ಬೊಗಸೆಬಿಂಬ

ದುನಿಯಾ ಬನಾನೆ ವಾಲೆ….

Share Button

“ದುನಿಯಾ ಬನಾನೆ ವಾಲೇ ಕ್ಯಾ ತೆರೆ ಮನ್ ಮೆ ಸಮಾಯಿ  ತೂ ನೆ ಕಾಹೆ ಕೋ ದುನಿಯಾ ಬನಾಯಿ” ಮುಖೇಶನ ಭಾರವಾದ ಆರ್ತ ಸ್ವರ ಕಿವಿ ಮನಸ್ಸುಗಳೆರಡನ್ನೂ ತುಂಬುತ್ತಿದ್ದಂತೆ ಮನ ಭಾರವಾಗಿ, ಕಣ್ಣುಗಳು ನನಗರಿವಿಲ್ಲದಂತೆ ತುಂಬಿಕೊಂಡವು.  ಹಲವು ಬಾರಿ ಅನಿಸಿದ್ದ ,ಈ ಪ್ರಪಂಚ ಎಲ್ಲಿಂದ ಬಂತು ಇದಕ್ಕೆ ಅರ್ಥವೇನು ಏನೇ ನಡೆದರೂ ಅದು ಹೇಗೆ ಇತ್ಯಾದಿ ಇತ್ಯಾದಿಗಳಿಗೆಲ್ಲಾ ಎಳವೆಯಲ್ಲಿ ದೇವರು-ದಿಂಡಿರು ಎಂದೆಲ್ಲಾ ಸುತ್ತಲಿರುವವರು ತಾವು ನಂಬಿದ್ದನ್ನೇ ಹೇಳಿದ್ದನ್ನೆಲ್ಲ ಕೇಳಿ ಅದೇ ಸತ್ಯವೆನಿಸಿ, ಕಾಣದ ದೇವರಿಗೆ ಕೈಮುಗಿದು ಒಳಿತು ಮಾಡು ಎಂದು ಪ್ರಾರ್ಥಿಸಿದ ದಿನಗಳಿವೆ. ಬೆಳೆದಂತೆಲ್ಲ ಕಷ್ಟಪಟ್ಟು ಇಷ್ಟಪಟ್ಟು ಓದಿದ ವಿಜ್ಞಾನ ತಿಳಿಸಿದ ಬಿಗ್ ಬ್ಯಾಂಗ್ ಥಿಯರಿ ವಿಕಾಸವಾದ ಗಳ ತರ್ಕವೇ ನಂಬಲರ್ಹವೆನಿಸತೊಡಗಿತ್ತು. ಪ್ರಪಂಚ ಹೇಗೆ ಸೃಷ್ಟಿಯಾಗಿದ್ದರೂ ಅದು ನಡೆಯುತ್ತಿರುವ ನೀತಿ-ನಿಯಮಗಳ ನೋಡಿದಾಗ ದಟ್ಟ ವಿಷಾದವೆನಿಸುತ್ತದೆ. ಅದರಲ್ಲೂ ಹೆಣ್ಣು ಮಕ್ಕಳ ಪ್ರಪಂಚವನ್ನು ನೋಡಿದಾಗೆಲ್ಲ ಅನ್ನಿಸುವುದು ಇದೇ ‘ಕಾಹೇ ಕೊ ದುನಿಯಾ ಬನಾಯಿ’

