ಏಕಾಂಗಿಯ ನಿವೃತ್ತಿ

Share Button
“ನಿರಂಜನರವರು ನಮ್ಮ ಸಂಸ್ಥೆಯ ನಿಷ್ಠಾವಂತ ಕೆಲಸಗಾರರಾಗಿದ್ದರು.ನಾಳೆಯಿಂದ ಅವರು ನಮ್ಮೊಂದಿಗೆ ಕಚೇರಿಯಲ್ಲಿ ಇರುವುದಿಲ್ಲ ಎಂಬುದು ಬಹಳ  ಖೇದಕರ ಸಂಗತಿಯಾಗಿದೆ “ಎಂದು ಸಹೋದ್ಯೋಗಿ ರಮಾನಂದ ನಿರಂಜನನ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದ.
.
ನಿರಂಜನ ನಿರ್ಲಿಪ್ತ ಭಾವದಿಂದಲೇ ಕೇಳಿಸಿಕೊಳ್ಳುತ್ತಿದ್ದ.”ಜಾತಸ್ಯ ಮರಣಂ ಧೃವಂ” ಎಂಬುದು ಜೀವನಕ್ಕೆ ಅನ್ವಯವಾಗುವಂತೆ,ವೃತ್ತಿಬದುಕಿಗೂ ನಿವೃತ್ತಿಯ ದಿನ ಇದ್ದೇ ಇರುತ್ತದೆ.ಉಪಚಾರದ ಮಾತುಗಳಿಗೆ ಬರವಿಲ್ಲದ ದಿನವಿದು ಎಂದುಕೊಂಡ.
.
37 ವರುಷಗಳ ನಿಷ್ಕಳಂಕ ಸೇವೆಯ ಪ್ರಮಾಣಪತ್ರವನ್ನು ಆತ್ಮೀಯ ಮಿತ್ರನೂ ,ನಿಕಟವರ್ತಿಯೂ ಆದ ದೊರೆ ಓದತೊಡಗಿದ. ಅದರಲ್ಲಿ ಯಥಾಪ್ರಕಾರ ನಿರಂಜನನ  ಶಿಸ್ತುಬದ್ಧತೆ,ಕಾರ್ಯಶೀಲತೆಗಳ ವರ್ಣನೆಗಳೇ ಹೇರಳವಾಗಿದ್ದವು.ವಾಚನ ಮುಗಿಸುತ್ತ ಅವನು ಇದರ ಜತೆ ನನ್ನ ಒಂದೆರಡು ಮಾತನ್ನೂ ಸೇರಿಸಬಯಸುತ್ತೇನೆ.ನಿರಂಜನನಲ್ಲಿ ನಾನು ಕಂಡ ವಿಶೇಷಗುಣವೆಂದರೆ  ಅವನ ತಂಡಸ್ಪೂರ್ತಿ. ನನ್ನ ಮಗಳ ಆರೋಗ್ಯ ಕೆಟ್ಟು ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಾಗ ನೆರವಿಗೆ ಬಂದ ನಿರಂಜನನನ್ನು ನನ್ನ ಜೀವಮಾನ ಪೂರ್ತಿ ಮರೆಯಲಾರೆ.ತನ್ನ ಕೆಲಸದ ಜತೆ ನನ್ನ ಕೆಲಸಕ್ಕೂ ಹೆಗಲು ನೀಡಿ ಉಪಕರಿಸಿದ್ದಾನೆ ”ಎಂದು ಭಾವುಕನಾಗಿ ನುಡಿದ..
ಹೌದು.ಆ ಸಂದಭದಲ್ಲಿ ನನಗೆ ತೋಚಿದ್ದು ಅಷ್ಟೇ ಅಲ್ಲವೇ? ಎಂದುಕೊಂಡ ನಿರಂಜನ.
.
ಮತ್ತೊಬ್ಬ ಸಹೋದ್ಯೋಗಿನಿ ಶೀಲ  ದೊರೆಯ ಅಭಿಮತವನ್ನು ಬೆಂಬಲಿಸುವ ರೀತಿಯಲ್ಲಿ ತನ್ನ ಮಾತು ಆರಂಭಿಸಿದಳು.”ಒಂದು ರೀತಿಯಲ್ಲಿ ನಿರಂಜನ್ ಅವರು ಅವಿವಾಹಿತರಾಗಿದ್ದುದು ಎಷ್ಟೋ ಸಂದರ್ಭಗಳಲ್ಲಿ ನಮಗೆಲ್ಲ  ವರವಾಗಿತ್ತು.”ಎಂದಾಗ ನಿರಂಜನ್ ನಲ್ಲಿ ಯೋಚನೆಯ ಅಲೆಗಳನ್ನು ಎಬ್ಬಿಸಿತು.
.

