ಮಾತೃತ್ವದ ಹಿರಿಮೆ, ಹೊಣೆ ಹೇಗೆ….?
ಅಮ್ಮ ಎಂಬ ಶಬ್ಧದೊಳಗೆ ಅದೆಷ್ಟು ಶಕ್ತಿ ಇದೆ! ಅದರ ಅರ್ಥವ್ಯಾಪ್ತಿ ವಿಶಾಲವಾದುದು. ಒಂದು ರೀತಿಯಿಂದ ಅದು ಬ್ರಹ್ಮಾಂಡ ಎನ್ನ ಬಹುದು. ತಾಯಿಯ ಗರ್ಭ ಎಂದರೆ ಅದೊದು ಗರ್ಭಗುಡಿಯಂತೆ!. ಅಮ್ಮನ ಪೂರ್ಣತೆಯಲ್ಲಿ ಬಹುಪಾಲು ಸಾರ್ಥಕಪಡಿಸಿಕೊಳ್ಳಬೇಕಾದರೆ;ಅಮ್ಮ-ಮಕ್ಕಳ ಸಂಬಂಧವು ಜೀವನ ದೀರ್ಘತೆಯೊಂದಿಗೆ ಪ್ರಾಮಾಣಿಕವಾಗಿ ಹರಡಿ ಹಸುರಾಗಿ ಕಾಣುವ ಬಳ್ಳಿಯಾಗಿ ಬೆಳಗಬೇಕು. |ಕುಪುತ್ರೋಜಾಯೇತ ಕ್ವಚಿದಪಿ ಕುಮಾತಾ ನ ಭವತಿ| ಎಂದು ಆದಿ ಶಂಕರಾಚಾರ್ಯರು ತಾವು ರಚಿಸಿದ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಉಲ್ಲೇಖಿಸಿದ್ದಾರೆ. ಹೌದು, ಲೋಕದಲ್ಲಿ ಕೆಟ್ಟ ಮಕ್ಕಳಿರಬಹುದೇ ವಿನಃ ಕೆಟ್ಟ ತಾಯಂದಿರು ಇರಲಾರರು.ಅಮ್ಮ ಒಳ್ಳೆಯವಳಾದರೆ ಸಾಕೇ? ಖಂಡಿತ ಸಾಲದು. ಮಕ್ಕಳು ಸುಪುತ್ರ [ಸುಪುತ್ರಿ]ರಾಗಬೇಡವೇ?. ಪುಟ್ಟ ಮಗುವು ಕೇಳಿ ತಿಳಿಯುತ್ತದೆ, ನೋಡಿ ಕಲಿಯುತ್ತದೆ.ತನ್ನ ಮೈಯೆಲ್ಲ ಕಿವಿಯಾಗಿ ಆಲಿಸುತ್ತದೆ,ಕಣ್ಣಾಗಿ ನೋಡುತ್ತದೆ. ನಿಮ್ಮ ಮಕ್ಕಳು ಹೇಗಿರಬೇಕೊ ನೀವೂ ಅವರ ಮುಂದೆ ಹಾಗೆ ನಡೆದುಕೊಳ್ಳಬೇಕು. ಗಂಡನಾದವನು ಮದ್ಯಪಾನ ಮಾಡಿ ಮನೆಗೆ ಬಂದು, ಹೆಂಡತಿ- ಮುಂದೆ ಕಚ್ಚಾಡ್ತಾ ಇದ್ದು; ತಾಯಿ,ಮುಖ ಊದಿಸಿಗೊಂಡಿದ್ದರೆ, ಅವುಗಳೂ ಕೂಡ ಅದೇ ಪ್ರವೃತ್ತಿಯಲ್ಲಿ ಬೆಳೆಯುತ್ತವೆ. ಮಕ್ಕಳು ಸದ್ಗುಣವಂತರಾಗಬೇಕಾದರೆ ಬಾಲ್ಯಾವಸ್ಥೆಯಿಂದಲೇ ಆ ನಿಟ್ಟಿನಲ್ಲಿ ಬೆಳೆಸಬೇಕು.
