ಯಶಸ್ಸಿನ ಹಾದಿಯಲ್ಲಿ ಮಲ್ಲಿಗೆ ಘಮ

Share Button

ಈಗಿನ ಪೀಳಿಗೆಯ ಮಕ್ಕಳಿಗೆ ಅರಿವು ಮೂಡಿಸಲು ಬರೆದ ಚಿಕ್ಕ ಲೇಖನವಿದು. ಸ್ವಂತ ಹೊಲ, ಗದ್ದೆ ಇದ್ದರೂ ಉಳುಮೆಮಾಡಲು ಕೆಲಸಗಾರರಿಲ್ಲದೆ ಅಥವಾ ಆಸಕ್ತಿ ಇಲ್ಲದೆ ಕೃಷಿಭೂಮಿಯನ್ನು ಪಾಳು ಬಿಟ್ಟಿರುವ ಜನರ ನಡುವೆ, ಗುಡ್ಡೆಯನ್ನು ಸಮತಟ್ಟು ಮಾಡಿ ಬೇಸಾಯದಲ್ಲಿ ಯಶಸ್ಸಿನ ಹಾದಿಯಲ್ಲಿರುವ  ದಂಪತಿಯನ್ನು ಪರಿಚಯಿಸಲು ಹೆಮ್ಮೆಯಾಗುತ್ತದೆ. ಕೃಷಿಪ್ರಧಾನವಾದ ನಮ್ಮ ಭಾರತದೇಶದಲ್ಲಿ, ಎಳೆ ಯುವಕ/ಯುವತಿಯರು ಮೂಲಕಸುಬನ್ನೂ, ತಾಯ್ನಾಡನ್ನೂ ಬಿಟ್ಟು ಪಟ್ಟಣದಲ್ಲಿ ಉದ್ಯೋಗದ ಮೊರೆ ಹೋಗುವ ಕಾಲವಿದು.ಆದರೆ ಕೃಷಿಭೂಮಿಗೆ ಸೂಕ್ತವಾದ ಬೆಳೆಯನ್ನು ಆರಿಸಿಕೊಂಡು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿ ಲಾಭ ಪದೆಯಬಹುದು ಎಂದು ದಕ್ಷಿಣ ಕನ್ನಡಜಿಲ್ಲೆಯ ಪ್ರಗತಿಪರ ಕೃಷಿಕರಲ್ಲೊಬ್ಬರಾದ ಉರಿಮಜಲು ಶ್ರೀಧರ‍‌್ ಭಟ್ ಮತ್ತು ಗೀತಾ ದಂಪತಿ  ತೋರಿಸಿಕೊಟ್ಟಿದ್ದಾರೆ.

ಕೃಷಿಕರು ಒಂದೇ ಬೆಳೆಯನ್ನು ನಂಬಿ ಜೀವನಮಾಡುವಂತಿಲ್ಲ. ಮಿಶ್ರ ಬೆಳೆಮಾಡಿದಾಗಲೇ ಲಾಭವಾಗುವುದು. ತಾವು ಸ್ವಂತ ದುಡಿದರೆ ಅದಕ್ಕಿರುವಷ್ಟು ಬೆಲೆ ಬೇರೊಂದಿಲ್ಲ. ಲಾಭದಾಯಕವೂ ಹೌದು ಎನ್ನುವರು ಗೀತಾ ದಂಪತಿಗಳು. ಎಂಟು ಎಕರೆ ಭೂಮಿಯಲ್ಲಿ ಅಡಿಕೆ, ತೆಂಗು, ಬಾಳೆ, ಹಲಸು, ಮಾವು, ಒಳ್ಳೆಮೆಣಸು ಇತ್ಯಾದಿ ವಾಣಿಜ್ಯ ಬೆಳೆಗಳ ಜೊತೆಗೆ ಮಂಗಳೂರು ಮಲ್ಲಿಗೆ ತಳಿಯ ಪುಷ್ಪಕೃಷಿಯನ್ನೂ ಮಾಡುತ್ತಿರುವುದು ಇವರ ವೈಶಿಷ್ಟ್ಯ. ಮಲ್ಲಿಗೆಯಲ್ಲಿ ಅವರಿಗೆ ಉತ್ತಮ ಆದಾಯ ಕೂಡಾ ಬಂದಿದೆ. ಮಲ್ಲಿಗೆಯ ನರ್ಸರಿಯನ್ನೂ ಪ್ರಾರಂಭಿಸಿದರು. ಇವರು ಸಿದ್ಧಪಡಿಸುವ ಮಲ್ಲಿಗೆಯ ನರ್ಸರಿ ಗಿಡಗಳಿಗೆ ಉತ್ತಮ ಬೇಡಿಕೆಯಿದೆ. ಮಲ್ಲಿಗೆ ಕೃಷಿಯು ಮಹಿಳೆಯರಿಗೆ ಸ್ವ-ಉದ್ಯೋಗವನ್ನೂ ಕಲ್ಪಿಸುತ್ತಿದೆ. ತಾನೇ ಆಕ್ಕರೆಯಿಂದ ನೆಟ್ಟು, ಸಾಕಿದ ಗಿಡಗಳು ಘಮಘಮಿಸುವ ಮಲ್ಲಿಗೆ ಮೊಗ್ಗುಗಳನ್ನು ನೀಡುವಾಗ ಬೆಳೆಸಿದವರಿಗೆ ಮನಸ್ಸು ಅರಳುತ್ತದೆ. ಮುಂಜಾನೆಯೇ ಮೊಗ್ಗುಗಳನ್ನು ಬಿಡಿಸಿ, ಬಾಳೆನಾರಿನಿಂದ ಮಲ್ಲಿಗೆಯ ದಂಡೆ ಕಟ್ಟಿ, ಆದಷ್ಟು ಬೇಗ ಸಂತೆಗೆ ಮುಟ್ಟಿಸಿದರೆ ಆ ದಿನದ ಮಲ್ಲಿಗೆಯ ಕೆಲಸ ಮುಗಿದಂತೆ.