ಹೌದು ನಾನೇಕೆ ಮದುವೆಯಾಗಲಿಲ್ಲ?ಇಬ್ಬರು ತಂಗಿಯರ ಜವಾಬ್ದಾರಿ, ವಯಸ್ಸಾದ ಅಪ್ಪ ಅಮ್ಮಂದಿರು ಇದ್ದುದು ಮದುವೆಯಾಗಲು ಅಡ್ಡಿಯಾಯಿತೇ? ಸ್ವಂತ ವ್ಯಾಪಾರ ಮಾಡಿಕೊಂಡಿದ್ದ  ಅಣ್ಣ, ತಂಗಿಯರ ಮದುವೆಯ ಬಗ್ಗೆ ತಲೆ ಕೆಡಿಸಿಕೊಸಿಳ್ಳದೆ ಪರಿಚಯದ ಗೆಳತಿಯನ್ನು ಮದುವೆಯಾಗಿ ಬೇರೆ ಹೋದದ್ದು, ಅಪ್ಪನಿಗೆ ನನ್ನ ಮದುವೆಯ  ಪ್ರಸ್ತಾಪ ಅಪಾಯಕಾರಿಯಾಗಿ  ಕಂಡಿತೆ? ಅಥವಾ ನಾನು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲವೇ? ಆದರೇನು ತಂಗಿಯರ ಮದುವೆಯ ನಂತರವೂ ಮದುವೆಯಾಗಲಿಲ್ಲವಲ್ಲ? ಈಗ ಅಪ್ಪ ಅಮ್ಮಂದಿರೂ ಇಲ್ಲ ಐವತ್ತನೆಯ ವಯಸ್ಸಿನಲ್ಲಿದ್ದಾಗ ಗೆಳೆಯನೊಬ್ಬ ತಂದಿದ್ದ ಮದುವೆ ಪ್ರಸ್ತಾವದ ಬಗ್ಗೆಯೂ ತೀರ್ಮಾನದ ತೆಗೆದುಕೊಳ್ಳಲು ಆಗಿರಲಿಲ್ಲ.ಇಷ್ಟು ದಿನ ಕೆಲಸ ,ಸಹೋದ್ಯೋಗಿಗಳ ಸಾಹಚರ್ಯದಿಂದ ಕಾಲ ಕಳೆಯುತ್ತಿದ್ದೆ. ನಾಳೆಯಿಂದ ನಾನು ಏಕಾಂಗಿ. ಏನು ಕಾರಣವೊ ಸಾಹಿತ್ಯ,ಕಲೆಗಳಂಥ ಹವ್ಯಾಸಗಳನ್ನೂ ರೂಢಿಸಿಕೊಳ್ಳಲಿಲ್ಲ. ಅಂತೂ ತನ್ನ  ಬದುಕಿನುದ್ದಕ್ಕೂ ಇಂಥ  ಇಲ್ಲಗಳ ಸರಮಾಲೆಗಳೇ.! ಎಂದುಕೊಂಡ..

