೆಯಲ್ಲಿತ್ತು ಚೆಂಡು,ಗೋಲಿ,ಬುಗುರಿ
ಆಟಿಕೆಗಳೊಡನೆ ಆಡುತ್ತಲೇ ಕವನ ಓದಿದ
ಅವನ ಜತೆ ಜನರಿಗೂ ತಂದ ಸಂಭ್ರಮ ಆನಂದ
ಮೆಲ್ಲನೆ ನಡೆದು ಬಂದನೀಗ ಹಿರಿಕವಿ ಪಾಪ
ಅವನ ಕಾವ್ಯದ ವಸ್ತು ಮಿಡಿವ ಅಂತಃಕರಣ
ಬರಿಗೈಯಲ್ಲೇ ಬಂದಿದ್ದ,ಇರಲಿಲ್ಲ ಉಪಕರಣ
ಆದರೆ ತಂದಿದ್ದನಲ್ಲ ಅವನ ಅಸಲಿ ಹೃದಯ!
ಅಂತೂ ಗೆದ್ದಿತು ಕಾವ್ಯ
ಹಿಂದೆ ಸರಿಯಿತು ದೃಶ್ಯ
-ಮಹಾಬಲ
ಕವನ ಇಷ್ಟವಾಯಿತು .
ವಾಹ್! ಬಹಳ ಸೊಗಸಾಗಿದೆ.
ಕವಿಯ ಆಶಯದ ಸಂವಹನ ಬಿಲ್ಲು ಬಾಣ, ಬಂದೂಕ, ಆಟಿಕೆ ಗಳಿಗೆ ಎಂದಿಗೂ ಸಾಧ್ಯವಿಲ್ಲ. “ಹಾರ್ಟ್ ವಿಲ್ ಸ್ಪೀಕ್ ಟು ಹಾರ್ಟಂತೆ.”
ಒಳ್ಳೆಯ ಸಂವಹನದ ಉತ್ತಮ ಕವನ
SUPER
ಕಾವ್ಯ ವಾಚನದ ವೇದಿಕೆಯ ದೃಶ್ಯ ಕಣ್ಣಮುಂದೆ ಸರಿಯಿತು…ಕವನ ಚೆನ್ನಾಗಿದೆ.
ಚೆನ್ನಾಗಿದೆ ಸರ್. ಎಲ್ಲಾ ರೀತಿಯ ಕಾವ್ಯ ವಾಚನಗಳ ಪರಿಚಯ ವಿದೆ ನಿಮ್ಮ ಕವಿತೆಯಲ್ಲಿ.