ಮಲ್ಲಿಗೆಯ ಕೃಷಿಗಾಗಿ ಗೀತಾ ಅವರು ಹತ್ತು ಸೆಂಟ್ಸ್ ಜಾಗದಲ್ಲಿ ನಾಟಿ ಮಾಡಿದೆ ಸಸಿಗಳನ್ನು ಸಾಕಷ್ಟು ಅಂತರವಿಟ್ಟು ನೆಡುತ್ತಾರೆ. ಸಾವಯವ ಹಟ್ಟಿಗೊಬ್ಬರ, ಬೂದಿ, ನೆಲಗಡಲೆ ಹಿಂಡಿ ಇವಿಷ್ಟನ್ನೇ ಆಗಾಗ ಕೊಡುತ್ತಾ, ಹನಿನೀರಾವರಿ ಮೂಲಕ ನೀರುಣಿಸಿದರೆ ಒಂದು ವರ್ಷದೊಳಗೆ ಮಲ್ಲಿಗೆ ಮೊಗ್ಗು ಬಿಡಲು ಪ್ರಾರಂಭವಾಗುತ್ತದೆ. ಜೋರು ಮಳೆಗಾಲದಲ್ಲಿ ಮಲ್ಲಿಗೆಯ ಇಳುವರಿ ಕಡಿಮೆಯಾದರೂ ಬಹುತೇಕ ವರ್ಷವಿಡೀ ಮಲ್ಲಿಗೆಯ ಗಿಡಗಳು ಮೊಗ್ಗನ್ನು ಕೊಡುತ್ತವೆ. ತಾನೇ ಕೈಯಾರೆ ಮಕ್ಕಳಂತೆ ಸಾಕಿದ ಗಿಡಗಳನ್ನು ಬೆಳೆಸುವ ಖುಷಿಯ ಜೊತೆಗೆ, ತೃಪ್ತಿಕರವಾದ ಆದಾಯವೂ ಸಿಗುತ್ತದೆ ಎಂದು ಮಲ್ಲಿಗೆ ಬೆಳೆಸುವ ಗೀತಾ-ಶ್ರೀಧರಭಟ್ ದಂಪತಿ ತಿಳಿಸುತ್ತಾರೆ.

ವ್ಯವಸಾಯವೂ ಒಂದು ಉದ್ಯೋಗತಾನೇ?. ಗುಡ್ಡೆಯನ್ನುಪಾಳುಬಿಡುವುದು ಬೇಡ, ಭತ್ತದ ಗದ್ದೆ ಮಾಡೋಣ ಎಂದು ನಿರ್ಧರಿಸಿದ ದಂಪತಿ, ಗುಡ್ಡೆಯನ್ನು ಕಡಿದು ಸಮತಟ್ಟುಮಾಡಿ ಗದ್ದೆಯಾಗಿ ಪರಿವರ್ತಿಸಿ, ವ್ಯವಸಾಯ ಮಾಡಿದರು. ಆರಂಭದಲ್ಲಿ ನಲುವತ್ತು ಚದರ ವಿಸ್ತೀರ್ಣದಲ್ಲೆ ಬೇಸಾಯ ಮಾಡಿದರು. ಸಾವಯವ ಭತ್ತದ ಕೃಷಿಮಾಡಬೇಕೆಂದು ಅವರ ಇಚ್ಛೆ. ಹಟ್ಟಿಗೊಬ್ಬರ, ಬೂದಿ ಬಳಸಿ, ರಾಸಾಯನಿಕ ಔಷಧಿ  ಸಿಂಪಡಿಸದೆ ಎರಡು ಬೆಳೆಯನ್ನು ಮಾಡಿ ಸಫಲರಾದರು ಮಾತ್ರವಲ್ಲದೆ ಭತ್ತದ ಕಟಾವು ಮಾಡಿದ ಮೇಲೆ ಗದ್ದೆಯನ್ನು ಪಾಳುಬಿಡದೆ ತರಕಾರಿ ಬೆಳೆಸುವರು. ಇವರಿಗೆ, ಇನ್ನೂ ಒಂದು ಎಕರೆ ಭೂಮಿಯನ್ನು ವ್ಯವಸಾಯ ಮಾಡಲು ಸಿದ್ಧಪಡಿಸುವ ಯೋಜನೆಯಿದೆ.

ಭತ್ತ ಬೆಳೆಸಿದರೆ, ಕಣಜ ತುಂಬುವುದರೆ ಜೊತೆಗೆ ಉಪ ಉತ್ಪನ್ನವಾದ ಬೈಹುಲ್ಲು ದನಗಳ ಮೇವಿಗೆ ಬಳಕೆಯಾಗುತ್ತದೆ. “ಕಷ್ಟಪಡದೆ ಯಾವ ಕೆಲಸವಿದೆ, ಕುಳಿತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು, ನಮ್ಮಹೊಲದಲ್ಲಿ ಬೆಳೆಸಿದ ಭತ್ತದಿಂದ ಅಕ್ಕಿ ಮಾಡಿ ಉಣ್ಣಲು ಎಷ್ಟು ಖುಷಿ ಮತ್ತು ಆರೋಗ್ಯದೃಷ್ಟಿಯಿಂದಲೂ ಉತ್ತಮ ಅಲ್ವೇ” ಎನ್ನುತ್ತಾರೆ ಶ್ರೀಧರಭಟ್ ಮತ್ತು ಗೀತಾ ದಂಪತಿ.

ಇವರ ಕೃಷಿಜೀವನದ ಹಾಗಿ ಸುಲಭವಾಗಿರಲಿಲ್ಲ.ಇಷ್ಟು ಕಷ್ಟಪಟ್ಟು ವ್ಯವಸಾಯ ಮಾಡಬೇಕಾ ಎಂಬ ಟೀಕೆ ಕೇಳಿದ್ದೂ ಇದೆ. ಆದರೆ ಕಷ್ಟಪಡದೆ ಯಶಸ್ಸು  ಸಿಗುವುದೆ? ನಮಗಿರುವ ಜಮೀನು, ನೀರಿನ ಆಶ್ರಯವನ್ನು ಸದುಪಯೋಗಪಡಿಸಿಕೊಳ್ಳಬೇಕಲ್ಲವೇ? ನಾವು ಬೇಸಾಯ ಆರಂಭಿಸಿದಂದಿನಿಂದ ಊಟಕ್ಕೆ ಹಣಕೊಟ್ಟು ಅಕ್ಕಿ ತಂದಿಲ್ಲ, ದನಗಳಿಗೆ ಬೈಹುಲ್ಲು ತಂದಿಲ್ಲ. ಹಸುಗಳಿಗೆ ನಾವು ಮೇವು ಕೊಟ್ಟರೆ ನಮಗೆ ಗೊಬ್ಬರ ಸಿಗುತ್ತದೆ. ಅದನ್ನು ಭೂಮಿ ತಾಯಿಗೆ ಅರ್ಪಿಸುವೆವು. ನಮಗೆ ಧನ-ಧಾನ್ಯಲಕ್ಷ್ಮಿ ಒದಗಿ ಬರುತ್ತಾಳೆ ಎನ್ನುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇವರು ಕೃಷಿ ಜೀವನದ ಯಶಸ್ಸಿನ ಪಯಣಕ್ಕೆ ಶುಭಕಾಮನೆಗಳು.