ಎಲ್ಲರ ಭಾಷಣಗಳ ಸರಕು ಖಾಲಿಯಾಗುತ್ತಿದ್ದವು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥರು “ಈಗ ನಿರಂಜನ್ ರವರು ತಮ್ಮ ಅನಿಸಿಕೆ ತಿಳಿಸುವ ಸಮಯ “ಎಂದು ಘೋಷಿಸಿದರು.  ಎದ್ದು ಯಾಂತ್ರಿಕವಾಗಿ ಮಾತು ಆರಂಭಿಸಿದ . ಎಲ್ಲರ ಸವಿಮಾತುಗಳಿಗೆ ಕೃತಜ್ಞತೆ ಸಲ್ಲಿಸಿದ . ನಾಳೆಯಿಂದ ಹೇಗೆ ಕಾಲ ಕಳೆಯುವುದು ಎಂಬುದು ಚಿಂತೆಯಾಗಿದೆ ಎಂದು ತಮಾಷೆಯಾಗಿ ನುಡಿದ.
.
ಸಂಸ್ಥೆಯ ಮುಖ್ಯಸ್ಥರು ಮಾತನಾಡುತ್ತ ನಿರಂಜನ್ ಗೆ ಶುಭ ಹಾರೈಸಿ,”ಕಾಲ ಕಳೆಯುವ ಬಗ್ಗೆ ಚಿಂತೆ ಬೇಡ.ನಿತ್ಯ ಕಚೇರಿಗೆ ಬಂದು ತಮ್ಮ ಮಾಜಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವ ಸಮಾಜ ಸೇವೆ ಸಲ್ಲಿಸಬಹುದು,ಹೇಗೂ ತಮ್ಮ ಇಡೀ ಸರ್ವಿಸ್ ನಲ್ಲಿ ಆರು ದಿನ ಮಾತ್ರ ಸಿಕ್ ಲೀವ್ ತೆಗೆದುಕೊಂಡ ಆರೋಗ್ಯವಂತರು ನಿರಂಜನ್  ” ಎಂದು ವಿನೋದವಾಗಿ ತಿಳಿಸಿದರು.
ಎಲ್ಲರೂ ಜೋರಾಗಿ  ನಕ್ಕರು. ಇದು ಒಳ್ಳೆಯ ಸಲಹೆ ಎಂದವರೇ ಹೆಚ್ಚು..
.
ನಿವೃತ್ತಿಯ ವಾಡಿಕೆಯಂತೆ ಕಚೇರಿಯ ಕಾರ್ ನಲ್ಲಿ ಮನೆಗೆ ಹೊರಟ.ಸಹೋದ್ಯೋಗಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.ಅಟೆಂಡರ್ ಸಿದ್ಧಲಿಂಗ ಜತೆಯಲ್ಲಿ ಬಂದ.ಸನ್ಮಾನದ ಸರಕುಗಳನ್ನೆಲ್ಲ ಒಂದೊಂದಾಗಿ  ಮನೆಯೊಳಗೆ ಇರಿಸಿದ. ಅವನ ಕಣ್ಣು ಮನೆಯ ಮೂಲೆ ಮೊಡಕುಗಳತ್ತ ಚಲಿಸಿತು.ಕಟ್ಟಿದ ಜೇಡನ ಬಲೆ, ಎಲ್ಲೆಂದರಲ್ಲಿ ಬಿದ್ದ ಬಟ್ಟೆ ,ಪತ್ರಿಕೆ ಇತ್ಯಾದಿ ವಸ್ತುಗಳನ್ನು ಗಮನಿಸಿ ಒಂದು ಬಗೆಯ ವಿಷಾದದ,ಜಿಗುಪ್ಸೆಯ  ನೋಟ ತೋರಿ  ನಿರ್ಗಮಿಸಿದ.
.
ಅವನ ಚರ್ಯೆ, ಮುಖಭಾವ ನಿರಂಜನನಿಗೆ ಪರಿಣಾಮಕಾರಿಯಾದ ಸಂದೇಶ ನೀಡಿತು. ಹೌದು  ಏಕಾಂಗಿತನ ತೊರೆಯಲು ಕಚೇರಿಯ ಕೆಲಸಕ್ಕೆ ಅಂಟಿಕೊಂಡಿದ್ದೆ. ಈಗ ಅಲ್ಲಿಂದ ಗೇಟ್ ಪಾಸ್ ಸಿಕ್ಕಿತು.ಮನೆ ಗೆದ್ದು ಮಾರು ಗೆಲ್ಲಬೇಕಲ್ಲವೇ?ನಾಳೆಯಿಂದ ನನ್ನ ದಿನಚರಿ ಏನು ಎಂಬ ಸವಾಲಿಗೆ ಉತ್ತರ ಸಿಕ್ಕಿಬಿಟ್ಟಿತ್ತು ಅವನಿಗೆ .ಮನೆಯ ಒಪ್ಪಓರಣಕ್ಕೆ ಕಟಿಬದ್ಧನಾಗಲು ಆಗಲೇ  ನಿರ್ಧರಿಸಿದ.
.
”ರಾಯರೇ ನಿವೃತ್ತಿ ಆದ ಮೇಲೆ ರಂಗಶಂಕರ, ನಯನ, ಸೇವಾಸದನ ಸಭಾಂಗಣದಲ್ಲಿ ನಾಟಕ ,ನೃತ್ಯ ಮತ್ತೆ ಬೇರೆಡೆ ನಡೆಯುವ ಕಲಾಪ್ರದರ್ಶನಗಳು ಇಲ್ಲೆಲ್ಲ ನನ್ನ ಜತೆ   ಬನ್ನಿ  ಇಪ್ಪತ್ತನಾಲ್ಕು ಗಂಟೆಗಳೂ ನಿಮಗೆ ಸಾಲದೆನಿಸದ್ದರೆ ಕೇಳಿ.”ಎಂದಿದ್ದ  ಪಕ್ಕದ ಮನೆ ಶೇಷಗಿರಿರಾಯನ  ಮಾತು ನೆನಪಾಯಿತು. ಸಂಸಾರದಲ್ಲಿದ್ದೂ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ  ನಿರ್ವಹಿಸಿ, ನಾಟಕ, ಕಲೆ, ಸಾಹಿತ್ಯಗಳಿಗೆ ಮನಸ್ಸು ತೆತ್ತಿದ್ದ  ಆ ಮನುಷ್ಯನ   ಬಗ್ಗೆ  ಹೆಮ್ಮೆ ಮೂಡಿತು. ಅವನ ಆಹ್ವಾನಕ್ಕೆ ಓಗೊಡಲು ಈಗ ಏನಡ್ಡಿ ?ಎಂದುಕೊಂಡ.
.
ಕಟ್ಟಿದ್ದ ಜೇಡನ ಬಲೆಯ ನಿರ್ಮೂಲನೆಯಿಂದ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲು ತೀರ್ಮಾನಿಸಿದ.
.
-ಮಹಾಬಲ
.

3 Responses

  1. ನಯನ ಬಜಕೂಡ್ಲು says:

    ಹೌದು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಇಲ್ಲಿರುವ ದಾರಿಗಳು ಹಲವು. ತುಂಬಾ ಅರ್ಥಪೂರ್ಣ ಹಾಗೂ ಉತ್ತಮ ಸಂದೇಶದಿಂದ ಕೂಡಿದ ಕಥೆ

  2. Shankari Sharma says:

    ಹೌದು. ಐದು ವರುಷಗಳ ಹಿಂದೆ ನಾನು ನಿವೃತ್ತಿ ಯಾಗಿದ್ದ ದಿನದ ನೆನಪು ಮನದಲ್ಲಿ ಇನ್ನೂ ಹಸಿರಾಗಿದೆ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸಮಯ ನಿರ್ವಹಣೆಯಲ್ಲಿ ನೆಮ್ಮದಿಯನ್ನು ಪಡೆದಿರುವುದು ಸತ್ಯ ಸಮಯೋಚಿತ ಲೇಖನಕ್ಕೆ ಧನ್ಯವಾದಗಳು.

  3. ಮಹಾಬಲ says:

    ಧನ್ಯವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: