ದೇವಾನು ದೇವತೆಗಳು
ಈ ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿ ನಿರಂತರವಾಗಿ ನೋವು ಅನುಭವಿಸುತ್ತಿರುವುದು ಹೆಣ್ಣು.ಹಾಗಾಗಿಯೇ ನಾನು ಸಾಮಾನ್ಯವಾಗಿ ಮಹಿಳಾ ಪರ ನಿಲುವು ಇರುವಂತಹವಳು.ಮನೆಯಲ್ಲಿಯೇ ಇರಬಹುದು, ಸಮಾಜದಲ್ಲಿಯೇ ಇರಬಹುದು, ಬರವಣಿಗೆಯಲ್ಲಿಯೇ ಇರಬಹುದು , ವೇದಿಕೆ ಮೇಲೆ ಮಾತನಾಡುವಾಗಲೇ ಇರಬಹುದು, ನನ್ನಲ್ಲಿ ಮಹಿಳಾ ಪರಧೋರಣೆ ಸದಾ ಜಾಗೃತವಾಗಿರುತ್ತದೆ. ನನ್ನ ಈ ನಿಲುವಿನಿಂದ ಅನೇಕರು ನಾನು ಪುರುಷ ದ್ವೇಷಿ ಇರಬಹುದು ಅಂತ ಅನುಮಾನಿಸಿದ್ದು ಉಂಟು. ಆದರೆ ಅವರಿಗೆ ಗೊತ್ತಿರಲಾರದು ನನ್ನ ಬದುಕಿನಲ್ಲಿ ಬಂದ ಪುರುಷರೆಲ್ಲರೂ ದೇವಾನು ದೇವತೆಗಳಂತವರೆಂದು. ನಾನು ಇಷ್ಟು ದೂರ ನಡೆದು ಬಂದ ಬದುಕಿನ ದಾರಿಯಲ್ಲಿ ನಿಂತು ಒಮ್ಮೆ ಹಿಂತಿರುಗಿ ನೋಡಿದಾಗ ನನ್ನ ಇಷ್ಟು ವರ್ಷಗಳ ಬದುಕಿನಲ್ಲಿ ನನಗೆ ಮಮತೆ, ಅಕ್ಕರೆ, ಪ್ರೀತಿ, ವಾತ್ಸಲ್ಯ,ಪ್ರೇಮ, ಸ್ನೇಹ,ಕಾಳಜಿ, ವಿಶ್ವಾಸ,ಅಭಿಮಾನ,ಆದರ ತೋರಿದ ಅನೇಕ ಪುರುಷರು ಕಾಣ ಸಿಗುತ್ತಾರೆ. ಆ ಪುರುಷರಲ್ಲಿ ಮೊದಲಿಗೆ ನನ್ನ ತಂದೆ,ನಂತರ ನನ್ನ ಪತಿ, ನನ್ನ ಸಹೋದರರು, ಶಿಕ್ಷಕರು, ಸ್ನೇಹಿತರು, ಸಹೋದ್ಯೋಗಿಗಳು, ಮೇಲಾಧಿಕಾರಿಗಳು, ಆತ್ಮೀಯರು, ಅಭಿಮಾನಿ
ಅವರಲ್ಲಿ ಅತಿ ಮುಖ್ಯರಾದವರು ನನ್ನ ಅತ್ಯಂತ ಪ್ರೀತಿ ಪಾತ್ರರಾದ ಮಾತೃ ಹೃದಯಿ, ಪ್ರೀತಿಯ ಗಣಿ, ಮಮತಾಮಯಿ ,ಜಗತ್ತಿನ ವಾತ್ಸಲ್ಯವನ್ನೆಲ್ಲವನ್ನು ಮೊಗೆ ಮೊಗೆದು ಕೊಟ್ಟ ನನ್ನ ತಂದೆ. ಸಾಮಾನ್ಯವಾಗಿ ಅಪ್ಪಂದಿರಿಗೆ ಹೆಣ್ಣು ಮಕ್ಕಳೆಂದರೆ ಅತಿಶಯ ಪ್ರೀತಿ.ಅದರಂತೆ ನನ್ನಪ್ಪನಿಗೂ ನನ್ನನ್ನು ಕಂಡರೆ ಅತಿ ಪ್ರೀತಿ.ಹೆಣ್ಣು ಮಕ್ಕಳೆಂದರೆ ಅಪ್ಪನಿಗೆ ತುಂಬಾ ಪ್ರೀತಿ.ಹಾಗಾಗಿ ನಾನೆಂದರೆ ಅಪ್ಪನಿಗೆ ಅತಿಶಯ ಪ್ರೀತಿ.