-ಆಶಾ ನೂಜಿ .

9 Responses

  1. Krishnaprabha says:

    ಕೃಷಿ ಕಾರ್ಯಗಳಿಗೆ ಅಂಜಿ, ಊರು ಬಿಟ್ಟು ಬರುವ ಯುವಜನರಿಗೆ ಸ್ಪೂರ್ತಿ ತುಂಬುವ ಲೇಖನ

  2. Hema says:

    ಗೀತಾ-ಶ್ರೀಧರ ದಂಪತಿಯ ಕೃಷಿಸಾಧನೆ ಅನುಕರಣೀಯ. ಅವರಿಗೆ ಅಭಿನಂದನೆಗಳು

  3. Savithri bhat says:

    ಅಭಿನಂದನೆಗಳು ಗೀತಾ,ಶ್ರೀಧರ ದಂಪತಿ ಗ್ಗೆ.ತಮ್ಮ ಸಾಧನೆ ಯಿಂದ ಇತರರಿಗೆ ಮಾದರಿ ಯಾಗಿದ್ದಾರೆ..

  4. ನಯನ ಬಜಕೂಡ್ಲು says:

    ಇವರು ನಿಜವಾದ ಸಾಧಕರೆಂದರೆ. ಇವತ್ತು ನಾವೆಲ್ಲರೂ ಇರುವ ಪರಿಸ್ಥಿತಿಯಲ್ಲಿ ಯಾವ ಕೆಲಸವೂ ಸಣ್ಣದಲ್ಲ, ಪ್ರತಿಯೊಂದು ಕೆಲಸಕ್ಕೂ ಅದರದರದ್ದೇ ಆದ ಬೆಲೆ, ಗೌರವ ಇದೆ ಅನ್ನುವುದು ಬಹಳ ಚೆನ್ನಾಗಿ ಎಲ್ಲರಿಗೂ ಪರಿಚಯವಾಗಿದೆ. ತುಂಬಾ ಆಪ್ತ ಬರಹ ಮೇಡಂ, ಮನಸಿಗೆ ಓದಿ ಹಿತವೆನಿಸಿತು. ಸಾಧಕರಿಗೆ ಅಭಿನಂದನೆಗಳು. ಅವರ ಸಾಧನೆ ಹೀಗೆಯೇ ಮುಂದುವರಿಯಲಿ ಅನ್ನುವ ಆಶಯ

  5. ಕೃಷಿತೋ ನಾಸ್ತಿದುರ್ಭಿಕ್ಷಂ ಎಂಬ ಮಾತು ಈ ಲೇಖನ ಓದಿದಾಗ ನೆನಪಾಗುತ್ತಿದೆ.ತಮ್ಮದೇ ಭೂಮಿಯಲ್ಲಿ ಒಂದಲ್ಲ ಒಂದು ವಿಧದಲ್ಲಿ ಬೆಳೆತೆಗೆಯುವ ಗೀತಾ ನೂಜಿ ದಂಪತಿಗಳು ವಂದನಾರ್ಹರು. ಇವರ ಇಷ್ಟಾರ್ಥಗಳೆಲ್ಲಾ ಈಡೇರಲಿ. ಅವರ ಕೃಷಿ ಬದುಕು ಯಶಸ್ಸಿನ ಮೆಟ್ಟಲು ಏರುತ್ತಾ ಹೋಗಲಿ. ಎಂಬ ಆಶಯಗಳೊಂದಿಗೆ ವಿಜಯಾಸುಬ್ರಹ್ಮಣ್ಯ

  6. Shankari Sharma says:

    ಸ್ವಂತ ದುಡಿಮೆಯಿಂದ ಸಾಧನೆ ಮಾಡಿದ ಹಲವಾರು ಕೃಷಿ ಕುಟುಂಬಗಳ ಸಾಲಲ್ಲಿರುವ ಗೀತಾ ದಂಪತಿ ಬಗ್ಗೆ ಹೆಮ್ಮೆ ಎನಿಸುತ್ತದೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  7. Anonymous says:

    ಈ ದಂಪತಿ ಕೃಷಿಗೊಂದು ಸ್ಫೂರ್ತಿ.ಅವರ ಉತ್ಸಾಹಕ್ಕೆ ನನ್ನದೊಂದು ಚಪ್ಪಾಳೆ.ಲೇಖನ ಸೊಗಸಾಗಿದೆ‌

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: