ಮಗುವನ್ನು ಛೇಡಿಸಿ ಆನಂದಿಸಬೇಕೆ?
ಸ್ಮಾರ್ಟ್ ಫೋನ್ ಕೈಯಲ್ಲಿರುವವರೆಲ್ಲರೂ ಫೊಟೊಗ್ರಾಫರ್ ಗಳೂ, ವೀಡಿಯೋಗ್ರಾಫರ್ ಗಳೂ ಆಗಿರುವ ಕಾಲವಿದು. ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲವು ವೀಡಿಯೋ ತುಣುಕುಗಳು ಅದನ್ನು ಸೃಷ್ಟಿಸಿದವರ ಮನೋಭಾವದ ಸಂಕೇತಗಳಾಗಿ ಕಾಣಿಸುತ್ತವೆ . ಅದೊಂದು ವೀಡಿಯೋದಲ್ಲಿ, ಇನ್ನೂ ಆರು ತಿಂಗಳು ತುಂಬಿರಲಾರದ, ಪುಟ್ಟ ಮಗುವನ್ನು ಅದರ ತಾಯಿ ಬಾಲಭಾಷೆಯಲ್ಲಿ ಮಾತನಾಡಿಸುತ್ತಾಳೆ. ಆ ಮಗುವು ತಾನೂ ಮಾತನಾಡಲು ಪ್ರಯತ್ನಿಸುತ್ತಾ ಆಆಅ…ಉಉಉ ಅನ್ನುತ್ತಾ ಮಲ್ಲಿಗೆ ನಗು ಬೀರುವುದನ್ನು ನೋಡುವಾಗ ನಮಗೂ ಮನಸ್ಸು ಅರಳುತ್ತದೆ. ನಾನಂತೂ ಆ ವೀಡಿಯೋವನ್ನು ಎಷ್ಟು ಬಾರಿ ನೋಡಿ ಸಂತೋಷಿಸಿದ್ದೇನೆಂದು ಲೆಕ್ಕವಿಟ್ಟಿಲ್ಲ.
ಇದಕ್ಕೆ ವ್ಯತಿರಿಕ್ತವಾದ, ಮನಸ್ಸಿಗೆ ಹಿಂಸೆಯೆನಿಸುವ ವೀಡಿಯೋಗಳು ಧಾರಾಳವಾಗಿ ಹರಿದಾಡುತ್ತಿರುತ್ತವೆ. ಉದಾಹರಣೆಗೆ ಇನ್ನೊಂದು ವೀಡಿಯೋದಲ್ಲಿ, ಎರಡು ವರ್ಷದ ಒಳಗಿನ ಮಗುವೊಂದು ಬಿಸಿಲಿನಲ್ಲಿ ನಡೆಯುತ್ತಾ ಆಗಾಗ ಹಿಂದೆ ತಿರುಗಿ ನೋಡುತ್ತಿರುತ್ತಿದೆ. ಆಗ ಅದಕ್ಕೆ ನೆಲದಲ್ಲಿ ತನ್ನದೇ ನೆರಳು ಕಂಡು ಭಯವಾಗಿ ಓಡಲು ಪ್ರಯತ್ನಿಸುತ್ತದೆ, ಪುನ: ಪುನ: ಹಿಂತಿರುಗಿ ನೋಡುತ್ತಾ ನೆರಳು ಕಂಡು ಬೆದರಿ ಅಳುತ್ತದೆ. ಹೀಗೆ ಭಯಪಟ್ಟು ಅಳುವ ಆ ಮಗುವನ್ನು ಎತ್ತಿಕೊಂಡು ಸಂತೈಸುವ ಬದಲು, ಹ್ಹಿ..ಹ್ಹಿ. ಎಂದು ನಗುತ್ತಾ ಯಾರೋ ಒಬ್ಬಾಕೆ ವೀಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆಕೆಗೆ ಇದು ಹಾಸ್ಯದ ವಿಷಯವಾಗಿದ್ದರೂ, ಮಗುವಿಗೆ ತಮಾಷೆಯಲ್ಲ ಎಂದು ಅರ್ಥವಾಗದ ಸಂವೇದನಾರಾಹಿತ್ಯದ ಬಗ್ಗೆ ನನಗೆ ಸಿಟ್ಟಿದೆ.
ಅದೇ ರೀತಿ, ಇನ್ನೊಂದು ವೀಡಿಯೋದಲ್ಲಿ, ಒಬ್ಬಾತ ಹೂದೋಟದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದ. ಆಗ ತಾನೇ ನಡೆಯಲು ಕಲಿತಿದ್ದ ಪುಟ್ಟ ಮಗುವೊಂದು ನಿಧಾನವಾಗಿ ನಡೆದು ಬಂದು, ಪಾರದರ್ಶಕ ಗೋಡೆಯಂಚಿಗೆ ಕೈಯೊತ್ತಿ ಆನಿಸಿ ನಿಂತು ತದೇಕಚಿತ್ತದಿಂದ ಹೊರಗಡೆ ನೋಡುತ್ತಿತ್ತು. ಆತ ಮಗುವನ್ನು ಗಮನಿಸಿ, ಉದ್ದೇಶಪೂರಿತವಾಗಿ ಆ ಕಡೆಯ ಪಾರದರ್ಶಕ ಗೋಡೆಗೆ ನೀರು ಹಾಯಿಸುತ್ತಾನೆ. ಆ ಪುಟ್ಟ ಮಗುವಿಗೆ ತನ್ನ ಮುಖಕ್ಕೇ ನೀರು ಸಿಡಿದಂತೆ ಭಾಸವಾಗಿ, ಬೆಚ್ಚಿ ಆಯತಪ್ಪಿ ಬೀಳುತ್ತದೆ. ನಗುವ ಮಗುವನ್ನು ಅನಾವಶ್ಯಕವಾಗಿ ಬೆದರಿಸಿ ನಗುವ ಪರಿಗೆ ಧಿಕ್ಕಾರವಿರಲಿ.
ನಾನು ಗಮನಿಸಿದ ಇನ್ನೊಂದು ವೀಡಿಯೋ ಸರಣಿಯಲ್ಲಿ, ಪೋಷಕರು ತಮ್ಮ ಮಗುವಿಗೆ ಉಣಿಸಲು ಕಂಡುಕೊಂಡ ಉಪಾಯಗಳು ನಿಜಕ್ಕೂ ವಿಕೃತ. ಒಬ್ಬಾಕೆ, ತಟ್ಟೆಯಲ್ಲಿ ಕಲೆಸಿದ ಊಟವನ್ನು ಮಗುವಿಗೆ ಉಣ್ಣಿಸುವ ಮೊದಲು, ಅಲ್ಲಿಯೇ ಇರಿಸಿದ್ದ ಗೊಂಬೆಯ ಬಾಯಿಗೆ ತೋರಿಸುತ್ತಾಳೆ. ಆಮೇಲೆ ಆ ಬೊಂಬೆಯ ತಲೆಗೆ ಮೊಟಕುತ್ತಾಳೆ. ಮಗು ದಿಗಿಲಿನಿಂದ ಬೊಂಬೆಯನ್ನೂ, ಅಮ್ಮನನ್ನೂ ನೋಡುತ್ತಾ ಇರುತ್ತದೆ. ಅಮ್ಮ ಅದೇ ತುತ್ತನ್ನು ಮಗುವಿನ ಬಾಯಿಗೆ ಕೊಟ್ಟಾಗ ತೆಪ್ಪಗೆ ನುಂಗುತ್ತದೆ. ಈ ರೀತಿ, ಪ್ರತಿ ತುತ್ತಿಗೂ ಮೊದಲು ಆ ಬೊಂಬೆಗೆ ತೋರಿಸುವುದು, ಅದು ತಿನ್ನದಿರುವುದರಿಂದ ಹೊಡೆಯುವುದು, ಆ ಮೇಲೆ ಅದೇ ತುತ್ತನ್ನು ಮಗುವಿನ ಬಾಯಿಗೆ ಕೊಡುವುದು, ಹೀಗೆ ಪುನರಾವರ್ತನೆಯಾಗುತ್ತಿತ್ತು. ಇದರಿಂದ ಮಗು ಆಹಾರವನ್ನು ಆಸ್ವಾದಿಸಿ ಉಣ್ಣುವ ಬದಲು, ತಿನ್ನದಿದ್ದರೆ ತನಗೂ ಹೊಡೆತ ಬೀಳಬಹುದು ಎಂಬ ಭಯದಲ್ಲಿ ಗಬಕ್ಕನೆ ನುಂಗುತ್ತದೆ. ಇದೊಂದು ಹಿಂಸಾವಿನೋದ. ಮೇಲಾಗಿ, ಯಾವುದೇ ತಪ್ಪು ಮಾಡದಿದ್ದರೂ ಅಸಹಾಯಕ ಹಾಗೂ ಪ್ರತಿಭಟಿಸದೆ ಇರುವ ಬೊಂಬೆಗೆ ಹೊಡೆದರೆ ತಪ್ಪೇನೂ ಇಲ್ಲ ಎಂಬ ತಪ್ಪು ಸಂದೇಶವನ್ನೂ ಮಗುವಿಗೆ ಬೋಧಿಸಿದಂತಾಗುತ್ತದೆ. ಎಳವೆಯಲ್ಲಿ ಮಕ್ಕಳ ಮನಸ್ಸಿನಲ್ಲಿ ಬೇರೂರಿದ ಉತ್ತಮ ಅಥವಾ ಕೆಟ್ಟ ಭಾವನೆಗಳು ಜೀವನದುದ್ದಕ್ಕೂ ಪರಿಣಾಮ ಬೀರುತ್ತವೆ ಎಂಬುದನ್ನು ನಾವು ಮರೆಯುವಂತಿಲ್ಲ.
ಚೆನ್ನಾಗಿ ಬೆಂದ ಆಹಾರವನ್ನು ನುಣ್ಣಗೆ ನುರಿದು, ಮಗುವಿಗೆಂದೇ ಮೀಸಲಾದ ಪುಟ್ಟ ಪಾತ್ರೆಯಲ್ಲಿರಿಸಿ, ಮಗುವನ್ನು ಸೊಂಟದಲ್ಲಿ ಎತ್ತಿಕೊಂಡು, ಚಂದಮಾಮನನ್ನು ತೋರಿಸುತ್ತಲೋ, ಏನೋ ಕಥೆ ಹೇಳುತ್ತಲೋ, ಆಹಾರದ ಜೊತೆಗೆ ಮಮತೆಯ ಮಹಾಪೂರವನ್ನೇ ಉಣಿಸುತ್ತಿದ್ದ ಅಮ್ಮಂದಿರು ಮಾದರಿ ಅಲ್ಲವೇ. ಹೀಗೆ ಪ್ರೀತಿಯಿಂದ ಉಣಿಸಿದ ಆಹಾರವನ್ನುಂಡ ಮಕ್ಕಳ ಕಿಲಕಿಲ ನಗು ಹಾಗೂ ಮನಸ್ಸು ಮನೆ ಮನೆಯಲ್ಲಿ ಅರಳಲಿ.
.
– ಹೇಮಮಾಲಾ.ಬಿ, ಮೈಸೂರು
ನಿಜ ಮಕ್ಕಳ ಮನಸ್ಸು ಅತೀ ಸೂಕ್ಷ್ಮವಾಗಿರುತ್ತೆ.. ನಿಮ್ಮ ಲೇಖನದಲ್ಲಿ ಅದರ ಅಭಿವ್ಯಕ್ತಿ ಸ್ಪಷ್ಟವಾಗಿದೆ. ನಾವು ಬಹಳ ಎಚ್ಚರದಿಂದ ಮಕ್ಕಳೊಡನೆ ಸ್ಪಂದಿಸಬೇಕು..
ಧನ್ಯವಾದಗಳು 🙂
ನಿಜ.. ಮನೋರಂಜನೆಗಾಗಿ ಈ ರೀತಿಯ ವೀಡಿಯೋಗಳನ್ನು ಆನಂದಿಸುವುದು ಮಾನಸಿಕ ಕ್ರೌರ್ಯ ಎನ್ನಬಹುದು. ಅರಿವು ಮೂಡಿಸುವ ಬರಹ ಚೆನ್ನಾಗಿದೆ.
ಅತ್ಯುತ್ತಮ ವಾದ ಬರಹ. ನಿಜ ಸ್ಥಿತಿ ಕೂಡ
ಧನ್ಯವಾದಗಳು
ನಿಜಕ್ಕೂ ಅಂತಹ ವೀಡಿಯೋಗಳ ಹಾವಳಿ ಅಧಿಕವಾಗಿದೆ…ತಿಳುವಳಿಕೆ ಮೂಡಿಸುವಂತಹ ಉತ್ತಮ ಲೇಖನ
ಧನ್ಯವಾದಗಳು
Well said. ಮಕ್ಕಳ ಕೈಯ್ಯಲ್ಲಿ ಮೊಬೈಲ್ ಗೇಮ್ಸ್ ಹಾಕಿಕೊಟ್ಟು ಊಟಮಾಡಿಸುವ, ರಚ್ಛೆ ಹಿಡಿಯುವ ಮಗುವನ್ನು ಸಮಾಧಾನಿಸುವ ಪದ್ಧತಿಯೂ ಇತ್ತೀಚಿಗೆ ಸಾಮಾನ್ಯವಾಗಿ ಕಂಡು ಬರುವ ದೃಶ್ಯ, ಇದೂ ಕೂಡಾ ಮಗುವಿನ ಬೆಳವಣಿಗೆಯ ಹಂತದಲ್ಲಿ ಮಾರಕ. ಸೊಗಸಾಗಿದೆ ಲೇಖನ.
ಧನ್ಯವಾದಗಳು
ಕೆಲವರಿಗೆ ಮಕ್ಕಳನ್ನು ಮುದ್ದಿಸುವುದು ಇಷ್ಟ… ಕೆಲವರಿಗೆ ಸತಾಯಿಸಿ ಮೋಜು ಪಡೆಯುವುದು ಖುಷಿ… ಮಕ್ಕಳ ಪಾಲನೆಗೂ ಸಮಯ ನೀಡಲು ತಾಯಂದಿರಿಗೆ ಸಾಧ್ಯ ಆಗುತ್ತಿಲ್ಲ
ಹೌದು..ಧನ್ಯವಾದಗಳು
ದಾರಿ ತಪ್ಪುತ್ತಿರುವ ಪಾಲನೆಯ ಬಗ್ಗೆ ಸಕಾಲದಲ್ಲಿ ಎಚ್ಚರಿಸುವ ಲೇಖನ ನೀಡಿದ್ದೀರಿ ನಿಮ್ಮ ಕಳಕಳಿಗೆ ಧನ್ಯವಾದ
ಧನ್ಯವಾದಗಳು.
ಲೇಖನ ವಿಕೃತ ರೀತಿಯ ಮಕ್ಕಳ ಪಾಲಕರಿಗೆ ಪಾಠದಂತಿದೆ.
ಧನ್ಯವಾದಗಳು.
ಹೌದು..ಜಾಲತಾಣಗಳಲ್ಲಿ ಕಂಡುಬರುವ ಕೆಲವು
ವೀಡಿಯೋಗಳು, ಅದನ್ನು ಹರಿಬಿಟ್ಟವರ ಮನಸ್ಸಿನ ವಿಕೃತತೆಯನ್ನು ತೋರಿಸಿದರೆ, ಇನ್ನು ಕೆಲವು ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಚಂದದ ಬರಹ.
ಧನ್ಯವಾದಗಳು.