ಗರ್ಭದಲ್ಲಿರುವಾಗಲೇ ಶಿಶುವು ಕೇಳಿ ಕಲಿಯುವುದಕ್ಕೆ ತೊಡಗುತ್ತದಂತೆ. ಗರ್ಭದೊಳಗಿರುವ ಶಿಶು ಹೊರ ಜಗತ್ತನ್ನ ಹೇಗೆ ತಿಳಿಯಬಲ್ಲುದು ಎಂಬುದಕ್ಕೆ ಮಹಾಭಾರತದೊಳಗಿರುವ ತಾಯಿ, ಸುಭದ್ರೆಯ ಗರ್ಭದಲ್ಲಿ ಮಲಗಿದ್ದ ಅಭಿಮನ್ಯುವಿನ ಕತೆಯಿಂದ ನಮಗೆ ತಿಳಿಯುತ್ತದೆ.ತುಂಬು ಗರ್ಭಿಣಿ ಸುಭದ್ರೆಯನ್ನು ಅಣ್ಣನಾದ ಕೃಷ್ಣನು ತನ್ನರಮನೆಗೆ ಕರೆದೊಯ್ಯುತ್ತಿದ್ದಾಗ; ತಂಗಿಗೆ ಪ್ರಯಾಣದ ಆಯಾಸ ನೀಗುವುದಕ್ಕಾಗಿ ಮುಂದೆ ಕುರುಕ್ಷೇತ್ರದಲ್ಲಿ ನಡೆಯಬಹುದಾದ ಯುದ್ಧದ ಬಗ್ಗೆ ಕಥೆ ಹೇಳ್ತಾನೆ. ಚಕ್ರವ್ಯೂಹ ಕೋಟೆಯೊಳಗೆ ಹೋಗುವ ವಿಧಾನವನ್ನು ತಿಳಿಸುತ್ತಿದ್ದಾನೆ.ಸುಭದ್ರೆಗೆ ಕೇಳುತ್ತಾ,ಕೇಳುತ್ತಾ ಅಲ್ಲಿಗೇ ಜೊಂಪುಹತ್ತಿಬಿಡುತ್ತದೆ. ಆದರೂ ಆಕೆಯ ಉದರದೊಳಗಿಂದ ಹೂಂಗುಟ್ಟುವಿಕೆ ಕೇಳಿಸುತ್ತದೆ.ಕೂಡಲೇ ಕೃಷ್ಣ ತಾನು ಹೇಳುತ್ತಿದ್ದ ಮಾತನ್ನ ನಿಲ್ಲಿಸಿಬಿಡುತ್ತಾನೆ!. ಚಕ್ರವ್ಯೂಹ ಕೋಟೆಯ ಒಳಹೊಗುವ ಸಂದರ್ಭಕ್ಕೆ ಕಥೆ ನಿಲ್ಲುತ್ತದೆ.ಇದರ ಪರಿಣಾಮವಾಗಿ ಅಭಿಮನ್ಯುವಿಗೆ ಚಕ್ರವ್ಯೂಹಕ್ಕೆ ಹೋಗುವ ವಿದ್ಯೆ ತಿಳಿಯಿತೇ ಹೊರತು ಅದನ್ನು ಬೇಧಿಸುವ ಪರಿತಿಳಿಯದಾಯಿತು ಎನ್ನುತ್ತದೆ ಮಹಾಭಾರತ!. ತಾಯಂದಿರು ಗರ್ಭ ಹೊತ್ತಾಗಿನಿಂದಲೇ ಮಕ್ಕಳ ಬೆಳೆಸುವ ಬಗ್ಗೆ ಚುರುಕಾಗಿರಬೇಕು ಎಂಬ ಸಂದೇಶವನ್ನ ಈ ಪ್ರಸಂಗ ಒಂದು ಯುಗದ ಹಿಂದೆಯೇ ಸಾರುತ್ತಾ ಬಂದಿದೆ!.
ಹಾಗೆಯೇಮಹಾಭಾರತದ ಇನ್ನೊಬ್ಬ ತಾಯಿ ವಿದುಲೆಯ ಪಾತ್ರವೂ ಹಿರಿದಾದುದು. ಈಕೆ ಸೌವೀರ ರಾಜನ ಪತ್ನಿ. ಸಂಜಯನ ತಾಯಿ. ಸಂಜಯನು ಪ್ರೌಢಾವಸ್ಥೆಗೆ ಬಂದಾಗ ಒಮ್ಮೆ ಸಿಂಧೂ ರಾಜನೊಡನೆ ಯುದ್ಧಮಾಡಬೇಕಾಗಿ ಬಂದು ಸೋಲುತ್ತಾನೆ. ಅಪಜಯ ಹೊಂದಿದ ಸಂಜಯನು ತೀರಾ ನಿರಾಶೆಯಿಂದ ಯಾವುದೂ ಬೇಡವೆಂದು ಮಲಗಿರುತ್ತಾನೆ.ತನ್ನ ಕುವರನ ದುರವಸ್ಥೆಯನ್ನು ನೋಡುತ್ತಿದ್ದಂತೆ ವಿದುಲೆಯ ವಿವೇಕ ಎಚ್ಚರಗೊಳ್ಳುತ್ತದೆ.ಕ್ಷತ್ರಿಯ ಧರ್ಮ ತಿಳಿದವಳೂ ರಾಜನೀತಿ ಬಲ್ಲವಳೂ ದೂರದೃಷ್ಟಿಉಳ್ಳವಳೂ ಆದ ವಿದುಲೆ ತನ್ನ ಮಗನಲ್ಲಿ ನಶಿಸಿಹೋದ ಉತ್ಸಾಹವನ್ನು ವಾಪಾಸು ತುಂಬುತ್ತಾಳೆ. ಇನ್ನು ಇತಿಹಾಸದಿಂದಲೂ ಒಂದು ಉದಾಹರಣೆ ಹೇಳುವುದಾದರೆ; ಛತ್ರಪತಿ ಶಿವಾಜಿಮಹಾರಾಜನ ತಾಯಿ ಜೀಜಾಬಾಯಿಯ ಪಾತ್ರ ಅತ್ಯಂತ ಹಿರಿದಾದುದು!.
ಹೀಗೊಂದು ದಿನ ಆತ್ಮೀಯರೊಬ್ಬರ ಮನೆಗೆ ಹೋಗಿದ್ದೆ. ಆಕೆಗೆ ಪ್ರಾಥಮಿಕ ಹಂತದಲ್ಲಿ ಕಲಿಯುವ ಪುಟ್ಟ-ಪುಟ್ಟ ಮಕ್ಕಳೆರಡು. ಓದುವುದು ಆಂಗ್ಲ ಮಾಧ್ಯಮ. ಸಂಜೆ ಆಟೋದಲ್ಲಿ ಮಕ್ಕಳು ಬಂದಿಳಿದರು. ಮನೆಗೆ ತಲುಪಿದಂತೆ ಮಕ್ಕಳಿಬ್ಬರಲ್ಲಿ ದೊಡ್ಡವನಾದ ಹುಡುಗ ಒಂದು ಆಟಿಕೆಯನ್ನು ಬ್ಯಾಗಿನಿಂದ ಹೊರಗೆಳೆದು ನೆಲದಲ್ಲಿ ಉರುಳಿಸಿ ಸಂತೋಷಪಟ್ಟಾಗ; ತಂಗಿಯೂ ನನಗೆ ಕೊಡೆಂದು ಕೇಳಿದಳು. ಅಣ್ಣ ಕೊಡಲಿಲ್ಲ. ತಂಗಿ ಬಿಡಲಿಲ್ಲ.ಅತ್ತಳು!.”ಅದೆಲ್ಲಿಂದಲೋ ಈ ಹೊಸ ಆಟಿಕೆ?” ತಾಯಿ ಪ್ರಶ್ನಿಸಿದಾಗ; ತನಗದು ತರಗತಿಯಲ್ಲಿ ಸಿಕ್ಕಿತು.ಯಾರಿಗೂ ತಿಳಿಯದ ಹಾಗೆ ಬ್ಯಾಗಿಗೆ ತುರುಕಿದೆ” ತಾಯಿಯ ಕಿವಿಯಲ್ಲಿ ಪಿಸುಗುಟ್ಟಿದ. ಅಳ್ಬೇಡ ಪುಟ್ಟಿ, ನಾಳೆ ಇಂತದೇ ಸಿಕ್ಕಿದ್ರೆ ನಿನಗೆ ಕೊಡೋಣ .ತಾಯಿ ಸಂತೈಸುತ್ತಾಳೆ. ಸ್ವಲ್ಪದರಲ್ಲಿ ಸುಮ್ಮನಾಗುತ್ತದೆ ಮಗು. ಇಲ್ಲಿ ಆ ಮಹಾತಾಯಿ; ಆ ಆಟಿಕೆ ಹೇಗೆ ಸಿಕ್ಕಿತು, ಅಪಹರಿಸಿದ್ದೊ?, ಅಥವಾ ನಿಜವಾಗಿ ಕ್ಲಾಸಲ್ಲಿ ಸಿಕ್ಕಿದ್ದೊ?,ಯಾವೊಂದೂ ಮಗುವಿನಲ್ಲಿ ಪ್ರಶ್ನಿಸಲಿಲ್ಲ!. ಬಹುಶಃ ಆ ತಾಯಿಗೆ ಪರಿಸ್ಥಿತಿ ಶಾಂತ ಮಾಡಬೇಕಾದ ಅನಿವಾರ್ಯತೆಯಿದ್ದಿರಬಹುದು ಸರಿ. ಆದರೆ ಅದು ಹೇಗೆ ಸಿಕ್ಕಿತು ಎಂದು ವಿಚಾರಿಸದೆ ಬಿಟ್ಟಲ್ಲಿ ಹುಡುಗ ಬೇರೆಯವರ ಬ್ಯಾಗಿಂದ ಕದ್ದು ತಂದಿದ್ದಾದರೆ; ಅದಕ್ಕೆ ನಾಳೆಯೂ ಅದೇಕೆಲಸಕ್ಕೆ ಪ್ರೇರಣೆ ನೀಡಿದಂತಾಗದೇ!? ಅದರ ಬದಲು ಅದು ಯಾರದ್ದೋ ನಮ್ಮದಲ್ಲದನ್ನು ತರಬಾರದು. ಯಾರದೆಂದು ಗೊತ್ತಾಗದಲ್ಲಿ ಟೀಚರಲ್ಲಿ ಕೊಡಬೇಕಿತ್ತೆಂದು ಬುದ್ಧಿ ಹೇಳಬಹುದಿತ್ತೆಂದು ನನಗನಿಸಿತು.
ಇನ್ನು ಕೆಲವು ಅಮ್ಮಂದಿರು ತಮ್ಮ ಮಕ್ಕಳ ಸ್ನೇಹಿತರಿಗಿಂತ ಹೆಚ್ಚು ಅಂಕ ನೀನು ಗಳಿಸಬೇಕೆಂದು ಬಲವಾಗಿ ದಂಡಿಸುವುದು ನೋಡಿದ್ದೇನೆ.ಪ್ರತಿ ತರಗತಿ ಪರೀಕ್ಷೆ ಮುಗಿದಾಗಲೂ ನಿನಗೆಷ್ಟು ಅಂಕ? ನಿನ್ನ ಸ್ನೇಹಿತನಿಗೆಷ್ಟು? ಎಂದು ಅಮ್ಮಂದಿರ ಪ್ರಶ್ನೆ!.ಇದರಿಂದಾಗಿ ಮಕ್ಕಳಿಗೆ ಒಳಗಿಂದೊಳಗೇ ಸ್ನೇಹಿತರಲ್ಲಿ ಪೈಪೋಟಿ! ಕೈಲಾಗದೆ ಹೋದರೆ ಮತ್ಸರ ಬೆಳೆಯುವುದಕ್ಕೆ ಆಸ್ಪದವಲ್ಲವೇ?. ಅದರ ಬದಲು ಹೋದಬಾರಿಗಿಂತ ಈ ಬಾರಿ ಹೆಚ್ಚು ಅಂಕ ಗಳಿಸುವಂತೆ ಪ್ರಯತ್ನ ಮಾಡು ಎನ್ನುವುದು ಆರೋಗ್ಯಕರವಲ್ಲವೇ?.
ಪುಟ್ಟ ಮಗುವು,ಬರೇ ಮೊದ್ದು ಅಲ್ಲ!.ಅದು ನಮಗಿಂತಲೂ ಚುರುಕಾಗಿದೆ ಎಂಬ ಅಂಶ ನಾವು ಅರಿತಿರಲೇ ಬೇಕು. ನಿಮ್ಮ ಮಕ್ಕಳು ಹೇಗಿರಬೇಕೊ ನೀವೂ ಅವರ ಮುಂದೆ ಹಾಗೆ ನಡೆದುಕೊಳ್ಳಲೇಬೇಕು. ಗಂಡ-ಹೆಂಡತಿ ಮಕ್ಕಳ ಮುಂದೆ, ಕಚ್ಚಾಡ್ತಾ ,ಮುಖ ಊದಿಸಿಗೊಂಡಿದ್ದರೆ, ಅವುಗಳೂ ಕೂಡ ಅದೇ ಪವೃತ್ತಿಯಲ್ಲಿ ಬೆಳೆಯುತ್ತವೆ. ‘ಮಗು ಮೂರು ವರ್ಷದಲ್ಲಿ ಕಲಿತ ಬುದ್ಧಿ ಮುಪ್ಪಿನ ವರೆಗೂ’ ಎಂಬ ಮಾತಿದೆಯಲ್ಲವೇ?.ಆದುದರಿಂದ ಸಂಸ್ಕಾರ ಎಂಬುದು ಬಾಲ್ಯಾವಸ್ಥೆಯಿಂದಲೇ ಸಿಗಬೇಕು. ಮಕ್ಕಳನ್ನು ಹಡೆದವಳು ಮಾತ್ರ ತಾಯಿಯಲ್ಲ ಪ್ರೀತಿ, ವಾತ್ಸಲ್ಯ ತೋರಿ ಬೆಳೆಸುವವಳೂ ತಾಯಿಯೆ!.ಎಷ್ಟೋ ಕಡೆ ಹೆತ್ತತಾಯಿಗಿಂತಲೂ ಹೆಚ್ಚಾಗಿ ಹೊತ್ತತಾಯಿ ಪ್ರೀತಿತೋರಿ,ಮುಚ್ಚಟೆಯಿಂದ ಸಲಹಿದ್ದಿದೆ. ಮಕ್ಕಳನ್ನ ಅರ್ಥ ಮಾಡಿಕೊಂಡು ನಡೆಯಬೇಕು, ಹೆಚ್ಚಿನ ಮಕ್ಕಳಿಗೆ ಹೆತ್ತವರಲ್ಲಿ ಆಕ್ರೋಶ ಬರುವುದೇ ಅಪ್ಪ-ಅಮ್ಮ ಮಕ್ಕಳಿಗೆ ಹೇಳುವುದೊಂದು, ತಾವು ಮಾಡುವುದಿನ್ನೊಂದು ಆದಾಗ!.ತಾವು ಆದರ್ಶಗಳನ್ನು ಪಾಲಿಸುವುದು ಮಗುವಿಗಾಗಿ ಆದಾಗ; ಮಗುವೇ ತಾಯಿತಂದೆಯರಿಗೆ ಗುರುವಾಗಬಹುದಲ್ಲವೇ?!
-ವಿಜಯಾ ಸುಬ್ರಹ್ಮಣ್ಯ,ಕುಂಬಳೆ
ತುಂಬಾ ಚೆನ್ನಾಗಿದೆ ಲೇಖನ, ಪುರಾಣದ ಕಥೆಗಳ ಜೊತೆಗೆ ಸ್ವತಃ ನಿಮಗಾದ ಅನುಭದ ಮೂಲಕ ತಾಯಿಯಾದವಳ ಕರ್ತವ್ಯ ಗಳನ್ನು ಉಲ್ಲೇಖಿಸಿದ ರೀತಿ ಇಷ್ಟವಾಯಿತು
ನಯನ ಬಜಕ್ಕೂಡ್ಲು ಹಾಗೂ ಲೇಖನ ಪ್ರಕಟಿಸಿ ಸಹಕರಿಸಿದ ಹೇಮಮಾಲಾ ಅವರಿಗೂ ತುಂಬುಹೃದಯದ ಧನ್ಯವಾದಗಳು.
ತಾಯಿ ಮಗುವಿನ ಪವಿತ್ರ ಸಂಬಂಧದ ಬಗೆಗಿನ ಲೇಖನ ಮನ ಮುಟ್ಟುವಂತಿದೆ.