ಒಬ್ಬಳೆ ಮಗಳೆಂದು ಅತಿ ಎನಿಸುವಷ್ಟು ಮುದ್ದು ಮಾಡಿ ಹಾಳುಮಾಡುತ್ತಿದ್ದರೆಂದು ದೂರುವ ಅಮ್ಮನನ್ನು ಒಂದಿಷ್ಟೂ ಕೇರ್ ಮಾಡದ ಅಪ್ಪ ,ಪ್ರೀತಿ ವಾತ್ಯಲ್ಯದ ಹೊಳೆಯಲಿ ನನ್ನನ್ನು ಮೀಯಿಸಿ ಬಿಟ್ಟಿದ್ದರು. ಗಂಡು ಮಕ್ಕಳನ್ನು ಅತಿ ಶಿಸ್ತಿನಿಂದ ಬೆಳೆಸುತ್ತಿದ್ದ ಅಪ್ಪ, ಹೆಣ್ಣು ಮಕ್ಕಳು ಹೂವಿನಂತೆ ಸುಖವಾಗಿ ಬೆಳೆಯಬೇಕು ಎಂದು ಬಯಸುತ್ತಿದ್ದರು.ಮದುವೆಯಾಗಿ ಇನ್ನೊಂದು ಮನೆಗೆ ಸೊಸೆಯಾಗಿ ಹೋಗುವ ಮಗಳಿಗೆ ಅದೆಂತಹ ಮನೆ ಸಿಗುವುದೊ,ಇಲ್ಲಿರುವಷ್ಟು ದಿನವೂ ಮಗಳ ಬದುಕು ಸುಖದ ಸುಪ್ಪತ್ತಿಗೆಯಲ್ಲಿ ತೇಲುವಂತೆ ಇರಬೇಕು, ಮಗಳ ಯಾವ ಆಸೆ ಬಯಕೆಗಳು ಈಡೇರದೆ ಇರಬಾರದು ಅನ್ನೊ ಮನೋಭಾವ ನನ್ನಪ್ಪನದು.ಅಂತೆಯೆ ನನಗೂ ಅಪ್ಪನೆಂದರೆ ಪ್ರಾಣಕ್ಕೂ ಮಿಗಿಲು. ಜನ್ಮಕ್ಕೆ ಕಾರಣನಾದ ಅಪ್ಪನೆಂದರೆ ಎಲ್ಲಾ ಮಕ್ಕಳಿಗೂ ಅಪ್ಯಾಯಮಾನ. ತೋಳುಗಳಲ್ಲಿ ಅಪ್ಪಿ ಬದುಕಿನಲಿ ಭದ್ರತೆಯ ಭಾವ ಬಿಂಬಿಸಿ, ಕೈ ಹಿಡಿದು ತಪ್ಪು ಹೆಜ್ಜೆಯ ಜೊತೆ ಹೆಜ್ಜೆ ಬೆರೆಸಿ ಹೊರ ಜಗತ್ತಿಗೆ ತಮ್ಮನ್ನು ಪರಿಚಯಿಸುವ ಅಪ್ಪನೆಂದರೆ ಪುಳಕ, ಅಪ್ಪನೆಂದೆರೆ ಹೀರೋ. ಅಪ್ಪನೆಂದರೆ ಜಗದ ಸಿರಿಯನ್ನೆಲ್ಲ ಬೊಗಸೆ ಬೊಗಸೆಯಲಿ ಮೊಗೆದು ಕೊಟ್ಟವನು. ಅಪ್ಪನೆಂದರೆ ಬದುಕಿನಲಿ ಚೈತನ್ಯ ತುಂಬಿದವನು. ಅಪ್ಪನೆಂದರೆ ಬೆರಗುಗಣ್ಣಿನಲಿ ಪ್ರಪಂಚ ನೋಡುವಂತೆ ಮಾಡಿದವನು , ತಪ್ಪು ತಪ್ಪು