ಎಷ್ಟೇ ಆಧುನಿಕ ವಿದ್ಯೆಗಳಿಸಿ ಉದ್ಯೋಗಸ್ಥ ಮಹಿಳೆಯಾದರೂ ಸ್ತ್ರೀಸ್ವಾತಂತ್ರ್ಯ ಇನ್ನೂ ಹಲವರಿಗೆ ಮರೀಚಿಕೆ. ಉದ್ಯೋಗಸ್ಥ  ಮಹಿಳೆಯನ್ನು ಅವಳೊಂದು ನಿಯಮಿತ ವರಮಾನ ತಂದುಕೊಡುವ ಆಸ್ತಿಯಂತೆ ಪರಿಗಣಿಸಿರುವವರು ಎಷ್ಟಿಲ್ಲ. ಬಾಡಿಗೆ ನೀಡಲೆಂದು ದೊಡ್ಡದೊಂದು ಕಟ್ಟಡ ಕಟ್ಟಿಸಿ ಅದಕ್ಕೆ ಚೆನ್ನಾಗಿ ಸುಣ್ಣ-ಬಣ್ಣ ಹೊಡೆಸಿ, ಉತ್ತಮವಾಗಿ ನಿರ್ವಹಣೆ ಮಾಡಿ ಬಾಡಿಗೆದಾರರನ್ನು ಸೆಳೆದು ನಿಯಮಿತವಾಗಿ ಆದಾಯ ಗಳಿಸುವುದಕ್ಕೂ, ಸಂಬಳ ತರುವ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು (?) ಅವಳ, ವರಮಾನ ಅವಳ ಖರ್ಚುವೆಚ್ಚಗಳ ಮೇಲೊಂದು ಕಣ್ಣು ಇದಕ್ಕೆ ಖರ್ಚು ಮಾಡಬೇಕು ಅದು ಬೇಡ ನಿನಗೆ ತಿಳಿಯುವುದಿಲ್ಲ ಇತ್ಯಾದಿಗಳಿಂದ ನಿಯಂತ್ರಿಸಿ ಹಕ್ಕು ಸಾಧಿಸುವುದಕ್ಕೂ ನನಗೆ ಅಂತಹ ವ್ಯತ್ಯಾಸ ಕಾಣಿಸುವುದಿಲ್ಲ.  ಪ್ರತಿಭಟಿಸಿದರೆ ಸಿಗುವ ಮೂದಲಿಕೆ “ನೀನೊಂದು ಹೆಣ್ಣಾ” ಎಂಬುದು. ಹಾಗಾದರೆ ಹೆಣ್ಣಾಗಿರುವುದು ಎಂದರೇನು?

ಗಳಿಸಿರುವ ವಿದ್ಯೆ, ಮಾಡುತ್ತಿರುವ ವೃತ್ತಿ, ಸಂಸಾರ ನಿಭಾಯಿಸುವ ಚಾಕಚಕ್ಯತೆ ಎಲ್ಲ ಇದ್ದು ಗಂಡ ಹೇಳಿದ್ದನ್ನು ಚಾಚೂ ತಪ್ಪದೆ ಕೇಳಬೇಕೆನ್ನುವುದನ್ನು ಪ್ರಶ್ನಿಸಬಾರದು ಅಂತೆ. ಸ್ವಂತ ಅಭಿಪ್ರಾಯ ತೀರ್ಮಾನಗಳಿಗೆ ಬೆಲೆ ಕೇಳಬಾರದು. ಗಂಡ ಯಾರನ್ನಾದರೂ ಚಂದದ ಹುಡುಗಿ ಕಂಡಾಗ “ಯಾರೇ ಅದು” ಎಂದು ಹಲ್ಲುಗಿಂಜಿದರೆ ಅದು ಅವನ ರಸಿಕತನ. ಅದೇ ಹೆಂಡತಿ ಮಾಡಿದರೆ?

ಒಬ್ಬ ಪ್ರಖ್ಯಾತ ಸೂಪರ್ ಸ್ಟಾರ್ ಎನಿಸಿಕೊಂಡು, ನಂತರ ಸೂಪರ್ ಸ್ಟಾರ್ ಎಂದೆನಿಸಿಕೊಂಡವನೊಬ್ಬನ ಪತ್ನಿಯಾಗಿ, ತನ್ನ ವೃತ್ತಿಯನ್ನು ತೊರೆದು ಸಂಪೂರ್ಣವಾಗಿ ಗಂಡ ಮಕ್ಕಳು ಸಂಸಾರಕ್ಕಾಗಿ ಸಮರ್ಪಿಸಿಕೊಂಡ ಪ್ರತಿಭಾವಂತ ನಟಿಯೊಬ್ಬಳು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದು “ಈಗಲ್ಲ ಇನ್ನೂ ಎಷ್ಟೇ ಶತಮಾನ ಕಳೆದರೂ ಹೆಣ್ಣಿನ ಸ್ಥಿತಿಗಳಲ್ಲಿ ಬದಲಾವಣೆ ಬರುವುದು ಎಂದು ನಂಬುವುದು ಮೂರ್ಖತನ”ಎಂದದ್ದು ಕೇಳಿದಾಗ ಮೂಕಭಾವವೊಂದು ಆವರಿಸಿಕೊಂಡಿತು.

ಇದನ್ನೆಲ್ಲಾ ಒಪ್ಪದ ನನ್ನ ಗೃಹಿಣಿ ಗೆಳತಿಯೊಬ್ಬಳಿಗೆ ಅವಳ ಗಂಡನನ್ನು ಎಷ್ಟು ಹೊಗಳಿದರು ಸಾಲದು.’ಚಿನ್ನದಂತಹ ಗಂಡ, ಕೇಳಿದ್ದೆಲ್ಲ ಕೊಡಿಸುತ್ತಾರೆ, ಎಲ್ಲಿಗೆ ಬೇಕಾದ್ರೂ ಕಳಿಸುತ್ತಾರೆ, ಅಷ್ಟು ಪ್ರೀತಿ ಮಾಡ್ತಾರೆ, ನನ್ನ ಹಿಂದೆಯೇ ಸುತ್ತಿಕೊಂಡಿರುತ್ತಾರೆ’ ಎನ್ನುವವಳಿಗೆ ಅಷ್ಟೊಂದು ಓದಿ ಎರಡೆರಡು ಡಿಗ್ರಿ ಕೈಗೊಂಡಿದ್ದರು ಅವಳ ಇಷ್ಟದಂತೆ ಹೊರಗೆ ಹೋಗಿ ಕೆಲಸ ಮಾಡಲು ಅನುಮತಿಸದ, ಗೃಹಿಣಿಯಾಗಿ ಇರಬೇಕೆಂದು ನಿರ್ಬಂಧಿಸಿರುವ ಗಂಡನ ಬಗ್ಗೆ ಯಾವುದೇ ತಕರಾರು ಇಲ್ಲದಿರುವುದು ನನಗಂತೂ ಸೋಜಿಗ ತರುತ್ತದೆ.

ಮಾತೆತ್ತಿದರೆ ಹೆಣ್ಣಿಗೆ ಪ್ರಪಂಚದಲ್ಲಿರುವ ಸದ್ಗುಣಗಳನ್ನೆಲ್ಲ ಆರೋಪಿಸಿ ಅವೆಲ್ಲವನ್ನು ಅಪ್ರಜ್ಞಾಪೂರ್ವಕವಾಗಿ ಆಕೆ ಪಾಲಿಸುವಂತೆ ಮಾಡಿ ಅದರಲ್ಲಿ ಸ್ವಲ್ಪವಾದರೂ ವ್ಯತ್ಯಾಸವಾದರೂ ಪಾಪ ಪ್ರಜ್ಞೆಯಿಂದ ನರಳುವಂತೆ ಅವಳ ಮನಸ್ಥಿತಿಯನ್ನು ಎರಕ ಹೊಯ್ದು ಇರುವುದಾದರೂ ಯಾರು?

ಮನೆಯಿಂದ ಕೆಲಸದ ಸ್ಥಳ ಅತಿ ದೂರದಲ್ಲಿರುವುದರಿಂದ ಪ್ರತಿನಿತ್ಯ ನೂರಕ್ಕಿಂತ ಹೆಚ್ಚು ಕಿಲೋಮೀಟರ್ ದೂರ ಪ್ರಯಾಣಿಸುವ ಅನಿವಾರ್ಯತೆ ಇರುವ ಗೆಳತಿಯೊಬ್ಬಳ ಗಂಡ ಅವಳಿಗೆ ಸಹಾಯವಾಗಲೆಂದು ಮನೆಕೆಲಸದಲ್ಲಿ ಕೈಜೋಡಿಸಿದರೂ, ತಾನು ಮಾಡುವ ಸಹಾಯವನ್ನು ಮೂರು ಹೊತ್ತು ಎತ್ತಿ ಆಡುತ್ತಾ ‘ಎಲ್ಲಾ ಕೆಲಸ ನಾನೇ ಮಾಡುತ್ತೇನೆ, ಮನೆ ನನ್ನಿಂದಲೇ ನಡೆಯೋದು, ನೀನು ಬರೀ ಸಂಬಳ ತಂದರೆ ಆಯ್ತಾ’ ಎನ್ನುವ ಹಂಗಿನ ಮಾತು ಅವಳ ದುಡಿಮೆಯ ಶ್ರಮವನ್ನೆಲ್ಲ ಹಂಗಿಸುತ್ತದೆ, ಅಣಕಿಸುತ್ತದೆ.
ಇದೇ ಕೆಲಸವನ್ನು ಎಷ್ಟೋ ಹೆಂಗಸರು ನಗುನಗುತ್ತಾ ಮಾಡಿದರೆ ಅದು ಅವರ ಕರ್ತವ್ಯ. ಗಂಡಸು ಮಾಡಿದರೆ ಅದು ಅವನ ಉನ್ನತ ಗುಣ, ಅವನೋ ಕರುಣಾ ಸಾಗರ, ಎಂದು ಅರ್ಥ ಕೊಟ್ಟರೆ ಅದಕ್ಕಿಂತ ವಿಪರ್ಯಾಸ ಇನ್ನೇನಿದೆ?