ಹೆಜ್ಜೆ ಇರಿಸುವಾಗ ಕೈ ಹಿಡಿದು ನಡೆಸಿದವನು, ಹೆಗಲ ಮೇಲೆ ಕೂರಿಸಿಗೊಂಡು ಹಾದಿಯುದ್ದಕ್ಕೂ ನಡೆದವನು, ಬಿದ್ದು ಗಾಯ ಗೊಂಡಾಗ ಮೈ ದಡವಿ ರಮಿಸಿದವನು, ಹೊಳೆಯಲ್ಲಿ ಈಜು ಕಲಿಸಿದವನು, ಮಳೆಯಲ್ಲಿ ನೆನೆದು ಜ್ವರ ಬರಿಸಿಕೊಂಡಾಗ ಅಮ್ಮನಂತೆ ಸೇವೆ ಮಾಡಿದವನು ಹೀಗೆ ಬದುಕಿನ ಒಂದೊಂದು ಮಜುಲುಗಳಲ್ಲೂ ತನ್ನ ಛಾಪು ಮೂಡಿಸಿ “ನಿನ್ನಂತ ಅಪ್ಪ ಇಲ್ಲಾ” ಅಂತ ಅನ್ನಿಸಿಕೊಂಡಂತಹ ಅಪ್ಪ ನನ್ನ ಬದುಕಿನಲ್ಲು ಮಹತ್ವದ ಸ್ಥಾನ ಪಡೆದು ಗೆಳೆಯನಂತೆ, ತಾಯಿಯಂತೆ, ಗುರುವಂತೆ, ಮಾರ್ಗದರ್ಶಿಯಂತೆ, ಹಿತೈಷಿಯಂತೆ ಮಕ್ಕಳ ಬಾಳಿನಲ್ಲಿ ಬೆಳಕಾಗಿ ಬೆಳಕು ತಂದವರು. ಪ್ರತಿಯೊಂದು ಮಗುವಿಗೂ ತಾಯಿಯ ಪ್ರೀತಿಯ ಅವಶ್ಯಕತೆಯಂತೆ ತಂದೆಯ ಪ್ರೀತಿಯೂ ಅತ್ಯಾವಶ್ಯಕ.
ಅಪ್ಪ ಎಲ್ಲರ ಬದುಕಿನಲ್ಲಿಯೂ ವಿಶೇಷವಾದ ವ್ಯಕ್ತಿ. ಅಪ್ಪನನ್ನು ನಾವು ಮರೆಯುವಂತೆಯೇ ಇಲ್ಲ. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಬಹು ಜತನದಿಂದ ಬೆಳಸುವ ಅಪ್ಪನಿಗೆ ಮಕ್ಕಳ ಮೇಲೆ ಅತೀವ ಪ್ರೀತಿ, ಮಮತೆ, ವಾತ್ಸಲ್ಯ ವಿಪರೀತ ಕಾಳಜಿ . ಮಕ್ಕಳ ಸುಂದರ ಬದುಕಿಗಾಗಿ ಅವಿರತವಾಗಿ ಶ್ರಮಿಸುವ ಅಪ್ಪ, ಅದಕ್ಕಾಗಿ ಯಾವ ತ್ಯಾಗಕ್ಕು ಸಿದ್ದ . ತನ್ನ ಕರುಳ ಕುಡಿಗಳ ಭವ್ಯ ಭವಿಷ್ಯಕ್ಕಾಗಿ ಸದಾ ಹೋರಾಡುವ ಅಪ್ಪ, ಮಕ್ಳಳ ಸುಂದರ ಬದುಕಿನಲ್ಲಿ ಸಾರ್ಥಕ್ಯ ಕಾಣುತ್ತಾನೆ.
ನನ್ನಪ್ಪ ಕೂಡ ನನ್ನ ಬದುಕಿನ ಸುಂದರ ಕನಸು ಕಂಡವರು.ಆ ಸುಂದರ ಬದುಕು ನನ್ನದಾಗುವ ಮುನ್ನವೇ ಆ ವಿಧಿ ನನ್ನಪ್ಪನನ್ನು ನನ್ನಿಂದ ಶಾಶ್ವತವಾಗಿ ದೂರ ಮಾಡಿ ನಿರಂತರವಾಗಿ ನನ್ನೆದೆಯಲ್ಲಿ ನೋವನ್ನುಳಿಸಿ ಬಿಟ್ಟಿತು..ಅಪ್ಪ ದೂರಾದ ನೋವಿನಲ್ಲಿ ಬದುಕೇ ಬೇಡವೆನಿಸಿದ್ದು ಸುಳ್ಳಲ್ಲ.ಅಪ್ಪನಿಲ್ಲದ ಆ ಮೂರು ವರ್ಷಗಳು ಅನಾಥ ಭಾವ ಕಾಡಿ ಹಗಲೆಲ್ಲ ಸಂಕಟಪಟ್ಟು, ರಾತ್ರಿಗಾಗಿ ಕಾತುರದಿಂದ ಕಾಯುತ್ತಿದ್ದೆ.ಅಪ್ಪ ಕನಸಿನಲ್ಲಿ ಬಂದು ಬಿಡುತ್ತಿದ್ದರು.ನಾನು ಅವರ ತೊಡೆಯ ಮೇಲೆ ತಲೆಯಿಟ್ಟು ಮಲಗಿ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದರೆ,ಅಪ್ಪ ನನ್ನ ಕೆನ್ನೆ ಸವರುತ್ತಾ ಮಗಳೇ ಯಾವಾಗ ನಿನ್ನ ಮದುವೆ ಮಾಡಿ ನಿನ್ನ ಮಗುವನ್ನು ನಾನು ಹೀಗೆ ಮಲಗಿಸಿಕೊಂಡು ಮುದ್ದು ಮಾಡುವುದು ಅಂತ ಕೇಳುತ್ತಿದ್ದರು, ನಾನು ಹೋಗಪ್ಪ, ಮದುವೆ ಯಾರು ಮಾಡಿ ಕೊಳ್ಳುತ್ತಾರೆ ಅಂತ ಮುನಿಸಿಕೊಳ್ಳುವುದು ಇದು ಅಪ್ಪ ಸಾಯುವ ಮುಂಚೆ ನಡೆಯುತ್ತಿದ್ದಂತೆ ನಂತರವೂ ಕನಸ್ಸಿನಲ್ಲಿ ನಡೆಯುತ್ತಿತ್ತು. ಆದರೆ ಬೆಳಕು ಹರಿಯುತ್ತಲೇ ಅದೆಲ್ಲವೂ ಕನಸು ಅಂತ ವಾಸ್ತವ ಅರ್ಥ ಮಾಡಿಸಿ ನನ್ನನ್ನು ಮತ್ತಷ್ಟು ಕುಗ್ಗಿಸಿ ಬಿಡುತ್ತಿತ್ತು.ಈ ನೋವು,ಸಂಕಟ ನಿರಂತರವಾಗಿರುತ್ತಿತ್ತೇನೊ, ಭಗವಂತ ಒಂದು ಕಡೆ ಕಿತ್ತು ಕೊಂಡು ಮತ್ತೊಂದು ಕಡೆ ಕೊಡುತ್ತಾನೆ ಅನ್ನುವುದಕ್ಕೆ ನನ್ನ ಬದುಕೇ ಸಾಕ್ಷಿ ಆಗಿಬಿಟ್ಟಿತು.ಅಪ್ಪ ಸತ್ತು ಮೂರು ವರ್ಷಗಳ ನಂತರ ನನ್ನ ಬದುಕಲ್ಲಿ ಸಂತಸದ ವಸಂತ ಮತ್ತೆ ಬಂದಿತ್ತು ಪತಿಯ ರೂಪದಲ್ಲಿ.
‘ನೀ ನಡೆವ ಹಾದಿಯಲ್ಲಿ ನಗೆ ಹೂವು ಹಾಸುವೆ’ ಅಂತ ಅಪ್ಪನದೇ ಅಂತಃಕರಣ ಹೊಂದಿದ ನನ್ನವರು ಕಳೆದು ಹೋಗಿದ್ದ ಉತ್ಸಾಹ, ಆನಂದ, ಪ್ರೀತಿ ,ಮಮತೆ,ಕಕ್ಕುಲತೆ,ಕಾಳಜಿ, ಚೈತನ್ಯ ಎಲ್ಲಾ, ಎಲ್ಲವನ್ನು ಬೊಗಸೆ ಬೊಗಸೆ ತುಂಬಿಸಿ ಆವತ್ತಿನಿಂದ ಇವತ್ತಿನವರೆಗೂ ಕೊಂಚವೂ ಕಡಿಮೆಯಾಗದಂತೆ ಅಕ್ಷಯವೇ ಆಗಿಬಿಟ್ಟಿದ್ದಾರೆ.ದೈವದ ಈ ಕೊಡುಗೆಗೆ ಅದೇನು ಹೇಳಲಿ. ಪ್ರಾಯಶ: ಅಪ್ಪನ ಅಗಲುವಿಕೆಯ ದುಃಖವನ್ನು ಮರೆಯಲು ನನಗೆ ಸಾಧ್ಯವಾಗಿದ್ದು ನನ್ನ ಬದುಕಿನಲ್ಲಿ ಬಂದ ನನ್ನ ಪತಿಯಿಂದ , ಅವರ ಪ್ರೀತಿಯಿಂದ,ಅವರ ಪ್ರೇಮದಿಂದ.ಆ ದಿನಗಳ ನಂತರವೇ ಅಪ್ಪನ ಅಗಲುವಿಕೆಯ ನೋವು ಕ್ರಮೇಣ ದೂರಾಗುತ್ತ ನಾನು ಮತ್ತೊಮ್ಮೆ ಸಿಕ್ಕ ಅಪ್ಪನಂತಹುದೇ ಪ್ರೀತಿಯ ಹೊಳೆಯಲ್ಲಿ ತೇಲುತ್ತಾ, ಸಂಸಾರದ ಆನಂದಸಾಗರದಲಿ ಮುಳುಗಿ ಹೋದೆ.