-ಸಮತಾ.ಆರ್, ಸೋಮವಾರಪೇಟೆ

26 Comments on “ದುನಿಯಾ ಬನಾನೆ ವಾಲೆ….

  1. ಸಮತಾ ಅವರೇ ನಿಮ್ಮ ಬರಹದಲ್ಲಿನ ಸ್ಪಷ್ಟತೆ ನನಗೆ ಹಿಡಿಸಿತು. ಇನ್ನೆಷ್ಟು ಕಾಲ ಕಾಯಬೇಕೋ ಬದಲಾವಣೆಗೆ…!!! ಬರೆಯುತ್ತಿರಿ…

  2. ಸತ್ಯಕ್ಕೆ ಹತ್ತಿರ. ತುಂಬಾ ಚೆನ್ನಾಗಿದೆ. ನಿಮ್ಮ ಅನೇಕ ಬರಹಗಳ ನಿರೀಕ್ಷೆಯಲ್ಲಿದ್ದೇನೆ

  3. ಅದ್ಬುತವಾದ ಚಿಂತನೆ. ನಿಮ್ಮ ಬರಹಕ್ಕೊಂದು ನನ್ನ ಚಿಕ್ಕದೊಂದು ಸಲಾಮ್ ಸಮತಾ ಮೇಡಂ.

  4. ದುಡಿಯುವ ಹೆಣ್ಣಿನ ಬವಣೆ ಸುಂದರವಾಗಿ ಬಂದಿದೆ.

  5. ವಾಸ್ತವ. ನಾವು ಹೆಣ್ಣುಮಕ್ಕಳೂ ಅಷ್ಟೇ ಇಂತಹ ಮನಸ್ಥಿತಿಗೆ ಒಗ್ಗಿ ಹೋಗಿರುತ್ತೇವೆ. ಹೆಣ್ಣು ಎಷ್ಟೇ ಉನ್ನತ ಸ್ಥಾನದಲ್ಲಿ ಇರಲಿ, ಮನೆ, ಸಂಸಾರದ ಮಾತು ಬಂದಾಗ ಅವಳೊಬ್ಬಳು ಎಲ್ಲ ಪರಿಸ್ತಿತಿಗೂ ಹೊಂದಿಕೊಂಡು, ಪ್ರತಿಯೊಂದರಲ್ಲೂ ಕಾಂಪ್ರಮೈಸ್ ಮಾಡಿಕೊಂಡು ಹೋಗುವ ಸಾಮಾನ್ಯ ಹೆಣ್ಣು ಅಷ್ಟೇ. ಸುಂದರ ಬರಹ.

  6. Really great.That which every one cannot express ,you have really put together in great words.Let more fruits be nurturing,me waiting to cherish more and more.

  7. ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು,

  8. ಹಿಂದೆಯೂ, ಇಂದೂ, ಮುಂದೂ, ಸಮಾಜದಲ್ಲಿ ಮಹಿಳಾಮಣಿಗಳ ಸ್ವಾತಂತ್ರ್ಯದ ಬಗ್ಗೆ ಕಾಣುತ್ತಿರುವ ಕಟು ವಾಸ್ತವದ ಚಿತ್ರಣ!

Leave a Reply to SmithaAmrithraj. Cancel reply

 Click this button or press Ctrl+G to toggle between Kannada and English

Your email address will not be published. Required fields are marked *