ನನ್ನ ಬದುಕಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ ಸಹೋದರರ ಬಗ್ಗೆ ಹೇಳಲೇಬೇಕು.ಮೂರು ಜನ ಸಹೋದರರ ಜೊತೆಗಿನ ನನ್ನ ಬಾಲ್ಯ ಅತಿ ಸಾಮಾನ್ಯ ವಾಗಿತ್ತು. ಎಲ್ಲರ ಮನೆಯಲ್ಲೂ ಇರುವಂತಹದ್ದೆ ತುಂಟತನ, ಜಗಳ, ರೇಗಿಸುವಿಕೆ, ಸ್ಪರ್ಧೆ, ಈರ್ಷೆ, ಒಗ್ಗಟ್ಟು, ಸೋದರ ವಾತ್ಸಲ್ಯ ಎಲ್ಲವೂ ಇತ್ತು. ಇಬ್ಬರು ಸಹೋದರರು ನನಗಿಂತ ಚಿಕ್ಕವರು, ಅವರಿಗಿಂತ, ಒಂದೇ ವರ್ಷಕೆ ದೊಡ್ಡವನಾದ ಅಣ್ಣನ ಒಡನಾಟ ನನಗೆ ಹೆಚ್ಚಾಗಿತ್ತು. ಅಣ್ಣ ತನ್ನ ಪುಟ್ಟ ಕೈಗಳಿಂದ ನನ್ನ ಕೈ ಹಿಡಿದುಕೊಂಡು ಶಿಶುವಿಹಾರಕ್ಕೆ
ಕರೆದುಕೊಂಡು ಹೋಗುವುದು, ಅಲ್ಲಿ ನನ್ನ ಸಂಪೂರ್ಣ ಜವಾಬ್ದಾರಿ ತನ್ನದೆಂದು ಭಾವಿಸಿ ನೋಡಿ ಕೊಳ್ಳುತ್ತಿದ್ದದ್ದು ಈಗಲೂ ನೆನಪಿದೆ. ಮುಂದೆ ಶಾಲೆಗೆ ಬೇರೆ ಬೇರೆ ಶಾಲೆಗೆ ಹೋದರೂ ಶಾಲೆಗೆ ಜೊತೆಯಲ್ಲಿಯೇ ಬಂದು ನನ್ನನ್ನು ಶಾಲೆ ಒಳಗೆ ಕಳುಹಿಸಿ ನಂತರ ಹೊರಡುತ್ತಿದ್ದದ್ದು, ಶಾಲಾ ಪ್ರವಾಸಕ್ಕೆ ಹೋದಾಗ ನನಗಾಗಿ ಬಳೆ,ಸರ ತಂದುಕೊಡುತ್ತಿದ್ದದ್ದು, ನಾನು ಪ್ರವಾಸಕ್ಕೆ ಹೋಗುವಾಗ ನನ್ನ ಲಗೇಜ್ ಹಿಡಿದು ಅಪ್ಪನೊಂದಿಗೆ ಬೆಳಿಗ್ಗೆ ಬಂದು,ಬಸ್ಸಿನೊಳಗೆ ಹೋಗಿ ಲಗೇಜ್ ಇರಿಸಿ, ನನ್ನ ಕೂರಿಸಿ ಬಸ್ಸು ಹೊರಡುವ ತನಕ ಇದ್ದು ಟಾಟಾ ಮಾಡಿ ಬೀಳ್ಕೊಡುತ್ತಿದ್ದದ್ದು, ನನ್ನ ಶಾಲೆ ಶಿಫ್ಟ್ ನಲ್ಲಿ ನಡೆಯುವಾಗ ಪ್ರತಿದಿನ ತಿಂಡಿ ತಂದು ತಿನ್ನಿಸಿ ಹೋಗುತ್ತಿದ್ದದ್ದು, ಸಂಕ್ರಾಂತಿ ಹಬ್ಬದಲ್ಲಿ ಭಾರದ ಬುಟ್ಟಿ ಹಿಡಿದು ನನ್ನ ಜೊತೆ ಎಳ್ಳು ಬೀರಲು ಬರುತ್ತಿದ್ದದ್ದು, ಗಣೇಶನ ಹಬ್ಬದಲ್ಲಿ ನೂರಾ ಒಂದು ಗಣಪನ ನೋಡಲು ತನ್ನ ಗೆಳೆಯರನ್ನು ಬಿಟ್ಟು ನನ್ನೊಟ್ಟಿಗೆ ಬರುತ್ತಿದ್ದದು, ಬಾಡಿಗೆ ಸೈಕಲ್ ತಂದು ನನಗೆ ಸೈಕಲ್ ಹೊಡೆಯುವುದು ಕಲಿಸಲು ಪ್ರಯತ್ನ ನಡೆಸಿದ್ದು,ಕಾಲೇಜು ಓದುವಾಗ ನೈಟಿ ಬೇಕೆಂದು ಬಯಸಿದಾಗ ಅಪ್ಪನಿಗೆ ಕಾಣದಂತೆ ತಂದುಕೊಟ್ಟಿದ್ದು, ನನ್ನ ಪಿಯೂಸಿ ಪರೀಕ್ಷೆಯ ರಿಸಲ್ಟ್ ನೋಡಿ ಫೇಲ್ ಅಂತ ಹೆದರಿಸಿ, ನಂತರ ಶರ್ಟ್ ಒಳಗೆ ಮುಚ್ಚಿಟ್ಟು ಕೊಂಡಿದ್ದ ಮೈಸೂರು ಪಾಕ್ ತಿನ್ನಿಸಿ ಫಸ್ಟ್ ಕ್ಲಾಸ್ ಅಂತ ಹೇಳಿದ್ದು ಒಂದೇ ಎರಡೇ ಅಣ್ಣನ ನೆನಪುಗಳು. ದೊಡ್ಡವರಾಗುತ್ತ ಬಂದಂತೆ ಮದುವೆ,ಸಂಸಾರ, ಉದ್ಯೋಗ ಅಂತ ನನ್ನ ಪ್ರಪಂಚ ಮತ್ತು ಸಹೋದರರ ಪ್ರಪಂಚ ಬೇರೆ ಬೇರೆ ಆಯಿತು.ಆದರೆ ಭಾಂದವ್ಯ ಮತ್ತೂ ಗಟ್ಟಿಯಾಗಿಯೇ ಇದೆ.
ಪ್ರೀತಿಯ ಕಿರಿಯ ಸಹೋದರ ಮದುವೆಯಾಗಿ ಬೆಂಗಳೂರು ಸೇರಿದ ಮೇಲೆ ಅವನಲ್ಲಿ ಅಪ್ಪನ ಛಾಯೆ ಕಾಣತೊಡಗಿತು. ಅಪ್ಪನಂತೆಯೆ ಮಮತೆ, ಪ್ರೀತಿ,ಕಾಳಜಿ, ವಾತ್ಸಲ್ಯ ಹರಿಯ ತೊಡಗಿ ತೌರಿನ ಸುಖದ ರುಚಿ ಹತ್ತತೊಡಗಿತು. ದೀಪಾವಳಿಯ ಸಂಭ್ರಮ ಇವತ್ತಿನವರೆಗೂ ಅವನ ಮನೆಯಲ್ಲಿಯೇ, ಯಾವ ಕಾರಣಕ್ಕೂ ತಪ್ಪಿಸಿಕೊಳ್ಳುವಂತಿಲ್ಲ. ಪ್ರತಿ ದೀಪಾವಳಿಯಲ್ಲಿಯೂ ಉಡಿ ತುಂಬಿಸಿಕೊಂಡು,ಅವನು ಕೊಡಿಸಿದ ಸೀರೆ ಉಟ್ಟು ಈ ಪ್ರೀತಿ ಶಾಶ್ವತವಾಗಿರಲಿ ಅಂತ ದೇವರಲ್ಲಿ ಬೇಡುತ್ತೇನೆ. ಗಂಡ, ಮಗಳಿಗೂ ಈ ಹಬ್ಬದಲ್ಲಿ ಉಡುಗೊರೆ ತಪ್ಪುವುದಿಲ್ಲ.
ಉದ್ಯೋಗ ನಿಮಿತ್ತ ಬೆಂಗಳೂರಿಗೆ ಕಾಲಿಟ್ಟ ಮಗಳಿಗೆ ಬೇರೆಲ್ಲೂ ಹೋಗಲು ಬಿಡದೆ ತನ್ನ ಮನೆಯಲ್ಲಿಯೇ ಇರಿಸಿಕೊಂಡು ತನ್ನ ಮಗಳಂತೆಯೇ ಅಕ್ಕರೆ ತೋರಿದ ತಮ್ಮನ ಪ್ರೀತಿಗೆ ಏನು ಹೇಳಲಿ. ಗೌರಿ ಹಬ್ಬದಲಿ ತಾನೇ ಖುದ್ದು ಬಂದು ತೌರಿನ ಬಾಗಿಣ ಕೊಡುವ ಪದ್ದತಿ ಇಂದಿಗೂ ತಪ್ಪಿಲ್ಲ. ಕಷ್ಟದಲ್ಲಿ, ಸುಖದಲ್ಲಿ ಧಾವಿಸಿ ಬರುವ ಕರುಳಿನ ಬಂಧು ಅವನು. ಶಿಶುವಿಹಾರದಿಂದ ಕಾಲೇಜು ಮುಗಿಸುವ ತನಕ ಅದೆಷ್ಟೋ ಶಿಕ್ಷಕರು ನನಗೆ ಭವ್ಯ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದ್ದಾರೆ. ಪ್ರೌಢವಾಗಿ ಬರೆಯಲು ಮಾರ್ಗದರ್ಶನ ನೀಡಿದ್ದಾರೆ. ಲೇಖಕಿಯಾದ ಮೇಲೆ ನನ್ನ ಶಿಷ್ಯೆ ಅಂತ ಹೆಮ್ಮೆ ಪಟ್ಟಿದ್ದಾರೆ.
ಸ್ನೇಹಿತರು, ಆತ್ಮೀಯರು, ಹಿತೈಷಿಗಳು,ಅಭಿಮಾನಿಗಳು, ಸಹೋದ್ಯೋಗಿಗಳು, ಮೇಲಾಧಿಕಾರಿಗಳು ಹೀಗೆ ಅನೇಕ ಪುರುಷರು ಸ್ನೇಹ,ವಿಶ್ವಾಸ ತೋರಿ ಸಾಹಿತ್ಯದಲ್ಲಿ ಬೆಳೆಯಲು, ಉದ್ಯೋಗದಲ್ಲಿ ಸಂತೋಷವಾಗಿರಲು, ಸಮಾಜದಲ್ಲಿ ಮನ್ನಣೆ ಪಡೆಯಲು ಕಾರಣಕರ್ತರಾಗಿದ್ಧಾರೆ.ಈ ಪುರುಷದೇವತೆಗಳಿಗೆಲ್ಲ ನಮೋ ನಮೋ.
-ಎನ್.ಶೈಲಜಾ ಹಾಸನ
Nice one ಮೇಡಂ ಜಿ, ಹಲವಾರು ಬಾರಿ ನಾವು ಬರೆಯುವ ವಿಚಾರಗಳಿಗೂ ನಮ್ಮ ಬದುಕಿಗೂ ಸಂಬಂಧ ವೇ ಇರುವುದಿಲ್ಲ. ಎಲ್ಲರ ಕುರಿತಾಗಿ ಹೇಳಿಕೊಂಡ ರೀತಿಯಲ್ಲಿ ಒಂದು ಕೃತಜ್ಞತಾ ಭಾವ ಎದ್ದು ಕಾಣಿಸುತ್ತಿದೆ.
ಚೆನ್ನಾಗಿ ಬರೆದಿರುವಿರಿ
ಭಾವಪೂರ್ಣ ಬರಹ ಮನತುಂಬಿ ಬಂತು.